Monday, February 29, 2016

ಬರುವಾಗ ಚಿಂತನ ಭಗೀರಥರಾಗಿ ಬನ್ನಿ


ನಾಳೆಯಿಂದ ಇಪ್ಪತ್ತು ದಿನಗಳ ಜ್ಞಾನಸತ್ರವೊಂದು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಅಗರ್ತಲಾ (ಗಣತಂತ್ರ ಭಾರತದ ತ್ರಿಪುರಾ ರಾಜ್ಯದ ರಾಜಧಾನಿ) ಶಾಖೆಯಲ್ಲಿ ನಡೆಯಲಿಕ್ಕಿದೆ. ಮಾಸವ್ಯಾಪೀ ಸತ್ರಗಳು ಈ ಹಿಂದೆಯೂ ಸಾಕಷ್ಟು ನಡೆದಿವೆಯಾದರೂ ಇದೀಗ ನಡೆಯುತ್ತಿರುವುದು ಅದೆಲ್ಲಕ್ಕಿಂತ ಭಿನ್ನವಾದ್ದು ಮತ್ತು ಭವಿಷ್ಯದ ದೃಷ್ಟಿಯಿಂದ ಅವೆಲ್ಲಕ್ಕಿಂತ ಬಲು ಮುಖ್ಯವಾದ್ದು.

ಪಾರಂಪರಿಕ ಶಾಸ್ತ್ರಾಧ್ಯಯನವನ್ನು ಪೋಷಿಸಿಕೊಂಡು ಬರುತ್ತಿರುವ ಮಹತ್ತರ ಸರ್ವಕಾರೀಯ ಮಾನಿತ ವಿಶ್ವವಿದ್ಯಾಲಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ. ತನ್ನ ಅಡಿಯಲ್ಲಿ ಭಾರತದಾದ್ಯಂತ ಹನ್ನೊಂದು ಶಾಖೆಗಳು, ಸುಮಾರು ಇಪ್ಪತ್ತೈದು ಸಂಸ್ಕೃತ ಮಹಾವಿದ್ಯಾಲಯಗಳನ್ನು ಒಳಗೊಂಡು ಸಾಗುತ್ತಿದೆ. ರಾಷ್ಟ್ರಿಯ ಮಟ್ಟದಲ್ಲಿ ಸಂಸ್ಕೃತದ ವಕ್ತಾರನಂತೆ ನಿಲ್ಲುವ ಬೃಹತ್ ವ್ಯವಸ್ಥೆ ಸಂಸ್ಥಾನವೆಂದರೆ. ಸಂಪನ್ಮೂಲಗಳ ಕೊರತೆಯ ಸರ್ವೇ ಸಾಮಾನ್ಯ ಗ್ರಹಚಾರದಾಚೆಗೂ ವಿದ್ವತ್ತೆಯಲ್ಲಿ ಘನವಾದ್ದನ್ನು ಕೊಡುವ ವಿಶ್ವಾಸಾರ್ಹ ವಿವಿ ಅದು.

ಭಾರತೀಯ ಚಿಂತನಪರಂಪರೆಯ ಮೂಲಭೂತವಾದ ಎರಡು ಸಂಗತಿಗಳು ಪೂರ್ವಪಕ್ಷ ಮತ್ತು ಸಿದ್ಧಾಂತ. ಮೊದಲನೆಯದು ಪ್ರಶ್ನೆಯನ್ನು ಕೇಳುವ ಪಕ್ಷ ಮತ್ತಿನ್ನೊಂದು ಅದಕ್ಕೆ ಸಮಾಧಾನ ಹೇಳುವ ಪಕ್ಷ. ನಿಂತನೀರಾಗದೆ ನಿರಂತರವಾಗಿ ಹೊಸ ಪ್ರಶ್ನೆಗಳನ್ನು ಮತ್ತು ಅದಕ್ಕೆ ಸಮಂಜಸವಾದ ಉತ್ತರಗಳನ್ನು ಹುಡುಕುತ್ತ ನಮ್ಮ ಶಾಸ್ತ್ರಪರಂಪರೆಯು ಹರಿದು ಬಂದಿದೆಯಷ್ಟೆ. ಆ ಪರಂಪರೆಯೇ ನಮ್ಮ ಸಿದ್ಧಾಂತಗಳನ್ನು ಉಳಿಸಿದೆ ಮತ್ತು ಇನ್ನೊಬ್ಬರದನ್ನೂ ಉಳಿಯಗೊಟ್ಟಿದೆ. (ಇವತ್ತು ಭಾರತವನ್ನು ಅಸಹಿಷ್ಣು ಎನ್ನುವವರು ಇತಿಹಾಸದುದ್ದಕ್ಕೂ ಒಮ್ಮೆ ಕಣ್ಣಾಡಿಸಿ ಬರಬೇಕು. ಚಿಂತನೆ ಮತ್ತು ಬದುಕು ಎರಡರಲ್ಲೂ ನಾವೆಷ್ಟು ಮುಕ್ತರಾಗಿದ್ದೆವು/ ಇದ್ದೇವೆ ಎಂಬುದು ಆಗ ತಿಳಿದೀತು). ಆದರೆ ವಸಾಹತೂತ್ತರ ಭಾರತಕ್ಕೆ ಬಡಿದ ಅಪ್ರಜ್ಞೆಯ ಗುಂಗು ಇನ್ನೂ ಪೂರ್ತಿಯಾಗಿ ಇಳಿದಿಲ್ಲ. ನಾವೆಂಥಾ ಹಂತದಲ್ಲಿದ್ದೇವೆ ಅಂದರೆ ನಮ್ಮನ್ನು ಪ್ರಶ್ನಿಸುವವರನ್ನು ಪ್ರತಿಪ್ರಶ್ನೆ ಮಾಡುವ ಛಾತಿಯೇ ನಮ್ಮಲ್ಲಿ ಮಾಯವಾಗಿ ಹೋಗಿದೆ. ವಾದ ಮಾಡುವುದನ್ನೂ ಅದೆಷ್ಟರಮಟ್ಟಿಗೆ ಮರೆತುಕೊಂಡಿದ್ದೇವೆ ಅಂದರೆ ನಮಗೆ ಉದಾರತೆ ಮತ್ತು ಹೇಡಿತನಗಳ ಮಧ್ಯೆ ಏನೊಂದೂ ವ್ಯತ್ಯಾಸ ಕಾಣದೆ ಹೇಡಿತನವನ್ನೇ ಮಾನವೀಯತೆಯ ಹೆಸರಲ್ಲಿ ಅಪ್ಪಲು ಮುಂದಾಗಿದ್ದೇವೆ. ನಮ್ಮ ಕೆಲವು ಉದ್ದಾಮ ಮಾಧ್ಯಮ ಬೃಹಸ್ಪತಿಗಳಂತೂ ಭಾರತೀಯವಾದ್ದೆಲ್ಲವನ್ನೂ ಮೂರನೆಯ ದರ್ಜೆಯ ಸಂಗತಿಯಂತೆ ಬಗೆದು ಫರ್ಮಾನು ಹೊರಡಿಸುವ ಕೆಲಸದಲ್ಲಿ ಮಗ್ನವಾಗಿದ್ದಾರೆ. ಉಳಿದ ವಿವಿಗಳು ಈ ರೋಗದ ಪರಿಹಾರಕ್ಕೆ ಎಷ್ಟು ಮಾತ್ರ ಸಹಕರಿಸಿಯಾವು ಎನ್ನುವುದು ಬಗೆಹರಿಯದ ಪ್ರಶ್ನೆ; ಯಾಕೆಂದರೆ ಭಾರತದೊಳಗೇ ಇದ್ದು ಇಲ್ಲಿನ ಸಮಗ್ರತೆಗೆ ಸವಾಲೆಸೆಯುವ ಉದ್ಧಟತನಕ್ಕೆ ಅವು ಮುಂದಾಗುತ್ತಿವೆ. ಆಶಾಕಿರಣವೆಂದರೆ ಆ ಬಗೆಯ ಅತಿರೇಕಗಳನ್ನು ತನ್ನೊಳಕ್ಕೆ ಬಿಟ್ಟುಕೊಳ್ಳದ ಪಾರಂಪರಿಕ ವಿದ್ಯಾತಾಣಗಳು. ಅಂಥಾದ್ದೊಂದು ಹೆಸರು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ.

ನಾಳೆಯಿಂದ ನಡೆಯಲಿಕ್ಕಿರುವ ಸತ್ರದ ಮುಖ್ಯ ವಿಷಯವೇ  ಪ್ರಶ್ನೆಮಾಡುವ ನಮ್ಮ ಪರಂಪರೆ ಮತ್ತು ಅದಕ್ಕೆ ಉತ್ತರಕೊಡುವ ಕಲೆಯ ಕುರಿತಾದ್ದು. ವಾದ ಮಂಡನೆ, ವಾದಕ್ಕೆ ಇರಬೇಕಾದ ಸಂಯಮನಗಳೇನು, ನಿಯಮನಗಳೇನು, ಪ್ರತಿಪಕ್ಷಿಯನ್ನು ನಿಗ್ರಹಿಸುವ ವಾದ ತಂತ್ರವೇನು ಎಂಬೆಲ್ಲ ಸಂಗೋಷ್ಠಿಗಳು ಅಲ್ಲಿ ನಡೆಯಲಿಕ್ಕಿವೆ. ಇದು ದೂರದೃಷ್ಟಿಯುಳ್ಳ ವಿದ್ವಾಂಸರ ಕಲ್ಪನೆಯ ಕೂಸು ಎನ್ನಲಡ್ಡಿಯಿಲ್ಲ. ಎಡಪಂಥದ ಅತಿರೇಕಗಳಿಗೆ ಜಾಗತಿಕ ಮಟ್ಟದಲ್ಲಿ ಸಮರ್ಥ ಉತ್ತರ ಕೊಡಬಲ್ಲ ವಿಚಾರ ಸನ್ನದ್ಧ ಪಾರಂಪರಿಕ ಯುವ ವಿದ್ವಾಂಸರ ಪಡೆಯೊಂದನ್ನು ಕಟ್ಟುವ ಕನಸೊಂದು ಇಲ್ಲಿದೆ. ಅಭ್ಯರ್ಥಿಗಳಾಗಿ ಅಲ್ಲಿ ಭಾಗವಹಿಸುತ್ತಿರುವರೆಲ್ಲ ಭಾರತದ ಎಲ್ಲ ರಾಜ್ಯಗಳಿಂದ ಆಯ್ಕೆಯಾದ ಯುವ ಶಾಸ್ತ್ರವೇತ್ತರು. ಅವರ ಹೆಗಲಮೇಲೆ ಪರಂಪರೆಯ ಜವಾಬ್ದಾರಿಯಿದೆ. ಅದರ ಅರಿವು ಮೂಡಿಸುವ ಸತ್ರವೇ ನಾಳೆಯಿಂದ ಆರಂಭವಾಗಲಿಕ್ಕಿರುವುದು.

ಇಷ್ಟೆಲ್ಲ ಯಾಕೆ ಮಾಡಬೇಕು? ನಾವೇಕೆ ಪ್ರಶ್ನೆ ಕೇಳಬೇಕು ಅಥವಾ ಯಾರಿಗಾದರೂ ಉತ್ತರಿಸಬೇಕು?- ಅನ್ನುವ ಪ್ರಶ್ನೆಯಿರುವವರು ರಾಜೀವ್ ಮಲ್ಹೋತ್ರಾ ರವರ ’ದಿ ಬ್ಯಾಟಲ್ ಫರ್ ಸಂಸ್ಕೃತ್’ ಪುಸ್ತಕವನ್ನೊಮ್ಮೆ ಓದುವುದು ಅಗತ್ಯ. ಪ್ರಶ್ನೆ ಕೇಳುವುದು ಮತ್ತು ಉತ್ತರ ಕೊಡುವುದು ಅವಶ್ಯವಾಗಿಯೂ ನಮ್ಮಿಂದ ಆಗಲೇ ಬೇಕಾದ ಸಧ್ಯದ ಜರೂರ್ ಕಾರ್ಯಗಳು. ನಾವಿನ್ನೂ ನಿದ್ರೆಯಲ್ಲಿದ್ದೇವೆ ಅನ್ನುವುದದನ್ನು ಅರ್ಥಮಾಡಿಸುವ ಪುಸ್ತಕ ಅದು. ಜಗತ್ತು ನಮ್ಮನ್ನು ನಮಗಿಂತ ಚೆನ್ನಾಗಿ ತಿಳಿದುಕೊಳ್ಳುತ್ತಿದೆ. ಭಾರತೀಯತೆಯನ್ನು ವ್ಯವಸ್ಥಿತವಾಗಿ ಕಡಿದು ಉದುರಿಸುವ (systematic dissemble) ಹುನ್ನಾರಗಳ ಬಗ್ಗೆ ನಾವು ಅಜಾಗರೂಕರಾಗಿದ್ದೇವೆ. ಆ ಎಚ್ಚರ ಸಾಮಾನ್ಯ ಜನಕ್ಕೆ ಬಂದರೆ ಸಾಲದು,  ತರುಣ ವಿದ್ವದ್ವಲಯದಲ್ಲಿ ವ್ಯಾಪಕವಾಗಿ ಬರಬೇಕು ಅನ್ನುವ ಉದ್ದೇಶದಿಂದ ನಾಳೆಯ ಕಾರ್ಯಶಾಲೆ ತೆರೆದುಕೊಳ್ಳುತ್ತದೆ. ಕೇಂದ್ರ ಸರಕಾರ ಇದರ ಮೇಲೆ ಹಣ ತೊಡಗಿಸುತ್ತಿದೆ. ಚಿಂತನ ಪರಂಪರೆಯ ಯೋಧರನ್ನು well equipped ಆಗಿಸುವುದು ಸಾಂಸ್ಕೃತಿಕ ಭದ್ರತೆಯ ಅತಿ ಮುಖ್ಯ ಅಂಶವೆಂಬುದು ಸರಕಾರಗಳಿಗೆ ಈಗಲಾದರೂ ಅರ್ಥವಾದ್ದು ಸ್ವಾಗತಾರ್ಹ. ಆಗ ಮಾತ್ರ ತರುಣ ವಿದ್ವಾಂಸರ ಪಡೆಯೊಂದು ನಮ್ಮೊಳಗಿನ ಚಿಂತಕಭಸ್ಮಾಸುರರನ್ನು ನಿಗ್ರಹಿಸುತ್ತ, ಹೊರಗಡೆಯ ಆಕ್ರಮಣಕ್ಕೂ ಮಿದುಳೊಡ್ಡುವ ಕಾರ್ಯಕ್ಕೆ ಸಿದ್ಧವಾಗುತ್ತದೆ.  


ಕರ್ನಾಟಕ ಸೇರಿದಂತೆ ಎಲ್ಲ ಭಾಗಗಳಿಂದ ದೂರದ ಅಗರ್ತಲಾಗೆ ಹೊರಟ ನನ್ನ ಮಿತ್ರಗಣವು ಅಂಥಾ ವೈಚಾರಿಕ ಭಗೀರಥರ ಪಡೆಯಾಗಿ ಹೊಮ್ಮಲೆಂದು ಹಾರೈಸುವೆ. ಹೋಗುವ ಮುನ್ನವಾಗಲೀ ಹೋಗಿ ಬಂದಮೇಲೊಮ್ಮೆಯಾಗಲೀ ದಯವಿಟ್ಟು ನಮ್ಮ ಪೂರ್ವಪಕ್ಷಿಗಳಾರೆಂಬುದನ್ನು ತಿಳಿಯಲೋಸುಗ ವಿದ್ವಾಂಸರ ವಿಚಾರಗಳನ್ನು ಕೇಳಿಸಿಕೊಳ್ಳಿ/ ಓದಿಕೊಳ್ಳಿ. ನಮ್ಮದನ್ನು ಚೆನ್ನಾಗಿ ಓದುವುದು ಮಾತ್ರವಲ್ಲ ನಮ್ಮ ವೈಚಾರಿಕ ವಿರೋಧಿಗಳ ನೆಲೆಯೇನೆಂಬುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾದ ಸಂಗತಿ. ಆ ನೆಲೆಯಲ್ಲಿ ಅಗರ್ತಲಾದ ಇಪ್ಪತ್ತು ದಿನಗಳು ನಿಮ್ಮೆಲ್ಲರ ಚಿಂತನಯಾತ್ರೆಯನ್ನು ಪ್ರಭಾವಿಸಲಿ. ಶುಭಯಾತ್ರಾ. 

Monday, February 8, 2016


                     ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ


ಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.



ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಬ್ಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ.  ಕನ್ನಡದಂಥಾ ಕನ್ನಡಕ್ಕೇನಾಗಿದೆ?
ಕನ್ನಡದಲ್ಲಿ ಹೊಸ ಬರಹಗಾರರು, ಅವರ ಬರಹಗಳು ಮತ್ತು ಕನ್ನಡದ ಸಾಹಿತ್ಯದ ಕಟ್ಟೋಣದ ಕಾರ್ಯಗಳಿಗೇನೂ ಕೊರತೆಯಿಲ್ಲ. ಬ್ಲಾಗ್ ಗಳು ಮತ್ತು ಫೇಸ್ಬುಕ್ ಬಂದಮೇಲಂತೂ ಕನ್ನಡಲ್ಲಿ ಸಾಹಿತ್ಯದ ಮಹಾಪೂರವೇ ಹರಿಯುತ್ತಿದೆ. ಇದೆಲ್ಲ ಚಂದದ ಸಂಗತಿಗಳು. ಆದರೆ ನಮ್ಮ ಮೇರು ಬರಹಗಾರರ ಜ್ಞಾನಪೀಠ ಪುರಸ್ಕೃತ ಕೃತಿಯನ್ನೋ ಸಮಗ್ರ ಸಾಹಿತ್ಯವನ್ನೋ ಜನಕ್ಕೆ ಮುಕ್ತವಾಗಿ ಅರ್ಪಿಸುವಲ್ಲಿ ತೀರಾ ಹಿಂದಕ್ಕಿದೆ ಕನ್ನಡ ಲೋಕ. ಬೇಂದ್ರೆಯವರ ನಾಕುತಂತಿ ತುಂಬಾ ಸಣ್ಣ (ಗಾತ್ರದಲ್ಲಿ) ಕವನ ಸಂಕಲನ, ಹಾಗಿದ್ದೂ ಕನ್ನಡದ ಉನ್ನತ ಕೃತಿ. ವಿಷಾದವೆಂದರೆ ಅದು ಪೂರ್ತಿಯಾಗಿ ಅಂತರ್ಜಾಲದಲ್ಲಿ ಉಪಲಬ್ಧವಿಲ್ಲ. ಇದು ನಾಕುತಂತಿಯೊಂದರ ಪರಿಸ್ಥಿತಿಯಲ್ಲ, ನಮ್ಮೆಲ್ಲ ಉನ್ನತ ಕೃತಿಗಳ ಕಥೆಯೂ ಅದೇ. ಯಾಕೆ ನಮ್ಮ ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನಾದರೂ ಅಂತರ್ಜಾಲಕ್ಕೆ ಮುಕ್ತವಾಗಿ ತೆರೆದಿಡಲಾರದಷ್ಟು ಬಡವರೇ ನಾವು? ನಮಗೆ ಅವುಗಳ ಮಾರಾಟವೇ ಆಗಬೇಕೆ? ಅಂತರ್ಜಾಲಕ್ಕೆ ತೆರೆದಿಟ್ಟರೆ ಆ ಕೃತಿಗಳ ಮಾರಾಟ ನಿಲ್ಲುತ್ತದೆಯೆನ್ನುವುದು ಶುದ್ಧ ಕುಂಟು ನೆಪ. ಗ್ರಂಥದ ಗಂಭೀರ ಓದು ಬೇಕಾದವನಿಗೆ ಇವತ್ತಲ್ಲ ನಾಳೆಗೂ ಪುಸ್ತಕವೇ ಶರಣು, ಗೂಗಲ್ಲಲ್ಲ. ಹಾಗಿದ್ದಾಗ ಪುಸ್ತಕಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅಂತರ್ಜಾಲದಲ್ಲಿರುವ ಪುಸ್ತಕದ ಸಮಯೋಚಿತ ಉಪಯೋಗ ಹೆಚ್ಚು. ಇವತ್ತಿನ ಅನಿವಾರ್ಯತೆ ಅದು. ಯೇನ ಕೇನ ಪ್ರಕಾರೇಣ ನಾವೀ ಡಿಜಿ ಲೋಕದಲ್ಲಿ ಪ್ರಸ್ತುತವಿರಲೇ ಬೇಕಾದ ತುರ್ತಿದೆ. ಪುಸ್ತಕವನ್ನು ಮುದ್ರಿಸಿಯೇ ಓದುವೆವೆಂಬ ಹಟ ಬಿಡಬೇಕಾದ ಕಾಲ ಇದು.
ಮರಳಿ ಸಂಸ್ಕೃತದ ಲೋಕದ ಬಗ್ಗೆ ಹೇಳುವುದಾದರೆ- ಸಂಸ್ಕೃತ ವ್ಯಾಕರಣದ ಎಲ್ಲಾ ಸೂತ್ರ ಮತ್ತದರ ವಿವರಣೆಗಳು, ಉದಾಹರಣೆಗಳು, ಸಂಧಿ ಸಂಯೋಜಕ ಮತ್ತು ಸಂಧಿ ವಿಭಾಜಕ ವೆಬ್ ಸೈಟ್ ಗಳು, ಪದಾರ್ಥ ಹೇಳುವ ಕೋಶಗಳು (ಪ್ರಾಚೀನ ಮತ್ತು ನವೀನ ಎರಡೂ), ಪದವೊಂದು ರಚನೆಯಾದ ರೀತಿ ಪ್ರಕ್ರಿಯಾ ಸಮೇತ,  ವ್ಯಾಕರಣ ಪರಂಪರೆಯ ಪೂರ್ಣ ಮಹಾಭಾಷ್ಯ, (ಇದರ ಪೂರ್ಣ ಆವೃತ್ತಿಯ ಒಟ್ಟೂ ಒಂಭತ್ತು ಪುಸ್ತಕಗಳಿಗೆ ಐದು ಸಾವಿರ ರೂಗಳಾಗುತ್ತವೆ. ಹಾಗಿದ್ದೂ ಅದು ಅಂತರ್ಜಾಲದಲ್ಲಿ ಲಭ್ಯವಿದೆ), ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳು, ಆಧುನಿಕ ಸಾಹಿತ್ಯದ ಕೆಲವು ಭಾಗ- ಗಳು ಕೈಬೆರಳ ತುದಿಯಲ್ಲಿವೆ. ಇವನ್ನೆಲ್ಲ ಸುಮ್ಮನೆ ಗೂಗಲ್ಲಲ್ಲಿ ಮುದ್ರಿಸಿ ಹುಡುಕಲಿಕ್ಕೆ ಹಚ್ಚಿದರೆ ನೂರಾರು ಲಿಂಕ್ಸ್ ತೆರೆದುಕೊಳ್ಳುತ್ತವೆ. ಎಲ್ಲಕಡೆ ಪಿಡಿಎಫ್ ನಲ್ಲಿ ಓಸಿಆರ್ ಲಭ್ಯವಿದೆ. ಕೆಲವಾರು ಗ್ರಂಥಗಳ ಮೊಬೈಲ್ ಆಪ್ ಸಿದ್ಧವಾಗಿದೆ. ಸಂಸ್ಕೃತ ನಿಯತಕಾಲಿಕೆಗಳು, ಮ್ಯಾಗಝೀನ್ ಮತ್ತು ಬ್ಲಾಗ್ ಗಳು ಮುಕ್ತವಾಗಿ ಲಭ್ಯವಿವೆ. ಸಂಸ್ಕೃತ ವಿಕಿಪೀಡಿಯದ ಕೆಲಸ ನಡೆದಿದೆ, ಹಲವಷ್ಟು ಈಗಾಗಲೇ ಲಭ್ಯವಿದೆ.  ಇದಿಷ್ಟೇ ಅಲ್ಲ, ಬೌದ್ಧ ಮತ್ತು ಜೈನ ಗ್ರಂಥಗಳೆಲ್ಲ ದಿನವೂ ಅಪ್ಡೇಟಾಗುತ್ತಿವೆ. ನಾನು ಭಾಗವಹಿಸುವ ಗೂಗಲ್ ಸಮುದಾಯವೊಂದರಲ್ಲಿ ವಾರಕ್ಕೆರಡಾದರೂ ಹೊಸದೊಂದು ಜಾಲಪುಸ್ತಕದ ಲಿಂಕ್ ಬಂದಿರುತ್ತದೆ. ಅಂದರೆ ಆ ವೇಗದಲ್ಲಿ ಕೆಲಸ ನಡೆಯುತ್ತಿದೆ. ಮೊನ್ನೆ ಮೊನ್ನೆ ಶುರುವಾದ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದಡಿಯಲ್ಲಿ ಈ ಕೆಲಸ ಇನ್ನಷ್ಟು  ಭರದಿಂದ ಸಾಗಿದೆ. ನನಗೆ ಪೂರ್ಣ ವಿಶ್ವಾಸವಿದೆ, ಇನ್ನು ಕೆಲವೇ ಕಾಲದಲ್ಲಿ ಪೂರ್ಣ ಸಂಸ್ಕೃತ ಲೋಕ ಅಂತರ್ಜಾಲದಲ್ಲಿರುತ್ತದೆ.  ನೆನಪಿಸುತ್ತೇನೆ, ಇಷ್ಟೆಲ್ಲ ಆಗುವಾಗ ಕನ್ನಡದ ವೈಯಾಕರಣ ಕೇಶಿರಾಜರ ಶಬ್ದಮಣಿದರ್ಪಣ ಸಮಗ್ರವಾಗಿ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಮುದ್ದಣ ಮನೋರಮೆಯರು ಅರ್ಧಂಬರ್ಧ ಸಿಗುತ್ತಾರೆ. (ಹಾಗಿದ್ದೂ ಸಂಸ್ಕೃತದ ದೂಷಣೆಗೆ ಸಭ್ಯೆ ಮನೋರಮೆಯನ್ನು ಬಳಸಿಕೊಳ್ಳುವುದನ್ನಿಲ್ಲಿ ಸ್ಮರಿಸಬಹುದು) ಏನಾಗಿದೆ ಕನ್ನಡಕ್ಕೆ? ಕನ್ನಡ ವಿಶ್ವವಿದ್ಯಾಲಯಗಳಿಗೆ ಮತ್ತು ಸಾಹಿತ್ಯಧುರಂಧರರಿಗೆ?
ಸಂಸ್ಕೃತವನ್ನು ಅಲ್ಲಿಟ್ಟರು, ಇಲ್ಲಿಟ್ಟರು, ಪೆಟ್ಟಿಗೆಯೊಳಗೆ ಮತ್ತು ಹೊಟ್ಟೆಯೊಳಗಿಟ್ಟರು, ಸೀಸ ಸುರಿದರು ಎಂದೆಲ್ಲ ಇವತ್ತಿಗೂ ಕನ್ನಡ ಲೋಕದ ಒಂದು ಭಾಗ ಬೊಬ್ಬಿರಿಯುತ್ತಲೇ ಇದೆ. ಜಗತ್ತು ಮಾತ್ರ ಇವರನ್ನು ಹಿಂದಕ್ಕೆ ಬಿಟ್ಟು ಸಂಸ್ಕೃತವನ್ನು ತಬ್ಬಿಕೊಳ್ಳುತ್ತಿದೆ. ಅದಕ್ಕೆ ಸಂಸ್ಕೃತ ಜಗತ್ ಕೂಡ ಸಹಜವಾಗೇ ಸ್ಪಂದಿಸುತ್ತಿದೆ. ಸೀಸದ ಪ್ಯಾಕ್ಟರಿ ಮಾಲೀಕರದ್ದೇನೂ ಈ ಬಗ್ಗೆ ತಕರಾರು ಬಂದಿಲ್ಲ.
ಇನ್ನು ಸರಕಾರ ನಡೆಸುವ ಸಾಹಿತ್ಯ ಜಾತ್ರೆಗಳ ಅವ್ಯವಸ್ಥೆ ಮತ್ತು ಗಲಾಟೆಯನ್ನಂತೂ ಪ್ರತಿವರ್ಷ ನೋಡುತ್ತೇವೆ. ಸಂಸ್ಕೃತದ ಹೆಸರಲ್ಲಿ ಮಹಾಮೇಲವೊಂದು ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ನಡೆದಿತ್ತು, ನಾಲ್ಕು ದಿನಗಳ ಕಾಲ. ಅದರ ವ್ಯವಸ್ಥಿತ ನಿರ್ವಹಣೆ ಹೇಗಿತ್ತೆಂಬುದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಕೊನೆಯದಾಗಿ, ಕನ್ನಡದ ಮನಸುಗಳು ಜಾತಿ ಪ್ರಜ್ಞೆಯಿಂದ ಹೊರಬರಲೆಂಬ ಪ್ರಾರ್ಥನೆಯೊಂದಿಗೆ ಕನ್ನಡದ ಮೇರು ಕೃತಿಗಳ ಅಂತರ್ಜಾಲ ಲಭ್ಯತೆಗಾಗಿ ಕಾಯುತ್ತೇನೆ.