Sunday, April 2, 2017

ಸನ್ನಿಪಾತ ಲಕ್ಷಣ ಮತ್ತು ಲೋಕದ ಬದುಕಿನ ನ್ಯಾಯ



ಪಾಣಿನಿಕೃತ ಸಂಸ್ಕೃತ ವ್ಯಾಕರಣದಮೇಲೆ ನಿತ್ಯವೆಂಬಂತೆ ನನಗೆ ಪ್ರೇಮ ಸಂಭವಿಸುತ್ತಲೇ ಇರುತ್ತದೆ. ಭಾಷೆಯೊಂದರ ಮೂಲನಿಯಮಗಳನ್ನು ಆಳವಾಗಿ ತಿಳಿದುಕೊಂಡು ಅದನ್ನು ಅಲ್ಗಾರಿದಂನಂತೆ ಬರೆದುಕೊಟ್ಟಿದ್ದು ಪಾಣಿನಿ ಮಹರ್ಷಿಗಳ ಮಹತ್ತರ ಕೊಡುಗೆ. ಸೂತ್ರಗಳನ್ನಷ್ಟೇ ಹೇಳಿ ಹೋದ ಮಹರ್ಷಿಗಳ ಆಶಯವನ್ನು ಇನ್ನಷ್ಟು ಸ್ಪಷ್ಟವಾಗಿ ವಾಕ್ಯಗಳ ಮೂಲಕ ವಿವರಿಸಿದ್ದು ವರರುಚಿಗಳ ಅಪೂರ್ವ ಕಾಣಿಕೆ. ಆ ಬಳಿಕ ಸೂತ್ರ ಮತ್ತು ವಾರ್ತ್ತಿಕಗಳ ಮಧ್ಯೆ ಯಾವುದರ ಅಗತ್ಯವೆಷ್ಟಿದೆ ಎಂದೆಲ್ಲ ವಿಮರ್ಶೆ ಮಾಡಿ ಇಡಬೇಕೋ ಬಿಡಬೇಕೋ ಎಂದು ನಿರ್ಣಯಿಸಿದ್ದು ಭಾಷ್ಯಕಾರರ ಅನರ್ಘ್ಯ ಸಾಧನೆ. ಇಷ್ಟೆಲ್ಲ ಆದಮೇಲೆ ಭಾರತದ ಬೇರೆ ಬೇರೆ ಭಾಗದಲ್ಲಿ  ಇವು ಮೂರನ್ನೂ ಇಟ್ಟುಕೊಂಡು ಸಂಸ್ಕೃತ ವ್ಯಾಕರಣದ ರೀತ್ಯಾ ಶಬ್ದಗಳ ಉತ್ಪತ್ತಿಯನ್ನು ವಿವರಿಸುವ ಕೆಲಸ ನಡೆಯಿತಲ್ಲ, ಅದಿನ್ನೊಂದು ವಿಸ್ಮಯ. ’ರಾಮ’ ಎಂಬುದೊಂದು ಶಬ್ದವನ್ನು ಮೂಲಧಾತುವಿನಿಂದ ಪ್ರಯೋಗದ ಹಂತದವರೆಗೆ ತರುವಾಗ ಪಾಣಿನಿಯ ಎಷ್ಟೆಲ್ಲ ಸೂತ್ರಗಳು ಬಳಕೆಯಾಗಿವೆ, ಯಾವ ಕ್ರಮದಲ್ಲಿ ಬಳಕೆಯಾಗಿವೆ ಎಂಬುದನ್ನು ಪ್ರಕ್ರಿಯಾಕೌಮುದೀ, ಸಿದ್ಧಾಂತಕೌಮುದೀ ಗ್ರಂಥಗಳಲ್ಲಿ ವಿಶದವಾಗಿ ಹೇಳಲಾಗಿದೆ. ರಾಮ ಶಬ್ದ ಇಲ್ಲಿ ಉದಾಹರಣೆ ಮಾತ್ರ. ಸಂಸ್ಕೃತದ ಪ್ರತಿಯೊಂದು ಶಬ್ದವನ್ನೂ ಹೀಗೆ ವಿವರಿಸುವ ಹೊಣೆ ವ್ಯಾಕರಣದ್ದು.

ಈ ಸೂತ್ರಗಳನೆಲ್ಲ ದುಡಿಸಿಕೊಂಡು ಕಾರ್ಯ ಸಾಧನೆ ಮಾಡುವಾಗ ಕೆಲವಾರು ನಿಯಮಗಳನ್ನು ಪಾಲಿಸಲಾಗಿದೆ. ಹಾಗಂತ ಆ ನಿಯಮಗಳನ್ನೆಲ್ಲ ಪಾಣಿನಿ ಗ್ರಂಥವು ಎಲ್ಲ ಸಂದರ್ಭದಲ್ಲೂ ಸಾಕ್ಷಾತ್ತಾಗಿ ಹೇಳಿರುವುದಿಲ್ಲ. ಮುಂದೆ ವಾರ್ತ್ತಿಕಕಾರರೋ, ಭಾಷ್ಯಕಾರರೋ ಅದನ್ನು ತಮ್ಮ ತಮ್ಮ ಮಾತಲ್ಲಿ ಹೇಳಿರುತ್ತಾರೆ. ಪಾಣಿನಿ ಆ ನಿಯಮಗಳನ್ನು ಹೇಳದೆ ಇದ್ದರೂ ಆ ನಿಯಮಗಳಿಗನುಸಾರವಾಗಿಯೇ ತಮ್ಮ ಗ್ರಂಥವನ್ನು ರಚಿಸಿರುತ್ತಾರೆ. ಇಷ್ಟಾದರೂ ಪಾಣಿನಿ ಮುನಿಗಳ ಆಶಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲದ್ದರಿಂದ ಭಾಷ್ಯವಾರ್ತ್ತಿಕಗಳಲ್ಲಿ ಆ ನಿಯಮಗಳನ್ನು ಮುಖತಃ ಹೇಳಲಾಗುತ್ತದೆ. ಆ ನಿಯಮಗಳನ್ನೇ ಪರಿಭಾಷೆಗಳು ಅಂತ ಕರೆಯಲಾಗಿದೆ. ಸೂತ್ರ, ವಾರ್ತ್ತಿಕ ಮತ್ತು ಭಾಷ್ಯಗಳ ಕಾಲವು ಕ್ರಿ.ಪೂ. ೬ ರ ಸುಮಾರಿಗೆ ಆರಂಭವಾಗಿ ಕ್ರಿ.ಶ. ೧-೨ ಶತಮಾನಕ್ಕೆಲ್ಲ ಮುಗಿದುಬಿಡುತ್ತದೆ. ಆ ಬಳಿಕವೂ ಮುಂದುವರಿದ ಮಹತ್ತಮವಾದ ಜಿಜ್ಞಾಸಾಪರಂಪರೆಯಿದ್ದರೂ ಅದು ಭಾಷ್ಯಕ್ಕೆ ವಿರೋಧವಾಗದೇ ಸಾಗಿ ಬಂದಿದ್ದು ದೊಡ್ಡ ವಿಚಾರ.

  
ಈ ಪರಿಭಾಷೆಗಳ ಪ್ರಪಂಚವೇ ತುಂಬ ಗಹನವಾದ್ದು, ಸರಸವಾದ್ದು, ಮತ್ತು ತರ್ಕಶುದ್ಧವಾದ್ದು. ಮುಂದೆ ಹದಿನೆಂಟನೆಯ ಶತಮಾನದಲ್ಲಿ (ಅಂದರೆ ಸೂತ್ರಕಾರನ ಕಾಲದಿಂದ ಎರಡೂಕಾಲು ಸಾವಿರ ವರ್ಷಗಳ ಬಳಿಕ!)  ಜೀವಿಸಿದ್ದಿರಬಹುದಾದ ನಾಗೇಶಭಟ್ಟ ಎಂಬ ಮಹಾನ್ ವಿದ್ವಾಂಸ ಈ ಪರಿಭಾಷೆಗಳಿಗಾಗಿಯೇ ಗ್ರಂಥವೊಂದನ್ನು ಬರೆಯುತ್ತಾರೆ. ಪರಿಭಾಷೇಂದುಶೇಖರ ಎಂಬ ಹೆಸರಿನ ಈ ಗ್ರಂಥದ ಆಂತರ್ಯವೆಲ್ಲ ಪರಿಭಾಷೆಗಳ ಚರ್ಚೆಗಾಗಿಯೇ ಮೀಸಲು. ಬಹುಶಃ ಪರಿಭಾಷೆಗಳಿಗಾಗಿಯೇ ಕೃತಿಯೊಂದನ್ನು ಆರಚಿಸಿದ ಅದ್ವಿತೀಯ ವಿದ್ವಾಂಸ ನಾಗೇಶಭಟ್ಟ. ಅವರ ಬಳಿಕ ಆ ಎತ್ತರದ ವ್ಯಾಕರಣ ವಿದ್ವಾಂಸರು ಪ್ರಾಯಃ ಇವತ್ತಿನವರೆಗೆ ಮತ್ತೆ ಹುಟ್ಟಿಲ್ಲ. ಪರಿಭಾಷೇಂದುಶೇಖರದಲ್ಲಿ  ಬೇರೆ ಬೇರೆ ಪರಿಭಾಷೆಗಳಿಗೆ ಮೂಲವೇನು, ಅದರ ಆಶಯವೇನು, ಅದರ ಪ್ರಯೋಜನ ಮತ್ತು ಅದನ್ನು ಶಾಸ್ತ್ರದಲ್ಲಿ Employ  ಮಾಡುವ ಬಗೆ ಏನು ಎಂಬುದರಬಗ್ಗೆ ಕೂಲಂಕಶವಾಗಿ ಚರ್ಚೆ ನಡೆಯುತ್ತದೆ. ಕೆಲವು ಪರಿಭಾಷೆಗಳನ್ನು ಸೂತ್ರಕಾರನೇ ಹೇಳಿದ್ದರೆ, ಕೆಲವನ್ನು ವಾರ್ತ್ತಿಕಕಾರ ಹೇಳಿದ್ದಾರೆ. ಕೆಲವೊಂದು ಭಾಷ್ಯದಲ್ಲಿ ಧ್ವನಿತ, ಇನ್ನು ಕೆಲವು ಲೋಕದಲ್ಲಿ ಮಾನವ ಬದುಕಿಗೆ ಅನ್ವಯವಾಗುವ ನೀತಿಗಳನ್ನೇ ಆಧಾರವಾಗಿಟ್ಟುಕೊಂಡಿರುವ ಪರಿಭಾಷೆಗಳು. ಬಹಳಷ್ಟು ಸಲ ಈ ಪರಿಭಾಷೆಗಳು ಮಾನವ ಬದುಕಿನ ಸತ್ಯಗಳನ್ನು ಅಕಾರಣವಾಗಿಯಾದರೂ ಧ್ವನಿಸುತ್ತವೆ. ಅಂಥಾ ಪರಿಭಾಷಾ ರಾಶಿಯಲ್ಲಿ ’ಸನ್ನಿಪಾತಪರಿಭಾಷೆ’ ಕೂಡ ಒಂದು.
ಸನ್ನಿಪಾತಪರಿಭಾಷೆಯೆಂದೇ ಪ್ರಸಿದ್ಧವಾದ ಇದರ ಮೂಲ ಸ್ವರೂಪ ಹೀಗಿದೆ- “ಎರಡು ಸಂಗತಿಗಳ ನಡುವಿನ ಸಂಬಂಧವನ್ನು ಆಧಾರವಾಗಿಟ್ಟುಕೊಂಡು ಬಂದ ಭಾಷಾಕ್ರಿಯೆಯೊಂದು ತಾನು ಬಂದಮೇಲೆ ಆಗಬಹುದಾದ ಕಾರ್ಯಗಳಿಂದ ಬದಲಾಗುವ ಸನ್ನಿವೇಶದಲ್ಲಿ ಇನ್ನೊಂದು ರೂಪವನ್ನೇ ತರಬಲ್ಲ ಮತ್ತು ಆ ಮೂಲಕ ತನ್ನ ನಿಮಿತ್ತವನ್ನು ಇಲ್ಲವಾಗಿಸಬಲ್ಲ ಬೇರೊಂದು ಸೂತ್ರಕ್ಕೆ ಸ್ವತಃ ನಿಮಿತ್ತವಾಗಿ ನಿಲ್ಲಲಾರದು”. (ಸನ್ನಿಪಾತಲಕ್ಷಣೋ ವಿಧಿರನಿಮಿತ್ತಂ ತದ್ವಿಘಾತಸ್ಯ). ಪಕ್ಕಾ ಕನ್ನಡದಲ್ಲಿ ಹೇಳುವಾಗ ಇದಕ್ಕಿಂತ ಸರಳವಾಗಿ ಹೇಳುವುದು ನನ್ನಿಂದಾಗಿಲ್ಲ, ಇರಲಿ. ವಾಕ್ಯವಾಗಿ ನೋಡಿದಾಗ ಕ್ಲಿಷ್ಟವಾಗಿ ಕಾಣಿಸುತ್ತಿದೆಯಾದರೂ ಅರ್ಥ ಸರಳವಾಗಿದೆ. ಉದಾರಹಣೆಯೊಂದನ್ನು ಕೊಟ್ಟಲ್ಲಿ ಇದು ನಿಚ್ಚಳವಾಗಬಹುದು.

ಶತಂ ಎಂಬ ಸಂಸ್ಕೃತಪದವೊಂದಿದೆ. ನೂರು ಎಂಬ ಸಂಖ್ಯೆಯನ್ನು ಹೇಳುವ ಪದ ಅದು. ಅದರ ಬಹುವಚನರೂಪ ಶತಾನಿ ಅಂತ (ನೂರರ ಎರಡಕ್ಕಿಂತ ಹೆಚ್ಚು ಗುಂಪುಗಳು/ಕಟ್ಟುಗಳು). ಸಂಸ್ಕೃತದಲ್ಲಿ ಷಕಾರಾಂತವಾದ ಮತ್ತು ನಕಾರಾಂತವಾದ ಸಂಖ್ಯಾಶಬ್ದಗಳಿಗೆ ’ಷಟ್’ ಅಂತ ಹೆಸರು. ಈ ಹೆಸರನ್ನು ಯಾಕೆ ಕೊಡಲಾಗಿದೆಯೆಂದರೆ ಈ ಬಗೆಯ ಸಂಖ್ಯಾವಾಚಕಗಳ ಎದುರಿಗೆ ಬರುವ ಪ್ರಥಮಾ ಮತ್ತು ದ್ವಿತೀಯಾ ಬಹುವಚನಗಳಿಗೆ ಲೋಪ ಹೇಳುವುದಕ್ಕಿದೆ. ಹಾಗಾಗಿಯೇ ನೋಡಿ, ಸಪ್ತ, ಪಂಚ, ದಶ ಇತ್ಯಾದಿ ಶಬ್ದಗಳು ಬಹುಸಂಖ್ಯೆಯ ವಾಚಕಗಳಾಗಿದ್ದರೂ ಬಹುವಚನ ಪ್ರತ್ಯಗಳು ಅಲ್ಲಿ ಕಾಣಿಸುತ್ತಿಲ್ಲ. ದಶಾಃ ಸಪ್ತಾಃ, ಪಂಚಾಃ ಅಂತೆಲ್ಲ ಎಲ್ಲೂ ಇಲ್ಲ. ಇರಲಿ, ಶತ ಎಂಬ ಶಬ್ದ ಆ ಬಗೆಯದ್ದಲ್ಲ, ಅದಕ್ಕೆ ಷಟ್ ಸಂಜ್ಞೆ ಇಲ್ಲ. ಹಾಗಿದ್ದೂ ಶಬ್ದವನ್ನು ನಿಷ್ಪಾದಿಸುವ ಪ್ರಕ್ರಿಯೆಯಲ್ಲಿ ಶತ ಎಂಬ ಶಬ್ದದ ಮುಂದೆ ಇ  ಎಂಬ ಬಹುವಚನ ಪ್ರತ್ಯಯ ಇದ್ದಾಗ ಶತ ಶಬ್ದಕ್ಕೆ ನ್ ಎಂಬುದು ಬಂದು ಸೇರಿಕೊಳ್ಳುತ್ತದೆ ಎಂಬುದೊಂದು ನಿಯಮ. ಹಾಗೆ ಬಂದು ಸೇರಿಕೊಂಡರೆ ಶತನ್ ಎಂದಾಯಿತಷ್ಟೆ. ಇದೀಗ ಶತನ್ ಎಂಬುದು ನಕಾರಾಂತವಾದ ಸಂಖ್ಯಾವಾಚಕವೂ ಆಯಿತಷ್ಟೆ. ಹಾಗಿದ್ದಲ್ಲಿ ಅದನ್ನೇ ನಿಮಿತ್ತವಾಗಿಟ್ಟುಕೊಂಡು ಶತನ್ ಇ ಎಂಬಲ್ಲಿ ವಿಭಕ್ತಿಪ್ರತ್ಯಯವಾದ ಇ ಎಂಬುದರ ಲೋಪವೂ ಆಗಬೇಕಲ್ಲವೇ? ಹಾಗೊಂದುವೇಳೆ ಆಗುವುದಾದರೆ ಶತಾನಿ ಎಂಬ ಶಬ್ದರೂಪವೇ ಇಲ್ಲದೇ ಹೋಗುತ್ತಿತ್ತು. ಎಲ್ಲಕಡೆಗೂ ಶತ ಎಂಬ ಎಂಬ ರೂಪ ಮಾತ್ರವೇ ಇರಬೇಕಿತ್ತು. ಆದರೆ ವಸ್ತು ಸ್ಥಿತಿ ಹಾಗಿಲ್ಲ; ಭಾಷೆಯಲ್ಲಿ ಶತಾನಿ ಎಂಬ ಪ್ರಯೋಗ ಇದ್ದೇ ಇದೆ. ಹಾಗಿದ್ದರೆ ಇದು ಹೇಗಾಯ್ತು?

ಉತ್ತರವಿಷ್ಟೆ, ಇಲ್ಲಿ ಸನ್ನಿಪಾತ ಪರಿಭಾಷೆಯ ಚಮತ್ಕಾರವಿದೆ. ಶತ ಎಂಬ ಅಕಾರಾಂತವಾದ ಶಬ್ದ ಮತ್ತು ಅದರೆದುರಿಗಿನ ಇ ಎಂಬ ಪ್ರತ್ಯಯವನ್ನು ನಿಮಿತ್ತ ಮಾಡಿಕೊಂಡು ನ್ ಎಂಬುದು ಬಂದು ಸೇರಿಕೊಂಡಿದೆಯಲ್ಲ, ಆ ನ್ ಎಂಬುದು ತಾನು ಬರುವ ಮೂಲಕ ತನ್ನ ಆಶ್ರಯದಾತನಾದ ಶತ ಎಂಬ ಶಬ್ದವನ್ನು ಶತನ್ ಎಂದು ಬದಲಾಯಿಸಿದರೂ ಶತ ಮತ್ತು ಇ ಎಂಬವುಗಳಿಗೆ ವಿಕಾರ ತಂದೊಡ್ಡುವ ಇನ್ಯಾವುದೇ ಸೂತ್ರಕ್ಕೆ ತಾನು ಸ್ವಯಂ ಕಾರಣವಾಗಲಾರದು. ಅಂದರೆ ಆಶ್ರಯವನ್ನರಸಿ ಬಂದ ತನ್ನನ್ನು ನಿಮಿತ್ತವಾಗಿಟ್ಟುಕೊಂಡು ವಿಭಕ್ತಿ ಪ್ರತ್ಯಯವನ್ನು ಕೊಂದುಬಿಡಲು ಹೊಂಚುವ ಇನ್ಯಾವ ನಿಯಮಕ್ಕೂ ಆ ನಕಾರವೇ ಅವಕಾಶವನ್ನು ಕೊಡುವುದಿಲ್ಲ.

ಇದು ಮಾನವ ಬದುಕಿನ ಒಂದು ಮೌಲ್ಯ ಕೂಡ ಹೌದು ತಾನೆ? ಒಬ್ಬ ಮಹಾತ್ಮನ ಉದಾರತೆಯ ಕಾರಣದಿಂದ ಅವನಲ್ಲಿ ಆಶ್ರಯ ಪಡೆದುಕೊಂಡ  ಸಾಧಾರಣ ಮಾನವನೊಬ್ಬ, ಆ ಮಹಾತ್ಮನ ಯಾವ ಸಂಗತಿಗೂ ಧಕ್ಕೆ ಬರಲು ತಾನೇ ಕಾರಣನಾಗಬಾರದು ಎಂಬುದು ಒಂದು ಜೀವನ ಮೌಲ್ಯ. ತನ್ನ ಆಶ್ರಯವನ್ನು ನಾಶಮಾಡುವ ಕೆಲಸವನ್ನು ಮಾನವ ಮಾಡಬಾರದು/ ಮಾಡುವುದಿಲ್ಲ. ಮಾಡುವುದಿಲ್ಲ ಎನ್ನುವುದಕ್ಕಿಂತ ಮಾಡಬಾರದು ಎಂಬುದು ಬಹುದೊಡ್ಡ ಜೀವನ ಮೌಲ್ಯ ಎಂಬುದಂತೂ ಸತ್ಯ.

ಮೌಲ್ಯಗಳ ಪಾಲನೆ ತುಂಬ ಸಂದರ್ಭದಲ್ಲಿ ಆಗುವುದೇ ಇಲ್ಲ. ಅಷ್ಟೆಲ್ಲ ಸುಲಭಕ್ಕೆ ಮೌಲ್ಯಗಳನ್ನಾಚರಿಸುವುದು ಸಾಧ್ಯವಾಗಿದ್ದರೆ ಮೌಲ್ಯಗಳು ಮೌಲ್ಯಯುತವಾಗಿ ಉಳಿಯುತ್ತಿರಲಿಲ್ಲವೇನೋ. ಕಾಡಿನಲ್ಲಿ ಮರವೊಂದರ ಹರವಾದ, ನೀಳ ಚಾಚಿನ ರೆಂಬೆ ಕೊಂಬೆಗಳನ್ನೂ, ಸುರಕ್ಷತೆಯನ್ನೂ ಗಮನಿಸಿಕೊಂಡು ಹೆಜ್ಜೇನಿನ ಪರಿವಾರವೊಂದು ಮರದಲ್ಲಿ ನೆಲೆಯಾಗುತ್ತದೆ. ಕಾಲ ಕಳೆದಂತೆ ಜೇನುತುಪ್ಪ ಸಿದ್ಧವಾದಾಗ ಮನುಷ್ಯ ಜೀವಿ ಆ ಜೇನಿಗಾಗಿ ಮರವನ್ನೇರಿ ಕೊಂಬೆಯನ್ನೆಲ್ಲಾ ಕಡಿದು ಮರವನ್ನು ವಿರೂಪಗೊಳಿಸುತ್ತಾನೆ. ಇಲ್ಲಿ ಹೆಜ್ಜೇನಿಗೆ ಆಶ್ರಯ ಕೊಟ್ಟ ಮರಕ್ಕೆ ಆ ಜೇನಿನಿಂದಾಗಿಯೇ ಆಘಾತ ಒದಗಿದೆ. ಸನ್ನಿಪಾತಲಕ್ಷಣವು ಇಲ್ಲಿ ಲೆಕ್ಕಕ್ಕೇ ಬಂದಿಲ್ಲ. ಪ್ರಕೃತಿಯಲ್ಲಿ  ಬಹುತೇಕ ಎಲ್ಲ ಕಡೆಗಳಲ್ಲೂ ಕಾಣುವ ಸತ್ಯ ಇದೇ ಆಗಿದೆ. ಆದರೆ ಮಾನವನು ಸಮಾಜ ಮತ್ತು ಮೌಲ್ಯ ವ್ಯವಸ್ಥೆಗೆ ಬದ್ಧನಾಗಿದ್ದರಿಂದ ಅವನಲ್ಲಿ ಮೌಲ್ಯಗಳ ಆಚರಣೆಯನ್ನು ಅಪೇಕ್ಷಿಸಲಾಗುತ್ತದೆ.

ಟಿಬೇಟ್ ಎಂಬ ಪುಟ್ಟದಾದ, ಸಮೃದ್ಧವಾದ, ಅಧ್ಯಾತ್ಮದ ಅಮಲಿನ, ಬೌದ್ಧ ಭಿಕ್ಕುಗಳ ಸುಂದರ ದೇಶವನ್ನು ಚೀನಾ ಎಂಬ ಕೆಂಪು ಡ್ರಾಗನ್ ತನ್ನ ಕಮ್ಯೂನಿಸಮ್ಮಿನ ಕರಾಳ ಹಸ್ತದಿಂದ ಹಿಂಸಿಸತೊಡಗಿದಾಗ ದಲೈ ಲಾಮ ಭಾರತದ ಆಶ್ರಯ ಕೋರಿ ಬರುತ್ತಾರೆ. ಭಾರತ ಆಶ್ರಯ ಕೊಡುತ್ತದೆ. ಆದರೆ ಹಾಗೆ ಕೊಟ್ಟ ಆಶ್ರಯವೇ ೧೯೬೨ ರ ಭಾರತ ಚೀನಾ ಯುದ್ಧಕ್ಕೆ ಒಂದು ಕಾರಣವೂ ಆಗುತ್ತದೆ. ಅಲ್ಲಿ ಭಾರತ ಸೋತು ಅಕ್ಸಾಯ್ ಚಿನ್ ಚೀನಾದ ತೆಕ್ಕೆಗೆ ಒಳಪಡುತ್ತದೆ. ಇಲ್ಲಿ ಕೂಡ ಸನ್ನಿಪಾತ ನ್ಯಾಯದ ಪರಿಪಾಲನೆ ಆಗಿಲ್ಲವೆಂದೇ ಹೇಳಬೇಕು. ಅಥವಾ ಸನ್ನಿಪಾತ ನ್ಯಾಯದ ಪಾಲನೆಗೆಂಬಂತೆ ಅರವತ್ತೆರಡರ ಯುದ್ಧದ ಪಶ್ಚಾತ್ ಕ್ಷಣದಲ್ಲೇ ಭಾರತ ಭೂಸೇನೆಯ ಭಾಗವಾಗಿ ಟಿಬೆಟಿಯನ್ ಯೋಧರ ಪಡೆಯೊಂದು ಅಸ್ತಿತ್ವಕ್ಕೆ ಬಂತು. ಹತ್ತು ಸಾವಿರ ಯೋಧರ ಈ ಪಡೆ ಇವತ್ತಿಗೂ ಭಾರತ ಸೇನೆಯ ಭಾಗ ಮತ್ತು ಭಾರತ ಚೀನಾ ಗಡಿರಕ್ಷಣೆಯಲ್ಲಿ ಅದು ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ನೋಡಿದಾಗ ತನಗೆ ಆಶ್ರಯ ಕೊಟ್ಟ ಮಹಾತ್ಮನಿಗೆ ತನ್ನಿಂದಾಗಿ ಧಕ್ಕೆಯೊದಗದಂತೆ ಕಾಯುವಲ್ಲಿ ಟಿಬೇಟ್ ತೊಡಗಿಕೊಂಡಿದೆ ಎನ್ನಬಹುದು. ಮತ್ತು ಸನ್ನಿಪಾತ ಲಕ್ಷಣದ ಪ್ರಕಾರ ಅದು ನ್ಯಾಯವೂ ಹೌದು.

ಐಸಿಸ್ ಉಗ್ರರಿಂದ ಅಮಾನವೀಯವಾಗಿ ಘಾಸಿಗೊಂಡ ಸಿರಿಯನ್ ನಿರಾಶ್ರಿತರಿಗೆ ಯುನೈಟೆಡ್ ಕಿಂಗ್ಡಮ್ ಆಶ್ರಯ ಕೊಟ್ಟಿತಷ್ಟೆ. ಆ ಆಶ್ರಯದ ಕಾರಣಕ್ಕೆ ಯುಕೆ ಯಾವ್ಯಾಯ ಕಿರುಕುಳಗಳನ್ನನುಭವಿಸುತ್ತಿದೆ ಎಂಬುದು ದಿನಾ ಪತ್ರಿಕೆ ಓದುವವರಿಗೆ ತಿಳಿದದ್ದೇ. ಸಾವಿರಾರು ನಿರಾಶ್ರಿತರನ್ನು ಯು ಕೆ ಪೋಲೀಸರು ಬಂಧಿಸಬೇಕಾಗಿ ಬಂತು. ಯಾಕೆಂದರೆ ನಿರಾಶ್ರಿತರಾಗಿ ಬಂದವರು ಅತ್ಯಾಚಾರದಂಥ ಹೀನ ಕೃತ್ಯಗಳಿಗೆ ತೊಡಗಿಕೊಂಡಿದ್ದರು. ಹಾಗಾಗಿ ಆಶ್ರಯದಾತನಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಆಶ್ರಿತರು ಲೋಕದಲ್ಲಿ ತುಂಬಾ ಕಡಿಮೆ ಎಂದೇ ಹೇಳಬಹುದು. ಇತಿಹಾಸದುದ್ದಕ್ಕೂ, ಅದರಲ್ಲೂ ಭಾರತದ ಇತಿಹಾಸದುದ್ದಕ್ಕೂ ಇದೇ ಕಥೆಗಳೇ ತುಂಬಿವೆ. ಯಾರನ್ನು ನಮ್ಮ ನಾಡೊಳಕ್ಕೆ ಬಿಟ್ಟುಕೊಂಡೆವೋ ಅವರೇ ನಮ್ಮದೆಲ್ಲವನ್ನೂ ಕಿತ್ತುಕೊಂಡು ಆಳಿದ್ದೇ ಆಳಿದ್ದು. ತನ್ನ ಆಶ್ರಯದಾತನ ರಕ್ಷಣೆಯ ಕುರಿತು ಹೇಳುವ ಸನ್ನಿಪಾತ ಲಕ್ಷಣ ಶಾಸ್ತ್ರ ಪಾಲನೆಯಾದದ್ದೇ ಕಡಿಮೆ.

ವ್ಯಾಕರಣಶಾಸ್ತ್ರದಲ್ಲೂ ಕೆಲವು ಸಂದರ್ಭಗಳಲ್ಲಿ ಸನ್ನಿಪಾತ ಲಕ್ಷಣದ ಪಾಲನೆ ಆಗದೇ ಇರುವುದಿದೆ. ಲೋಕದ ಎಲ್ಲ ಉದಾಹರಣೆಗಳಲ್ಲೂ ಎಲ್ಲ ಮೌಲ್ಯಗಳ ಪಾಲನೆ ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಶಾಸ್ತ್ರದಲ್ಲೂ ಪರಿಭಾಷೆಗಳ ಪಾಲನೆ ಎಲ್ಲ ಸಂದರ್ಭದಲ್ಲಿ ಆಗಿಯೇ ಆಗುತ್ತದೆ ಎನ್ನುವಂತಿಲ್ಲ. ಯಾಕೆಂದರೆ ಸಾಧಿಸಬೇಕಾದ ಕಾರ್ಯ ಈ ನಿಯಮಗಳ ಪಾಲನೆಗಿಂತ ದೊಡ್ಡದು ನೋಡಿ! ಉದಾ- ರಾಮಾಯ, ಕೃಷ್ಣಾಯ, ವಾಸುದೇವಾಯ, ಶಿವಾಯ ಎಂದೆಲ್ಲ ದಿನಾ ಬಳಕೆಯಾಗುವ ಪದಗಳೆಲ್ಲ ಸಿದ್ಧವಾಗಿದ್ದೇ ಈ ಪರಿಭಾಷೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವ ಮೂಲಕ. ಒಟ್ಟಿನಲ್ಲಿ ಶಾಸ್ತ್ರದಲ್ಲಾಗಲಿ ಅಥವಾ ಲೌಕಿಕ ಬದುಕನಲ್ಲಾಗಲಿ ನಿಯಮಗಳ ಪಾಲನೆ ಮತ್ತು ನಿಯಮಗಳ ಪಾಲನೆಯಾಗದಿರುವಿಕೆ ಎರಡಕ್ಕೂ ಸಾಕಷ್ಟು ಉದಾಹರಣೆಗಳನ್ನು ಕಾಣಿಸಬಹುದು.