Tuesday, September 22, 2015


ಇಂದು ಕಂಡ ಕನ್ನಡದ ಬೌದ್ಧಿಕ ಬಡತನದ ಬಗ್ಗೆ ಖಿನ್ನನಾಗಿ...

ನನಗೆ ಈ ಜನಗಳ ಬಗ್ಗೆ ಪೂರ್ವಗ್ರಹೀತಗಳಿರಲಲ್ಲ. ಆದರೆ, ಇದೀಗ ಪ್ರಜಾ ಟೀವಿಯಲ್ಲಿ ಬಂದ ಭಗವಾನ್ ಅವಾಂತರದ ಕುರಿತಾದ ಚರ್ಚೆಯನ್ನು ಗಮನಿಸುತ್ತ ಬಿ ಟಿ ಲಲಿತಾ ನಾಯಕ್, ಯೋಗೇಶ್ ಮಾಸ್ಟರ್, ಅರವಿಂದ ಮಾಲಗತ್ತಿ ಎಂಬ ಕನ್ನಡದ ಸಾಹಿತಿಗಳ ಚರ್ಚಾ ಸಾಮರ್ಥ್ಯ ಮತ್ತು ವಿಚಾರ ಸಾಮರ್ಥ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯವಂತೂ ಮೂಡಿಲ್ಲ.

ಚರ್ಚೆಯಲ್ಲಿ ಭಾಗವಹಿಸಿದ ಉಳಿದಿಬ್ಬರು ಯುವಕರ ಬಗ್ಗೆ ನಾನು ಮಾತಾಡಬೇಕಿಲ್ಲ, ಯಾಕೆಂದರೆ ಅವರ್ಯಾರೂ ಸಾಹಿತ್ಯದ ಕಾರಣಕ್ಕೆ ಗುರುತಿಸಿಕೊಂಡವರಲ್ಲ. ಸಾಹಿತ್ಯದ ದನಿಯಾಗಿ ನಿಂತವರೂ ಅಲ್ಲ. ಅವರು ಜನ ಸಾಮಾನ್ಯರ ಪ್ರತಿನಿಧಿಗಳು.

ಕನ್ನಡ ಸಾಹಿತ್ಯದ ಪಂಥಗಳ ನಡುವಿನ ಅಧ್ವಾನ ಏನೇ ಇರಲಿ, ತಮ್ಮ ತಮ್ಮ ವಿಚಾರಗಳನ್ನು ಆಯಾ ಪಂಥದ ಅನುಗಾಮಿಗಳು ಸಮರ್ಥವಾಗಿಯೂ, ತಾರ್ಕಿಕವಾಗಿಯೂ, ಪ್ರತಿಪಾದಿಸಬಲ್ಲರು ಎಂಬುದೇ ನನ್ನ ನಂಬುಗೆಯಾಗಿತ್ತು. ಆ ನನ್ನ ನಂಬುಗೆಯನ್ನು ಮೊದಲಬಾರಿಗೆ ಹುಸಿಯಾಗಿಸಿದ್ದು ಮುಖ್ಯಮಂತ್ರಿಗಳ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು. ಹೋಗಲಿ, ಅವರು ಅಂಕಣಕಾರ, ಪತ್ರಕಾರ, ಆದರೆ ಸಾಹಿತಿಯಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದೆ. ಇವತ್ತು ಪ್ರಜಾಟೀವಿಯ ಚರ್ಚೆಯಲ್ಲಿ ಬಂದು ಕುಳಿತವರು ಸಾಹಿತಿಗಳಾಗಿದ್ದರು, ಅಧ್ಯಯನ ಇದ್ದು ಜೀವನ ಪರ್ಯಂತ ಸಾಹಿತ್ಯದ ನಿರ್ಮಿತಿಯಲ್ಲೇ ತೊಡಗಿದವರು. ಹಾಗಾಗಿ ಕನ್ನಡದ ಚಿಂತನೆಯ ಮೇಲಿನ ನನ್ನ ಕಕ್ಕುಲಾತಿ ಈ ಜನಗಳಿಂದ ಸಮರ್ಥವಾದ, ತರ್ಕಸಮ್ಮತವಾದ, ಮಾತುಗಳನ್ನು ನಿರೀಕ್ಷಿಸುತ್ತಿತ್ತು. ಆದರೆ ಆಗಿದ್ದು ಮಾತ್ರ ಶುದ್ಧ ನಿರಾಸೆ.

ಕುವೆಂಪು ’ಎಲ್ಲ ದೇವರನು ನೂಕಾಚೆ ದೂರ’ ಎಂದು ಬರೆದದ್ದನ್ನೂ ಇವತ್ತಿನ ಭಗವಾನನ ಅಪಕ್ವ ಮಾತುಗಳನ್ನೂ ಸಮವೆಂಬಂತೆ ನೋಡುವುದಕ್ಕೆ ಹೇಳುವ ಬಿ ಟಿ ಲಲಿತಾ ನಾಯಕ್, ಇಸ್ಲಾಮೀ ಭಯೋತ್ಪಾದನೆಯ ವಿರುದ್ಧವಾಗಿ ಭಗವಾನ್ ಮತ್ತು ತಮ್ಮಂಥವರೆಲ್ಲ  ಮಾತಾಡಿದ್ದೇವೆ ಎಂದು ಸುಳ್ಳೇ ಹೇಳಿದ ಮಾಸ್ಟರ್, ಭಗವಾನ್ ವೈಜ್ಞಾನಿಕವಾಗಿ ಮಾತಾಡುತ್ತಾರೆ, ಬರೆಯುತ್ತಾರೆ ಎಂಬಂತೆ ಮಾತಾಡಿದ ಮಾಲಗತ್ತಿ- ಕನ್ನಡದಲ್ಲಿ ಚರ್ಚೆಯನ್ನು ಮಾಡುವ, ವಾದ ಮಂಡಿಸುವ, ಖಂಡಿಸುವ ಬೌದ್ಧಿಕ ಪರಂಪರೆ ಹೀನಾಯ ರೀತಿಯಲ್ಲಿ ಸೊರಗಿದೆ ಎಂಬುದನ್ನು ಜಾಹೀರು ಮಾಡಿದರು. ಇದೆಲ್ಲ ಕೆಲವು ಉದಾಹರಣೆಯಷ್ಟೇ, ಅಲ್ಲಿ ನಡೆದ ಹಲವಾರು ವಾದಗಳು ವಿತಂಡಾ ಮತ್ತು ಜಲ್ಪ (ಹಲುಬುವಿಕೆ) ಎಂಬ ಎಲುಬಿಲ್ಲದ ತರ್ಕದಲ್ಲಿ ಬರುತ್ತವೆ. ಬಲ ಎಡಗಳ ಹಂಗಿಲ್ಲದ ಒಬ್ಬ ಸಾಮಾನ್ಯನಾಗಿ ಹೇಳುತ್ತೇನೆ, ಕಾರ್ಯಕ್ರಮದ ನಿರೂಪಕರು ಅಲ್ಲಿ ಚಿಂತಕರ ಹೆಸರಲ್ಲಿ ಕುಳಿತ ಮತ್ತು ಫೋನಿಗೆ ಸಿಕ್ಕ ಸಾಹಿತಿಗಳಿಗಿಂತ ತರ್ಕಸಾಧುವಾಗಿದ್ದರು.

ಕನ್ನಡದಲ್ಲಿ ಚಿಂತನೆ, ಚಿಂತನೆಯ ಮಂಡನೆ- ಖಂಡನೆಗಳ ಪರಂಪರೆ ಇತ್ತೆಂದು ನಾನು ಬಲ್ಲೆ, ಇಂದಿಗೂ ನನ್ನ ಹಲವಾರು ಮಿತ್ರರಲ್ಲಿ, ಹಿರಿಯರಲ್ಲಿ ನಾನು ಅದನ್ನು ಕಾಣುತ್ತೇನೆ. ದುರದೃಷ್ಟವಶಾತ್ ಈ ಸಾಹಿತಿಗಳಲ್ಲಿ ನಾನದನ್ನು ನಿರೀಕ್ಷಿಸಿದ್ದೆ. ಇವತ್ತು ಅದೆಷ್ಟು ನಿರಾಸೆಯಾಯ್ತೆಂದು ವಿವರಿಸಲಾರೆ. ಒಬ್ಬ ಸಂಸ್ಕೃತದ ವಿದ್ಯಾರ್ಥಿಯಾಗಿ ನಾನು ಈ ಪರಂಪರೆಯನ್ನು- ಯಾವುದೇ ಭಾಷೆಯಲ್ಲಿರಲಿ- ಮನಸಾ ಗೌರವಿಸುತ್ತೇನೆ. ವ್ಯಾಕರಣ ಓದುವವನಿಗೆ ಮೀಮಾಂಸಾ ಶಾಸ್ತ್ರ, ನ್ಯಾಯ ಶಾಸ್ತ್ರಗಳು ಪೂರ್ವಪಕ್ಷಗಳಾಗಿ ಪ್ರಶ್ನೆ ಎತ್ತುತ್ತವೆ. ಪ್ರಶ್ನೆಯ ಒಂದಂಗುಲವನ್ನೂ ಬಿಡದೆ ಸಂಶಯಕ್ಕೆಡೆಯಿರದಂತೆ ಉತ್ತರಿಸುವ, ಅದೇ ಬಗೆಯಲ್ಲಿ ಪ್ರಶ್ನೆ ಕೇಳುವ ಪರಂಪರೆ ಇಂದಿಗೂ ನಮ್ಮಲ್ಲಿದೆ. ಇವತ್ತು ನಡೆದಿದ್ದು ಶಾಸ್ತ್ರಗಳ ಚರ್ಚೆಯಲ್ಲದಿರಬಹುದು, ಆದರೆ ಚರ್ಚೆಯೊಂದು ನಡೆಯಬೇಕಾದ ರೀತಿ ಅದೇ ತಾನೆ? ಏತಿ ಎಂದುದಕ್ಕೆ ಪ್ರೇತಿ ಎನ್ನುವುದೇ ಆದರೆ ಅದಕ್ಕೆ ಸಾಹಿತಿಗಳು ಯಾಕೆ? ಇನ್ನೊಬ್ಬನಿಗೆ ಉತ್ತರಿಸುವಾಗ, ಒಬ್ಬನನ್ನು ಸಮರ್ಥಿಸುವಾಗ ಅದರ ಕಾರಣವನ್ನು ಪ್ರತಿವಾದಿಯ ಸಂಶಯ ಕರಗುವಂತೆ ಮಂಡಿಸಬೇಕು. ಸಂಬಂಧವೇ ಇಲ್ಲದ ವಾಕ್ಯಗಳ ಸಂತೆಯು ಚರ್ಚೆಯಲ್ಲ ತಾನೆ?

ಇವತ್ತು ಸಿಟ್ಟಿಲ್ಲ, ನಾನು ಅಭಿಮಾನಿಸುವ ಚಿಂತನೆಯೊಂದನ್ನು ಪ್ರತಿಪಾದಿಸುವ ಹುಮ್ಮಸ್ಸಿಲ್ಲ. ಕನ್ನಡದ ದುಃಸ್ಥಿತಿಯ ಕುರಿತು ಖೇದವಿದೆ, ಇಷ್ಟು ಪೂರಾ ನಮ್ಮ ಸಾಹಿತಿಗಳು ತರ್ಕಸಿಂಧುವಲ್ಲದ ಮಾತಾಡುವ ಜನಗಳಾಗಿದ್ದಾರಲ್ಲ ಅಂತ ನೋವಿದೆ. ತನ್ನನ್ನು ತಾನು ಮಾರಿಕೊಂಡ ಮನುಷ್ಯ ತನ್ನ ಬದ್ಧತೆಯನ್ನು ಚಿಂತನೆಗೆ ಒಪ್ಪಿಸುವ ಬದಲು, ಇನ್ಯಾರದೋ ಎಂಜಲಿಗೆ, ಮುಲಾಜಿಗೆ ಒಪ್ಪಿಸಿಬಿಡುತ್ತಾನಲ್ಲ- ಒಬ್ಬ ಪಿಂಪ್ ನಂತೆ- ಎಂದೆನ್ನಿಸಿ ತೀರಾ ಸಪ್ಪೆಯೆನಿಸಿತು.
ಇವತ್ತು ಸಮಾಜದಲ್ಲಿ ಹರಿಕಥೆ ದಾಸರ ಕಥೆಗಳನ್ನು ಕೇಳಿಕೊಂಡವರು, ಯಕ್ಷಗಾನ ತಾಳಮದ್ದಲೆಯನ್ನು ಆಲಿಸುವ ಅತಿ ಸಾಮಾನ್ಯ ಜನರು, ಹಳೆ ಲೈಬ್ರೆರಿಯಲ್ಲಿ ಕಾಲ ಕಳೆಯುವವರು, ಒಂದು ಚರ್ಚೆಯ ರೀತಿ ಹೇಗಿರಬೇಕೆಂಬುದನ್ನು ಬಲ್ಲರು. ಅದೇ, ಅಧ್ಯಯನ ಇರುವ, ಸಾಹಿತಿಗಳೆನಿಸಿಕೊಂಡವರು ಅವರಿಗಿಂತ ಕಳಪೆಯಾಗಿದ್ದಾರೆ. ಇದು ಪಂಥದ ಪ್ರಶ್ನೆಯಲ್ಲ, ಯಾವುದೇ ಚಿಂತನೆಗೂ ಸಲ್ಲುವ ಸಾಮಾನ್ಯ ನಿಯಮದ ಪ್ರಶ್ನೆ. ಸಮಾಜದ ಅತಿ ಸಾಮಾನ್ಯ ವರ್ಗ ಇವತ್ತು ಕನ್ನಡದ ಸಾಹಿತಿಗಳ ಬಗ್ಗೆ ಮಾತಾಡುತ್ತದೆ ಯಾಕೆ ಎನ್ನುವುದಕ್ಕೆ ಬಹುಶಃ ಈ ಸಾಹಿತಿಗಳ ನೆಲೆ ತಪ್ಪಿದ ವರಸೆಯೇ ಕಾರಣವಿರಬಹುದು,

ಮಾತಾಡುವುದನ್ನು ಪರಿಗಣಿಸಿದೆ ಸಾಹಿತ್ಯಕ್ಕೆ ಕೊಟ್ಟ ಪುರಸ್ಕಾರ ಅಂದರು ಮಾಲಗತ್ತಿ, ಮಾತಿಗೆ ಮತ್ತು ಕೃತಿಗೆ ಸಂಬಂಧ ಇಲ್ಲವೇ ಎನ್ನುವ ಪ್ರಶ್ನೆಗೆ ಲಲಿತಾ ನಾಯಕ್ ಅಂದರು ’ಭಗವಾನ್ ಬರೆದಿದ್ದನ್ನೇ ಆಡುತ್ತಿದ್ದಾರೆ’ ಅಂತ. ಯೋಗೇಶ್ ಹೇಳ್ತಾರೆ ’ಕಲೆ ಮತ್ತು ಸಾಹಿತ್ಯವನ್ನೆಲ್ಲ ಧಾರ್ಮಿಕ ದೃಷ್ಟಿಯಲ್ಲಿ ನೋಡಬಾರದು’ ಅಂತ. ಸ್ವಾಮೀ ವಿಮರ್ಶೆಗೆ ಹೇಗೆ ತೆರೆದುಕೊಳ್ಳುವುದೆಂಬುದನ್ನು ನಮಗೆ ನೀವು ಪಾಠಮಾಡಬೇಕಿಲ್ಲ, ಬಂದಿರುವ ಪ್ರಶ್ನೆ ಆ ವಿಮರ್ಶೆಯನ್ನು ಭಗವಾನ್ ಎಂಥ ಭಾಷೆಯಲ್ಲಿ ಎದುರಿಗಿಟ್ಟ ಎಂಬುದು. ಅದಕ್ಕೆ ಉತ್ತರವನ್ನೇ ಕೊಡದೆ ಎಲ್ಲರೂ ನುಣುಚಿಕೊಂಡರು. ನಿಮ್ಮ ಹೀನಾಯ ಸೋಲು ಇದು, ಅಷ್ಟೆಲ್ಲ ಅಧ್ಯಯನ ಮಾಡಿಕೊಂಡವರಾಗಿದ್ದುಕೊಂಡು. ಮಾಸ್ತರ್ ಅಂತೂ ವರ್ತಮಾನದ ಪರಿವೆಯಿಲ್ಲದೇ ಮಾತಾಡಿದರು, ಭಗವಾನ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದೆಲ್ಲ ಆದೇಶಿಸಿದರು. ಕರೆದ ಚರ್ಚೆಗೆ ಬಾರದ, ಫೋನಿಗೆ ಉತ್ತರಿಸದ, ನೇರ ಚರ್ಚೆಯ ಆಹ್ವಾನವನ್ನು ಸ್ವೀಕರಿಸದ ವಿಚಾರಷಂಡ ಭಗವಾನನನ್ನು ಎಲ್ಲಿ ಸಂಧಿಸಿ ಉತ್ತರಕೊಡಬೇಕು, ಆದೇಶಿಸೋಣವಾಗಲಿ ಮಾಸ್ತರ್ರೆ.

ರೋಹಿತ್ ಚಕ್ರತೀರ್ಥ ಅದೆಷ್ಟು ನಿರ್ಲೇಪ ಮೂರ್ತಿಯಾಗಿ ಕುಳಿತಿದ್ದರೆಂದರೆ, ವಯೋವೃದ್ಧೆ ಲಲಿತಾ ನಾಯಕ್ ಸ್ವತಃ ತಮ್ಮ ಮಾತಿನ ಮಧ್ಯೆ ಉದ್ವೇಗಕ್ಕೆ ಒಳಗಾದರೂ, ಯುವ ರೋಹಿತ್ ಹಸನ್ಮುಖಿಯಾಗೇ ಇದ್ದರು. ಅರೆಬೆಂದವರೆಂದು ಇಂಥವರಿಗೆ ಹೇಳುವುದಾದರೆ ಅರೆಬೆಂದವರ ಅಗತ್ಯ ಕನ್ನಡಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಇದೆ.
ಭಗವಾನ್ ಗೆ ಸಂಸ್ಕೃತ ಗೊತ್ತು ಎಂದ ಲಲಿತಾ ನಾಯಕ್ ಆ ವಾಕ್ಯಗಳಲ್ಲಿಯೇ ತಮ್ಮ ಸಂಸ್ಕೃತ ಜ್ಞಾನವನ್ನು ತೆರೆದಿಟ್ಟರು! ಸಂಸ್ಕೃತವನ್ನು ಕೊಂಚ ಓದಿಕೊಂಡವರೂ ಅದನ್ನು ಗುರುತಿಸಬಹುದು. ಇರಲಿ ಅಜ್ಞಾನವು ತಪ್ಪಲ್ಲ, ಆದರೆ ಇನ್ನೊಬ್ಬನ ಅಜ್ಞಾನದ ಅಂಧ ಸಮರ್ಥನೆ ತಪ್ಪಾಗುತ್ತದೆ ನಾಯಕ್ ರೆ.         

ನಿಜವಾಗಿ ಬೌದ್ಧಿಕವಲಯ ಅಂತ ಯಾವುದನ್ನು ಭಾವಿಸಿದ್ದೆನೋ ಅದು ರಂಗು ಕಳೆದ ತಗಡಿನಂತಾಗಿದೆ. ಸಾಮಾನ್ಯ ಜನತೆಯ ಸಾಮಾನ್ಯ ಜ್ಞಾನದ ಬಗ್ಗೆ ಗೌರವ ಹೆಚ್ಚಾಗಿದೆ. ನಿಲುಮೆ ಎಂಬ ಅಪ್ಪಟ ಚಿಂತಕರ ಬಳಗದ ಬಗ್ಗೆ ಗೌರವ ನೂರ್ಮಡಿಯಾಗಿದೆ. ಇರಬಹುದು, ಉದ್ವೇಗಕ್ಕೆ ಒಳಗಾಗುವ ಯುವಕರಿರಬಹುದು ಇಲ್ಲಿಯೂ, ಆದರೆ ನಿಲುಮೆ ನಿಂತ ನೆಲೆಯಂತೂ ಶುದ್ಧ ಚಿಂತ್ರನೆಯದ್ದು. ಬಲಪಂಥದ್ದಲ್ಲ, ಕನ್ನಡದ ಪರಂಪರೆಯ ಆಶಾವಾದ ನಿಲುಮೆ ಇಂದಿಗೆ. ಉಗಿದೋಡುವ ಹೀನತೆ ಎಂದಿಗೂ ಈ ಜನಗಳಿಗೆ ಬಾರದಿರಲಿ.



Tuesday, September 15, 2015

ದೇವ್ಯಪರಾಧಕ್ಷಮಾಪಣಸ್ತೋತ್ರಮ್

ದೇವಿಯೊಳು ತಪ್ಪುಗಳ ಮನ್ನಿಸೆಂಬರಿಕೆ



ಶಂಕರ ಸ್ತೋತ್ರಗಳ ಕುರಿತು ಅದೇನೋ ಆಕರ್ಷಣೆ, ಒಲುಮೆ, ಎಂದಿಗೂ ನನ್ನಲ್ಲಿದೆ. ಅವುಗಳಲ್ಲೊಂದನ್ನು ಅನುವಾದ ಮಾಡುವವರೆಗೂ ಅನುವಾದವು ಈ ಪರಿಯ ಖುಷಿ ಕೊಡುವುದೆಂದು ತಿಳಿದಿರಲಿಲ್ಲ. ಈ ಅನುವಾದ ಒಂದು ರಸಪೂರ್ಣ ಅನುಭವ. ಶಂಕರರ ಶ್ಲೋಕಗಳ ಭಾವವನ್ನೆಲ್ಲ ಭಾಗಶಃ ಹಿಡಿದಿಡುವ ಪ್ರಯತ್ನವನ್ನು ಕನ್ನಡದ ನೆಲೆಯಲ್ಲಿ ಮಾಡಿದ್ದೇನೆ. ಈ ನಡುವೆ ಪ್ರೋತ್ಸಾಹಿಸಿದ, ಮೆಚ್ಚಿದ, ತಿದ್ದಿದ, ಮಾರ್ಗದರ್ಶನ ಮಾಡಿದ ಎಲ್ಲರಿಗೂ ಮನಸಾ ಕೃತಜ್ಞೆಗಳನ್ನರ್ಪಿಸುವೆ.

ಭಗವತಿಯ ಪದತಲಗಳಲ್ಲೂ, ಭಗವತ್ಪಾದರಡಿಗಳಲ್ಲೂ  ನಮನಪೂರ್ವಕ ಈ ಅನುವಾದಪುಷ್ಪದ ಅರ್ಪಣೆ.



ನ ಮಂತ್ರಂ ನೋ ಯಂತ್ರಂ ತದಪಿ  ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಮ್
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ || 1 ||

ನಿನ್ನನೊಲಿಸುವ ಯಾವ ಪರಿಯೂ ತಿಳಿಯದಮ್ಮಾ ಮಂತ್ರವೂ
ಕರೆವುದೆಂತೋ ಸ್ಮರಣೆಯೆಂತೋ ಅರಿಯೆನಮ್ಮಾ ಕಥನವ
ಅತ್ತು ಕರೆಯುವ ಬಗೆಯನರಿಯೆನು ಮುದ್ದುಗರೆವುದನರಿಯೆನು
ನಿನ್ನ ಶರಣವದೆನ್ನ ಕೊರಗನು ಕಳೆವುದೆಂಬುದ ತಿಳಿವೆನು! 

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ತ್ವಾತ್ತವಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 2 ||


ಅಳವು ತಿಳಿವುಗಳಿಲ್ಲದೆನ್ನನು ನಿಯತಿಯಾಟದ ಶಿಶುವನು
ಬಾಗಲೊಲ್ಲದ ಹೆಮ್ಮೆಯವನನು ಚರಣಕೆರಗದ ತಪ್ಪನು
ಭರಿಸು ನಿನ್ನುಡಿಗುಡಿಯಲೆಲ್ಲವ ಜಗವನಾಲಂಗಿಸುವಳೆ
ಕೆಡುಕು ಕುಡಿಯಿರಬಲ್ಲುದಲ್ಲದೆ ದುರುಳೆಯವ್ವೆಯು ಇರುವಳೆ?

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಸ್ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋಽಹಂ ತವ ಸುತಃ |
ಮದೀಯೋಽಯಂ ತ್ಯಾಗಃ ಸಮುಚಿತಮಿದಂ ನೋ ತವಶಿವೇ
ಕುಪುತ್ರೋ ಜಾಯೇತಕ್ವಚಿದಪಿ ಕುಮಾತಾ ನ ಭವತಿ || 3 ||

ತಿರೆಯೊಳಿರುವರು ತಾಯೆ ನಿನ್ನಯ ನೂರು ಮಕ್ಕಳು ಸರಳರು
ಈತ ನಿನ್ನಪರೂಪ ಕಂದನು ನೂರರೊಳಗಿನ್ನೊಬ್ಬನು
ನಿನಗೆ ಮೆಚ್ಚುಗೆಯೇನಿದಮ್ಮಾ ನನ್ನದೆಲ್ಲವ ತೊರೆದುದು
ಕೆಡುಕು ಕುಡಿಯಿರಬಲ್ಲುದಲ್ಲದೆ ಕೆಟ್ಟಮ್ಮನೆಂತದು ಇರುವಳು?

ಜಗನ್ಮಾತರ್ಮಾತಸ್ತವಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಽಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತಕ್ವಚಿದಪಿ ಕುಮಾತಾ ನ ಭವತಿ || 4 ||

ಜಗದತಾಯೇ ನಿನ್ನ ಚರಣದ ಸೇವೆಮಾಡದಲುಳಿದೆನು
ರಾಶಿರಾಶಿಯ ಹಣವನೇನೂ ನಿನಗೆ ಕೊಡದವನೀತನು
ಆದರನುಪಮದೊಲುಮೆಯೂಡುವ ಧಾರೆಮನಸಿನ ಹೆಂಗಳೆ,
ಕೆಡುಕು ಕುಡಿಯಿರಬಲ್ಲುದಲ್ಲದೆ ದುರುಳೆಯವ್ವೆಯು ಇರುವಳೆ?

ಪರಿತ್ಯಕ್ತಾ ದೇವಾ ವಿವಿಧವಿಧಸೇವಾಕುಲತಯಾ 
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ
 |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್? || 5 ||

ನೂರುಸೇವೆಯ ಗೈಯಲಾಗದೆ ತೊರೆದೆ ದೇವತೆ ದೇವರ
ಕಳೆದು ಹೋಗಿದೆಯೈದು ಮತ್ತೆಂಭತ್ತು ವರುಷದ ಜೀವನ
ಈಗಲೊಂದೊಮ್ಮೆಯಿರದಿರೆ ನಿನ್ನ ಕರುಣೆಯು ನನ್ನಲಿ
ಯಾರಮೊರೆಹೊಗಲಮ್ಮ ನಾನಾಸರೆಯೆ ಕಾಣದ ತಾಣದಿ ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ
 |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
 
ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ || 6 ||

ಹೇ! ಅಪರ್ಣೆಯೆ ನಿನ್ನ ಹೆಸರದು ಕಿವಿಯೊಳಿಳಿದರೆ ಫಲವಿದು
ನುಡಿಯಲರಿಯದನಹನು ಜೇನ್ನುಡಿಯವೋಲ್ ನುಡಿಮರುಳನು
ಕೋಟಿ ಹೊನ್ನುಗಳೊಡೆಯನಪ್ಪನು ಬಡವ ಹೆದರಿಕೆ ತೊರೆವನು
ಕ್ರಮದಿ ಜಪಿಸಲು ನಿನ್ನ ನಾಮವ ಫಲವನರಿತವನಾವನು?


ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಮ್ || 7 ||

ಚಿತೆಯ ಬೂದಿಯ ಬಳಿದುಕೊಂಬವ ನಂಜನುಂಗಿದ ನಗ್ನನು  
ಜಟೆಯ ಧರಿಸಿಹ ಕೊರಳಹಾರಕೆ ಹಾವತೊಟ್ಟವ ಪಶುಪತಿ
ಭೂತನಾಥನು ಬುರುಡೆಗೈಯವ ಜಗದಪತಿ ತಾನಾದುದು
ಭವನ ರಾಣಿಯೆ ನಿನ್ನ ಕರಗಳ ಹಿಡಿದ ಪುಣ್ಯದ ಫಲವದು! 

ನ ಮೋಕ್ಷಸ್ಯಾಕಾಂಕ್ಷಾ ಭವವಿಭವವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ |
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವಶಿವಭವಾನೀತಿ ಜಪತಃ || 8 ||

ಮುಕ್ತಿ ಬಯಕೆಯದಿಲ್ಲ ನನ್ನೊಳು ಜಗದಸಂಪದದಾಸೆಯೂ
ಅರಿವಿನೆಳಸಿಕೆಯಿಲ್ಲ ಶಶಿಮುಖಿ ಸೊಗದೊಳಿಲ್ಲೆನಗಾಸೆಯೂ
ನಿನ್ನ ಬೇಡುವುದೊಂದೆಯಮ್ಮಾ  ಜನುಮ ಕಳೆಯಲಿ ನನ್ನದು
ಮೃಡನಹೆಂಡತಿ ರುದ್ರನವಳೇ ಶಿವೆಯೆ ನಿನ್ನಯ ಜಪದಲಿ

ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರೂಕ್ಷ ಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ || 9 ||

ಉಪಚಾರಪೂಜೆಯಿಂದೊಲಿಸಿಲ್ಲವಮ್ಮಾ
ಶುಷ್ಕವಾದಗಳಿಂದ ಗೈದಿಲ್ಲದೇನಿದೆ ?
ನನ್ನೊಳಿನ್ನೂ ಕರುಣಿಯಾಗಿರುವಿಯಲ್ಲಾ
ನಿನ್ನೊಬ್ಬಳಿಂದಹುದು ಹೇ ಸಿರಿಮೇಘವರ್ಣೆ!

ಆಪತ್ಸುಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛಠತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ || 10 ||

ಸಂಕಟದಿ ನಾ ಮುಳುಗಿ ನೆನೆಯುವೆನು ತಾಯೇ
ಪಡೆಯಲಸದಳ ಹೆಣ್ಣೆ ಕರುಣೆ ಕಡಲೊಡತಿ |
ಸಟೆಯೆಂದು ಬಗೆಯದಿರು ನನ್ನದೀ ಮೊರೆಯ
ಅವ್ವಗರೆಯುವರೆಲ್ಲ ಹಸಿದು ನೀರಡಿಸಿ ||

ಜಗದಂಬ ವಿಚಿತ್ರಮತ್ರ ಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧ ಪರಂಪರಾವೃತಂ
ನ ಹಿ ಮಾತಾ ಸಮುಪೇಕ್ಷತೇ ಸುತಂ || 11 ||

ಜಗದವ್ವ ಬೆರಗದೇನಿಹುದಿಲ್ಲಿ
ತುಂಬಿರಲ್ ತಿಳಿಗರುಣೆ ನಿನಗೆ ನನ್ನಲ್ಲಿ
ಅಮ್ಮ ತೊರೆಯುವುದಿಲ್ಲವೆಂದೂ
ತಪ್ಪುಗಳ ಬಲೆಬಂಧಿ ತನ್ನ ಕಂದನನು.

ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ
ಏವಂ ಜ್ಞಾತ್ವಾ ಮಹಾದೇವಿ ಯಥಾ ಯೋಗ್ಯಂ ತಥಾ ಕುರು || 12 ||

ನನ್ನ ಸಮನಾರಿಲ್ಲ ಕೇಡುಗೆಯ್ಮೆಗಳೊಡೆಯ
ಕೇಡು ತೊಡೆವವರಲ್ಲಿ ಸಮರಿಲ್ಲ ನಿನಗೆ.
ಇಂತು ಬಗೆದೆನಗೆ ನೀ ಸರಿಯಹುದ ಗೈ ತಾಯೆ
ಹಿರಿಯವ್ವ ಜಗದವ್ವ ಮೂಜಗದ ಬೆರಗೇ!



Tuesday, August 11, 2015

ರಿಯಾಲಿಟಿ ಶೋ ಎಂಬ ವಿಕ್ಷಿಪ್ತ ಮನರಂಜನೆ! (ಭಾಗ ಒಂದು)


ರಿಯಾಲಿಟಿ ಶೋ ಎಂಬ ಇಪ್ಪತ್ತೊಂದನೇ ಶತಮಾನದ ಒಪ್ಪಿತ ವಿಕೃತಿಯ ಕುರಿತಾಗಿ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ದೂ ಅದನ್ನು ನಿಲ್ಲಿಸುವಲ್ಲಿಯಾಗಲೀ, ಅದರ ಸ್ವರೂಪವನ್ನು ಬದಲಿಸುವಲ್ಲಿಯಾಗಲೀ ಯಾರೂ ಸಮರ್ಥರಾಗಿಲ್ಲ. ಕಾರಣ ಒಂದೇ, ಅದರ ಹಿಂದೆ ಹಣದ ಅಮೋಘ ಪ್ರವಾಹವಿದೆಯೆನ್ನುವುದು. ರಿಯಾಲಿಟಿ ಶೋಗಳ ಒಳ ಮರ್ಮವನ್ನು ಅರಿತ ಬಳಿಕವೂ ಜನ ಅದನ್ನು ನಿಜವೆಂದೇ ತಿಳಿದು ಖುಶಿ(!!) ಪಡುವುದು ನಡೆದೇ ಇದೆ.


ಮೊನ್ನೆ ಕೆಲವು ದಿನಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ’ನಿಜಾಯಿತಿ ತೋರ್ಕೆ’ (ರಿಯಾಲಿಟಿ ಶೋ) ಕಾರ್ಯಕ್ರಮದ  ಎದುರು ಕೂರುವ ಕರ್ಮ ನನ್ನದಾಗಿತ್ತು. ಅಂದವಾದ ಭಾಷೆಯಿಲ್ಲದ, ದೇಹ ಬೆಳೆಸಿದ ಕಾರಣಕ್ಕೇ ಟಿವಿಯೊಳಗೆ ಸೇರಿಕೊಂಡ, ಹೋ ಹಾ ಎಂದೆಲ್ಲ ಒದರಿಕೊಳ್ಳುವ ಘೇಂಡಾಮೃಗದಂಥಾ ನಿರೂಪನೊಬ್ಬ ನಿಜಾಯಿತಿ ತೋರ್ಕೆಯನ್ನು ನಿರ್ವಹಿಸುತ್ತಿದ್ದ. ನಾ ನೋಡುತ್ತಿದ್ದ ತೋರ್ಕೆಯ ವಿಷ್ಯ ಏನಪ್ಪಾಂದ್ರೆ- ಹಳ್ಳಿ ಹೈದ ಪ್ಯಾಟೆಗೆ ಬಂದ್ರೆ ಆಗುವ ಹಳವಂಡಗಳ ಕುರಿತಾದ್ದು.
ಹಳ್ಳಿ ಹುಡುಗ್ರು ಅಂತ ಬಿಂಬಿಸಲಿಕ್ಕೆ ಇಲ್ಲಿ ಉತ್ತರಕನ್ನಡದಿಂದ ಸಿದ್ಧಿ ಜನಾಂಗದ ಎರಡ್ಮೂರು ಹುಡುಗರನ್ನೂ, ಉತ್ತರಕರ್ನಾಟಕದ ಹಳ್ಳಿಯಿಂದ ಯಾರೋ ಒಂದಿಬ್ಬರನ್ನೂ ಹಿಡಿದು ತಂದು ಕ್ಯಾಮೆರ ಎದುರು ನಿಲ್ಲಿಸಿಕೊಂಡಿದ್ದರು. ಅವರಿಗೆಲ್ಲ ಬಲು ಜಾಣೆಯರಂತೆ ತೋರುವ (ಈ ಹೆಣ್ ಮಕ್ಕಳಿಗೆ ಬರಕೊಟ್ಟ ಸಂಭಾಷಣೆ ಆ ಪರಿಯಲ್ಲಿತ್ತು) ತಲಾ ಒಬ್ಬೊಬ್ಬಳು ಗೆಳತಿ, ಅದೂ ಬಿಳೀ ಬಣ್ಣದವರು. (ಕೆಲವರನ್ನು ಬಹಳೆ ಮುತುವರ್ಜಿಯಿಂದ ಬಿಳಿ ಮಾಡಿದಂತಿತ್ತು). ಆ ಹೆಣ್ ಹೈಕಳೆಲ್ಲ ಭಾಳಾ ಶಾಣ್ಯಾ ಜನ, ಮತ್ತು ಈ ಗಂಡ್ ಪೋರರು ಪಕ್ಕಾ ಪೆದ್ದು ಎನ್ನುವುದೇ ಆ ಕಾರ್ಯಕ್ರಮದ ಒಳ ತಿರುಳು. ಘೇಂಡಾಮೃಗವಂತೂ ಈ ಪೋರರನ್ನು ಇದ್ದಿದ್ದೂ ಹೀನೈಸುವ ಪ್ರಯತ್ನವನ್ನು ತನ್ನ ಭಾಷಾ ಪರಿಣತಿಯ ಮಿತಿಯಲ್ಲಿ ಮಾಡುತ್ತಲೇ ಇರುವವ.

ಇಂತಿರಲು, ನಿರೂಪಕನ ಬಾಯಲ್ಲಿ ಬರುವ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಾನು ಕಾರ್ಯಕ್ರಮವನ್ನು ಭಲೇ ಆಸಕ್ತಿಯಿಂದ ನೋಡಲು ಶುರುವಿಟ್ಟೆ. ನಮ್ಮೂರಿನ ಮಕ್ಕಳು ಇದ್ದರಲ್ಲ ಎಂಬುದಷ್ಟೆ ನನ್ನ ಕುತೂಹಲವನ್ನು ಕಾಯ್ದಿರಿಸಿದ ಸಂಗತಿ. ಶುರುವಾಯ್ತು ನೋಡಿ, ಹಡೆ ಮಾಡುವ ವಿವಿಧ ಚೇಷ್ಟೆಗಳು. (ಹಡೆ ಮಾಡುವುದು ಅಂದರೇನು ಅಂತ ಪ್ರಶ್ನೆ ಇದ್ದರೆ ಆ ಕಾರ್ಯಕ್ರಮ ನೋಡಿ, ತಿಳಿದೀತು). ಬಿಳೀ ಹೆಣ್ ಮಕ್ಕಳು ತಮ್ಮ ಕರ್ಲ್ ಕರ್ಲಿ ಕೂದಲು ತಿರುವುತ್ತಾ, ನಿರ್ದೇಶಕ ಕೊಟ್ಟಷ್ಟೆ ಬಟ್ಟೆಯಲ್ಲಿ ಮೈ ತುಂಬಿಡುವ ಪ್ರಯತ್ನ ಮಾಡುತ್ತಾ ತಮ್ ತಮ್ಮ ಕರೀ ಹುಡುಗರನ್ನ (ಇನ್ನಷ್ಟು ಕಪ್ಪಾಗಿ ಬೇಕಂತಲೇ ಬಿಂಬಿಸಿದ್ದರಾ ಅಂತ ಡೌಟು)  ವೇದಿಕೆಯ ಮೇಲೆ ಕರೆತರುವ ಹೊತ್ತಿಗೆ ನಿರೂಪಕನ ಭೀಕರ ಹೂಂಕಾರ ದಯನೀಯ ಹಂತ ತಲುಪಿತ್ತು. ಆ ಹೆಣ್ ಹೈಕಳು ತಮಗೆ ವಹಿಸಿದ್ದ ಈ ಹುಡುಗರನ್ನು ಪಕ್ಕಾ ಶಾಲೆ ಮಕ್ಕಳಂತೆ ಗೇಣುದ್ದದ ನೀಲಿ ಚಡ್ಡಿ, ಟಿಪಿಕಲ್ ಯೂನಿಫಾರ್ಮಿನ ಗೆರೆ ಗೆರೆ ಅಂಗಿ, ಬೆನ್ನಿಗೊಂದು ಸುಲೇಖಾ ಪಾಟಿಚೀಲ ತೊಡಿಸಿ ಕರಕೊಂಡು ಬಂದಿದ್ದರು. ಶಾಲೆಗೆ ಮಕ್ಕಳನ್ನು ಕರೆತರುವ ಅಮ್ಮಂದಿರನ್ನೇನೂ ನೀವಿಲ್ಲ ಕಲ್ಪಿಸಬೇಕಾದ್ದಿಲ್ಲ, ಸಂಜೆ ಹೊತ್ತಿಗೆ ನಗರದ ಶಾಂತ ಓಣಿಗಳಲ್ಲಿ ತಮ್ ತಮ್ಮ ಸಾಕುನಾಯಿಯ ಜೊತೆಗೆ ಕಾಲಾಡಿಸಿ (ವಾಕಿಂಗು) ಬರಲು ಹೊರಡುವ ಟೀ ಶರ್ಟಿನ ಹೆಣ್ ಮಕ್ಕಳನ್ನೂ (ಅವರ ಪೆಟ್ ನಾಯಿಯನ್ನೂ) ಕಣ್ ಮುಂದೆ ತಂದ್ಕಳಿ ಸಾಕು.

ಅಷ್ಟಾಯ್ತಾ, ಇವಾಗ ಮುಂದಿಂದು ಏನಪಾಂದ್ರೆ ನಮ್ಮೂರ್ ಹುಡುಗ್ರು ಆ ಪ್ಯಾಟೆ ಕೂಸ್ಗಳು ಹೇಳಿಕೊಟ್ಟ ಇಂಗ್ಲೀಷ್ ಶ್ಲೋಕಗಳನ್ನು (ರೈಮ್ಸ್ ಅನ್ನಬೇಕಿತ್ತಾ? ಮರೆತೆ) ಆ ಘೇಂಡಾಮೃಗಕ್ಕೆ ಒಪ್ಪಿಸೋ ಟಾಸ್ಕು. ಒಬ್ಬ ಟ್ವಿಂಕಲ್ ಟ್ವಿಂಕಲ್ ಪೂರ್ತಿ ಹೇಳಕ್ಕಾಗದೆ ಪಿಂಕ್ ಪಿಂಕ್ ಅಂದ, ಇನ್ನೊಬ್ಬ ಅಂಥದ್ದೇ ಬಾಲ್ವಾಡಿ ಶ್ಲೋಕವೊಂದನ್ನ ಬಾಯ್ಪಾಠ ಹೇಳಲಾಗದೆ ಪೆದ್ದ್ ಪೆದ್ದಾಗಿ ಚಡ್ಡಿ ಹಿಂಜಿಕೊಳ್ಳುತ್ತ ನಿಂತ. ಅದಷ್ಟಾದ ಬಳಿಕ, ಬೇರ್ ಬೇರೆ ಪ್ರಾಣಿಗಳ ಚಿತ್ರವನ್ನು ಪಟದಲ್ಲಿ ತೋರಿಸಿ ಇಂಗ್ಲೀಷಲ್ಲಿ ಅವುಗಳ ಹೆಸರು ಹೇಳುವುದಕ್ಕೆ ನಿರೂಪಕ ಕೇಳುತ್ತಿದ್ದ. ಆ ಹಳ್ಳಿ ಯುವಕರು ಅದು ತಿಳಿಯದೆ ಮಂಗಾ ಆಗುವುದನ್ನು ನೋಡಿ ಅವರ ಬಿಳೀ ಗೆಳತಿಯರು ನಾಚಿ ನೀರಾಗುವುದೇ ಕ್ಯಾಮೆರಾಕ್ಕೆ ಆಹಾರ. ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಿ ಅವರನ್ನು ’ಹಳ್ಳೀ ಪೆದ್ದೂಸ್’ ಎಂದು ಬಿಂಬಿಸುವ ನಿರೂಪಕ ತನ್ನನು ತಾನು ಹೀರೋ ಅಂತ ಬಿಂಬಿಸಿಕೊಳ್ಳಲು ಹೆಣಗಾಡುತ್ತಿದ್ದ. ಒಟ್ಟಿನಲ್ಲಿ ಅದೊಂದ್ ಮೂರ್ ನಾಲ್ಕು ಜನ ಹಳ್ಳೀ  ಜನರನ್ನಿಟ್ಟುಕೊಂಡು, ಅವರನ್ನು ಧಡ್ಡಾ ದಡ್ಡವಾಗಿ ಬಿಂಬಿಸುವ ಮತ್ತು ಅದನ್ನು ಮನರಂಜನೆಯ ಹೆಸರಿನಲ್ಲಿ ಮಾರಾಟ ಮಾಡುವ ವ್ಯವಸ್ಥಿತ ಕಾರ್ಯಕ್ರಮಕ್ಕೆ ನಿಜಾಯ್ತಿ ತೋರ್ಕೆಯ ಹೆಸರು.

ಸರಿ, ಇದೆಲ್ಲ ಇವತ್ತಿನ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತಿರುವ ಧಂಧೆ ಅಂತ ಸುಮ್ಮನಿರೋಣ ಅಂದ್ರೆ, ಯಾಕೋ ಆ ಕಾರ್ಯಕ್ರಮ ನೋಡ್ತಾ ಇದ್ದಂತೆ ಇದೊಂದು ಸಕಾರಾತ್ಮಕ ಕಾರ್ಯಕ್ರಮ ಎಂದು ಅನ್ನಿಸಲೇ ಇಲ್ಲ. ಸಿದ್ಧಿ ಜನಾಂಗ ಎನ್ನುವುದು ಪೂರ್ಚುಗೀಸರ ಕಾಲದಲ್ಲಿ ಅವರ ಹಡಗುಗಳಲ್ಲಿ ಗುಲಾಮರಾಗಿ ಭಾರತಕ್ಕೆ ಬಂದಿಳಿದು ಕಾಡುಗಳಲ್ಲಿ ಸೇರಿ ಯಾರಿಗೂ ತೊಂದರೆ ಕೊಡದೆ ಬದುಕುತ್ತಿರುವ ಜನಾಂಗ. ಆಧುನಿಕತೆ ಆ ಜನಕ್ಕೆ ಹೊಸದಿರಬಹುದು, ಹಾಗಂತ ಅವರು ಧಡ್ಡರೇನಲ್ಲ. ಇವತ್ತು ಅವರನ್ನು ಬುಡಕಟ್ಟು ಜನಾಂಗದ ಕಲೆಯ ಹೆಸರಿನಲ್ಲಿ ನಾಯಿಕೊಡೆಯಂಥಾ ರೆಸಾರ್ಟುಗಳ elite ಪ್ರವಾಸಿಗರ ಮೋಜಿಗಾಗಿ ಅರೆಬೆತ್ತಲೆ ಕುಣಿಸಲಾಗುತ್ತದೆ. ರಿಯಾಲಿಟಿ ಶೋಗಳಲ್ಲಿ Specimen ಎನ್ನುವಂತೆ ಬಿಂಬಿಸಿ ಹಣ ಮಾಡಲಾಗುತ್ತದೆ. ಭಾಗವಹಿಸುವವರಿಗೆ ಮನಸಿದ್ದರೆ ನಿಮ್ಮದೇನ್ ತಕರಾರು ಎಂದು ನೀವು ಕೇಳಬಹುದು, ಕಾನೂನಿನ ಪ್ರಕಾರ ಇದು ಸರಿಯಾದ ಪ್ರಶ್ನೆಯೇ. ಆದರೆ, ಅವರ ಮುಗ್ಧತೆಯನ್ನು ಆಡಿಕೊಂಡು ನಗುವುದಕ್ಕೆ ಅವಕಾಶ ಕಲ್ಪಿಸುವ ನಮ್ಮ ವಾಹಿನಿಗಳನ್ನು ಪ್ರಶ್ನಿಸುವುದು ಕಾನೂನಿನ ಪ್ರಶ್ನೆಗಿಂತ ಮಾನವೀಯ ಪ್ರಶ್ನೆ ಎನ್ನುವುದು ನನ್ನ ನಿಲುವು. ಇನ್ನೊಂದು ವಿಷ್ಯ ಏನಂದ್ರೆ, ನಮ್ಮ ಓರಾಟಗಾರರ್ಯಾರಿಗೂ ಇದು ಕುಚೋದ್ಯ ಎಂದಾಗಲೀ, ಸಮಾಜದಲ್ಲಿ ಹಿಂದುಳಿದವರ ವಿರುದ್ಧ ಮೇಲ್ವರ್ಗದ ಜನ ಮಾಡುವ ದೌರ್ಜನ್ಯ ಎಂದಾಗಲೀ ಅನ್ನಿಸುವುದಿಲ್ಲ.

ಯಾಕೋ, ಮನರಂಜನೆ ಎನ್ನುವ ಪರಿಕಲ್ಪನೆಯನ್ನೆ ನಮ್ಮ ಮನರಂಜನೆಯ ಮನೆಗಳು ಅಪಾರ್ಥ ಮಾಡಿಕೊಂಡಿವೆ ಅನ್ನಿಸುತ್ತಿದೆ. ಯಾವುದು ಮನರಂಜನೆ? ಸೃಜನಶೀಲವಾದ ಮನರಂಜನೆಯನ್ನು ಸೃಷ್ಟಿಸಲು, ಒಂದೋ ಕಲೆಯಿರಬೇಕು, ಅಥವಾ ಅಸೀಮ ಬುದ್ಧಿವಂತಿಕೆಯಿರಬೇಕು (ಚಾತುರ್ಯ). ಎರಡನೆಯದರ ಕೊರತೆ ಇವತ್ತಿಗೆ ಕಾಡುತ್ತಿದೆ. ಹಾಗಾಗಿಯೇ, ಇನ್ನೊಬ್ಬನನ್ನು ಮಂಗ ಮಾಡಿ ಖುಷಿಪಡುವ ಪರಿಸ್ಥಿತಿ ನಮಗೆ ಬಂದಿದೆ.


ಇಷ್ಟರಮೇಲೂ ನಮ್ಮೂರ ಹುಡುಗರು ಮಂಗಾ ಆಗುವುದನ್ನು ನೋಡಲೇಬೇಕೆಂದಿದ್ದರೆ, ನಿಮ್ಮಿಷ್ಟ ನೋಡಿ J

ಮತ್ತೇನಲ್ಲ, ನಮ್ಮದೇ ವಿಕೃತಿಯನ್ನು ಝಗಾ ಝಗ್ ಬೆಳಕಿನಲ್ಲಿ ನೋಡಿಕೊಂಡಂತೆ ಇದು. 

Monday, August 10, 2015

ಒಲುಮೆಯಿಲ್ಲದ ಕೂಟ : Porn



ಕೇಂದ್ರ ಸರಕಾರದ ಪೋರ್ನ್ ban ನಿರ್ಣಯದ ಕುರಿತಾಗಿ ಬೌದ್ಧಿಕದಾಸ್ಯದ ವಲಯದಿಂದ ಬಂದ ಪ್ರತಿಕ್ರಿಯೆಗಳು ಮತ್ತು ಹಾಹಾಕಾರಗಳು ನನ್ನನು ಬಹುವಾಗಿಯೇ ಕಾಡಿದ್ದುವು, ಆದರೆ ಮತ್ತೇನನ್ನೂ ಬರೆಯಲಾಗದಂತೆ ಕೆಲಸವೊಂದರಲ್ಲಿ ಮಗ್ನವಾಗಿದ್ದೆ. ಇದೀಗ ಸಮಯ ಒದಗಿದೆ. ಬರೆಯದಿರಲಾಗದೆ ಬರೆಯುತ್ತಿದ್ದೇನೆ. 



ಮೊದಲಸಲ ನಾನು ಪೋರ್ನ್ ನೋಡಿದಾಗ ಖರೆಯೂ ಗಾಢವಾಗಿ  ಅನ್ನಿಸಿದ್ದು -“ಪ್ರೇಮವಿಲ್ಲದ ಕಾಮಕ್ಕೆ ಅರ್ಥವೂ, ಅಂದವೂ, ಮಾನವತೆಯೂ ಇಲ್ಲ” ಎಂದು.  ವಿಶ್ವಕ್ಕೆ ಸಂಸ್ಕೃತವು ಕೊಡಮಾಡಿದ ಸಾರ್ವಕಾಲಿಕ ಶ್ರೇಷ್ಠ ಕಾವ್ಯಗಳನ್ನು ಓದಿಕೊಂಡು ಮಾನವ ಪ್ರೇಮದ ಉತ್ಸವವನ್ನು ಮನಸಿನಲ್ಲಿ ಮೂಡಿಸಿಕೊಂಡಿದ್ದ ನನಗೆ, ಕಾವ್ಯಗಳ ಶಬ್ದ ಶರೀರದಲ್ಲಿ ಸ್ತ್ರೀ ಸೌಂದರ್ಯವನ್ನು ಕಲ್ಪಿಸಿಕೊಂಡಿದ್ದ ನನಗೆ, ವಿಪ್ರಲಂಭ ಶೃಂಗಾರದ ವರ್ಣನೆ ಓದಿದ್ದ ನನಗೆ, ಪೋರ್ನ್  ಕೊಡಮಾಡಿದ್ದು ಹಿಂಸೆಯನ್ನು ಮತ್ತು ಹೇವರಿಕೆಯನ್ನಷ್ಟೆ. ಮನುಷ್ಯನ ಮಧ್ಯೆ ಪ್ರೇಮವಿರದ ಬರೀ ಕಾಮದ ಇರವನ್ನೇ ತಿಳಿದಿರದಿದ್ದ ನನಗೆ ಪೋರ್ನ್ ಎಂಬುದು ನಾನು ಕಲ್ಪಿಸಿಯೂ ಇರದಿದ್ದ ಲೋಕವೊಂದನ್ನು ತೆರೆದಿಟ್ಟಿತು. ಪ್ರೇಮದ ಸುಳಿವೇ ಇರದ ಬರಿಯ ಮಾನವ ಕೂಟ ನನಗೆ ಕಾವ್ಯಾತ್ಮಕವೆನ್ನಿಸಲಿಲ್ಲ.

ಬದುಕನ್ನು ಹೆಚ್ಚು ಹೆಚ್ಚು ಜೀವಂತವಾಗಿಸಿಕೊಳ್ಳುತ್ತ, ಹೊರ ಹೊರಗಿನ ತೋರಿಕೆಯಲ್ಲದೆ ಒಳಗಿನ ಸಂವೇದನೆಗೆ ಸ್ಪಂದಿಸುವುದನ್ನು ಕಲಿಸಿಕೊಟ್ಟ ನನ್ನ ಪರಿಸರ, ಪ್ರಕೃತಿ, ಓದಿಕೊಂಡ ಸಾಹಿತ್ಯ ಮತ್ತು ಒದಗಿದ ಪರಿಸ್ಥಿತಿಗಳ ಉನ್ನತಿಯ ಎದುರು ಪೋರ್ನ್ ಎನ್ನುವುದು ಎಲ್ಲೆಂದರೆ ಎಲ್ಲಿಯೂ ಹೊಂದಿಕೆಯಾಗದ ಪ್ರೇತದ ಚಿತ್ರದಂತಿತ್ತು. ಅದೆಂದಿಗೂ ನನಗೆ ಮಾನವೀಯ ಎಂದೆನಿಸಲಿಲ್ಲ. ಆದರೆ, ಅದೇ ಅಮಾನುಷ ತೊಗಲಿನ ಲೋಕದ ನಿರ್ಮಾಣಕ್ಕಾಗಿ ಜಗತ್ತಿನಲ್ಲಿ ಎಷ್ಟು ದೊಡ್ಡ ಹಿಂಸೆಯ, ನರಕ ಸದೃಶ ಲೋಕವನ್ನು ಸೃಷ್ಟಿಸಿಕೊಳ್ಳಲಾಗಿದೆ ಎನ್ನುವುದು ತಿಳಿಯುತ್ತ ಬಂತು. ನಮ್ಮ ದಕ್ಷಿಣಕನ್ನಡ ಜಿಲ್ಲೆಯಿಂದ ವರ್ಷಕ್ಕೆ ಹತ್ತಿಪ್ಪತ್ತರ ಲೆಕ್ಕದಲ್ಲಿ ಮಾಯವಾಗುವ, ಅಡ್ರೆಸ್ಸೇ ಸಿಗದೆ ಹೋಗುವ, ಹೆಣ್ಣುಮಕ್ಕಳು ಅಂಥದೇ ನರಕಕ್ಕೆ ನೂಕಲ್ಪಟ್ಟಿರಬಹುದಲ್ಲವೇ ಅನ್ನಿಸಿದಾಗೆಲ್ಲ ಹಿತ್ತಿಲಲ್ಲೇ ಕೊಳಚೆ ನಿರ್ಮಾಣವಾದ ಅನುಭವ.  ಪ್ರತಿ ವರ್ಷವೊಂದಕ್ಕೆ ಹೆಸರೇ ಇಲ್ಲದ ಕಾಣೆಯಾಗುವ ಹೆಣ್ಣುಮಕ್ಕಳ ವಿಷಯವಾಗಿ ಪೋಲೀಸ್ ಒದಗಿಸಿದ ಅಂಕಿ ಸಂಖ್ಯೆ ನೋಡಿದರೆ ತಲೆ ತಿರುಗುತ್ತದೆ. ಅದರಲ್ಲೂ ಕರ್ನಾಟಕವಂತೂ ದಕ್ಷಿಣಭಾರತಕ್ಕೆ ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ೨೦೧೪ ರಲ್ಲಿ ಕಾಣೆಯಾದ ೭೮೩ ಹೆಣ್ ಮಕ್ಕಳ ಪತ್ತೆ ಇಂದಿಗೂ ಆಗಿಲ್ಲ. ಇದೆಲ್ಲ ಅಧಿಕೃತ ದಾಖಲಾದ ಸಂಗತಿ. ಇದರ ಹೊರತಾಗಿ ನೇತ್ರಾವತಿಯಲ್ಲಿ ಸಿಗುವ ಅನಾಥ ಶವಗಳು ಯಾವ ಕಾರಣಕ್ಕೆ ಶವಗಳಾದವು ಎನ್ನುವುದು ಎಂದೆಂದಿಗೂ ನಿಗೂಢ. ಮಾನವ ಕಳ್ಳ ಸಾಗಣೆ ಎನ್ನುವುದು ಯಾಕಿಷ್ಟು ಬೆಳೆದಿದೆ? ಮತ್ತದೇ ಪೋರ್ನ್ ಪ್ರಪಂಚಕ್ಕೆ ಬಂದು ನಿಲ್ಲುತ್ತದೆ ಚರ್ಚೆ.

ಖಜುರಾಹೋ ಶಿಲ್ಪಗಳನ್ನು, ಬೇಲೂರಿನ ಶಿಲಾ ಬಾಲಿಕೆಯರನ್ನು, ಹೋಗಲಿ- ಉತ್ತರ ಕನ್ನಡ ಜಿಲ್ಲೆಯ ಸೋದೆ ಅರಸರ ಕ್ಷೇತ್ರಗಳಲ್ಲಿ ಕಾಡಿನೊಂದಿಗೆ ಕಾಡಿನಂತೆ ನಿಂತ ದೇವಾಲಯಗಳ ಭಿತ್ತಿಗಳಲ್ಲಿನ ಚಿತ್ರಗಳನ್ನು ಪೋರ್ನ್ ಗೆ ಹೋಲಿಸುವುದಾದರೆ, ಕಲೆಯನ್ನು ವ್ಯಭಿಚಾರದೊಂದಿಗೆ ತುಲನೆ ಮಾಡಿದಂತೆ. ಕೋಕ ಶಾಸ್ತ್ರವನ್ನು, ವಾತ್ಯ್ಸ್ಯಾಯನನ ಕಾಮಸೂತ್ರವನ್ನು ಇವತ್ತಿನ ಪೋರ್ನ್ ಜೊತೆ ಸಮವಾಗಿ ಕಾಣುವುದೆಂದರೆ ಶಾಸ್ತ್ರೀಯ ಅಧ್ಯಯವನ್ನು ಫಟಿಂಗರ ಪೋಲಿ ಪುಸ್ತಕದೊಡನೆ ತುಲನೆ ಮಾಡಿದಂತೆ. ಅಧ್ಯಯನ ಇರುವ ಯಾರೂ ಈ ಬಗೆಯ ವಾದವನ್ನು ಮಾಡಲಾರರು.  ಇವರೇನಾದರೂ ಮೇಘದೂತವನ್ನೋ, ಮಾಘಕವಿಯನ್ನೋ, ಕುಮಾರಸಂಭವವನ್ನೋ ಓದಿದ್ದಿದ್ದರೆ ಅವೆಲ್ಲ ರತಿ ಚಕೋರಿಗಿಂತ ಭಿನ್ನವಾದ ಸಾಹಿತ್ಯವಲ್ಲ ಎಂದೇ ಬರೆಯುತ್ತಿದ್ದರೇನೋ!

ನಮ್ಮ ಶೃಂಗಾರ ಸಾಹಿತ್ಯದ ಮೊದಲ ಅಂಶವೇ ಒಲುಮೆ. ಒಲಿಸಿಕೊಳ್ಳುವ ಅಂದ, ಒಲಿಯೆನೆನ್ನುವ ಹುಸಿ ಹಠ, ಕೊನೆಗೂ ಒಲಿಯುವ ನಮ್ಯತೆ, ಒಲಿಸಿಕೊಳ್ಳುವ ಪ್ರಕ್ರಿಯೆಯೇ ಸಲ್ಲಾಪವೆನ್ನುವ ಗ್ರಹಿಕೆ- ಈ ಅಂಶಗಳಿಲ್ಲದ ಶೃಂಗಾರ ಕಲ್ಪನೆ ನಮ್ಮಲ್ಲಿಲ್ಲ. ಕಾವವನ್ನು ಮಹಾಪಾಪವೆಂದು ಬಗೆದ, ಸ್ತ್ರೀ ಪುರುಷ ಸಂಯೋಗವನ್ನೇ ಪಾಪದ ಆರಂಭವೆಂದು ತಿಳಿದ ನಾಗರಿಕತೆ ನಮ್ಮದಲ್ಲ. ಒಲುಮೆಯಿಲ್ಲದ ಕಾಮದ ಕುರುಹು ನಮ್ಮಲ್ಲಿ  ಪ್ರಾಯಃ  ಸಿಗಲಾರದು. ಕಾವ್ಯಕ್ಕೆ ಕಾವ್ಯವಾಗುವ ತಾಕತ್ತು ಬರುವುದೇ ಒಲುಮೆಯ ಹಿನ್ನೆಲೆಯಲ್ಲಿ. ಪಾಶುಪತ ಪಡೆಯಲು ಹಿಮಾಲಯ ಬೆಟ್ಟ ಹತ್ತಿದ ಅರ್ಜುನನದೂ ಒಲುಮೆಯೇ. ಒಲಿಸಿಕೊಳ್ಳುವ ತಾಳ್ಮೆಯಿಲ್ಲದ, ಬರಿಯ ಉನ್ಮಾದದ ಯಾವುದೂ ಬದುಕಾಗಲೀ ಕಾವ್ಯವಾಗಲೀ ಆಗದು. ಅಲ್ಲಿಗೆ ಅದಕ್ಕೆ ಬೆಲೆಯೂ ಇರದು. ಒಲುಮೆ ಎನ್ನುವುದು ಸಣ್ಣ ಸಂಗತಿಯಲ್ಲ, ಅದಿಲ್ಲದೆ ಯಾವ ಸಾಧನೆಯೂ ಇಲ್ಲ. ಅದೊಂದು ತಪಸ್ಸು.  ಅಂಥದರಲ್ಲಿ ಒಲುಮೆಯ ಸೆಲೆಯೇ ಇಲ್ಲದ ಬೆತ್ತಲೆ ಮಿಥುನಗಳ ಉದ್ವೇಗ ಮುಖಿಯಾದ ಚಿತ್ರಣ- ಪೋರ್ನ್- ಮಾನವಪರವಾದ ಸಂಗತಿ ಹೇಗಾದೀತು? ಕೆಡುಕಿನ ಕಲ್ಪನೆ ಒಬ್ಬನಿಗೆ ಬೇಕಿದ್ದಲ್ಲಿ ಪೋರ್ನ್ ನೋಡಬಹುದೇನೋ.
ಸಾಮಾನ್ಯರ ಕಲ್ಪನೆಗೆ ನಿಲುಕದೇ ಇರುವಷ್ಟು ಹಿಂಸೆ, ಪಾಶವೀಯತೆ, ಈ ಭೂಮಿಯ ಮೇಲೆ ನಮ್ಮ ಬೃಹತ್ ಮಾನವ ಕುಲದ ಮಧ್ಯೆ ಇದೆ. (ISIS ನೆನಪಾಗುತ್ತದೆ ಇಲ್ಲಿ) ಮತ್ತದೇ ಒಲುಮೆಯಿರದ ಲೈಂಗಿಕತೆಯ ವಿಜೃಂಭಣೆಯೇ ಮಾನವ ಸೃಷ್ಟಿಸಬಹುದಾದ ಹಿಂಸೆಯ ಪರಮ ಪಾತಾಳ ಎಂದು ನನ್ನ ಊಹೆ. ಹಿಂಸೆ ಮತ್ತು ಒಲವಿಲ್ಲದ ಲೈಂಗಿಕತೆ ಇವೆರಡೇ ಭೂಮಿಯ ಮೇಲೆ ನರಕ ಸೃಷ್ಟಿಸಿರುವ ಸಂಗತಿಗಳು, ಮತ್ತಿವು ಪರಸ್ಪರ ಅಂತಃಸಂಬಂಧ ಉಳ್ಳವೂ ಆಗಿವೆ.
ಒಲುಮೆಯ ತಪಸ್ಸಿಗೆ ಕುಳಿತು ಚೈತನ್ಯಯುತವಾದ ಬದುಕು ಬದುಕುವುದಕ್ಕೆ ಭಾರತೀಯ ಪ್ರಜ್ಞೆಯಲ್ಲಿ ದೂಡ್ಡ ಅವಕಾಶ ಇದೆ. ನಮಗಲ್ಲದಿದ್ದರೂ ನಮ್ಮ ಹಿಂದಿನ ಸಾಹಿತ್ಯಕ್ಕೆ ಆ ಉನ್ನತಿಯ ನೆನಪಿದೆ. ಇಂಥ ಶುದ್ಧ ಗಂಗೆಯಂಥಾ ಬದುಕನ್ನು ಬಿಟ್ಟು ಅಚೈತನ್ಯದ, ಸಂವೇದನಾರಹಿತ, ಜೀವ ಕಳೆಯಿಲ್ಲದ ಉದ್ವೇಗದ ಮೇಲಾಟದ ಮಾನವ ಮಿಲನವನ್ನು ಆನಂದಿಸುವ ತುಚ್ಛತೆ ನಮಗೆ ಬೇಕೆ?

ಪೋರ್ನ್ ಉಳಿಯಬೇಕು ಎನ್ನುವವರು ಅದೆಷ್ಟು ಕುರುಡಾಗಿ ವಾದಗಳನ್ನು ಮಂಡಿಸುತ್ತಿದ್ದಾರೆಂದರೆ, ಬಳಕೆ ಸಂಸ್ಕೃತಿಯ Commodity  ಪ್ರಪಂಚದ ದಾಸರೇ ಆಗಿಹೋಗಿದ್ದಾರೋ ಅನ್ನಿಸುವಷ್ಟು. ಅಗತ್ಯವಿದೆ, ಹಾಗಾಗಿ ಪೂರೈಕೆಯೂ ಆಗಲೇ ಬೇಕು ಎನ್ನುವ ವಾದ ಅದು. ಈಗಾಗಲೇ ನಮ್ಮ ಶೋಕಿಗಾಗಿ ನಾವು ಮಾನವತೆಯ ಎಲ್ಲೆಯನ್ನು ದಾಟಿಯಾಗಿದೆ. ಸುಗಂಧಕ್ಕಾಗಿ ಒಂದು ಪ್ರಾಣಿ, ರೆಕ್ಕೆ ಪುಕ್ಕಕ್ಕಾಗಿ ಹಕ್ಕಿ, ಚರ್ಮಕ್ಕಾಗಿ ಹಾವು ಹುಲಿಗಳು, ದಂತಕ್ಕಾಗಿ ಆನೆ... ನಮ್ಮ ಕೊಲೆಗಡುಕತನ ಇನ್ನೂ ವಿಸ್ತಾರವಾಗುತ್ತಲೇ ಇದೆ. ಬಹುಶಃ, ಪೋರ್ನ್ ಇರಲೇ ಬೇಕು ಎನ್ನುವುದು ಇದೇ ಕೊಲೆಗಡುಕತನದ ಇನ್ನಷ್ಟು ವಿಸ್ತಾರವಾದ ಪರಿಧಿ. ಕೊಲೆಗಿಂತಲೂ ಹಿಂಸಾತ್ಮಕವಾದ್ದು ಪೋರ್ನ್. 


ನ್ಯಾಯಾಂಗವಾಗಲೀ ಸರಕಾರವಾಗಲೀ ಪೋರ್ನ್ ಎಂಬ ಹೀನಾಯವನ್ನು ನಿಲ್ಲಿಸುವುದರಲ್ಲಿ ಸಮರ್ಥವಾದರೆ ಅದು ಸ್ವಸ್ಥವಾದ ಹೊಸಯುಗದ ಆರಂಭಕ್ಕೆ ನಾಂದಿಯಾದೀತು.      

Monday, August 3, 2015

ಅರಿಯದ ಶಾಕುಂತಲೆಯ ಅಂತ-ರಂಗ


ನಾಟಕವೆಂದರೆ ಅಭಿಜ್ಞಾನ ಶಾಕುಂತಲೆಯೇ ಎನ್ನುವ ಅರ್ಥದ ಮಾತೊಂದಿದೆ ಸಂಸ್ಕೃತದಲ್ಲಿ. ಅಷ್ಟು ಚೇತೋಹಾರಿಯಾದ ನಾಟಕ ಅದು. ಅದರ ಕರ್ತೃ ಕಾಲಿದಾಸನ ಬಗ್ಗೆಯೂ ’ಕವಿಯೆಂದರೆ ಕಾಲಿದಾಸನಯ್ಯಾ’ ಎನ್ನುವ ಅರ್ಥದ ಮಾತೂ  ಚಾಲ್ತಿಯಲ್ಲಿದೆ. ಅಗ್ರಮಾನ್ಯ ಕವಿಯೊಬ್ಬನ ಅಗ್ರಮಾನ್ಯ ಕೂಸು ಅಭಿಜ್ಞಾನ ಶಾಕುಂತಲ ನಾಟಕ. ಭಾರತೀಯ ಸಾಹಿತ್ಯದ ಗಣನೆಯಲ್ಲಿ ಯಾವಕಾಲಕ್ಕೂ ಬಿಡಲೇ ಆಗದ ಕೃತಿಯದು.


ಅದೇ ನೆರಳಲ್ಲಿ ಆರಂಭಗೊಳ್ಳುವ ಆಧುನಿಕ ಕನ್ನಡ ನಾಟಕ ’ಅನಭಿಜ್ಞ ಶಾಕುಂತಲ’ ಇವತ್ತಿನ ರಂಗಭೂಮಿಯ ಬೆರಗು. ನಿನ್ನೆ ರಂಗಶಂಕರದಲ್ಲಿ ಅನಭಿಜ್ಞಶಾಕುಂತಲದ ೪೯ ಮತ್ತು ೫೦ ನೇ ಪ್ರಯೋಗ ತುಂಬಿದ ಸಭಾಂಗಣದಲ್ಲಿ ಯಶಸ್ವಿಯಾಯ್ತು. ಬದುಕಿನ ಎರಡು ತಾಸು ಕಳೆದಿದ್ದೇ ತಿಳಿಯಲಿಲ್ಲ! ಅಷ್ಟು ಒಪ್ಪ ಓರಣವಾದ ಎಲ್ಲಿಯೂ ಜಾರಿಲ್ಲದ, ಕೊಸರಿಲ್ಲದ ಪ್ರಯೋಗ ಅನಭಿಜ್ಞ ಶಾಕುಂತಲ.

ಡಾ. ಕೆ ವೈ ನಾರಾಯಣ ಸ್ವಾಮಿಯವರ ಕಲ್ಪನೆಯ ಕೂಸು ಅನಭಿಜ್ಞ ಶಾಕುಂತಲ.

ಪಾರಂಪರಿಕವಾಗಿ ಬಂದ ಸಂಸ್ಕೃತ ರಂಗಭೂಮಿಯ ಮಂಗಳಗೀತೆ ’ ಆಂಗಿಕಂ ಭುವನಂ ಯಸ್ಯ...’ (ಭರತಮುನಿಯ ನಾಟ್ಯ ಶಾಸ್ತ್ರ) ಅಂತಲೇ ಶುರುವಾಗುವ ನಾಟಕ, ಸಂಸ್ಕೃತ ನಾಟಕಗಳ ರೀತಿಯನ್ನೇ ಅನುಸರಿಸುತ್ತ ಸೂತ್ರಧಾರನಿಂದ ಶುರುವಾಗುತ್ತದೆ. ಅಭಿಜ್ಞಾನ ಶಾಕುಂತಲವನ್ನು ಆಡಲು ಸಿದ್ಧಗೊಳ್ಳುತ್ತಿದ್ದಂತೆ ಬಂದೆರಗುವ ಅಭಿಜ್ಞಾನದ ಕರ್ತೃ ಕಾಲಿದಾಸನ ಹತ್ಯೆಯ ವಾರ್ತೆ, ನಾಟಕ ಆಡುಗರನ್ನು ತಡೆಯುತ್ತದೆ. ಅಭಿಜ್ಞಾನಕ್ಕಾಗಿ ಸಿದ್ಧವಾದ ವೇದಿಕೆ ನೋವಿನ, ಗಾಬರಿಯ ಬೀಡಾಗಿ ಬದಲಾಗುತ್ತದೆ, ಮತ್ತು ಉದ್ದೇಶಿತ ಪ್ರದರ್ಶನ ಅಲ್ಲಿಗೆ ನಿಲ್ಲುತ್ತದೆ. ಅಲ್ಲಿಂದಲೇ ಅನಭಿಜ್ಞ ಶಾಕುಂತಲ ಶುರುವಾಗುತ್ತದೆ. ಕೃತಿಕಾರ ಬದುಕಿರುವವರೆಗೆ ಸ್ವತಂತ್ರವಾಗಿಲ್ಲದೆ ಕೃತಿಕಾರನ ಮನದ ಭಾವಕ್ಕೆ ಮತ್ತು ವಿಚಾರಕ್ಕೆ ಮಾತ್ರವೇ ದನಿಯಾಗಿದ್ದ ಪಾತ್ರಗಳೆರಡು ಕವಿಯ ಮರಣದಿಂದಾಗಿ ಬಿಡುಗಡೆ ಹೊಂದಿದಂತಾಗಿ ಮಾಯಾಕನ್ನಡಿಯಿಂದೆಂಬಂತೆ ಹೊರಬಂದು ವಾಸ್ತವದೊಳಗೆ ಬೆರೆತು ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಲು ಶುರುವಿಡುತ್ತವೆ.

ಅಜ್ಞಾತ ಅಮ್ಮನ ಪುತ್ರನಾದ ಕಾಳಿ ಎಂಬಾತ ಕಾಶ್ಮೀರದ ಹಳ್ಳಿಯ ಹಾಡಿಯ ಜನರ ನಡುವೆ ಬೆಳೆದು ಆ ಬೆಳ್ಳಂಬೆಟ್ಟಗಳ, ತಿಳಿ ಮೋಡಗಳ, ನೀಲಿಯಾಗಸವ, ಹರಿವ ನದಿಯ, ಉಲಿವ ಹಕ್ಕಿಗಳ ಕಾಣ್ ಕಾಣುತ್ತ ಕವಿಯಾದ ಕಥೆ ಅದು.  ಉಸಿರೆಲ್ಲವೂ ಕವಿತನವೇ ಆದ ಅವನ ಅಕ್ಷರದ ಮೋಡಿಗೆ, ಸಿರಿಗಾಯನದ ಕೊರಳಿಗೆ ಮರುಳಾದ ಹೆಣ್ಣುಗಳ ಸುತ್ತ ಕಾಳಿಯ ಬದುಕು ಒಂದೊಂದು ಮಹಾಕಾವ್ಯವಾಗಿ ಮೈದಳೆಯುತ್ತದೆ. ಗಂಧರ್ವ ಕನ್ಯೆಯೆಂಬ ಭ್ರಮೆಯ ಮೋಹಕ್ಕೆ ಬಿದ್ದ ಕಾಳಿ ಅವಳನ್ನು ಭೋಗಿಸುತ್ತಾನೆ, ಆಕೆ ಗರ್ಭವತಿಯಾಗುತ್ತಾಳೆ. ಆದರೆ ಇತ್ತ  ಭೋಜನ ಧಾರಾನಗರಿಯೇ ಬಂದು ಕಾಳಿಯನ್ನು ಕೊಂಡೊಯ್ದು ಕಾಳಿದಾಸನೆಂಬ ಅಭಿಧಾನವನ್ನೀಯುತ್ತದೆ. ಬಹುಶಃ ಅಲ್ಲಿಂದ ಕಾಳಿಯ ಬದುಕಿನ ನೋವು ಶುರುವಾಗುತ್ತದೆ. ಅರಳುವುದಕ್ಕೆ ಒತ್ತಾಯಕ್ಕೆ ಒಳಗಾದ ಮೊಗ್ಗಿನ ರೀತಿಯಲ್ಲಿ ಕಾಳಿದಾಸ ರಾಜತ್ವದ ಬಂಧನದಲ್ಲಿ ಬಳಲುತ್ತಾನೆ. ಕಥೆ ಇಲ್ಲೆಲ್ಲ ಬಲು ನಾಟಕೀಯವಾಗಿ ನಡೆದುಕೊಳ್ಳುತ್ತದೆ. ಅದಲ್ಲದೇ ಕೊರಗಿನ ಕಾವ್ಯವಾದ ಮೇಘದೂತವೂ ಸಿದ್ಧವಾಗುತ್ತದೆ. ತನ್ನ ಪ್ರಿಯೆಯ ಪ್ರೇಮವನ್ನು ಹೊಂದಲಾಗದ ನೋವಿನಲ್ಲಿ ಕಾಳಿದಾಸ ತನ್ನ ಗುಡ್ಡ ಕಾಡುಗಳ ಬೆಳ್ಳಿ ಬೆಟ್ಟಗಳ ನಗರಿಗೆ ಪುನಃ ಬರುತ್ತಾನೆ. ಅಲ್ಲಿ ತನ್ನ ಅಭಿಜ್ಞಾನ ಶಾಕುಂತಲೆಯನ್ನು ವಾಚಿಸುತ್ತಿರುವಾಗಲೇ  ಕೈಬೀಸಿನ ಕತ್ತಿಯ ಇರಿತಕ್ಕೆ ಎದೆಯೊಡ್ಡಿ ಕೊನೆಯಾಗುತ್ತಾನೆ. ಕಾಳಿದಾಸನ ನಾಟಕದಿಂದ ಬಿಡುಗಡೆಗೊಂಡು ಕನ್ನಡಿಯಿಂದ ಹೊರಬಂದಂತೆ ಬಂದ ಬಿಂಬಗಳು ಮತ್ತದೇ ಕನ್ನಡಿಯನ್ನು ಸೇರಿಕೊಂಡು ಬರಿಯ ಬಿಂಬಗಳಾಗುತ್ತವೆ.

ಕಾಳಿದಾಸ ಸಾಯುವ ಕವಿಯಲ್ಲ, ಎಲ್ಲರೆದೆಗಳಲ್ಲಿ ಬೆಳಗುವ ಕವಿ.

ಕತ್ತಲೆಯಾಗುವ ಪೂರ್ಣ ರಂಗಮಂದಿರವನ್ನು ಹರ್ಷದ ಚಪ್ಪಾಳೆ ತುಂಬಿಕೊಳ್ಳುತ್ತದೆ.    

ಕೊಲೆ ಮಾಡಿದ್ದು ಯಾರು ಎನ್ನುವುದನ್ನು, ಮತ್ತು ಅಲ್ಲಿನ ಸಂಘರ್ಷವನ್ನು ನಾನಿಲ್ಲಿ ಬರೆದು ನಾಟಕದ ಕುತೂಹಲವನ್ನು ಕೊಲ್ಲಲಾರೆ.

ಪ್ರೇಮ, ಪ್ರೇಮದ ಒಡಲಿನ ಕೂಸಾಗುವ ದ್ವೇಷ, ಬಯಕೆಯ ಬೆನ್ನು ಬೀಳುವ ಹೆಣ್ಣುಗಳು, ಯಾರಿಗೂ ದೊರೆಯದೆ ಹೋಗುವ ಕಾಳಿ, ಕಾಶ್ಮೀರದ ಹಾಡಿಯ ಜೀವಗಳ ಅಭಿಮಾನ ಇವಿಷ್ಟು ಕಥೆಯ ಜೀವ ಬಿಂದುಗಳಾದರೆ ಸಂಗೀತ, ಬೆಳಕು, ರಂಗ ಸಜ್ಜಿಕೆ, ತಾಂತ್ರಿಕತೆ, ನಟನೆಯ ಔಚಿತ್ಯ, ಭಾಷೆಯ ತುಂಬು ಯೌವನ ಸೌಂದರ್ಯ, ಹಾಡುಗಾರನ ಕಂಠ ಮತ್ತು ಸಾಹಿತ್ಯ ಎಲ್ಲವೂ ಉತ್ತಮ ಕೃತಿಯೊಂದನ್ನು ರೂಪಿಸಿವೆ. ಡಾ. ಕೆ ವೈ ನಾರಾಯಣ ಸ್ವಾಮಿಯವರ ಪ್ರತಿಭೆಗೆ ಸರಿಯಾದ ಸಾಥ್ ಕೊಟ್ಟು ಇದನ್ನೊಂದು ಯಶಸ್ವಿ  ನಾಟಕವನ್ನಾಗಿಸಿದ್ದು  ನಿರ್ದೇಶಕ ಪ್ರಕಾಶ್ ಶೆಟ್ಟಿಯವರು. ಪ್ರತಿಭೆ ಈ ನಾಟಕದಲ್ಲಿ ಅದೆಷ್ಟು ದುಡಿದಿದೆ ಮತ್ತು ಅದೆಂತು ಸಫಲವಾಗಿದೆ ಎನ್ನುವುದು ಅರಿವಾಗುವುದಕ್ಕೆ ನಾಟಕವನ್ನೊಮ್ಮೆ ನೀವೇ ನೋಡಬೇಕು.
ಪ್ರಜ್ಞಾ ನವ ನವೋನ್ಮೇಷಶಾಲಿನೀ ಪ್ರತಿಭಾ ಎನ್ನುವುದು ಎಷ್ಟನೆಯದೋ ಬಾರಿಗೆ ನನಗೂ ಖರೆಯೆನ್ನಿಸಿತು. ಕಾಳಿದಾಸನೆಂಬ ಇತಿಹಾಸಿಕ ಸತ್ಯವನ್ನು ಕಲ್ಪನೆಯ ಮಾಯಾ ಬಲೆಯ ಮಧ್ಯೆ ಮರು-ಹೆಣೆಯುವ ಕೌಶಲಕ್ಕೆ ಮಣಿದೆ. ತುಂಬಾ ಪ್ರಭಾವಿಯಾದ ಬರವಣಿಗೆ. ಭಾಷೆಯಂತೂ ಕನ್ನಡದ ಅಂತಃಸತ್ವವೇ ನವಿರೇಳುವಂತೆ ಮನೋಜ್ಞವಾಗಿದೆ.
ಆನಂದದ ಸಂದಾಯವೇ ಕಲೆಯ ಉನ್ನತ ಕಾಣಿಕೆ. ಆ ಮಾತಿಗೆ ಎರಡಿಲ್ಲ.

ಆದರೆ....

ಯಾಕೆ ಇಷ್ಟು ಒಳ್ಳೆಯ ಪ್ರತಿಭೆ ತನ್ನ ಉನ್ನತಿಯನ್ನು ಯಾವುದೋ ಕೆಲಸಕ್ಕೆ ಬಾರದ ಅಜೆಂಡಾದ ಧ್ವನಿಯಾಗುತ್ತದೆ? ಕೀಳಿನ ಸ್ಪರ್ಷವಿಲ್ಲದ ಶುದ್ಧ ಸಾಹಿತ್ಯವನ್ನು ಬರೆಯುವುದಕ್ಕೆ ಶಕ್ತಿಯಷ್ಟೇ ಅಲ್ಲ, ಮನಸಿರಬೇಕು. ರಸದ ಅನುಭೂತಿ ನನ್ನ ಒಳಗಿನ ಖಾಲಿ ಜೇನುಗೂಡನ್ನೆಲ್ಲ ಆವರಿಸಿ ನಿಂತ ಬಳಿಕವೂ ಅಜೀರ್ಣವಾದ ಕೆಲವು ಅಂಶಗಳಿವೆ ನಾಟಕದಲ್ಲಿ ಅಂತ ನನ್ನ ವಿಮರ್ಶಕ ಮನಸಿನ ಅನಿಸಿಕೆ.

ಕಾಳಿದಾಸನೆಂಬ ಕಾವ್ಯಸಂತಾನದ ಬಗ್ಗೆ ಒಮ್ಮತ ಭಾರತೀಯ ವಿದ್ವಾಂಸರಲ್ಲೂ ಪಾಶ್ಚಾತ್ಯರಲ್ಲೂ ಇಲ್ಲ. ನಮ್ಮ ಸಾಹಿತ್ಯ ಸ್ರೋತದ ಮೂಲಭೂತ ಸಮಸ್ಯೆ ಅವುಗಳ ಕಾಲಘಟ್ಟದ್ದು ಮತ್ತು ಕರ್ತೃಗಳ ಜೀವನದ ಕುರಿತಾದ ಪಕ್ಕಾ ನಿರುತ್ತರಕ್ಕೆ ಸಂಬಂಧಿಸಿದ್ದು. ಕಾಳಿದಾಸನೂ ಇದಕ್ಕೆ ಹೊರತಲ್ಲ. ಕಾಳಿದಾಸನ ಕೆಲವು ಕೃತಿಗಳ ಪೂರ್ಣ ಕರ್ತೃ ಕಾಳಿದಾಸನೇ ಅಲ್ಲ ಎಂಬುದರಿಂದ ಹಿಡಿದು, ಒಂದಕ್ಕಿಂತ ಹೆಚ್ಚು ಕಾಳಿದಾಸರು ಇದ್ದರೆಂಬ ಕಥೆಯವರೆಗೂ ಈ ಪ್ರತಿಭಾನ್ವಿತ ಕವಿಯ ಜೀವನದ್ದು ಬರೀ ಊಹಾಪೋಹಗಳೇ ಹೊರತು ಘನವಾದ ಐತಿಹಾಸಿಕ ಆಧಾರವಿಲ್ಲ. ಭೋಜನ ಧಾರಾನಗರಿಯಲ್ಲಿ ಇದ್ದನೆಂದೂ, (ಇಂದಿನ ಮಧ್ಯಪ್ರದೇಶ), ವಿಕ್ರಮಾದಿತ್ಯನ ಆಸ್ಥಾನ ಕವಿಯೆಂದೂ,  ಕಾಶ್ಮೀರದ ಹಿಮಬೆಟ್ಟದ ಮರುಳಿನ ಕವಿಯಾಗಿದ್ದನೆಂದೂ ಕಾಳಿದಾಸನ ಬಗೆಗಿನ ಸಾಮಾನ್ಯ ಅರಿವು. ಕಾಲವಂತೂ ಕ್ರಿ.ಪೂ ಮತ್ತು ಕ್ರಿಶ ಆರನೇ ಶತಮಾನದವರೆಗೆ ಹೊಯ್ದಾಡುತ್ತದೆ. ಇಂತಿಪ್ಪ ಕಾಳಿದಾಸನ ಬದುಕಿನ ಅಜ್ಞಾತ ಕಥೆಯನ್ನು ’ಅನಭಿಜ್ಞ ಶಾಕುಂತಲ’ ಎಂಬ ಹೆಸರಲ್ಲಿ ಅವನ ಕೃತಿಗಳ ಹಿನ್ನೆಲೆ ಕಲ್ಪಿಸಿ ಹೆಣೆಯುವಾಗ ಪ್ರತಿಭೆ ಅದ್ಭುತವನ್ನೇ ಮೆರೆದಿದೆ.

“ಕಾಡಿನಲ್ಲಿ ಮುನಿಗಳು ರಾಜಕುಮಾರರಿಗೆ ಮತ್ತು ಕಾಡು ಜನರ ಮಕ್ಕಳಿಗೆ ಅಕ್ಷರ ಹೇಳಿಕೊಡುವಾಗ ಕದ್ದು ಅದನ್ನೆಲ್ಲ ಆಲಿಸಿ, ಮರಳಿನಲ್ಲಿ ಅವರು ತಿದ್ದಿ ಬಿಟ್ಟಿ ಹೋದ ಅಕ್ಷರಗಳಮೇಲೆಯೇ ತಿದ್ದಿ ಬರೆದು ಕಾಳಿ ಅಕ್ಷರ ಕಲಿತ” ಅಂತ ನಾಟಕದಲ್ಲಿ ಒಂದು ಕಡೆ ಬರುವ ಮಾತು. ಸರಿ. ಕಾಳಿದಾಸ ಅಕ್ಷರ ಕಲಿತದ್ದು ಹಾಗೇ ಎನ್ನುವುದು ಕವಿಯ ಸ್ವಾತಂತ್ರ್ಯ.

ಮುಂದೊಂದು ಕಡೆಗೆ ಕಾಳಿದಾಸ ತನ್ನ ಅನುರಕ್ತೆಯಲ್ಲಿ ಸಂದರ್ಭವೊಂದರಲ್ಲಿ ಉಲ್ಲೇಖಿಸುತ್ತಾನೆ “ಹಾರ್ವ ಪಿಳ್ಳೆಗಳಿಗೆ ತಿಳಿದರೆ ಕಷ್ಟ”- ಎಂದು. ಇಲ್ಲಿ ರಾಜಸಂತಾನಗಳಿಗೆ ಮತ್ತು ಕಾಡು ಜನರ ಮಕ್ಕಳಿಗೆ ಲಭ್ಯವಿದ್ದ ಅಕ್ಷರವಿದ್ಯೆಯನ್ನು ಕದ್ದು ಕೇಳಿಸಿಕೊಂಡು ಕಾಳಿದಾಸ ಬೆಳೆದ ಎನ್ನುವುದಕ್ಕೂ, ಮುಂದೆ ಅದೇ ಕಾಳಿದಾಸ ಹಾರ್ವಪಿಳ್ಳೆಗಳನ್ನು ತನ್ನ ಪ್ರತಿಗಾಮಿಗಳಂತೆ ಕಂಡುದಕ್ಕೂ ಸಾರಾಪೂರ ಹೊಂದಿಕೆಯಾಗುತ್ತಿಲ್ಲ.    ಎಲ್ಲರಿಗೂ ಲಭ್ಯವಿದ್ದ ವಿದ್ಯೆಯನ್ನು ಕದ್ದು ಕಲಿತನೆಂಬುದೂ, ಕೊನೆಯಲ್ಲಿ ಹಾರ್ವರನ್ನು ಅನಗತ್ಯವಾಗಿ ಎಳೆದು ತಂದುದೂ ಒಂದಕ್ಕೊಂದು ವಿರುದ್ಧವಾದ ಸಂಗತಿಗಳು. ಈ ಚರ್ಚೆ ಬೆಳೆದರೆ ಲೇಖಕ ಯಾವುದೋ ಸಮಜಾಯಿಷಿ ಕೊಟ್ಟು ಇದನ್ನು ಸಮರ್ಥಿಸೊಕೊಳ್ಳಬಹುದು. ಆದರೆ ನಾಟಕದ ರಸ ಚೌಕಟ್ಟಿಗೆ, ರೋಚಕತೆಗೆ, ಇದೊಂದು ಮಾತಿನ ಅಗತ್ಯವೇ ಇರಲಿಲ್ಲ. ಅಗತ್ಯ ಇರಲಿಲ್ಲ ಒಂದೇ ಅಲ್ಲ, ಅದು ರಸೋನ್ನತಿಯ ಎದುರು ಮಾನವ ಮನಸಿನ ಕುಬ್ಜತೆ  ಬಯಲಾದಂತೆ.

ಹೀಗೆ ಇತಿಹಾಸದ ಅನಿಶ್ಚಿತ ಸಂಗತಿಗಳನ್ನು ಕಲೆಯ ಕುಂದಣದಲ್ಲಿ ಕಟ್ಟುವ ಪ್ರತಿಭೆಗೆ ವಾದಗಳ ಹೊಗೆ ಅಂಟದೇ ಇದ್ದರೆ ಚೆನ್ನಿತ್ತು ಎಂಬುದೇ ನನ್ನ ನಿಲುವು. ಇದೇ ಬಗೆಯ ಕಾಲದ ಮತ್ತು ಸಂಗತಿಯ ಅನಿಶ್ಚಿತತೆಯನ್ನು ದುಡಿಸಿಕೊಂಡು ಶಂಕರ ಮೊಕಾಶಿ ಪುಣೇಕರರು ಬರೆದ ಕನ್ನಡದ ಮಹತ್ತರ ಕಾದಂಬರಿ “ಅವಧೇಶ್ವರಿ” ನನ್ನ ನೆನಪಿನಲ್ಲಿ ಮಗ್ಗುಲು ಬದಲಿಸಿತು.  ನಾಟಕದ ಆದಿಯಲ್ಲಿ ಗಣೇಶನ ಸ್ತುತಿಯಿಂದ ಆರಂಭಿಸುವ ವಾಡಿಕೆಯನ್ನು ಮುರಿದುದಕ್ಕೇ ಪ್ರತ್ಯಕ್ಷವಾಗುವ ಗಣಪನನ್ನು ಲಘುವಾಗಿ ಚಿತ್ರಿಸಿದರಲ್ಲ, ಅದೊಂದು ವಿಡಂಬನೆಯಂತಿತ್ತಲ್ಲ ಎಂದು ಸಾಂಪ್ರದಾಯಿಕ ಮನಸುಗಳಿಗೆ ಅನ್ನಿಸಲೂ ಬಹುದು, ಆದರೆ ಅಷ್ಟು ಮಾತ್ರದ ವಿಡಂಬನೆಯನ್ನು ಕಲೆಯ ಭಾಗವಾಗಿಯೇ ಸ್ವೀಕರಿಸುವ ಸಾಂಸ್ಕೃತಿಕ ಹಿರಿತನ ಈ ಪರಂಪರೆಗೆ ಇದೆ.
ಅನಭಿಜ್ಞ ಶಾಕುಂತಲ ಅಚ್ಚಾದ ಒಂದು ನೆನಪಿನಂತೆ ಉಳಿದುಕೊಳ್ಳುತ್ತದೆ ನನ್ನಲ್ಲಿ.