Monday, November 23, 2015

ಅವಳು ಬರಿ ನದಿಯಲ್ಲ ಕಣಾ…
ನನಗೆ ಪರಿಚಯವಾಗುವಾಗ ಗಂಗೆ ಸಾಕಷ್ಟು ಮಲಿನವಾಗಿದ್ದಳು. ನಾನು ಓದಿದ ಪಠ್ಯಗಳಲ್ಲಿ, ವೃತ್ತಪತ್ರಿಕೆಗಳಲ್ಲಿ, ವಿಜ್ಞಾನದ ಬರಹಗಳಲ್ಲಿ, ಸಾಹಿತ್ಯದಲ್ಲಿ ಮತ್ತು ಆಗಾಗ ಕಂಡ ಟಿ.ವಿ. ವಾಹಿನಿಗಳ ವರದಿಗಳಲ್ಲಿ ಗಂಗೆ ಸಾಧ್ಯವಾದಷ್ಟೂ ಮಲಿನವಾಗಿದ್ದಳು. ಎಷ್ಟೆಂದರೆ, ಆಕೆಯ ಶುದ್ಧಿಯೊಂದು ಬರಿಯ ಪುರಾಣದ ಕಥೆ ಮಾತ್ರವೇ ಆಗಿರುವಷ್ಟು; ವರ್ತಮಾನದಲ್ಲಿ ಗಂಗೆಯೆಂದರೆ ಬರಿಯ ಕೊಳೆಯ ಹರಿವು ಮಾತ್ರವೇ ಅನ್ನಿಸುವಷ್ಟು. ’ಬತ್ತಲಾರದ ಗಂಗೆಗೆಂಥ ಕುತ್ತಿದು ನೋಡು…’ ಅಂತ ಅಡಿಗರು ಬರೆದಿದ್ದನ್ನೋದುವಾಗಲೂ ತೀರಾ ನೋವಾಗಿತ್ತು. ಬದುಕಲೂ ಆಗದ ಸಾಯಲೂ ಆಗದ ಕುಷ್ಠರೋಗಿ ಚಿರಂಜೀವಿ ಅಶ್ವತ್ಥಾಮ ಆ ಹೊತ್ತಿಗೆ ನೆನಪಾಗಿದ್ದ; ಗಂಗೆ ಅವನದೇ ಸ್ಥಿತಿಯಲ್ಲಿದ್ದಂತೆ ಪರಿಭಾವಿಸಿದ್ದೆ. ಆಚರಣೆಗಳ ಹೆಸರಲ್ಲಿ ಗಂಗೆಯ ಮೇಲೆ ನಡೆಯುವ ಅತ್ಯಾಚಾರವನ್ನೂ, ಕಾರ್ಖಾನೆಗಳು ಮತ್ತು ನಗರದ ಕೊಳಚೆಯನ್ನೆಲ್ಲ ಅವಳುಡಿಗೇ ತುಂಬುವ ವಿಕೃತಿಯನ್ನೂ ಓದುವಾಗ, ನೋಡುವಾಗ, ಮಮ್ಮಲ ಮರುಗಿದ್ದೆ. ಲಂಡನ್ನಿನ ಥೇಮ್ಸ್ ನದಿಯ ಶುದ್ಧಿಯ ಎದುರು ಗಂಗೆಯದು ಮಸುಕು ಮಸುಕಾದ ರೂಪ ಅಂತ ಯಾರೋ ಬರೆದದ್ದು ಓದುವಾಗ ನೊಂದಿದ್ದೆ.

ಸರಿ, ಗಂಗೆಯ ಪುಣ್ಯತಮ ರೂಪವೊಂದು ಇತಿಹಾಸವೇ ಆಗಿ, ಅವಳ ವರ್ತಮಾನವೆಲ್ಲ ಆಪಾದಮಸ್ತಕ ಕೊಳೆಯೇ ತುಂಬಿದ್ದೆನ್ನುವ ಸಂಗತಿಯನ್ನೇ ಅರಗಿಸಿಕೊಂಡೆ. ಕಾಶಿ ಯಾತ್ರೆ ಮುಗಿಸಿ ಬಂದವರು ಗಂಗಾಸಮಾರಾಧನೆ ಅನ್ನುವ ಕಾರ್ಯಕ್ರಮ ಮಾಡಿ, ಮನೆಗೆ ಬಂದ ಅತಿಥಿಗಳಿಗೆಲ್ಲ ಗಂಗೆಯ ನೀರಿನ ಸೀಲ್ಡ್ ಗಿಂಡಿಯನ್ನು ಕೊಟ್ಟಾಗಲೂ ಅದರೊಳಗೆ ತುಂಬಿರಬಹುದಾದ ಗಂಗೆಯ ಬಗ್ಗೆ ವಿಶೇಷ ಭಾವನೆ ಏನೂ ನನಗೆ ಬರಲಿಲ್ಲ. ದೇವರ ಮನೆಯಲ್ಲಿಟ್ಟು ದಿನಾ ಅದನ್ನು ಪೂಜಿಸುವ ಉದ್ದೇಶವೂ ನನಗೆ ಗೊತ್ತಿರಲಿಲ್ಲ. ಅಷ್ಟೆಲ್ಲ ಕೊಳಚೆಯಾದ ಗಂಗೆಯ ನೀರನ್ನು ಅದು ಗಂಗೆಯ ನೀರೆನ್ನುವ ಕಾರಣಕ್ಕೆ ಕಣ್ಣಿಗೊತ್ತಿಕೊಳ್ಳಬೇಕೆ, ತಲೆಮೇಲೆ ಪ್ರೋಕ್ಷಿಸಿಕೊಳ್ಳಬೇಕೆ ಎನ್ನುವುದು ನನ್ನ ತರ್ಕ. ಅಶುದ್ಧಪ್ರವಾಹವಾದ ಗಂಗೆಯಲ್ಲೇ ಸಾವಿರಾರು ಭಕ್ತರು ಪ್ರತಿದಿನವೂ ಸ್ನಾನ ಮಾಡುವುದನ್ನು ಕೇಳಿದಾಗ ಅಚ್ಚರಿಯ ಜೊತೆಯಲ್ಲಿ ಪ್ರಶ್ನೆಗಳೇಳುತ್ತಿದ್ದವು. ಹಾಗಂತ, ಹತ್ತಾರುವರ್ಷಗಳಿಂದ ಗಾಜಿನ ಬಾಟಲಿಯಲ್ಲಿಟ್ಟರೂ ಸ್ಫಟಿಕದಂತೇ ಶುದ್ಧವಾಗಿದ್ದ ಗಂಗಾಜಲವನ್ನೂ ನಾನು ಕಂಡಿದ್ದೇನೆ. ಆದರೆ ಅದು ಕಾಶಿಯ ಗಂಗೆಯಲ್ಲ, ಗಂಗೋತ್ರಿಯ ಗಂಗೆ.

ಹೀಗಿರಲು, ನಾಲ್ಕು ವರ್ಷಗಳ ಹಿಂದೆ ಒಮ್ಮೆ ಕಲ್ಕತ್ತೆಯ ಹೌರಾ ಸೇತುವೆಯ ಬುಡದಲ್ಲಿ ನಿಂತಿದ್ದೆ, ಎದುರಿಗೆ ಗಂಗೆಯೇ ಹೂಗ್ಲಿ ಅನ್ನುವ ಹೆಸರಿನಲ್ಲಿ ಹರಿಯುತ್ತಿದ್ದಳು. ಕಪ್ಪನೆಯ ಬಣ್ಣಕ್ಕೆ ತಿರುಗಿದ ಹೂಗ್ಲಿಯ ನೀರನ್ನೇ ನೋಡುತ್ತ ನಾನು ಆ ತೀರದಲ್ಲಿ ಅರ್ಧ ಗಂಟೆ ಇದ್ದು ಬಂದಿದ್ದೇನಾದರೂ ಆ ನೀರನ್ನು ಮುಟ್ಟುವ ಮನಸಾಗಿರಲಿಲ್ಲ. ಜನ ಅಲ್ಲೇ ಸ್ನಾನ ಮಾಡುತ್ತಿದ್ದರು, ಅಲ್ಲೇ ಬಟ್ಟೆ ತೊಳೆಯುತಿದ್ದರು, ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಆ ನೀರನ್ನು ತುಂಬಿಸಿ ಎಲ್ಲಿಗೋ ಒಯ್ಯುತ್ತಿದ್ದರು. ಜನ ಅಷ್ಟೆಲ್ಲ ಭಾವನೆಗಳನ್ನು ಗಂಗೆಯಲ್ಲಿ ಆಚರಿಸಿಕೊಳ್ಳುತ್ತಿದ್ದರೂ ನಾನು ಅದೇನನ್ನೂ ಮಾಡದೆ ’ನೀರು ಕೊಳಚೆಯಾಗಿದೆ’ ಅಂದುಕೊಂಡೇ ನಿಂತೆನಲ್ಲದೆ, ಕೊನೆಗೂ ಅವಳನ್ನು ಸೋಕಿಸಿಕೊಳ್ಳದೆ ಮರಳಿ ಬಂದೆ.
ಅದೇ ವರ್ಷ ಅಸ್ಸಾಮಿನ ಗೌಹಾತಿಯಲ್ಲಿ ಸಮುದ್ರವೋ ಆನ್ನುವಂತೆ ವಿಸ್ತಾರ ವಿಸ್ತಾರವಾಗಿ ಹರವಿಕೊಂಡಿದ್ದ, ಅಂಥಾ ಬೇಸಗೆಯಲ್ಲೂ ನಮ್ಮೂರಿನ ಮಳೆಗಾಲದ ನದಿಯಂತೆ ಕೆಂಪಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಯ ಎದುರಿಗೂ ನಿಂತಿದ್ದೆ. ಆಗಲೂ ಹೀಗೆ, ನಾನು ನೀರು ಸೋಕಿಸಿಕೊಳ್ಳದೆ ಬಂದೆ. ಅದು ಗಂಗೆಯಾಗಲಿ, ತುಂಗೆಯಾಗಲಿ, ಬ್ರಹ್ಮಪುತ್ರೆಯಾಗಲಿ, ಪರಿಶುದ್ಧವಾಗಿಲ್ಲವೆಂದಮೇಲೆ ಮತ್ತೇಕೆ ಅದರಲ್ಲಿ ಸ್ನಾನ ಪಾನ ಎಲ್ಲ ಅನ್ನುವುದು ಅವತ್ತಿಗೆ ನನಗಿದ್ದ ತರ್ಕ.

ಇವತ್ತಿಗೆ ಚಿಂತನೆ ಮಾಡುವಾಗ ಅನ್ನಿಸುತ್ತದೆ, ನಾನು ಗಂಗೆಯನ್ನೂ, ಬ್ರಹ್ಮಪುತ್ರೆಯನ್ನೂ ಸೋಕಿಸೊಕೊಳ್ಳಬೇಕಿತ್ತು ಅಂತ. ಅವೆರಡೂ ಶುದ್ಧವಿಲ್ಲ ಎಂಬ ತರ್ಕ ಎದುರು ಮಾಡಿ ಅವನ್ನು ಸೋಕಿಸಿಕೊಳ್ಳದೆ ಬಂದುದು ಬರೀ ಪಾರ್ಶ್ವಿಕ ಚಿಂತನೆಯ ಪರಿಣಾಮ ಎಂದು ಇವತ್ತಿಗೆ ಅನ್ನಿಸುತ್ತಿದೆ. ಯಾಕೆಂದರೆ ಗಂಗೆಯೆಂಬುದು ಬರಿಯ ನೀರ ಹರಿವಿನ ಮೊತ್ತವಲ್ಲ, ಅವಳ ಶುದ್ಧಿ ಅಶುದ್ಧಿ ಹೊರತೋರಿಕೆಗೆ ನಿಲುಕುವಂಥದಲ್ಲ. ಈ ದೇಶದ ಪ್ರತಿಯೊಬ್ಬ ಶ್ರದ್ಧಾಳು ತಾನು ತನ್ನ ಬದುಕಿನಲ್ಲೊಮ್ಮೆಯಾದರೂ ಗಂಗೆಯಲ್ಲಿ ಸ್ನಾನ ಮಾಡಬೇಕೆಂದು ಪ್ರತಿದಿನವೂ ಸಂಕಲ್ಪ ಮಾಡುತ್ತಾನೆ. ಪ್ರಾಣ ತೊರೆವ ಹೊತ್ತಿನಲ್ಲಿ ಒಂದಾದರೂ ಬಿಂದು ಗಂಗೆಯ ನೀರಿಗಾಗಿ ಪ್ರಾರ್ಥಿಸುತ್ತಾನೆ. ಯಾಕೆ? ಅವಳಲ್ಲೇನಿದೆ? ಆಕೆ ಅಲೌಕಿಕಳು ಯಾಕೆ? ಬರಿಯ ನೀರಾಗಿದ್ದರೆ ಗಂಗೆ ಯಾವತ್ತೋ ಈ ದೇಶದ ನೆನಪಿನಲ್ಲಿ ಬರಿಯ ಒಂದು ನದಿಯಷ್ಟೇ ಆಗಿರಬೇಕಿತ್ತು, ಉಳಿದ ನದಿಗಳಂತೆ. ಆದರೆ, ಅವಳನ್ನು ಅದಕ್ಕಿಂತ ಹೆಚ್ಚಿನದೆಂದೇ ಶ್ರದ್ಧಾವಂತ ಮನಸು ಪರಿಭಾವಿಸುತ್ತದೆ.

ಅವತ್ತು ಅವಳನ್ನು ಸೋಕದಂತೆ ತಡೆದ ನನ್ನ ಮನಃಪ್ರವೃತ್ತಿಯನ್ನೇ ಮತ್ತೂ ವಿಶ್ಲೇಷಿಸಿಕೊಂಡಾಗ ಕೊನೆಗೆ ಮನಸಿಗೆ ಬಂದದ್ದು ಶ್ರದ್ಧೆ ಎನ್ನುವುದು. ಶ್ರದ್ಧೆಯ ಕೊರತೆ, ಮತ್ತು ವಿಚಾರಗಳ ಮೇಲೆ ಅತಿ ಬದ್ಧತೆಯೇ ನನ್ನನು ತಡೆದಿದ್ದು. ಬದುಕಿನಲ್ಲಿ ವಿಚಾರದ ಜಾಗ ವಿಚಾರಕ್ಕೂ ಶ್ರದ್ಧೆಯ ಜಾಗ ಶ್ರದ್ಧೆಗೂ ಇರಬೇಕಲ್ಲವೇ? ವಿಚಾರವು ಶ್ರದ್ಧೆಯನ್ನು ಕಲಕುವ ಕೆಲಸ ಮಾಡಬಾರದು.

’ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ’ ಅನ್ನುವ ಸಾಲುಗಳ ಮೂಲಕ ಅಂಥದೇ ಶ್ರದ್ಧೆಯನ್ನು ಕವಿ ಕುವೆಂಪು ಬಿಂಬಿಸುತ್ತಾರೆ. ಬದುಕಿನಲ್ಲಿ ಬೆರಗು ಇರಬೇಕನ್ನುವವರೆಲ್ಲ ಶ್ರದ್ಧಾಳುಗಳಾಗಿರಬೇಕು, ಅದರ ಹೊರತಾಗಿ ಬದುಕಿನಲ್ಲಿ ಬೆರಗು ಇಲ್ಲ. ಬೆರಗಿಲ್ಲದ ಬದುಕಿನಲ್ಲಿ ಸೌಂದರ್ಯ ಇಲ್ಲ. ಸೂರ್ಯೋದಯವನ್ನು ರವಿಯ ಕೃಪೆಯಂತೆ ಕಾಣುವುದಕ್ಕೆ ಶ್ರದ್ಧೆ ಬೇಕು, ಗಂಗೆಯನ್ನು ದೇವಗಂಗೆಯಾಗಿ ಸುರಿದುಕೊಳ್ಳುವುದಕ್ಕೆ ಶ್ರದ್ಧೆ ಬೇಕು, ಹೂವನ್ನು ಮುಡಿಗೇರಿಸಿಕೊಳ್ಳಲೂ ಶ್ರದ್ಧೆಯೇ ಬೇಕು. ಹಾಗೆ ನೋಡಿದರೆ ಬದುಕಿನ ಎಲ್ಲವೂ ಶ್ರದ್ಧೆಯೇ ಆಗಿದೆ. ಅದಕ್ಕೇ, ಋಗ್ವೇದವಂತೂ ’ಶ್ರದ್ಧಾ ಸೂಕ್ತ’ ಅನ್ನುವ ಹೆಸರಲ್ಲಿ ಸೂಕ್ತವೊಂದನ್ನು ಮುಂದಿಡುತ್ತದೆ. ಬದುಕಿನ ಎಲ್ಲವೂ ಶ್ರದ್ಧೆಯೇ ಅನ್ನುವುದು ಅದರ ಅಭಿಮತ. ಶ್ರೀಕೃಷ್ಣನಂತೂ ’ಶ್ರದ್ಧಾವಾನ್ ಲಭತೇ ಜ್ಞಾನಂ’ ಅನ್ನುತ್ತಾನೆ. ಜ್ಞಾನವೇನಿದ್ದರೂ ಶ್ರದ್ಧಾವಂತನಿಗೆ ಒಲಿಯುತ್ತದಂತೆ.  

ಶ್ರದ್ಧೆಯೊಂದಿಲ್ಲದಿದ್ದರೆ ವಿಜ್ಞಾನಿಯೂ ವಿಜ್ಞಾನಿಯಲ್ಲ. ಕಠೋಪನಿಷತ್ತಿನಲ್ಲಿ ನಚಿಕೇತ ಕೇಳುವ ಪ್ರಶ್ನೆಗೆ ಯಮ ಉತ್ತರಿಸುವ ಮಾತಲ್ಲೂ ಇದೇ ವ್ಯಕ್ತವಾಗಿದೆ. ’ಅಸ್ತೀತ್ಯೇವೋಪಲಬ್ಧವ್ಯಃ’ (ಇದೆಯೆಂದು ತಿಳಿದೇ ಪಡೆಯಬೇಕಾದ್ದು ಅದು). ಹಾಗೆ ’ಇದೆ’ ಅನ್ನುವ ದೃಢತೆ ಇದೆಯಲ್ಲ, ಅದೇ ಶ್ರದ್ಧೆ. ತಾನು ನಂಬುವ ಏನೋ ಒಂದು ಇದೆ ಅಂದುಕೊಂಡು ಹೈಪೂಥೀಸಿಸ್ ಕಟ್ಟಿಕೊಳ್ಳದೆ ವಿಜ್ಞಾನಿಯೂ ಮುಂಬರಿಯಲಾರ. ಕವಿ, ವಿಜ್ಞಾನಿ, ಸಾಮಾನ್ಯ ಮಾನವ- ಎಲ್ಲರೂ ಶ್ರದ್ಧಾಳುಗಳೇ.

ಯಾವುದರಲ್ಲೂ ಶ್ರದ್ಧೆಯಿಲ್ಲದವರು ಹುಸಿ-ವಿಚಾರವಾದಿಗಳು. ಎಲ್ಲವೂ ಭಂಜನೆಗೆ ಒಳಗಾಗಬೇಕಾದ ಸಂಗತಿಗಳೇ ಅನ್ನುವುದು ಅವರ ಅಭಿಮತ. ಸಮಾಜ, ಅಲ್ಲಿಯ ವ್ಯವಸ್ಥೆ, ಸರಕಾರ, ಶಿಕ್ಷಣ, ರಾಷ್ಟ್ರವಾದ- ಎಲ್ಲವೂ ಸರಿಯಿಲ್ಲ ಎಂದು ವಾದ ಮಂಡಿಸುವ ಅವರು, ಕಣ್ಣೀರು ಮಿಡಿಯುವ ಅವರು, ಪರ್ಯಾಯವಾದ ಒಂದನ್ನು ಚಿಂತಿಸಲೂ, ಕಟ್ಟಲೂ ಆಗದ ಹೆಳವರು.

ಇರಲಿ, ನಾನು ಗಂಗೆಯ ತೀರಕ್ಕೆ ಇನ್ನೊಮ್ಮೆ ಹೋಗಬೇಕು, ಅಲ್ಲಿ ಸ್ನಾನಿಸಬೇಕು ಅಂದುಕೊಂಡಿದ್ದೇನೆ. ಅಂದಹಾಗೆ ನಾನು ಇಷ್ಟೆಲ್ಲ ಬರೆದಿದ್ದು ಇವತ್ತಿನ ವಿಜಯವಾಣಿಯಲ್ಲಿನ ವರದಿಯೊಂದನ್ನೋದಿದ ಬಳಿಕ. ಕೇಂದ್ರ ಸರಕಾರ ಗಂಗೆಯನ್ನು ಶುದ್ಧೀಕರಿಸಲು ಮಾತ್ರವಲ್ಲ, ಅದರ ಅಂತರಾಳವನ್ನು ಅರಿಯಲು ಹೊರಟಿದೆಯಂತೆ. ಅದರ ವಿವರಣೆ ಇಲ್ಲಿದೆ, ಓದಿ.

http://vijayavani.net/?p=1694687

ಗಂಗೆಯ ಬಗ್ಗೆ ಬಿಬಿಸಿ ತುಂಬಾ ಮುತುವರ್ಜಿಯಿಂದ ಡಾಕ್ಯುಮೆಂಟರಿ ಮಾಡಿದೆ. ಕೇಳುತ್ತ ಕೇಳುತ್ತ, ಆ ದೃಶ್ಯ ನೋಡುತ್ತ ಧ್ಯಾನಸ್ಥ ಸ್ಥಿತಿಗೆ ನಮ್ಮನ್ನೊಯ್ಯಬಲ್ಲುದಾದ ಚಿತ್ರಣ ಅದು. ಅದರ ಲಿಂಕ್ ಇಲ್ಲಿದೆ. 

https://www.youtube.com/watch?v=UM9aPy7H534

Tuesday, November 17, 2015

ಕನ್ನಡದ ಸಮರ್ಥ ನಗರಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲೊಂದು ’ಸ್ಮಾರ್ಟ್ ಸಿಟಿ’ ಅನ್ನುವ ಪರಿಕಲ್ಪ. ಕರ್ನಾಟಕದ ಐದು ನಗರಗಳೂ ಯೋಜಿತ ನೂರು ನಗರಗಳ ಪಟ್ಟಿಯಲ್ಲಿ ಸೇರಿದ್ದುವು ಅನ್ನುವುದು ಸರ್ವವಿದಿತ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಅನ್ನುವ ಇಂಗ್ಲೀಷಿನ ಹೆಸರಿಗೆ ಸಂವಾದಿಯಾದ ಕನ್ನಡದ ಹೆಸರನ್ನು ಹುಡುಕುವ ಕೆಲಸವನ್ನು ಒಂದು ಸ್ಪರ್ಧೆಯ ರೂಪದಲ್ಲಿ ಕನ್ನಡಿಗರಿಗೆ ಕೊಡಲಾಗಿತ್ತು.
ಸ್ಪರ್ಧೆ ಅಂತಲ್ಲದಿದ್ದರೂ ನಮ್ಮ ಕೆಲವು ಸಮಾನ ಮನಸ್ಕರ ಗುಂಪುಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ನಾವೊಂದಿಷ್ಟು ಜನ ಚರ್ಚೆ ಮಾಡಿದ್ದೆವು. ಕನ್ನಡವೆಂದರೆ ಅಚ್ಚಗನ್ನಡ ಅನ್ನುವ ನಂಬುಗೆಯಲ್ಲಿ ಹತ್ತಾರು ಕನ್ನಡದ ಹೆಸರುಗಳನ್ನು ಕಟ್ಟಿದ್ದೆವು. ಚೆನ್ನಗರ, ಚನ್ನ ಪಟ್ಣ, ಮುದ್ದೂರು, ಚುರುಕು ಪುರ, ಜಾಣೂರು, ಕಾಜಾಣ ಪುರಿ, ಇತ್ಯಾದಿ ಇತ್ಯಾದಿ. ನಗರ, ಪತ್ತನ ಎಂಬ ಪದಗಳು ಸಂಸ್ಕೃತದ ಮೂಲಕ ಕನ್ನಡಕ್ಕೆ ಬಂದವಾಗಿದ್ದರೂ ಚೆನ್ನು, ಮುದ್ದು ಎಂಬ, ಸೌಂದರ್ಯಕ್ಕೆ ಪರ್ಯಾಯವಾಗಿ ಬಳಸಿದ ಪದ ಕನ್ನಡವೇ ಆಗಿತ್ತು.

ಇದೀಗ ಸ್ಪರ್ಧೆಯಲ್ಲಿ ಆಯ್ಕೆಯಾದ ಹೆಸರು ಬಹಿರಂಗವಾಗಿದೆ, ’ಸಮರ್ಥ ನಗರ’ ಅನ್ನುವುದು ಸ್ಮಾರ್ಟ್ ಸಿಟಿ ಪದಕ್ಕೆ ಸಂವಾದಿಯಾದ ಕನ್ನಡದ ಹೆಸರು ಅಂತ ಆಯ್ಕೆ ಮಾಡಲಾಗಿದೆ. ವಿಭಕ್ತಿ ಹಚ್ಚಿಲ್ಲ ಅಂತೊಂದು ಬಿಟ್ಟರೆ ಪಕ್ಕಾ ಸಂಸ್ಕೃತದ ಪದ ಅದು. ಸಮರ್ಥ ನಗರ ಅನ್ನುವುದು ಚಂದದ ಹೆಸರೇ ಆದರೂ, ಅಚ್ಚಗನ್ನಡದಲ್ಲಿ ಇನ್ನಷ್ಟು ಲಲಿತವಾದ ಹೆಸರನ್ನಿಡಬಹುದಿತ್ತಲ್ಲವೇ ಅಂತ ಒಂದು ಕ್ಷಣ ಅನ್ನಿಸಿತು ( ನಾನೊಬ್ಬ ಸಂಸ್ಕೃತ ವಿದ್ಯಾರ್ಥಿ, ಪ್ರೇಮಿ, ಅನುಗಾಮಿ ಎಲ್ಲಾ ಹೌದಾದರೂ).  
ಯಾಕೆ ಇದನ್ನ ಹೇಳಬೇಕನ್ನಿಸಿತೆಂದರೆ, ಕನ್ನಡದಲ್ಲಿ ಇತರ ಭಾಷೆಯ ಪರಿಕಲ್ಪನೆಗೆ ಸಂವಾದಿಯಾದ ಯಾವುದೇ ಪರಿಭಾಷೆಯನ್ನು ಹುಟ್ಟುಹಾಕುವಾಗ, ಹೊಸದೊಂದು ಪದ ಕಟ್ಟುವಾಗ, ಸಂಸ್ಕೃತದ ಕಡೆಗೆ ಮುಖಮಾಡುವ ಸಂದರ್ಭವೇ ಇಂದಿಗೂ ಇದೆ. ’ಚೆನ್ನಗರ’ ಅಂತಂದಿದ್ದರೆ ತುಂಬಾ ಜನಕ್ಕೆ ಅದರ ಸಾರಾಪೂರ ಅರ್ಥ ಮನಸಿಗೆ ಬರುತ್ತಿರಲಿಲ್ಲ. ಸಮರ್ಥ ನಗರ ಅನ್ನುವ ಪದವೇ ಆ ಮಟ್ಟಿಗೆ ಜನರನ್ನು ತಲುಪಲು ಸಮರ್ಥವಾಗಿದೆ.

ಇದೇ ಮಾತನ್ನ ಮೂರ್ನಾಲ್ಕು ವರ್ಷಗಳ ಹಿಂದೊಮ್ಮೆ ನನ್ನ ಸರಣಿ ಲೇಖನದಲ್ಲಿ ಹೇಳಿದ್ದೆ. ಹೊಸ ವಿದ್ಯಮಾನಗಳು, ಹೊಸ ಸಂಭವಗಳು ಮತ್ತು ಹೊಸದಾದ ಪರಿಕಲ್ಪನೆಗಳನ್ನು ಕನ್ನಡಕ್ಕೆ ತರುವಾಗ ನಾವು ಆಶ್ರಯಿಸುವುದೂ,ಅರ್ಥಮಾಡಿಕೊಳ್ಳುವುದೂ ಸಂಸ್ಕೃತವನ್ನಲ್ಲದೆ ಕನ್ನಡವನ್ನಲ್ಲ, ಕನ್ನಡದಲ್ಲೊಮ್ಮೆ ಹೇಳಿದ್ದೇ ಆದರೆ ಹಲವಾರು ಪದಗಳು ನಮಗೆ ಅರ್ಥವೇ ಆಗದೇ ಹೋದಾವು ಎಂದಿದ್ದೆ. ಆ ಹೊತ್ತಿಗೆ ಸೌರಜ್ವಾಲೆ ಮತ್ತು ಮೇಘಸ್ಫೋಟದಂಥಾ ವಿದ್ಯಮಾನಗಳು ನಡೆಯುತ್ತಿದ್ದ ಕಾರಣ ಅದೇ ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದೆ. ಇದೇ ಸೌರಜ್ವಾಲೆಯನ್ನು ’ಬೆಂಗದಿರನುರಿ’ ಅಂತ ಬರೆದರೆ ಅರ್ಥಮಾಡಿಕೊಳ್ಳುವ ಮಂದಿಯೆಷ್ಟು ? ಹೀಗೆ ನಾನು ಬರೆದಿದ್ದ ಲೇಖನಕ್ಕೆ ಹಿಗ್ಗಾ ಮುಗ್ಗಾ ಪ್ರತಿಕ್ರಿಯೆಗಳು ಬಂದಿದ್ದವು. ಭಾಷೆಯ ಸ್ಥಿತಿಗತಿಗಳನ್ನು ತಾವು ಬೆಂಬಲಿಸುವ ಪಂಥ ಮತ್ತು ನಂಬುವ ಇತಿಹಾಸದೊಂದಿಗೆ ಬೆಸೆದು ಗಲಾಟೆ ಮಾಡುವ ಜನಗಳಿಗೆ ಉತ್ತರ ಕೊಡುವುದು ಮೂರ್ಖತನ ಎಂದು ಸುಮ್ಮನಾಗಿದ್ದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಮೊನ್ನೆ ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಕಟ್ಟುವ ಸ್ಪರ್ಧೆ ನನ್ನಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಅದರ ಫಲಿತ ಬಂದಿದೆಯಲ್ಲದೆ again  ಆ ಪದ ಪೂರ್ತಿಯಾಗಿ ಸಂಸ್ಕೃತದ್ದೇ ಆಗಿದೆ. ಸಂಸ್ಕೃತದ ಹೆಚ್ಚುಗಾರಿಕೆ ಅದು ಮತ್ತು ಕನ್ನಡದ ಕೀಳ್ತನ ಇದು ಅಂತಲ್ಲ ಇಲ್ಲಿನ ವಿಷಯ, ಬದಲಾಗಿ ಸಮಾಜದಲ್ಲಿ ಯಾವುದನ್ನು ಯಾವುದನ್ನು ಹೇಗೆ ಕಾಣಲಾಗುತ್ತದೆ ಎಂಬುದು. ಕನ್ನಡದಲ್ಲೂ ಪದ ಕಟ್ಟಬಹುದು. (ನನಗೆ ಅರಿವಿದೆ- ಈಗ ಕಟ್ಟಿದ್ದೇ ಕನ್ನಡದ್ದು, ಅವೆರಡೂ ಕನ್ನಡದ್ದೇ ಪದಗಳು ಅನ್ನುವ ವಾದವೂ ಎದ್ದುನಿಲ್ಲುತ್ತದೆ. ಆದರೆ ಅದರ ಮೂಲ ಕನ್ನಡವಲ್ಲ, ಬದಲಿಗೆ ಸಂಸ್ಕೃತ ಅನ್ನುವುದು ತಾರ್ಕಿಕ ಸತ್ಯ). ಕನ್ನಡದ ಪದಕಟ್ಟು ಲಲಿತವಾಗಿರುತ್ತದೆ, ಇಂಪಾಗಿರುತ್ತದೆ; ಸಂಸ್ಕೃತದ್ದು ಬೇರೆಯದ್ದೇ ರೀತಿ.

ಕನ್ನಡದಲ್ಲಿ ಕನ್ನಡದ್ದೇ ಪದಗಳನ್ನು ಬಳಸಿ ಪದಕಟ್ಟುವ ಸಾಧ್ಯತೆಯನ್ನೇ ನಾವು ಚಿಂತಿಸುತ್ತಿಲ್ಲ. ಮತ್ತೇನಿಲ್ಲ, ನಾವು ನಮ್ಮ ಮನಸನ್ನು ಸಿದ್ಧಗೊಳಿಸಿದ ಪರಿ ಅದು. ಹೊಸ ಪದ ಬೇಕೆಂದಕೂಡಲೇ ನಮ್ಮ ಮನಸು ಸಂಸ್ಕೃತ ಪದಗಳಕಡೆಗೇ ವಾಲುತ್ತದೆ. ಇದೊಂದು ವಿರೋಧಿಸಬೇಕಾದ ಸಂಗತಿಯಲ್ಲ, ಹಾಗಿದ್ದೂ ಚಿಂತಿಸಬೇಕಾದ ಸಂಗತಿಯೆಂದೆನಿಸಿ ಬರೆದೆ.