Tuesday, July 26, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 2

ಮೊನ್ನೆ ಈ ವರ್ಷದ ಮಳೆಗಾಲ ಶುರುವಾದಬಳಿಕ ಇನ್ನೊಂದು ಹಸಿರಿನ ತಾಣಕ್ಕೆ ಹೋಗಿದ್ದೆ. ಭೀಮೇಶ್ವರದಷ್ಟು ಅಜ್ಞಾತವಾಗುಳಿದ ದೇವಾಲಯವೇನೂ ಇದಲ್ಲ, ಹಾಗಂತ ತೀರ ಪರಿಚಿತವೂ ಅಲ್ಲ. ಕಣ್ಣು ಹಾಯಿಸಿದಷ್ಟೂ ಕಾಡೇ ಕಾಣುವ ಎತ್ತರದಲ್ಲಿ ಪುಟ್ಟದೊಂದು ಗುಡಿ ಇಲ್ಲಿದೆ. ಉತ್ತರಕನ್ನಡದ ಹೊನ್ನಾರವರ ತಾಲೂಕಿನ ಕರಿಕಾನ ಪರಮೇಶ್ವರಿ ದೇವಾಲಯದ ಬಗ್ಗೆ ನಾನು ಹೇಳುತ್ತಿದ್ದೇನೆ. 




ಕರಿಕಾನು ಹೆಸರಿಗೆ ತಕ್ಕಂತೆ ಈಗೊಂದೈವತ್ತು ವರ್ಷಗಳ ಹಿಂದೆ ಕಪ್ಪಾದ ಕಾನನವೇ ಆಗಿದ್ದಿರಬೇಕು. ಇವತ್ತು ಆ ಗಾಢತೆ ಕ್ಷೀಣಿಸುತ್ತಿದ್ದರೂ ಬೆಟ್ಟ ಗಹನವಾಗಿಯೇ ಇದೆ. ಇಲ್ಲಿ ಮನುಷ್ಯನ ವಾಹನ ಸಾಗಿ ಹೋಗುವಷ್ಟು ಸರಿಯಾದ ದಾರಿಯ ನಿರ್ಮಾಣವಾಗಿದ್ದೇ ಇತ್ತೀಚಿನ ದಶಕಗಳಲ್ಲಿ. ಈಗಲೂ ಖಾಸಗಿ ವಾಹನ ಮಾಡಿಸಿಕೊಂಡೇ ಇಲ್ಲಿಗೆ ತಲುಪಬೇರುವುದು ಒಂದರ್ಥದಲ್ಲಿ ಒಳ್ಳೆಯದಾಗಿದೆ. ಸಾರಿಗೆ ವಾಹನಗಳ ಸಂಚಾರ ಈ ಕಾಡಿನಲ್ಲಿ ಇಲ್ಲ. ಹಿಂದೆಲ್ಲ ಇಲ್ಲಿಗೆ ನಡೆದೇ ಬರಬೇಕಿತ್ತಂತೆ. ಹಸಿರು ಹಬ್ಬಿದ ಬೆಟ್ಟವನ್ನು ಹತ್ತಿ ಹೋದರೆ ಕಬ್ಬಂಡೆಗಳ ಎಡೆಯಲ್ಲಿ ಸಣ್ಣದೊಂದು ದೇವಾಲಯವಿದೆ. ದುರ್ಗೆಯೆಂಬ ಶಕ್ತಿದೇವತೆಯ ದೇಗುಲವದು.
ಇಂಥ ಎತ್ತರದಲ್ಲಿ, ಕಪ್ಪು ಕಾನನದಲ್ಲಿ ಪ್ರತಿಷ್ಠಾಪನೆಗೊಂಡ ದೇವಾಲಯಗಳ ಪ್ರಭಾವಳಿಯೇ ಬೇರೆ. ಅಲ್ಲಿ ದೇವತೆಯೊಂದೇ ಅಲ್ಲದೆ ಪೂರ್ತಿ ಕಾನನವೂ, ಪರಿಸರವೂ ಆರಾಧಿಸಲ್ಪಡುತ್ತದೆ, ರಕ್ಷಿಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿದ್ದ ದೇವರ ಕಾಡುಗಳು, ನಾಗಬನಗಳು ಎಷ್ಟೆಲ್ಲ ಮಹತ್ವದವಾಗಿವೆಯೋ ನೋಡಿ. ಆ ವನಕ್ಕೆಲ್ಲ ಆಯಾ ದೇವತೆಯೇ ಅಧಿದೇವತೆಯಾಗಿರುತ್ತಾಳೆ, ಕಾಡು ನಾಶಕ್ಕೆ ತೊಡಗುವವ ದೈವಿಕ ಕಾರಣಗಳಿಂದಾಗಿ ಹಿಂದೇಟು ಹಾಕುತ್ತಾನೆ. ಇಂಥ ದೇವಾಲಯಗಳು ಅತಿಯಾಗಿ ಬೆಳೆಯುವುದೂ ಕಡಿಮೆ, ಯಾಕೆಂದರೆ ಎಲ್ಲರೂ ಹೋಗಿ ಎಡತಾಕಬಹುದಾದ ತಾಣದಲ್ಲಿ ಅವು ಇರುವುದಿಲ್ಲ. ಆ ಮಟ್ಟಿಗೆ ನೋಡಿದಾಗ ತಿರುಪತಿಯ ತಿಮ್ಮಪ್ಪ ಮತ್ತು ವೈಷ್ಣೋದೇವಿಯ ದೇವಾಲಯಗಳು ಆ ಪರಿ ಶ್ರೀಮಂತವಾದ್ದು ಅಚ್ಚರಿ ಹುಟ್ಟಿಸುವಂಥದು. ಹಾಗಿದ್ದೂ ಒಮ್ಮೆ ಸಾರ್ವಜನಿಕ ಸಂಪರ್ಕ ವಾಹನಗಳ ಸೌಲಭ್ಯ ಒದಗಿದ ಮೇಲೆ ದೇವಾಲಯಗಳ ಪ್ರಶಾಂತಿ ಕದಡುವುದು ನಿಜವೇ.
ಕರಿಕಾನ ಪರಮೇಶ್ವರಿಯಿರುವುದು ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಆದ್ದರಿಂದ ಪಶ್ಚಿಮ ಸಮುದ್ರವೇನೂ ಅದರಿಂದ ತುಂಬ ದೂರಕ್ಕಿಲ್ಲ. ದೇವಾಲಯದ ಆವಾರದಿಂದ ನೋಡುವಾಗ (ಅದರಲ್ಲೂ ಮಳೆಗಾಲದಲ್ಲಿ) ದಿಗಂತದಂಚನ್ನು ತಲುಪುವ ಹಸಿರು ಮತ್ತು ಅದಕ್ಕೊಂದು ನೀಲಿಯ ಕೊನೆಗೆರೆಯೆಳೆದಂತೆ ಪಶ್ಚಿಮ ಸಮುದ್ರ. ಹಿರಿಯ, ಕಿರಿಯ, ಹಾಸಾದ, ಚೂಪಾದ, ಕಣಿವೆಗೆಡೆಕೊಟ್ಟ ಹಸಿರು ಗುಡ್ಡಗಳು. ಅವುಗಳ ಮೇಲೆ ಸಾಗುವ ಮೇಘಗಳಿಂದಾಗಿ ರಂಗದ ಮೇಲೆ ಬೆಳಕು ಬಿಟ್ಟಂತೆ ಕೆಲವೇ ಕಡೆ ಬೀಳುವ ಸೂರ್ಯರಶ್ಮಿ, ಚಲಿಸುವ ಮೋಡಗಳಿಂದಾಗಿ ಬೆಳಕೂ ಚಲಿಸಿದಂತೆ ಭಾಸವಾಗಿ ಪೂರ್ತಿ ಬೆಟ್ಟವನ್ನು ಅದ್ಯಾರೋ ಶೋ ಕೇಸ್ ಮಾಡಿದಂಥಾ ಅನುಭವ. ಕೆಲವೇ ಕ್ಷಣದಲ್ಲಿ ಮಳೆ ಬಂದು, ಗಾಳಿ ಬೀಸಿ, ಎಲ್ಲ ಬಿಳುಪಾಗಿ ಬೆಟ್ಟವೆಲ್ಲ ಮಾಯ- ಬರೀ ನೀರು. ಒಟ್ಟಾರೆಯಾಗಿ ಅದೊಂದು ರಮ್ಯಾನುಭವ.
ದೇವಾಲಯದ ಗರ್ಭಗುಡಿಯಲ್ಲಿ ದೇವರೆಂದರೆ ಅಲ್ಲೇನೂ ದುರ್ಗೆಯ ಮೂರ್ತಿಯನ್ನು ಕಡೆದು ಕೂರಿಸಲಾಗಿಲ್ಲ. ಅಲ್ಲೊಂದು ಕಲ್ಲಿಗೆ ಸೀರೆಯುಡಿಸಿ, ಮಾಂಗಲ್ಯಾಲಂಕಾರ ಮಾಡಲಾಗುತ್ತದೆ. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ಕರ್ನಾಟಕದಲ್ಲಿ ಅಧ್ಯಾತ್ಮದ ಪ್ರಕಾಶವಾಗಿದ್ದ ಶ್ರೀಧರ ಸ್ವಾಮಿಗಳವರು ಈ ಪ್ರದೇಶವನ್ನು ಗುರುತಿಸಿ ಅದಕ್ಕೊಂದು ಗುಡಿಯ ವ್ಯವಸ್ಥೆ ಮಾಡಿದರು ಅನ್ನುವ ಐತಿಹ್ಯ ದೇವಸ್ಥಾನದಲ್ಲಿ ಉಲ್ಲಿಖಿತವಾಗಿದೆ. ಆದರೆ ಈ ದೇವಿಯನ್ನೇ ಕುಲದೇವಿಯನ್ನಾಗಿ ಹೊಂದಿರುವ ಹೊನ್ನಾವರದ ಕೆಲವು ಬ್ರಾಹ್ಮಣ ಕುಟುಂಬಗಳ ಸ್ಮರಣೆಯ ಪ್ರಕಾರ ಇತಿಹಾಸವು ತುಂಬಾ ತುಂಬಾ ಹಿಂದಕ್ಕೆ ಹೋಗುತ್ತದೆ. ದೆವಾಲಯಕ್ಕಾಗಿ ದೊಡ್ಡ ಜಾಗವನ್ನೇನೂ ಖುಲ್ಲಾಪಡಿಸದೆ ಇರುವುದರಲ್ಲಿಯೇ ಅಲ್ಲಲ್ಲಿ ಸಂಚಾರಯೋಗ್ಯಗೊಳಿಸಿ ಅಗತ್ಯವಿದ್ದಲ್ಲಿ ಸಿಮೆಂಟು ಬಳಿದು ದೇವಾಲಯ ಪ್ರಾಂಗಣವನ್ನು ನಿರ್ಮಿಸಿದ್ದಾರೆ. ಹೆಚ್ಚಿನ ಮಾರ್ಪಾಡು ಮಾಡದೇ ಇರುವುದಕ್ಕೆ ಕಾರಣವೂ ಇದೆ. ಸುತ್ತಲಿನ ಕಲ್ಲುಗಳೆಲ್ಲ ದೇವಿಯೇ ಆಗಿದ್ದು ಅವಕ್ಕೆ ಧಕ್ಕೆಯಾದರೆ ಅದು ದೇವಿಯನ್ನೇ ನೋಯಿಸಿದಂತೆ ಅನ್ನುವ ನಂಬಿಕೆಯಿದೆ. ಎಷ್ಟೆಂದರೆ ಅಲ್ಲಿನ ಕಲ್ಲುಗಳಿಗೇನಾದರೂ ಮುಕ್ಕಾದರೆ, ಗಾಯವಾದರೆ ಅವುಗಳಿಂದ ರಕ್ತ ಒಸರುವುದೆಂಬ ನಂಬಿಕೆ ಇಂದಿಗೂ ನೆಲೆಯಾಗಿದೆ. ಹಾಗಾಗಿ ಕೆತ್ತುವ, ಕಡೆಯುವ, ಮಾರ್ಪಾಡು ಮಾಡುವ ಕೆಲಸ ಅಲ್ಲಿ ನಡೆದಿಲ್ಲ. ಶುದ್ಧ ತಣ್ಣೀರು, ಅರಣ್ಯದ ಮೂಲಕ ಹಾದುಬರುವ ತಂಗಾಳಿ, ಆ ಎತ್ತರ ಮತ್ತು ಅಲ್ಲಿನ ವಾತಾವರಣವೆಲ್ಲ ಸೇರಿ ಅನನ್ಯವಾದೊಂದು ದೈವಿಕ ವಾತಾವರಣವನ್ನು ನಿರ್ಮಿಸುತ್ತವೆ.

ಪ್ರಕೃತಿಗೆ ಹತ್ತಿರವಾಗುವ ಮನಸಿರುವವರಿಗೆ ಹೇಳಿ ಮಾಡಿಸಿದ ತಾಣ ಕರಿಕಾನಮ್ಮನ ಮನೆ. 

Monday, July 25, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 1

ಮಳೆಗಾಲದ ಶುರುವಾತಿನಲ್ಲಿ ಕಳೆದೆರಡು ಮೂರು ವರ್ಷಗಳಿಂದ ಕೆಲವು ವಿಶಿಷ್ಟ ಎನ್ನಿಸುವ ದೇವಾಲಯಗಳಿಗೆ ಭೇಟಿಕೊಡುವ ಸುಯೋಗ ಒದಗಿ ಬರುತ್ತಿದೆ. ಮಳೆಗಾಲದ ಶುರುವಾತು ಅನ್ನುವುದು ವಿಶೇಷ ಹಸಿರುತನವನ್ನು ತುಂಬಿಕೊಟ್ಟಿರುವಂಥ ದೇವಾಲಯಗಳವು. ಹಸಿರುತನವಿಲ್ಲದ್ದು ಮತ್ತು ನೀರಿನ ನೆಲೆಯಿಲ್ಲದ್ದು ಒಂದು ದೇವಾಲಯವಾಗಿ ಇದುವರೆಗೆ ನನ್ನನು ಸೆಳೆದಿಲ್ಲ.
ಹಾಗೆ ನೋಡಿದರೆ ನಮ್ಮ ಪ್ರಾಚೀನ ದೇವಾಲಯಗಳೆಲ್ಲ ನೆಲೆಯಾಗಿದ್ದು ನೀರ ತೀರದಲ್ಲಿ (ನದಿ ಅಥವಾ ಕಡಲಿನ ಅಂಚಲ್ಲಿ) ಗಾಢ ಕಾಡಿನ ಗುಡ್ಡದ ಮೇಲೆ ಅಥವಾ ಒಂದಲ್ಲೊಂದು ಬಗೆಯಲ್ಲಿ serene ಅನ್ನಿಸುವ ತಾಣದಲ್ಲಿಯೇ ಹೊರತು ಬೇರೆಡೆಗಲ್ಲ. ಹನ್ನೆರಡು ನೂರು ವರ್ಷಗಳ ಹಿಂದೆ ಸ್ಥಾಪಿತವಾದ ಶೃಂಗೇರಿ ಪೀಠದ ಪರಿಸರ ಆ ಕಾಲದಲ್ಲಿ ಹೇಗಿದ್ದಿರಬಹುದು, ತಿರುಪತಿ ಗಿರಿವಾಸನ ನೆಲೆ ಅದು ಕಟ್ಟಲ್ಪಟ್ಟ ಕಾಲಕ್ಕೆ (ಅಜಮಾಸು ಕ್ರಿ.ಶ.೩೦೦) ಹೇಗಿದ್ದೀತು, ಶೃಂಗೇರಿಯ ಸಮೀಪದ ಕಿಗ್ಗ ಋಷ್ಯ ಶೃಂಗೇಶ್ವರನ (ರಾಮಾಯಣದ ಕಾಲದ ಲಿಂಗವಂತೆ ಅಲ್ಲಿಯದು) ಆಸುಪಾಸಿನ ಕಾಡು ಅದೆಂಥದಿದ್ದೀತು ಅಂದಿನ ಕಾಲಕ್ಕೆ! ಯಾಕೀ ಪ್ರಶ್ನೆ ಅಂದರೆ ಇವತ್ತಿನ ದಿಕ್ಕೆಟ್ಟ ಆಧುನಿಕತೆಯ ನಡುವೆಯೂ ಅಲ್ಲಿನ ಪರಿಸರಗಳು ಕಾಡು ಕಾಡಾಗಿವೆ. ಅದೇ ಸಾವಿರ ವರ್ಷಗಳ ಹಿಂದೆ ಊಹೆಗೆ ನಿಲುಕದಷ್ಟು ಘನಾರಣ್ಯ ಅದಾಗಿದ್ದಿರಬಹುದಲ್ಲವೇ? ಅಯ್ಯಪ್ಪನ ನೆಲೆ, ಉತ್ತರದ ತುದಿಯ ವೈಷ್ಣೋದೇವಿ ಕೂಡ ಕಾಡಿನ ನಡುವೆಯೇ ಮೈದಳೆದ ದೇವಾಲಯಗಳು. ಹೆಸರಿಸ ಹೋದರೆ ಸಾವಿರ ಇವೆ. ಮೈಸೂರಿನ ಚಾಮುಂಡಿಯೂ ಬೆಟ್ಟದ ದೇವತೆಯೇ.
ಈ ದೇವಾಲಯಗಳನ್ನೆಲ್ಲ ಅಲ್ಲಿಯೇ ನಿರ್ಮಿಸುವುದಕ್ಕೆ ನಿರ್ಮಾತೃಗಳಿಗೂ, ಅಥವಾ ತಾವಾಗಿಯೇ (ಸ್ಥಳ ಪುರಾಣದ ಪ್ರಕಾರ) ಅಂಥಲ್ಲಿ ನೆಲೆಯಾಗುವುದಕ್ಕೆ ಆಯಾ ದೇವತೆಗಳಿಗೂ ಪರಿಸರದ ಸೆಳೆತವೆಂಬ ಬಲವಾದ ಕಾರಣ ಇದ್ದಿರಲೇ ಬೇಕು. ಕಲ್ಯಾಣಿಯಾಗಲೀ, ಪರಿಸರವಾಗಲೀ ಆಧುನಿಕ ದೇವಾಲಯಗಳಿಗೆ ಮುಖ್ಯವಾಗಿಲ್ಲ ಎನ್ನುವುದು ಖೇದಕರ ಬೆಳವಣಿಗೆ. ಆ ಮಟ್ಟಿಗೆ ದೇವಾಲಯವೆಂಬ ಬಲು ವಿಸ್ತಾರವಾದ ಪರಿಕಲ್ಪನೆಯನ್ನು (concept) ನಾವು ಕಳೆಗುಂದಿಸಿಕೊಂಡಿದ್ದೇವೆ. ಬರೀ ಪೂಜೆಗೆ ಸೀಮಿತವಾಗಿ ನಮ್ಮ ದೇವಾಲಯಗಳು ಇವತ್ತಿಗೆ ಪ್ರಚುರವಾಗುತ್ತಿವೆ. ದೇವಾಲಯಗಳಲ್ಲಿ ಪೂಜೆಯೆಂಬುದು ಕಲೆಯದ್ದೂ, ಸಂಗೀತದ್ದೂ, ಬದುಕಿನದ್ದೂ ಆಗಿರುತ್ತಿದ್ದ ಶ್ರೀಮಂತ ಕಾಲವನ್ನು ನಾವು ಕಳೆದುಕೊಂಡಿದ್ದೇವೆ.
ಅಪವಾದಕ್ಕೆಂಬಂತೆ ಪ್ರಕೃತಿಯನ್ನೇ ಪೂರ್ತಿಯಾಗಿ ದೇವಾಲಯ ಎಂದು ಪರಿಗಣಿಸಿರುವ ಉದಾಹರಣೆ ಇಂದಿಗೂ ನಮ್ಮಲ್ಲಿ ಇದೆಯೆಂಬುದು ಅಷ್ಟರಮಟ್ಟಿಗೆ ಸಮಾಧಾನ. ಮತ್ತು ತೀರಾ ಮೂರ್ತಿಪೂಜೆಯನ್ನಷ್ಟೇ ಅವಲಂಬಿಸಿರುವ ಭಕ್ತರು ಇಂಥಲ್ಲಿಗೆ ಕಡಿಮೆ ಸಂಖ್ಯೆಯಲ್ಲಿ ಭೇಟಿಕೊಡುತ್ತಾರೆನ್ನುವುದು ಇನ್ನೂ ಸಮಾಧಾನದ ವಿಷಯ. ಗರ್ಭಗುಡಿಯ ಮೂರ್ತಿಯನ್ನು ಮಾತ್ರವೇ ದೇವರೆಂದು ಪರಿಗಣಿಸುವ ಜನರಿಂದ ದೇವಾಲಯಗಳಿಗೆ ತೊಂದರೆ ಇದೆಯಷ್ಟೆ. ಈ ಬಗೆಯ ಭಕ್ತರು ಹೋಗಿ ತಲುಪದ ಎರಡು ದೇವಾಲಯಗಳಲ್ಲಿನ ನನ್ನ ಅನುಭವನನ್ನು ಹಂಚಿಕೊಳ್ಳುತ್ತೇನೆ.
ಮೊದಲನೆಯದು ಕಳೆದ ವರ್ಷ ಮಳೆಗಾಲದ ಆದಿಯಲ್ಲಿ ನಾನು ಭೇಟಿ ಕೊಟ್ಟಿದ್ದ ಭೀಮೇಶ್ವರ ದೇವಾಲಯ. ಶಿರಸಿಯಿಂದ ಜೋಗದ ಗುಂಡಿಯ ಮಾರ್ಗವಾಗಿ ಭಟ್ಕಳಕ್ಕೆ ಹೋಗುವ ಹಾದಿಯಲ್ಲೆಲ್ಲೋ ಒಳಗೆ (ಶಿವಮೊಗ್ಗ ಜಿಲ್ಲೆ) ಹೀಗೊಂದು ದೇವಾಲಯ ಇದೆಯೆಂದು ಯಾರಿಗೂ ಕಲ್ಪನೆಗೆಟುಕದು. ಡಾಂಬರು ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರು ಮಣ್ ರಸ್ತೆಯಲ್ಲಿ ಕಾಡಿನೊಳಗೆ ನಡೆದ ಬಳಿಕವಷ್ಟೇ ಈ ದೇವಾಲಯ ಗೋಚರವಾಗುತ್ತದೆ. ಮಳೆಗಾಲವಾದರೆ ಹಾದಿಯಲ್ಲಿ ರಕ್ತ ಹೀರುವ ಇಂಬಳಗಳ ಸಾಥ್ ಕೂಡ ದೊರೆಯುತ್ತದೆ. ನಾಲ್ಕು ಮಳೆಯಾಯಿತೆಂದರೆ ನಡೆದಲ್ಲದೆ ಬೇರೆ ಬಗೆಯಲ್ಲಿ ಹೋಗಲಾಗದು. ಬೇಸಿಗೆಯಲ್ಲಿ ಎಸ್ ಯು ವಿ ವಾಹನಗಳು ಹೋಗಬಹುದೇನೋ. ದೇವಾಲಯದ ಬುಡ ತಲುಪಿದಂತೆಲ್ಲ ಕಲ್ಲಿನ ಮೆಟ್ಟಿಲ ಸಾಲು ಇದಿರಾಗುತ್ತದೆ; ಅದರ ಮೂಲಕ ಹತ್ತಿ ಹೋಗುವಾಗ ಬಲಗಡೆಯಲ್ಲಿ ಸದ್ದು ಮಾಡುತ್ತ ಇಳಿದು ಸಾಗುವ ಜಲಪಾತದ ನೀರು. ಇವತ್ತಿಗೂ ಊರು ಬೆಳೆದಿರದ ಕಾಡಲ್ಲಿ ನೆಲೆ ನಿಂತ ಭೀಮೇಶ್ವರನಿಗೆ ದಿನಾ ಪೂಜೆಯಿದೆಯೆನ್ನುವುದೇ ಅಚ್ಚರಿ. ಆ ಕೈಂಕರ್ಯಕ್ಕೆಂದೇ ಪುರೋಹಿತರೊಬ್ಬರು ತಮ್ಮ ಕೊನೆಗಾಲದ ಹಿಡಿ ಜೀವವನ್ನು ಹಿಡಿದುಕೊಂಡು ತಪಸ್ಸಿನಂಥಾ ಮೌನದ ಬದುಕನ್ನು ಬದುಕುತ್ತಿದ್ದಾರೆ. ಅಪರೂಪಕ್ಕೆ ಪ್ರವಾಸಿಗರು ಹೋದರೆ ಮಾತು, ಅದಿಲ್ಲದಿದ್ದರೆ ಅವರುಂಟು ಅವರ ಭೀಮೇಶ್ವರನುಂಟು. ಉಳಿದಂತೆ ಕಾನನದ ಜೀರುಂಡೆಗಳ ಜೀರ್ ಸದ್ದು ಮತ್ತು ದೇವಾಲಯದ ಪ್ರಾಂಗಣದಲ್ಲೇ ಎಂಬಂತೆ ಸುರಿದುಬಿದ್ದು ಶಬ್ದಮಾಡುವ ಜಲಪಾತವೊಂದು ಅವರ ಸಹವಾಸಕ್ಕೆಂಬಂತೆ ಅಲ್ಲಿವೆ. 

ನಡೆಯ ಆಯಾಸವನ್ನೆಲ್ಲ ಪರಿಹರಿಸುವಂಥಾ ರಮ್ಯ ದೇವಾಲಯ ಭೀಮೇಶ್ವರನದು. ರಮ್ಯವೆಂದರೆ ಭವ್ಯವಾಗಿಯೂ, ಬೃಹದಾಕಾರವಾಗಿಯೂ ಇದೆಯೆಂದಲ್ಲ. ಹಾಗೆ ನೋಡಿದರೆ ಅದು ಸುವ್ಯವಸ್ಥಿತವಾಗಿಯೂ ಇಲ್ಲ; ಈಗಲೋ ಆಗಲೋ ನೆಲಕ್ಕೊರಗಿಬಿಡಬಹುದೆಂಬಂತಿದೆ. ಆದರೆ ಅದು ನೀರು ಮತ್ತು ಹಸಿರಿನ ಕಾರಣಕ್ಕೆ ತನ್ನೊಳಗೆ ನಿರ್ಮಿಸಿಟ್ಟುಕೊಂಡ ಚೈತನ್ಯಯುತ ಪರಿಸರವಿದೆಯಲ್ಲ ಅದು ಅತುಲ್ಯವಾದ್ದು. ಪಿರಮಿಡ್ ಆಕೃತಿಯ ಛಾವಣಿಯೂ ಸೇರಿದಂತೆ ಪೂರ್ಣ ದೇವಾಲಯ ನಿರ್ಮಾಣವಾಗಿದ್ದೇ ಕಲ್ಲಿನಲ್ಲಿ. ಕಂಬಗಳು, ಬೋಧಿಗೆಳು, ತೊಲೆಗಳು, ಛಾವಣಿಯ ಹಾಸು, ಪೀಠಗಳು- ಎಲ್ಲವೂ ಕಲ್ ಕಲ್ಲು. ನಾ ಅಲ್ಲಿಗೆ ಭೇಟಿ ಕೊಟ್ಟಿದ್ದ ಮಳೆಗಾಲದಲ್ಲಿ ಎಲ್ಲ ಸ್ತಂಭಗಳಿಗೂ, ನಲ ಹಾಸಿಗೂ, ಗೋಡೆಗಳಿಗೂ ಮಳೆಯೆಂಬುದು ಅಮ್ಮನಂತೆ ಸ್ನಾನ ಮಾಡಿಸುತ್ತಿತ್ತು. ಅದ್ಯಾವುದೋ ತಿಳಿಯದಷ್ಟು ಹಳೆಯ ಕಾಲದ ಕಲ್ಲಿನ ಛಾವಣಿಯು ಹೆಚ್ಚಿಗೆ ಹಟ ಮಾಡದೆ ನೀರನ್ನೆಲ್ಲ ಒಳಗೆ ಬಿಟ್ಟುಕೊಡುತ್ತಿತ್ತು. ಪಕ್ಕದಲ್ಲೇ ಧುಮುಕುವ ಜಲಪಾತದ ಎರಚು ಹನಿ, ಅದರ ತುಂಟ ಕವಲು ಧಾರೆಗಳು ದೇವಾಲಯದ ಮುಖ್ಯಭಾಗದಮೇಲೂ ಎರಗುತ್ತಿದ್ದವು. ಇಡೀ ದೇವಾಲಯದಲ್ಲಿ ಬಟ್ಟೆ ಬದಲಾಯಿಸುವುದಕ್ಕೂ ಒಣ ಜಾಗವನ್ನು ಹುಡುಕಲಾಗದ ಸ್ಥಿತಿ, ದೇವಾಲಯದ ಆವಾರದಲ್ಲಿ ಕಾಲಿಟ್ಟಲ್ಲೆಲ್ಲ ಜಾರುವಷ್ಟು ಹಾವಸೆ. ಇವೆಲ್ಲ ಸೇರಿಯೇ ಒಂದು ಬಗೆಯ ಖುಶಿಯನ್ನು ತುಂಬುತ್ತವೆ. 

ನಿರಂತರ ನೀರಿನ ದಾಳಿಗೆ ಸಿಕ್ಕು ಕೆಲವು ಕಲ್ಲಿನ ಕಂಬಗಳೂ ಮರದ ಕಂಬದಂತೆ ಗೆದ್ದಿಲು ಹಿಡಿದು ಹಾಳಾದವರಂತೆ ಕೊರೆದು ಹೋಗಿವೆ. ಆ ಜಲಪಾತದ ನೀರು ಎಂದೆಂದಿಗೂ ಬತ್ತಿದ ದಾಖಲೆಯಿಲ್ಲ ಎಂಬುದು ಅರ್ಚಕರ ಮಾತು. ಹಾಗಾಗಿ ಕಂಬಗಳಿಗೆ ನೀರಿಲ್ಲದ ದಿನವೇ ಇಲ್ಲ. ಹಾಗಾಗಿಯೇ ಕಲ್ಲಿನ ಕಂಭದ ಮೇಲೆಲ್ಲ ಹಸಿರು ಪಾಚಿಯ ಥರದ ಜೀವ ಅಂಕುರಿಸಿದೆ; ಕಲ್ಲಿಗೂ ಜೀವ ಬಂದಿದೆಯೆಂಬಂತೆ. ದೇವಾಲಕ್ಕೆ ಬಳಸಿಕೊಂಡ ಕಲ್ಲುಗಳಲ್ಲದೆ ಆ ಪರಿಸರದಲ್ಲಿರುವ ಇತರ ಬಂಡೆಗಳೂ ಮಳೆಯ ಜೊತೆ ಸುಖಿಸಿ ತಮ್ಮ ಮೈ ತುಂಬ ಹಸಿರಿನ ತುರಾಯಿಗಳನ್ನು ಹುಟ್ಟಿಸಿಕೊಂಡಿದ್ದವು. ಆ ತುರಾಯಿಗಳ ತುದಿಯಲ್ಲಿ ನಿಂತ ಬಿಂದು ನೀರು. ಒಟ್ಟಿನಲ್ಲಿ ಜೀವ ಮತ್ತು ಅಜೀವ ಎಂಬುದನ್ನು ವಿಂಗಡಿಸಿ ನೋಡಲಾಗದ, ಅವೆರಡಕ್ಕೂ ವಿಭಿನ್ನ ವಿವರಣೆ ಕೊಡಲಾಗದ ಅದ್ವೈತದ ಪರಮಾವಸ್ಥೆಯೊಂದು ಇಲ್ಲಿ ಸಾಕ್ಷಾತ್ತಾಗಿದೆಯೋ ಅನ್ನುವಂತಿತ್ತು.  

ನೀರಿಗೂ ಶಿವನಿಗೂ ಅವಿನಾಭಾವ ನಂಟು. ಅವನಿರುವುದೇ ಕೈಲಾಸಪರ್ಪತವೆಂಬ ನೀರ ನೆಲೆಯಲ್ಲಿ, ಗಂಗೆಯೆಂಬ ನೀರಿವಳಿರುವುದೂ ಅವನ ತಲೆಯಲ್ಲಿ. ಅವನಿದ್ದಲ್ಲೆಲ್ಲ ಅಭಿಷೇಕಕ್ಕೆ ಎಲ್ಲಿಲ್ಲದ  ಪ್ರಾಧಾನ್ಯ. ಶಿವಾಲಯಗಳಲ್ಲಿ ಶಿವಲಿಂಗದ ಮೇಲೆ ನಿರಂತರ ಬಿಂದು ನೀರು ಬೀಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಪ್ರಾಕೃತಿಕವಾಗಿಯೇ ಅಂಥ ವ್ಯವಸ್ಥೆ ಇರುವ ಶಿವಾಲಯಗಳೂ ನಮ್ಮಲ್ಲಿವೆ. ಯಾಣದ ಶಿವಾಲಯ ಇದಕ್ಕೆ ಉದಾಹರಣೆ. ಕಲ್ಲಿನಿಂದ ನೀರೊಸರುವ ತಾಣ ಅದು. ಭೀಮೇಶ್ವರ ಕೂಡ ಅದೇ ಬಗೆಯ ತಾಣವೆಂದರೆ ತಪ್ಪಾಗಲಾರದು. ಬಾಹುಬಲಿ ಚಿತ್ರದ ನಾಯಕ ತನ್ನ ಅಮ್ಮನ ಶಿವಾರ್ಚನೆಯ ಹೊತ್ತಿನಲ್ಲಿ ನೀರು ಹೊತ್ತು ತರುವ ಆಯಾಸ ಆಕೆಗೆ ಇರದಿರಲೆಂದು ಶಿವಲಿಂಗವನ್ನೇ ಜಲಪಾತದ ಅಡಿಯಲ್ಲಿ ಇರಿಸುತ್ತಾನಲ್ಲ, ಅದು ಇಲ್ಲಿ ವಾಸ್ತವವಾದಂತಿದೆ.
ಪುಣ್ಯವಶಾತ್ ಭೀಮೇಶ್ವರದಲ್ಲಿ ಗರ್ಭಗುಡಿಯ ಒಳಗೂ ಹೋಗುವ ಅವಕಾಶ ನನಗಾಗಿತ್ತು. ಗರ್ಭಗುಡಿಯೊಳಗೆ ಅರ್ಚಕರು ಹೊತ್ತಿಸಿಟ್ಟ ತೈಲದೀಪವನ್ನು ಹೊರತುಪಡಿಸಿದರೆ ಬೇರೆ ಬೆಳಕಿನ ಮೂಲ ಇರಲಿಲ್ಲ. ಲಿಂಗವೆಲ್ಲಿದೆ, ದ್ವಾರವೆಲ್ಲಿದೆ, ಗೋಡೆಯೆಲ್ಲಿದೆಯೆಂದೂ ಕಾಣದಷ್ಟು ಕತ್ತಲು. ತಮ್ಮ ಮಿದುಳಲ್ಲಿ ಅಚ್ಚಾದ ನಕ್ಷೆಯ ಆಧಾರದಲ್ಲೇ ಅರ್ಚಕರು ಗರ್ಭಗುಡಿಯೊಳಗೆ ಸಂಚರಿಸುತ್ತಾರೆ ಅನ್ನಿಸಿತು ನನಗೆ. ನಾನಂತೂ ಕೈಲಿದ್ದ ಮೊಬೈಲಿನ ಟಾರ್ಚ್ ಬೆಳಕಲ್ಲೇ ಗರ್ಭಗುಡಿಯ ಒಳಾಂಗಣವನ್ನೆಲ್ಲ ನೋಡಿದ್ದು. ಬಲಗಡೆ ಗಣಪತಿಯ ಮತ್ತು ಎಡಗಡೆ ದುರ್ಗಾಪರಮೇಶ್ವರಿಯ ಸುಂದರ ಕೆತ್ತನೆಯ ಮೂರ್ತಿಗಳು, ನಡುವೆ ಗರ್ಭ ಗುಡಿಯಲ್ಲಿ ಕತ್ತಲೆಯ ತಂಪಿನಲ್ಲಿ ಭೀಮೇಶ್ವರ.  ಅಲ್ಲಿಯೂ ನೆಲಕ್ಕೆ, ಗೋಡೆಗೆ ಬಾಗಿಲ ಪಟ್ಟಿಗೆಲ್ಲ  ನೀರಿನ ಪಸೆ, ಎಲ್ಲ ಹಸಿ ಹಸಿ.  ’ಭಟ್ಟರೇ ಈ ಕತ್ತಲಲ್ಲಿ ಕರ್ಪೂರಕ್ಕೆಂದು ಕೈಯಿಟ್ಟಲ್ಲಿ ಹಾವು ಕೈಗೆ ಸಿಕ್ಕರೇನು ಮಾಡ್ತೀರಿ?’ ಅನ್ನುವ ನನ್ನ ಪ್ರಶ್ನಗೆ ’ಭೀಮೇಶ್ವರ ನನ್ನ ಕಾಯ್ತಾನೆ, ಇದುವರೆಗೆ ಅಂಥದೆಲ್ಲ ಆಗಿಲ್ಲ, ನನ್ನ ಕೊನೆಯ ಉಸಿರಿನವರೆಗೂ ಭೀಮೇಶ್ವರನಿಗೆ ಅರ್ಚನೆ ತಪ್ಪಿಸದಿರುವುದೇ ನನ್ನ ಬದುಕಿನ ಧ್ಯೇಯ’ ಅನ್ನುವ ಧಾಟಿಯಲ್ಲಿ ಉತ್ತರ ಕೊಟ್ಟರು. ಆ ಹಿರಿಯರ ಶ್ರದ್ಧೆಗೆ ನಮೋ ಅಂದೆ. ’ಶ್ರದ್ಧಾ ವಿಶ್ವಮಿದಂ ಜಗತ್’ ಅಂತ ವೇದವೂ ಶ್ರದ್ಧೆಯನ್ನು ಸ್ಮರಿಸುತ್ತದಷ್ಟೆ.


ಇಂಥದೊಂದು ದೇವಾಲಯವನ್ನು ಇಷ್ಟು ಸುಂದರವಾಗಿ ಇಂಥಾ ಕಾಡಲ್ಲಿ ಯಾರು ಯಾಕಾಗಿ ಯಾವ ಕಾಲದಲ್ಲಿ ಕಟ್ಟಿದರು? ಅದರ ಐತಿಹ್ಯವೇನು- ಯಾವುದೂ ಸ್ಪಷ್ಟವಿಲ್ಲ. ಅರ್ಚಕರ ಪ್ರಕಾರ ಪಾಂಡವರು ವನವಾಸದ ಕಾಲದಲ್ಲಿ ಇಲ್ಲಿಗೆ ಬಂದಿದ್ದಾಗ ಭೀಮ ಈ ಲಿಂಗವನ್ನು ಸ್ಥಾಪಿಸಿ ಪೂಜಿಸಿದ್ದನಂತೆ. ಆ ಜಲಪಾತ ಅರ್ಜುನನ ಬಾಣದ ಹೊಡೆತಕ್ಕೆ ಕಣ್ಣೊಡೆದ ನೀರ ಸೆಲೆಯಂತೆ. ಈ ಬಗೆಯ ಕಥೆಗಳು ಭಾರತದ ಯಾವುದೇ ಹಳ್ಳಿಯಲ್ಲೂ ಧಾರಾಳ ಸಿಗುತ್ತವೆ. ಆದರೆ ಕಲ್ಲಿನ ದೇವಾಲಯವನ್ನು ಬೆಟ್ಟದ ಮಧ್ಯೆ ಕಟ್ಟಿದವರಾರು ಎಂಬ ವಿಷಯದಲ್ಲಿ ಇತಿಹಾಸ ಸುಮ್ಮನಾಗಿದೆ. ಇವತ್ತಿಗೂ ಉಳಿದುಕೊಂಡರು ಸೌಂದರ್ಯವನ್ನು, ಜೀವಂತ ದೇವಾಲಯವನ್ನು ಕಾಣುವ ಭಾಗ್ಯ ಒದಗಿದ್ದಕ್ಕೆ ಸುಮ್ಮನಾಗಬೇಕೇನೋ. ನಿಧಾನಕ್ಕೆ ಪ್ರಚಾರ ಪಡೆಯುತ್ತಿರುವ ಭೀಮೇಶ್ವರಕ್ಕೆ ಈಗೀಗ ಜನ ಬರುತ್ತಿದ್ದಾರೆ. ಅಲ್ಲಿಯ ಪರಿಸರದ ಶಾಂತಿಯನ್ನು ಕಲಕುವ ಕೆಲಸ ಇನ್ನೇನು ಶುರುವಾಗಬಹುದೆಂಬ ಭಯ ಇದ್ದೇ ಇದೆ. ಆದರೂ ಕಲ್ಲಿನ ಪದರಗಳಲ್ಲಿ ನಿರ್ಭಯವಾಗಿ ತೂಗಿಕೊಂಡಿರುವ ಹೆಜ್ಜೇನುಗಳು, ಬೆಟ್ಟದ ಹಾವುಗಳು, ಮಣ್ಣರಸ್ತೆ ಮತ್ತು ಜಾರುವ ನೆಲ- ಎಲ್ಲಾ ಸೇರಿ ಭೀಮೇಶ್ವರನ ಶಾಂತಿಯನ್ನು ಕಾಪಾಡಿಯಾವೆಂಬ ಭರವಸೆಯಿದೆ.  

Thursday, July 21, 2016

ಯುವ ಭಗೀರಥರಿವರು

ಮಳೆ ಇಲ್ಲ, ಬೆಳೆ ಕಡಿಮೆ, ಆಹಾರ ವಸ್ತುಗಳ ಬೆಲೆ ಏರಿಕೆ- ಸಾರ್ವಜನಿಕರಿಂದ ಸರ್ಕಾರಕ್ಕೆ ಬೈಗಳು, ಶಾಪ.
ಮಳೆ ಸರಿಯಾಗಿ ಆಗಿಲ್ಲ, ಬೇಸಿಗೆ, ಕುಡಿಯಲು ನೀರಿಲ್ಲ -ಜನರಾಶಿಯಿಂದ ಸರಕಾರಕ್ಕೆ ಮಂಗಳಾರತಿ.
ಹಳೆಯ ಕೆರೆಗಳ ಒತ್ತುವರಿ, ಅಕ್ರಮ- ಮಾಧ್ಯಮ ಮತ್ತು ಸಾರ್ವಜನಿಕರಿಂದ ಸರಕಾರಕ್ಕೆ ಛೀ ಮಾರಿ.
ಕುಡಿಯುವ ನೀರಿಗಾಗಿ ಮಹಿಳೆಯರಿಂದ ರಸ್ತೆ ತಡೆ, ಧರಣಿ, ಸತ್ಯಾಗ್ರಹ- ಬೇಕೇ ಬೇಕು ಕೂಗು.

ಇಂಥದ್ದು ತೀರಾ ಸಾಮಾನ್ಯ ಸುದ್ದಿಯಲ್ಲವೆ? ಬೈಯುವ, ತೆಗಳುವ, ಕಾಲೆಳೆಯುವ, ಆಡಿಕೊಂಡು ನಗುವ ಜನ ಬೇಕಾದಷ್ಟಿದ್ದಾರೆ. ಆದರೆ ಸಮಸ್ಯೆಯ ಪರಿಹಾರಕ್ಕೆ ತಾವೇ ಇಳಿದು ಕಾಯಕವೆಂಬ ತಪಸ್ಸಿನಲ್ಲಿ ತೊಡಗಿದವರು ತೀರಾ ಕಡಿಮೆ. ಸಮಸ್ಯೆಯೊಂದನ್ನು ಸಮಸ್ಯೆಯಾಗಿಯೇ ಇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಕಾಲದಲ್ಲಿ ನಾವಿದ್ದೇವೆ. ಅದರಲ್ಲಿ ಮುಖ್ಯವಾದ ಮತ್ತು ಚಿರಂತನವಾದ ಸಮಸ್ಯೆಯೆಂದರೆ ಅದು ನೀರಿನ ಕುರಿತಾದ್ದು. ಸಮಸ್ಯೆ ಎಷ್ಟು ಭೀಕರವಾಗಿದೆಯೆಂದರೆ ಇನ್ನೊಂದು ಮಹಾಯುದ್ಧ ಈ ಭೂಮಿಯಮೇಲೆ ನಡೆದರೆ ಅದು ನೀರಿಗಾಗಿ ಎಂಬಲ್ಲಿಯವರೆಗೆ ತಜ್ಞರು ತರ್ಕಿಸಿದ್ದಾರೆ. ಅಂಥದರಲ್ಲಿ ನಮ್ಮ ಜಲಮೂಲಗಳ ಬಗ್ಗೆ ಎಚ್ಚರ ತುಂಬುವ ಮತ್ತು ಅವುಗಳ ಉಳಿಕೆಗಾಗಿ ಶ್ರಮಿಸುತ್ತಿರುವ ಬೆರಳೆಣಿಕೆಯಷ್ಟು ಜನಗಳೂ ಮತ್ತು ಕೆಲವೇ ಕೆಲವು ಸಂಘಟನೆಗಳೂ ನಮ್ಮ ನಡುವೆ ಇವೆ ಎಂಬುದು ತುಂಬಾ ಧನಾತ್ಮಕವಾದ ಸಂಗತಿ.

೨೦೧೪ ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಭಾರತದ ಪ್ರಧಾನಿಯನ್ನಾಗಿ ನರೇಂದ್ರಮೋದಿಯವರನ್ನೇ ಚುನಾಯಿಸುತ್ತೇವೆಂಬ ಜಾಗ್ರತಿಯನ್ನು ಸಮಾಜದ ಮಧ್ಯೆ ಮೂಡಿಸಲು ಹುಟ್ಟಿಕೊಂಡ ಯುವ ಸೇನೆ ನಮೋ ಬ್ರಿಗೇಡ್. ಆ ಕಾಲದಲ್ಲಿ ಫೇಸ್ ಬುಕ್ ಎನ್ನುವುದು ಏನೆಲ್ಲ ಕ್ರಾಂತಿಯನ್ನು ಭಾರತದಾದ್ಯಂತ ತಂದಿತ್ತೆಂಬುದನ್ನು ನಾವೆಲ್ಲ ಕಂಡಿದ್ದೇವೆ. ನಮೋ ಬ್ರಿಗೇಡ್ ನನಗೆ ಪರಿಚಯವಾದ್ದೂ ಆ ಮೂಲಕವೇ. ನೋಡ ನೋಡುತ್ತ ನಮೋ ಬ್ರಿಗೇಡ್ ಅಕ್ಷರಶಃ ಹಳ್ಳಿ ಹಳ್ಳಿಯನ್ನೂ ತಲುಪಿತು. ಕರ್ನಾಟಕದಲ್ಲಿ ಆ ಹೊತ್ತಿನಲ್ಲಿ ನಮೋ ಬ್ರಿಗೇಡ್ ಹೆಸರು ಕೇಳದವರು ಇರಲಿಕ್ಕಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಬ್ರಿಗೇಡ್ ಕೂಡ ರಾಜಕೀಯ ಮಾಡುತ್ತ ಕುಳಿತುಕೊಳ್ಳುತ್ತದೆಂದೇ ಹಲವರ ಊಹೆಯಾಗಿತ್ತು. ಆದರೆ ನಡೆದಿದ್ದೇ ಬೇರೆ; ಮೋದಿ ಪ್ರಧಾನಿಯಾಗುತ್ತಿದ್ದಂತೆ ’ಮಿಷನ್ ಅಕಂಪ್ಲಿಷ್ಡ್’ ಅಂತ ಘೋಷಿಸಿ ನಮೋ ಬ್ರಿಗೇಡ್ ಅವತಾರ ಮುಗಿಸಿಕೊಂಡಿತು. ಆದರೆ ಅಷ್ಟಕ್ಕೇ ಸುಮ್ಮನಾಗದೆ ಭಾರತ ಕಟ್ಟುವ ಕನಸಿಗೆ ನೀರೆರೆಯಲೆಂದೇ ಯುವಾ ಬ್ರಿಗೇಡ್ ಅಂತ ಶುರುವಾಯ್ತು.

ಕರ್ನಾಟಕದ ಧನಾತ್ಮಕ ಯುವ ಪಡೆಗೆ ಯುವಾ ಬ್ರಿಗೇಡ್ ಅದ್ಭುತವಾದ ವೇದಿಕೆಯಾಯ್ತು. ವೇದಿಕೆಯೆಂದರೆ ಮತ್ತೆ ವೀಕೆಂಡ್ ಗಳಲ್ಲಿ ಚಾಯ್ ಉಪ್ಪಿಟ್ಟು ಸೇವಿಸಿ ಎದೆಯೊಡೆಯುವ ಕವಿತೆಗಳನ್ನೋದುವ ವೇದಿಕೆಯಲ್ಲ! ಅದಕ್ಕೆಂದೇ ಸಾವಿರಾರು ಬಳಗಗಳಿವೆ. ಕೆಂಪ್  ಕೆಂಪು ವಿಚಾರಗಳು ಮತ್ತು ಬಡವನ ಕಣ್ಣೀರಿನ ಕವಿತೆಯೋದುತ್ತ ಅವು ಮರಿ ಕ್ರಾಂತಿಕಾರರನ್ನು ತಯಾರಿಸುತ್ತವೆ. ಬ್ರಿಗೇಡ್ ಒದಗಿಸಿದ್ದು ಅಂಥ ವೇದಿಕೆಯನ್ನಲ್ಲವೇ ಅಲ್ಲ.  ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ದೊಡ್ಡ ಸಂಖ್ಯೆಯ ಕಲ್ಯಾಣಿಗಳಿವೆ, ಅವನ್ನೆಲ್ಲ ನಾವ್ ನಾವೇ ಪುನರುದ್ಧಾರ ಮಾಡೋಣ, ನೀರು ನಿಲ್ಲಿಸೋಣ ಬನ್ನಿ ಅಂತ ಕರೆಯಿತು. ಅದೊಂದು ಸಂಕಲ್ಪಕ್ಕೆ ಕೈಜೋಡಿಸಿ ಅಸ್ತು ಎಂದು ಹೊರಟ ಯುವಕರ ಪಡೆ ಇವತ್ತಿಗೆ ಬಹುತೇಕ ಎಲ್ಲ ಊರುಗಳಲ್ಲಿದೆ. ಎಲ್ಲೋ ದಾರಿ ಬಂದ್ ಮಾಡಿ ಹೋರಾಟ ಮಾಡುತ್ತ, ದೊಂಬಿ ಗಲಾಟೆಗೆ ತುಪ್ಪ ಸುರಿಯುತ್ತ, ಯಾರದ್ದೋ ಪ್ರತಿಕೃತಿ ಸುಟ್ಟು ತಿಥಿ ಮಾಡುತ್ತ, ಕೊನೆಗೆ ಬಂದು ಫೇಸ್ ಬುಕ್ ನಲ್ಲಿ ಕ್ರಾಂತಿಗೀತೆ ಬರೆಯುತ್ತ, ನಿನ್ನೆ ತಿಂದ ಕಬಾಬ್, ಮೊನ್ನೆ ಬರೆದ ಪೋಲಿ ಕವಿತೆ ಅಂತೆಲ್ಲ ಪುಂಗಿಯೂದುತ್ತ ಕೂರಲೇ ಇಲ್ಲ ಬ್ರಿಗೇಡ್. ತಣ್ಣಗೆ ತನ್ನ ಕೆಲಸ ಶುರುಮಾಡಿತು.

ಆ ಸಂಕಲ್ಪದ ಸಿದ್ಧಿಯೆಂಬಂತೆ ಇವತ್ತಿಗೆ ಕಣ್ಮರೆಯಾಗಿದ್ದ, ಕಾಯಕಲ್ಪವಿಲ್ಲದೆ ಬಡವಾಗಿದ್ದ, ಹೂಳು ತುಂಬಿ ಸತ್ತೋಗಿದ್ದ ಎಷ್ಟೋ ಕಲ್ಯಾಣಿಗಳು ಶುದ್ಧವಾಗಿವೆ, ತಣ್ಣೀರಿನ ಕೊಳಗಳಾಗಿವೆ. ಬಡವಾಗಿದ್ದ ಬಯಲಲ್ಲಿ ಹಸಿಗಿಡಗಳು ಜೀವ ಹಿಡಿದುಕೊಂಡಿವೆ. ಇದಲ್ಲವೆ ತಪಸ್ಸೆಂದರೆ?

ಕಲ್ಯಾಣ ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹಸ್ತ ಜೋಡಿಸಬಹುದು, ಅದಕ್ಕೆ ಮೀಸಲಾತಿಯ ಪರಿಧಿ ಇಲ್ಲ. ಹೆಸರಿಗಾಗಿ ಬರುವವರಿಗೆ ಈ ಕಾರ್ಯಗಳೆಲ್ಲ ಆಪ್ತವೆನ್ನಿಸದೇ ಇರಬಹುದು. ಬ್ರಿಗೇಡ್ ಹುಡುಗರಲ್ಲಿ ನಾನು ಹೆಸರು ಹೆಚ್ಚಿಸಿಕೊಳ್ಳುವ ಪ್ರವೃತ್ತಿಯನ್ನು ಕಂಡಿಲ್ಲ. ಅಥವಾ ಕಲ್ಯಾಣಿ ಶುದ್ಧಿಯ ಸಾಹಸಗಳನ್ನು ಬ್ರಿಗೇಡ್ ಹುಡುಗರು ಭಯಂಕರವಾಗಿ ಬರೆದುಕೊಂಡಿದ್ದಿಲ್ಲ. ನೆಲದ ಸೇವೆ ಮಾಡಬೇಕೆಂಬ ಮನಸಿದ್ದವನಿಗೆ ಕಾಯಕವು ಕೊಡುವ ಆತ್ಮ ತೃಪ್ತಿಯು ಎಲ್ಲದಕ್ಕಿಂತ ದೊಡ್ಡದಿರುತ್ತದೆ, ಹೆಸರಿನ ಗುಂಗು ಅದರೆದುರಿಗೆ ಏನೇನೂ ಅಲ್ಲ.  

ನಾವಿಂತಿಷ್ಟು ಕಲ್ಯಾಣಿಗಳನ್ನು ಸರಿಮಾಡಿದೆವು ಅಂತ ಬ್ರಿಗೇಡ್ ಇವತ್ತಿಗೂ ಬ್ಯಾನರ್ ಹಾಕಿದ್ದನ್ನು ನಾನು ಕಂಡಿಲ್ಲ ಎಲ್ಲೂ. ಚಕ್ರವರ್ತಿ ಅಣ್ಣ ಆಗೀಗ ತಮ್ಮ ಹುಡುಗರು ಹೀಗೊಂದು ಕಲ್ಯಾಣಿಯನ್ನು ತಿಳಿಗೊಳಿಸಿದರು ಅಂತ ತಮ್ಮ ಗೋಡೆಯ ಮೇಲೆ ಒಂದು ಸಾಲಿನ ಒಕ್ಕಣೆ ಬರೆದು ಕಲ್ಯಾಣಿಯ ಚಿತ್ರ ಪ್ರಕಟಿಸುತ್ತಾರೆ; ಮುಗಿಯಿತಷ್ಟೆ. ಅಥವಾ ಮುಂದಿನವಾರ ಹೀಗೊಂದು ಕಲ್ಯಾಣಿ ಇಂಥಲ್ಲಿ ತಿಳಿಗೊಳಿಸೋದಕ್ಕಿದೆ, ನಮ್ಮನ್ನು ಸೇರಿಕೊಳ್ಳುವವರು ಬರಬಹುದು ಅಂತ ಅಂಚೆ ಕಾರ್ಡಲ್ಲಿ ಹಸ್ತಾಕ್ಷರದಲ್ಲಿ ಬರೆದು  ತಮ್ಮ ವಾಲ್ ಗೆ ಅಂಟಿಸಿಕೊಳ್ಳುತ್ತಾರೆ. ನೀರಿಗಾಗಿ ಮಾಡುವ ಮಹತ್ತರ ತಪಸ್ಸೊಂದು ಹೆಚ್ಚಿಗೆ ಸದ್ದೇ ಮಾಡದೆ ಹಾಗೆ ಸಂಪನ್ನವಾಗುತ್ತದೆ. ನಿರಾಡಂಬರವಾಗಿದ್ದುಕೊಂಡು ದೇಶದ ನೆಲದ ಕುರಿತಾಗಿ ಶ್ರಮ, ಧನ, ಸಮಯ ಮೀಸಲಿಡುವ ಇಂಥ ಸಂಘಟನೆಗಳು, ಮತ್ತು ವ್ಯಕ್ತಿಗಳೆಡೆಗೆ ಎದೆತುಂಬಿದ ಗೌರವ ನನ್ನಲ್ಲಿದೆ.

ವೈಯಕ್ತಿಕವಾಗಿ  ನಾನು ಯುವಾ ಬ್ರಿಗೇಡ್ ಜೊತೆ ಕೆಲಸ ಮಾಡಿಲ್ಲ, ಆದರೆ ಅದರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದೊಂದನ್ನೂ ಗಮನಿಸಿದ್ದೇನೆ. ಆ ಹುಡುಗರು ರಕ್ತಬಸಿದು (ನಿಜಕ್ಕೂ ತಮ್ಮ  ಬೆವರು ಮತ್ತು ರಕ್ತ ಚೆಲ್ಲಿ) ಕೆರೆ ಶುದ್ಧಿ ಮಾಡಿ ಕೊನೆಯಲ್ಲಿ ಬರೆದುಕೊಳ್ಳುವ ಒಂದೇ ಸಾಲಿನ ತಿಳಿನೀರಿನಂಥಾ ಸಾಲು ಓದಿ ನಾನೇ ಹಸಿಗಣ್ಣಾಗಿದ್ದೇನೆ. ನನ್ನೂರಿನ ಸುತ್ತಮುತ್ತ ಅಂಥಾ ಪುನರುದ್ಧಾರ ಬೇಕಿರುವ ಕಲ್ಯಾಣಿ ಇದೆಯೇ ಎಂದು ಹುಡುಕಿದ್ದೇನೆ. ಸಧ್ಯಕ್ಕೆ ನಮ್ಮಲ್ಲಿನ ಕಲ್ಯಾಣಿಗಳು ಮಾಸಿಲ್ಲ. ಇನ್ನೆಲ್ಲೋ ಮಾಡುವ ಕಲ್ಯಾಣ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗವಹಿಸುವ ಸಂಕಲ್ಪವಿದೆ. ಇವತ್ತಿಲ್ಲಿ ಬ್ರಿಗೇಡ್ ಬಗ್ಗೆ ಬರೆದು ನನಗೆ ಆಗಬೇಕಾದ ಲಾಭವೇನೂ ಇಲ್ಲ, ಅವರೆಡೆಗಿನ ಗೌರವ ಇದನ್ನೆಲ್ಲ ಬರೆಸಿತಷ್ಟೆ.



Tuesday, July 5, 2016

    ಅರಣ್ಯ ಇಲಾಖೆಯೆಂಬ ಅಣಕು

ಕೇಂದ್ರ ಸರಕಾರ ಇನ್ನುಮುಂದೆ ದಟ್ಟಾರಣ್ಯದಲ್ಲಿ ಖಾಸಗಿಯವರಿಗೆ ಅರಣ್ಯ ಬೆಳೆಯಲು  ಅವಕಾಶ ಕೊಡುವುದರ ಬಗ್ಗೆ ಸೊಲ್ಲೆತ್ತಿದ್ದು ಸುದ್ದಿಯಾಗಿದೆ. ’ಅರಣ್ಯ ಬೆಳೆಯುವುದು’ ಎಂಬ ಪರಿಕಲ್ಪವನ್ನು ನಾನಂತೂ ನನ್ನ ಬಾಲ್ಯದಾರಭ್ಯ ಒಂದು ವ್ಯಂಗ್ಯದಂತೆಯೇ ಕಾಣುತ್ತ ಬಂದಿದ್ದೇನೆ.  ಇದೇ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಂಥಾ ಮಲೆಯ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ಪ್ರದರ್ಶಿಸುವ ಕೆಲವಾರು ಮೂರ್ಖತನಗಳು ನೆನೆಪಾದವು.

ನನ್ನೂರು ಬೆಟ್ಟಗಳಿಂದ ಆವೃತವಾಗಿದೆ; ಉತ್ತರಕನ್ನಡದ ಹಲವಾರು ಹಳ್ಳಿಗಳಂತೆ. ಬೆಟ್ಟ ಇದ್ದಲ್ಲೆಲ್ಲ ಬೆಟ್ಟಕ್ಕೆ ಸಂಬಂಧಪಟ್ಟ ಇಲಾಖೆಯ ಚಟುವಟಿಕೆಯಿರುವುದು ಸಹಜವೇ. ಆದರೆ ಬೆಟ್ಟದ ವಿಷಯದಲ್ಲಿ ಸಾಮಾನ್ಯ ಹಳ್ಳಿಗರಿಗಿರುವಷ್ಟು ಜ್ಞಾನವೂ ಇಲ್ಲದವರಂತೆ ಈ ಬೆಟ್ಟದ ಇಲಾಖೆ ಮೂರ್ಖತನವನ್ನು ತೋರುತ್ತದೆ. ಮೂವತ್ತು ವರ್ಷಗಳ ಹಿಂದೆ ನಿತ್ಯಹರಿದ್ವರ್ಣ ಕಾಡಾಗಿದ್ದ ನನ್ನೂರಿನ ಒಂದು ಪಕ್ಕದ ಕಾಡಿನಲ್ಲಿ ಅರಣ್ಯ ಇಲಾಖೆಗೆ ಏಕಾ ಏಕಿ ಸಾಗುವಾನಿ (ಟೀಕ್ ವುಡ್) ಬೆಳೆಯುವ ಉಮೇದು ಹೊತ್ತಿತು. ಸರಿ, ನಿತ್ಯಹರಿದ್ವರ್ಣ ಕಾಡನ್ನು ತರಿದು ಹಾಕಿ ಗುಡ್ಡದ ಮೈಮೇಲೆಲ್ಲ ಸಾಗುವಾನಿಯನ್ನು ನೆಡಲಾಯ್ತು. ನಿತ್ಯಹರಿದ್ವರ್ಣ ಕಾಡು ಕ್ರಮೇಣ ಮಾಯುತ್ತ ಬಂದು ಇವತ್ತಿಗೆ ಆ ಗುಡ್ಡಕ್ಕೆ ಗುಡ್ಡವೇ ಸಾಗುವಾನಿ ಗುಡ್ಡವಾಗಿದೆ. ಸಾಗುವಾನಿ ಎಂಥಾ ಮರವೆಂದರೆ ಅದು ತನ್ನ ಸುತ್ತ ಬೆಟ್ಟದ ಸಹಜ ಸಸ್ಯರಾಶಿಯನ್ನು ಬೆಳೆಯಗೊಡುವುದಿಲ್ಲ, ಬೇಸಿಗೆ ಬಂತೆಂದರೆ ಎಲೆ ಉದುರಿಸಿ ಕಾಲ ಬುಡಕ್ಕೆ ರಾಶಿ ಹಾಕಿಕೊಳ್ಳುತ್ತದೆ, ಮತ್ತು ಬೆಟ್ಟದ ಬೆಂಕಿಗೆ ಆ ತರಗೆಲೆ ಪ್ರತಿವರ್ಷವೂ ಸುಟ್ಟು ಬೂದಿಯಾಗುತ್ತದೆ. ಪರಿಣಾಮ, ಅಕಸ್ಮಾತ್ ಬದುಕಿದ್ದ ಸಣ್ಣಪುಟ್ಟ ಸಸ್ಯಗಳ ಮಾರಣ ಹೋಮ ಮತ್ತು ಪ್ರಾಣಿಸಂಕುಲಕ್ಕೆ ಬರೆ. ಊರಿನ ಇನ್ನೊಂದು ಪಕ್ಕದ ಗುಡ್ಡಕ್ಕೆ ನಿತ್ಯಹರಿದ್ವರ್ಣ ಕಾಡು ಇವತ್ತಿಗೂ ಜೀವಂತ ಹಬ್ಬಿಕೊಂಡಿದೆ. ನಂಬಿ, ಬೇಸಗೆಯಲ್ಲೂ ಅದೆಷ್ಟು ತಂಪನೆಯ ಬೆಟ್ಟವೆಂದರೆ ಅದಕ್ಕೆ ಬೆಂಕಿ ಹೊತ್ತಲಾರದು. ನಾನೆಂದೂ ಆ ಬೆಟ್ಟಕ್ಕೆ ಬೆಂಕಿ ಬಿದ್ದುದನ್ನೇ ಕಂಡಿಲ್ಲ, ಸೂರ್ಯನ ನೇರ ಬೆಳಕು ನೆಲಕ್ಕೆ ಬೀಳದಷ್ಟು ಗಾಢ ಕಾನನ ಅದು. ಇನ್ನೊಂದು ಪಕ್ಕಕ್ಕೆ ವಕ್ಕರಿಸಿಕೊಂಡಿರುವ ಸಾಗುವಾನಿ ಕಾಡೆಂಬ ಬೆಂಗಾಡನ್ನು ಕಾಣುವಾಗೆಲ್ಲ ಅಮೂಲ್ಯವಾದ್ದನ್ನು ಕಳಕೊಂಡ ನೋವಾಗುತ್ತದೆ ಮನಸಿಗೆ. ಅರಣ್ಯ ಇಲಾಖೆಯ ಪ್ರಜ್ಞಾ ಶೂನ್ಯತೆಗೆ ಇದೊಂದು ಉದಾಹರಣೆ.
ಪ್ರತಿಬಾರಿಯೂ ಮಳೆಗಾಲದಲ್ಲಿ ಗಿಡ ನೆಡುವ ಒಳ್ಳೆಯ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯೂ ಹಮ್ಮಿಕೊಳ್ಳುತ್ತದೆ. ಹಾಗೆಯೇ ಪ್ರತಿಬಾರಿಯೂ ಹಿಂದಿನ ವರ್ಷ ಸಸಿ ನೆಟ್ಟ ಜಾಗದಲ್ಲೇ ಮತ್ತೆ ಸಸಿ ನೆಡುವ ಹೀನಾಯ ಅಪಮಾನವನ್ನು ದಶಕಗಳಿಂದ ಉಣ್ಣುತ್ತಿದೆ. ಮೊನ್ನೆ ಊರಿಗೆ ಹೋದಾಗ ಎಂದಿನಂತೆ ಬೆಟ್ಟ ಸುತ್ತಲು ಹೋಗಿದ್ದೆ. ಬೆಟ್ಟದ ಬದಿಯ ದಿಣ್ಣೆಯಮೇಲೆ ಪ್ರತಿವರ್ಷದಂತೆ ಈ ವರ್ಷವೂ ಕತ್ತರಿಯಾಕಾರದಲ್ಲಿ ಬೇಲಿ ಗಿಡ ನೆಟ್ಟಿದ್ದಾರೆ. ಅದನ್ನು ನೋಡಿ ವಿಷಾದ ಅನ್ನಿಸಿತು. ಈಗ್ಗೆ ಹದಿನೈದು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಾವು ಮಕ್ಕಳು ಶಾಲೆಯ ಬೇಲಿಗೆಂದು  ಮಳೆಗಾಲದಲ್ಲಿ ತಂದು ನೆಟ್ಟ ಬಕುಲ ಗಿಡಗಳು ಇಂದು ಮರವಾಗಿವೆ, ಆದರೆ ಅರಣ್ಯ ಇಲಾಖೆ ಮಾತ್ರ ಒಂದು ಸಸಿಯನ್ನೂ ಬದುಕಿಸಿಕೊಳ್ಳಲಾಗಿಲ್ಲ- ಇದು ವಿಷಾದ ಅಲ್ಲದೆ ಇನ್ನೇನು? ಆಯಾ ಪರಿಸರಕ್ಕೆ ಹೊಂದಿಕೊಳ್ಳದ ಗಿಡಗಳನ್ನು ನೆಡುವುದು, ನೆಟ್ಟಮೇಲೆ ಮತ್ತೆಂದೂ ಆ ಕಡೆ ಸುಳಿಯದಿರುವುದು, ಅದಕ್ಕೆ ರಕ್ಷಣೆ ಕೊಡದಿರುವುದು ಇವೆಲ್ಲ ಶ್ರದ್ಧೆಯುಳ್ಳವರ ಕಾರ್ಯಗಳಲ್ಲವಷ್ಟೆ. ನಿತ್ಯಹರಿದ್ವರ್ಣ ಕಾಡಿನಲ್ಲಿ ಅಕೇಶಿಯಾ ಗಿಡ ನೆಡುವಾಗ ಸುತ್ತಲಿನ ಐದಾರು ಗಿಡಗಳನ್ನು ಕಡಿದು ಅದಕ್ಕೆ ಆಧಾರ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲಿ ಮರ ನೆಡಬೇಕು, ನೆಡುತ್ತಾರಷ್ಟೆ.

ಬೆಟ್ಟದ ಕೊನೆಗಳಲ್ಲಿ ಮನುಷ್ಯರು ಸುಲಭವಾಗಿ ಒಳಹೋಗಲಾಗದಂತೆ, ಪ್ರಾಣಿಗಳು ಊರಿಗೆ ಬರಲಾಗದಂತೆ, ಮಳೆಗಾಲದಲ್ಲಿ ನೀರು ಇಂಗಲೆಂಬಂತೆ ಕಳೆದವರ್ಷ ನಮ್ಮಲ್ಲೆಲ್ಲ ಹಳ್ಳದಂಥದ್ದೇನೋ ತೋಡಿದೆ ಅರಣ್ಯ ಇಲಾಖೆ ಮತ್ತು ಅಲ್ಲಿಯೂ ಅವೈಜ್ಞಾನಿಕತೆ ಮೆರೆದಿದೆ. ಬೇಸಿಗೆಯಲ್ಲಿ ಮರದ ಬುಡದ ಮಣ್ಣನ್ನು ಎತ್ತಿ ಹಾಕಿದ್ದರಿಂದ ಈ ವರ್ಷದ ಮಳೆಗಾಲಕ್ಕೆ ಮರಗಳು ಬುಡಕಳಚಿ ಧರೆಗುರುಳುತ್ತಿವೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಂತಲ್ಲವೆ ಇದು?

ಅಕೇಶಿಯಾ ಗಿಡಗಳನ್ನಂತೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೆಡುತ್ತದೆ ಇಲಾಖೆ. ಉತ್ತರಕನ್ನಡದ ಸಜಹ ಅರಣ್ಯಗಳಲ್ಲಿ ಈ ಅಕೇಶಿಯಾ ಅನ್ನುವ ಮಾರಿಗೆ ಜಾಗ ಕೊಡಬೇಕಾದ್ದೇ ಇರಲಿಲ್ಲ. ಆದರೆ ದುರದೃಷ್ಟಕ್ಕೆ ಈಗಾಗಲೇ ಅದು ಅರಣ್ಯವನ್ನೂ ಕೃಷಿ ಭೂಮಿಯನ್ನೂ ಆವರಿಸಿಕೊಂಡಾಗಿದೆ. ಬೆಟ್ಟದ ಮಧ್ಯೆ ಬದುಕುವ ಸಾಮಾನ್ಯ ಜನಕ್ಕೂ ಗಿಡಮರಗಳ ಬಗ್ಗೆ ಕಾಳಜಿ, ತಿಳುವಳಿಕೆ ಮತ್ತು ಗೌರವಗಳಿರುತ್ತವೆ. ಅರಣ್ಯ ಇಲಾಖೆ ಮಾತ್ರ ಕಾಟಾಚಾರಕ್ಕೆಂಬಂತೆ ಕಾಡಿನ ಕೆಲಸ ಮಾಡುತ್ತದೆ. ಗಿಡ ನೆಡುವ ವಿಚಾರ ಮಾತ್ರವೇ ಅಲ್ಲ, ಒಡ್ಡು ನಿರ್ಮಾಣದ ವಿಷಯದಲ್ಲೂ ಇದೇ ಕಥೆ. ಅರಣ್ಯ ಇಲಾಖೆಯದ್ದೊಂದೇ ಹಣೆಬರಹ ಇದಲ್ಲ, ಸರಕಾರೀ ಯಂತ್ರದ ಬೇರೆ ಬೇರೆ ಪಾರ್ಟ್ ಗಳಲ್ಲೂ ಇದೇ ಖಾಯಿಲೆ ಇದೆ.  ಪ್ರಯೋಜನಕ್ಕೆ ಬಾರದ ಕೆಲಸ ಮಾಡುವ ಸರಕಾರೀ ಸ್ವಭಾವ ಯಾವಾಗ ಶಮನವಾಗುವುದೋ ದೇವರೇ ಬಲ್ಲ. ಬಹುಶಃ ಇದನ್ನೆಲ್ಲ ನೋಡಿಯೇ ಮೋದಿ ಸರಕಾರ ಖಾಸಗಿಯವರಿಗೆ ಅರಣ್ಯದಲ್ಲಿ ಅರಣ್ಯ ಬೆಳೆಸಲು (!) ಅವಕಾಶ ಕೊಡುವ ವಿಚಾರ ಶುರುಮಾಡಿಕೊಂಡಿದೆ. ಸರಕಾರದ ಚಿಂತನೆಯ ಹಿನ್ನೆಲೆ ಏನಿದೆಯೋ ಗೊತ್ತಿಲ್ಲ, ಆದರೆ ಹಾಗೊಂದು ನೀತಿ ಬಂದಲ್ಲಿ ಅರಣ್ಯ ನಾಶದ ಹೊಸದೊಂದು ದಿಕ್ಕು ತೆರೆದುಕೊಳ್ಳುವುದು ಖಚಿತ.


Tuesday, May 31, 2016

ಮೋದಿ ಜೀ...



’ಕಾಲಾ ಧನ್ ಇಸ್ ಚುನಾವ್ ಕಿ ಮುದ್ದಾ ಹೆ ಯಾ ನಹಿ?’ ಅಂತ ಜೋರು ಜೋರಾಗಿ ಭಾಷಣ ಮಾಡುತ್ತಲೇ ವಿಜಯದ ನಗೆ ಬೀರಿದ್ದು ನಿಮ್ಮ ಸಾರಥ್ಯದ ಎನ್ಡಿಏ. ಅಚ್ಛೇ ದಿನ್ ಬಗ್ಗೆ ನೀವು ಅದೆಷ್ಟೇ ಭಾಷಣ ಕೊಟ್ಟಿದ್ದರೂ ಅದೆಲ್ಲವನ್ನೂ ನಂಬಿ ವೋಟ್ ಮಾಡುವಷ್ಟು ನಮ್ಮ ತಲೆಮಾರು ಮುಗ್ಧವಾಗಿರಲಿಲ್ಲ. ಹಾಗಂತ ತೀರಾ ನಿಮ್ಮ ಸರಕಾರ ತೆರಿಗೆ ಹೆಸರಲ್ಲಿ ಲೂಟಿ ಮಾಡಬಹುದು ಅಂತಲೂ ಅಂದುಕೊಂಡಿರಲಿಲ್ಲ.
ಈ ದೇಶದ ಮಧ್ಯಮವರ್ಗದವರು ಕಾಲಾ ಧನ್ ವಾಪಸ್ ತರುವುದರಬಗ್ಗೆ ನೀವು ಮಾತಾಡಿದಾಗೆಲ್ಲ ನಮ್ಮ ಖಾತೆಗೆ ಲಕ್ಷ ಲಕ್ಷ ಹಣ ಬಂದುಬೀಳುವ ಕನಸು ಕಂಡ ಜನ ಆಗಿರಲಿಲ್ಲ. ಆದರೆ ಕಾಲಾ ಧನ್ ಬಗ್ಗೆ ಭಾರೀ ಮಾತಾಡುವ ಮೋದಿ ಕಾಲಾ ಧನ್ ಪ್ರಮಾಣವೇ ಕಡಿಮೆಯಾಗುವಂತೆ ಮಾಡಿಯಾರೆಂಬ ನಂಬುಗೆಯಿತ್ತು. ಇನ್ನು ನಾವ್ಯಾವತ್ತೂ ಲಕ್ಷುರಿಯ ಕನಸು ಕಂಡವರಲ್ಲವಾದ್ದರಿಂದ ಅಚ್ಛೇ ದಿನ್ ಅಂದರೆ ಲಕ್ಷುರಿ ಬಾರತ ಅಂತಲೂ ಅಂದುಕೊಂಡಿರಲಿಲ್ಲ. ನಿಮ್ಮ ವರಸೆ ನಮ್ಮಲ್ಲೇನೋ ಭರವಸೆ ತುಂಬಿದ್ದು ನಿಜ.

ಮನುಷ್ಯನ ಕೈಲಿ ನಗದು ರೂಪದಲ್ಲಿ ಹಣ ಓಡಾಡದ ಹೊರತು ಕಪ್ಪು ಹಣ ಉತ್ಪತ್ತಿಯಾಗುವುದೇ ಸಾಧ್ಯವಿಲ್ಲದ್ದರಿಂದ, ಕಪ್ಪು ಹಣದ ಬಗ್ಗೆ ಭಾರೀ ಮಾತಾಡಿದ್ದ ನಿಮ್ಮ ಸರಕಾರ ಆನ್ ಲೈನ್ ಟ್ರಾನ್ಸಾಕ್ಷನ್ ಗಳ ಮೇಲೆ ಸೇವಾ ತೆರಿಗೆಯನ್ನು ಮತ್ತು ಪ್ರೊಸೆಸಿಂಗ್ ಫೀಯನ್ನು ಕಡಿಮೆ ಮಾಡಬಹುದು ಅಂದುಕೊಂಡಿದ್ದೆವು. ಅಂದರೆ ಆನ್ಲೈನ್ ವ್ಯವಹಾರಗಳಿಗೆ ಉತ್ತೇಜನ ಕೊಡುವ ಪ್ರಯತ್ನ ಮಾಡುತ್ತೀರಿ ಅಂತ ನಮ್ಮ ನಿರೀಕ್ಷೆಯಾಗಿತ್ತು. ಹಾಗಂತ ನಮ್ಮ ಫ್ಲಿಪ್ ಕಾರ್ಟು, ಅಮೇಝಾನ್ ಎಲ್ಲಾ ನಿಮ್ಮ ಮಾತು ಕೇಳಿ ಸೇವಾ ತೆರಿಗೆ ಇಲ್ಲದೇ ಕೆಲಸ ಮಾಡುತ್ತವೆ ಅಂತ ಅಂತೇನೂ ಬಯಸಿರಲಿಲ್ಲ. ಅವೆಲ್ಲ ಖಾಸಗಿ ಸಂಸ್ಥೆಗಳು ನಿಮ್ಮ ಮಾತು ಕೇಳಲಿಕ್ಕೆ ಕಾನೂನು ಮೂಲಕ ಬಿಗಿ ಮಾಡಬೇಕಾಗುತ್ತದೆ, ಮತ್ತದಕ್ಕೆ ಸಮಯ ಬೇಕಾಗುತ್ತದೆ ಅನ್ನುವುದೂ ಗೊತ್ತಿದೆ. ಅದರೆ ಭಾರತೀಯ ರೈಲ್ವೇ ಅಂತೊಂದು ಮಹಾನ್ ವ್ಯವಸ್ಥೆ ಉಂಟಲ್ಲ, ಅದು ನಿಮ್ಮಡಿಯಲ್ಲೇ ಇದೆ ಅನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಟಿಕೇಟ್ ಮೇಲೆ, ಮೋದಿ ಜೀ, ಪ್ರತಿ ಟಿಕೆಟ್ ಮೇಲೆ ಆನ್ ಲೈನ್ ಬುಕಿಂಗ್ ಮಾಡುವಾಗ ೨೨.೯ (ಇಪ್ಪತ್ಮೂರು ಅಂತಿಟ್ಟುಕೊಳ್ಳಿ) ಸೇವಾ ತೆರಿಗೆ ತೆಗೆದುಕೊಳ್ಳುತ್ತದೆ ರೈಲ್ವೆ ಇಲಾಖೆ! ಅಷ್ಟಕ್ಕೇ ಮುಗಿಯಲಿಲ್ಲ, ಬ್ಯಾಂಕಿನ ಮೂಲಕ ಹಣ ತುಂಬಬೇಕು ತಾನೆ, ಮತ್ತೆ ಅದಕ್ಕೂ ಸೇವಾತೆರಿಗೆ ತೆರಬೇಕು. ಪ್ರತಿ ಟ್ರಾನ್ಸಾಕ್ಷನ್ನಿಗೆ ೧೦ ರೂಪಾಯಿ. ಅಲ್ಲಿಗೆ ಸೇವೆಯ ಹೆಸರಲ್ಲಿ ಮೂವತ್ಮೂರ್ರುಪಾಯ್ ತಣ್ಣಗೆ ಕರಗೋಗಿರುತ್ತದೆ. ಮೋದಿ ಜೀ, ಆನ್ಲೈನ್ ಬುಕಿಂಗ್ ಅನ್ನುವುದು ಗ್ರಾಹಕನಿಗೆ ವರದಾನದಂತಿದ್ದರೂ ಇಷ್ಟೆಲ್ಲ ತೆರಿಗೆ ತೆರುವಷ್ಟು ಜನ ಗಟ್ಟಿಯಿದ್ದಾರೆ ಅಂದುಕೊಳ್ಳಬೇಡಿ. ಅದಲ್ಲದೆ ಆನ್ ಲೈನ್ ವ್ಯವಹಾರವನ್ನು ಹೆಚ್ಚಿಸಬೇಕೆಂದು ಬಯಸುವುದಾದರಂತೂ ಇದು ಸಹಿಸಲಸಾಧ್ಯ ತೆರಿಗೆ ಪದ್ಧತಿ. ಕರ್ನಾಟಕ ಸರಕಾರದ ಸಾರಿಗೆ ಕೂಡ ನಿಮ್ಮನ್ನೇ ಅನುಸರಿಸಿ ಮೂವತ್ ರೂಪಾಯಿ ತೆರಿಗೆ ಪಾವತಿಸಿಕೊಳ್ಳುತ್ತಾನೆ, ಬ್ಯಾಂಕಿನ ಸೇವೆಗೆ ೧೦ ರೂಪಾಯಿ, ಅಲ್ಲಿಗೆ ಹೆಚ್ಚಿಗೆ ೪೦ ರೂಪಾಯಿ ಕೊಟ್ಟಂತಾಗುತ್ತದೆ. ಅಚ್ಛೇ ದಿನ್ ಮೆನೂ ಇಷ್ಟೆಲ್ಲ ತುಟ್ಟಿ ಇದೆಯಾ ಮೋದಿ ಜೀ!?

ದೇಶದ್ದೇ ಕಾರ್ಡ್ ವ್ಯವಸ್ಥೆ ’ರೂಪೇ’ ಬಂದಾಗ ತುಂಬಾ ಖುಷಿ ಪಟ್ಟಿದ್ದೆವು; ಅದರಲ್ಲಿ ಸೇವಾ ತೆರಿಗೆ ಪ್ರಮಾಣ ಕಡಿಮೆ ಇರಬಹುದೇನೋ ಅಂತ. ನಿಮ್ಮಂಥ ನೀವೇ ಪ್ರಧಾನಿ ಆದಾಗ್ಯೂ ರೂಪೇ ಯನ್ನು ಜನಪ್ರಿಯ ಮಾಡುವಲ್ಲಿ ನೀವು ಯಶಸ್ವಿಯಾಗಿಲ್ಲ.

ನೀವು ಸ್ವಚ್ಛಭಾರತ್ ಸೆಸ್ ಹೆಸರಲ್ಲಿ ಸೇವಾ ತೆರಿಗೆಯನ್ನು ಶೇ.೧೪ಕ್ಕೆ ಏರಿಸಿದಾಗ ಜಿ ಎಸ್ ಟಿ ಸಧ್ಯದಲ್ಲೇ ಬರುತ್ತದೆ ಅಂದಿರಿ. ಆಗಲೂ ನಾವು ಮಧ್ಯಮ ವರ್ಗದವರು ಸರಿ, ಜಿ ಎಸ್ ಟಿ ಬಂದರೆ ಸರಿಯಾದೀತೆಂದು ಸುಮ್ಮನಾದೆವು. ಎರಡು ಅಧಿವೇಶನ ನಡೆದರೂ ಜಿ ಎಸ್ ಟಿ ತರಲು ತಮ್ಮಿಂದಾಗಲಿಲ್ಲ. ಪ್ರತಿಪಕ್ಷದವರು ಗಲಾಟೆ ಮಾಡಿದರು ಅನ್ನುವ ಕಥೆ ಬೇಡ, ಸರಕಾರ ನಿಮ್ಮ ಕೈಲಿದ್ದುದರಿಂದ ಜಿ ಎಸ್ ಟಿ ತರದೇ ಇರುವ ಅಪಖ್ಯಾತಿ ತಮ್ಮದಾಗುತ್ತದೆಯೇ ವಿನಾ ಪ್ರತಿಪಕ್ಷದ್ದಲ್ಲ. ಇದೀಗ ಸೇವಾ ತೆರಿಗೆ ೧೫ ಪರ್ಸೆಂಟ್ ಅನ್ನುತ್ತಿದ್ದೀರಿ. ಯಾರ ಹಿತಕ್ಕೆ ಇದೆಲ್ಲ? ನಿಮ್ಮ ಭಕ್ತರು ಇದನ್ನೆಲ್ಲವನ್ನೂ ಪಾಸಿಟಿವ್ ಆಗಿ ವ್ಯಾಖ್ಯಾನ ಮಾಡುತ್ತಾರೆ. ಆದರೆ ಜನ ಸಾಮಾನ್ಯನಿಗೆ ವ್ಯಾಖ್ಯಾನ ಬೇಕಿಲ್ಲ.

ಮೋದಿ ಜೀ, ನೀವು ಭಯೋತ್ಪಾದಕರ ವಿರುದ್ಧ ತೊಡೆ ತಟ್ಟಿದ್ದು, ನಾಲ್ಕಾರು ದೇಶ ಸುತ್ತಿ ಅಲ್ಲಿ ಜನಗಳನ್ನು ಸೇರಿಸಿ ಭಾಷಣ ಮಾಡಿದ್ದು, ನೀವು ಹೋದಲ್ಲೆಲ್ಲ ನಿಮಗೆ ಭೋಪರಾಕ್ ದೊರೆತಿದ್ದು, ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದು, ತಿಂಗಳಿಗೊಮ್ಮೆ ಮನಸು ತೆರೆದು ಮಾತಾಡೋದು ಇದೆಲ್ಲ ಇದೆಯಲ್ಲ- ಜನ ಸಾಮಾನ್ಯನ ಬದುಕನ್ನು ತೆರಿಗೆ ಹೆಸರಲ್ಲಿ ದುರ್ಭರ ಮಾಡುತ್ತ ಸಾಗಿದಲ್ಲಿ ಇದೆಲ್ಲ ನಮಗೆ ಮನರಂಜನೆಯ ಸರಕಷ್ಟೇ. ನೀವು ಯಾರ ಕೈ ಕುಲುಕಿದರೂ ಜನ ಸಾಮಾನ್ಯನ ಬದುಕು ಬದಲಾಗದಿದ್ದಲ್ಲಿ ನಿಮ್ಮ ಸರಕಾರವನ್ನು ಮೆಚ್ಚುವ ಮನಸು ನಮಗುಳಿಯದು/ ಉಳಿಯಬೇಕಿಲ್ಲ ಕೂಡ.


Monday, February 29, 2016

ಬರುವಾಗ ಚಿಂತನ ಭಗೀರಥರಾಗಿ ಬನ್ನಿ


ನಾಳೆಯಿಂದ ಇಪ್ಪತ್ತು ದಿನಗಳ ಜ್ಞಾನಸತ್ರವೊಂದು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಅಗರ್ತಲಾ (ಗಣತಂತ್ರ ಭಾರತದ ತ್ರಿಪುರಾ ರಾಜ್ಯದ ರಾಜಧಾನಿ) ಶಾಖೆಯಲ್ಲಿ ನಡೆಯಲಿಕ್ಕಿದೆ. ಮಾಸವ್ಯಾಪೀ ಸತ್ರಗಳು ಈ ಹಿಂದೆಯೂ ಸಾಕಷ್ಟು ನಡೆದಿವೆಯಾದರೂ ಇದೀಗ ನಡೆಯುತ್ತಿರುವುದು ಅದೆಲ್ಲಕ್ಕಿಂತ ಭಿನ್ನವಾದ್ದು ಮತ್ತು ಭವಿಷ್ಯದ ದೃಷ್ಟಿಯಿಂದ ಅವೆಲ್ಲಕ್ಕಿಂತ ಬಲು ಮುಖ್ಯವಾದ್ದು.

ಪಾರಂಪರಿಕ ಶಾಸ್ತ್ರಾಧ್ಯಯನವನ್ನು ಪೋಷಿಸಿಕೊಂಡು ಬರುತ್ತಿರುವ ಮಹತ್ತರ ಸರ್ವಕಾರೀಯ ಮಾನಿತ ವಿಶ್ವವಿದ್ಯಾಲಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ. ತನ್ನ ಅಡಿಯಲ್ಲಿ ಭಾರತದಾದ್ಯಂತ ಹನ್ನೊಂದು ಶಾಖೆಗಳು, ಸುಮಾರು ಇಪ್ಪತ್ತೈದು ಸಂಸ್ಕೃತ ಮಹಾವಿದ್ಯಾಲಯಗಳನ್ನು ಒಳಗೊಂಡು ಸಾಗುತ್ತಿದೆ. ರಾಷ್ಟ್ರಿಯ ಮಟ್ಟದಲ್ಲಿ ಸಂಸ್ಕೃತದ ವಕ್ತಾರನಂತೆ ನಿಲ್ಲುವ ಬೃಹತ್ ವ್ಯವಸ್ಥೆ ಸಂಸ್ಥಾನವೆಂದರೆ. ಸಂಪನ್ಮೂಲಗಳ ಕೊರತೆಯ ಸರ್ವೇ ಸಾಮಾನ್ಯ ಗ್ರಹಚಾರದಾಚೆಗೂ ವಿದ್ವತ್ತೆಯಲ್ಲಿ ಘನವಾದ್ದನ್ನು ಕೊಡುವ ವಿಶ್ವಾಸಾರ್ಹ ವಿವಿ ಅದು.

ಭಾರತೀಯ ಚಿಂತನಪರಂಪರೆಯ ಮೂಲಭೂತವಾದ ಎರಡು ಸಂಗತಿಗಳು ಪೂರ್ವಪಕ್ಷ ಮತ್ತು ಸಿದ್ಧಾಂತ. ಮೊದಲನೆಯದು ಪ್ರಶ್ನೆಯನ್ನು ಕೇಳುವ ಪಕ್ಷ ಮತ್ತಿನ್ನೊಂದು ಅದಕ್ಕೆ ಸಮಾಧಾನ ಹೇಳುವ ಪಕ್ಷ. ನಿಂತನೀರಾಗದೆ ನಿರಂತರವಾಗಿ ಹೊಸ ಪ್ರಶ್ನೆಗಳನ್ನು ಮತ್ತು ಅದಕ್ಕೆ ಸಮಂಜಸವಾದ ಉತ್ತರಗಳನ್ನು ಹುಡುಕುತ್ತ ನಮ್ಮ ಶಾಸ್ತ್ರಪರಂಪರೆಯು ಹರಿದು ಬಂದಿದೆಯಷ್ಟೆ. ಆ ಪರಂಪರೆಯೇ ನಮ್ಮ ಸಿದ್ಧಾಂತಗಳನ್ನು ಉಳಿಸಿದೆ ಮತ್ತು ಇನ್ನೊಬ್ಬರದನ್ನೂ ಉಳಿಯಗೊಟ್ಟಿದೆ. (ಇವತ್ತು ಭಾರತವನ್ನು ಅಸಹಿಷ್ಣು ಎನ್ನುವವರು ಇತಿಹಾಸದುದ್ದಕ್ಕೂ ಒಮ್ಮೆ ಕಣ್ಣಾಡಿಸಿ ಬರಬೇಕು. ಚಿಂತನೆ ಮತ್ತು ಬದುಕು ಎರಡರಲ್ಲೂ ನಾವೆಷ್ಟು ಮುಕ್ತರಾಗಿದ್ದೆವು/ ಇದ್ದೇವೆ ಎಂಬುದು ಆಗ ತಿಳಿದೀತು). ಆದರೆ ವಸಾಹತೂತ್ತರ ಭಾರತಕ್ಕೆ ಬಡಿದ ಅಪ್ರಜ್ಞೆಯ ಗುಂಗು ಇನ್ನೂ ಪೂರ್ತಿಯಾಗಿ ಇಳಿದಿಲ್ಲ. ನಾವೆಂಥಾ ಹಂತದಲ್ಲಿದ್ದೇವೆ ಅಂದರೆ ನಮ್ಮನ್ನು ಪ್ರಶ್ನಿಸುವವರನ್ನು ಪ್ರತಿಪ್ರಶ್ನೆ ಮಾಡುವ ಛಾತಿಯೇ ನಮ್ಮಲ್ಲಿ ಮಾಯವಾಗಿ ಹೋಗಿದೆ. ವಾದ ಮಾಡುವುದನ್ನೂ ಅದೆಷ್ಟರಮಟ್ಟಿಗೆ ಮರೆತುಕೊಂಡಿದ್ದೇವೆ ಅಂದರೆ ನಮಗೆ ಉದಾರತೆ ಮತ್ತು ಹೇಡಿತನಗಳ ಮಧ್ಯೆ ಏನೊಂದೂ ವ್ಯತ್ಯಾಸ ಕಾಣದೆ ಹೇಡಿತನವನ್ನೇ ಮಾನವೀಯತೆಯ ಹೆಸರಲ್ಲಿ ಅಪ್ಪಲು ಮುಂದಾಗಿದ್ದೇವೆ. ನಮ್ಮ ಕೆಲವು ಉದ್ದಾಮ ಮಾಧ್ಯಮ ಬೃಹಸ್ಪತಿಗಳಂತೂ ಭಾರತೀಯವಾದ್ದೆಲ್ಲವನ್ನೂ ಮೂರನೆಯ ದರ್ಜೆಯ ಸಂಗತಿಯಂತೆ ಬಗೆದು ಫರ್ಮಾನು ಹೊರಡಿಸುವ ಕೆಲಸದಲ್ಲಿ ಮಗ್ನವಾಗಿದ್ದಾರೆ. ಉಳಿದ ವಿವಿಗಳು ಈ ರೋಗದ ಪರಿಹಾರಕ್ಕೆ ಎಷ್ಟು ಮಾತ್ರ ಸಹಕರಿಸಿಯಾವು ಎನ್ನುವುದು ಬಗೆಹರಿಯದ ಪ್ರಶ್ನೆ; ಯಾಕೆಂದರೆ ಭಾರತದೊಳಗೇ ಇದ್ದು ಇಲ್ಲಿನ ಸಮಗ್ರತೆಗೆ ಸವಾಲೆಸೆಯುವ ಉದ್ಧಟತನಕ್ಕೆ ಅವು ಮುಂದಾಗುತ್ತಿವೆ. ಆಶಾಕಿರಣವೆಂದರೆ ಆ ಬಗೆಯ ಅತಿರೇಕಗಳನ್ನು ತನ್ನೊಳಕ್ಕೆ ಬಿಟ್ಟುಕೊಳ್ಳದ ಪಾರಂಪರಿಕ ವಿದ್ಯಾತಾಣಗಳು. ಅಂಥಾದ್ದೊಂದು ಹೆಸರು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ.

ನಾಳೆಯಿಂದ ನಡೆಯಲಿಕ್ಕಿರುವ ಸತ್ರದ ಮುಖ್ಯ ವಿಷಯವೇ  ಪ್ರಶ್ನೆಮಾಡುವ ನಮ್ಮ ಪರಂಪರೆ ಮತ್ತು ಅದಕ್ಕೆ ಉತ್ತರಕೊಡುವ ಕಲೆಯ ಕುರಿತಾದ್ದು. ವಾದ ಮಂಡನೆ, ವಾದಕ್ಕೆ ಇರಬೇಕಾದ ಸಂಯಮನಗಳೇನು, ನಿಯಮನಗಳೇನು, ಪ್ರತಿಪಕ್ಷಿಯನ್ನು ನಿಗ್ರಹಿಸುವ ವಾದ ತಂತ್ರವೇನು ಎಂಬೆಲ್ಲ ಸಂಗೋಷ್ಠಿಗಳು ಅಲ್ಲಿ ನಡೆಯಲಿಕ್ಕಿವೆ. ಇದು ದೂರದೃಷ್ಟಿಯುಳ್ಳ ವಿದ್ವಾಂಸರ ಕಲ್ಪನೆಯ ಕೂಸು ಎನ್ನಲಡ್ಡಿಯಿಲ್ಲ. ಎಡಪಂಥದ ಅತಿರೇಕಗಳಿಗೆ ಜಾಗತಿಕ ಮಟ್ಟದಲ್ಲಿ ಸಮರ್ಥ ಉತ್ತರ ಕೊಡಬಲ್ಲ ವಿಚಾರ ಸನ್ನದ್ಧ ಪಾರಂಪರಿಕ ಯುವ ವಿದ್ವಾಂಸರ ಪಡೆಯೊಂದನ್ನು ಕಟ್ಟುವ ಕನಸೊಂದು ಇಲ್ಲಿದೆ. ಅಭ್ಯರ್ಥಿಗಳಾಗಿ ಅಲ್ಲಿ ಭಾಗವಹಿಸುತ್ತಿರುವರೆಲ್ಲ ಭಾರತದ ಎಲ್ಲ ರಾಜ್ಯಗಳಿಂದ ಆಯ್ಕೆಯಾದ ಯುವ ಶಾಸ್ತ್ರವೇತ್ತರು. ಅವರ ಹೆಗಲಮೇಲೆ ಪರಂಪರೆಯ ಜವಾಬ್ದಾರಿಯಿದೆ. ಅದರ ಅರಿವು ಮೂಡಿಸುವ ಸತ್ರವೇ ನಾಳೆಯಿಂದ ಆರಂಭವಾಗಲಿಕ್ಕಿರುವುದು.

ಇಷ್ಟೆಲ್ಲ ಯಾಕೆ ಮಾಡಬೇಕು? ನಾವೇಕೆ ಪ್ರಶ್ನೆ ಕೇಳಬೇಕು ಅಥವಾ ಯಾರಿಗಾದರೂ ಉತ್ತರಿಸಬೇಕು?- ಅನ್ನುವ ಪ್ರಶ್ನೆಯಿರುವವರು ರಾಜೀವ್ ಮಲ್ಹೋತ್ರಾ ರವರ ’ದಿ ಬ್ಯಾಟಲ್ ಫರ್ ಸಂಸ್ಕೃತ್’ ಪುಸ್ತಕವನ್ನೊಮ್ಮೆ ಓದುವುದು ಅಗತ್ಯ. ಪ್ರಶ್ನೆ ಕೇಳುವುದು ಮತ್ತು ಉತ್ತರ ಕೊಡುವುದು ಅವಶ್ಯವಾಗಿಯೂ ನಮ್ಮಿಂದ ಆಗಲೇ ಬೇಕಾದ ಸಧ್ಯದ ಜರೂರ್ ಕಾರ್ಯಗಳು. ನಾವಿನ್ನೂ ನಿದ್ರೆಯಲ್ಲಿದ್ದೇವೆ ಅನ್ನುವುದದನ್ನು ಅರ್ಥಮಾಡಿಸುವ ಪುಸ್ತಕ ಅದು. ಜಗತ್ತು ನಮ್ಮನ್ನು ನಮಗಿಂತ ಚೆನ್ನಾಗಿ ತಿಳಿದುಕೊಳ್ಳುತ್ತಿದೆ. ಭಾರತೀಯತೆಯನ್ನು ವ್ಯವಸ್ಥಿತವಾಗಿ ಕಡಿದು ಉದುರಿಸುವ (systematic dissemble) ಹುನ್ನಾರಗಳ ಬಗ್ಗೆ ನಾವು ಅಜಾಗರೂಕರಾಗಿದ್ದೇವೆ. ಆ ಎಚ್ಚರ ಸಾಮಾನ್ಯ ಜನಕ್ಕೆ ಬಂದರೆ ಸಾಲದು,  ತರುಣ ವಿದ್ವದ್ವಲಯದಲ್ಲಿ ವ್ಯಾಪಕವಾಗಿ ಬರಬೇಕು ಅನ್ನುವ ಉದ್ದೇಶದಿಂದ ನಾಳೆಯ ಕಾರ್ಯಶಾಲೆ ತೆರೆದುಕೊಳ್ಳುತ್ತದೆ. ಕೇಂದ್ರ ಸರಕಾರ ಇದರ ಮೇಲೆ ಹಣ ತೊಡಗಿಸುತ್ತಿದೆ. ಚಿಂತನ ಪರಂಪರೆಯ ಯೋಧರನ್ನು well equipped ಆಗಿಸುವುದು ಸಾಂಸ್ಕೃತಿಕ ಭದ್ರತೆಯ ಅತಿ ಮುಖ್ಯ ಅಂಶವೆಂಬುದು ಸರಕಾರಗಳಿಗೆ ಈಗಲಾದರೂ ಅರ್ಥವಾದ್ದು ಸ್ವಾಗತಾರ್ಹ. ಆಗ ಮಾತ್ರ ತರುಣ ವಿದ್ವಾಂಸರ ಪಡೆಯೊಂದು ನಮ್ಮೊಳಗಿನ ಚಿಂತಕಭಸ್ಮಾಸುರರನ್ನು ನಿಗ್ರಹಿಸುತ್ತ, ಹೊರಗಡೆಯ ಆಕ್ರಮಣಕ್ಕೂ ಮಿದುಳೊಡ್ಡುವ ಕಾರ್ಯಕ್ಕೆ ಸಿದ್ಧವಾಗುತ್ತದೆ.  


ಕರ್ನಾಟಕ ಸೇರಿದಂತೆ ಎಲ್ಲ ಭಾಗಗಳಿಂದ ದೂರದ ಅಗರ್ತಲಾಗೆ ಹೊರಟ ನನ್ನ ಮಿತ್ರಗಣವು ಅಂಥಾ ವೈಚಾರಿಕ ಭಗೀರಥರ ಪಡೆಯಾಗಿ ಹೊಮ್ಮಲೆಂದು ಹಾರೈಸುವೆ. ಹೋಗುವ ಮುನ್ನವಾಗಲೀ ಹೋಗಿ ಬಂದಮೇಲೊಮ್ಮೆಯಾಗಲೀ ದಯವಿಟ್ಟು ನಮ್ಮ ಪೂರ್ವಪಕ್ಷಿಗಳಾರೆಂಬುದನ್ನು ತಿಳಿಯಲೋಸುಗ ವಿದ್ವಾಂಸರ ವಿಚಾರಗಳನ್ನು ಕೇಳಿಸಿಕೊಳ್ಳಿ/ ಓದಿಕೊಳ್ಳಿ. ನಮ್ಮದನ್ನು ಚೆನ್ನಾಗಿ ಓದುವುದು ಮಾತ್ರವಲ್ಲ ನಮ್ಮ ವೈಚಾರಿಕ ವಿರೋಧಿಗಳ ನೆಲೆಯೇನೆಂಬುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾದ ಸಂಗತಿ. ಆ ನೆಲೆಯಲ್ಲಿ ಅಗರ್ತಲಾದ ಇಪ್ಪತ್ತು ದಿನಗಳು ನಿಮ್ಮೆಲ್ಲರ ಚಿಂತನಯಾತ್ರೆಯನ್ನು ಪ್ರಭಾವಿಸಲಿ. ಶುಭಯಾತ್ರಾ. 

Monday, February 8, 2016


                     ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ


ಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.



ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಬ್ಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ.  ಕನ್ನಡದಂಥಾ ಕನ್ನಡಕ್ಕೇನಾಗಿದೆ?
ಕನ್ನಡದಲ್ಲಿ ಹೊಸ ಬರಹಗಾರರು, ಅವರ ಬರಹಗಳು ಮತ್ತು ಕನ್ನಡದ ಸಾಹಿತ್ಯದ ಕಟ್ಟೋಣದ ಕಾರ್ಯಗಳಿಗೇನೂ ಕೊರತೆಯಿಲ್ಲ. ಬ್ಲಾಗ್ ಗಳು ಮತ್ತು ಫೇಸ್ಬುಕ್ ಬಂದಮೇಲಂತೂ ಕನ್ನಡಲ್ಲಿ ಸಾಹಿತ್ಯದ ಮಹಾಪೂರವೇ ಹರಿಯುತ್ತಿದೆ. ಇದೆಲ್ಲ ಚಂದದ ಸಂಗತಿಗಳು. ಆದರೆ ನಮ್ಮ ಮೇರು ಬರಹಗಾರರ ಜ್ಞಾನಪೀಠ ಪುರಸ್ಕೃತ ಕೃತಿಯನ್ನೋ ಸಮಗ್ರ ಸಾಹಿತ್ಯವನ್ನೋ ಜನಕ್ಕೆ ಮುಕ್ತವಾಗಿ ಅರ್ಪಿಸುವಲ್ಲಿ ತೀರಾ ಹಿಂದಕ್ಕಿದೆ ಕನ್ನಡ ಲೋಕ. ಬೇಂದ್ರೆಯವರ ನಾಕುತಂತಿ ತುಂಬಾ ಸಣ್ಣ (ಗಾತ್ರದಲ್ಲಿ) ಕವನ ಸಂಕಲನ, ಹಾಗಿದ್ದೂ ಕನ್ನಡದ ಉನ್ನತ ಕೃತಿ. ವಿಷಾದವೆಂದರೆ ಅದು ಪೂರ್ತಿಯಾಗಿ ಅಂತರ್ಜಾಲದಲ್ಲಿ ಉಪಲಬ್ಧವಿಲ್ಲ. ಇದು ನಾಕುತಂತಿಯೊಂದರ ಪರಿಸ್ಥಿತಿಯಲ್ಲ, ನಮ್ಮೆಲ್ಲ ಉನ್ನತ ಕೃತಿಗಳ ಕಥೆಯೂ ಅದೇ. ಯಾಕೆ ನಮ್ಮ ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನಾದರೂ ಅಂತರ್ಜಾಲಕ್ಕೆ ಮುಕ್ತವಾಗಿ ತೆರೆದಿಡಲಾರದಷ್ಟು ಬಡವರೇ ನಾವು? ನಮಗೆ ಅವುಗಳ ಮಾರಾಟವೇ ಆಗಬೇಕೆ? ಅಂತರ್ಜಾಲಕ್ಕೆ ತೆರೆದಿಟ್ಟರೆ ಆ ಕೃತಿಗಳ ಮಾರಾಟ ನಿಲ್ಲುತ್ತದೆಯೆನ್ನುವುದು ಶುದ್ಧ ಕುಂಟು ನೆಪ. ಗ್ರಂಥದ ಗಂಭೀರ ಓದು ಬೇಕಾದವನಿಗೆ ಇವತ್ತಲ್ಲ ನಾಳೆಗೂ ಪುಸ್ತಕವೇ ಶರಣು, ಗೂಗಲ್ಲಲ್ಲ. ಹಾಗಿದ್ದಾಗ ಪುಸ್ತಕಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅಂತರ್ಜಾಲದಲ್ಲಿರುವ ಪುಸ್ತಕದ ಸಮಯೋಚಿತ ಉಪಯೋಗ ಹೆಚ್ಚು. ಇವತ್ತಿನ ಅನಿವಾರ್ಯತೆ ಅದು. ಯೇನ ಕೇನ ಪ್ರಕಾರೇಣ ನಾವೀ ಡಿಜಿ ಲೋಕದಲ್ಲಿ ಪ್ರಸ್ತುತವಿರಲೇ ಬೇಕಾದ ತುರ್ತಿದೆ. ಪುಸ್ತಕವನ್ನು ಮುದ್ರಿಸಿಯೇ ಓದುವೆವೆಂಬ ಹಟ ಬಿಡಬೇಕಾದ ಕಾಲ ಇದು.
ಮರಳಿ ಸಂಸ್ಕೃತದ ಲೋಕದ ಬಗ್ಗೆ ಹೇಳುವುದಾದರೆ- ಸಂಸ್ಕೃತ ವ್ಯಾಕರಣದ ಎಲ್ಲಾ ಸೂತ್ರ ಮತ್ತದರ ವಿವರಣೆಗಳು, ಉದಾಹರಣೆಗಳು, ಸಂಧಿ ಸಂಯೋಜಕ ಮತ್ತು ಸಂಧಿ ವಿಭಾಜಕ ವೆಬ್ ಸೈಟ್ ಗಳು, ಪದಾರ್ಥ ಹೇಳುವ ಕೋಶಗಳು (ಪ್ರಾಚೀನ ಮತ್ತು ನವೀನ ಎರಡೂ), ಪದವೊಂದು ರಚನೆಯಾದ ರೀತಿ ಪ್ರಕ್ರಿಯಾ ಸಮೇತ,  ವ್ಯಾಕರಣ ಪರಂಪರೆಯ ಪೂರ್ಣ ಮಹಾಭಾಷ್ಯ, (ಇದರ ಪೂರ್ಣ ಆವೃತ್ತಿಯ ಒಟ್ಟೂ ಒಂಭತ್ತು ಪುಸ್ತಕಗಳಿಗೆ ಐದು ಸಾವಿರ ರೂಗಳಾಗುತ್ತವೆ. ಹಾಗಿದ್ದೂ ಅದು ಅಂತರ್ಜಾಲದಲ್ಲಿ ಲಭ್ಯವಿದೆ), ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳು, ಆಧುನಿಕ ಸಾಹಿತ್ಯದ ಕೆಲವು ಭಾಗ- ಗಳು ಕೈಬೆರಳ ತುದಿಯಲ್ಲಿವೆ. ಇವನ್ನೆಲ್ಲ ಸುಮ್ಮನೆ ಗೂಗಲ್ಲಲ್ಲಿ ಮುದ್ರಿಸಿ ಹುಡುಕಲಿಕ್ಕೆ ಹಚ್ಚಿದರೆ ನೂರಾರು ಲಿಂಕ್ಸ್ ತೆರೆದುಕೊಳ್ಳುತ್ತವೆ. ಎಲ್ಲಕಡೆ ಪಿಡಿಎಫ್ ನಲ್ಲಿ ಓಸಿಆರ್ ಲಭ್ಯವಿದೆ. ಕೆಲವಾರು ಗ್ರಂಥಗಳ ಮೊಬೈಲ್ ಆಪ್ ಸಿದ್ಧವಾಗಿದೆ. ಸಂಸ್ಕೃತ ನಿಯತಕಾಲಿಕೆಗಳು, ಮ್ಯಾಗಝೀನ್ ಮತ್ತು ಬ್ಲಾಗ್ ಗಳು ಮುಕ್ತವಾಗಿ ಲಭ್ಯವಿವೆ. ಸಂಸ್ಕೃತ ವಿಕಿಪೀಡಿಯದ ಕೆಲಸ ನಡೆದಿದೆ, ಹಲವಷ್ಟು ಈಗಾಗಲೇ ಲಭ್ಯವಿದೆ.  ಇದಿಷ್ಟೇ ಅಲ್ಲ, ಬೌದ್ಧ ಮತ್ತು ಜೈನ ಗ್ರಂಥಗಳೆಲ್ಲ ದಿನವೂ ಅಪ್ಡೇಟಾಗುತ್ತಿವೆ. ನಾನು ಭಾಗವಹಿಸುವ ಗೂಗಲ್ ಸಮುದಾಯವೊಂದರಲ್ಲಿ ವಾರಕ್ಕೆರಡಾದರೂ ಹೊಸದೊಂದು ಜಾಲಪುಸ್ತಕದ ಲಿಂಕ್ ಬಂದಿರುತ್ತದೆ. ಅಂದರೆ ಆ ವೇಗದಲ್ಲಿ ಕೆಲಸ ನಡೆಯುತ್ತಿದೆ. ಮೊನ್ನೆ ಮೊನ್ನೆ ಶುರುವಾದ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದಡಿಯಲ್ಲಿ ಈ ಕೆಲಸ ಇನ್ನಷ್ಟು  ಭರದಿಂದ ಸಾಗಿದೆ. ನನಗೆ ಪೂರ್ಣ ವಿಶ್ವಾಸವಿದೆ, ಇನ್ನು ಕೆಲವೇ ಕಾಲದಲ್ಲಿ ಪೂರ್ಣ ಸಂಸ್ಕೃತ ಲೋಕ ಅಂತರ್ಜಾಲದಲ್ಲಿರುತ್ತದೆ.  ನೆನಪಿಸುತ್ತೇನೆ, ಇಷ್ಟೆಲ್ಲ ಆಗುವಾಗ ಕನ್ನಡದ ವೈಯಾಕರಣ ಕೇಶಿರಾಜರ ಶಬ್ದಮಣಿದರ್ಪಣ ಸಮಗ್ರವಾಗಿ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಮುದ್ದಣ ಮನೋರಮೆಯರು ಅರ್ಧಂಬರ್ಧ ಸಿಗುತ್ತಾರೆ. (ಹಾಗಿದ್ದೂ ಸಂಸ್ಕೃತದ ದೂಷಣೆಗೆ ಸಭ್ಯೆ ಮನೋರಮೆಯನ್ನು ಬಳಸಿಕೊಳ್ಳುವುದನ್ನಿಲ್ಲಿ ಸ್ಮರಿಸಬಹುದು) ಏನಾಗಿದೆ ಕನ್ನಡಕ್ಕೆ? ಕನ್ನಡ ವಿಶ್ವವಿದ್ಯಾಲಯಗಳಿಗೆ ಮತ್ತು ಸಾಹಿತ್ಯಧುರಂಧರರಿಗೆ?
ಸಂಸ್ಕೃತವನ್ನು ಅಲ್ಲಿಟ್ಟರು, ಇಲ್ಲಿಟ್ಟರು, ಪೆಟ್ಟಿಗೆಯೊಳಗೆ ಮತ್ತು ಹೊಟ್ಟೆಯೊಳಗಿಟ್ಟರು, ಸೀಸ ಸುರಿದರು ಎಂದೆಲ್ಲ ಇವತ್ತಿಗೂ ಕನ್ನಡ ಲೋಕದ ಒಂದು ಭಾಗ ಬೊಬ್ಬಿರಿಯುತ್ತಲೇ ಇದೆ. ಜಗತ್ತು ಮಾತ್ರ ಇವರನ್ನು ಹಿಂದಕ್ಕೆ ಬಿಟ್ಟು ಸಂಸ್ಕೃತವನ್ನು ತಬ್ಬಿಕೊಳ್ಳುತ್ತಿದೆ. ಅದಕ್ಕೆ ಸಂಸ್ಕೃತ ಜಗತ್ ಕೂಡ ಸಹಜವಾಗೇ ಸ್ಪಂದಿಸುತ್ತಿದೆ. ಸೀಸದ ಪ್ಯಾಕ್ಟರಿ ಮಾಲೀಕರದ್ದೇನೂ ಈ ಬಗ್ಗೆ ತಕರಾರು ಬಂದಿಲ್ಲ.
ಇನ್ನು ಸರಕಾರ ನಡೆಸುವ ಸಾಹಿತ್ಯ ಜಾತ್ರೆಗಳ ಅವ್ಯವಸ್ಥೆ ಮತ್ತು ಗಲಾಟೆಯನ್ನಂತೂ ಪ್ರತಿವರ್ಷ ನೋಡುತ್ತೇವೆ. ಸಂಸ್ಕೃತದ ಹೆಸರಲ್ಲಿ ಮಹಾಮೇಲವೊಂದು ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ನಡೆದಿತ್ತು, ನಾಲ್ಕು ದಿನಗಳ ಕಾಲ. ಅದರ ವ್ಯವಸ್ಥಿತ ನಿರ್ವಹಣೆ ಹೇಗಿತ್ತೆಂಬುದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಕೊನೆಯದಾಗಿ, ಕನ್ನಡದ ಮನಸುಗಳು ಜಾತಿ ಪ್ರಜ್ಞೆಯಿಂದ ಹೊರಬರಲೆಂಬ ಪ್ರಾರ್ಥನೆಯೊಂದಿಗೆ ಕನ್ನಡದ ಮೇರು ಕೃತಿಗಳ ಅಂತರ್ಜಾಲ ಲಭ್ಯತೆಗಾಗಿ ಕಾಯುತ್ತೇನೆ.  

Sunday, January 31, 2016

ಹಣತೆ.

ಇಂದಿರುಳು ಎನಗಿರಲಿ
ಒಂದು ಮೃದು ಹೊಂಬೆಳಕು
ಚೆನ್ನಿರುಳು; ಹೊಸಬಗೆಯ ಕಕ್ಕುಲಾತಿ. 
ಹಳೆಯದೊಂದಿರಲಿಂದು
ಸಹಜ ಬೆಚ್ಚನೆ ಭಾವ
ಇರಲಿ ಈ ಇರುಳಿನಲಿ ನನ್ನನಾವರಿಸಿ.

ತಿಳಿನೆರಳ ಕಪ್ಪಿನಲಿ
ನನ್ನಿರವನಡಗಿಸಲು
ಅನುವಾಗಲೊಂದೊಮ್ಮೆ ಹಣತೆ ದೀಪ;
ಸುಡುಗಣ್ಣ ಸಾಂತ್ವನಿಸೆ
ತಂಪು ಕಿರಣಗಳಿರಲಿ
ನಾ ಮೆಚ್ಚದುರಿ ಕಳೆವ ದೀಪ ರೂಪ.

ಅಡಗಬೇಕಿಂದಿರುಳು;
ತಮವದಾವರಿಸುವುದು
ಭಯಗೊಳಿಪುದೆನ್ನನೀ ಘೋರ ಬೇನೆ.
ಅಳಿಯದೇ ಉಳಿವೊಂದು
ದೀಪಕುಡಿಯಿರಲೆನಗೆ
ಇರುಳುಕಳೆದೆನ್ನ ತಾ ಸಮ್ಮೋಹಗೊಳಿಸೆ.

ಇರುಳು ನಾನೇಕಾಂಗಿ
ಅವಧರಿಸು ಈ ನನ್ನ
ತನುದುಂಬಿದಾವಿರಹ ಖಾಲಿತನವ.
ನಾ ಮೌನಿ, ನಾನೊಂಟಿ
ಈ ಬೆಳಕ ಹೊನಲೊಡನೆ,
ಬೆಳಗುವೆನು ಹಣತೆಯನು ಕಳೆಯೆ ನೋವ.


Candle.

Tonight, I need a softer light,
a softer night, a different
kind of care.. I need
an old fashioned thing,
simple comfort to wrap me in;
candle light so I may hide,
in softer shadows, I need the
soothe, the gentle flame,
for eyes that burn, eyes
that prickle.. though I refuse them.
Tonight I need to hide,
the dark encroaches, and
I fear this dreadful ache..
I need the steady flicker, the slow
burn wick, to mesmerise,
to keep the night away..
hold back this hollow feeling,
this bereft.. heavy in my bones.
Tonight I am alone so
I light a candle, to assuage, 
this awful ache..
I am quiet, alone.. 
with
a flame that gutters...!!!




ಅವತರಣ- ನವೀನ ಗಂಗೋತ್ರಿ.

Friday, January 29, 2016

ಭಾಗ್ಯದ ವಲಯೇಶ.....

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್
ತೇಹಂ ಕಥಂ ಜಾನೇ ಜನಿಕಾಯಾಃ ಸಂವಸಥಮ್
ಜಾನಾಮಿ ತನ್ಮಾರ್ಗಮಪಿ ನೈವ ಹೇ ಬಾಲೇ
ಸಂದಿಶ ಮೇ ಯಾಹಿ ತವ ದೇಶಮ್ 

ಸವ್ಯೇ ರಂಭಾವಾಟೀ, ಸವ್ಯೇತರೇ ಪನಸಮ್
ತನ್ಮಧ್ಯಮಾರ್ಗೇ ಸರ ತತ್ರ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಉನ್ನತೋನನ್ನತ ವೇಶ್ಮ, ಕಾಂಸ್ಯನಿರ್ಮಿತ ದ್ವಾರಮ್
ಸಂವದಮಾನಂ ಶುಕಯುಗಲಮೀಕ್ಷಸ್ವ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಇಕ್ಷುಪೇಷಣಹೇತೋರ್ವಿಚಲಂತಿ ಯಂತ್ರಾಣಿ
ಕೇಕಿನಃ ಸಾರಂಗಾ ನಂದಂತಿ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಪುಣ್ಯಪರ್ಣೋಟಜೇ ಮೌಕ್ತಿಕ ಮಂಟಪೇ
ದೀವ್ಯತಿ ಸಾಕ್ಷೈರ್ವಲಯೇಶ ವೀಕ್ಷಸ್ವ
ಸಾ ಹಿ ಮಮಾಂಬಾ ಜಾನೀಹಿ..
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಗಾಢಲೋಹಿತಹರಿತವಲಯಾಯ ಸ್ಪೃಹಯಂತಿ
ಪ್ರಾಣಾಃ ಮನ್ಮಾತುರಿತಿ ವಿದ್ಧಿ ವಲಯೇಶ
ತತ್ರೈಕವಾರಂ ಚಲ ಕೃಪಯಾ...

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್


ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ನಿನ್ನ ತವರೂರ ನಾನೇನು ಬಲ್ಲೇನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೇ ತವರೂರ


ಬಾಳೆ ಬಲಕ್ಕೆ ಬಿಡೊ, ಸೀಬೇ ಎಡಕ್ಕೆ ಬಿಡೊ
ನಟ್ಟ ನಡುವೇಲಿ ನೀ ಹೋಗೋ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ


ಅಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈಡೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಆಲೆ ಆಡುತಾವೆ ಗಾಣ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅದೇ ಕಾಣೋ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತಾಳೆ
ಅವಳೆ ಕಾಣೊ ಎನ್ನ ಹಡೆದವ್ವಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ
 ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ
ಕೊಂಡೋಗೋ ಎನ್ನ ತವರಿಗೆ
ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ಜಾನಪದ ಮೂಲ.
ಅನುವಾದ: ನವೀನ ಗಂಗೋತ್ರಿ




Friday, January 22, 2016

ಕ್ರಿಯಾಶೂನ್ಯ ಚಿಂತನೆಗಳ ಜಾತ್ರೆ ಮರುಳಿನಲ್ಲಿ...


ಅವರ ವಾದ ಹೇಗಿರುತ್ತದೆಯೆಂದರೆ-  ಅದನ್ನು ನೀವು ಸಾರಾಸಗಟಾಗಿ ತಳ್ಳಿಹಾಕಲಾರಿರಿ, ಅದರಲ್ಲಿನ ಎಲ್ಲವೂ ಸುಳ್ಳು ಎನ್ನಲಾರಿರಿ, ಒಪ್ಪುವ ಮಾತು ದೂರವುಳಿಯಿತು ಬಿಡಿ. ಅದರ ತಳದಲ್ಲೆಲ್ಲೋ ವಿಷದ ವಾಸನೆ ಬರುತ್ತಿದೆಯೆಂಬುದು ನಿಮಗೆ ಗೊತ್ತಾಗುತ್ತದೆ. ಇಲಿ ಪಾಷಾಣವನ್ನು ಮಸಾಲೆ ಬನ್ ಜೊತೆ ಇಡುತ್ತಾರಲ್ಲ, ಹಾಗೆಯೇ ಅದು.

ಹೌದು, ನಾನು ವಿತಂಡವಾದ ಮತ್ತು ವಿತಂಡವಾದಿಗಳ ಬಗ್ಗೆ ಮಾತಾಡುತ್ತಿದ್ದೇನೆ. ತನ್ನದಾದ ಮತ ಯಾವುದು ಅನ್ನುವುದನ್ನು ಸಾಂಗವಾಗಿ ಪ್ರತಿಪಾದನೆ ಮಾಡದ, ಮತ್ತು ಸಂಗತಿಯೊಂದನ್ನು ಖಂಡನೆ ಮಾತ್ರವೇ ಮಾಡಿ ಎದ್ದು ಹೋಗುವ ವಾದದ ಶೈಲಿಯೇ ವಿತಂಡಾ. ವಾದವೆಂದರೆ ಅದಕ್ಕೊಂದು ಚಂದವಿರಬೇಕು, ಸುಮ್ಮನೆ ಇನ್ನೊಬ್ಬನ ಮಾತನ್ನು ಖಂಡನೆ ಮಾಡುವುದು ಮತ್ತು ತನ್ನದನ್ನು ಮಂಡನೆ ಮಾಡದೆ ಎದ್ದು ನಡೆಯುವುದು ವಾದ ಅಂತಲೇ ಅನ್ನಿಸಿಕೊಳ್ಳುವುದಿಲ್ಲ. ನೀವು ಸರಿಯಾಗಿ ಊಹಿಸುತ್ತಿದ್ದೀರಾದರೆ ಇತ್ತೀಚೆಗೆ ಫೇಸ್ ಬುಕ್ಕಲ್ಲಿ ಚಲಾವಣೆ ಪಡೆದುಕೊಂಡ ಅಲಾವಿಕಾ ಅನ್ನುವವರು ಬರೆದ ಸಂಸ್ಕೃತದ ಕುರಿತಾದ ಲೇಖನ ಮತ್ತು ಡಾ. ಬರಗೂರರು ಭೈರಪ್ಪನವರ ಸಂಸ್ಕೃತದ ಕುರಿತಾದ ಮಾತುಗಳಿಗೆ ಬರೆದ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಎದುರಿಗಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಇದಿಷ್ಟೇ ಅಲ್ಲದೆ ಹಿಂದೂ ಮದುವೆಗಳಲ್ಲಿ ಬಲಗಾಲಿಟ್ಟು ಒಳಗೆ ಬರುವುದನ್ನು ರಾಯರೊಬ್ಬರು ಮೇಲು ಕೀಳಿನ ಸಂಕೇತವೆಂದು ಕರೆದದ್ದು, ರಾಮ ಕಬ್ಬಿಣದ ಅದಿರು ತರಲು ಲಂಕೆಗೆ ಹೋದ ಅಂತ ಠರಾವು ಹೊರಡಿಸಿದ್ದು, ಸಾಕ್ಷಾತ್ ಭಗವಾನನೇ ಎದ್ದು ಆಸ್ತಿಕ ಮತ್ತು ನಾಸ್ತಿಕಪದಗಳಿಗೆ ಅರ್ಥ ಹೇಳಿ ಪ್ರಶಸ್ತಿ ಪಡೆದದ್ದು, ರೋಹಿತ್ ವೆಮುಲನ ಸ್ವಯಂಹತ್ಯೆಗೆ ಕರುಣಾಪೂರ್ಣವಾಗಿ ಕರಗುತ್ತಿರುವ ಕಾಮ್ರೇಡುಗಳು ಅವನ ದಲಿತತ್ತ್ವವನ್ನು ಮುಂದುಮಾಡಿಕೊಂಡು ಧೂಳೆಬ್ಬಿಸಿದ್ದು- ಇದೆಲ್ಲವೂ ಒಂದೇ ಐಡಿಯಾಲಜಿಯ ಬೇರೆ ಬೇರೆ ಸಂಭೂತಿಗಳು. ಒಟ್ಟಿನಲ್ಲಿ ಭಾರತದ ಐಡೆಂಟಿಟಿ ಯಾವುದೇ ಇದ್ದರೂ ಅದಕ್ಕವರ ವಿರೋಧ ಇದೆ.

ಇವರ ಐಡಿಯಾಲಜಿಗೆ ಸರಿಯಾದ ಗ್ರೌಂಡ್ ಲೆವಲ್ ಸಂಘಟನೆ ಅನ್ನುವುದೇ ಇಲ್ಲ. ಅಂದರೆ, ತಮ್ಮ ಐಡಿಯಾಲಜಿಯನ್ನು ಕಾರ್ಯರೂಪಕ್ಕೆ ತರುವ ಯಾವ ಸ್ವನಿರ್ಮಿತ ಸಾಧನವೂ ಅವರ ಬಳಿ ಇಲ್ಲ. ಸಮಯ ಬಂದಾಗ ಹೆಸರು ಹಾಕಿಕೊಂಡು ಪ್ಲಕಾರ್ಡ್ ಹಿಡಿದು ಆಯಕಟ್ಟಿನ ಜಾಗಗಳಲ್ಲಿ ಗಲಾಟೆ ಮಾಡುವುದು ಅವುಗಳ ಕಾರ್ಯ ಶೈಲಿ. ಹೆಗಲುಕೊಟ್ಟು  ತಮ್ಮ ಐಡಿಯಾಲಜಿಯನ್ನು ನಿರ್ಮಾಣ ಕಾರ್ಯವಾಗಿ ಬದಲಾಯಿಸುವ ಶಕ್ತಿ ಸಂಚಯ ಅವರಲ್ಲಿ ಇಲ್ಲ. ಚಿಂತನೆಗಳು, ಚಿಂತನೆಗಳು ಮತ್ತು ಚಿಂತನೆಗಳು ಮಾತ್ರವೇ ಅವರ ಬಂಡವಾಳ. ಅವಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲುವ ಚಿಂತನೆಗಳೋ? ಅಲ್ಲ, ಪಕ್ಕಾ ಪರಾವಲಂಬಿ ಚಿಂತನೆಗಳು. ಯಾಕವನ್ನು ನಾನು ಪರಾವಲಂಬಿ ಅನ್ನುತ್ತಿದ್ದೇನೆ ಅಂದರೆ- ಮುಖ್ಯವಾಹಿನಿಯ ಮೂಲ ಚಿಂತನೆಯನ್ನು ಹಳಿಯುತ್ತ,ಅದನ್ನು ಕೀಳೈಸುತ್ತ, ಅದರ ದೋಷಗಳನ್ನು (of course ದೋಷಗಳಿದ್ದೇ ಇರುತ್ತವೆ) ಆಡಿಕೊಳ್ಳುತ್ತ, ಅದರ ಉತ್ಪನ್ನಗಳನ್ನು ದ್ವೇಷಿಸುತ್ತ ಈ ಜನಗಳ ಚಿಂತನೆಗಳು ಬದುಕುಳಿಯುತ್ತವೆ. ಉದಾಹರಣೆಗೆ - ರಾಷ್ಟ್ರವಾದದ ವಿರೋಧ. ರಾಷ್ಟ್ರವಾದವನ್ನು ವಿರೋಧಿಸಲಿಕ್ಕಾಗಿ ಇವರ ಉದಾಹರಣೆಯಾಗಿ ಜರ್ಮನಿಯ ಹಿಟ್ಲರನನ್ನು ಘೋರಿಯಿಂದೆಬ್ಬಿಸಿ ತರಲಾಗುತ್ತದೆ. ರಾಷ್ಟ್ರವಾದವೆಂದರೆ ಏಕಸಂಸ್ಕೃತಿ ವಾದವೆಂದೂ, ಅದರ ಹೇರಿಕೆಯಾಗುತ್ತಿದೆಯೆಂದೂ, ಬಹುಸಂಸ್ಕೃತಿ ನಾಶವಾಗುವುದೆಂದೂ ಎದೆ ಬಡಿದುಕೊಂಡು ಭೀಕರವಾಗಿ ಅಳುತ್ತಾರೆ. (ಹಾಗಂತ ಇವರೇ ಕೆಂಪು ಕಮ್ಯುನಿಸಮ್ಮನ್ನು ಆಲಂಗಿಸುತ್ತಾರೆ; ಅದನ್ನಪ್ಪಿಕೊಂಡ ಚೀನಾದ ಬಹುಸಂಸ್ಕೃತಿ ಏನಾಯ್ತೆಂದು ಗೊತ್ತಿದ್ದರೂ.) ಅತಿರಾಷ್ಟ್ರವಾದದ ಗಂಭೀರ ಅಪಸವ್ಯಗಳನ್ನೇ ಸಾಮಾನ್ಯ ರಾಷ್ಟ್ರ ಚಿಂತನೆಗೂ ಅನ್ವಯಿಸಿ ಅದಕ್ಕೆ ಕೆಲವು ಹಿರಿಯರ ಮಾತುಗಳನ್ನು ಕೋಟ್ ಮಾಡುತ್ತಾರೆ. (ಉದಾ- ರವೀಂದ್ರನಾಥ್ ಟಾಗೋರರು ರಾಷ್ಟ್ರವಾದ ಅತಿಯಾದರೆ ಏನಾಗುತ್ತದೆಂದು ಬರೆದಿದ್ದನ್ನೇ ತಮ್ಮ ವಾದಕ್ಕೆ ಬಳಸುವುದು). ಅಮೃತವೇ ಆದರೂ ಸರಿ, ಅತಿಯಾದರೆ ವಿಷವೇ ಅನ್ನುವುದು ಈ ದೇಶದಲ್ಲಿ ಸಾಮಾನ್ಯಜನಕ್ಕೆಲ್ಲ ಗೊತ್ತಿರುತ್ತದೆ. ಹಾಗಿದ್ದಾಗ, ರಾಷ್ಟ್ರವಾದವಾಗಲೀ, ಏಕತೆಯ ಚಿಂತನೆಯಾಗಲೀ ಅತಿಯಾದರೆ ಉಸಿರು ಕಟ್ಟುತ್ತದೆಂಬುದು ನಮ್ಮ ಜನಕ್ಕೆ ಗೊತ್ತಿರಲಾರದೆ? ಗೊತ್ತಿರುತ್ತದೆ, ಸಾಮಾನ್ಯರಿಗೆ ತಿಳಿದಿರುತ್ತದೆ; ಆದರೆ ಬುದ್ಧಿಹಲ್ಲು ಮೂಡಿಸಿಕೊಂಡವರಿಗಲ್ಲ. (ರಾಷ್ಟ್ರವಾದದ ಅತಿರೇಕವನ್ನು ವಿರೋಧಿಸುವ ಇವರೇ ಬುದ್ಧನನ್ನು ತಮ್ಮ ಆದರ್ಶ ಪುರುಷನನ್ನಾಗಿ ಬಗೆದು, ಬುದ್ಧನ ಉಪದೇಶದ ಅಹಿಂಸೆಯನ್ನು ಜಗತ್ತಿಗೆಲ್ಲ ಏಕಕಾಲಕ್ಕೆ ಅನ್ವಯಿಸಿ ಅತಿರೇಕಕ್ಕ ಒಯ್ದುಬಿಡುತ್ತಾರೆ.)

ಅಂದರೆ ಇವರ ಚಿಂತನೆಗಳು ಬದುಕುಳಿಯಲಿಕ್ಕೆ ಮುಖ್ಯವಾಹಿನಿಯ, ಬಹುಜನರೊಪ್ಪುವ, ಸಾಮಾನ್ಯ ಮನಸಿಗೆ ಸಮಾಧಾನಕರವಾಗಿರುವ ಚಿಂತನೆಗಳ ಅಗತ್ಯ ಇದ್ದೇ ಇದೆ. ಅದಿಲ್ಲದೆ ಇವರ ಚಿಂತನೆಗಳಿಗೆ ಅಸ್ತಿತ್ವವೇ ಇಲ್ಲ. ಸಂಸ್ಕೃತವನ್ನು ಬ್ರಾಹ್ಮಣರು ಬಧ್ರವಾಗಿ ಬಂಧಿಸಿಟ್ಟರು, ಶೂದ್ರರು ಕೇಳಿಸಿಕೊಂಡರೂ ಕಿವಿಯಲ್ಲಿ ಕಾದಸೀಸ ಸುರಿದರು ಅಂತೆಲ್ಲ ಇವರ ವಾದಗಳಿರುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ದೇಶದಲ್ಲಿ ಸಂಸ್ಕೃತ ಒಂದೇ ಯಾಕೆ, ವೇದಗಳ ಕಲಿಕೆಯೂ ಎಲ್ಲರಿಗೆ ಮುಕ್ತವಾಗಿದೆ. ಅದಾಗಿ ಎಪ್ಪತ್ತು ವರ್ಷ ಕಳೆದರೂ ಅವರ ಅಳಲು ಮಾತ್ರ ಬದಲಾಗಿಲ್ಲ. ಅಂದರೆ, ಸಂದರ್ಭವೊಂದು ಬದಲಾದ ಮೇಲೂ ಆ ಕುರಿತಾದ ಹಳಹಳಿಕೆಗಳು ಇವರಲ್ಲಿ ಇಂಗಲಾರವು. ತಮ್ಮ ಗೋಳಾಟ ಇಲ್ಲದಂತಾಗುವ ಸಂದರ್ಭವೊಂದು ದೇಶದಲ್ಲಿ ಸೃಷ್ಟಿಯಾಗಲಿಕ್ಕೇ ಬಿಡದವರು ಇವರು.

ಅಯ್ತು, ಬ್ರಾಹ್ಮಣರು ಸಂಸ್ಕೃತ ಮತ್ತು ವೇದವನ್ನು ತಮ್ಮ ಜೋಳಿಗೆಯಿಂದ ಹೊರಬರಗೊಡಲಿಲ್ಲ ಅಂದವರು, ಅದಕ್ಕಾಗಿ ಗೋಳಿಟ್ಟವರು, ಅದರ ಬದಲಾವಣೆಗಾಗಿ ಕ್ರಿಯಾತ್ಮಕವಾಗಿ ಏನು ಮಾಡಿದರು? ಸಂಸ್ಕೃತ ಶಾಲೆ ತೆರೆದರೆ? ವೇದ ಮಂದಿರ ತೆರೆದರೆ? ಇಲ್ಲ. ಆದರೆ, ಬ್ರಾಹ್ಮಣ ಸಂಘಟನೆ ಎಂದು ಇವರೇ ಕರೆದು ಜರೆಯುವ ಆರೆಸ್ಸೆಸ್ ತಾನು ನಡೆಸುವ ಹಲವಾರು ಗುರುಕುಲಗಳಲ್ಲಿ ಶೂದ್ರರಿಗೂ ವೇದ ಸಂಸ್ಕೃತವನ್ನು ಹೇಳಿಕೊಡುತ್ತಿದೆ. ಕಲಿಯುತ್ತಿರುವ ಮಕ್ಕಳೂ ಇದ್ದಾರೆ. ಪಕ್ಕಾ ಬುಡಕಟ್ಟು ಜನಾಂಗದ ಸಿದ್ಧಿ ಸಮುದಾಯದ ಹುಡುಗ ಕೂಡ ವೇದ ಕಲಿಯುತ್ತಿದ್ದಾನೆ. ಇದೆಲ್ಲ ಕ್ರಿಯಾತ್ಮಕತೆಯಿಂದಲ್ಲದೆ ಬರಿಯ ಚಿಂತನೆಯಿಂದ ಸಾಧ್ಯವಾದ ಸಂಗತಿಯಲ್ಲ. ಚಿಂತನೆ ಅಂತ ಗಗನಕ್ಕೆ ಮುಖಮಾಡಿ ಕೂತವರು ಇವತ್ತಿಗೂ ಅದನ್ನಷ್ಟೇ ಮಾಡುತ್ತಿದ್ದಾರೆ.
ಹೀಗಾಗಿ, ಅಂದರೆ ಕ್ರಿಯಾತ್ಮಕತೆ ಇಲ್ಲದಿರುವುದರಿಂದಾಗಿ, ಅವಕ್ಕೆ ಸಜ್ಜಿತ ಸಂಘಟನೆಯ ಅಗತ್ಯವೇ ಇರಲಾರದು. ಇದ್ದರೂ ಅದರ ಕೆಲಸ ಹೃದಯ ವಿದ್ರಾವಕ ಕವಿಗೋಷ್ಠಿ ಮತ್ತು ಉನ್ಮತ್ತ ಬರವಣಿಗೆಗಳ ಚೌಕಟ್ಟಿನಿಂದ ಹೊರಬಂದು ದೇಶದ ಮಟ್ಟದಲ್ಲಿ ಏನನ್ನಾದರೂ ನಿರ್ಮಿಸುವ, ನಷ್ಟ ತುಂಬುವ ಕೆಲಸಕ್ಕಂತೂ ಒದಗಲಾರದು. ಹಾಗಿದ್ದೂ ಈ ಚಿಂತನೆ ಜೀವಂತವಾಗಿರುವುದು ಕಾಮ್ರೇಡುಗಳ ಕಂಠದ ಬಲದ ಮೇಲೆ. ಒಟ್ಟಿನಲ್ಲಿ ಚೀರಾಡಬೇಕು, ದೊಡ್ಡ ಸುದ್ದಿಯಾಗಬೇಕು, ಜನ ಮಾತಾಡಿಕೊಳ್ಳಬೇಕು. ಅದಷ್ಟಾಯಿತೆಂದರೆ ಅವರ ಕೆಲಸ ಮುಗಿದಂತೆ.

ಅವರು ಟೌನ್ ಹಾಲಿನ ಎದುರೋ, ಇನ್ನೆಲ್ಲೋ ಸರ್ಕಲ್ಲಿನಲ್ಲೋ ಘೋಷಣೆ ಕೂಗಿ, ಮೊಂಬತ್ತಿ ಹಚ್ಚಿ, ಎದ್ದು ಹೋದಬಳಿಕ ಕಟ್ಟುವ ಕಾರ್ಯಕ್ಕೆ ಅವರ್ಯಾರೂ ಒದಗಲಾರರು. ಅದನ್ನು ಇನ್ಯಾರೋ ಮಾಡಬೇಕು. ಅರ್ಧ ದಿನದ ಶೋ ಮತ್ತು ಸಂಜೆ ಹೊತ್ತಿನ ಪಾನಗೋಷ್ಠಿಗಳಲ್ಲೇ ಇಷ್ಟುಕಾಲ ಬದುಕಿದ ಬರೀ ಚಿಂತನೆಗೆ ಆಲಂಬನವೆಂದರೆ ಕಟ್ಟುವ ಮನಸ್ಥಿತಿಯ ಶ್ರಮ ಮತ್ತು ಕಾರ್ಯಗಳೇ ಅಲ್ಲದೆ ಬೇರೆ ಅಲ್ಲ. ವಿಭಾಜಕ ಮನಸ್ಥಿತಿಯನ್ನು ಮಾತ್ರ ಇಟ್ಟಕೊಂಡು ನಿರ್ಮಿತಿಯ ಚಿಂತನೆಯಿಲ್ಲದೆ ಹಿಸೆಯಾದ ಪಾಕಿಸ್ತಾನದ ಅವಸ್ಥೆಯಾದರೂ ಇವರ್ಯಾರಿಗೆ ನಿರ್ಮಾಣಾತ್ಮಕ ಚಿಂತನೆಯ ಅಗತ್ಯವನ್ನು ಅರಿವಾಗಿಸುತ್ತಿಲ್ಲ.
ಒಂದನ್ನು ವಿರೋಧಿಸುತ್ತೇವೆಂದರೆ ಅದಕ್ಕೆ ಪರ್ಯಾಯವಾದ ಗಟ್ಟಿ ಸಂಗತಿಯೊಂದು ನಮ್ಮಲ್ಲಿರಬೇಕಾಗುತ್ತದೆ; ಅದು ಸಕಾರಾತ್ಮಕತೆಯ ಮತ್ತು ನಿರ್ಮಾಣಾತ್ಮಕತೆಯ ಲಕ್ಷಣ. ನಿರ್ಮಿತಿಯ ಬಯಕೆ ಇಲ್ಲದ ಯಾವುದಕ್ಕೇ ಆದರೂ ನಿರಂತರ ಶ್ರದ್ಧೆ ಮತ್ತು ತಪಸ್ಸಿನ ಅಗತ್ಯ ಇಲ್ಲ; ಅದಕ್ಕೆ ನಡುಮಧ್ಯಾಹ್ನದಲ್ಲಿ ಬೀದಿಗಿಳಿಯುವ ಉಮೇದಿಯೊಂದೇ ಸಾಕಾಗುತ್ತದೆ. ನಿರ್ಮಾಣ ಬುದ್ಧಿಯ ತೊಂಭತ್ತು ವರ್ಷದ ಸಂಘಟನೆ ಆರೆಸ್ಸೆಸ್ ಇವತ್ತಿಗೂ ದಿನಾ ಬೆಳಗ್ಗೆ ಮತ್ತು ಸಂಜೆ ಶಾಖೆಯಲ್ಲಿ ತಪಸ್ಸು ಮಾಡುತ್ತದೆ, ಶಕ್ತಿ ಸಂಚಯಿಸಿಕೊಳ್ಳುತ್ತದೆ; ಯಾಕೆಂದರೆ ಅದಕ್ಕೆ ಮಾಡುವುದಕ್ಕೆ ಕೆಲಸವಿದೆ.  

ಕಟ್ಟುವ ಬಗ್ಗೆ ಮಾತಾಡಿರೆಂದರೆ ’ಮುರಿಯದೆ ಕಟ್ಟುವುದೆಂತು?’ ಎಂದು ಪ್ರಶ್ನೆ ಮಾಡುತ್ತಾರೆ. ಸಮಗ್ರವಾಗಿ ಕೆಡವಿಯೇ ಕಟ್ಟಬೇಕಾದ ಯಾವುದೂ ಪ್ರಕೃತಿಯಲ್ಲಿ ಇಲ್ಲ, ಅದು ಮಾನವ ಸಮಾಜದ ವ್ಯವಸ್ಥೆಗೂ ಅನ್ವಯಿಸುತ್ತದೆ. ಯಾವುದು ಸರಿಯಿಲ್ಲವೋ ಅದನ್ನಷ್ಟೇ ನೇರ್ಪುಗೊಳಿಸಿಕೊಳ್ಳುತ್ತ ಪ್ರಕೃತಿ ತನ್ನ ಬದುಕನ್ನು ಬದುಕುತ್ತದೆ. ಸಮಾಜವೂ ಹಾಗೆಯೇ; ಅದು ಸ್ವಯಂ ಗತಿಶೀಲವಾದ್ದು. ಪ್ರತಿಭಟನೆ, ಕ್ರಾಂತಿ ಮಾತ್ರವೇ ಅದನ್ನು ಮುನ್ನಡೆಸಬೇಕಿಲ್ಲ. ಕ್ರಾಂತಿಯ, ಸುಧಾರಣೆಯ, ವ್ಯವಸ್ಥೆಯ ಬದಲಾವಣೆಯ  ಮಾತಾಡುವ ಇವರೆಲ್ಲ ಇಷ್ಟು ವರ್ಷಗಳಲ್ಲಿ ಸಮಾಜದ ಶಾಂತಿಯ ಮತ್ತು ನಿಷ್ಕಾಮ ಬುದ್ಧಿಯ ಯಾವ ಸಂಘಟನೆಯನ್ನು ಬೆಳೆಸಿದ್ದಾರೆ? ದೇಶದ ಯಾವುದೇ ಭಾಗದಲ್ಲಿ ಅನಾಹುತವಾದರೆ ನೆರವಿಗೆ ಧಾವಿಸುವ ಯಾವ ’ಬುದ್ಧಿಜೀವಿ ಸಂಘಟನೆ’ ’ಚಿಂತಕರ ಚಾವಡಿ’  ಈ ದೇಶದಲ್ಲಿವೆ? ಅಂದರೆ,  ಚಿಂತನೆ ಮತ್ತು ವಿರೋಧಗಳು ಮಾತ್ರವೇ ತಮ್ಮ ಕೆಲಸವೆಂದೂ ಅಂತಿಮ ಕರ್ತವ್ಯವೆಂದೂ ಅವು ಬಗೆದಿವೆ. ಪ್ರತಿಭಟನೆಯಿಂದ ಯಾವು ಮತ್ತು ಘೋಷಣೆಗಳಿಂದ ಕಾರ್ಯ ಸಿದ್ಧಿಸುತ್ತದೆಂದು ನಂಬುವುದು ಈ ಜನರ ಮೂಢ ನಂಬಿಕೆಯಷ್ಟೇ.   

ಇವರಲ್ಲೇ ಕೆಲವು ಜನ ಮಾಧ್ಯಮದ ಆಯಕಟ್ಟಿನ ಜಾಗದಲ್ಲಿ ಕುಳಿತು ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ವ್ಯಾಖ್ಯಾನಿಸಬಲ್ಲವರಾಗಿರುತ್ತಾರೆ. ಅದೆಷ್ಟು ನಯವಾದ ಸುಳ್ಳುಗಳನ್ನಿವರು ಆಡಬಲ್ಲರೆಂದರೆ, ಯಾವುದೇ ಐಡಿಯಾಲಜಿಯ ಹುಳ ಇನ್ನೂ ಹೊಕ್ಕಿರದ ಶುದ್ಧ ಮನಸಿನ ಒಬ್ಬಾತ ಅವರನ್ನೋದಿಕೊಂಡರೆ ಯಾವುದೋ ಒಂದು ವರ್ಗವನ್ನು ಶರಂಪರ ದ್ವೇಷಿಸತೊಡಗುತ್ತಾನೆ. ಇಲ್ಲದ ಒಂದನ್ನು ತಮ್ಮ ಮಾತಿನ ಭರದಲ್ಲೇ ಇವರು ಕಟ್ಟಿನಿಲ್ಲಿಸಬಲ್ಲರು (ಈ ವಿಷಯದಲ್ಲಿ ನಿರ್ಮಿತಿಯ ಶಕ್ತಿ ಅವಕ್ಕಿದೆ). ಸಧ್ಯದ ಸಂದರ್ಭದಲ್ಲಿ ಈ ನಿರ್ಮಾಣಶಕ್ತಿಗೊಂದು ಒಳ್ಳೆಯ ಉದಾಹರಣೆಯೆಂದರೆ ಅಸಹಿಷ್ಣುತೆಯ ಹೊಗೆ ಹಬ್ಬಿಸಿದ್ದು. ದೇಶವೆಲ್ಲ ಉಸಿರುಗಟ್ಟಿಹೋಗುತ್ತಿದೆ ಅಂತ ಕೆಲವು ಬುದ್ಧಿಶೂರರು ಕೂಗಿದ್ದೇ ತಡ, ಅದಕ್ಕೆ ಹೆಗಲೆಣೆಯಾಗಿ ಈ ದೇಶದ ಮಾಧ್ಯಮದ ಒಂದು ಭಾಗ ಆ ಹೊಗೆಯ ಗಾಢತೆಯನ್ನು ಹೆಚ್ಚಿಸಲು ತೊಡಗಿತು. ದೇಶದ ಜನಸಂಖ್ಯೆಗೆ ಹೋಲಿಸಿದರೆ ಧೂಳಿನಕಣಕ್ಕೂ ಸಮವಾಗದ ಇವರ ಸಂಖ್ಯೆ ಇಡೀ ದೇಶದಲ್ಲಿ ಗದ್ದಲ ಮಾಡಬಹುದು ಅಂದರೆ ಕಾಮ್ರೇಡುಗಳ ಚೀರಾಡುವ ಶಕ್ತಿಯನ್ನೊಪ್ಪಲೇ ಬೇಕು. ಒಂದೈವತ್ತು ಜನ ಅಜ್ಞಾತ ಸಾಹಿತಿಗಳು ಮತ್ತು ಕಲಾವಿದರು ಅಸಹಿಷ್ಣುತೆಯನ್ನು ವಿರೋಧಿಸಿ ’ಅವಾರ್ಡ್ ವಾಪಸಿ’ ಮಾಡಿದ್ದೇನು, ದಿನಾ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದೇನು, ಅಮೀರ್ ಖಾನ್ ದೇಶ ಬಿಡುತ್ತೇನೆ ಅಂದಿದ್ದೇನು- ಆಹ್, ದೇಶದ ಜನಕ್ಕೆ ಅಸಹಿಷ್ಣುತೆ ಅನ್ನುವ ಪದ ಪರಿಚಯವಾಗಿ ಅದರ ಉಚ್ಚಾರಣೆ ಕಲಿಯುತ್ತಿರುವ ಹೊತ್ತಿನಲ್ಲೇ ಕಾಮ್ರೇಡುಗಳ ಕಂಠ ಸುಮ್ಮನಾಗಿಬಿಟ್ಟಿತ್ತು. ಬಿಹಾರ್ ಚುನಾವಣೆ ಮುಗಿದಿತ್ತಲ್ಲ ಹೇಗೂ! ಇದೀಗ ಒಬ್ಬೊಬ್ಬರಾಗಿ ವಾಪಾಸ್ ಮಾಡಿದ್ದನ್ನ ವಾಪಾಸ್ ಪಡೆದುಕೊಳ್ಳುತ್ತಿದ್ದಾರೆ. ನಯನ್ ತಾರ ಸೆಹಗಲ್ ಮರಳಿ ಪಡೆದುಕೊಳ್ಳೋದಕ್ಕೆ ಒಪ್ಪಿದರಂತೆ!

ಇಷ್ಟೆಲ್ಲ ಮಾಡಿದ್ದು, ದೇಶದ ತುಂಬಾ ಧೂಳೆಬ್ಬಿಸಿದ್ದು, ನೂರಕ್ಕಿಂತ ಕಡಿಮೆ ಸಂಖ್ಯೆಯ ಬುದ್ಧಿಜೀವಿಗಳೆಂದರೆ ನಂಬಬೇಕಷ್ಟೆ. ಅಂದರೆ, ಕೆಲವೇ ಜನ ಗಲಾಟೆಮಾಡಿಯೂ ದೇಶದ ಚಿಂತನೆಯನ್ನು ಚಂಚಲ ಮಾಡಬಹುದೆನ್ನುವುದಕ್ಕೆ ಇದು ಉದಾಹರಣೆ. ಯಾಕೂಬ್ ಮೆಮೊನ್ ತಾನು ಮಾಡಿದ ಪಾಪಕ್ಕೆ ಗಲ್ಲಿಗೇರಿದಾಗ, ಅವನ ಪರವಾಗಿ ಮಾನವೀಯತೆ ಇವರೊಳಗೆ ಎದ್ದುನಿಲ್ಲುತ್ತದೆ. ದೇಶದ ನಿರ್ದಿಷ್ಟ ಸಮುದಾಯದ ಯಾರಿಗೇನೇ ಆದರೂ ಇವರ ಪ್ರೊಫೈಲುಗಳಲ್ಲಿ ಶೋಕ ಮಡುಗಟ್ಟುತ್ತದೆ. ಇವರೆಂಥಾ ಸಂವೇದನಾಶೀಲರೆಂದರೆ ದೂರದೇಶದ ಹಿಂಸೆಯೂ ಇವರ ಎದೆ ಕಲಕುತ್ತದೆ. ಆದರೆ ದುರಂತವೆಂದರೆ ನಮ್ಮ ಮನೆಯಾಚೆಯ ರೈತನ ಸಾವು ಲೆಕ್ಕಕ್ಕಿಲ್ಲದ್ದಾಗುತ್ತದೆ. ಅದೆಷ್ಟು ನಿರ್ಲಜ್ಜವಾಗಿ ಸೆಲೆಕ್ಟಿವ್ ಮಾನವೀಯತೆ ಮತ್ತು ಜೀವಪರ ಸಂವೇದನೆ ಇವರದಾಗುತ್ತದೆ ಅಂದರೆ, ದೇಶದೊಳಗಿರುವ ಶತ್ರುಗಳೆಂದರೆ ಇವರೇ ಇರಬೇಕು ಅನ್ನಿಸುವಷ್ಟು.  

ಇವರು ಮಂಡಿಸುವ ವಾದಗಳೋ, ತಲೆ ಬುಡ ಇಲ್ಲದವು. ಕೆಲವು ಉದಾಹರಣೆಗಳು- ಸಾವು ದಲಿತನದಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ, ದಲಿತನಲ್ಲದವನ ಸಾವಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ ಅವರಿಗೆ ಮಾತ್ರವೇ ಅರ್ಥವಾಗಬಲ್ಲ ಡೆಮಾಕ್ರೆಟಿಕ್ ವ್ಯತ್ಯಾಸಗಳಿರುತ್ತವೆ. ಸಂಸ್ಕೃತಭಾಷೆಯು ಸಮಗ್ರವಾಗಿಲ್ಲವೆಂಬ ತಮ್ಮ ಮೂಗಿನ ನೇರದ ಅಭಿಪ್ರಾಯಕ್ಕೆ ತಕ್ಕಂತೆ ಫರ್ಮಾನ್ ಹೊರಡಿಸಿ ಆ ಬಳಿಕ ಅದು ಸ್ವಂತದ ಅಭಿಪ್ರಾಯ ಮತ್ತದು ಸಾರ್ವಜನಿಕವಲ್ಲ ಅಂದುಬಿಡಲಾಗುತ್ತದೆ. ಬರೆಯಲು ಮತ್ತೇನೂ ಸಿಗದಿದ್ದರೆ ನಮ್ಮಲ್ಲೇ ಭೈರಪ್ಪನವರಂಥಾ ಸಾಹಿತಿಗಳನ್ನೋ, ಅಥವ ವಿವೇಕಾನಂದರ ಮಾತುಗಳನ್ನೋ ತಮಗೆ ಬೇಕಾದಂತೆ ತಿರುಚಿ- ವ್ಯಾಖ್ಯಾನ ಬರೆಯಲಾಗುತ್ತದೆ. ಹೇಳ ಹೊರಟರೆ ಇನ್ನೂ ಸಾವಿರ ಇದೆ. ಒಟ್ಟರ್ಥ ಒಂದೇ, ಇವರ ಮನಸಿನ ಅಶಾಂತಿಯನ್ನೇ ಜಗತ್ತಿನ ತುಂಬ ಹಬ್ಬಿಸುವ ಜನ ಇವರು.

ತಮ್ಮ ಢೋಂಗಿ ಹೋರಾಟಗಳನ್ನು ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಸಿತನವನ್ನು ಬಿಟ್ಟು ಸಕಾರಾತ್ಮಕವಾದ ಮತ್ತು ತಾಳ್ಮೆಯಿರುವ ಸಂಘಟನೆಯೊಂದನ್ನು ಇವರು ಕಟ್ಟಬಲ್ಲವರಾದರೆ, ಆಗ ಸೈದ್ಧಾಂತಿಕ ಭಿನ್ನಾಪ್ರಾಯದ ಹೊರತಾಗಿಯೂ ಸಮಾಜ ಇವರನ್ನು ಒಪ್ಪಬಹುದು. ಅದಿಲ್ಲದಿದ್ದಲ್ಲಿ, ಪಿಶಾಚಿಗಳಂತೆಯೇ ಇವರ ಸಿದ್ಧಾಂತಗಳೂ ಸುತ್ತೆಲ್ಲ ಅಲೆಯುತ್ತ, ಆಗಾಗ ರಕ್ತ ಹರಿಸುತ್ತ, ಸ್ಮಶಾನದ ರುದ್ರತೆಯನ್ನು ದೇಶದಲ್ಲಿ ಪಸರಿಸುತ್ತ, ಜನಸಾಮಾನ್ಯರ ನೆಮ್ಮದಿ ಕೆಡಿಸುತ್ತ ವಿಘಟಕ ಬದುಕು ಬದುಕುವುದಷ್ಟೇ ಇವರ ಸಾಧನೆಯಾದೀತು.