Thursday, December 10, 2015

ಬೆಳಕಿನ ಹಾಡು  (ಕಾಂತಿಕಾವ್ಯಮ್)
==========
===========

ಒಂದೊಮ್ಮೆ ಮಂಜುನಾಥ ಕೊಳ್ಳೆಗಾಲರೊಡನೆ  ಮಾತಾಡುತ್ತ ಈ ಅನುವಾದದ ವಿಷಯ ಬಂದಿತ್ತು. ಮಂಜುನಾಥ ಕೊಳ್ಳೆಗಾಲರು ಅಂತರ್ಜಾಲದಲ್ಲಿ ನನಗೆ 
ದೊರೆತ ಹಿರಿಯರು, ವಿದ್ವನ್ಮಿತ್ರರು. ಅವರು ತಮ್ಮ ’ಬೆಳಕಿನ ಹಾಡು’ ಕವಿತೆಯನ್ನು ಸಂಸ್ಕೃತದಲ್ಲಿ ನೋಡುವ ಅಭಿಲಾಷೆಯಿದೆ ಅಂದಿದ್ದರು. ಅವರ ಕವಿತೆಯ ಅನುವಾದವನ್ನು ಯಥಾಮತಿ ಮಾಡಿದ್ದೇನೆ. ಇದೊಂದು ಸಂವಾದಿ ಕಾವ್ಯವೇ ಹೊರತು ಯಥಾವತ್ ಅನುವಾದ ಅಲ್ಲ.
ಅವರ ಹಾಡಿನ ಯಥಾವದ್ರೂಪವನ್ನೂ ಮತ್ತು ಅದನ್ನನುಸರಿಸಿ ನಾನು ಮಾಡಿದ ಅನುವಾದವನ್ನೂ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 

ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ತತಃ ಸುತಾರಾಗಣಮುಕ್ತಭಾಭಿಃ ಶಕುಂತಿಶಬ್ದಾಯಿತಸುಪ್ರಭಾತೇ
ತಮೋ ವಿನಿಘ್ನನ್ನುದತಿಷ್ಠದೇಷಃ ಪ್ರಭಾವಲೀಪೂರ್ಣಸುದೀಪರಾಜಃ ||೧||

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಸ್ನಾನಾಲಯೇ ತತ್ರ ಜಲಂ ವಿದುನ್ವತ್ ಕ್ವಥನ್ನದತ್ತಚ್ಚ ರವಂ ತನೋತಿ
ಹಸ್ತಸ್ಥಿತೋಷ್ಣೀಕೃತತೈಲಪಾತ್ರಾ ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್ ||೨||

ಚಲತ್ಕರಾಭ್ಯಾಮಭಿಲೇಪಯಂತೀ ತೈಲೇನ ಕಾಯಂ ಚ ಶಿರೋ ಮುಖಂ ಮೇ
ಮಾಽಕಾರಯತ್ ಸಾ ಸುಖಿತಂ ಪ್ರಸನ್ನಂ ಹಿತೋಷ್ಣಸಂವೇದನದಾನಶೀಲಾ ||೩||

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!
ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ತಪಜ್ಜಲಂ ಜೀವಮಿಮಂ ಹಿನಸ್ತಿ ಕ್ರಂದನ್ನಹೋ ಸೋಢುಮಥಾಸ್ತಿ ಕೋ ಹಿ
ಫೇನಾವಲಿಪ್ತೇ ನಯನೇ ದ್ರವೇತೇ ಮುಕ್ತಿಸ್ಸಮಾಯಾಚ್ಚ ಕಥಂಚಿದಂತೇ || ೪ ||

ವಾಸೋ ನವಂ ತತ್ಸುಮನಂ ನವೀನಂ ಗಂಧೋ ನವೋ ನೂತನಮಸ್ತಿ ತೇಜಃ
ನಮನ್ತತೋನಾಥಮನಾಥಪಾಲಂ ಲೀಲಾಸ್ಫುಟತ್-ಸ್ಫೋಟಕಮಾದದಾತಿ || ೫ ||

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಉಚ್ಚೈಃ ಶಿಶುಃ ಕ್ರಂದತಿ ಶಬ್ದಭೀತಃ ಸುಪುತ್ರಕೇ ಫೋಟರತೇ ಬಹಿಷ್ಠೇ
ಅಸ್ಯಾಯಿದಂ ಸುರ್ಸುರುಶಬ್ದಕುಂಡಂ ಕಾಲಃ ಸಮೇತಃ ಪರಿಪಾತುಮತ್ತುಮ್ ||೭ ||

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಆಯಾಸಾಪಗಮಪ್ರಸಿದ್ಧವಿಫುಲಾನನ್ನಾದಿಕಾನಾದರಾತ್  
ಪಲ್ಯಾದೀನಥಶಷ್ಕುಲೀಪರಿಯುತಂ ತದ್ರಾಜತಂ ರಾಯತಮ್
ಲಾಲಾಗ್ರಂಥಿವಿಭೇದಪೇಶಲಪುಲೀಯೋಗಾರಕೋಸಂಬರೀಮ್-
ಓಬ್ಬಟ್ಟಾದಿಸುರಾಜಸಗ್ಧಿಸಮಗಾನ್ ಭುಕ್ತ್ವಾ ರಮಸ್ವಾಧುನಾ ||೮||

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ದಿಗಂತವಿಶ್ರಾಂತರವಿಂ ಕೃತಶ್ರಮಮ್  ದಿನಾಂತಕಾಲೇ ಕಿರಣಾ ವ್ಯಭೂಷಯನ್
ತದಂಗತೋ ತೋಯಕಣಾ ಪತಂತ್ಯಮೀ ಸ್ವವಾಸಸಾ ರಾತ್ರಿರಿಳಾಮವಾರಯತ್  ||೯ ||

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಅಹೋ ವಿಭಾಭಾಸಿತಭೂರಭೂದಿಯಂ ನಭೋಭವದ್ವರ್ಣಚಯಾನುಲೇಪಿತಮ್
ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ ||೧೦ ||

ಸಿತಶ್ರಿಯೋ ನಿಷ್ಕ್ರಮಿತಾ ಕ್ರಮಾದಿಮೇ ಸಿತೇತರಾ ಲೋಹಿತಪೀತನೀಲಕಾಃ
ಸ ಕಲ್ಪವೃಕ್ಷೋ ಕಿಮು ಪುಷ್ಪಿತಃ ಸ್ವತೋ ತಮಸ್ಸುರಾರಾಜಿತರಾಗರಂಜನಾತ್ ||೧೧||  

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್
ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

ಮಂದಂಮಂದಂ ನುದತಿ ಪವನೇ ಪರ್ವಣಿ ಕ್ಲಾಂತಿಮಾಪ್ತೇ
ಖಾದಂಖಾದಂ ನಿಶಿತದುಚಿತಂ ಭಕ್ಷ್ಯಭೋಜ್ಯಂಸುಭೋಜ್ಯಂ
ತತ್ರಶ್ರಾಂತ್ಯಾ ಮುದಿತಮನಸಾ ತಲ್ಪಮಾರುಹ್ಯ ಸಾಕ್ಷಾತ್
ಭದ್ರಾಂನಿದ್ರಾಂ ಪಿಹಿತನಯನೋ ಪ್ರೀತಿಭಾರಃ ಸಮೇತಿ ||೧೨||

ಇತಿ ದೀಪಾವಲೀನಾಮಾ ಶಾಂತಿಮಾಪ್ನೋತಿ ಸೂತ್ಸವಃ

ವಿಕಿರನ್ಕಾಂತಿಮಾಮೋದಂ ಲೋಕೇ ಸರ್ವತ್ರ ಭಾಸತೇ || ೧೩ ||

Monday, November 23, 2015

ಅವಳು ಬರಿ ನದಿಯಲ್ಲ ಕಣಾ…
ನನಗೆ ಪರಿಚಯವಾಗುವಾಗ ಗಂಗೆ ಸಾಕಷ್ಟು ಮಲಿನವಾಗಿದ್ದಳು. ನಾನು ಓದಿದ ಪಠ್ಯಗಳಲ್ಲಿ, ವೃತ್ತಪತ್ರಿಕೆಗಳಲ್ಲಿ, ವಿಜ್ಞಾನದ ಬರಹಗಳಲ್ಲಿ, ಸಾಹಿತ್ಯದಲ್ಲಿ ಮತ್ತು ಆಗಾಗ ಕಂಡ ಟಿ.ವಿ. ವಾಹಿನಿಗಳ ವರದಿಗಳಲ್ಲಿ ಗಂಗೆ ಸಾಧ್ಯವಾದಷ್ಟೂ ಮಲಿನವಾಗಿದ್ದಳು. ಎಷ್ಟೆಂದರೆ, ಆಕೆಯ ಶುದ್ಧಿಯೊಂದು ಬರಿಯ ಪುರಾಣದ ಕಥೆ ಮಾತ್ರವೇ ಆಗಿರುವಷ್ಟು; ವರ್ತಮಾನದಲ್ಲಿ ಗಂಗೆಯೆಂದರೆ ಬರಿಯ ಕೊಳೆಯ ಹರಿವು ಮಾತ್ರವೇ ಅನ್ನಿಸುವಷ್ಟು. ’ಬತ್ತಲಾರದ ಗಂಗೆಗೆಂಥ ಕುತ್ತಿದು ನೋಡು…’ ಅಂತ ಅಡಿಗರು ಬರೆದಿದ್ದನ್ನೋದುವಾಗಲೂ ತೀರಾ ನೋವಾಗಿತ್ತು. ಬದುಕಲೂ ಆಗದ ಸಾಯಲೂ ಆಗದ ಕುಷ್ಠರೋಗಿ ಚಿರಂಜೀವಿ ಅಶ್ವತ್ಥಾಮ ಆ ಹೊತ್ತಿಗೆ ನೆನಪಾಗಿದ್ದ; ಗಂಗೆ ಅವನದೇ ಸ್ಥಿತಿಯಲ್ಲಿದ್ದಂತೆ ಪರಿಭಾವಿಸಿದ್ದೆ. ಆಚರಣೆಗಳ ಹೆಸರಲ್ಲಿ ಗಂಗೆಯ ಮೇಲೆ ನಡೆಯುವ ಅತ್ಯಾಚಾರವನ್ನೂ, ಕಾರ್ಖಾನೆಗಳು ಮತ್ತು ನಗರದ ಕೊಳಚೆಯನ್ನೆಲ್ಲ ಅವಳುಡಿಗೇ ತುಂಬುವ ವಿಕೃತಿಯನ್ನೂ ಓದುವಾಗ, ನೋಡುವಾಗ, ಮಮ್ಮಲ ಮರುಗಿದ್ದೆ. ಲಂಡನ್ನಿನ ಥೇಮ್ಸ್ ನದಿಯ ಶುದ್ಧಿಯ ಎದುರು ಗಂಗೆಯದು ಮಸುಕು ಮಸುಕಾದ ರೂಪ ಅಂತ ಯಾರೋ ಬರೆದದ್ದು ಓದುವಾಗ ನೊಂದಿದ್ದೆ.

ಸರಿ, ಗಂಗೆಯ ಪುಣ್ಯತಮ ರೂಪವೊಂದು ಇತಿಹಾಸವೇ ಆಗಿ, ಅವಳ ವರ್ತಮಾನವೆಲ್ಲ ಆಪಾದಮಸ್ತಕ ಕೊಳೆಯೇ ತುಂಬಿದ್ದೆನ್ನುವ ಸಂಗತಿಯನ್ನೇ ಅರಗಿಸಿಕೊಂಡೆ. ಕಾಶಿ ಯಾತ್ರೆ ಮುಗಿಸಿ ಬಂದವರು ಗಂಗಾಸಮಾರಾಧನೆ ಅನ್ನುವ ಕಾರ್ಯಕ್ರಮ ಮಾಡಿ, ಮನೆಗೆ ಬಂದ ಅತಿಥಿಗಳಿಗೆಲ್ಲ ಗಂಗೆಯ ನೀರಿನ ಸೀಲ್ಡ್ ಗಿಂಡಿಯನ್ನು ಕೊಟ್ಟಾಗಲೂ ಅದರೊಳಗೆ ತುಂಬಿರಬಹುದಾದ ಗಂಗೆಯ ಬಗ್ಗೆ ವಿಶೇಷ ಭಾವನೆ ಏನೂ ನನಗೆ ಬರಲಿಲ್ಲ. ದೇವರ ಮನೆಯಲ್ಲಿಟ್ಟು ದಿನಾ ಅದನ್ನು ಪೂಜಿಸುವ ಉದ್ದೇಶವೂ ನನಗೆ ಗೊತ್ತಿರಲಿಲ್ಲ. ಅಷ್ಟೆಲ್ಲ ಕೊಳಚೆಯಾದ ಗಂಗೆಯ ನೀರನ್ನು ಅದು ಗಂಗೆಯ ನೀರೆನ್ನುವ ಕಾರಣಕ್ಕೆ ಕಣ್ಣಿಗೊತ್ತಿಕೊಳ್ಳಬೇಕೆ, ತಲೆಮೇಲೆ ಪ್ರೋಕ್ಷಿಸಿಕೊಳ್ಳಬೇಕೆ ಎನ್ನುವುದು ನನ್ನ ತರ್ಕ. ಅಶುದ್ಧಪ್ರವಾಹವಾದ ಗಂಗೆಯಲ್ಲೇ ಸಾವಿರಾರು ಭಕ್ತರು ಪ್ರತಿದಿನವೂ ಸ್ನಾನ ಮಾಡುವುದನ್ನು ಕೇಳಿದಾಗ ಅಚ್ಚರಿಯ ಜೊತೆಯಲ್ಲಿ ಪ್ರಶ್ನೆಗಳೇಳುತ್ತಿದ್ದವು. ಹಾಗಂತ, ಹತ್ತಾರುವರ್ಷಗಳಿಂದ ಗಾಜಿನ ಬಾಟಲಿಯಲ್ಲಿಟ್ಟರೂ ಸ್ಫಟಿಕದಂತೇ ಶುದ್ಧವಾಗಿದ್ದ ಗಂಗಾಜಲವನ್ನೂ ನಾನು ಕಂಡಿದ್ದೇನೆ. ಆದರೆ ಅದು ಕಾಶಿಯ ಗಂಗೆಯಲ್ಲ, ಗಂಗೋತ್ರಿಯ ಗಂಗೆ.

ಹೀಗಿರಲು, ನಾಲ್ಕು ವರ್ಷಗಳ ಹಿಂದೆ ಒಮ್ಮೆ ಕಲ್ಕತ್ತೆಯ ಹೌರಾ ಸೇತುವೆಯ ಬುಡದಲ್ಲಿ ನಿಂತಿದ್ದೆ, ಎದುರಿಗೆ ಗಂಗೆಯೇ ಹೂಗ್ಲಿ ಅನ್ನುವ ಹೆಸರಿನಲ್ಲಿ ಹರಿಯುತ್ತಿದ್ದಳು. ಕಪ್ಪನೆಯ ಬಣ್ಣಕ್ಕೆ ತಿರುಗಿದ ಹೂಗ್ಲಿಯ ನೀರನ್ನೇ ನೋಡುತ್ತ ನಾನು ಆ ತೀರದಲ್ಲಿ ಅರ್ಧ ಗಂಟೆ ಇದ್ದು ಬಂದಿದ್ದೇನಾದರೂ ಆ ನೀರನ್ನು ಮುಟ್ಟುವ ಮನಸಾಗಿರಲಿಲ್ಲ. ಜನ ಅಲ್ಲೇ ಸ್ನಾನ ಮಾಡುತ್ತಿದ್ದರು, ಅಲ್ಲೇ ಬಟ್ಟೆ ತೊಳೆಯುತಿದ್ದರು, ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಆ ನೀರನ್ನು ತುಂಬಿಸಿ ಎಲ್ಲಿಗೋ ಒಯ್ಯುತ್ತಿದ್ದರು. ಜನ ಅಷ್ಟೆಲ್ಲ ಭಾವನೆಗಳನ್ನು ಗಂಗೆಯಲ್ಲಿ ಆಚರಿಸಿಕೊಳ್ಳುತ್ತಿದ್ದರೂ ನಾನು ಅದೇನನ್ನೂ ಮಾಡದೆ ’ನೀರು ಕೊಳಚೆಯಾಗಿದೆ’ ಅಂದುಕೊಂಡೇ ನಿಂತೆನಲ್ಲದೆ, ಕೊನೆಗೂ ಅವಳನ್ನು ಸೋಕಿಸಿಕೊಳ್ಳದೆ ಮರಳಿ ಬಂದೆ.
ಅದೇ ವರ್ಷ ಅಸ್ಸಾಮಿನ ಗೌಹಾತಿಯಲ್ಲಿ ಸಮುದ್ರವೋ ಆನ್ನುವಂತೆ ವಿಸ್ತಾರ ವಿಸ್ತಾರವಾಗಿ ಹರವಿಕೊಂಡಿದ್ದ, ಅಂಥಾ ಬೇಸಗೆಯಲ್ಲೂ ನಮ್ಮೂರಿನ ಮಳೆಗಾಲದ ನದಿಯಂತೆ ಕೆಂಪಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಯ ಎದುರಿಗೂ ನಿಂತಿದ್ದೆ. ಆಗಲೂ ಹೀಗೆ, ನಾನು ನೀರು ಸೋಕಿಸಿಕೊಳ್ಳದೆ ಬಂದೆ. ಅದು ಗಂಗೆಯಾಗಲಿ, ತುಂಗೆಯಾಗಲಿ, ಬ್ರಹ್ಮಪುತ್ರೆಯಾಗಲಿ, ಪರಿಶುದ್ಧವಾಗಿಲ್ಲವೆಂದಮೇಲೆ ಮತ್ತೇಕೆ ಅದರಲ್ಲಿ ಸ್ನಾನ ಪಾನ ಎಲ್ಲ ಅನ್ನುವುದು ಅವತ್ತಿಗೆ ನನಗಿದ್ದ ತರ್ಕ.

ಇವತ್ತಿಗೆ ಚಿಂತನೆ ಮಾಡುವಾಗ ಅನ್ನಿಸುತ್ತದೆ, ನಾನು ಗಂಗೆಯನ್ನೂ, ಬ್ರಹ್ಮಪುತ್ರೆಯನ್ನೂ ಸೋಕಿಸೊಕೊಳ್ಳಬೇಕಿತ್ತು ಅಂತ. ಅವೆರಡೂ ಶುದ್ಧವಿಲ್ಲ ಎಂಬ ತರ್ಕ ಎದುರು ಮಾಡಿ ಅವನ್ನು ಸೋಕಿಸಿಕೊಳ್ಳದೆ ಬಂದುದು ಬರೀ ಪಾರ್ಶ್ವಿಕ ಚಿಂತನೆಯ ಪರಿಣಾಮ ಎಂದು ಇವತ್ತಿಗೆ ಅನ್ನಿಸುತ್ತಿದೆ. ಯಾಕೆಂದರೆ ಗಂಗೆಯೆಂಬುದು ಬರಿಯ ನೀರ ಹರಿವಿನ ಮೊತ್ತವಲ್ಲ, ಅವಳ ಶುದ್ಧಿ ಅಶುದ್ಧಿ ಹೊರತೋರಿಕೆಗೆ ನಿಲುಕುವಂಥದಲ್ಲ. ಈ ದೇಶದ ಪ್ರತಿಯೊಬ್ಬ ಶ್ರದ್ಧಾಳು ತಾನು ತನ್ನ ಬದುಕಿನಲ್ಲೊಮ್ಮೆಯಾದರೂ ಗಂಗೆಯಲ್ಲಿ ಸ್ನಾನ ಮಾಡಬೇಕೆಂದು ಪ್ರತಿದಿನವೂ ಸಂಕಲ್ಪ ಮಾಡುತ್ತಾನೆ. ಪ್ರಾಣ ತೊರೆವ ಹೊತ್ತಿನಲ್ಲಿ ಒಂದಾದರೂ ಬಿಂದು ಗಂಗೆಯ ನೀರಿಗಾಗಿ ಪ್ರಾರ್ಥಿಸುತ್ತಾನೆ. ಯಾಕೆ? ಅವಳಲ್ಲೇನಿದೆ? ಆಕೆ ಅಲೌಕಿಕಳು ಯಾಕೆ? ಬರಿಯ ನೀರಾಗಿದ್ದರೆ ಗಂಗೆ ಯಾವತ್ತೋ ಈ ದೇಶದ ನೆನಪಿನಲ್ಲಿ ಬರಿಯ ಒಂದು ನದಿಯಷ್ಟೇ ಆಗಿರಬೇಕಿತ್ತು, ಉಳಿದ ನದಿಗಳಂತೆ. ಆದರೆ, ಅವಳನ್ನು ಅದಕ್ಕಿಂತ ಹೆಚ್ಚಿನದೆಂದೇ ಶ್ರದ್ಧಾವಂತ ಮನಸು ಪರಿಭಾವಿಸುತ್ತದೆ.

ಅವತ್ತು ಅವಳನ್ನು ಸೋಕದಂತೆ ತಡೆದ ನನ್ನ ಮನಃಪ್ರವೃತ್ತಿಯನ್ನೇ ಮತ್ತೂ ವಿಶ್ಲೇಷಿಸಿಕೊಂಡಾಗ ಕೊನೆಗೆ ಮನಸಿಗೆ ಬಂದದ್ದು ಶ್ರದ್ಧೆ ಎನ್ನುವುದು. ಶ್ರದ್ಧೆಯ ಕೊರತೆ, ಮತ್ತು ವಿಚಾರಗಳ ಮೇಲೆ ಅತಿ ಬದ್ಧತೆಯೇ ನನ್ನನು ತಡೆದಿದ್ದು. ಬದುಕಿನಲ್ಲಿ ವಿಚಾರದ ಜಾಗ ವಿಚಾರಕ್ಕೂ ಶ್ರದ್ಧೆಯ ಜಾಗ ಶ್ರದ್ಧೆಗೂ ಇರಬೇಕಲ್ಲವೇ? ವಿಚಾರವು ಶ್ರದ್ಧೆಯನ್ನು ಕಲಕುವ ಕೆಲಸ ಮಾಡಬಾರದು.

’ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ’ ಅನ್ನುವ ಸಾಲುಗಳ ಮೂಲಕ ಅಂಥದೇ ಶ್ರದ್ಧೆಯನ್ನು ಕವಿ ಕುವೆಂಪು ಬಿಂಬಿಸುತ್ತಾರೆ. ಬದುಕಿನಲ್ಲಿ ಬೆರಗು ಇರಬೇಕನ್ನುವವರೆಲ್ಲ ಶ್ರದ್ಧಾಳುಗಳಾಗಿರಬೇಕು, ಅದರ ಹೊರತಾಗಿ ಬದುಕಿನಲ್ಲಿ ಬೆರಗು ಇಲ್ಲ. ಬೆರಗಿಲ್ಲದ ಬದುಕಿನಲ್ಲಿ ಸೌಂದರ್ಯ ಇಲ್ಲ. ಸೂರ್ಯೋದಯವನ್ನು ರವಿಯ ಕೃಪೆಯಂತೆ ಕಾಣುವುದಕ್ಕೆ ಶ್ರದ್ಧೆ ಬೇಕು, ಗಂಗೆಯನ್ನು ದೇವಗಂಗೆಯಾಗಿ ಸುರಿದುಕೊಳ್ಳುವುದಕ್ಕೆ ಶ್ರದ್ಧೆ ಬೇಕು, ಹೂವನ್ನು ಮುಡಿಗೇರಿಸಿಕೊಳ್ಳಲೂ ಶ್ರದ್ಧೆಯೇ ಬೇಕು. ಹಾಗೆ ನೋಡಿದರೆ ಬದುಕಿನ ಎಲ್ಲವೂ ಶ್ರದ್ಧೆಯೇ ಆಗಿದೆ. ಅದಕ್ಕೇ, ಋಗ್ವೇದವಂತೂ ’ಶ್ರದ್ಧಾ ಸೂಕ್ತ’ ಅನ್ನುವ ಹೆಸರಲ್ಲಿ ಸೂಕ್ತವೊಂದನ್ನು ಮುಂದಿಡುತ್ತದೆ. ಬದುಕಿನ ಎಲ್ಲವೂ ಶ್ರದ್ಧೆಯೇ ಅನ್ನುವುದು ಅದರ ಅಭಿಮತ. ಶ್ರೀಕೃಷ್ಣನಂತೂ ’ಶ್ರದ್ಧಾವಾನ್ ಲಭತೇ ಜ್ಞಾನಂ’ ಅನ್ನುತ್ತಾನೆ. ಜ್ಞಾನವೇನಿದ್ದರೂ ಶ್ರದ್ಧಾವಂತನಿಗೆ ಒಲಿಯುತ್ತದಂತೆ.  

ಶ್ರದ್ಧೆಯೊಂದಿಲ್ಲದಿದ್ದರೆ ವಿಜ್ಞಾನಿಯೂ ವಿಜ್ಞಾನಿಯಲ್ಲ. ಕಠೋಪನಿಷತ್ತಿನಲ್ಲಿ ನಚಿಕೇತ ಕೇಳುವ ಪ್ರಶ್ನೆಗೆ ಯಮ ಉತ್ತರಿಸುವ ಮಾತಲ್ಲೂ ಇದೇ ವ್ಯಕ್ತವಾಗಿದೆ. ’ಅಸ್ತೀತ್ಯೇವೋಪಲಬ್ಧವ್ಯಃ’ (ಇದೆಯೆಂದು ತಿಳಿದೇ ಪಡೆಯಬೇಕಾದ್ದು ಅದು). ಹಾಗೆ ’ಇದೆ’ ಅನ್ನುವ ದೃಢತೆ ಇದೆಯಲ್ಲ, ಅದೇ ಶ್ರದ್ಧೆ. ತಾನು ನಂಬುವ ಏನೋ ಒಂದು ಇದೆ ಅಂದುಕೊಂಡು ಹೈಪೂಥೀಸಿಸ್ ಕಟ್ಟಿಕೊಳ್ಳದೆ ವಿಜ್ಞಾನಿಯೂ ಮುಂಬರಿಯಲಾರ. ಕವಿ, ವಿಜ್ಞಾನಿ, ಸಾಮಾನ್ಯ ಮಾನವ- ಎಲ್ಲರೂ ಶ್ರದ್ಧಾಳುಗಳೇ.

ಯಾವುದರಲ್ಲೂ ಶ್ರದ್ಧೆಯಿಲ್ಲದವರು ಹುಸಿ-ವಿಚಾರವಾದಿಗಳು. ಎಲ್ಲವೂ ಭಂಜನೆಗೆ ಒಳಗಾಗಬೇಕಾದ ಸಂಗತಿಗಳೇ ಅನ್ನುವುದು ಅವರ ಅಭಿಮತ. ಸಮಾಜ, ಅಲ್ಲಿಯ ವ್ಯವಸ್ಥೆ, ಸರಕಾರ, ಶಿಕ್ಷಣ, ರಾಷ್ಟ್ರವಾದ- ಎಲ್ಲವೂ ಸರಿಯಿಲ್ಲ ಎಂದು ವಾದ ಮಂಡಿಸುವ ಅವರು, ಕಣ್ಣೀರು ಮಿಡಿಯುವ ಅವರು, ಪರ್ಯಾಯವಾದ ಒಂದನ್ನು ಚಿಂತಿಸಲೂ, ಕಟ್ಟಲೂ ಆಗದ ಹೆಳವರು.

ಇರಲಿ, ನಾನು ಗಂಗೆಯ ತೀರಕ್ಕೆ ಇನ್ನೊಮ್ಮೆ ಹೋಗಬೇಕು, ಅಲ್ಲಿ ಸ್ನಾನಿಸಬೇಕು ಅಂದುಕೊಂಡಿದ್ದೇನೆ. ಅಂದಹಾಗೆ ನಾನು ಇಷ್ಟೆಲ್ಲ ಬರೆದಿದ್ದು ಇವತ್ತಿನ ವಿಜಯವಾಣಿಯಲ್ಲಿನ ವರದಿಯೊಂದನ್ನೋದಿದ ಬಳಿಕ. ಕೇಂದ್ರ ಸರಕಾರ ಗಂಗೆಯನ್ನು ಶುದ್ಧೀಕರಿಸಲು ಮಾತ್ರವಲ್ಲ, ಅದರ ಅಂತರಾಳವನ್ನು ಅರಿಯಲು ಹೊರಟಿದೆಯಂತೆ. ಅದರ ವಿವರಣೆ ಇಲ್ಲಿದೆ, ಓದಿ.

http://vijayavani.net/?p=1694687

ಗಂಗೆಯ ಬಗ್ಗೆ ಬಿಬಿಸಿ ತುಂಬಾ ಮುತುವರ್ಜಿಯಿಂದ ಡಾಕ್ಯುಮೆಂಟರಿ ಮಾಡಿದೆ. ಕೇಳುತ್ತ ಕೇಳುತ್ತ, ಆ ದೃಶ್ಯ ನೋಡುತ್ತ ಧ್ಯಾನಸ್ಥ ಸ್ಥಿತಿಗೆ ನಮ್ಮನ್ನೊಯ್ಯಬಲ್ಲುದಾದ ಚಿತ್ರಣ ಅದು. ಅದರ ಲಿಂಕ್ ಇಲ್ಲಿದೆ. 

https://www.youtube.com/watch?v=UM9aPy7H534