Saturday, February 28, 2015

           ಸಂಸ್ಕೃತ ವ್ಯಾಕರಣ; ಕಿರುಪರಿಚಯ

                 ಭಾಗ ಎರಡು.


                 ವ್ಯಾಕರಣದಲ್ಲಿ ಎರಡುಬಗೆಯ ವ್ಯವಸ್ಥಾಪಕರಿದ್ದಾರೆ. ಸಂಜ್ಞಾಸೂತ್ರ ಮತ್ತು ಪರಿಭಾಷಾಸೂತ್ರ ಅಂತ ಅವುಗಳ ಹೆಸರು. ಸಂಜ್ಞಾಸೂತ್ರಗಳೆಂದರೆ ಹೆಸರಿಸುವ ಸೂತ್ರಗಳು, ಉದಾ- ವೃದ್ಧಿ, ಗುಣ- ಇತ್ಯಾದಿ ಹೆಸರುಗಳು ಈ ಸೂತ್ರಗಳ ಕೊಡುಗೆ. ಇನ್ನೊಂದು ಬಗೆಯ ವ್ಯವಸ್ಥಾಪಕರು ಪರಿಭಾಷಾ ಸೂತ್ರಗಳು. ಅಂದ್ರೆ ಇಂತಿಂಥಾ ಕ್ರಿಯೆಯನ್ನು ಹೀಗೇ ಮಾಡಬೇಕು ಎಂಬ ನಿಯಮಗಳನ್ನು ಲೋಕಾಭಿರಾಮವಾಗಿ ಬೋಧಿಸುವ ಸೂತ್ರಗಳು. ಉದಾ- ಸೂತ್ರದಲ್ಲಿ ಎಲ್ಲೆಲ್ಲಿ ಷಷ್ಠೀ ವಿಭಕ್ತಿಯಿರುತ್ತದೋ ಅಲ್ಲೆಲ್ಲ ಆ ವಿಭಕ್ತಿಯನ್ನು ಹೊಂದಿರುವ ಪದಕ್ಕೆ ಸಾಕ್ಷಾತ್ತಾಗಿ ಕಾರ್ಯ ಬರುತ್ತದೆ ಎನ್ನುವುದು. ಇವೆರಡೂ ಬಗೆಯ ಸೂತ್ರಗಳು ಎಲ್ಲಾ ಉಳಿದ ಸೂತ್ರಗಳಿಗೂ ಉಪಕಾರ ಮಾಡುವ ಸ್ವಭಾವದವು. ಸ್ವಯಂ ಯಾವುದೇ ಕ್ರಿಯೆಯನ್ನು ಇವು ಮಾಡವು, ಹಾಗಿದ್ದೂ ಇವುಗಳಿಲ್ಲದೆ ಮತ್ಯಾವುದೇ ಸೂತ್ರವೂ ಕೆಲಸ ಮಾಡದು!

ವ್ಯವಸ್ಥಾಪಕ ಸೂತ್ರಗಳಾಗಿದ್ದರಿಂದ ಅವುಗಳ ಕೆಲಸ ಸೀಮಿತ ಪ್ರದೇಶಕ್ಕಲ್ಲದೆ ಪೂರ್ಣ ಶಾಸ್ತ್ರದಲ್ಲಿ ಇದ್ದಿರುತ್ತದೆಯಷ್ಟೆ. ಹಾಗಾಗಿ ಎರಡೂ ಮನೆಗಳಲ್ಲೂ ಅವು ಬಳಕೆಯಾಗಬೇಕಾದ್ದು ಅನಿವಾರ್ಯ. ಅವಕ್ಕೆ ಈ ಎರಡುಮನೆಗಳ ಅಂಧತ್ವದ ವ್ಯವಹಾರ ಕಟ್ಟಿಕೊಂಡು ಆಗಬೇಕಾದ್ದು ಏನೂ ಇಲ್ಲ!

ಹಾಗಾಗಿ ಅವುಗಳಿಗೋಸ್ಕರ ಮಾಡಿದ ವ್ಯವಸ್ಥೆಯೇ ಕಾರ್ಯಕಾಲ ಪಕ್ಷ ಮತ್ತು ಯಥೋದ್ದೇಶ ಪಕ್ಷ ಎಂಬ ಎರಡು ಸಾಧ್ಯತೆಗಳ ಪರಿಕಲ್ಪನೆ. ಕಾರ್ಯಕಾಲ ಅಂದರೆ ವಿಧಿಸೂತ್ರಗಳು ಕರೆದಲ್ಲಿಗೆ ಹೋಗಿ ವ್ಯವಸ್ಥಾಪಕ ಸೂತ್ರಗಳು ಅವುಗಳಿಗೆ ಅರ್ಥ ಕಟ್ಟುವ ಕೆಲಸ. ಯಥೋದ್ದೇಶ ಅಂದರೆ  ವ್ಯವಸ್ಥಾಪಕರು ಇದ್ದಲ್ಲೇ ಇದ್ದು, ವಿಧಿಸೂತ್ರಗಳು ಬಂದು ಕೇಳಿದಾಗೆಲ್ಲಾ ಅರ್ಥ ಒದಗಿಸುವ ಕೆಲಸ. (ಈ ಬರುವುದು ಇರುವುದು ಹೋಗುವುದು ಎಲ್ಲ ಯಾಕೆ, ಶಬ್ದ ನಿರ್ಮಾಣ ಪ್ರಕ್ರಿಯೆ ನಮಗೆ ತಿಳಿದಿದೆಯಲ್ಲ, ಹಾಗಾಗಿ ಒಂದು ಸೂತ್ರ ಒಂದು ಕಾರ್ಯವನ್ನು ಸ್ಪಷ್ಟವಾಗಿ ಹೇಳಿದರೆ ಸಾಲದೆ? ಎಂಬ ಪ್ರಶ್ನೆ ಬರಬಹುದು. ಹೌದು, ಕೆಲವು ಶಬ್ದಗಳ ಪ್ರಕ್ರಿಯೆ ನಮಗೆ ತಿಳಿದಿದೆ, ಆದರೆ ಶಾಸ್ತ್ರಕ್ಕೆ ತಿಳಿದಿಲ್ಲವಲ್ಲ! ಅದು ಒಂದು ಪ್ರೋಗ್ರಾಮಿನಂತೆ, ಪ್ರತಿಯೊಂದನ್ನೂ ತಾರ್ಕಿಕವಾಗಿ ನಿರ್ಮಾತೃಗಳೇ feed ಮಾಡಬೇಕು. ಎಷ್ಟೇ command ಕೊಟ್ಟರೂ ಸ್ವಯಂ ಯೋಚಿಸುವ ಶಕ್ತಿ command ಗಳಿಗೆ ಇಲ್ಲ, ಅವೆಲ್ಲ ಒಂದು ನಿರ್ದಿಷ್ಟ ಕೋನದಲ್ಲಿ ಸೇರಿದಾಗ ಪ್ರತಿಕ್ರಿಯೆಯೊಂದನ್ನು ಹೊಮ್ಮಿಸುತ್ತವೆ; ಹಾಗೆಯೇ ಸೂತ್ರಗಳು! ಲೋಕಾಭಿರಾಮವಾಗಿ ಮಾತಾಡುವಾಗ ’ಇಕೋ ಯಣಚಿ’ ಸೂತ್ರದಿಂದ ಯಣ್ ಕಾರ್ಯ ವಿಧಾನವಾಗುತ್ತದೆ ಎಂದುಬಿಡುತ್ತೇವೆ. ಆದರೆ ನಿಜವಾಗಿ ಆ ಕಾರ್ಯವನ್ನು ಸಾಧಿಸುವುದಕ್ಕೆ ಇದೊಂದು ಸೂತ್ರಕ್ಕೆ ಕನಿಷ್ಟ ಐದಾರು common command ಗಳ ಅಗತ್ಯ ಇದೆ. ಯಣ್ ಎಂದರೆ ’ಯವರಲ’’ ವರ್ಣಗಳು ಎಂದು ಹೇಳಿದವರ್ಯಾರು? ಅದನ್ನೂ command ಮೂಲಕ ಹೇಳಿಯೇ ಅರ್ಥ ಮಾಡಿಸಬೇಕು ನಮ್ಮ ತಂತ್ರಾಂಶಕ್ಕೆ, ಅದು ಯೋಚಿಸಲಾರದು, ಅದು ಕಥೆಯ ಪಾತ್ರದಂತೆ ಅಲ್ಲ! ಸ್ವಯಂ ಅರ್ಥಪೂರ್ಣತೆ ಯಾವುದೇ ವಿಧಿಸೂತ್ರಕ್ಕೆ ಇಲ್ಲ. ಈ ದಿಕ್ಕಿನಲ್ಲಿ ನೋಡಿದಾಗ ಪಾಣಿನಿವ್ಯಾಕರಣವನ್ನು ಓದುವಾತ ಪೂರ್ತಿ ಹೊಸದೇ ಆದ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದೊಂದು ತಂತ್ರಾಂಶ ಮಾನವ ಮಿದುಳಿಗೆ install ಆಗಲು ಹೊಸದೇ ಅದರ ಅಗತ್ಯ ಇದೆ. ದುರದೃಷ್ಟವೆಂದರೆ ಆ ಮನಸ್ಥಿತಿ ನಿರ್ಮಾಣ ಇವತ್ತಿನ ವ್ಯವಸ್ಥೆಯಲ್ಲಿ ಬಹುತೇಕ ಸಾಧ್ಯವಾಗುತ್ತಿಲ್ಲ. )   

ಯಾಕೆ ಎರಡು ಪಕ್ಷ?

ಈ ಎರಡು ಪಕ್ಷಗಳ ದೃಷ್ಟಿಯ ಬಗ್ಗೆ ಒಂದು ನಿದರ್ಶನವಿದೆ. ಎರಡು ವಿದ್ಯಾರ್ಥಿಗಳಿದ್ದಾರೆ ಅದರಲ್ಲೊಬ್ಬ ಕುಶಾಗ್ರಮತಿ, ಮತ್ತು ಇನ್ನೊಬ್ಬ ಸಾಮಾನ್ಯಮತಿ ಎಂದುಕೊಳ್ಳೋಣ. ಅವರಿಬ್ಬರಿಗೂ ಗುರುಗಳು ಅಷ್ಟಾಧ್ಯಾಯಿ ಸೂತ್ರಗಳನ್ನು ಹೇಳಿಕೊಡುತ್ತಿದ್ದಾರೆ ಅಂದುಕೊಂಡರೆ, ಕ್ರಮಪ್ರಾಪ್ತವಾದ ಸಂಜ್ಞಾ ಮತ್ತು ಪರಿಭಾಷಾ ಸೂತ್ರಗಳನ್ನು ಹೇಳಿದಾಗ ಅವರ ಚಿಂತನೆ ಹೀಗಿರುತ್ತದೆ-

೧. ಕುಶಾಗ್ರಮತಿ- ಯಾವುದೇ ಕಾರ್ಯವನ್ನು ವಿಧಿಸದ ಈ ಸೂತ್ರಗಳಿಗೆ ಏನು ಕೆಲಸ, ಮತ್ತಿವುಗಳ ಅರ್ಥವೇನು?
೨. ಸಾಮಾನ್ಯಮತಿ- ಗುರುಗಳು ಹೇಳಿದ್ದಾರೆ ಅಂದರೆ ಈ ಸೂತ್ರಗಳಿಗೆ ಇಲ್ಲಿ ಸಧ್ಯಕ್ಕೆ ಕೆಲಸವಿರದಿದ್ದರೂ ಮುಂದೆಂದೋ ಕೆಲಸ ಬಂದೀತು, ಆಗ ನೋಡಿಕೊಂಡರೆ ಸಾಕು.

ಮೊದಲನೆಯವನ ತಲೆಯಲ್ಲಿ ಎಲ್ಲಿ ಏನು ಹೇಗೆ ಯಾಕೆ ಎಂಬ ಆಕಾಂಕ್ಷೆ (ಪ್ರಶ್ನರೂಪ) ಇದೆ, ಇದು ಕಾರ್ಯಕಾಲ ಪಕ್ಷ. ಆದರೆ ಎರಡನೆಯವನ ತಲೆಯಲ್ಲಿ ಇದೇನಿಲ್ಲ, ಅವನದು ಇರುವುದನ್ನು ಇರುವಂತೆ ಅರಿವಾಗಿಸಿಕೊಂಡು ಸುಮ್ಮನಾಗುವ ಮನಃಸ್ಥಿತಿ. ಇದು ಯಥೋದ್ದೇಶ ಪಕ್ಷ.

ಈ ನಡುವೆ ಇನ್ನೊಂದನ್ನು ಅರಿವಾಗಿಸಿಕೊಳ್ಳಬೇಕು. ಅದೇನೆಂದರೆ-
ಮನೆಯ ಸದಸ್ಯರ ವಿಳಾಸದ ಬಗ್ಗೆ ಹೇಳಿದೆನಲ್ಲ, ಅದೆಷ್ಟು ಸೂಕ್ಷ್ಮವೆಂದರೆ- ಅದನ್ನೆಂದಿಗೂ ಅಲಕ್ಷ್ಯ ಮಾಡುವಂತಿಲ್ಲ. ಅವುಗಳ ಕ್ರಮಸಂಖ್ಯೆಯೂ ಮುಖ್ಯ, ಯಾಕೆಂದರೆ ಒಂದೇ ಕಾರ್ಯದ ವಿಷಯದಲ್ಲಿ ಹಿಂದಿನ ಸೂತ್ರ ಹೇಳಿದ್ದಕ್ಕಿಂತ ಮುಂದಿನ ಸೂತ್ರ ಹೇಳಿದ್ದಕ್ಕೆ ಹೆಚ್ಚು ಬೆಲೆ, ಅದೇ ಊರ್ಜಿತವಾಗಿ ನಿಲ್ಲುತ್ತದೆ.

ಅಷ್ಟಾಧ್ಯಾಯಿಯ ಹಿರಿಮನೆಯಲ್ಲಿಯೇ ಎಲ್ಲ ಸಂಜ್ಞಾಸೂತ್ರಗಳೂ ಪರಿಭಾಷಾ ಸೂತ್ರಗಳೂ ಹೇಳಲ್ಪಟ್ಟಿವೆ. ಕಿರಿಮನೆಯಲ್ಲಿ ಇರುವುದೆಲ್ಲ ವಿಧಿಸೂತ್ರಗಳು ಮಾತ್ರ. ಇದೀಗ ಒಂದು ಕಲ್ಪನೆ ಮಾಡಿಕೊಳ್ಳೋಣ...

ಕಿರಿಮನೆಯಲ್ಲಿರುವ ಯಾವುದೋ ವಿಧಿಸೂತ್ರಕ್ಕೆ ಪರಿಭಾಷೆಯೊಂದರ ಅಗತ್ಯವಿದೆ, ಮತ್ತು ಆ ಪರಿಭಾಷೆ ಅವಶ್ಯವಾಗಿಯೂ ಹಿರಿಮನೆಯಲ್ಲಿಯೇ ಇದೆ. ಹಿರಿಮನೆಯಲ್ಲಿರುವ ಆ ಪರಿಭಾಷೆಗೆ ಮೊದಲೇ ಮಾಡಿಕೊಂಡ ನಿಯಮದ ಪ್ರಕಾರ ಈ ಕಿರಿಮನೆಯಾಗಲೀ, ಅಲ್ಲಿರುವ ಸೂತ್ರವಾಗಲೀ, ಆ ಸೂತ್ರದ ಅಗತ್ಯವಾಗಲೀ ಕಾಣಿಸುವುದೇ ಇಲ್ಲ. ಹೀಗಿರುವಾಗ ವ್ಯವಸ್ಥೆ ಹೇಗೆ!? ಸಂಜ್ಞಾ ಸೂತ್ರಕ್ಕೂ ಅಷ್ಟೇ, ಕಿರಿಮನೆ ಕಾಣಿಸುವುದಿಲ್ಲ!

ಈ ಹಂತದಲ್ಲಿ ಅವ್ಯವಸ್ಥೆಯಾಗದೆ? ಹಿರಿಮನೆಯ ಸೂತ್ರಗಳಿಗೆ ಸಂಸ್ಕಾರ ಪೂರ್ತಿಯಾಗದೆ ಹೋಗುವ ಸಂದರ್ಭ ಈಗ! ಹಾಗಾಗಿಯೇ ಪರಿಭಾಷೆಯೆಂಬುದು ನಡುಮನೆಯ ಹೊಸಿಲಲ್ಲಿ ಹಚ್ಚಿಟ್ಟ ದೀಪದಂತೆ, ಅದು ಇದ್ದಲ್ಲೇ ಇದ್ದು ಇಡೀ ಮನೆಗೆ (ನಮ್ಮ ಉದಾಹರಣೆಯಲ್ಲಿ ಎರಡು ಮನೆಗೂ ಬೆಳಕು ಕೊಡುತ್ತದೆ ಎಂದಾಗಬೇಕು) ಬೆಳಕು ಕೊಡುತ್ತದೆ ಎಂದು ಭಾಷ್ಯಕಾರರು ಬರೆಯುತ್ತಾರೆ. (ಇದಕ್ಕೆ ದೇಹಲೀ-ದೀಪ-ನ್ಯಾಯ ಅಂತ ಹೆಸರು. ದೇಹಲೀ ಎಂದರೆ ಮನೆಯ ಹೊಸ್ತಿಲು ಎಂದರ್ಥ. ದೆಹಲಿ ನಗರಿಗೆ ಈ ಹೆಸರು ಬಂದಿರುವುದೂ ಈ ಅರ್ಥದಲ್ಲಿ ಇದ್ದೀತು). ಪರಿಭಾಷೆಗಳ ವಿಷಯದಲ್ಲಿ ಇದೊಂದೇ ಮಾತು, ಪರಿಭಾಷೆ ಎಂಬ ವ್ಯವಸ್ಥಾಪಕಸೂತ್ರವು ಕಾರ್ಯಕಾಲ ಮತ್ತು ಯಥೋದ್ದೇಶ ಎಂಬೆರಡೂ ಪಕ್ಷಗಳಲ್ಲಿ ತಾನಿದ್ದಲ್ಲಿಯೇ ಇದ್ದು ವಿಧಿ ಸೂತ್ರಗಳನ್ನು ಉಪಕರಿಸುತ್ತದೆ.

ಸಂಜ್ಞಾ ಸೂತ್ರದ್ದು ಮಾತ್ರ ಬೇರೆ ಪರಿಸ್ಥಿತಿ. ಅದು ಯಥೋದ್ದೇಶ ಪಕ್ಷದಲ್ಲಿ ತಾನಿದ್ದಲ್ಲಿಯೇ ಇದ್ದು ಬಂದವರಿಗೆಲ್ಲ ಸಹಾಯ ಮಾಡಿ ಕಳಿಸುತ್ತದೆ, ಆದರೆ ಕಾರ್ಯಕಾಲ ಪಕ್ಷದಲ್ಲಿ ಕರೆದಲ್ಲಿಗೆ ಹೋಗಲೇ ಬೇಕಾದ ಪರಿಸ್ಥಿತಿ. ಹಾಗೆ ಹೋದಾಗ ಸಮಸ್ಯೆ ಉದ್ಭವವಾಗುತ್ತದೆಯಲ್ಲವೆ? ಉದಾ- ಯಾವುದೋ ಸೂತ್ರಕ್ಕೆ ಸಹಾಯ ಮಾಡಲೆಂದು ಹಿರಿಮನೆಯ ಸಂಜ್ಞಾಸೂತ್ರವೊಂದು ಕಿರಿಮನೆಗೆ ಹೋಯ್ತು ಅಂದುಕೊಳ್ಳುವಾ. ಅಲ್ಲಿಗೆ ಹೋಗಿ ಅಲ್ಲಿನ ವಿಧಿ ಸೂತ್ರದೊಂದಿಗೆ ಸೇರಿ ತನ್ನ ಅರ್ಥವನ್ನೂ ಕಂಡುಕೊಳ್ಳುವುದರಿಂದ ಸಂಜ್ಞಾಸೂತ್ರವೂ ಅಲ್ಲಿಯದೇ ಸೂತ್ರವಾಗುತ್ತದೆ, ಹಾಗಾದಾಗ ವಿಳಾಸ ಬದಲಾಗುತ್ತದೆ. ವಿಳಾಸ ಬದಲಾಯಿತೆಂದರೆ ವ್ಯವಸ್ಥೆ ಕೆಡುತ್ತದೆ. ಇನ್ಯಾವುದೋ ಸಂಜ್ಞಾಸೂತ್ರಕ್ಕಿಂತ ಪ್ರಸ್ತುತ ಸಹಾಯಕ್ಕೆಂದು ಹೋಗಿರುವ ಸಂಜ್ಞಾಸೂತ್ರವೇ ಮುಂದಿನದಾಗಿ ಬದಲಾದರೆ ಎದುರಾಗಬಹುದಾದ ಸಮಸ್ಯೆಗಳು ಒಂದೆರಡಲ್ಲ. ಹಾಗೆಯೇ ಬದಲಾಗಬೇಕಾಗಿರುವುದೇ ಅಪೇಕ್ಷಿತ ಬದಲಾವಣೆಯಾಗುವ ಸಂದರ್ಭವೂ ಇಲ್ಲವೆಂದಿಲ್ಲ. ಇಲ್ಲಿ ಬಹು ವಿವೇಚನೆಯಿಂದ ಯಥೋದ್ದೇಶ ಮತ್ತು ಕಾರ್ಯಕಾಲ ಪಕ್ಷಗಳನ್ನು ಆಯ್ದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ.

ಹೀಗೆ ವ್ಯವಸ್ಥಾಪಿತವಾದ ಎರಡು ಪಕ್ಷಗಳನ್ನು ಪೂರ್ಣ ವ್ಯಾಕರಣದಲ್ಲಿ ಕಾರ್ಯಸಿದ್ಧಿಗಾಗಿ ಉಪಯೋಗಿಸಲಾಗುತ್ತದೆ. ಪಕ್ಷಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕೆಂದೇ ಎರಡು ಪರಿಭಾಷೆಗಳನ್ನು ಭಾಷ್ಯದಲ್ಲಿ ಪರಿಕಲ್ಪಿಸಲಾಗಿದೆ! ಅವು ಚೇಂಜ್ ಓವರ್ ಸ್ವಿಚ್ ಇದ್ದಂತೆ. ಅಗತ್ಯಬಿದ್ದಾಗ ಯಥೋದ್ದೇಶ ಪಕ್ಷ, ಅಗತ್ಯಬಿದ್ದಾಗ ಕಾರ್ಯಕಾಲಪಕ್ಷ ಎನ್ನುವುದು ಅದರ ಹಿಂದಿನ ತತ್ತ್ವ. ಇಲ್ಲಿ ಸ್ವಿಚ್ ಬದಲಾವಣೆ ಮಾಡುವ ಅವಕಾಶವಿದೆಯೇ ಹೊರತು ಆಯಾ ಸ್ವಿಚ್ ಬದಲಾಯಿಸಿದಾಗ ಆಗುವ ನಿರ್ದಿಷ್ಟ ಪರಿಣಾಮಗಳನ್ನು ತಡೆಯಲಾಗದು. ಇಡೀ ಶಾಸ್ತ್ರವನ್ನು ಎಲ್ಲಿಯೂ ಅತಿವ್ಯಾಪ್ತಿ ಅವ್ಯಾಪ್ತಿ ಅಸಂಭವಗಳಾಗದಂತೆ ಈ ವ್ಯವಸ್ಥೆಯಲ್ಲಿ ಅಳವಡಿಸುವ ಬುದ್ಧಿ ಕೌಶಲ ಎಂಥದ್ದಿರಬಹುದು!!

ಹೀಗೆ ಭಾಷೆಯ ಸಂರಚನೆಯ ಮೂಲಸ್ವರೂಪವನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕುದಾದ ಸೂತ್ರಗಳನ್ನು ಹೆಣೆದಿದ್ದು ಬರೀ ಒಂದು ಜೀವಮಾನದಲ್ಲಿನ ಮಾನವ ಸಾಧನೆಯಲ್ಲ. ಪಾಣಿನಿಮಹರ್ಷಿಗಳಿಗಿಂತಲೂ ಹಿಂದೆಯೇ ಆಗಿ ಹೋದ ಹಲವಾರು ವೈಯಾಕರಣರಿದ್ದಾರೆ. ಆದರೆ ಈ ಬಗೆಯ ಸ್ವಿಚ್ ಪರಿಕಲ್ಪನೆ, ಎಲ್ಲಿಯೂ ನಿಯಮಬಾಹಿರವಾಗದ ವ್ಯವಸ್ಥೆಯ ಸಂಯೋಜನೆ ಪಾಣಿನಿವ್ಯಾಕರಣದ ಅನನ್ಯ ಅಂಶ. ಅರ್ಥಕ್ಕಾಗಿ  ಬಳಕೆಯಾಗುವ ಶಬ್ದಗಳನ್ನು ಅರ್ಥದ ಬಂಧನದಿಂದ ಮುಕ್ತಗೊಳಿಸಿ, ಅದನ್ನೊಂದು ದ್ರವ್ಯವಾಗಿ ಪರಿಗಣಿಸಿ ವ್ಯಾಕರಣವು ಕೆಲಸ ಮಾಡುತ್ತದೆ. (ಅರ್ಥದಿಂದ ಪದಗಳನ್ನು ಪ್ರತ್ಯೇಕಿಸುವುದಕ್ಕೂ ಸೂತ್ರವಿದೆ!)

ವ್ಯಾಕರಣದ ಒಳಹೊಕ್ಕಾಗ ಅದು ಕ್ಲಿಷ್ಟ ಎನ್ನುವ ಭಾವನೆ ಬಂದರೆ ಸಹಜವೇ. ನನ್ನ ಇದುವರೆಗಿನ ಅನುಭವದಂತೆ ವ್ಯಾಕರಣದ ಒಳಹೊಗುವ ನಿಟ್ಟಿನಲ್ಲಿ ಇವತ್ತಿನ ಅಧ್ಯಯನ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ಅತ್ಯಂತ ಮೂಲಭೂತವಾದ ಸಂಶಯಗಳನ್ನು ಪರಿಹರಿಸದೆ ವ್ಯಾಖ್ಯಾನಕ್ಕೆ ಇಳಿಯುವ ಅಧ್ಯಯನ ಶೈಲಿ ಸರಿಯಾದುದಲ್ಲ. ಇದು ಹೇಗಿದೆಯೆಂದರೆ- 
ವ್ಯಾಕರಣವೇ ಹೇಳುವಂತೆ ವ್ಯಾಕರಣದ ಕುರಿತಾಗಿ ಎರಡು ಬಗೆಯ approach ಇದೆ.

೧. ಲಕ್ಷ್ಯೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೆ ನಟ್ಟ ದೃಷ್ಟಿ.      
೨. ಲಕ್ಷಣೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೊಯ್ಯುವ ದಾರಿಯಮೇಲೆ ನಟ್ಟ ದೃಷ್ಟಿ.

 ವ್ಯಾಕರಣದ ವಿಷಯದಲ್ಲಿ ಇದೆರಡು approach ಇವೆ. ಮೊದಲನೆಯದು ಇವತ್ತಿನ ಯಾರಿಗೂ ಇರಲು ಸಾಧ್ಯವಿಲ್ಲದ, ಪಾಣಿನಿ ಮತ್ತು ಅವರ ಎತ್ತರಕ್ಕಿರುವ ವಿದ್ವಾಂಸರಿಗೆ ಮಾತ್ರ ಸಾಧ್ಯವಾಗುವ ದೃಷ್ಟಿ. ಶಬ್ದಗಳ ನಿಜವಾದ ಸ್ವರೂಪ ಅವರಿಗೆ ತಿಳಿದಿದೆ, ಹಾಗಾಗಿ ಶಬ್ದಗಳ ಅಗತ್ಯಕ್ಕೆ ತಕ್ಕಂತೆ ಶಾಸ್ತ್ರವನ್ನು (ಸೂತ್ರಗಳನ್ನು) ನಿರ್ಮಿಸಿದರು ಆ ಮಹಾತ್ಮರು. ಆದರೆ ಆ ಪರಂಜ್ಞಾನ ನಮಗೆಲ್ಲಿ ಬರಬೇಕು!? ಹಾಗಾಗಿ ಸಾಮಾನ್ಯರಾದ ನಾವೆಲ್ಲ ಎರಡನೆಯ ವರ್ಗದ ಜನ; ಸೂತ್ರಗಳೆಂಬ ದಾರಿಯ ಮೂಲಕ ಸಾಗಿ ಪದದ ಸ್ವರೂಪವನ್ನು ಅರಿಯುವವರು. ದಾರಿಯ ಮೇಲೆ ನಟ್ಟ ನೋಟ ನಮ್ಮದು.
ಇದೇ ನಮ್ಮ ಸಮಸ್ಯೆ! ದಾರಿಗಳು ಸದಾ ಗೋಜಲು, ಗೊಂದಲ ತರುತ್ತವೆ. ಇದಕ್ಕೊಂದು ನಿದರ್ಶನ ಕೊಡುತ್ತೇನೆ-

೧. ಮೊದಲನೆಯವರು ನಗರವೊಂದನ್ನು ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಗಗನದ ಮೂಲಕ ನೋಡುತ್ತಿರುವಂತೆ ನೋಡುತ್ತಿದ್ದಾರೆ. ಅವರಿಗೆ ಆ ಮಾರ್ಗಗಳು, ಅವುಗಳ ಕವಲು, ಅವುಗಳ ಬದಲೀ ವ್ಯವಸ್ಥೆ ಎಲ್ಲವೂ ನಿಚ್ಚಳ, ಸರಾಗ.

೨. ಎರಡನೆಯವರಾದ ನಾವು ಅದೇ ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಪೂರ್ತಿ ಝೂಮ್ ಮಾಡಿ street view ಅಯ್ಕೆಯನ್ನು ಮಾಡಿಕೊಂಡವರಂತಿದ್ದೇವೆ. ನಮಗೆ ಆ ನಗರ ಸಾಗರದಂತೆ; ಸಾವಿರ ದಾರಿಗಳ ಗೋಜಲಿನಲ್ಲಿ ಗಲಿಬಿಲಿಯಾಗಿದ್ದೇವೆ.  
ಅಕ್ಷರಶಃ ನಮ್ಮದು ಈ ಅವಸ್ಥೆ. ಮೇಲಿನಿಂದ ಎಲ್ಲವನ್ನೂ ಒಂದು ಪೂರ್ಣ ವ್ಯವಸ್ಥೆಯಂತೆ ನೋಡಲು ಸಾಧ್ಯವಾಗುವವನಿಗೆ ಕಾರ್ಯಕಾಲ ಪಕ್ಷ ಅಥವಾ ಯಥೋದ್ದೇಶ ಪಕ್ಷ ಎಂಬುದು ಗೊಂದಲವಲ್ಲ. ಆದರೆ ಅದು ಸಾಧ್ಯವಾಗದಿದ್ದಾಗ ಶಾಸ್ತ್ರ ಕಠಿಣವೆನ್ನಿಸುತ್ತದೆ.

ನನ್ನ ಸಮಸ್ಯೆ ಏನಪ್ಪಾಂದ್ರೆ.......

ತನಗೆ ಬೇಕಾದ ಸ್ವಿಚ್ ಬಳಸಿ ಉದ್ದೇಶಿತ ಕಾರ್ಯವನ್ನು ಸಾಧಿಸುವ ವ್ಯಾಕರಣದ ಈ ಪರಿಯಿದೆಯಲ್ಲ, ನನಗದು ಅನುಕೂಲತರ್ಕವಾಗಿ ಕಾಣುತಿತ್ತು. ಅದರಲ್ಲೂ ಯಥೋದ್ದೇಶ ಪಕ್ಷದ ನೆಲೆಯಲ್ಲಿ ಉದ್ಭವಿಸಿದ ಪ್ರಶ್ನೆಯೊಂದಕ್ಕೆ ಕಾರ್ಯಕಾಲ ಪಕ್ಷವನ್ನು ಆಶ್ರಯಿಸಿ ಉತ್ತರಕೊಡುವುದು ತಾರ್ಕಿಕವೇ ಅಲ್ಲದ್ದು ಎನ್ನಿಸುತ್ತಿತ್ತು. ಯಥೋದ್ದೇಶಪಕ್ಷದ ಪ್ರಕಾರ ಸಮಸ್ಯೆ ಉದ್ಭವಿಸಿದ್ದು ಎಂದಾದರೆ ಅದರಲ್ಲಿಯೇ ಉತ್ತರ ಕೊಡಬೇಕು ಎನ್ನುವ ನನ್ನ ವಾದದ ನೆಲೆ ಇದ್ದುದು ಮತ್ತದೇ ನನ್ನ approach ನಲ್ಲಿ. ನನಗೆ ಪೂರ್ಣವನ್ನು ನೋಡಲಾಗುತ್ತಿಲ್ಲ, ಮತ್ತು ಇವೆರಡೂ ಪಕ್ಷಗಳು ವಾದ ಮಾಡಲಿಕ್ಕಲ್ಲ ಬದಲಾಗಿ ಅಂದುಕೊಂಡಿರುವ ಗುರಿಯನ್ನು ತಲುಪಲಿಕ್ಕಾಗಿ ಅನ್ನುವುದು ಅರ್ಥವೇ ಆಗುತ್ತಿರಲಿಲ್ಲ. ನನಗನ್ನಿಸುವಂತೆ ವ್ಯಾಕರಣದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಪ್ರತಿಯೊಬ್ಬನೂ ಎದುರಿಸುವ ಸಮಸ್ಯೆ ಇದು. ಸೂತ್ರಗಳನ್ನು ಕಂಠಸ್ಥ ಮಾಡಿ ಅದರ ಉದಾಹರಣೆಯನ್ನು ಪಟಪಟನೆ ಹೇಳುವುದೇ ಅಧ್ಯಯನ ಅಂದುಕೊಂಡರೆ ಈ ಸಮಸ್ಯೆಯಿಲ್ಲ, ಅದು ಬೇರೆ ವಿಚಾರ.

ಈ ಸಮಸ್ಯೆಗೆ ಆಗಾಗ ಸಮಾಧಾನವೂ ಮತ್ತೆ ಮತ್ತೆ ಸಮಸ್ಯೆಯೂ ಉದ್ಭವಿಸುವ ಪ್ರಕ್ರಿಯೆಯಲ್ಲಿಯೇ ಸುಮಾರಷ್ಟು ವರ್ಷ ಕಳೆದಿದ್ದೆ ನಾನು.

ಮೊನ್ನೆ ಒಂದಿನ ಏನಾಯ್ತಪ್ಪಾಂದ್ರೆ-

ನಮ್ಮಲ್ಲಿ ಆಂಡ್ರಾಯಿಡ್ ಕಾರ್ಯವ್ಯವಸ್ಥೆಯ ಕಾರ್ಯಾಗಾರ ಆಯೋಜಿತವಾಗಿತ್ತು, ಒಂದು ತಾಸು ಅಲೆದಾಡಲೆಂದು ನಾನೂ ಹೋಗಿದ್ದೆ. ಒಬ್ಬಾತ ಸರ್ಕೀಟ್ ಬೋರ್ಡ್ ಒಂದನ್ನು ಅದೆಷ್ಟು ಚಂದವಾಗಿ ವಿವರಿಸುತ್ತಿದ್ದ ಎಂದರೆ, ನನಗೆ ವ್ಯಾಕರಣದ ಪಕ್ಷದ್ವಯದ ತರ್ಕಸಂಬದ್ಧತೆ ಅರ್ಥವಾಗುವಷ್ಟು ಚಂದವಾಗಿ!! ಅವ ಪ್ರತಿಯೊಂದು ಎಳೆ ಎಳೆಯನ್ನೂ ಅದರ ಹಿಂದಿನ ಲಾಜಿಕ್ ಸಮೇತ ವಿವರಿಸುತ್ತಿದ್ದ. ಯಾವುದೇ ಗೇಮ್ ಆಡುವಾಗಿನ ಒಂದು ಪುಟ್ಟ ಕಾರ್ಯ ತೆರೆಯಮೇಲೆ (screen) ಮೂಡಬೇಕಾದರೆ ಅದರ ಹಿಂದೆ ಸರ್ಕೀಟ್ ಬೋರ್ಡಿನಲ್ಲಿ ಮತ್ತು processor ನಲ್ಲಿ ನಡೆಯುವ ತರ್ಕ ಪ್ರತಿತರ್ಕಗಳನ್ನು ಆತ ವಿವರಿಸಿದ. ತನಗೆ ಬೇಕಾದ್ದನ್ನು ಸಾಧಿಸುವುದಕ್ಕಾಗಿ ಹೀಗೆ switching ಮಾಡಿಕೊಳ್ಳುವ ವ್ಯಾಕರಣವೂ ಒಂದು ತರ್ಕಸಹಿತ ತಂತ್ರಜ್ಞಾನ ಅನ್ನಿಸಿತು.

ಹಾಗೆ ಆ ಕ್ಷಣಕ್ಕೆ ಸ್ಫುರಿಸಿದ್ದನ್ನೇ ಇಲ್ಲಿ ಬರೆದಿದ್ದೇನೆ. ನಡುವೆ ಆಗಿಹೋದ ಎಷ್ಟೋ ಪ್ರಶ್ನೆ ಮತ್ತು ಸಮಾಧಾನಗಳ ಮಧ್ಯೆ ಇದೂ ಒಂದು ಸಮಾಧಾನವಿರಬಹುದು, ನಾಳೆ ಮತ್ತೆ ಇನ್ನೊಂದು ಪ್ರಶ್ನೆ ಎದುರಾಗಬಹುದು. ತರ್ಕದಲ್ಲಿ ಕೊನೆಯೆಂಬುದಿಲ್ಲವಲ್ಲ! ಆ ಇನ್ನೊಂದು ಪ್ರಶ್ನೆ ಬರುವವರೆಗೆ ಬೆಳವಣಿಗೆಯಿಲ್ಲ, ಪ್ರಶ್ನೆ ಬೇಗ ಬರಲಿ.  

Friday, February 27, 2015

ಸಂಸ್ಕೃತ ವ್ಯಾಕರಣ;  ಒಂದು ಸಣ್ಣ ಪರಿಚಯ. 
ಭಾಗ ಒಂದು.




 ವ್ಯಾಕರಣದಲ್ಲಿ ಪ್ರವೇಶ ಸಾಧ್ಯವಾಗುವುದು ಮಿದುಳಿನ ಮಟ್ಟಿಗೆ ಒಂದು ಅಸಾಧಾರಣ ಸಂಭವ. ’ಪದಗಳ ಸಾಧುತ್ವವನ್ನಲ್ಲವೆ ಹೇಳಲು ಹೂರಟಿರುವುದು, ಅದಕ್ಯಾಕೆ ಅಷ್ಟು ಕಷ್ಟಪಡಬೇಕು?’- ಎನ್ನುವ ಭಾವನೆ ಜನರಲ್ಲಿ ಬಂದರೆ ತಪ್ಪಲ್ಲ. ಯಾಕೆಂದರೆ ನಮಗೆ ಪರಿಚಯವಿರುವ ಯಾವುದೇ ಭಾಷೆಯ ವ್ಯಾಕರಣದಲ್ಲಿ, ಸಂಸ್ಕೃತದಲ್ಲಿ ನಡೆದಂಥ ಚಿಂತನೆಯಾಗಲೀ ಅಲ್ಲಿನ ವ್ಯವಸ್ಥೆಯಾಗಲೀ ನಮಗೆ ಕಂಡಿಲ್ಲ.  ಹಾಗಾಗಿ ಭಾಷೆಯ ಬಗ್ಗೆ ನಮ್ಮ ಊಹೆಗೆ ನಿಲುಕದ ಪ್ರಪಂಚವೊಂದು ಸಂಸ್ಕೃತದಲ್ಲಿ ಇದೆಯೆಂದರೆ ನಂಬುವುದು ಕಷ್ಟ. ನಂಬುವುದು ಕಷ್ಟ ಎಂಬುದಕ್ಕಿಂತ ಅದು ನಮಗೆ ಸಾಧ್ಯವಿರುವ ಎಲ್ಲ ಆಯಾಮದಿಂದ ಹೊರಗಿನ ಸಂಗತಿಯಾಗಿ ನಿಲುತ್ತದೆ.  

ಭಾಷೆಯೆಂಬ ಮಹಾ ವೈಚಿತ್ರ್ಯಕ್ಕೆ ಸೀಮೆಯನ್ನೂ ಚೌಕಟ್ಟನ್ನೂ ಬರೆಯುವ ಪ್ರಯತ್ನವೇ ಕಲ್ಪನೆಗೆ ಮೀರಿದ್ದು. ಇದೋ ನನ್ನ ಹಿಡಿತಕ್ಕೆ ಸಿಲುಕಿದೆ ಎನಿಸುವಷ್ಟರಲ್ಲೇ ನುಸುಳಿಕೊಂಡುಬಿಡುವ ಸ್ವಭಾವ ಅದರದ್ದು. ವ್ಯಾಕರಣ ಮಾಡಲು ಹೊರಟಿರುವುದು ಇಂಥಾ ಕೆಲಸವನ್ನೇ. ಅದರಲ್ಲೂ ಸಂಸ್ಕೃತದಂಥ ವಿಶಾಲ ಹರಹಿನ, ಕಾಲಾನುಭವದ ಮಹಾನ್ ಇತಿಹಾಸವಿರುವ ಭಾಷೆಯನ್ನು ವಿವರಿಸುವುದಕ್ಕೆ ನಿಯಮಗಳ ವ್ಯವಸ್ಥೆ ಅಳವಡಿಸಿದರೆ ಅದು ತುಂಬಾ ಸಂಕೀರ್ಣವಾಗಿಯೇ ಆಗುತ್ತದೆ. ಪಾಣಿನಿಮಹರ್ಷಿಗಳ ಅಷ್ಟಾಧ್ಯಾಯೀ ಗ್ರಂಥ ಮತ್ತದರ ವಿವರಣೆ ಇವತ್ತಿಗೂ ಮಾನವ ಮಿದುಳಿಗೆ ನಿರಾಯಾಸವಾಗಿ ಹೊಗುವ ಸಂಗತಿಗಳಲ್ಲ. ಪಾಶ್ಚಾತ್ಯ ವಿದ್ವಾಂಸ ಎಲ್. ಬ್ಲೂಮ್ ಫೀಲ್ಡ್ ಹೇಳುವಂತೆ ’ಪಾಣಿನಿಯ ವ್ಯಾಕರಣವೆಂಬುದು ಮಾನವ ಬುದ್ಧಿಮತ್ತೆಗೆ ಇದುವರೆಗೆ ಸಾಧ್ಯವಾಗಿರುವ ಅದ್ಭುತಗಳಲ್ಲಿ ಒಂದು’.  ಭಾಷೆಯಂಥ ಸಂಕೀರ್ಣ ವ್ಯವಸ್ಥೆಯನ್ನು ವಿವರಿಸಲು ಹೊರಟ ಅದು ಸಂಕೀರ್ಣವಾಗಿಯೇ ಇರಬೇಕಾದ್ದು ಸಹಜ.

ಪದವೊಂದು ಸಾಧುವೋ ಅಲ್ಲವೋ ಎಂಬ ನಿಶ್ಚಯಕ್ಕೆ ವ್ಯಾಕರಣವೇ ಶರಣು. ಮೇಲ್ನೋಟಕ್ಕೆ ವ್ಯಾಕರಣದ ಮೇಲೆ ದೊಡ್ಡ ಹೊರೆಯೇನೂ ಇದ್ದಂತೆ ಕಾಣದು. ಡಿಕ್ಷನರಿಯಂತೆ ಪದಗಳನ್ನು ಪಟ್ಟಿಮಾಡುತ್ತಾ ಸಾಗಿದರಾಗದೆ? ಸರಿಯಾಗಿರುವ ಪದಗಳನ್ನು ಪಟ್ಟಿ ಮಾಡಿದರಾಯ್ತಲ್ಲ, ಮತ್ತೆ ಸಾಧುತ್ವ ಹೇಳುವುದಕ್ಕೆ ವ್ಯಾಕರಣ ಯಾಕೆ  ಬೇಕು? ನಿಘಂಟು ಸಾಕು. ಹಾಗೆ ನೋಡಿದರೆ ಡಿಕ್ಷನರಿ ಎಂಬುದು ಮಾನವ ಮಿದುಳಿನ ಬುದ್ಧಿಮತ್ತೆಯ ಉತ್ಪನ್ನವಲ್ಲ. ಅದು smart ಕೆಲಸ ಎನ್ನುವುದಕ್ಕಿಂತ massive ಕೆಲಸ. ತುಂಬಾ ದೊಡ್ಡ ಶ್ರಮವನ್ನು ಬೇಡುವ ಕೆಲಸ.  ಆದರೆ ಪಾಣಿನಿಯ ವ್ಯಾಕರಣ massive ಅಲ್ಲ, ಅದು ಅತ್ಯಂತ smart ರೀತಿಯದು. ಹಾಗಾಗಿಯೇ ಅದು ಸಂಕೀರ್ಣ, ಮತ್ತು ತರ್ಕಾಶ್ರಿತ. ಭಾಷೆಯೊಂದರ ಎಲ್ಲ ಬಗೆಯ ಸಾಧ್ಯತೆಗಳನ್ನು ಬರೀ ೩೯೫೯  ಸೂತ್ರಗಳಲ್ಲಿ ಹಿಡಿದಿಟ್ಟ ಹೆಮ್ಮೆ ಅಷ್ಟಾಧ್ಯಾಯಿಯದು. ಭಾಷೆಯ ಅಗಾಧತೆಗೆ ಹೋಲಿಸಿದರೆ ಈ ಸೂತ್ರಗಳ ಪ್ರಮಾಣ ಬಲು ಸಣ್ಣದು. ಇಷ್ಟು ಸಣ್ಣ ಸಂಖ್ಯೆಯ  ಸೂತ್ರಗಳಲ್ಲಿ ಅಷ್ಟಾಧ್ಯಾಯಿ ಪೂರ್ತಿ ಭಾಷೆಯ ಎಲ್ಲಾ ಆಯಾಮಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಎಲ್ಲಾ ಆಯಾಮಗಳನ್ನು ಎಂದರೆ ಕನ್ನಡದ ಮೂಲಕ ನಮಗೆ ತಿಳಿದಿರುವ ಸಂಧಿ ಸಮಾಸ ಕ್ರಿಯಾಪದ, ನಾಮಪದ, ಸರ್ವನಾಮ ಇದಿಷ್ಟೇ ಅಲ್ಲ. ಅವುಗಳ ವ್ಯುತ್ಪತ್ತಿ, ಸಿದ್ಧಿಪ್ರಕಾರ, ಸ್ವರಪ್ರಕ್ರಿಯೆ ಎಲ್ಲ ಎಲ್ಲವನ್ನೂ ವಿವರಿಸುವ ಕೆಲಸ.


ಅಷ್ಟಾಧ್ಯಾಯಿಯೆಂಬ ಎಂಟು ಅಧ್ಯಾಯಗಳ ಪೂರ್ತಿ ರಚನೆಯಲ್ಲಿ ಮುಖ್ಯವಾಗಿ ಎರಡು ಭಾಗ. ಎಂಟು ಅಧ್ಯಾಯಗಳಲ್ಲಿ ಪ್ರತಿಯೊಂದು ಅಧ್ಯಾಯವೂ ನಾಲ್ಕು ಪಾದಗಳಲ್ಲಿ ವಿಭಾಗವಾಗಿದೆ. ಇದರಲ್ಲಿ ಏಳು ಅಧ್ಯಾಯಗಳು ಮತ್ತು ಎಂಟನೆಯದರ ಮೊದಲನೆಯ ಪಾದ- ಒಂದು ಭಾಗ. ಉಳಿದ ಮೂರೇ ಪಾದಗಳದ್ದು ಇನ್ನೊಂದು ಭಾಗ. ಸೋಜಿಗವೆಂದರೆ, ಮೊದಲನೆಯ ಭಾಗದ ದೃಷ್ಟಿಯಲ್ಲಿ ಎರಡನೆಯ ಭಾಗವೆಂಬುದೇ ಇಲ್ಲ! ಅಂದರೆ, ಶಬ್ದಸಿದ್ಧಿಯ ಪ್ರಕ್ರಿಯೆಯಲ್ಲಿ ಎರಡನೆಯ ಭಾಗದಲ್ಲಿರುವ ಸೂತ್ರಗಳ ಮೂಲಕ ಯಾವೆಲ್ಲ ಕಾರ್ಯ ಆಗಿವೆಯೋ, ಅವು- ಮೊದಲನೆಯ ಭಾಗದ ದೃಷ್ಟಿಯಲ್ಲಿ ಅಸಿದ್ಧ ( ಆಗದೇ ಇರುವಂತೆ). ಹಾಗಂತ ಮೂರೇ ಪಾದಗಳ ಎರಡನೆಯ ಭಾಗ ಇದೆಯಲ್ಲ, ಅದರ ದೃಷ್ಟಿಯಲ್ಲಿ ಮೊದಲನೆಯ ಭಾಗ ಇದ್ದೇ ಇದೆ, ಅಸಿದ್ಧವಲ್ಲ. ಅಂದರೆ ಇದು ದ್ವಿಮುಖ (ಟೂವೇ) ಅಂಧತ್ವ ಅಲ್ಲ. ಹೀಗೆ ಹೇಳಿದರೂ ಸ್ಪಷ್ಟವಾಗಲಿಕ್ಕಿಲ್ಲ, ಇನ್ನೂ ಸರಳವಾಗಿ ಹೇಳಬೇಕೆಂದರೆ...

ಎರಡು ಮನೆಗಳಿದ್ದಾವೆ, ಮತ್ತದರಲ್ಲಿ ಮನೆಯ ಸದಸ್ಯರಿದ್ದಾರೆ ಎಂದುಕೊಳ್ಳುವಾ. ಮೊದಲನೆಯದಕ್ಕೆ ಹಿರಿಮನೆ ಎಂದೂ ಎರಡನೆಯದಕ್ಕೆ ಕಿರಿಮನೆ ಎಂದೂ ಕರೆಯುವಾ. ಈ ಹಿರಿಮನೆಯ ಜನಗಳಿಗೆ ಕಿರಿಮನೆಯ ಜನ ಲೆಕ್ಕಕ್ಕೇ ಇಲ್ಲ, ಅವರ ಇರುವಿಕೆ ಮತ್ತು ಅವರ ಕಾರ್ಯಗಳು ಲೆಕ್ಕಕ್ಕಿಲ್ಲ. ಅಥವಾ ಆ ಕಿರಿಮನೆಯೆಂಬುದೇ ಇಲ್ಲ. ಹಾಗಂತ ಕಿರಿಮನೆಯವರಿಗೆ ಹಿರಿಮನೆಯ ಜನ, ಅವರ ಕಲಸಗಳೆಲ್ಲವೂ ಸ್ಪಷ್ಟ ಸ್ಪಷ್ಟ.  ಕಿರಿಮನೆಯ ಜನ ಅಡುಗೆ ಮಾಡಿಕೊಂಡರೂ, ಹೊಸ ಬಟ್ಟೆ ತಗೊಂಡರೂ, ಇನ್ನೇನೇ ಮಾಡಿದರೂ ಅದಕ್ಕೆ ಸಂಬಂಧಪಟ್ಟಂತೆ ಹಿರಿಮನೆಯ ಜನಗಳ ಪಾಲಿಗೆ ಅದು ಮಾಡಿಲ್ಲದಂತೆ. ಈ ಮೊದಲಮನೆಯ (ಹಿರಿಮನೆ) ಜನ ಅವರಿನ್ನೂ ಅಡುಗೆ ಮಾಡಿಲ್ಲ, ಬಟ್ಟೆ ತಗೊಂಡಿಲ್ಲ ಎಂದೇ ಅಂದುಕೊಳ್ಳುತ್ತಾರೆ. ಹಾಗಂದುಕೊಂಡು ಸುಮ್ಮನಿರುವುದಿಲ್ಲ, ಅದಕ್ಕನುಗುಣವಾಗಿಯೇ ತಮ್ಮ ಕೆಲಸ ಮಾಡುತ್ತಾರೆ.  

ಉದಾ-

ಹಿರಿಮನೆಯಲ್ಲಿ ಒಬ್ಬರಿದ್ದಾರೆ, ಗುಣಸಂಧಿಯನ್ನು ವಿಧಿಸುವವರು. ಅವರ ಪ್ರಕಾರ ಅ, ಆ, ಕಾರಗಳ ಮುಂದೆ ಯಾವುದೇಸ್ವರವರ್ಣ ಬಂದರೆ, ಅವುಗಳ ಬದಲಿಗೆ ಏ ಮತ್ತು ಓ ಎಂಬ ವರ್ಣಗಳು ಯೋಗ್ಯತೆಯನುಸಾರ ಒಂದೇ ಆದೇಶವಾಗಿ ಬರುತ್ತವೆ. ಉದಾ- ರಮಾ+ ಈಶಃ= ರಮೇಶಃ (+= ). ಸರಿ, ಇದೊಂದು ವಿಧಿ ಸೂತ್ರ, ಮತ್ತದು ಪೂರ್ತಿ ಭಾಷೆಯಲ್ಲಿ ತನ್ನ ಅಗತ್ಯವೆಲ್ಲಿದೆಯೆಂದು ಹುಡುಕುತ್ತಲೇ ಇರುತ್ತದೆ.

ಈಗ ಇನ್ನೊಂದು ಉದಾಹರಣೆ ನೋಡೋಣ. ’ಬಾಲಕಾ ಇಹ’ (ಇಲ್ಲಿ ಬಾಲಕರಿರುವರು ಎಂದರ್ಥ) ಅಂತ ಒಂದು ಶಬ್ದ ಪ್ರಸಂಗ. ವಸ್ತುತಃ ’ಬಾಲಕಾಸ್’ ’ಇಹ’ ಎಂದು ಎರಡು ಪದಗಳು ಅವು, ಆದರೆ ಸಂಹಿತೆಯ (ಸಂಧಿಸಂಭವ) ಕ್ರಮದಲ್ಲಿ ಸಂಧಿಯಾದಾಗ ಬಾಲಕಾ ಶಬ್ದದ ಮುಂದಿರುವ ಸಕಾರಕ್ಕೆ ರ ಎಂಬುದು ಆದೇಶವಾಗಿ,  ಆ ’ರ’ ವರ್ಣಕ್ಕೆ ಯಕಾರಾದೇಶವಾಗಿ ಮುಂದೆ ಆ ಯಕಾರಕ್ಕೂ ಲೋಪ ಬಂದು ಬರೀ ’ಬಾಲಕಾ’ ಅಂತ ಉಳಿದುಕೊಳ್ಳುತ್ತದೆ. ಇದಿಷ್ಟೂ ಕೆಲಸ ಮಾಡುವವರು ಕಿರಿಮನೆಯ ಜನ.

ಪರಿಸ್ಥಿತಿ ಹೀಗಿರಲಾಗಿ, ಗುಣ ಸಂಧಿಯನ್ನು ಹೇಳುವ ಸೂತ್ರ ಹಿರಿಮನೆಯಲ್ಲಿರುವುದು ನಮಗೆ ನೆನಪಾಗಿಬಿಡುತ್ತದೆ. ಅಕಾರ ಆಕಾರಗಳ ಮುಂದೆ ಬಾಕಿ ಯಾವುದೇ ಸ್ವರ ಬಂದರೂ ಏ ಮತ್ತು ಓ ವರ್ಣಗಳು ಯೋಗ್ಯತೆಯನುಸಾರ ಬರುತ್ತವೆ ಎಂಬುದು ತಾನೆ ಆ ಸೂತ್ರ! ಹಾ, ಇಲ್ಲಿದೆಯಲ್ಲ, ಬಾಲಕಾ ಇಹ ಅನ್ನುವಲ್ಲಿ ಆ ಕಾರದ ಮುಂದೆ ಇಕಾರ ಇದೆ, ಹಂಗಾಗಿ ಏಕಾರ ಬರಲಿ ಎಂಬುದು ಸಂಶಯ. ಹಾಗಾಗೋದಿಲ್ಲ, (ಹಾಗಾಗಿದ್ದಿದ್ದರೆ ಅದು ಲೋಕದ ವ್ಯವಸ್ಥೆಗೆ ವಿರುದ್ಧವಾಗುತ್ತಿತ್ತು. ವ್ಯಾಕರಣದಿಂದ ಭಾಷೆಯಲ್ಲ, ಭಾಷೆಗಾಗಿ ವ್ಯಾಕರಣ ತಾನೆ!)  ಮೊದಲೇ ಹೇಳಿದೆನಲ್ಲ, ಹಿರಿಮನೆಯವರಿಗೆ ಕಿರಿಮನೆಯವರು ಮಾಡಿದ್ಯಾವುದೂ ಕಾಣುವುದಿಲ್ಲ, ಜನ ಇರುವುದೂ ಗೊತ್ತಾಗುವುದಿಲ್ಲ ಎಂದು, ಹಾಗೆಯೇ ಇಲ್ಲಿ ಕಿರಿಮನೆಯವರು ಮಾಡಿದ ಕೆಲಸಗಳಾದ ಯಕಾರಾದೇಶ, ಲೋಪ- ಇದ್ಯಾವುದೂ ಹಿರಿಮನೆಯ ಗುಣಸಂಧಿಗೆ ಕಾಣುವುದಿಲ್ಲ. ಕಾಣುವುದಿಲ್ಲ ಅಂದರೆ ಅದರ ಪಾಲಿಗೆ ಅಲ್ಲಿನ ಶಬ್ದರೂಪ ’ಬಾಲಕಾಸ್’ ಎಂದೇ ಇದೆ. ಹಾಗಿದ್ದಾಗ ಗುಣಸಂಧಿಯಾಗುತ್ತದಲ್ಲ ಎಂಬ ಪ್ರಸಂಗವೇ ಏಳದು.

ಹೀಗೆ ಈ ಉದಾಹರಣೆಯಲ್ಲಿ ಗುಣಸಂಧಿಯಾಗದಿರುವುದೇ ಬೇಕಾದ್ದು. ಅದನ್ನೇ ಹಿರಿಮನೆ ಕಿರಿಮನೆ ವ್ಯವಸ್ಥೆಯಲ್ಲಿ ನಿರ್ವಹಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ, ಇದರೊಂದಿಗೆ ಇನ್ನೂ ಹಲವು ಆಯಾಮಗಳನ್ನೊಳಗೊಂಡ ಸಮಸ್ಯೆಗಳು ಬಂದಾಗೆಲ್ಲ ಪೂರ್ತಿ ಅಷ್ಟಾಧ್ಯಾಯಿಯೆಂಬುದು ಸ್ವಯಂ ಒಂದು ತಂತ್ರಾಂಶದಂತೆ ಕಾರ್ಯ ನಿರ್ವಹಿಸುತ್ತದೆ!
ಇದಲ್ಲದೆ ಎರಡೂ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ನಿರ್ದಿಷ್ಟ ಕಾರ್ಯಭಾರ ಇದ್ದಂತೆಯೇ ನಿರ್ದಿಷ್ಟ ವಿಳಾಸವೂ ಇದೆ. ಯಾವ ಅಧ್ಯಾಯದ ಯಾವ ಪಾದದ ಎಷ್ಟನೆಯ ಸೂತ್ರ ಎಂಬುದು unique ಆದ ವಿಳಾಸ.


ಎರಡು ಮನೆಗಳ ಚಿತ್ರ ಇಷ್ಟಾದಬಳಿಕ, ಇನ್ನುಮೇಲೆ ಕಾರ್ಯಕಾಲ ಮತ್ತು ಯಥೋದ್ದೇಶ ಪಕ್ಷಗಳ ವಿಚಾರಕ್ಕೆ ದಾರಿಯಾಯ್ತು. ಅದೇನಪ್ಪ ಅಂದ್ರೆ-

(ಮುಂದುವರಿಯುವುದು.....)