Thursday, August 10, 2017

ತೃತೀಯೆಯ ಕಥೆ.


ಈಕೆಯದು ಉಪಕಾರದ ಸ್ವಭಾವ. ಕಾರ್ಯವೊಂದಕ್ಕೆ ಉಪಕರಣವಾಗಿ ಒದಗುವ ಇವಳಿಗೆ ಇಂಗ್ಲೀಷ್ ಭಾಷೆಯಲ್ಲಂತೂ  instrumental case  ಅಂತಲೇ ಸಾಕ್ಷಾತ್ತಾಗಿ ಕರೆಯುತ್ತಾರೆ. ಸಂಸ್ಕೃತ ಮತ್ತು ಕನ್ನಡದಲ್ಲಿ ಹಾಗೆಂದು ವಾಚ್ಯವಾಗಿ ಕರೆಯದಿದ್ದಾಗಲೂ ತೃತೀಯೆಯ ಮುಖ್ಯ ಕಾರ್ಯವು ಕರಣವನ್ನು ಅಂದರೆ ಸಹಾಯಕವಾಗಿ ಬಳಕೆಯಾಗುವ ಸಂಗತಿಯನ್ನು ಹೇಳುವುದೇ ಆಗಿದೆ. ಸಣ್ಣ ಉದಾಹರಣೆಗಳನ್ನು ನೋಡುವುದಾದರೆ-
೧. ರಾಮನು ಕಲ್ಲುಗಳಿಂದ ಸೇತುವೆಯನ್ನು ಕಟ್ಟಿದನು.
೨. ಸಿದ್ಧರಾಮನು ಕೈಯಿಂದ ಪಾಪವಾಚರಿಸಿದನು.     
೩. ರಾಮಃ ಬಾಣೇನ ರಾವಣಂ ಜಘಾನ

ಈ ವಾಕ್ಯಗಳಲ್ಲಿ ಕಲ್ಲುಗಳು ಸೇತುನಿರ್ಮಾಣದ ಕ್ರಿಯೆಯಲ್ಲೂ, ಕೈಗಳು ಪಾಪಾಚರಣೆಯಲ್ಲೂ, ಬಾಣವು ರಾವಣ ವಧೆಯ ಕ್ರಿಯೆಯಲ್ಲೂ ಉಪಕರಣವಾಗಿ ಬಳಕೆಯಾಗಿವೆ, ಮತ್ತು ಅಲ್ಲೆಲ್ಲ ಉಪಕರಣಗಳಿಗೆ ಮೂರನೆಯ ವಿಭಕ್ತಿಯ ಪ್ರತ್ಯಯ ಅಂಟಿಕೊಂಡಿದೆ. ಇದು ಸಾಮಾನ್ಯವಾಗಿ ತೃತೀಯೆಯು ಕಂಡುಬರುವ ರೀತಿ. ಇದಲ್ಲದೆ ಪ್ರಥಮೆಯನ್ನು ಬಿಟ್ಟು ಮತ್ತ್ಯಾವ ವಿಭಕ್ತಿಗೂ ಇಲ್ಲದ ಭಾಗ್ಯವೊಂದು ತೃತೀಯೆಗೆ ಇದೆ. ವಾಕ್ಯವೊಂದರಲ್ಲಿ ಕರ್ತೃ ಸ್ಥಾನವನ್ನು ಅಲಂಕರಿಸುವ ಭಾಗ್ಯ ಅದು. ಕರ್ತೃ ಸ್ಥಾನವನ್ನೇಕೆ ನಾನು ಭಾಗ್ಯವೆಂದು ಬಗೆಯುತ್ತೇನೆಂದರೆ ಅದು ಸ್ವತಂತ್ರವಾದ್ದು ಎಂಬ ಕಾರಣಕ್ಕೆ. ಅದಿಲ್ಲದೆ ವಾಕ್ಯವೇ ಇಲ್ಲ. ಯಾವ ವಾಕ್ಯವೇ ಆಗಲಿ, ಒಂದು ಕ್ರಿಯಾಪದ ಮತ್ತಿನ್ನೊಂದು  ಕ್ರಿಯಾಶ್ರಯವಾದ ನಾಮಪದ (ಹೀಗೆ ಆಶ್ರಯವಾಗುವಿಕೆಯೇ ಸ್ವಾತಂತ್ರ್ಯವೆಂದು ವೈಯಾಕರಣರ ಅಭಿಪ್ರಾಯ. ’ಸ್ವತಂತ್ರಃ ಕರ್ತಾ’ ಎಂಬ ಪಾಣಿನಿ ಸೂತ್ರದಲ್ಲಿನ ಸ್ವಾತಂತ್ರ್ಯಕ್ಕೆ ಈ ಅರ್ಥವನ್ನೇ ಊರ್ಜಿತಗೊಳಿಸಲಾಗಿದೆ) ಇವೆರಡಿಲ್ಲದೇ ಪೂರ್ಣಾರ್ಥವನ್ನು ಹೊಮ್ಮಿಸಲಾರದು. ಕ್ರಿಯಾಪದದ ಜೊತೆಗೆ ಪ್ರಥಮೆ ಮತ್ತು ತೃತೀಯೆಯನ್ನು ಬಿಟ್ಟು ಉಳಿದ ಯಾವುದೇ ವಿಭಕ್ತಿ ಬಳಸಿದರೂ ವಾಕ್ಯ ಉದ್ದವಾಗುತ್ತ ಹೋಗುತ್ತದೆಯೇ ಹೊರತು ಕ್ರಿಯಾಪದದ ಆಶಯಕ್ಕೆ ಒಂದು ನಿಲುಗಡೆ ಎಂಬುದೇ ಇಲ್ಲದಂತಾಗಿ ಅರ್ಥವು ಹಿಡಿತಕ್ಕೆ ಸಿಗದೇ ಹೋಗುತ್ತದೆ. ಉದಾ ಪ್ರಥಮೆಯಿಲ್ಲದ, ಅಂದರೆ ಕರ್ತೃವನ್ನು ಬಳಸಿಕೊಳ್ಳದೇ ಇರುವ ವಾಕ್ಯ-

೧. ಮರದ ಹಣ್ಣನ್ನು ಕೋಲಿನಿಂದ ಹೊಡೆದು ಮರದಿಂದ ಬೀಳಿಸಿಕೊಂಡು ರಾಮನಿಗೆ ಕೊಟ್ಟು, ತಟ್ಟೆಯಲ್ಲಿಟ್ಟು ...... (ಇಲ್ಲಿ ಪ್ರಥಮಾ ಒಂದನ್ನು ಬಿಟ್ಟು ಉಳಿದೆಲ್ಲ ವಿಭಕ್ತಿಗಳು ಬಳಕೆಯಾಗಿವೆ)
ಈಗಿಲ್ಲಿ ಪೂರ್ಣ ಕ್ರಿಯಾಪದವನ್ನು ಬಳಸಿಬಿಟ್ಟರೆ ವಾಕ್ಯ ಮುಗಿಯುತ್ತದೆ ಮತ್ತು ಅದರ ಜೊತೆಯಲ್ಲೇ ಅನಾಯಾಸವಾಗಿ ಕರ್ತೃವೂ ಹೇಳಲ್ಪಡುತ್ತದೆ. ತಿನ್ನು, ತಿಂದನು, ತಿನ್ನುತ್ತಾನೆ, ತಿಂದೆಯಾ... ಹೀಗೆ ಏನೇ ಹೇಳಿದರೂ ’ನೀನು, ಅವನು, ರಾಮನು’ ಎಂಬೆಲ್ಲ ಕರ್ತೃವಾಚಕಗಳು ಸಂದರ್ಭಕ್ಕನುಸಾರವಾಗಿ ತನ್ನಿಂತಾನೇ ಸೇರಿಕೊಳ್ಳುತ್ತವೆ. ಕರ್ತೃಸಮೇತವಾದ ಕ್ರಿಯಾಪದವನ್ನು ಬಳಸದೇ ಇದ್ದ ಪಕ್ಷದಲ್ಲಿ ವಾಕ್ಯ ಅಪೂರ್ಣ. ಪೂರ್ಣ ಕ್ರಿಯಾಪದವೊಂದು ಕರ್ತೃಪ್ರತ್ಯವನ್ನು (ಕೆಲವೊಮ್ಮೆ ಕರ್ಮಪ್ರತ್ಯಯವನ್ನು) ಒಳಗೊಂಡೇ ಇರುತ್ತದೆ ಎಂಬುದನ್ನು ಗಮನಿಸಬೇಕು. ಧಾತುವಿನಲ್ಲಿನ ವ್ಯಾಪಾರಕ್ಕೆ (ಕ್ರಿಯಾ) ಇಂಬು ಕೊಡುವ ಕೆಲಸವನ್ನು ಈ ಬಗೆಯ ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಯು ವಹಿಸಿಕೊಳ್ಳುತ್ತದೆ. ಅದು ಅದರ ದೊಡ್ಡತನ. ಈ ಬಗೆಯ ವಾಕ್ಯಗಳಿಗೆ ಕರ್ತರಿ ಪ್ರಯೋಗ ಅಂತಲೂ ಕರೆಯಲಾಗುತ್ತದೆ.

ಕರ್ಮಣಿ ಪ್ರಯೋಗ ಎಂದು ಕರೆಯಲಾಗುವ ಇನ್ನೊಂದು ವಾಕ್ಯಪ್ರಕಾರವನ್ನು ನೋಡೋಣ-
೨. ಮೊನ್ನೆ ಬುಧವಾರದ ದಿನ ಬೆಳಗಿನಲ್ಲಿ ದೂರದಲ್ಲಿರುವ ಸಂಗೀತದ ಶಾಲೆಯು ಹೋಗು ಕ್ರಿಯೆ
ಇಲ್ಲಿಯೂ ಕ್ರಿಯಾಪದವನ್ನು ಹೇಳದಿದ್ದ ಪಕ್ಷದಲ್ಲಿ ವಾಕ್ಯ ಅಪೂರ್ಣವೇ. ಕ್ರಿಯೆ ಕಾಣುತ್ತಿಲ್ಲ ಅನ್ನುವ ಕಾರಣಕ್ಕೆ ಅದು ಅಪೂರ್ಣವಲ್ಲ, (ಯಾಕೆಂದರೆ ಹೋಗುವ ಕ್ರಿಯೆ ಎಂಬುದನ್ನು ಸೂಚಿಸಲಾಗಿದೆ) ಬದಲಾಗಿ ಕ್ರಿಯೆಯ ಆಶ್ರಯದಾತನಾದ ಕರ್ತೃ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಅಪೂರ್ಣ. ಅಂದರೆ ಧಾತುವಿನಲ್ಲಿನ ಕ್ರಿಯಾಭಾಗವನ್ನು ನೋಡಿಕೊಳ್ಳುವ ವಾರಸುದಾರ ಒಬ್ಬ ಬೇಕಾಗಿದ್ದಾನೆ. ಕರ್ಮಣಿ ಪ್ರಯೋಗದಲ್ಲಿ ಧಾತುವಿನ ಮುಂದಿನ ಪ್ರತ್ಯಯದಿಂದಲೇ ಕರ್ಮವು ಉಕ್ತವಾದ್ದರಿಂದ ಮತ್ತೆ ಕರ್ಮವನ್ನು ಹೇಳಲೋಸುಗ ದ್ವಿತೀಯಾ ವಿಭಕ್ತಿ ಬರುವುದಿಲ್ಲ, ಅದರ ಬದಲಿಗೆ ಆ ಜಾಗದಲ್ಲಿ ಪ್ರಥಮಾ ಬಂದು ಕುಳಿತುಕೊಳ್ಳುತ್ತದೆ. (ಮೇಲಿನ ವಾಕ್ಯದಲ್ಲಿ ಶಾಲೆಯು ಈ ವಾಕ್ಯದಲ್ಲಿ ಕರ್ಮಪದವಾಗಿದ್ದರೂ ಅದಕ್ಕೆ ದ್ವಿತೀಯಾ ಬಂದಿಲ್ಲ, ಪ್ರಥಮೆ ಬಂದಿದ್ದಾಳೆ). ಈ ವಾಕ್ಯದಲ್ಲಿ ಕ್ರಿಯೆಯ ಭಾರವನ್ನು ಹೊರಲು ಬರುವಾಕೆಯೇ ತೃತೀಯೆ. ವಾಕ್ಯವೊಂದರಲ್ಲಿ ಯಾವೆಲ್ಲ ವಿಭಕ್ತಿಗಳು ಬಳಕೆಯಾದರೂ ಅವುಗಳಲ್ಲಿ ಯಾರಿಗೂ ಧಾತುವಿನ ಕ್ರಿಯಾ( ವ್ಯಾಪಾರ) ಎಂಬ ಬಲುಮುಖ್ಯವಾದ ಭಾಗವನ್ನು ಭರಿಸುವ ಶಕ್ತಿ ಇಲ್ಲ. ಅವೆಲ್ಲವೂ ಅರ್ಥವನ್ನು ತಮ್ಮ ಮೂಲಕ ಮುಂದಕ್ಕೆ ಹರಿಯಗೊಡುತ್ತ ಕೊನೆಗೆ ಪ್ರಥಮೆಯ ಅಥವಾ ತೃತೀಯೆಯ ಮನೆಯ ದಾರಿಯನ್ನೇ ತೋರುತ್ತವೆ. ಧಾತುವಿನ ಅರ್ಥವು ಅವುಗಳ ಮೂಲಕ ಧಾವಿಸಿ ಬರುತ್ತ ಕೊನೆಯಾಗುವುದೇನಿದ್ದರೂ ಪ್ರಥಮಾ ಅಥವಾ ತೃತೀಯಾದಲ್ಲಿ.

ಈ ಮೇಲಿನ ಉದಾಹರಣೆಗಳಿಂದ ತಿಳಿದುಬರುವುದೇನೆಂದರೆ ಉಳಿದ ವಿಭಕ್ತಿಗಳಿಗಿಲ್ಲದ ಅನನ್ಯವಾದ ಭಾಗ್ಯ ಈ ಪ್ರಥಮಾ ವಿಭಕ್ತಿಗೂ, ತೃತೀಯಾ ವಿಭಕ್ತಿಗೂ ಇದೆ ಅನ್ನುವುದು. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಪ್ರಥಮೆಯೂ, ಕರ್ಮಣಿ ಪ್ರಯೋಗದ ವಾಕ್ಯದಲ್ಲಿ (ಕನ್ನಡದಲ್ಲಿ ಇದು ತೀರಾ ವಿರಳ ಮತ್ತು ಕನ್ನಡದ ಜಾಯಮಾನಕ್ಕೊಗ್ಗದ ಶೈಲಿ) ತೃತೀಯೆಯೂ ಕ್ರಮವಾಗಿ ಕ್ರಿಯಾಶ್ರವಾಗುವ ಮೂಲಕ ಮಹತ್ತರ ಪಾತ್ರವನ್ನು ವಹಿಸಿಕೊಳ್ಳುತ್ತಿವೆ. ವಿಭಕ್ತಿಗಳ ಕುಟುಂಬದಲ್ಲಿ ಹಾಗೆ ಕ್ರಿಯೆಯನ್ನು ಭರಿಸಿಕೊಳ್ಳುವ ಮೂಲಕ ಸ್ವತಂತ್ರ ಎಂದು ಕರೆಸಿಕೊಳ್ಳುವ ಮತ್ತು ಆ ಮೂಲಕ ಕರ್ತೃತ್ವವನ್ನು ಹೊಂದುವ ಭಾಗ್ಯ ಇದ್ದಿದ್ದು ಪ್ರಥಮೆಗೆ ಮತ್ತು ತೃತೀಯೆಗೆ ಮಾತ್ರ.

ಇದರ ಜೊತೆಯಲ್ಲಿ ಕರ್ಮ ಮತ್ತು ಆಧಾರಗಳೂ ಕರ್ತೃವಾಗಿ ತೋರಬಲ್ಲವು ಎಂಬ ವಾದವೂ ಇದೆ, ಅದು ಸಾಮಾನ್ಯ ವ್ಯವಹಾರಕ್ಕೆ ದಕ್ಕುವಂಥದ್ದಲ್ಲ. ಅಂದರೆ ಕರಣ, ಅಧಿಕರಣಗಳನ್ನು ಸ್ವತಂತ್ರ componet  ಆಗಿ ಕಾಣುವ ಬಯಕೆ ಒಬ್ಬನಲ್ಲಿ ಇದ್ದಾಗ ಅವುಗಳೂ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಲ್ಲವು. ಅಂಥ ಸಂದರ್ಭದಲ್ಲಿ ಅವಕ್ಕೆ ಅಂಟಿಕೊಳ್ಳುವ ವಿಭಕ್ತಿ ಮಾತ್ರ ಪ್ರಥಮೆಯೇ ಆಗಿರುತ್ತದೆ.
ಉದಾ- ಪಾತ್ರೆಯು ಅಟ್ಟುತ್ತದೆ. (ಅಟ್ಟು= ಬೇಯಿಸು)
ಈ ಉದಾಹರಣೆಯಲ್ಲಿನ ಅಟ್ಟುವ ಕ್ರಿಯೆಯಲ್ಲಿ ಪಾತ್ರೆಯದ್ದು ಅಧಿಕರಣ ಅಂದರೆ ಆಧಾರದ ಪಾತ್ರ. ಆದರೆ ಅಧಿಕರಣವನ್ನೇ ಸ್ವತಂತ್ರವೆಂದು ಹೇಳುವ ಅತ್ಯುತ್ಸಾಹ ಒಬ್ಬನಿಗಿದ್ದಾಗ ಅಧಿಕರಣವೇ ಕ್ರಿಯಾಶ್ರಯವಾಗಿ ಪ್ರಥಮೆಯನ್ನು ಆತುಕೊಳ್ಳುತ್ತದೆ.     

ಸಂಸ್ಕೃತದ ಮತ್ತು ಕನ್ನಡದ ತೃತೀಯೆಗಳನ್ನು ಪಕ್ಕಕ್ಕಿಟ್ಟು ನೋಡಿದಾಗ ಅವೆರಡು ತಮ್ಮದೇ ಬಗೆಯಲ್ಲಿ ಭಿನ್ನವಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಕರಣವಾಗಿ ಮಾತ್ರವೇ ತೃತೀಯೆಯ ಬಳಕೆ. ಉಪಪದ ವಿಭಕ್ತಿಯಾಗಿ (ಅಂದರೆ ನಿರ್ದಿಷ್ಟ ಪದವನ್ನು ಬಳಸಿದಾಗ ಅಗತ್ಯವಾಗಿಯೂ ಬರುವ ವಿಭಕ್ತಿ) ತೃತೀಯೆಯ ಬಳಕೆ ಇಲ್ಲ. ಸಂಸ್ಕೃತದಲ್ಲಿ ಸಹಾರ್ಥದ( ’ಜೊತೆಯಲ್ಲಿ’ ಎಂಬರ್ಥ) ಪ್ರಯೋಗವಿದ್ದಾಗ, ವಿನಾ ಎಂಬುದರ ಪ್ರಯೋಗವಿದ್ದಾಗ ತೃತೀಯಾ ಅವಶ್ಯವಾಗಿಯೂ ಬರುತ್ತದೆ. ಕನ್ನಡದ ಪರಿಮಿತಿಯಲ್ಲಿ ಅವು ಬರುವುದಿಲ್ಲವಾದ್ದರಿಂದ ಹೆಚ್ಚಿಗೆ ಹೇಳಲಾರೆ. ಒಂದಂತೂ ಸತ್ಯ, ಕನ್ನಡಕ್ಕಿಂತ ವಿಭಿನ್ನವಾದ ಕ್ಷೇತ್ರಗಳಲ್ಲಿ ಸಂಸ್ಕೃತವು ತೃತೀಯೆಯನ್ನು ದುಡಿಸಿಕೊಳ್ಳುತ್ತದೆ ಎಂಬುದು. ಕರ್ಮಣಿ ಪ್ರಯೋಗವು ಸಂಸ್ಕೃತಕ್ಕೆ ಬಲು ಸಹಜ. ಅಹಂ ಎನ್ನುವ ಪದ ಸಂಸ್ಕೃತದಲ್ಲಿ ’ನಾನು’ ಎಂಬುದನ್ನು ಸೂಚಿಸುತ್ತದೆ. ಅಹಂಪ್ರಜ್ಞೆಯು ಮಾನವನನ್ನು ಗರ್ವಿಷ್ಠನನ್ನಾಗಿಯೂ, ಹೆಚ್ಚು ಹೆಚ್ಚು ಇಹಲೋಕಕ್ಕೆ ಬದ್ಧವಾದವನನ್ನಾಗಿಯೂ ಮಾಡುತ್ತದೆ. ಭಾಷಾ ಬಳಕೆಯ ವಿಷಯದಲ್ಲಿ ಎಚ್ಚರಿಕೆಯುಳ್ಳವರಾದ ಮತ್ತು ಅಹಮಿಗೆ ಅಂಟಿಕೊಳ್ಳಲು ಬಯಸದ ಕೆಲವರು ’ಅಹಂ’ ಪದದ ಬಳಕೆಯನ್ನೇ ಪ್ರಜ್ಞಾಪೂರ್ವಕವಾಗಿ ದೂರವಿಡುತ್ತಾರೆ. ನನ್ನ ಗುರುಗಳೂ ಕೆಲವರು ಹಾಗಿದ್ದಾರೆ. ’ಅಹಂ ಕೃತವಾನ್’ ಎಂಬ ಕರ್ತರಿ ಪ್ರಯೋಗಕ್ಕೆ ಬದಲಾಗಿ ’ಮಯಾ ಕೃತಮ್’ ಎಂಬ ಕರ್ಮಣಿ ಪ್ರಯೋಗಕ್ಕೆ ಇವರು ಶರಣು ಹೋಗುತ್ತಾರೆ. ಆಗ ಕರ್ತೃಪ್ರಾಧಾನ್ಯಕ್ಕೆ ಬದಲಾಗಿ ಕ್ರಿಯೆಗೆ ಪ್ರಾಧಾನ್ಯ ದೊರೆಯುತ್ತದೆ. ಮತ್ತು ಆಗೆಲ್ಲ ಸಹಾಯಕ್ಕೆ ಬರುವಾಕೆ ಇದೇ ತೃತೀಯೆಯೇ ಆಗಿದ್ದಾಳೆ. 

ಕರಣಾರ್ಥದ ಹೊರತಾಗಿ ಕನ್ನಡವು ತೃತೀಯೆಗೆ ಇನ್ನೊಂದು ಹೆಚ್ಚುವರಿ ಜವಾಬ್ದಾರಿಯನ್ನು ಕೊಟ್ಟಿದೆ. ಪಂಚಮೀ ವಿಭಕ್ತಿಯೆಂಬುದೊಂದು ಕನ್ನಡದಲ್ಲಿ ನಾಮಮಾತ್ರಕ್ಕೆ ಇರುತ್ತಿದ್ದರೂ ಅದರ ಕೆಲಸವನ್ನು ತೃತೀಯಾಗೇ ಕೊಡಲಾಗಿದೆ. ಕನ್ನಡದಲ್ಲಿ ’ದೆಸೆಯಿಂದ’ ಎಂಬುದು ಪಂಚಮಿಯ ಪ್ರತ್ಯಯ. ಆದರೆ ಅದರ ಬಳಕೆಯಂತೂ ವಿರಳಾತಿವಿರಳ. ಕನ್ನಡಲ್ಲಿ ’ಮನೆಯಿಂದ ಬಂದೆ’ ಎಂದರೆ ಧಾರಾಳವಾಗಿ ಸಾಕು. ಇಲ್ಲಿ ಬಳಕೆಯಾಗಿರುವುದು ತೃತೀಯಾ ವಿಭಕ್ತಿ ಮತ್ತದು ಈ ಸಂದರ್ಭದಲ್ಲಿ ಕರಣಾರ್ಥದಲ್ಲಿ ಇಲ್ಲ. ನಿಜವೆಂದರೆ- ’ಮನೆಯ ದೆಸೆಯಿಂದ ಬಂದೆ’ ಎಂದು ಪಂಚಮೀ ಬಳಕೆಯಾಗಬೇಕಾದ ಜಾಗ ಇದು. ಆದರೆ ಅದನ್ನೀಗ ನಾವು ಬಳಸುತ್ತಿಲ್ಲ. ಪಂಚಮೀ ಪ್ರತ್ಯಯವನ್ನು ’ದೆಸೆಯಿಂದ’ ಅಂತ ಬರೆಯುವಾಗ ಬಹುಶಃ ಕನ್ನಡವೈಯಾಕರಣರ ತಲೆಯಲ್ಲಿದ್ದುದೂ ಎರಡು ವಸ್ತುಗಳ ನಡುವೆ ಸಂಭವಿಸುವ, ದೈಶಿಕ ವಿಭಾಗವೇ ಇರಬೇಕು. ಆದರೆ ಇದು ಕನ್ನಡದ ಜಾಯಮಾನಕ್ಕೆ ಒಗ್ಗಲಿಲ್ಲವಾಗಿ ನಾವು ವಿಭಾಗಾರ್ಥದಲ್ಲೂ ತೃತೀಯೆಯನ್ನೇ ಅನೂಚಾನವಾಗಿ ಬಳಸಿಕೊಂಡು ಬಂದಿದ್ದೇವೆ.

ಇವಿಷ್ಟು ತೃತೀಯೆಯ ಕಥೆ.