Wednesday, October 14, 2015

ಪುರೋಹಿತಶಾಹಿ ಮತ್ತದರ ನೈಜ ವಾರಸುದಾರರು.

’ನಾನು ಬ್ರಾಹ್ಮಣ ಜನಾಂಗವನ್ನಲ್ಲ, ಬದಲಿಗೆ ಬ್ರಾಹ್ಮಣ ಮನಃಸ್ಥಿತಿಯನ್ನು ವಿರೋಧಿಸುತ್ತೇನೆ’- ಇದು ನಮ್ಮ ಬುಜೀಸ್ ಹೇಳುವ ಸಾವಿರಾರು ಡಿಸ್ ಕ್ಲೇಮರುಗಳಲ್ಲಿ ಒಂದು. ಒಬ್ಬ ಬ್ರಾಹ್ಮಣನಾಗಿ ನಾನು ಈ ’ಬ್ರಾಹ್ಮಣ ಮನಃಸ್ಥಿ’ತಿ ಯ ಬಗ್ಗೆ ಕೆಲವೊಮ್ಮೆ ಓದಿಕೊಂಡೆ, ಕೆಲವೊಂದನ್ನು ಪರಿಪ್ರಶ್ನೆಯಿಂದ ಕೇಳಿ ತಿಳಿದುಕೊಂಡೆ, ಕೆಲವರನ್ನು ಕಂಡು ಅರ್ಥಮಾಡಿಕೊಂಡೆ. ನಮ್ಮೂರಲ್ಲಿ, ನಾನು ಹೋದಲ್ಲಿ ಬಂದಲ್ಲಿ ಜಾತ್ಯಾ ಬ್ರಾಹ್ಮಣರಾಗಿರುವವರನ್ನು ಕಂಡಾಗ ನಾನು ಶರಂಪರ ವಿರೋಧಿಸಲೇಬೇಕಾದ ಯಾವ ಅಂಶವೂ ಕಂಡಿರಲಿಲ್ಲ. ನಾನೊಬ್ಬ ಬ್ರಾಹ್ಮಣನಾದುದಕ್ಕೇ ಇದೆಲ್ಲ ಸರಿಯಿದೆಯೆಂದು ನನಗೆ ಕಾಣುತ್ತಿದೆ ಅಂತ ನನ್ನ ಮಿತ್ರರೊಬ್ಬರು ಹೇಳಿದ ಮೇಲೆ, ಬ್ರಾಹ್ಮಣ ಮನಃಸ್ಥಿತಿಯನ್ನು ಕುರಿತು ಇನ್ನೂ ಕುತೂಹಲಿಯಾಗಿ ಆ ಬಗ್ಗೆ ತಿಳಿಯಲೇ ಬೇಕೆಂದು ಹೊರಟೆ. ನನ್ನ ಅಧ್ಯಯನಕ್ಕೆ ದಕ್ಕಿದ ಬ್ರಾಹ್ಮಣ್ಯದ ಚಿಹ್ನೆಗಳೆಂದರೆ-

೧. ಬೆವರು ಸುರಿಸಿ ದುಡಿದು ಊಟಮಾಡದೆ, ಉಳಿದವರು ದುಡಿದಿದ್ದನ್ನು ಉಣ್ಣುವಾಗ ಬೆವರು ಸುರಿಸುವುದು.
೨. ತನ್ನ ಪೂಜಾಪದ್ಧತಿಯನ್ನು ಮೂಲನಿವಾಸಿಗಳ (!) ಮೇಲೆ ಹೇರುವುದು
೩. ಸರ್ವದಾ ರಾಜಾಶ್ರಯದಲ್ಲಿದ್ದು ತನಗೆ ಬೇಕಾದ ಸವಲತ್ತುಗಳನ್ನು ಪಡೆಯುವುದು.
೪.ಉಳಿದ ವರ್ಗಗಳನ್ನು ಬುದ್ಧಿಹೀನರಂತೆಯೂ, ತಮ್ಮ ಅಡಿಯಾಳುಗಳಂತೆಯೂ ಕಾಣುವುದು. ಜ್ಞಾನವೆಲ್ಲ ತನ್ನದೇ ಆಸ್ತಿಯೆಂಬಂತೆ ನೋಡುವುದು.
೫. ಆಳುವ ವರ್ಗದ ಜೊತೆಗೆ ಸೇರಿಕೊಂಡು ಆಡಳಿತ ಯಂತ್ರವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದು.

ಇನ್ನೂ ಕೆಲವಾರು ಲಕ್ಷಣಗಳಿವೆ, ಆದರೆ ಸಂದರ್ಭಕ್ಕೆ ಹೊಂದುವಂಥದನ್ನು ಮಾತ್ರ ಆಯ್ದುಕೊಳ್ಳುತ್ತಿದ್ದೇನೆ. ಈ ಐದು ಲಕ್ಷಣಗಳನ್ನು ಎಲ್ಲೇ ಕಂಡರೂ ಅಲ್ಲಿ ಪುರೋಹಿತಶಾಹಿತ್ವ ಇದೆಯೆಂದು ಗುಮಾನಿಪಡಬಹುದು ಅಂತ ಈ ಲಕ್ಷಣಗಳ ಉಪದೇಶಕರು ನನಗೆ ಹೇಳಿದ್ದರು. ನಮ್ಮಲ್ಲಿ ಬೀಜಮಂತ್ರಗಳನ್ನು ಉಪದೇಶಿಸುವಾಗ ಕೆಲವು ನಿಯಮಗಳನ್ನು ಹೇಳಿಕೊಡುವ ಕ್ರಮವಿಲ್ಲವೆ? ಹಾಗೆಯೇ ಇದೂ ಅಂತ ಅಂದುಕೊಂಡೆ.

ಊರಗೆ ಬಂದು ನೋಡಿದೆ- ಶಿವರಾಮಣ್ಣ, ಗೋಪಾಲ್ ದೊಡ್ಡಪ್ಪ, ನನ್ನಪ್ಪ, ಆಯಿ, ಚಂದ್ರಣ್ಣ, ಅನಂತ್ ದೊಡ್ಡಪ್ಪ, ಮೇಲ್ನ್ಮನೆ ದೊಡ್ಡಪ್ಪ- ಹೇಳುತ್ತ ಹೋದರೆ ಇನ್ನೂ ನೂರಾರು ಜನರು ಎಲ್ಲಾ ನನ್ನದೇ ಕುಲದವರು, ಹುಟ್ಟಾ ಬ್ರಾಹ್ಮಣರು- ಗದ್ದೆಯಲ್ಲಿ, ತೋಟದಲ್ಲಿ , ದನದ ಕೊಟ್ಟಿಗೆಯಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಬೆಟ್ಟದಲ್ಲಿ , ಹೊಳೆಯಲ್ಲಿ ಹೀಗೆ ಎಲ್ಲ ಕಡೆಗೂ ಕಾಲಕಾಲಕ್ಕೆ ದಣಿದು ಹೋಗುವಷ್ಟು ಮೈಮುರಿದು ಕೆಲಸ ಮಾಡುತ್ತಿದ್ದರು. ಮತ್ತು ಅವರಿಗೂ ಬೆವರು ಬಂದಿದ್ದನ್ನು ಗಮನಿಸಿದೆ. ಡಾಂಬರೆದ್ದು ಹೋದ ಊರ ಹಾದಿಯನ್ನು ರಿಪೇರಿ ಮಾಡುವವರೂ, ವಿದ್ಯುತ್ತು ಆಗೀಗ ಹರಿಯುವ ಸದಾ ಹರಿದರಿದು ಬೀಳುವ ಕರೆಂಟ್ ಲೈನನ್ನು ರಿಪೇರಿ ಮಾಡುವವರೂ ಬ್ರಾಹ್ಮಣರೇ ಆಗಿದ್ದರು. ಮತ್ತು ಆಗೆಲ್ಲ ಅವರಿಗೆ ಬೆವರು ಬಂದಿದ್ದನ್ನು ನಾನು ನೋಡಿದ್ದೇನೆ! ಹಾ, ಊಟಮಾಡುವಾಗಲೂ ಬೆವರುತ್ತಿದ್ದದು ಖರೆ.  

ಸಿದ್ಧಿರಾಮ, ಶಣ್ಯಾ ಸಿದ್ಧಿ, ಈಗೀಗಿನ ರವಿ ಸಿದ್ಧಿ ಎಲ್ಲಾರೂ ಹತ್ತಿರದವರೇ ಆದ್ದರಿಂದ ಅವರೆಲ್ಲ ಕೆಲಸ ಮಾಡುವಾಗ ನೋಡಿದೆ, ಅವರೂ ಬೆವರುತ್ತಾರೆ. ನಮ್ಮನೆ ಜಗುಲಿಯಮೇಲೆ ಊಟ ಮಾಡುವಾಗಲೂ ಅವರು ಬೆವರುತ್ತಾರೆ. ಮತ್ತು ಅವರು ಬ್ರಾಹ್ಮಣರಲ್ಲ! ಎಂಬಲ್ಲಿಗೆ, ಬೆವರು ಸುರಿಸಿ ದುಡಿಯದೆ ತಿನ್ನುವ ಮೊದಲನೆಯ ಲಕ್ಷಣ ನಮ್ಮೂರಲ್ಲಾಗಲೀ, ಯಾವುದೇ ಸಾಮಾನ್ಯ ಜನರ ಸಮಾಜದಲ್ಲಾಗಲೀ ಕಾಣಸಿಗದೆ ಕಂಗಾಲಾದೆ. ಸರಿಯಪ್ಪ ಬ್ರಾಹ್ಮಣ್ಯ ಅನ್ನೋದು ಇಲ್ಲ ಅಂತ ಮೊದಲನೆಯ ಲಕ್ಷಣವನ್ನು ಕೈಬಿಡೋಣ ಅಂತಿದ್ದೆ- ಅಷ್ಟರಲ್ಲಿ,
ಅದಾಗತಾನೇ ಕರೆಂಟು ಬಂದು ನಮ್ಮನೆ ಟೀವಿ ಕಣ್ಬಿಟ್ಟಾಗ, ಅದರಲ್ಲಿ ಬರುತ್ತಿದ್ದ ನ್ಯೂಸಲ್ಲಿ ಯಾರೋ -ಬಗವಾನ ಅಂತೆ- ಮಾತಾಡುತ್ತಿದ್ದ. ಅವನ ಬಗಲಲ್ಲಿ ಪೋಲೀಸರು ಬಂದೂಕು ಹಿಡಿದು ಕಾವಲು ನಿಂತಿದ್ದರು, ರಕ್ಷಣೆಗಂತೆ! ಹಿಂದೆ ಮುಂದೆಲ್ಲ ವಿಚಾರಿಸಲಾಗಿ ತಿಳಿದದ್ದೇನಂದರೆ, ಅವನೊಬ್ಬನೇ ಅಲ್ಲದೆ ಅದೊಂದು ಸಂತಾನವೇ ದೇಶಾದ್ಯಂತ ಇದೆಯೆಂದೂ, ಅವರೆಂದೆಂದಿಗೂ ವಿವಿಗಳ ತಂಪು ಕೂಪಗಳಲ್ಲಿ ಕುಳಿತು ತಮ್ಮ ಅಧ್ಯಯನದ ಕತ್ತ ಹೊಸೆದು ಹೀಗೆ ಆಗಾಗ ಹೊರಗಡೆ ಬಿಸಿಲಲ್ಲಿ ಕಾಣಿಸಿಕೊಂಡು ಕತ್ತದ ಹಗ್ಗ ಬಿಕರಿ ಮಾಡಿ ಮಾಯವಾಗುತ್ತಾರೆಂದೂ ತಿಳಿಯಿತು. ಬಹುಶಃ ಅವರಿಗೂ ಬೆವರು ಬರುತ್ತದೆಯೆಂದೇ ನಾನು ಅಂದುಕೊಂಡಿದ್ದೆ. ಆದರೆ ಈ ತಳಿಯ ಜನಗಳು ಬೆವರು ಬರದಂತೆ ಏಸಿ ಯಲ್ಲಿ ಕುಳಿತು ಕಥೆ ಕಟ್ಟುತ್ತಾರೆಂದು ಗೊತ್ತಾಯಿತು.

ಬೆವರು ಸುರಿಸಿ ದುಡಿಯುವ ನನ್ನ ಜನಗಳ ವಾರ್ಷಿಕ ಉತ್ಪನ್ನ ಅಬ್ಬಬ್ಬ ಅಂದರೆ ಎರಡು ಲಕ್ಷ. ಅದರಲ್ಲಿ ಒಂದು ಪೂರ್ತಿ ಸಂಸಾರ ಸಾಗಬೇಕು. ಮನುಷ್ಯರದು ಮಾತ್ರವಲ್ಲ; ದನ ಕರುಗಳದ್ದು, ತೋಟದಲ್ಲಿರುವ ಅಡಕೆ ತೆಂಗು ಮರಗಿಡಗಳದ್ದು. ಶೀಕು ತಾಪಾತ್ರೆ ಎಲ್ಲ ನೀಗಬೇಕು, ಸಾಲದ ಬಡ್ಡಿಗಾಗಬೇಕು, ಮದುವೆ ಮುಂಜಿಗೆ ಖರ್ಚಿಗೆ ಬೇಕು- ಎಲ್ಲಕ್ಕೂ ಅದೇ ಎರಡು ಲಕ್ಷದಲ್ಲಾಗಬೇಕು. ಬೆವರು ಸುರಿಸಿ ದುಡಿಯುವವರದ್ದೇ ಕಥೆ ಹಂಗಾದರೆ ಬೆವರು ಸುರಿಸದೆ ಇದ್ದವರದ್ದು ಅದಿನ್ನೆಷ್ಟು ಕಷ್ಟ ಅಲ್ಲವಾ! ಅಂದುಕೊಳ್ಳುತ್ತಿರುವಾಗಲೇ ಯಾರೋ ಅಂದರು “ಪೆಂಗ, ಆ ತಳಿಯ ವಿವಿ ಮನುಷ್ಯರ ಆದಾಯ ತಿಂಗಳಿಗೆ ಹತ್ರ ಹತ್ರ ಒಂದೂಕಾಲು ಲಕ್ಷ, ಜೊತೆಗೆ ಬಾಕಿ ಎಲ್ಲ ಸೌಕರ್ಯ” ಅಂತ!. ಅರೇ ಇಸ್ಕಿ! ಹೋಗಲಿ, ಬ್ರಾಹ್ಮಣ್ಯದ ಗುರುತು ಈ ವಿವಿ ಪ್ರೊಫೆಸರುಗಳಲ್ಲಿ ಕಂಡಿತಲ್ಲ- ಮೊದಲನೆಯ ಲಕ್ಷಣ ಸರಿಯಾಗಿ ಹೊಂದುತ್ತದೆ ಅಂದುಕೊಂಡೆ.

ಸರಿ ಎರಡನೆಯ ಲಕ್ಷಣ ಮೂಲನಿವಾಸಿಗಳ ಪೂಜೆ ವಿಚಾರ. ನನ್ನ ಜನಗಳು ಇನ್ನೊಬ್ಬರ ಪೂಜೆಯ ವಿಚಾರವಾಗಿ ತಲೆ ಕೆಡಿಸಿಕೊಂಡಿದ್ದನ್ನಾಗಲೀ, ಹೇರಿದ್ದನ್ನಾಗಲೀ ನಾನು ಕಂಡಿಲ್ಲ. ಅಸಲಿಗೆ ಈ ಮೂಲನಿವಾಸಿ, ಪರದೇಸಿ ಅನ್ನೋದೆಲ್ಲ ಸಮಾಜದ ಸಾಮಾನ್ಯ ಜನಗಳಿಗೆ ಗೊತ್ತೂ ಇಲ್ಲ. ನನ್ನ ವೈದಿಕ ಮಿತ್ರನಾದ ಮೇಲ್ಪಾಲ್ ರಾಮಣ್ಣ ಒಂದಿನ ಹೇಳುತ್ತಿದ್ದ, ಅವ ಗೋವೆಗೆ ಹೋದಾಗ, ಮುಂಬೈ ಗೆ ಹೋದಾಗ, ಈಗಿತ್ಲಾಗೆ ಬೇರ್ ಬೇರೆ ಜಾತಿಯವರ ಮನೆಗೆ ಕಾರ್ಯಕ್ರಮಕ್ಕೆ ಅಂತ ಹೋದಾಗ ಅಲ್ಲಲ್ಲಿನ ರೀತಿಯಲ್ಲೇ ಪೂಜೆಯಂತೆ. ಸೋ, ಹೇರುವುದು ಗೀರುವುದೆಲ್ಲ ನಡೆಯೋದಿಲ್ಲ ಅಂದ.

ಕರೆಂಟು ಬಂದು ಟಿವಿ ಮತ್ತೆ ಶುರುವಾಯ್ತು. ಇನ್ನೊಂದಿಷ್ಟು ವಿ.ವಿ.ಯ ಹಾಲಿ ಮತ್ತು ಮಾಜಿ ಪ್ರೊಫೆಸರುಗಳು ಮು.ಮಂ. ಬಳಿಗೆ ನಿಯೋಗ ಕಟ್ಟಿಕೊಂಡು ಹೋದ ಸುದ್ದಿ ಬರುತ್ತಿತ್ತು. ಅದೇನೋ ಮೂಢನಂಬಿಕೆ ವಿರೋಧಿ ಕಾಯ್ದೆ ತರಕ್ಕೆ ಅಂತ ಒಂದಪಾ ಒತ್ತಡ ತರಣ ಅಂತ ಅವ್ರೆಲ್ಲ ಅಲ್ಲಿಗೋಗಿದ್ದು ಅಂತ ನ್ಯೂಸ್ ಓದುತ್ತಿದ್ದ ಅಕ್ಕ ಹೇಳುತ್ತಿದ್ದಳು. ಹಂಗಂದ್ರೇನು ಅಂತ ಯಾರನ್ನೋ ಕೇಳಿದೆ, ಅವರು ಹೇಳಿದ್ರು “ನೋಡಪ್ಪ, ಈ ಪಟಾಲಮ್ಮು ನಂಬಿದ್ದು ಮಾತ್ರ ನಂಬಿಕೆ, ಉಳಿದದ್ದೆಲ್ಲ ಮೂಢನಂಬಿಕೆ ಅಡಿಯಲ್ಲಿ ಬರುತ್ತೆ. ಅವ್ರ ನಂಬಿಕೆಗಳನ್ನು ಮಾತ್ರ ಫಾಲೋ ಮಾಡ್ಬೇಕು ಅನ್ನೋ ಕಾಯ್ದೆ ತರಕ್ಕೆ ಹಿಂಗೆ ನೇತಾಡ್ತಾ ಇದಾರೆ. ಜನ ಎಲ್ಲ ಇನ್ಮುಂದೆ ಇವ್ರೇಳಿದ್ದನ್ನೇ ಮಾಡ್ಬೇಕು ಅಷ್ಟೆ.” ಓಹೋ, ಪುರೋಹಿತಶಾಹಿಯ ಎರಡನೆಯ ಲಕ್ಷಣ ತಮ್ಮ ಪದ್ಧತಿಗಳನ್ನು ಉಳಿದವರ ಮೇಲೆ ಹೇರುವ ಪ್ರಯತ್ನದ ಜನಗಳು ಇಲ್ಲಿದಾರೆ, ನಮ್ ಗುರುಗಳು ಹೇಳಿದ ಲಕ್ಷಣ ಸುಳ್ಳಲ್ಲ ಅಂತ ತಿಳಿದು ಖುಷಿಯಾಯ್ತು!

ಮೊನ್ನೆ ಮಾಬ್ಲೇಶ್ವರ ಯಾವ್ದೋ ಕೆಲಸಕ್ಕೆ ಬೇಕು ಅಂತ ರಿಕಾರ್ಡುತಾರ್ ತೆಗೆಸಲು ಅಂಕೋಲಕ್ಕೆ ಹೋಗಿದ್ದ. ಅದೇನೋ ರಗ್ಳೆ ಮಾಡಿದ್ರು, ಸಮಯಕ್ಕೆ ಸರಿಯಾಗಿ ಕೊಡಲಿಲ್ಲ ಅಂದ. ತನ್ನ ಕೈಯಲ್ಲಾಗಲೀ, ತನ್ನವರ ಕೈಯಲ್ಲಾಗಲೀ ಸಣ್ಣದೊಂದು ಕಾಗದಪತ್ರದ ಕೆಲಸವನ್ನಾದರೂ ಸರಾಗವಾಗಿ ಮಾಡಲು ಬೇಕಾದ ಸರಕಾರೀ ಪ್ರಭಾವ ಇಲ್ಲದಿರುವುದಕ್ಕೆ ಬೇಜಾರು ಮಾಡಿಕೊಂಡ. ಸರಕಾರ ನಮ್ಮನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದು ಅಂತ ನನಗೂ ಕಿವಿ ಮಾತು ಹೇಳಿದ. ಪುರೋಹಿತಶಾಹಿ ಅಥ್ವಾ ಬ್ರಾಹ್ಮಣ್ಯದ ಮೂರನೆಯ ಲಕ್ಷಣ ನಮ್ಮಲ್ಲಿ ಇಲ್ಲದಿರುವುದಕ್ಕೆ ಖುಷಿಪಡಬೇಕೋ, ಕೆಲಸ ಆಗದಿರುವುದಕ್ಕೆ ಬೇಜಾರು ಮಾಡಿಕೊಳ್ಳಬೇಕೋ ತಿಳಿಯಲಿಲ್ಲ. ಸುಮ್ಮನಾದೆ.

ಕರೆಂಟು ಬಂದು ಮತ್ತೆ ಟಿವಿ ಶುರುವಾಯ್ತು.  ಮತ್ತದೇ ಬಗವಾನ ಅನ್ನುವವನ ಸುದ್ದಿ ಬರುತ್ತಿತ್ತು, ಅವನ ಮೇಲೆ ಕೇಸ್ ಆಗಿದೆಯಂತೆ, ಒಂದೆರಡಲ್ಲ ಮೂವತ್ತೈದು! ಅರೆ, ಆರಾಮಾಗಿ ಓಡಾಡ್ಕಂಡಿದಾನಲ್ಲ ಅಂದ್ರೆ, ಅದೆಲ್ಲ ಸರಕಾರೀ ಪ್ರಭಾವ ಕಣೋ ಅಂತ ಯಾರೋ ತಿಳಿ ಹೇಳಿದ್ರು. ಅಗೈನ್, ಅವನೊಬ್ಬನೇ ಅಲ್ಲವಂತೆ ಅವನಹಾಗೆಯೇ ಕೇಸ್ ಬಿದ್ದಿದ್ದರೂ ಆರಾಮಕ್ಕೆ ಅಡ್ಡಾಡಿಕೊಂಡಿರೋರು ಇನ್ನೂ ಇದಾರೆ ಅಂತ ಸುಮಾರು ಜನ ಹೇಳಿದ್ರು. ಅದೆಲ್ಲ ಹೇಗೆ ಅಂತ ಕೇಳಿದ್ರೆ ಸರಕಾರೀ ಪ್ರಭಾವ ಅಂತ ಅದೇ ಉತ್ರ ಕೊಟ್ರಪ. ಚಾನೆಲ್ ಬದಲಾಯಿಸಿದೆ, ಒಬ್ಬ ಉರಿಮುಖದ ಮನುಷ್ಯ ಮತ್ತೊಬ್ಬ ತಿಳಿ ನಗೆಯ ಹುಡುಗನ ಮಧ್ಯೆ ಯಾವುದೋ ಚರ್ಚೆ ನಡೆಯುತ್ತಿತ್ತು. ಆ ಉರಿಮುಖದವ ಸಲಹೆಗಾರನಂತೆ, ಮತ್ತು ಆ ಹುಡುಗ ಒಬ್ಬ ಸಾಮಾನ್ಯನಂತೆ- ನಮ್ಮ ನಿಮ್ಮಂತೆ. ಸಲಹೆಗಾರ ಅನ್ನಿಸಿಕೊಂಡವ ಮಾತೇ ಆಡಲು ಕೊಡದೆ ಬಗಾ ಬಗಾ ಅನ್ನುತ್ತ ಸಮಯವನ್ನು ನುಂಗಿ ನೀರ್ಕುಡಿಯುತ್ತಿದ್ದ. ಮಾತಾಡುವ ಬಾಯಿಗಳನ್ನೆಲ್ಲ ಹೊಲಿದು ಹಾಕಲು ಪೋಲಿಸ್ ಕೇಸು, ಸರಕಾರಿ ಪ್ರಭಾವ, ತನ್ನ ಅಧಿಕಾರ ಅಂತೆಲ್ಲ ಬಳಸುತ್ತೇನೆ ಅನ್ನುತ್ತಿದ್ದ. ಮಧ್ಯೆ ಮಧ್ಯೆ ಷಂಡ ಷಂಡ ಅನ್ನುತ್ತಿದ್ದ. ಕೊನೆಗೆ ಮಾಬ್ಲೇಶ್ವರನೇ ಹೇಳಿದ “ತನ್ನ ವಿಚಾರ ಮಾತ್ರ ಸತ್ಯ ಉಳಿದದ್ದೆಲ್ಲ ಬೋಗಸ್, ಉಳಿದ ವಿಚಾರಗಳೇ ಇರಬಾರದು ಸತ್ತೋಗ್ಬೇಕು ಅಂತಾರೆ ಇವರೆಲ್ಲ. ಪ್ರಭಾವ ಬಳಸಿ ಜೈಲಿಗಾಕ್ತಿದಾರೆ ಮಾತಾಡಿದವರನ್ನೆಲ್ಲ” ಅಂತ. ಅಲ್ಲಿಗೆ ನಾಲ್ಕನೆಯ ಮತ್ತು ಐದನೆಯ ಲಕ್ಷಣವೂ ಈ ಜನಕ್ಕೆ ಹೊಂದಾಣಿಕೆಯಾಗತ್ತೆ ಅಂದಂಗಾಯ್ತು. ಪುರೋಹಿತಶಾಹಿ ಎಂಬುದು ಇದೆಯೆಂದೂ, ಅದು ವಿವಿ ಬುಜೀಸ್ ಮತ್ತು ಆಧಿಕಾರಿಕ ಹುದ್ದೆಗಳ ಜನಗಳಲ್ಲಿ ಬೇಜಾನ್ ಇದೆಯೆಂದೂ ಪಕ್ಕಾ ಆಯ್ತು.

ತಲೆ ಎಲ್ಲ ಕೆಟ್ಟಂತಾಗಿ ಮೊನ್ನೆ ಊರಿಗೋದಾಗ ಅಜ್ಜನ ಶ್ರಾದ್ಧದಲ್ಲಿ ಜನ ಎಲ್ಲ ನಮ್ಮನೆಯಲ್ಲಿ ಸೇರಿದಾಗ- ಈ ಮೂಢನಂಬಿಕೆ ನಿಷೇಧ, ಮಹಿಷಾಸುರನೇ ದೇವರೆಂಬ ಹೊಸ ಪುರಾಣ, ರಾಮನಿಗೆ ಅಪ್ಪನಿಲ್ಲದಿರುವ ಸಂಗತಿ, ಭಗವದ್ಗೀತೆ ಸುಟ್ಟೇ ಬಿಟ್ರೆ ಆಗುವ ಪರಿಣಾಮ- ಅಂತೆಲ್ಲ ವಿಚಾರ ಎತ್ತಿದೆ. ನ್ಯೂಸ್ ಪೇಪರು ಓದುವ, ಟಿವಿ ನೋಡುವ ಆ ಜನಗಳಿಗೆ ಇದೆಲ್ಲ ಸುದ್ದಿ ಗೊತ್ತೇ ಇದ್ದಂತಿತ್ತು. ಹಾಗಿದ್ದೂ ಅವರು ಚಿಂತಿತರಾಗಿರಲಿಲ್ಲ. ಬಹುಶಃ ಬೆವರು ಸುರಿಸದೆ ಸರ್ಕಾರದ ಬೊಕ್ಕಸಕ್ಕೆ ಹೆಗ್ಗಣದಂತೆ ತೂತು ಮಾಡಿ ಬದುಕುವ ಜನಗಳ ಬಗ್ಗೆ ಈ ಶ್ರಮಿಕರಿಗೆ ಹೇಸಿಗೆ ಇತ್ತೆಂದು ಕಾಣುತ್ತದೆ. ಅನಗತ್ಯ ಹೇಸಿಗೆ ಮುಟ್ಟಲು ನನ್ನ ಜನ ಎಳಸದಿರುವುದು ಹೌದು.


ಕರೆಂಟ್ ಹೋಯ್ತು, ಅಪ್ಪ ದೀಪ ಹಚ್ಚುವಂತೆ ನನಗೆ ಹೇಳಿದ. ದೀಪಕ್ಕೆ ಸೀಮೆಣ್ಣೆ ಇರಲಿಲ್ಲ. ಎಣ್ಣೆ  ಹಾಕಲೆಂದು ಹಳೆಯ ಕಾಲದ ಸೀಮೆಣ್ಣೆ ತಂಬಿಗೆಯನ್ನು ಬಾಗಿಸಿದೆ, ಕೊಂಚ ಚೆಲ್ಲಿತು. ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯ ದುರ್ವಾಸನೆಗಿಂತ ಸೀಮೆಣ್ಣೆಯ ವಾಸನೆ ಆಪ್ಯಾಯವಾಗಿತ್ತು!