Thursday, August 10, 2017

ತೃತೀಯೆಯ ಕಥೆ.


ಈಕೆಯದು ಉಪಕಾರದ ಸ್ವಭಾವ. ಕಾರ್ಯವೊಂದಕ್ಕೆ ಉಪಕರಣವಾಗಿ ಒದಗುವ ಇವಳಿಗೆ ಇಂಗ್ಲೀಷ್ ಭಾಷೆಯಲ್ಲಂತೂ  instrumental case  ಅಂತಲೇ ಸಾಕ್ಷಾತ್ತಾಗಿ ಕರೆಯುತ್ತಾರೆ. ಸಂಸ್ಕೃತ ಮತ್ತು ಕನ್ನಡದಲ್ಲಿ ಹಾಗೆಂದು ವಾಚ್ಯವಾಗಿ ಕರೆಯದಿದ್ದಾಗಲೂ ತೃತೀಯೆಯ ಮುಖ್ಯ ಕಾರ್ಯವು ಕರಣವನ್ನು ಅಂದರೆ ಸಹಾಯಕವಾಗಿ ಬಳಕೆಯಾಗುವ ಸಂಗತಿಯನ್ನು ಹೇಳುವುದೇ ಆಗಿದೆ. ಸಣ್ಣ ಉದಾಹರಣೆಗಳನ್ನು ನೋಡುವುದಾದರೆ-
೧. ರಾಮನು ಕಲ್ಲುಗಳಿಂದ ಸೇತುವೆಯನ್ನು ಕಟ್ಟಿದನು.
೨. ಸಿದ್ಧರಾಮನು ಕೈಯಿಂದ ಪಾಪವಾಚರಿಸಿದನು.     
೩. ರಾಮಃ ಬಾಣೇನ ರಾವಣಂ ಜಘಾನ

ಈ ವಾಕ್ಯಗಳಲ್ಲಿ ಕಲ್ಲುಗಳು ಸೇತುನಿರ್ಮಾಣದ ಕ್ರಿಯೆಯಲ್ಲೂ, ಕೈಗಳು ಪಾಪಾಚರಣೆಯಲ್ಲೂ, ಬಾಣವು ರಾವಣ ವಧೆಯ ಕ್ರಿಯೆಯಲ್ಲೂ ಉಪಕರಣವಾಗಿ ಬಳಕೆಯಾಗಿವೆ, ಮತ್ತು ಅಲ್ಲೆಲ್ಲ ಉಪಕರಣಗಳಿಗೆ ಮೂರನೆಯ ವಿಭಕ್ತಿಯ ಪ್ರತ್ಯಯ ಅಂಟಿಕೊಂಡಿದೆ. ಇದು ಸಾಮಾನ್ಯವಾಗಿ ತೃತೀಯೆಯು ಕಂಡುಬರುವ ರೀತಿ. ಇದಲ್ಲದೆ ಪ್ರಥಮೆಯನ್ನು ಬಿಟ್ಟು ಮತ್ತ್ಯಾವ ವಿಭಕ್ತಿಗೂ ಇಲ್ಲದ ಭಾಗ್ಯವೊಂದು ತೃತೀಯೆಗೆ ಇದೆ. ವಾಕ್ಯವೊಂದರಲ್ಲಿ ಕರ್ತೃ ಸ್ಥಾನವನ್ನು ಅಲಂಕರಿಸುವ ಭಾಗ್ಯ ಅದು. ಕರ್ತೃ ಸ್ಥಾನವನ್ನೇಕೆ ನಾನು ಭಾಗ್ಯವೆಂದು ಬಗೆಯುತ್ತೇನೆಂದರೆ ಅದು ಸ್ವತಂತ್ರವಾದ್ದು ಎಂಬ ಕಾರಣಕ್ಕೆ. ಅದಿಲ್ಲದೆ ವಾಕ್ಯವೇ ಇಲ್ಲ. ಯಾವ ವಾಕ್ಯವೇ ಆಗಲಿ, ಒಂದು ಕ್ರಿಯಾಪದ ಮತ್ತಿನ್ನೊಂದು  ಕ್ರಿಯಾಶ್ರಯವಾದ ನಾಮಪದ (ಹೀಗೆ ಆಶ್ರಯವಾಗುವಿಕೆಯೇ ಸ್ವಾತಂತ್ರ್ಯವೆಂದು ವೈಯಾಕರಣರ ಅಭಿಪ್ರಾಯ. ’ಸ್ವತಂತ್ರಃ ಕರ್ತಾ’ ಎಂಬ ಪಾಣಿನಿ ಸೂತ್ರದಲ್ಲಿನ ಸ್ವಾತಂತ್ರ್ಯಕ್ಕೆ ಈ ಅರ್ಥವನ್ನೇ ಊರ್ಜಿತಗೊಳಿಸಲಾಗಿದೆ) ಇವೆರಡಿಲ್ಲದೇ ಪೂರ್ಣಾರ್ಥವನ್ನು ಹೊಮ್ಮಿಸಲಾರದು. ಕ್ರಿಯಾಪದದ ಜೊತೆಗೆ ಪ್ರಥಮೆ ಮತ್ತು ತೃತೀಯೆಯನ್ನು ಬಿಟ್ಟು ಉಳಿದ ಯಾವುದೇ ವಿಭಕ್ತಿ ಬಳಸಿದರೂ ವಾಕ್ಯ ಉದ್ದವಾಗುತ್ತ ಹೋಗುತ್ತದೆಯೇ ಹೊರತು ಕ್ರಿಯಾಪದದ ಆಶಯಕ್ಕೆ ಒಂದು ನಿಲುಗಡೆ ಎಂಬುದೇ ಇಲ್ಲದಂತಾಗಿ ಅರ್ಥವು ಹಿಡಿತಕ್ಕೆ ಸಿಗದೇ ಹೋಗುತ್ತದೆ. ಉದಾ ಪ್ರಥಮೆಯಿಲ್ಲದ, ಅಂದರೆ ಕರ್ತೃವನ್ನು ಬಳಸಿಕೊಳ್ಳದೇ ಇರುವ ವಾಕ್ಯ-

೧. ಮರದ ಹಣ್ಣನ್ನು ಕೋಲಿನಿಂದ ಹೊಡೆದು ಮರದಿಂದ ಬೀಳಿಸಿಕೊಂಡು ರಾಮನಿಗೆ ಕೊಟ್ಟು, ತಟ್ಟೆಯಲ್ಲಿಟ್ಟು ...... (ಇಲ್ಲಿ ಪ್ರಥಮಾ ಒಂದನ್ನು ಬಿಟ್ಟು ಉಳಿದೆಲ್ಲ ವಿಭಕ್ತಿಗಳು ಬಳಕೆಯಾಗಿವೆ)
ಈಗಿಲ್ಲಿ ಪೂರ್ಣ ಕ್ರಿಯಾಪದವನ್ನು ಬಳಸಿಬಿಟ್ಟರೆ ವಾಕ್ಯ ಮುಗಿಯುತ್ತದೆ ಮತ್ತು ಅದರ ಜೊತೆಯಲ್ಲೇ ಅನಾಯಾಸವಾಗಿ ಕರ್ತೃವೂ ಹೇಳಲ್ಪಡುತ್ತದೆ. ತಿನ್ನು, ತಿಂದನು, ತಿನ್ನುತ್ತಾನೆ, ತಿಂದೆಯಾ... ಹೀಗೆ ಏನೇ ಹೇಳಿದರೂ ’ನೀನು, ಅವನು, ರಾಮನು’ ಎಂಬೆಲ್ಲ ಕರ್ತೃವಾಚಕಗಳು ಸಂದರ್ಭಕ್ಕನುಸಾರವಾಗಿ ತನ್ನಿಂತಾನೇ ಸೇರಿಕೊಳ್ಳುತ್ತವೆ. ಕರ್ತೃಸಮೇತವಾದ ಕ್ರಿಯಾಪದವನ್ನು ಬಳಸದೇ ಇದ್ದ ಪಕ್ಷದಲ್ಲಿ ವಾಕ್ಯ ಅಪೂರ್ಣ. ಪೂರ್ಣ ಕ್ರಿಯಾಪದವೊಂದು ಕರ್ತೃಪ್ರತ್ಯವನ್ನು (ಕೆಲವೊಮ್ಮೆ ಕರ್ಮಪ್ರತ್ಯಯವನ್ನು) ಒಳಗೊಂಡೇ ಇರುತ್ತದೆ ಎಂಬುದನ್ನು ಗಮನಿಸಬೇಕು. ಧಾತುವಿನಲ್ಲಿನ ವ್ಯಾಪಾರಕ್ಕೆ (ಕ್ರಿಯಾ) ಇಂಬು ಕೊಡುವ ಕೆಲಸವನ್ನು ಈ ಬಗೆಯ ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಯು ವಹಿಸಿಕೊಳ್ಳುತ್ತದೆ. ಅದು ಅದರ ದೊಡ್ಡತನ. ಈ ಬಗೆಯ ವಾಕ್ಯಗಳಿಗೆ ಕರ್ತರಿ ಪ್ರಯೋಗ ಅಂತಲೂ ಕರೆಯಲಾಗುತ್ತದೆ.

ಕರ್ಮಣಿ ಪ್ರಯೋಗ ಎಂದು ಕರೆಯಲಾಗುವ ಇನ್ನೊಂದು ವಾಕ್ಯಪ್ರಕಾರವನ್ನು ನೋಡೋಣ-
೨. ಮೊನ್ನೆ ಬುಧವಾರದ ದಿನ ಬೆಳಗಿನಲ್ಲಿ ದೂರದಲ್ಲಿರುವ ಸಂಗೀತದ ಶಾಲೆಯು ಹೋಗು ಕ್ರಿಯೆ
ಇಲ್ಲಿಯೂ ಕ್ರಿಯಾಪದವನ್ನು ಹೇಳದಿದ್ದ ಪಕ್ಷದಲ್ಲಿ ವಾಕ್ಯ ಅಪೂರ್ಣವೇ. ಕ್ರಿಯೆ ಕಾಣುತ್ತಿಲ್ಲ ಅನ್ನುವ ಕಾರಣಕ್ಕೆ ಅದು ಅಪೂರ್ಣವಲ್ಲ, (ಯಾಕೆಂದರೆ ಹೋಗುವ ಕ್ರಿಯೆ ಎಂಬುದನ್ನು ಸೂಚಿಸಲಾಗಿದೆ) ಬದಲಾಗಿ ಕ್ರಿಯೆಯ ಆಶ್ರಯದಾತನಾದ ಕರ್ತೃ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಅಪೂರ್ಣ. ಅಂದರೆ ಧಾತುವಿನಲ್ಲಿನ ಕ್ರಿಯಾಭಾಗವನ್ನು ನೋಡಿಕೊಳ್ಳುವ ವಾರಸುದಾರ ಒಬ್ಬ ಬೇಕಾಗಿದ್ದಾನೆ. ಕರ್ಮಣಿ ಪ್ರಯೋಗದಲ್ಲಿ ಧಾತುವಿನ ಮುಂದಿನ ಪ್ರತ್ಯಯದಿಂದಲೇ ಕರ್ಮವು ಉಕ್ತವಾದ್ದರಿಂದ ಮತ್ತೆ ಕರ್ಮವನ್ನು ಹೇಳಲೋಸುಗ ದ್ವಿತೀಯಾ ವಿಭಕ್ತಿ ಬರುವುದಿಲ್ಲ, ಅದರ ಬದಲಿಗೆ ಆ ಜಾಗದಲ್ಲಿ ಪ್ರಥಮಾ ಬಂದು ಕುಳಿತುಕೊಳ್ಳುತ್ತದೆ. (ಮೇಲಿನ ವಾಕ್ಯದಲ್ಲಿ ಶಾಲೆಯು ಈ ವಾಕ್ಯದಲ್ಲಿ ಕರ್ಮಪದವಾಗಿದ್ದರೂ ಅದಕ್ಕೆ ದ್ವಿತೀಯಾ ಬಂದಿಲ್ಲ, ಪ್ರಥಮೆ ಬಂದಿದ್ದಾಳೆ). ಈ ವಾಕ್ಯದಲ್ಲಿ ಕ್ರಿಯೆಯ ಭಾರವನ್ನು ಹೊರಲು ಬರುವಾಕೆಯೇ ತೃತೀಯೆ. ವಾಕ್ಯವೊಂದರಲ್ಲಿ ಯಾವೆಲ್ಲ ವಿಭಕ್ತಿಗಳು ಬಳಕೆಯಾದರೂ ಅವುಗಳಲ್ಲಿ ಯಾರಿಗೂ ಧಾತುವಿನ ಕ್ರಿಯಾ( ವ್ಯಾಪಾರ) ಎಂಬ ಬಲುಮುಖ್ಯವಾದ ಭಾಗವನ್ನು ಭರಿಸುವ ಶಕ್ತಿ ಇಲ್ಲ. ಅವೆಲ್ಲವೂ ಅರ್ಥವನ್ನು ತಮ್ಮ ಮೂಲಕ ಮುಂದಕ್ಕೆ ಹರಿಯಗೊಡುತ್ತ ಕೊನೆಗೆ ಪ್ರಥಮೆಯ ಅಥವಾ ತೃತೀಯೆಯ ಮನೆಯ ದಾರಿಯನ್ನೇ ತೋರುತ್ತವೆ. ಧಾತುವಿನ ಅರ್ಥವು ಅವುಗಳ ಮೂಲಕ ಧಾವಿಸಿ ಬರುತ್ತ ಕೊನೆಯಾಗುವುದೇನಿದ್ದರೂ ಪ್ರಥಮಾ ಅಥವಾ ತೃತೀಯಾದಲ್ಲಿ.

ಈ ಮೇಲಿನ ಉದಾಹರಣೆಗಳಿಂದ ತಿಳಿದುಬರುವುದೇನೆಂದರೆ ಉಳಿದ ವಿಭಕ್ತಿಗಳಿಗಿಲ್ಲದ ಅನನ್ಯವಾದ ಭಾಗ್ಯ ಈ ಪ್ರಥಮಾ ವಿಭಕ್ತಿಗೂ, ತೃತೀಯಾ ವಿಭಕ್ತಿಗೂ ಇದೆ ಅನ್ನುವುದು. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಪ್ರಥಮೆಯೂ, ಕರ್ಮಣಿ ಪ್ರಯೋಗದ ವಾಕ್ಯದಲ್ಲಿ (ಕನ್ನಡದಲ್ಲಿ ಇದು ತೀರಾ ವಿರಳ ಮತ್ತು ಕನ್ನಡದ ಜಾಯಮಾನಕ್ಕೊಗ್ಗದ ಶೈಲಿ) ತೃತೀಯೆಯೂ ಕ್ರಮವಾಗಿ ಕ್ರಿಯಾಶ್ರವಾಗುವ ಮೂಲಕ ಮಹತ್ತರ ಪಾತ್ರವನ್ನು ವಹಿಸಿಕೊಳ್ಳುತ್ತಿವೆ. ವಿಭಕ್ತಿಗಳ ಕುಟುಂಬದಲ್ಲಿ ಹಾಗೆ ಕ್ರಿಯೆಯನ್ನು ಭರಿಸಿಕೊಳ್ಳುವ ಮೂಲಕ ಸ್ವತಂತ್ರ ಎಂದು ಕರೆಸಿಕೊಳ್ಳುವ ಮತ್ತು ಆ ಮೂಲಕ ಕರ್ತೃತ್ವವನ್ನು ಹೊಂದುವ ಭಾಗ್ಯ ಇದ್ದಿದ್ದು ಪ್ರಥಮೆಗೆ ಮತ್ತು ತೃತೀಯೆಗೆ ಮಾತ್ರ.

ಇದರ ಜೊತೆಯಲ್ಲಿ ಕರ್ಮ ಮತ್ತು ಆಧಾರಗಳೂ ಕರ್ತೃವಾಗಿ ತೋರಬಲ್ಲವು ಎಂಬ ವಾದವೂ ಇದೆ, ಅದು ಸಾಮಾನ್ಯ ವ್ಯವಹಾರಕ್ಕೆ ದಕ್ಕುವಂಥದ್ದಲ್ಲ. ಅಂದರೆ ಕರಣ, ಅಧಿಕರಣಗಳನ್ನು ಸ್ವತಂತ್ರ componet  ಆಗಿ ಕಾಣುವ ಬಯಕೆ ಒಬ್ಬನಲ್ಲಿ ಇದ್ದಾಗ ಅವುಗಳೂ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಲ್ಲವು. ಅಂಥ ಸಂದರ್ಭದಲ್ಲಿ ಅವಕ್ಕೆ ಅಂಟಿಕೊಳ್ಳುವ ವಿಭಕ್ತಿ ಮಾತ್ರ ಪ್ರಥಮೆಯೇ ಆಗಿರುತ್ತದೆ.
ಉದಾ- ಪಾತ್ರೆಯು ಅಟ್ಟುತ್ತದೆ. (ಅಟ್ಟು= ಬೇಯಿಸು)
ಈ ಉದಾಹರಣೆಯಲ್ಲಿನ ಅಟ್ಟುವ ಕ್ರಿಯೆಯಲ್ಲಿ ಪಾತ್ರೆಯದ್ದು ಅಧಿಕರಣ ಅಂದರೆ ಆಧಾರದ ಪಾತ್ರ. ಆದರೆ ಅಧಿಕರಣವನ್ನೇ ಸ್ವತಂತ್ರವೆಂದು ಹೇಳುವ ಅತ್ಯುತ್ಸಾಹ ಒಬ್ಬನಿಗಿದ್ದಾಗ ಅಧಿಕರಣವೇ ಕ್ರಿಯಾಶ್ರಯವಾಗಿ ಪ್ರಥಮೆಯನ್ನು ಆತುಕೊಳ್ಳುತ್ತದೆ.     

ಸಂಸ್ಕೃತದ ಮತ್ತು ಕನ್ನಡದ ತೃತೀಯೆಗಳನ್ನು ಪಕ್ಕಕ್ಕಿಟ್ಟು ನೋಡಿದಾಗ ಅವೆರಡು ತಮ್ಮದೇ ಬಗೆಯಲ್ಲಿ ಭಿನ್ನವಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಕರಣವಾಗಿ ಮಾತ್ರವೇ ತೃತೀಯೆಯ ಬಳಕೆ. ಉಪಪದ ವಿಭಕ್ತಿಯಾಗಿ (ಅಂದರೆ ನಿರ್ದಿಷ್ಟ ಪದವನ್ನು ಬಳಸಿದಾಗ ಅಗತ್ಯವಾಗಿಯೂ ಬರುವ ವಿಭಕ್ತಿ) ತೃತೀಯೆಯ ಬಳಕೆ ಇಲ್ಲ. ಸಂಸ್ಕೃತದಲ್ಲಿ ಸಹಾರ್ಥದ( ’ಜೊತೆಯಲ್ಲಿ’ ಎಂಬರ್ಥ) ಪ್ರಯೋಗವಿದ್ದಾಗ, ವಿನಾ ಎಂಬುದರ ಪ್ರಯೋಗವಿದ್ದಾಗ ತೃತೀಯಾ ಅವಶ್ಯವಾಗಿಯೂ ಬರುತ್ತದೆ. ಕನ್ನಡದ ಪರಿಮಿತಿಯಲ್ಲಿ ಅವು ಬರುವುದಿಲ್ಲವಾದ್ದರಿಂದ ಹೆಚ್ಚಿಗೆ ಹೇಳಲಾರೆ. ಒಂದಂತೂ ಸತ್ಯ, ಕನ್ನಡಕ್ಕಿಂತ ವಿಭಿನ್ನವಾದ ಕ್ಷೇತ್ರಗಳಲ್ಲಿ ಸಂಸ್ಕೃತವು ತೃತೀಯೆಯನ್ನು ದುಡಿಸಿಕೊಳ್ಳುತ್ತದೆ ಎಂಬುದು. ಕರ್ಮಣಿ ಪ್ರಯೋಗವು ಸಂಸ್ಕೃತಕ್ಕೆ ಬಲು ಸಹಜ. ಅಹಂ ಎನ್ನುವ ಪದ ಸಂಸ್ಕೃತದಲ್ಲಿ ’ನಾನು’ ಎಂಬುದನ್ನು ಸೂಚಿಸುತ್ತದೆ. ಅಹಂಪ್ರಜ್ಞೆಯು ಮಾನವನನ್ನು ಗರ್ವಿಷ್ಠನನ್ನಾಗಿಯೂ, ಹೆಚ್ಚು ಹೆಚ್ಚು ಇಹಲೋಕಕ್ಕೆ ಬದ್ಧವಾದವನನ್ನಾಗಿಯೂ ಮಾಡುತ್ತದೆ. ಭಾಷಾ ಬಳಕೆಯ ವಿಷಯದಲ್ಲಿ ಎಚ್ಚರಿಕೆಯುಳ್ಳವರಾದ ಮತ್ತು ಅಹಮಿಗೆ ಅಂಟಿಕೊಳ್ಳಲು ಬಯಸದ ಕೆಲವರು ’ಅಹಂ’ ಪದದ ಬಳಕೆಯನ್ನೇ ಪ್ರಜ್ಞಾಪೂರ್ವಕವಾಗಿ ದೂರವಿಡುತ್ತಾರೆ. ನನ್ನ ಗುರುಗಳೂ ಕೆಲವರು ಹಾಗಿದ್ದಾರೆ. ’ಅಹಂ ಕೃತವಾನ್’ ಎಂಬ ಕರ್ತರಿ ಪ್ರಯೋಗಕ್ಕೆ ಬದಲಾಗಿ ’ಮಯಾ ಕೃತಮ್’ ಎಂಬ ಕರ್ಮಣಿ ಪ್ರಯೋಗಕ್ಕೆ ಇವರು ಶರಣು ಹೋಗುತ್ತಾರೆ. ಆಗ ಕರ್ತೃಪ್ರಾಧಾನ್ಯಕ್ಕೆ ಬದಲಾಗಿ ಕ್ರಿಯೆಗೆ ಪ್ರಾಧಾನ್ಯ ದೊರೆಯುತ್ತದೆ. ಮತ್ತು ಆಗೆಲ್ಲ ಸಹಾಯಕ್ಕೆ ಬರುವಾಕೆ ಇದೇ ತೃತೀಯೆಯೇ ಆಗಿದ್ದಾಳೆ. 

ಕರಣಾರ್ಥದ ಹೊರತಾಗಿ ಕನ್ನಡವು ತೃತೀಯೆಗೆ ಇನ್ನೊಂದು ಹೆಚ್ಚುವರಿ ಜವಾಬ್ದಾರಿಯನ್ನು ಕೊಟ್ಟಿದೆ. ಪಂಚಮೀ ವಿಭಕ್ತಿಯೆಂಬುದೊಂದು ಕನ್ನಡದಲ್ಲಿ ನಾಮಮಾತ್ರಕ್ಕೆ ಇರುತ್ತಿದ್ದರೂ ಅದರ ಕೆಲಸವನ್ನು ತೃತೀಯಾಗೇ ಕೊಡಲಾಗಿದೆ. ಕನ್ನಡದಲ್ಲಿ ’ದೆಸೆಯಿಂದ’ ಎಂಬುದು ಪಂಚಮಿಯ ಪ್ರತ್ಯಯ. ಆದರೆ ಅದರ ಬಳಕೆಯಂತೂ ವಿರಳಾತಿವಿರಳ. ಕನ್ನಡಲ್ಲಿ ’ಮನೆಯಿಂದ ಬಂದೆ’ ಎಂದರೆ ಧಾರಾಳವಾಗಿ ಸಾಕು. ಇಲ್ಲಿ ಬಳಕೆಯಾಗಿರುವುದು ತೃತೀಯಾ ವಿಭಕ್ತಿ ಮತ್ತದು ಈ ಸಂದರ್ಭದಲ್ಲಿ ಕರಣಾರ್ಥದಲ್ಲಿ ಇಲ್ಲ. ನಿಜವೆಂದರೆ- ’ಮನೆಯ ದೆಸೆಯಿಂದ ಬಂದೆ’ ಎಂದು ಪಂಚಮೀ ಬಳಕೆಯಾಗಬೇಕಾದ ಜಾಗ ಇದು. ಆದರೆ ಅದನ್ನೀಗ ನಾವು ಬಳಸುತ್ತಿಲ್ಲ. ಪಂಚಮೀ ಪ್ರತ್ಯಯವನ್ನು ’ದೆಸೆಯಿಂದ’ ಅಂತ ಬರೆಯುವಾಗ ಬಹುಶಃ ಕನ್ನಡವೈಯಾಕರಣರ ತಲೆಯಲ್ಲಿದ್ದುದೂ ಎರಡು ವಸ್ತುಗಳ ನಡುವೆ ಸಂಭವಿಸುವ, ದೈಶಿಕ ವಿಭಾಗವೇ ಇರಬೇಕು. ಆದರೆ ಇದು ಕನ್ನಡದ ಜಾಯಮಾನಕ್ಕೆ ಒಗ್ಗಲಿಲ್ಲವಾಗಿ ನಾವು ವಿಭಾಗಾರ್ಥದಲ್ಲೂ ತೃತೀಯೆಯನ್ನೇ ಅನೂಚಾನವಾಗಿ ಬಳಸಿಕೊಂಡು ಬಂದಿದ್ದೇವೆ.

ಇವಿಷ್ಟು ತೃತೀಯೆಯ ಕಥೆ.  
     
      


Saturday, May 20, 2017

ಸ ನಃ ಪಾಯಾನ್ನಿತ್ಯಮ್ - ತಿಳಿನಗೆಯ ಯತಿದೇವ ಕಾಯಲೆಮ್ಮ




ಉಮಾ ಯಸ್ಯಾಂಕಸ್ಥಾ ಶಿರಸಿನಿಹಿತಾ ಸ್ವರ್ಗತಟಿನೀ
ಪ್ರಸನ್ನೇ ದ್ವೇ ನೇತ್ರೇ ತದಿತರದಹೋ ಕಾಮದಹನಮ್
ಗಲೇ ಯಸ್ಯಾಹಿರ್ಯೋ ಹಿಮನಗನಿಕೇತಃ ಶಶಿಧರಃ
ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ || ೧

ಉಡಿಯನೇರಿಹ ಮಡದಿ, ಜಟೆಗೆ ಹೊನ್ನೂರ ನದಿ
ಜೋಡಿ ಕಂಗಳು ಶಾಂತವಿನ್ನೊಂದು ರೌದ್ರ.
ಕೊರಳ ಹಾರವು ಹಾವು, ನೀರ್ಗಲ್ಲ ಬೆಟ್ಟ ಮನೆ
ಗಂಗೆ ತೊಟ್ಟವನೀತ ಕಾಯಲೆಮ್ಮ |

ದೇವೋ ಭೂತಾನಾಂ ಸಕಲಜಗದದ್ವೈತಪಯಸಾ
ಸಿಸಿಕ್ಷುಃ ಸಂಜಜ್ಞೇ ಮಹಿತತಮಪೂರ್ಣಾತಟಭುವಿ 
ಮನೀಷೀ ಸರ್ವಜ್ಞಃ ಕವಿಹೃದಯಮುಗ್ಧಶ್ಚ ಮುನಿರಾಟ್ 
ಸ ನಃ ಶಂಕಾಹಾರೀ ಭವತು ಮತಿದಃ ಶಂಕರಗುರುಃ  ||೨

ಎರಡಿಲ್ಲದರಿವ ರಸ ಜಗಕೆಲ್ಲ ಉಣಿಸಿದವ
ಪೂರ್ಣೆ ನದಿ ಬಯಲಲ್ಲಿ ತಳೆದು ತನುವ.
ತಿಳಿವಿನವ, ಬಲು ಜಾಣ, ಕವಿಮನದ ಮುನಿರಾಜ
ಶಂಕೆ ಕಳೆ, ಮತಿಯ ಕೊಡು ಶಂಕರಾರ್ಯ |

ಯಥಾ ಧಾವದ್ಗಂಗಾ ಹಿಮಗಿರಿಸೃತಾ ಪೋಷತಿ ಧರಾಂ
ತಥೈವೇಯಂ ಲೋಕಾನ್ ದ್ವಿತಯವಿಹತಾನ್ ಶಂಕರಕೃತಾ
ಸರಿದ್ಭೂತ್ವಾ ಸೋಂದಾಪುರವರಯತೇರಾಶ್ರಮಭುವಃ  
ಸುಸಂವೃತ್ತಾ ಪುಷ್ಣಾತ್ಯವಿತಥಗತಿಃ ಸಾಧುಪದವೀ ||೩

ಬಿಳಿಗಿರಿಯ ಹಿಮವಿಳಿದು ಧರೆಯುಡಿಯ ಪೊರೆದಂತೆ
ಸೋದೆಯಂಗಳದಿಂದ ಅದ್ವೈತವಾಗಿ
ಒಳಿತಿಂಗೆ, ಬೆಳಕಿಂಗೆ, ಇಬ್ಬಗೆಯ ಅಳಿವಿಂಗೆ  
ಭವನ ಕೃಪೆ ಹರಿಯುತಿದೆ ಯತಿರೂಪದಿಮ್ || 


ಭವಾರಣ್ಯಕ್ರಾಂತೌ ನಿಹಿತಹೃದಯೋಽಪಿ ಶ್ರಮಸಹೋ      
ಮಹಾರಣ್ಯಾರಕ್ಷಃ ಸರಿದವನದಕ್ಷಃ ಸ್ವಯಮಭೂತ್
ಮುಮುಕ್ಷುಸ್ಸನ್ನನ್ಯಾನ್ ವ್ಯಸನದಹನಾತ್ತಾರಣಪರಃ
ಸ ನಃ ಪಾಯಾನ್ನಿತ್ಯಂ ಮೃದುಹಸಿತಗಂಗಾಧರಯತಿಃ ||೪

ಭವದ ಕೇಡಿನ ಕಾಡ ತಾ ಮೀರ ಹೊರಟರೂ
ಸಿರಿ ಕಾನು, ತಿಳಿ ನೀರ ರಕ್ಷೆ ಮರೆಯದವ 
ಬಿಡುಗಡೆಗೆ ಹಂಬಲಿಸುವೆಲ್ಲರನು ಬಿಡಿಸುವವ
ತಿಳಿನಗೆಯ ಯತಿದೇವ ಕಾಯಲೆಮ್ಮ |


ಶಿವಾಕಾರೇ ಗ್ರಾಮೇ ವಿಮಲರುಚಿರಃ ಸೋಮನಿಲಯಃ
ಸಿತೇ ವೈಶಾಖೇಸ್ಮಿನ್ ವಿಧಿವದಭಿಷಿಕ್ತೋ ವಿಲಸತಿ |
ಯತೇಃ ಪುಣ್ಯಾಸ್ಥಿತ್ಯಾ ದ್ವಿಜಪಠಿತವೇದೈಶ್ಚ ಮುದಿತಃ
ಸ ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ ||೫

ಶುಕ್ಲವೈಶಾಖದಲಿ ಶಿವಕಾರನೂರಿನಲಿ
ಶಿವಶಿವೆಯರೊಗ್ಗೂಡಿ ಗುಡಿಯಾಯಿತೋ!
ಯತಿಶಿವಂಕರನಿಂದ, ವೇದಮಂತ್ರಗಳಿಂದ
ತಂಪಾಗಿ ಗಿರಿಯೊಡೆಯ ಕಾಯಲೆಮ್ಮ |   





Tuesday, May 16, 2017

ಜಡದ ಗುಡಿಯಲ್ಲವದು ಜೀವ ನೆಲೆಯೋ

ಶಿವಾಲಯದ ಮೇಲಿನಿಂದ ಸಿಂಹಾವಲೋಕನ

ಅದು ಸುಮಾರು ಇಪ್ಪತ್ತನೇ ಶತಮಾನದ ನಾಲ್ಕು ಐದನೆಯ ದಶಕ ಇದ್ದಿರಬಹುದು, ಅಂದರೆ ಕ್ರಿ.ಶ. ೧೯೫೦ ದಶಕದ ಸಮಯ. ಆ ಹೊತ್ತಿಗೆ ಶೇವಕಾರ (ಗ್ರಾಮ್ಯದ ಸೊಗಡಿನಲ್ಲಿ ಶಮ್ಕಾರು, ಶಂವ್ಕಾರು) ಎಂಬ ಅರಣ್ಯಪ್ರಧಾನವಾದ ಊರಲ್ಲಿ, ಗಾಢವಾದ ಬೆಟ್ಟಗಳಲ್ಲಿ ಶಿವರಾಮ ಭಟ್ಟ ಎಂಬ ಸನಾತನಿ ಗೃಹಸ್ಥರಿಗೆ (ನನ್ನಜ್ಜ) ಭಗ್ನಸ್ಥಿತಿಯಲ್ಲಿದ್ದ ಶಿವಲಿಂಗವೊಂದು ಅಕಸ್ಮಾತ್ತಾಗಿ ಸಿಗುತ್ತದೆ. ಪಾಣಿಪೀಠವಿಲ್ಲದೆ ನೆಲದ ಮೇಲೆ ಮಲಗಿದ್ದ, ಪ್ರಾಕಾರವಿಲ್ಲದ, ಪೂಜೆಯಿಲ್ಲದೆ ಶತಮಾನವೇ ಗತಿಸಿರಬಹುದಾದ ಆ ಶಿವಲಿಂಗವನ್ನವರು ತಮಗೆ ತಿಳಿದ ರೀತಿಯಲ್ಲಿ ಎಬ್ಬಿಸಿ ನಿಲ್ಲಿಸುತ್ತಾರೆ. ಆ ಶಿವನಿಗೊಂದು ದೇವಾಲಯ ನಿರ್ಮಿಸಬೇಕು ಎಂಬ ಸಂಕಲ್ಪವೊಂದು ಅವರ ಚಿತ್ತದಲ್ಲಿ ಅದಾಗಲೇ ರೂಪುತಳೆಯುತ್ತದೆ. ಆದರೆ ಅಂದಿಗೆ ಇದ್ದ ಊರಿನ ಪರಿಸ್ಥಿತಿಯಲ್ಲಿ, ಆರ್ಥಿಕ ತುರ್ತಿನ ದಿನಗಳಲ್ಲಿ ಶಿವಾಲಯದ ಮಾತಿರಲಿ - ಬದುಕುವುದೂ ದುಸ್ತರವಾಗಿದ್ದುದು ವಾಸ್ತವ. ಹಾಗಾಗಿ ಪರ್ವದಿನಗಳಲ್ಲಿ ಮಾತ್ರ ಪೂಜೆಯನ್ನು ತಮ್ಮ ಕೈಲಾದ ಮಟ್ಟಿಗೆ ನಡೆಸಿಕೊಂಡು ಬಂದ ಶಿವರಾಮ ಭಟ್ಟರು ೧೯೬೫ ರಲ್ಲಿ ಕಾಲವಾಗುತ್ತಾರೆ. ಶಿವ ಸೂರಿಲ್ಲದೆ, ನೀರಿಲ್ಲದೆ, ಅಲ್ಲಿಯೇ ಬೆಟ್ಟದಲ್ಲಿ ಉಳಿಯುತ್ತಾನೆ. ಮುಂದೆ ಶಿವರಾಮಭಟ್ಟರ ಮಕ್ಕಳು ಮತ್ತು ಊರವರು ಆ ಶಿವನಿಗೆ ಆಗೀಗ ಪರ್ವಕಾಲದಲ್ಲೊಂದು, ಹಬ್ಬದಲ್ಲಿನ್ನೊಂದು ಎಂಬಂತೆ ಪೂಜೆ ನಡೆಸಿಕೊಂಡು ಬರುತ್ತಾರೆ. ಕಾಲ ಕಳೆದಂತೆ ಕಾಡು ಕ್ರಮೇಣ ಕರಗುತ್ತದೆ, ಬೆಟ್ಟದಲ್ಲಿದ್ದ ಶಿವ ಹಾದಿ ಬದಿಯ ದಿಬ್ಬದ ಮೇಲೆ ಒಂಟಿಯಾಗಿ ನಿಂತವನಂತೆ ಕಾಣತೊಡಗುತ್ತಾನೆ. ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದಲ್ಲಿ ಅವನಿಗೊಂದು ತಗಡಿನ ಚಪ್ಪರ ಸಿದ್ಧವಾಗುತ್ತದೆ. ಇಪ್ಪತ್ತೊಂದನೆಯ ಶತಮಾನಕ್ಕೆ ದೇಶ ಕಾಲಿಡುತ್ತಿದ್ದಂತೆ ಆರ್ಥಿಕವಾಗಿ, ವೈಚಾರಿಕವಾಗಿ ಊರಿನ ಬಹುಪಾಲು ಜನರು ಸಮರ್ಥರಾಗುತ್ತಾರೆ. ಶಿವನಿಗೊಂದು ಶಿವಾಲಯ ನಿರ್ಮಾಣವಾಗಬೇಕು ಅಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ. ಶಿವರಾಮ ಭಟ್ಟರ ಚಿತ್ತದಲ್ಲಿ ಹುಟ್ಟಿದ್ದಿರಬಹುದಾದ ಸಣ್ಣದೊಂದು ಸಂಕಲ್ಪವೇ ಊರಿನ ಎಲ್ಲರ ಎದೆಯಲ್ಲಿ ಹೊತ್ತಿಕೊಂಡು ಅದು ಸಾಕಾರವಾಗುವುದಕ್ಕೆ ಹೆಚ್ಚೂಕಡಿಮೆ ಅರವತ್ತೈದು ವರ್ಷ ಸಮಯ ತೆಗೆದುಕೊಳ್ಳುತ್ತದೆ! ಸಂಕಲ್ಪವೊಂದು ವಾಸ್ತವಕ್ಕೆ ಇಳಿಯಲು ಅರ್ಧ ಶತಮಾನ ತೆಗೆದುಕೊಂಡಿದ್ದರೂ ಶಿವಾಲಯ ಮಾತ್ರ ಶಾಸ್ತ್ರಶುದ್ಧವಾಗಿ ತಲೆ ಎತ್ತಿ ನಿಲ್ಲುತ್ತದೆ. ಇದೇ ಮೇ ತಿಂಗಳ (೨೦೧೭) ಆದಿಯಲ್ಲಿ, ಶಂಕರ ಪಂಚಮಿಯ ಮರುದಿನವೇ ಶಂಕರ ಪರಂಪರೆಯ ಅನುಪಮ ಉದಾಹರಣೆಯಂತಿರುವ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಶ್ರೀ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಧ್ಯದಲ್ಲಿ ದೇವಾಲಯದ, ಲಿಂಗದ, ಪುನಃಸ್ಥಾಪನೆಯಾಗುತ್ತದೆ. ಅಲ್ಲಿಗೆ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದುಬಂದ ವೃತ್ತವೊಂದರ ಬರವಣಿಗೆ ಪೂರ್ಣವಾದಂಥ ಭಾವ.

                                                          ******** ***** *******

ನಮ್ಮ ನಡುವಿನ ದೇವಾಲಯಗಳನ್ನು ನೋಡುವಾಗ ಸದಾ ನನಗನ್ನಿಸುವ ಒಂದು ಸಂಗತಿಯೆಂದರೆ, ಭಾರತದಲ್ಲಿ ಸನಾತನಧರ್ಮದ ಪರಿಧಿಯಲ್ಲಿನ ದೇವತಾ ಅನ್ನುವುದೇನಿದೆ, ಅದು ಮಾನವ ತಲೆಮಾರುಗಳೊಂದಿಗೆ ತಾನೂ ಒಂದು ಸಜೀವ ಸಂಗತಿಯಂತೆ ಹರಿದುಕೊಂಡು ಸಾಗಿದೆ ಅನ್ನುವುದು. ಗಾಡ್ ಅನ್ನುವ ಏಕದೇವೋಪಾಸಕರ ಕಲ್ಪನೆಗೂ ನಮ್ಮಲ್ಲಿಯ ದೇವತಾ ಅನ್ನುವ ಪರಿಕಲ್ಪನೆಗೂ ಮೂಲಭೂತ ವ್ಯತ್ಯಾಸವಿದೆ. ಗಾಡ್ ಎಂಬ ಪರಿಕಲ್ಪನೆಯನ್ನು ದೇವತಾ ಎಂಬ ಚಿಂತನೆಯೊಂದಿಗೆ ಇಡುತ್ತ ಹೋದಷ್ಟೂ ನಮ್ಮ ನೆಲದ ಅರಿವು ಗೊಂದಲಮಯವಾಗುತ್ತದೆ ಅನ್ನಿಸುತ್ತದೆ. ನಮ್ಮಲ್ಲಿ ಆ ಬಗೆಯ ಗಾಡ್ ಇಲ್ಲ. ಇಲ್ಲಿರುವುದೆಲ್ಲ ದೇವತಾ ಎಂಬ ವಿವಿಧ ಪ್ರಾಕೃತಿಕ ಶಕ್ತಿಗಳು. ಈ ದೇವತಾ ಅನ್ನುವುದು ಮಾನವನ ಮಿತಿಗೆ ಎಂದೆಂದಿಗೂ ನಿಲುಕದ ಪರಾಸಂಗತಿಯಲ್ಲ. ನಮ್ಮ ಪುರಾಣದ ಕಥೆಗಳು ಮತ್ತು ಕಾವ್ಯದ ಕಥೆಗಳಲ್ಲಿ ಮಾನವ ರಾಜರುಗಳು ದೇವತೆಗಳೊಂದಿಗೆ ಸೆಣಸಿದ್ದು, ಅವರ ಯುದ್ಧಗಳಲ್ಲಿ ಸಹಕರಿಸಿದ್ದು ಕಥೆಯ ರೂಪದಲ್ಲಿ ಧಾರಾಳವಾಗಿ ಸಿಗುತ್ತವೆ. ಈ ದೇವತೆಗಳ ಎತ್ತರಕ್ಕೆ ಏರಿದ ಮಾನವರ ಕಥೆಗಳೂ ನಮ್ಮಲ್ಲಿವೆ. ದೇವತೆಗಳು ನಿಗ್ರಹಾನುಗ್ರಹದ ಶಕ್ತಿಯನ್ನು ಹೊಂದಿದಂತೆಯೇ ನಮ್ಮಲ್ಲಿಯ ಹ್ಯೂಮನ್ ಬೀಯಿಂಗ್ಸ್ ಕೂಡ  ಕೆಲವೊಮ್ಮೆ ಆ ಶಕ್ತಿಯನ್ನು ಹೊಂದಿದ್ದಿದೆ. ಯಜ್ಞ ಯಾಗಾದಿಗಳೆಲ್ಲ ಮಾನವ ಮತ್ತು ದೇವತೆಗಳ ನಡುವಿನ ಒಡಂಬಡಿಕೆಗಳು. ವಿಕಾರವಿರದ ಲೋಕದಲ್ಲಿ ಬದುಕುವ ದೇವತೆಗಳಿಗೆ ಮೊಸರು, ಧಾನ್ಯಗಳು, ತುಪ್ಪ, ಇವೆಲ್ಲ ಅಲಭ್ಯ. ಅದಕ್ಕೇ ಅವುಗಳನ್ನು ಭೂಮಿಯ ಜೀವಗಳಾದ ನಾವು ಅಗ್ನಿಯ ಮೂಲಕ ಕಳಿಸಿಕೊಡುತ್ತೇವೆ. ಅದಕ್ಕೆ ಪ್ರತಿಯಾಗಿ ಮಳೆಯನ್ನೂ, ಪೋಷಕ ಶಕ್ತಿಯನ್ನೂ ದೇವತೆಗಳು ಮಾನವರಿಗೆ ಕೊಡಮಾಡುತ್ತಾರೆ ಎಂಬ ಪ್ರಕಲ್ಪನೆ ನಮ್ಮದು. ಹೆಚ್ಚೇಕೆ, ದೇವತೆಗಳನ್ನೇ ಶಪಿಸಿದ ಮಾನವರ ಉದಾಹರಣೆಗಳು ನಮ್ಮಲ್ಲಿವೆ. ವಿಷ್ಣುವಿನ ಹತ್ತು ಅವತಾರಗಳಿಗೂ ಭೂಮಿಯ ಜೀವವಾದ ಭೃಗು ಮಹರ್ಷಿಯ  ಶಾಪವೇ ಕಾರಣ ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಮಹಾಭಾರತದ ಶ್ರೀ ಕೃಷ್ಣ ಕೂಡ ಗಾಂಧಾರಿಯೆಂಬೋ ಹೆಣ್ಮಗಳು ಕೊಡಮಾಡಿದ ಶಾಪವನ್ನು ಶಿರಸಾ ಅಂಗೀಕರಿಸಿ ಅನುಭವಿಸುತ್ತಾನೆ. ಹಾಗಿದ್ದೂ ನಮಗ್ಯಾರಿಗೂ ನಮ್ಮ ದೇವತೆಗಳ ಶಕ್ತಿಯ ಮೇಲೆ ಅನುಮಾನಗಳಿಲ್ಲ, ಅವು ಅಂಡರ್ ಪವರ್ಡ್ ಅನ್ನಿಸಿಲ್ಲ. ಅಂದರೆ, ಸನಾತನ ಧರ್ಮದಲ್ಲಿ ಮಾನವ ಮತ್ತು ದೇವತೆಗಳ ಸಂಬಂಧಕ್ಕೆ ತೇಜಸ್ಸು ಆಧಾರವೇ ಹೊರತು ತಾನು ದೇವ ನೀನು ಮಾನವನೆಂಬ ತಾರತಮ್ಯವಲ್ಲ. ಹಾಗಾಗಿ ಬೇರೆ ಸಂಸ್ಕೃತಿಗಳ ಗಾಡ್ ಎಂಬ ಪರಿಕಲ್ಪನೆಯೊಂದಿಗೆ ನಮ್ಮ ದೇವತೆಯ ತುಲನೆ ಸರಿಯಾದುದೇ ಅಲ್ಲ. ನಮ್ಮಲ್ಲಿ ಗಾಡ್ ಇಲ್ಲ. ಹಾಗಿದ್ದೂ ನಮಗ್ಯಾರಿಗೂ ನಮ್ಮ ದೇವತೆಗಳ ಶಕ್ತಿಯ ಮೇಲೆ ಅನುಮಾನಗಳಿಲ್ಲ, ಅವು ಅಂಡರ್ ಪವರ್ಡ್ ಅನ್ನಿಸಿಲ್ಲ.


ಶಿವಾಲಯದ ಒಂದು ನೋಟ


ಇದೆಲ್ಲವನ್ನು ನಾನು ಕಥಿಸುತ್ತಿರುವುದಕ್ಕೆ ಕಾರಣವಿದೆ. ಈಗ ಶಿವಾಕಾರ ಗ್ರಾಮದಲ್ಲಿ ನೆಲೆಯಾದ ಶಿವನಿದ್ದಾನಲ್ಲ, ಆತ ಹೊಸದಾಗೇನೂ ಪ್ರತಿಷ್ಠೆಯಾದವನಲ್ಲ. ತುಂಬ ಹಿಂದಿನಿಂದಲೂ ಇಲ್ಲಿಯೇ ಇದ್ದವ ಅಂತ ಕಾಲಜ್ಞಾನದ ಶಾಸ್ತ್ರಗಳು ಅಭಿಪ್ರಾಯಪಟ್ಟಿವೆ. ಹಿಂದೊಮ್ಮೆ (ಎಷ್ಟು ಹಿಂದೆ ಎಂಬುದಕ್ಕೆ ಆಧಾರಗಳಿಲ್ಲ) ಈ ಶಿವ ಇಲ್ಲಿದ್ದು ನಿತ್ಯ ಪೂಜೆಗೊಂಡವನಾಗಿದ್ದ. ಕಾಲನಾಘಾತಕ್ಕೆ ಸಿಕ್ಕು ಆ ಶಿವಾಲಯ ನಾಶವಾಗಲಾಗಿ ಎಲ್ಲರ ನೆನಪಿನಿಂದ ಮರೆತು ಹೋಗಿದ್ದ. ಅದೊಂದು ಅರೆಬರೆ ಲಿಂಗ ಮತ್ತು ಅವನಿಗಾಗಿ ಇದ್ದ ಸಣ್ಣದೊಂದು ಕಲ್ಯಾಣಿಯನ್ನು ಬಿಟ್ಟರೆ ಉಳಿದೆಲ್ಲ ಕಾಲದ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು.

ಈ ಕಾಲಜ್ಞಾನಿಗಳ ಕಥನಕ್ಕೆ ಇಂಬುಕೊಡುವಂಥ ಇನ್ನೊಂದು ಜನಪದ ಕಥೆ ನನ್ನ ಊರಿನಲ್ಲಿ ಜಾರಿಯಲ್ಲಿದೆ. ಬಹಳ ಹಿಂದೆ ನನ್ನೂರು ಅರವತ್ತು ಮನೆಗಳ ಊರಾಗಿತ್ತಂತೆ. ನೂರಾರು ವರ್ಷಗಳ ಹಿಂದೆ ಅರವತ್ತು ಮನೆಗಳಿದ್ದುವೆಂದರೆ ದೊಡ್ಡ ಅಚ್ಚರಿ! ಯಾಕೆಂದರೆ ಇವತ್ತಿಗೂ ನನ್ನೂರಲ್ಲಿ ಅರವತ್ತು ಮನೆಗಳಿಲ್ಲ. ಇರಲಿ, ಅಂಥಾ ಊರಿಗೆ ಯತಿಯೊಬ್ಬ ಬರುತ್ತಾನೆ. ಆತನೋ ದೇಶಿಕ, ಪರ್ಯಟಕ, ಲೋಕ ಸಂಚಾರಿ, ಹೋದಲ್ಲೇ ಆಹಾರ, ನಿದ್ರೆ ಮತ್ತೆ ಯಾತ್ರೆ- ಈ ಬಗೆಯ ಬದುಕಿನವ. ’ಭವತಿ! ಭಿಕ್ಷಾಂ ದೇಹಿ’ ಅಂತ ಆತ ಗೃಹಸ್ಥರ ಮನೆಯೆದುರಿಗೆ ನಿಂತು ಯಾಚಿಸಿದಾಗ ಎಷ್ಟು ಅನ್ನ ಅವನ ಜೋಳಿಗೆಗೆ ಬಿತ್ತೋ ಅದುವೇ ಅವನ ಅಶನ. ಅಂಥಾ ಯತಿ ಒಮ್ಮೆ ಈ ಅರವತ್ತು ಮನೆಗಳ ಕೇರಿಯಲ್ಲಿ ಬುಡದಿಂದ ತುದಿಯವರೆಗೆ ಹೋಗಿ ಯಾಚಿಸಿದಾಗಲೂ ಒಂದೊಪ್ಪೊತ್ತಿಗಾಗುವಷ್ಟು ತುತ್ತು ಅವನ ಜೋಳಿಗೆ ಬೀಳದಿರಲಾಗಿ ಆತ ಹಸಿವೆಯಿಂದ ತೊಳಲುತ್ತಾನೆ. ಯತಿ, ಗುರು ಹಾಗೂ ತಂದೆ ತಾಯಿಯರು ಬಾಯ್ಬಿಟ್ಟು ಶಪಿಸದೆಯೂ ಅವರ ಮನಸಿಗೆ ನೋವುಂಟು ಮಾಡಿದಲ್ಲಿ ಅದುವೇ ಶಾಪವಾಗಿ ಪರಿಣಮಿಸುತ್ತದೆ ಅನ್ನುವ ನಂಬುಗೆಯಿದೆ. ಅದೇ ಪ್ರಕಾರ, ಈ ಯತಿಯ ಮನಸಿಗಾದ ನೋವು ಅಲ್ಲಿನ ಮನೆಗಳಿಗೆ ಶಾಪವಾಗಿ ಪರಿಣಮಿಸಿತಂತೆ. ಅದರ ಪರಿಣಾಮವೆಂಬಂತೆ ದಡಾರ ಎಂಬ ಮಹಾಮಾರಿ ರೋಗವೊಂದು ಅಡರಿ ಊರಿಗೂರೇ ಇನ್ನಿಲ್ಲದಂತೆ ನಾಶವಾಯಿತಂತೆ. ಆಗೆಲ್ಲ ಅಂಥ ರೋಗ ಬಂದರೆ ಸಾವು ಮಾತ್ರವೇ ಪರಿಹಾರವೆಂಬ ಪರಿಸ್ಥಿತಿಯಿತ್ತು, ಊರಿಗೂರು ನಾಶವಾಗುತ್ತಿತ್ತು. ಬಹುಶಃ ಆ ಊರಲ್ಲಿದ್ದ ಉಮಾಮಹೇಶ್ವರ ಅಂದಿನಿಂದ ಪೂಜೆಯಿಲ್ಲದವನಾದ. ಮನೆಗಳಿದ್ದ ಜಾಗದಲ್ಲಿ  ಕಾಡು ಬೆಳೆಯಿತು. ಶಿವಾಲಯ ಎಲ್ಲೋ ಮಣ್ಣಿನಡಿಗೆ ನಾಶವಾಯ್ತು, ಕಲ್ಯಾಣಿ ಅರೆ ಬರೆ ಮುಚ್ಚಿಕೊಂಡಿತು. ಊರಿನಲ್ಲಿದ್ದ ಶಿವ, ಕಾಡುಪಾಲಾದ. (ಈ ಕಥೆಯ ಮುಂದುವರಿದ ಭಾಗವಾಗಿ ಆ ಸನ್ಯಾಸಿಯು ದೇಹತ್ಯಾಗ ಮಾಡಿದನೆಂದು ನಂಬಲಾದ ಮಿಸ್ಟೀರಿಯಸ್ ಅನ್ನಬಹುದಾದ ತಾಣವೊಂದು ನಮ್ಮೂರಲ್ಲಿದೆ. ನದಿಯ ಅಂಚಿನಲ್ಲಿರುವ ಆ ಜಾಗಕ್ಕೆ ’ಸನ್ಯಾಸಿ ಪಾರು’ ಅಂತಲೇ ಹೆಸರು. ತೊಂಭತ್ತರ ದಶಕದಲ್ಲಿ ಆ ಜಾಗದಲ್ಲೇ ಸೇತುವೆ ಕಟ್ಟುವ ಸಂದರ್ಭದಲ್ಲಿ ಅರ್ಧ ಕಟ್ಟಿದ್ದ ಸೇತುವೆ ಮುರಿದು ಬಿದ್ದು, ಕೆಲವು ಸಾವುಗಳಾಗಿ.... ಕಥೆ ತುಂಬಾ ಇದೆ. )  


ಹಳೆಯ ಲಿಂಗಕ್ಕೆ ಅಂತಿಮ ಪೂಜೆ ಸಂದ ಕ್ಷಣ

ಆಮೇಲೆಷ್ಟು ಕಾಲ ಕಳೆಯಿತೋ, ಅಂತೂ ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ಈ ಊರಿಗೆ ಬಂದು ನೆಲೆಯಾದರು. ಮನೆಗಳನ್ನು, ಗದ್ದೆಗಳನ್ನು ನಿರ್ಮಿಸಿಕೊಂಡು, ಅನ್ನ ಬೆಳೆದು ಉಣ್ಣತೊಡಗಿದರು. ಬೇರೆಯದೇ ಮನೆಗಳು, ಹೊಸ ಊರು, ಹೊಸ ಬದುಕು... ಹಳೆಯ ಮನೆಗಳಿದ್ದ ಜಾಗದಲ್ಲೆಲ್ಲ ಬರಿಯ ಬೆಟ್ಟ. ಹಳೆಯ ಸಂಗತಿಗಳೆಲ್ಲ ಬರಿಯ ಕಥೆಗಳಲ್ಲಿ ಉಳಿದವು. ಆ ಹೊತ್ತಿಗೆ ಊರಿನಲ್ಲಿದ್ದ ಶಿವನೆಂಬಾತ ಮರೆತು ಹೋಗಿದ್ದ. ಊರಲ್ಲೊಂದು ಶಿವಾಲಯವಿತ್ತು ಎಂಬುದು ಅರಿವೇ ಇಲ್ಲದಂತೆ ಕಾಲ ಉರುಳಿತು. ಭಗ್ನಗೊಂಡಿದ್ದ ಆ ಪುರಾತನ ಶಿವಲಿಂಗ ಮತ್ತೆ ಮಾನವ ಸಂಪರ್ಕಕ್ಕೆ ಬರುವಾಗ ಇಪ್ಪತ್ತನೆಯ ಶತಮಾನದ ಅರ್ಧಕ್ಕರ್ಧ ಭಾಗ ಕಳೆದಿತ್ತು. ಈಗ್ಗೆ ಕೆಲವು ವರ್ಷಗಳ ಹಿಂದೆ ಶಿವಪ್ರಜ್ಞೆ ಊರ ಜನರಿಗೆಲ್ಲ ಜಾಗೃತವಾಗಿ ದೇವಾಲಯ ಕಟ್ಟಲೆಂದು ದೈವಜ್ಞರಲ್ಲಿ ಹೊರಟಾಗ ಎದುರಾದ ಮೊದಲ ಮಾತು – ಅಪೂರ್ಣ ಭಿಕ್ಷೆಯಿಂದಾದ ಗುರುಕ್ಷೋಭೆ ನಿಮ್ಮೂರಿಗೆ ಇದೆ ಎಂಬುದು. ಮೊನ್ನೆ ಮೊನ್ನೆ ದೈವಜ್ಞರಾಡಿದ ಗುರುಕ್ಷೋಭೆಯೆಂಬ ಮಾತೂ, ನನ್ನಜ್ಜಿಯ ತಲೆಮಾರಿನವರು ಹೇಳುತ್ತಿದ್ದ ಕಥೆಯಲ್ಲಿ ಬರುತ್ತಿದ್ದ ಯತಿಯ ಪಾತ್ರವೂ ಒಂದಕ್ಕೊಂದು ತಾಳೆಯಾಗಿ – ಎಲಾ ಕಾಲವೆ! ಅಂತ ನನ್ನ ತಲೆಮಾರಿನವರಿಗೆ ಅನ್ನಿಸಿದ್ದುಂಟು. ಆ ಯತಿಯ ಒಡಲಿನ ಅಗ್ನಿಯೇ ಊರನ್ನು ಸುಟ್ಟಿದ್ದು ನಿಜವಿರಬಹುದೆಂಬ ಭಾವ ಬಂದ ಕ್ಷಣ ಅದು. ಅದರ ಪರಿಹಾರಕ್ಕಾಗಿ ಶಾಂಕರ ಯತಿಯನ್ನೇ ಮತ್ತೆ ಕರೆಯಿಸಿ (ಸ್ವರ್ಣವಲ್ಲೀ ಪೀಠಾಧೀಶ್ವರರು) ಊರವರೆಲ್ಲ ಸೇರಿ ಪಾದಪೂಜೆಯನ್ನೂ ಗುರುಭಿಕ್ಷೆಯನ್ನೂ ಮಾಡಿ ದೇವಾಲಯದ ಕೈಂಕರ್ಯಕ್ಕೆ ತೊಡಗಲಾಯಿತು.
ಸ್ವರ್ಣವಲ್ಲೀ ಪೀಠಾಧೀಶರ ಅಮೃತ ಹಸ್ತಗಳಿಂದ ದೇವಾಲಯದ ಕಲಶಾರ್ಚನೆ.


ಒಂದಾನೊಂದು ಕಾಲದಲ್ಲಿ ಆ ದೇವಾಲಯ ಇದ್ದಿರಬಹುದಾದ ಸ್ಥಾನವನ್ನು ಗುರುತಿಸುವಿಕೆ, ಲಿಂಗದ ಅಳತೆಯ ನಿರ್ಧರಣ, ದೇವಾಲಯದ ಆಯ ಆಕಾರದ ಯೋಜನೆ, ಲಿಂಗ ನಿರ್ಮಾಣಕ್ಕೆ ಸ್ಥಪತಿಯ ನಿಯೋಜನೆ, ಸ್ಥಳ ಶುದ್ಧಿ, ಕಲ್ಯಾಣಿಯ ಪುನರುಜ್ಜೀವನ.... ಒಂದೇ ಎರಡೇ! ಎಲ್ಲವನ್ನೂ ಕ್ರಮವಾಗಿ ಪೂರೈಸಿ ಇವತ್ತು ಆಗಮೋಕ್ತ ಪ್ರಕಾರವಾಗಿ ಶಿವಾಲಯ ನಮ್ಮೆದುರಿಗಿದೆ. ಸುತ್ತ ಹತ್ತೂರಿನಲ್ಲಿ ಈ ಅಳತೆಯ ಬೃಹತ್ ಲಿಂಗ ಇರುವುದು ಇವತ್ತಿಗೆ ಶಿವಾಕಾರ ಗ್ರಾಮದಲ್ಲಿ ಮಾತ್ರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿಯನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿರುವ ಅತಿದೊಡ್ಡ ಶಿವಲಿಂಗ ಇದೇ ಎನ್ನುವ ಮಾತೂ ಕೇಳಿಬಂದಿದೆ. ಸರಿಸುಮಾರು ಐದು ಕ್ವಿಂಟಾಲ್ ತಾಮ್ರದ ತಗಡಿನ ಮೇಲ್ಛಾವಣಿ ಹೊದಿಕೆಯುಳ್ಳ ಅಪರೂಪದ ದೇವಾಲಯ ಇದು. ಬುಡದಿಂದ ತುದಿಯವರೆಗೆ ನಾಲ್ಕೂವರೆ ಅಡಿ ಎತ್ತರದ, ಸರಿ ಸುಮಾರು ೩೪ ಕ್ವಿಂಟಾಲ್ ತೂಕದ, ನಾಲ್ಕೂವರೆ ಅಡಿ ಚತುರ್ವರ್ಗದ ಪಾಣಿಪೀಠವುಳ್ಳ ಮಹಲ್ಲಿಂಗವನ್ನು ತನ್ನ ಗರ್ಭಗುಡಿಯಲ್ಲಿ ಆಗಮೋಕ್ತವಾಗಿ ಒಳಗೊಂಡಿದೆ ಈ ಶಿವಾಲಯ.

***** ****** *******

ಈಗ ಮತ್ತೆ ನಮ್ಮ ಸನಾತನ ಪರಂಪರೆಯ ದೇವತಾ ಪರಿಕಲ್ಪನೆಗೆ ಬರುವುದಾದರೆ ನನ್ನೂರಿನ ಶಿವ ಇನ್ನೊಂದು ಅಂಥ ದೇವತೆಯ ಉದಾಹರಣೆಯಾಗಿ ನಿಲ್ಲುತ್ತಾನೆ. ಆ ದೇವತೆಗೆ ತನ್ನದೇ ಆದ ಇರವಿದೆ, ಪ್ರಭಾವಲಯ ಇದೆ, ತನ್ನ ಇರವಿನ ಅರಿವಿದೆ, ಇಲ್ಲಿನ ಜನಗಳ ಜೊತೆಯಲ್ಲೇ ತಾನೊಂದಾಗಿ ಇದ್ದು ಪೂಜೆಗೊಳ್ಳುವ ಹಂಬಲವಿದೆ. ಭೂಮಿಯ ಹಿಡುವಳಿಯೊಂದಿಗೆ ನೆಲೆಯಾಗುವ ಮಾನವ ಕುಟುಂಬಗಳಲ್ಲಿ ತಲೆಮಾರುಗಳ ಕಲ್ಪನೆ ಮತ್ತು ತಲೆಮಾರುಗಳಿಂದ ಸಾಗಿಬರುವ ಆಚರಣೆಗಳೆಲ್ಲ ಇರುವಂತೆಯೇ ಊರಲ್ಲಿನ ದೇವತೆಗಳಿಗೂ ಒಂದು ಜೀವನ ಮತ್ತು ಪರಂಪರೆ ಇದೆ, ಕುಟುಂಬ ಇದೆ. ನೆಲೆನಿಂತ ಜನತೆಯೊಂದಿಗೆ ತಾನೂ ನೆಲೆನಿಂತು, ಅದೇ ಜನತೆ ಕಾಲದ ಘಾತಕ್ಕೆ ಸಿಕ್ಕು ಮಣ್ಣಾದಾಗ ತಾನೂ ನೆಲಕಚ್ಚಿ, ಆಮೇಲೆ ಕಾಲದ ಆಟದಲ್ಲಿ ಇನ್ನೊಂದು ಬೇರೆಯದೇ ಆದ ಜನಲೋಕ ಅದೇ ಮಣ್ಣಿನಲ್ಲಿ ನೆಲೆಯಾಗಿ ಸದೃಢವಾದಾಗ ಮತ್ತೆ ತನ್ನ ಉತ್ಥಾನಕ್ಕಾಗಿ ಎಲ್ಲರ ಮನಸಿನಲ್ಲಿ ಸಂಕಲ್ಪ ಹೊತ್ತಿಸಿ ತನಗೂ ಒಂದು ಮನೆ ಕಟ್ಟಿಸಿಕೊಳ್ಳುತ್ತದಲ್ಲ! ಸತಾತನ ಮನಸುಗಳಲ್ಲಿ ದೇವತೆ ಎಂಬ ಪರಿಕಲ್ಪನೆ ಎಷ್ಟೊಂದು ಅನೂಚಾನ ನೋಡಿ. ಅದೊಂದು ಬಗೆಯಲ್ಲಿ ಗಿಡವೊಂದರ ಬೀಜವಿದ್ದಂತೆ. ಗುಡುಗಿನ ಸದ್ದು ಕೇಳಿಸಿ, ಮಳೆ ಬಿದ್ದು, ಭೂಮಿಯೆಂಬೋ ಮಹಾಯೋನಿ ಪಕ್ವವಾಗುವುದನ್ನೇ ಕಾಯುತ್ತಿದ್ದು ತಾನು ಚಿಗುರೊಡೆಯುತ್ತದೆ. ಗಿಡವಾಗಿ, ಹೂ ಬಿಟ್ಟು ಕಾಯಾಗಿ, ಹಣ್ಣಾಗಿ ಮಾಗಿ, ಮತ್ತೆ ಬೀಜವಾಗಿ ಇನ್ನೊಂದು ಮಳೆ, ಇನ್ನೊಂದು ತೇವದ ನೆಲಕ್ಕಾಗಿ ಕಾಯಲು ಶುರು ಮಾಡಿಕೊಳ್ಳುತ್ತದೆ. ನಿರಂತರ ಹುಟ್ಟಿಗಾಗಿ ತವಿಸುವ ಆ ಬೀಜಕ್ಕೆ ಸಾವೆಲ್ಲಿ? ಹಾಗೆಯೇ ದೇವತೆ ಎಂಬ ಪರಿಕಲ್ಪನೆಯೂ ಸಹ. ಅದಕ್ಕೆ ಆಧಾರವೆಂಬಂತೆ  ಕಾಲಜ್ಞಾನಶಾಸ್ತ್ರ ಮತ್ತು ಆಗಮ ಶಾಸ್ತ್ರಗಳಿವೆ. ಇವನ್ನೆಲ್ಲ ಸಮಗ್ರವಾಗಿ ನೋಡುವಾಗ ಭಾರತದ ಮಣ್ಣಲ್ಲಿ ಅರಳಿದ ಸನಾತದ ಜೀವನ ಪದ್ಧತಿಯ ಹರಹಿನ ಬಗ್ಗೆ ಮನಸಲ್ಲಿ ಬೆರಗು ತಂತಾನೇ ಮೂಡುತ್ತದೆ. 
ಹಳೆಯ ಲಿಂಗವನ್ನು ಕಿತ್ತು ಅಂತಿಮ ಸ್ನಾನ ಮಾಡಿಸಿದ ಕ್ಷಣ.


ಹಳೆಯದಾದ ಭಗ್ನ ಲಿಂಗವನ್ನು ಬದಲಿಸಿ ಹೊಸ ಲಿಂಗದ ಪ್ರತಿಷ್ಠಾಪನೆಯ ಪೂರ್ವದಲ್ಲಿ ಆ ಹಳೆಯ ಲಿಂಗಕ್ಕೆ ಕೊನೆಯ ಸಂಸ್ಕಾರಗಳನ್ನು ಮಾಡಲಾಗುತ್ತದೆ. ನೂರಾರು ವರ್ಷಗಳ ಪೂಜೆಗೊಂಡಿದ್ದಿರಬಹುದಾದ ಆ ಲಿಂಗದಲ್ಲಿನ ಶಕ್ತಿಯನ್ನೆಲ್ಲ ಹೊಸ ಲಿಂಗಕ್ಕೆ ಆವಾಹನೆ ಮಾಡಲಾಗುತ್ತದೆ. ಅಷ್ಟಾದಮೇಲೆ ಅದು ಬರಿಯ ಕಲ್ಲು. ಬಿಳಿಯ ಬಟ್ಟೆ ಹೊದೆಸಿ ಮಲಗಿಸಿ, ಅಂತಿಮ ಸ್ನಾನ ಮಾಡಿಸಿ, ಸದಾ ನೀರು ಹರಿಯುವ ಜಾಗದಲ್ಲಿ ಜಲಸಮಾಧಿ ಮಾಡಲಾಗುತ್ತದೆ. ಹೀಗೆ ಜಲಸಮಾಧಿಯಾದ ಲಿಂಗ ನಾಳೆ ಯಾರಿಗಾದರೂ ನೀರಲ್ಲಿ ಸಿಕ್ಕರೂ ಅದಕ್ಕೆ ಮತ್ತೆ ಗುಡಿಕಟ್ಟಿಸುವ ಪ್ರಶ್ನೆಯೇ ಇಲ್ಲ. ಜಲ ಸಮಾಧಿಯೆಂದರೆ ಅದು ಕೊನೆ. ಹೀಗೆ ಮಾನವ ಸಮಾನವಾದ ಸಂಸ್ಕಾರಗಳನ್ನು ಒಂದು ಲಿಂಗಕ್ಕೂ ಮಾಡಲಾಗುತ್ತದೆ! ಇವನ್ನೆಲ್ಲ ನೋಡುವಾಗ ’ದೇವತಾ’ ಎಂಬುದನ್ನು ಸನಾತನ ಧರ್ಮವು ಅಳವಡಿಸಿಕೊಂಡ ಬಗೆಯ ಒಂದು ಝಲಕ್ ಸಿಕ್ಕೀತು. 


ಶೇವ್ಕಾರ ಊರಿನ ವಿಷಯದಲ್ಲಿ ಹೇಳುವುದಾದರೆ ದೇವಸ್ಥಾನ ಕಟ್ಟುವುದು ಎಂಬ ಪ್ರಕ್ರಿಯೆಯಲ್ಲಿ ಕಟ್ಟಲ್ಪಟ್ಟಿದ್ದು ದೇವಾಲಯ ಮಾತ್ರ ಅಲ್ಲ; ಬದಲಿಗೆ ದೂರವಾಗಿದ್ದ, ಮುರಿದಿದ್ದ ಊರಿನ ಮನಸುಗಳು, ಸಂಬಂಧಗಳು ಕಟ್ಟಲ್ಪಟ್ಟಿವೆ. ಊರಿನ ನೆಲದೊಂದಿಗೆ ಮಾಸುತ್ತಿದ್ದ ಬಂಧದ ಪುನರ್ನಿರ್ಮಾಣ ಸಹ ಹೌದು ಇದು. ಮಣ್ಣಿನಲ್ಲಿ ಒಟ್ಟೊಟ್ಟಿಗೆ ಆಟವಾಡಿ ಬಾಲ್ಯ ಕಳೆದಿದ್ದ ಊರಿನ ಎಷ್ಟೋ ಗಂಡ್ ಮಕ್ಕಳು, ಜೊತೆಯಾಗಿ ಐದು ಸೈದು ಕಲ್ಲಿನಾಟ ಆಡಿದ್ದ ಹೆಣ್ ಮಕ್ಕಳು ತಮ್ಮ ತಮ್ಮ ಬದುಕಿನ ಹರಿವಿಗೆ ಸಿಕ್ಕು ದೂರಾಗಿ ಒಬ್ಬರನ್ನೊಬ್ಬರು ಕಾಣದೆಯೂ ಬಹಳ ಕಾಲ ಸಂದಿತ್ತು. ಹಲವಾರು ಜನ ಮತ್ತೆ ದೇವಾಲಯದ ನೆಪದಲ್ಲಿ ಒಂದಾದರು. ಲಿಂಗದ ಪ್ರತಿಷ್ಠೆ ಮಾಡುವ ಸಂದರ್ಭದಲ್ಲಿ ಲಿಂಗದ ಅಡಿಯಲ್ಲಿ ಈ ಲೋಕದ ಅಮೂಲ್ಯ ವಸ್ತುಗಳನ್ನು ಹಾಕುವುದು ಪದ್ಧತಿ. ಊರಿನ ಪ್ರತಿಯೊಂದು ಮನೆಯಿಂದ ಅಷ್ಟೋ ಇಷ್ಟೋ ಬಂಗಾರ, ಬೆಳ್ಳಿ, ನವರತ್ನಗಳು ಅದಕ್ಕಾಗಿ ಒದಗಿ ಬಂದು ಶಿವನ ಕಾಲ ಬುಡಕ್ಕೆ ಸೇರಿಕೊಂಡಿವೆ. ಊರಿನ ಪ್ರತಿಯೊಂದು ಮನೆಯ ಜನಗಳಲ್ಲೂ ದೇವಾಲಯದ ಕುರಿತು ತಮ್ಮದೆಂಬ ಭಾವ ಮೂಡಿಸುವ ಕೈಂಕರ್ಯ ಇದು. ಒಟ್ಟಿನಲ್ಲಿ, ಸಕಾರಾತ್ಮಕ ಕಟ್ಟುವಿಕೆ ಎನ್ನುವುದು ಬರಿಯ ಹೊರಗಿನ, ಕಣ್ಣಿಗೆ ಕಾಣುವ ನಿರ್ಮಿತಿ ಮಾತ್ರವೇ ಅಲ್ಲ. ಅದು ಮನಸುಗಳ, ಆಶಾಭಾವದ, ಭರವಸೆಯ ಕಟ್ಟುವಿಕೆ ಕೂಡ.   
ಶ್ರೀ ಉಮಾಮಹೇಶ್ವರ ದೇವಾಲಯ, ಶಿವಾಕಾರಗ್ರಾಮ



Sunday, April 2, 2017

ಸನ್ನಿಪಾತ ಲಕ್ಷಣ ಮತ್ತು ಲೋಕದ ಬದುಕಿನ ನ್ಯಾಯ



ಪಾಣಿನಿಕೃತ ಸಂಸ್ಕೃತ ವ್ಯಾಕರಣದಮೇಲೆ ನಿತ್ಯವೆಂಬಂತೆ ನನಗೆ ಪ್ರೇಮ ಸಂಭವಿಸುತ್ತಲೇ ಇರುತ್ತದೆ. ಭಾಷೆಯೊಂದರ ಮೂಲನಿಯಮಗಳನ್ನು ಆಳವಾಗಿ ತಿಳಿದುಕೊಂಡು ಅದನ್ನು ಅಲ್ಗಾರಿದಂನಂತೆ ಬರೆದುಕೊಟ್ಟಿದ್ದು ಪಾಣಿನಿ ಮಹರ್ಷಿಗಳ ಮಹತ್ತರ ಕೊಡುಗೆ. ಸೂತ್ರಗಳನ್ನಷ್ಟೇ ಹೇಳಿ ಹೋದ ಮಹರ್ಷಿಗಳ ಆಶಯವನ್ನು ಇನ್ನಷ್ಟು ಸ್ಪಷ್ಟವಾಗಿ ವಾಕ್ಯಗಳ ಮೂಲಕ ವಿವರಿಸಿದ್ದು ವರರುಚಿಗಳ ಅಪೂರ್ವ ಕಾಣಿಕೆ. ಆ ಬಳಿಕ ಸೂತ್ರ ಮತ್ತು ವಾರ್ತ್ತಿಕಗಳ ಮಧ್ಯೆ ಯಾವುದರ ಅಗತ್ಯವೆಷ್ಟಿದೆ ಎಂದೆಲ್ಲ ವಿಮರ್ಶೆ ಮಾಡಿ ಇಡಬೇಕೋ ಬಿಡಬೇಕೋ ಎಂದು ನಿರ್ಣಯಿಸಿದ್ದು ಭಾಷ್ಯಕಾರರ ಅನರ್ಘ್ಯ ಸಾಧನೆ. ಇಷ್ಟೆಲ್ಲ ಆದಮೇಲೆ ಭಾರತದ ಬೇರೆ ಬೇರೆ ಭಾಗದಲ್ಲಿ  ಇವು ಮೂರನ್ನೂ ಇಟ್ಟುಕೊಂಡು ಸಂಸ್ಕೃತ ವ್ಯಾಕರಣದ ರೀತ್ಯಾ ಶಬ್ದಗಳ ಉತ್ಪತ್ತಿಯನ್ನು ವಿವರಿಸುವ ಕೆಲಸ ನಡೆಯಿತಲ್ಲ, ಅದಿನ್ನೊಂದು ವಿಸ್ಮಯ. ’ರಾಮ’ ಎಂಬುದೊಂದು ಶಬ್ದವನ್ನು ಮೂಲಧಾತುವಿನಿಂದ ಪ್ರಯೋಗದ ಹಂತದವರೆಗೆ ತರುವಾಗ ಪಾಣಿನಿಯ ಎಷ್ಟೆಲ್ಲ ಸೂತ್ರಗಳು ಬಳಕೆಯಾಗಿವೆ, ಯಾವ ಕ್ರಮದಲ್ಲಿ ಬಳಕೆಯಾಗಿವೆ ಎಂಬುದನ್ನು ಪ್ರಕ್ರಿಯಾಕೌಮುದೀ, ಸಿದ್ಧಾಂತಕೌಮುದೀ ಗ್ರಂಥಗಳಲ್ಲಿ ವಿಶದವಾಗಿ ಹೇಳಲಾಗಿದೆ. ರಾಮ ಶಬ್ದ ಇಲ್ಲಿ ಉದಾಹರಣೆ ಮಾತ್ರ. ಸಂಸ್ಕೃತದ ಪ್ರತಿಯೊಂದು ಶಬ್ದವನ್ನೂ ಹೀಗೆ ವಿವರಿಸುವ ಹೊಣೆ ವ್ಯಾಕರಣದ್ದು.

ಈ ಸೂತ್ರಗಳನೆಲ್ಲ ದುಡಿಸಿಕೊಂಡು ಕಾರ್ಯ ಸಾಧನೆ ಮಾಡುವಾಗ ಕೆಲವಾರು ನಿಯಮಗಳನ್ನು ಪಾಲಿಸಲಾಗಿದೆ. ಹಾಗಂತ ಆ ನಿಯಮಗಳನ್ನೆಲ್ಲ ಪಾಣಿನಿ ಗ್ರಂಥವು ಎಲ್ಲ ಸಂದರ್ಭದಲ್ಲೂ ಸಾಕ್ಷಾತ್ತಾಗಿ ಹೇಳಿರುವುದಿಲ್ಲ. ಮುಂದೆ ವಾರ್ತ್ತಿಕಕಾರರೋ, ಭಾಷ್ಯಕಾರರೋ ಅದನ್ನು ತಮ್ಮ ತಮ್ಮ ಮಾತಲ್ಲಿ ಹೇಳಿರುತ್ತಾರೆ. ಪಾಣಿನಿ ಆ ನಿಯಮಗಳನ್ನು ಹೇಳದೆ ಇದ್ದರೂ ಆ ನಿಯಮಗಳಿಗನುಸಾರವಾಗಿಯೇ ತಮ್ಮ ಗ್ರಂಥವನ್ನು ರಚಿಸಿರುತ್ತಾರೆ. ಇಷ್ಟಾದರೂ ಪಾಣಿನಿ ಮುನಿಗಳ ಆಶಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲದ್ದರಿಂದ ಭಾಷ್ಯವಾರ್ತ್ತಿಕಗಳಲ್ಲಿ ಆ ನಿಯಮಗಳನ್ನು ಮುಖತಃ ಹೇಳಲಾಗುತ್ತದೆ. ಆ ನಿಯಮಗಳನ್ನೇ ಪರಿಭಾಷೆಗಳು ಅಂತ ಕರೆಯಲಾಗಿದೆ. ಸೂತ್ರ, ವಾರ್ತ್ತಿಕ ಮತ್ತು ಭಾಷ್ಯಗಳ ಕಾಲವು ಕ್ರಿ.ಪೂ. ೬ ರ ಸುಮಾರಿಗೆ ಆರಂಭವಾಗಿ ಕ್ರಿ.ಶ. ೧-೨ ಶತಮಾನಕ್ಕೆಲ್ಲ ಮುಗಿದುಬಿಡುತ್ತದೆ. ಆ ಬಳಿಕವೂ ಮುಂದುವರಿದ ಮಹತ್ತಮವಾದ ಜಿಜ್ಞಾಸಾಪರಂಪರೆಯಿದ್ದರೂ ಅದು ಭಾಷ್ಯಕ್ಕೆ ವಿರೋಧವಾಗದೇ ಸಾಗಿ ಬಂದಿದ್ದು ದೊಡ್ಡ ವಿಚಾರ.

  
ಈ ಪರಿಭಾಷೆಗಳ ಪ್ರಪಂಚವೇ ತುಂಬ ಗಹನವಾದ್ದು, ಸರಸವಾದ್ದು, ಮತ್ತು ತರ್ಕಶುದ್ಧವಾದ್ದು. ಮುಂದೆ ಹದಿನೆಂಟನೆಯ ಶತಮಾನದಲ್ಲಿ (ಅಂದರೆ ಸೂತ್ರಕಾರನ ಕಾಲದಿಂದ ಎರಡೂಕಾಲು ಸಾವಿರ ವರ್ಷಗಳ ಬಳಿಕ!)  ಜೀವಿಸಿದ್ದಿರಬಹುದಾದ ನಾಗೇಶಭಟ್ಟ ಎಂಬ ಮಹಾನ್ ವಿದ್ವಾಂಸ ಈ ಪರಿಭಾಷೆಗಳಿಗಾಗಿಯೇ ಗ್ರಂಥವೊಂದನ್ನು ಬರೆಯುತ್ತಾರೆ. ಪರಿಭಾಷೇಂದುಶೇಖರ ಎಂಬ ಹೆಸರಿನ ಈ ಗ್ರಂಥದ ಆಂತರ್ಯವೆಲ್ಲ ಪರಿಭಾಷೆಗಳ ಚರ್ಚೆಗಾಗಿಯೇ ಮೀಸಲು. ಬಹುಶಃ ಪರಿಭಾಷೆಗಳಿಗಾಗಿಯೇ ಕೃತಿಯೊಂದನ್ನು ಆರಚಿಸಿದ ಅದ್ವಿತೀಯ ವಿದ್ವಾಂಸ ನಾಗೇಶಭಟ್ಟ. ಅವರ ಬಳಿಕ ಆ ಎತ್ತರದ ವ್ಯಾಕರಣ ವಿದ್ವಾಂಸರು ಪ್ರಾಯಃ ಇವತ್ತಿನವರೆಗೆ ಮತ್ತೆ ಹುಟ್ಟಿಲ್ಲ. ಪರಿಭಾಷೇಂದುಶೇಖರದಲ್ಲಿ  ಬೇರೆ ಬೇರೆ ಪರಿಭಾಷೆಗಳಿಗೆ ಮೂಲವೇನು, ಅದರ ಆಶಯವೇನು, ಅದರ ಪ್ರಯೋಜನ ಮತ್ತು ಅದನ್ನು ಶಾಸ್ತ್ರದಲ್ಲಿ Employ  ಮಾಡುವ ಬಗೆ ಏನು ಎಂಬುದರಬಗ್ಗೆ ಕೂಲಂಕಶವಾಗಿ ಚರ್ಚೆ ನಡೆಯುತ್ತದೆ. ಕೆಲವು ಪರಿಭಾಷೆಗಳನ್ನು ಸೂತ್ರಕಾರನೇ ಹೇಳಿದ್ದರೆ, ಕೆಲವನ್ನು ವಾರ್ತ್ತಿಕಕಾರ ಹೇಳಿದ್ದಾರೆ. ಕೆಲವೊಂದು ಭಾಷ್ಯದಲ್ಲಿ ಧ್ವನಿತ, ಇನ್ನು ಕೆಲವು ಲೋಕದಲ್ಲಿ ಮಾನವ ಬದುಕಿಗೆ ಅನ್ವಯವಾಗುವ ನೀತಿಗಳನ್ನೇ ಆಧಾರವಾಗಿಟ್ಟುಕೊಂಡಿರುವ ಪರಿಭಾಷೆಗಳು. ಬಹಳಷ್ಟು ಸಲ ಈ ಪರಿಭಾಷೆಗಳು ಮಾನವ ಬದುಕಿನ ಸತ್ಯಗಳನ್ನು ಅಕಾರಣವಾಗಿಯಾದರೂ ಧ್ವನಿಸುತ್ತವೆ. ಅಂಥಾ ಪರಿಭಾಷಾ ರಾಶಿಯಲ್ಲಿ ’ಸನ್ನಿಪಾತಪರಿಭಾಷೆ’ ಕೂಡ ಒಂದು.
ಸನ್ನಿಪಾತಪರಿಭಾಷೆಯೆಂದೇ ಪ್ರಸಿದ್ಧವಾದ ಇದರ ಮೂಲ ಸ್ವರೂಪ ಹೀಗಿದೆ- “ಎರಡು ಸಂಗತಿಗಳ ನಡುವಿನ ಸಂಬಂಧವನ್ನು ಆಧಾರವಾಗಿಟ್ಟುಕೊಂಡು ಬಂದ ಭಾಷಾಕ್ರಿಯೆಯೊಂದು ತಾನು ಬಂದಮೇಲೆ ಆಗಬಹುದಾದ ಕಾರ್ಯಗಳಿಂದ ಬದಲಾಗುವ ಸನ್ನಿವೇಶದಲ್ಲಿ ಇನ್ನೊಂದು ರೂಪವನ್ನೇ ತರಬಲ್ಲ ಮತ್ತು ಆ ಮೂಲಕ ತನ್ನ ನಿಮಿತ್ತವನ್ನು ಇಲ್ಲವಾಗಿಸಬಲ್ಲ ಬೇರೊಂದು ಸೂತ್ರಕ್ಕೆ ಸ್ವತಃ ನಿಮಿತ್ತವಾಗಿ ನಿಲ್ಲಲಾರದು”. (ಸನ್ನಿಪಾತಲಕ್ಷಣೋ ವಿಧಿರನಿಮಿತ್ತಂ ತದ್ವಿಘಾತಸ್ಯ). ಪಕ್ಕಾ ಕನ್ನಡದಲ್ಲಿ ಹೇಳುವಾಗ ಇದಕ್ಕಿಂತ ಸರಳವಾಗಿ ಹೇಳುವುದು ನನ್ನಿಂದಾಗಿಲ್ಲ, ಇರಲಿ. ವಾಕ್ಯವಾಗಿ ನೋಡಿದಾಗ ಕ್ಲಿಷ್ಟವಾಗಿ ಕಾಣಿಸುತ್ತಿದೆಯಾದರೂ ಅರ್ಥ ಸರಳವಾಗಿದೆ. ಉದಾರಹಣೆಯೊಂದನ್ನು ಕೊಟ್ಟಲ್ಲಿ ಇದು ನಿಚ್ಚಳವಾಗಬಹುದು.

ಶತಂ ಎಂಬ ಸಂಸ್ಕೃತಪದವೊಂದಿದೆ. ನೂರು ಎಂಬ ಸಂಖ್ಯೆಯನ್ನು ಹೇಳುವ ಪದ ಅದು. ಅದರ ಬಹುವಚನರೂಪ ಶತಾನಿ ಅಂತ (ನೂರರ ಎರಡಕ್ಕಿಂತ ಹೆಚ್ಚು ಗುಂಪುಗಳು/ಕಟ್ಟುಗಳು). ಸಂಸ್ಕೃತದಲ್ಲಿ ಷಕಾರಾಂತವಾದ ಮತ್ತು ನಕಾರಾಂತವಾದ ಸಂಖ್ಯಾಶಬ್ದಗಳಿಗೆ ’ಷಟ್’ ಅಂತ ಹೆಸರು. ಈ ಹೆಸರನ್ನು ಯಾಕೆ ಕೊಡಲಾಗಿದೆಯೆಂದರೆ ಈ ಬಗೆಯ ಸಂಖ್ಯಾವಾಚಕಗಳ ಎದುರಿಗೆ ಬರುವ ಪ್ರಥಮಾ ಮತ್ತು ದ್ವಿತೀಯಾ ಬಹುವಚನಗಳಿಗೆ ಲೋಪ ಹೇಳುವುದಕ್ಕಿದೆ. ಹಾಗಾಗಿಯೇ ನೋಡಿ, ಸಪ್ತ, ಪಂಚ, ದಶ ಇತ್ಯಾದಿ ಶಬ್ದಗಳು ಬಹುಸಂಖ್ಯೆಯ ವಾಚಕಗಳಾಗಿದ್ದರೂ ಬಹುವಚನ ಪ್ರತ್ಯಗಳು ಅಲ್ಲಿ ಕಾಣಿಸುತ್ತಿಲ್ಲ. ದಶಾಃ ಸಪ್ತಾಃ, ಪಂಚಾಃ ಅಂತೆಲ್ಲ ಎಲ್ಲೂ ಇಲ್ಲ. ಇರಲಿ, ಶತ ಎಂಬ ಶಬ್ದ ಆ ಬಗೆಯದ್ದಲ್ಲ, ಅದಕ್ಕೆ ಷಟ್ ಸಂಜ್ಞೆ ಇಲ್ಲ. ಹಾಗಿದ್ದೂ ಶಬ್ದವನ್ನು ನಿಷ್ಪಾದಿಸುವ ಪ್ರಕ್ರಿಯೆಯಲ್ಲಿ ಶತ ಎಂಬ ಶಬ್ದದ ಮುಂದೆ ಇ  ಎಂಬ ಬಹುವಚನ ಪ್ರತ್ಯಯ ಇದ್ದಾಗ ಶತ ಶಬ್ದಕ್ಕೆ ನ್ ಎಂಬುದು ಬಂದು ಸೇರಿಕೊಳ್ಳುತ್ತದೆ ಎಂಬುದೊಂದು ನಿಯಮ. ಹಾಗೆ ಬಂದು ಸೇರಿಕೊಂಡರೆ ಶತನ್ ಎಂದಾಯಿತಷ್ಟೆ. ಇದೀಗ ಶತನ್ ಎಂಬುದು ನಕಾರಾಂತವಾದ ಸಂಖ್ಯಾವಾಚಕವೂ ಆಯಿತಷ್ಟೆ. ಹಾಗಿದ್ದಲ್ಲಿ ಅದನ್ನೇ ನಿಮಿತ್ತವಾಗಿಟ್ಟುಕೊಂಡು ಶತನ್ ಇ ಎಂಬಲ್ಲಿ ವಿಭಕ್ತಿಪ್ರತ್ಯಯವಾದ ಇ ಎಂಬುದರ ಲೋಪವೂ ಆಗಬೇಕಲ್ಲವೇ? ಹಾಗೊಂದುವೇಳೆ ಆಗುವುದಾದರೆ ಶತಾನಿ ಎಂಬ ಶಬ್ದರೂಪವೇ ಇಲ್ಲದೇ ಹೋಗುತ್ತಿತ್ತು. ಎಲ್ಲಕಡೆಗೂ ಶತ ಎಂಬ ಎಂಬ ರೂಪ ಮಾತ್ರವೇ ಇರಬೇಕಿತ್ತು. ಆದರೆ ವಸ್ತು ಸ್ಥಿತಿ ಹಾಗಿಲ್ಲ; ಭಾಷೆಯಲ್ಲಿ ಶತಾನಿ ಎಂಬ ಪ್ರಯೋಗ ಇದ್ದೇ ಇದೆ. ಹಾಗಿದ್ದರೆ ಇದು ಹೇಗಾಯ್ತು?

ಉತ್ತರವಿಷ್ಟೆ, ಇಲ್ಲಿ ಸನ್ನಿಪಾತ ಪರಿಭಾಷೆಯ ಚಮತ್ಕಾರವಿದೆ. ಶತ ಎಂಬ ಅಕಾರಾಂತವಾದ ಶಬ್ದ ಮತ್ತು ಅದರೆದುರಿಗಿನ ಇ ಎಂಬ ಪ್ರತ್ಯಯವನ್ನು ನಿಮಿತ್ತ ಮಾಡಿಕೊಂಡು ನ್ ಎಂಬುದು ಬಂದು ಸೇರಿಕೊಂಡಿದೆಯಲ್ಲ, ಆ ನ್ ಎಂಬುದು ತಾನು ಬರುವ ಮೂಲಕ ತನ್ನ ಆಶ್ರಯದಾತನಾದ ಶತ ಎಂಬ ಶಬ್ದವನ್ನು ಶತನ್ ಎಂದು ಬದಲಾಯಿಸಿದರೂ ಶತ ಮತ್ತು ಇ ಎಂಬವುಗಳಿಗೆ ವಿಕಾರ ತಂದೊಡ್ಡುವ ಇನ್ಯಾವುದೇ ಸೂತ್ರಕ್ಕೆ ತಾನು ಸ್ವಯಂ ಕಾರಣವಾಗಲಾರದು. ಅಂದರೆ ಆಶ್ರಯವನ್ನರಸಿ ಬಂದ ತನ್ನನ್ನು ನಿಮಿತ್ತವಾಗಿಟ್ಟುಕೊಂಡು ವಿಭಕ್ತಿ ಪ್ರತ್ಯಯವನ್ನು ಕೊಂದುಬಿಡಲು ಹೊಂಚುವ ಇನ್ಯಾವ ನಿಯಮಕ್ಕೂ ಆ ನಕಾರವೇ ಅವಕಾಶವನ್ನು ಕೊಡುವುದಿಲ್ಲ.

ಇದು ಮಾನವ ಬದುಕಿನ ಒಂದು ಮೌಲ್ಯ ಕೂಡ ಹೌದು ತಾನೆ? ಒಬ್ಬ ಮಹಾತ್ಮನ ಉದಾರತೆಯ ಕಾರಣದಿಂದ ಅವನಲ್ಲಿ ಆಶ್ರಯ ಪಡೆದುಕೊಂಡ  ಸಾಧಾರಣ ಮಾನವನೊಬ್ಬ, ಆ ಮಹಾತ್ಮನ ಯಾವ ಸಂಗತಿಗೂ ಧಕ್ಕೆ ಬರಲು ತಾನೇ ಕಾರಣನಾಗಬಾರದು ಎಂಬುದು ಒಂದು ಜೀವನ ಮೌಲ್ಯ. ತನ್ನ ಆಶ್ರಯವನ್ನು ನಾಶಮಾಡುವ ಕೆಲಸವನ್ನು ಮಾನವ ಮಾಡಬಾರದು/ ಮಾಡುವುದಿಲ್ಲ. ಮಾಡುವುದಿಲ್ಲ ಎನ್ನುವುದಕ್ಕಿಂತ ಮಾಡಬಾರದು ಎಂಬುದು ಬಹುದೊಡ್ಡ ಜೀವನ ಮೌಲ್ಯ ಎಂಬುದಂತೂ ಸತ್ಯ.

ಮೌಲ್ಯಗಳ ಪಾಲನೆ ತುಂಬ ಸಂದರ್ಭದಲ್ಲಿ ಆಗುವುದೇ ಇಲ್ಲ. ಅಷ್ಟೆಲ್ಲ ಸುಲಭಕ್ಕೆ ಮೌಲ್ಯಗಳನ್ನಾಚರಿಸುವುದು ಸಾಧ್ಯವಾಗಿದ್ದರೆ ಮೌಲ್ಯಗಳು ಮೌಲ್ಯಯುತವಾಗಿ ಉಳಿಯುತ್ತಿರಲಿಲ್ಲವೇನೋ. ಕಾಡಿನಲ್ಲಿ ಮರವೊಂದರ ಹರವಾದ, ನೀಳ ಚಾಚಿನ ರೆಂಬೆ ಕೊಂಬೆಗಳನ್ನೂ, ಸುರಕ್ಷತೆಯನ್ನೂ ಗಮನಿಸಿಕೊಂಡು ಹೆಜ್ಜೇನಿನ ಪರಿವಾರವೊಂದು ಮರದಲ್ಲಿ ನೆಲೆಯಾಗುತ್ತದೆ. ಕಾಲ ಕಳೆದಂತೆ ಜೇನುತುಪ್ಪ ಸಿದ್ಧವಾದಾಗ ಮನುಷ್ಯ ಜೀವಿ ಆ ಜೇನಿಗಾಗಿ ಮರವನ್ನೇರಿ ಕೊಂಬೆಯನ್ನೆಲ್ಲಾ ಕಡಿದು ಮರವನ್ನು ವಿರೂಪಗೊಳಿಸುತ್ತಾನೆ. ಇಲ್ಲಿ ಹೆಜ್ಜೇನಿಗೆ ಆಶ್ರಯ ಕೊಟ್ಟ ಮರಕ್ಕೆ ಆ ಜೇನಿನಿಂದಾಗಿಯೇ ಆಘಾತ ಒದಗಿದೆ. ಸನ್ನಿಪಾತಲಕ್ಷಣವು ಇಲ್ಲಿ ಲೆಕ್ಕಕ್ಕೇ ಬಂದಿಲ್ಲ. ಪ್ರಕೃತಿಯಲ್ಲಿ  ಬಹುತೇಕ ಎಲ್ಲ ಕಡೆಗಳಲ್ಲೂ ಕಾಣುವ ಸತ್ಯ ಇದೇ ಆಗಿದೆ. ಆದರೆ ಮಾನವನು ಸಮಾಜ ಮತ್ತು ಮೌಲ್ಯ ವ್ಯವಸ್ಥೆಗೆ ಬದ್ಧನಾಗಿದ್ದರಿಂದ ಅವನಲ್ಲಿ ಮೌಲ್ಯಗಳ ಆಚರಣೆಯನ್ನು ಅಪೇಕ್ಷಿಸಲಾಗುತ್ತದೆ.

ಟಿಬೇಟ್ ಎಂಬ ಪುಟ್ಟದಾದ, ಸಮೃದ್ಧವಾದ, ಅಧ್ಯಾತ್ಮದ ಅಮಲಿನ, ಬೌದ್ಧ ಭಿಕ್ಕುಗಳ ಸುಂದರ ದೇಶವನ್ನು ಚೀನಾ ಎಂಬ ಕೆಂಪು ಡ್ರಾಗನ್ ತನ್ನ ಕಮ್ಯೂನಿಸಮ್ಮಿನ ಕರಾಳ ಹಸ್ತದಿಂದ ಹಿಂಸಿಸತೊಡಗಿದಾಗ ದಲೈ ಲಾಮ ಭಾರತದ ಆಶ್ರಯ ಕೋರಿ ಬರುತ್ತಾರೆ. ಭಾರತ ಆಶ್ರಯ ಕೊಡುತ್ತದೆ. ಆದರೆ ಹಾಗೆ ಕೊಟ್ಟ ಆಶ್ರಯವೇ ೧೯೬೨ ರ ಭಾರತ ಚೀನಾ ಯುದ್ಧಕ್ಕೆ ಒಂದು ಕಾರಣವೂ ಆಗುತ್ತದೆ. ಅಲ್ಲಿ ಭಾರತ ಸೋತು ಅಕ್ಸಾಯ್ ಚಿನ್ ಚೀನಾದ ತೆಕ್ಕೆಗೆ ಒಳಪಡುತ್ತದೆ. ಇಲ್ಲಿ ಕೂಡ ಸನ್ನಿಪಾತ ನ್ಯಾಯದ ಪರಿಪಾಲನೆ ಆಗಿಲ್ಲವೆಂದೇ ಹೇಳಬೇಕು. ಅಥವಾ ಸನ್ನಿಪಾತ ನ್ಯಾಯದ ಪಾಲನೆಗೆಂಬಂತೆ ಅರವತ್ತೆರಡರ ಯುದ್ಧದ ಪಶ್ಚಾತ್ ಕ್ಷಣದಲ್ಲೇ ಭಾರತ ಭೂಸೇನೆಯ ಭಾಗವಾಗಿ ಟಿಬೆಟಿಯನ್ ಯೋಧರ ಪಡೆಯೊಂದು ಅಸ್ತಿತ್ವಕ್ಕೆ ಬಂತು. ಹತ್ತು ಸಾವಿರ ಯೋಧರ ಈ ಪಡೆ ಇವತ್ತಿಗೂ ಭಾರತ ಸೇನೆಯ ಭಾಗ ಮತ್ತು ಭಾರತ ಚೀನಾ ಗಡಿರಕ್ಷಣೆಯಲ್ಲಿ ಅದು ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ನೋಡಿದಾಗ ತನಗೆ ಆಶ್ರಯ ಕೊಟ್ಟ ಮಹಾತ್ಮನಿಗೆ ತನ್ನಿಂದಾಗಿ ಧಕ್ಕೆಯೊದಗದಂತೆ ಕಾಯುವಲ್ಲಿ ಟಿಬೇಟ್ ತೊಡಗಿಕೊಂಡಿದೆ ಎನ್ನಬಹುದು. ಮತ್ತು ಸನ್ನಿಪಾತ ಲಕ್ಷಣದ ಪ್ರಕಾರ ಅದು ನ್ಯಾಯವೂ ಹೌದು.

ಐಸಿಸ್ ಉಗ್ರರಿಂದ ಅಮಾನವೀಯವಾಗಿ ಘಾಸಿಗೊಂಡ ಸಿರಿಯನ್ ನಿರಾಶ್ರಿತರಿಗೆ ಯುನೈಟೆಡ್ ಕಿಂಗ್ಡಮ್ ಆಶ್ರಯ ಕೊಟ್ಟಿತಷ್ಟೆ. ಆ ಆಶ್ರಯದ ಕಾರಣಕ್ಕೆ ಯುಕೆ ಯಾವ್ಯಾಯ ಕಿರುಕುಳಗಳನ್ನನುಭವಿಸುತ್ತಿದೆ ಎಂಬುದು ದಿನಾ ಪತ್ರಿಕೆ ಓದುವವರಿಗೆ ತಿಳಿದದ್ದೇ. ಸಾವಿರಾರು ನಿರಾಶ್ರಿತರನ್ನು ಯು ಕೆ ಪೋಲೀಸರು ಬಂಧಿಸಬೇಕಾಗಿ ಬಂತು. ಯಾಕೆಂದರೆ ನಿರಾಶ್ರಿತರಾಗಿ ಬಂದವರು ಅತ್ಯಾಚಾರದಂಥ ಹೀನ ಕೃತ್ಯಗಳಿಗೆ ತೊಡಗಿಕೊಂಡಿದ್ದರು. ಹಾಗಾಗಿ ಆಶ್ರಯದಾತನಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಆಶ್ರಿತರು ಲೋಕದಲ್ಲಿ ತುಂಬಾ ಕಡಿಮೆ ಎಂದೇ ಹೇಳಬಹುದು. ಇತಿಹಾಸದುದ್ದಕ್ಕೂ, ಅದರಲ್ಲೂ ಭಾರತದ ಇತಿಹಾಸದುದ್ದಕ್ಕೂ ಇದೇ ಕಥೆಗಳೇ ತುಂಬಿವೆ. ಯಾರನ್ನು ನಮ್ಮ ನಾಡೊಳಕ್ಕೆ ಬಿಟ್ಟುಕೊಂಡೆವೋ ಅವರೇ ನಮ್ಮದೆಲ್ಲವನ್ನೂ ಕಿತ್ತುಕೊಂಡು ಆಳಿದ್ದೇ ಆಳಿದ್ದು. ತನ್ನ ಆಶ್ರಯದಾತನ ರಕ್ಷಣೆಯ ಕುರಿತು ಹೇಳುವ ಸನ್ನಿಪಾತ ಲಕ್ಷಣ ಶಾಸ್ತ್ರ ಪಾಲನೆಯಾದದ್ದೇ ಕಡಿಮೆ.

ವ್ಯಾಕರಣಶಾಸ್ತ್ರದಲ್ಲೂ ಕೆಲವು ಸಂದರ್ಭಗಳಲ್ಲಿ ಸನ್ನಿಪಾತ ಲಕ್ಷಣದ ಪಾಲನೆ ಆಗದೇ ಇರುವುದಿದೆ. ಲೋಕದ ಎಲ್ಲ ಉದಾಹರಣೆಗಳಲ್ಲೂ ಎಲ್ಲ ಮೌಲ್ಯಗಳ ಪಾಲನೆ ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಶಾಸ್ತ್ರದಲ್ಲೂ ಪರಿಭಾಷೆಗಳ ಪಾಲನೆ ಎಲ್ಲ ಸಂದರ್ಭದಲ್ಲಿ ಆಗಿಯೇ ಆಗುತ್ತದೆ ಎನ್ನುವಂತಿಲ್ಲ. ಯಾಕೆಂದರೆ ಸಾಧಿಸಬೇಕಾದ ಕಾರ್ಯ ಈ ನಿಯಮಗಳ ಪಾಲನೆಗಿಂತ ದೊಡ್ಡದು ನೋಡಿ! ಉದಾ- ರಾಮಾಯ, ಕೃಷ್ಣಾಯ, ವಾಸುದೇವಾಯ, ಶಿವಾಯ ಎಂದೆಲ್ಲ ದಿನಾ ಬಳಕೆಯಾಗುವ ಪದಗಳೆಲ್ಲ ಸಿದ್ಧವಾಗಿದ್ದೇ ಈ ಪರಿಭಾಷೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವ ಮೂಲಕ. ಒಟ್ಟಿನಲ್ಲಿ ಶಾಸ್ತ್ರದಲ್ಲಾಗಲಿ ಅಥವಾ ಲೌಕಿಕ ಬದುಕನಲ್ಲಾಗಲಿ ನಿಯಮಗಳ ಪಾಲನೆ ಮತ್ತು ನಿಯಮಗಳ ಪಾಲನೆಯಾಗದಿರುವಿಕೆ ಎರಡಕ್ಕೂ ಸಾಕಷ್ಟು ಉದಾಹರಣೆಗಳನ್ನು ಕಾಣಿಸಬಹುದು.    
       

Friday, February 24, 2017

ನನ್ನೂರಿನ ಶಿವಾಲಯ


ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಶಿರಸಿ ಮತ್ತು ಯಲ್ಲಾಪುರ ತಾಲೂಕುಗಳ ಸಂಗಮಸ್ಥಾನದಲ್ಲಿರುವ ನನ್ನೂರು ’ಶೇವ್ಕಾರ’ ದಲ್ಲಿ ಅನಾದಿಕಾಲದಿಂದಲೂ ಒಂದು ಶಿವದೇವಾಲಯವಿತ್ತು, ಮತ್ತು ಅದರಿಂದಾಗಿಯೇ ನನ್ನೂರಿಗೆ ’ಶಿವಾಗಾರ’ (ಶಿವನ ಮನೆ. ಅದೀಗ ಶೇವ್ಕಾರ ಎಂದಾಗಿದೆ) ಎಂಬ ಹೆಸರೂ ನಿಂತಿತೆಂಬ ಮಾತಿದೆ. ಬಾಲ್ಯಾದಾರಭ್ಯ ಇಂದಿನವರೆಗೆ ನಮ್ಮೂರಿನ ಶಿವಾಲಯದ ಕಥೆ ಕೇಳಿದ್ದೆವಾಗಲೀ ವ್ಯವಸ್ಥಿತವಾದ ಶಿವಾಲಯ ಎಂದೇನೂ ಇದ್ದಿರಲಿಲ್ಲ. ಹಾದಿ ಬದಿಯಲ್ಲಿ ಪಾಣಿಪೀಠರಹಿತವಾದ ಭಗ್ನಲಿಂಗವೊಂದು ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತುದನ್ನು ದಿನಾ ನಾವೆಲ್ಲ ಶಾಲೆಗೆ ಹೋಗಿ ಬರುವಾಗೊಮ್ಮೆ ನೋಡುತ್ತಿದ್ದೆವು. ಆ ಲಿಂಗಕ್ಕೊಂದು ಇತಿಹಾಸವಿದೆ ಎಂಬುದಕ್ಕೆ ಸಾಕ್ಷಿಯಾಗಿ ಕಟ್ಟೆಯ ಕಲ್ಲಾಗಿ ನಿಂತಿದ್ದ ಅಸ್ಪಷ್ಟ ಶಾಸನ ಕಲ್ಲು ಮತ್ತು ಸಮೀಪದಲ್ಲೊಂದು ಹೂಳು ತುಂಬಿದ ಕಲ್ಯಾಣಿ- ಇದ್ದವು. ಕಟ್ಟೆಯ ಕಲ್ಲಾಗಿದ್ದ ಶಾಸನ ಬಹುಕಾಲ ಹಾಗೇ ನಿಂತು ಯಾವುದೋ ಕಥೆ ಹೇಳುತ್ತಿದ್ದು ಈಗೀಗ ಅದರ ದನಿಯೂ ಕ್ಷೀಣವಾಗಿದ್ದಿರಬೇಕು. ಕೊನೆಗೊಮ್ಮೆ ಅದಕ್ಕೆ ಸೋಗೆಯ ಚಪ್ಪರವನ್ನು ಕಟ್ಟಿಕೊಟ್ಟು ಶಿವರಾತ್ರಿಗೊಂದು ಪೂಜೆ ಮಾಡುವ ಕ್ರಮ ಬಂತು. ಹಾಗಿದ್ದೂ ಗೋಡೆಯಿಲ್ಲದ ಜೋಪಡಿಯಲ್ಲೇ ಭಗ್ನಲಿಂಗ ನಿಂತುಕೊಂಡಿತ್ತು.
ಇಂತಿಪ್ಪ ದೇವಾಲಯದ ಪುನರ್ನಿರ್ಮಾಣಕ್ಕೆ ಒಂದೂವರೆ ದಶಕದ ಹಿಂದೆ ಊರಿನ ಕೆಲವು ಮನಸುಗಳು ಸಂಕಲ್ಪಗೈದವು. ನಾವೊಂದಿಷ್ಟು ಜನ ಎಳೆ ಮೀಸೆಯ ಹುಡುಗರು ಮತ್ತು ಕೆಲವು ಹಿರಿಯರು ಆ ಶಿವಲಿಂಗವಿದ್ದ ಪ್ರದೇಶದಲ್ಲೆಲ್ಲ ಉತ್ಖನನ ಶುರು ಮಾಡಿದೆವು. ಹೆಚ್ಚೂಕಡಿಮೆ ಒಂದು ವಾರದ ಕಾಲ ಉತ್ಖನನ ಮಾಡಿದ ನಮಗೆ ಹಳೆಯ ದೇವಾಲಯದ ಕಟ್ಟಡದ ಕುರುಹಾಗಿ ದಕ್ಕಿದ್ದು ವ್ಯವಸ್ಥಿತ ನೆಲಗಟ್ಟು. ಆ ಬಳಿಕ ಸುಮಾರಷ್ಟು ಕಾಲ ಅದ್ಯಾಕೋ ಸಂಕಲ್ಪಗೈದ ಮನಸುಗಳು ಸುಮ್ಮನಾದವು. ಆಗೀಗೊಮ್ಮೆ ಶಿವಾಲಯದ ವಿಚಾರ ಬರುತ್ತಿತ್ತಾಗಲೀ ಹೆಚ್ಚಿನ ಉದ್ಯಮಕ್ಕೆ ಯಾರೂ ಉದ್ಯುಕ್ತರಾಗಲಿಲ್ಲ. 
’ನಿರ್ಮಾಣ’ ಎಂಬುದೊಂದು ಮಹಾ ಸಂಕಲ್ಪ. ಒಂದರೆಗಳಿಗೆಯಲ್ಲಿ ಸಾಧ್ಯವಾಗುವ ಸರಕಲ್ಲ ಅದು. ಭಂಜನೆಯದು ಕ್ಷಣದ ಉನ್ಮಾದ, ಅದಕ್ಕೆ ಸಂಕಲ್ಪವಿಲ್ಲ, ಅದೊಂದು ಧುತ್ತನೆ ಹೊಮ್ಮುವ ಆಘಾತ. ನಿರ್ಮಿತಿಗೆ ಕ್ರಮವಿದೆ, ಮಾನವಕೃತ ಭಂಜನೆಗೆ ಕ್ರಮವಿಲ್ಲ. ನಮ್ಮದಿಲ್ಲಿ ನಿರ್ಮಾಣದ ಸಂಕಲ್ಪವಾಗಿತ್ತು. ಅದು ಕೆಲವು ಕಾಲದ ಬಳಿಕ ಊರಿನ ಬಹುಪಾಲು ಜನರ ಮನಸಿನಲ್ಲಿ ಪುನಃ ಜಾಗೃತವಾಯ್ತು. ಈ ಸಲ ದೇವಾಲಯದ ಇತಿಹಾಸದ ಅವಗತಿಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆಹೋಗಲಾಗಿ, ಬಹು ಕಾಲದ ಹಿಂದೆ ಕೆಲವು ಯತಿವರ್ಯರಿಂದ ಪ್ರತಿಷ್ಠಾಪಿತವಾದ ದೇವಾಲಯವಾಗಿತ್ತು ಎಂಬ ಮಾಹಿತಿಯೊಂದು ಲಭ್ಯವಾಯ್ತಲ್ಲದೆ ಅದು ಉಮಾಮಹೇಶ್ವರ ದೇವಾಲಯವೆಂಬುದೂ ತಿಳಿದು ಬಂತು. ಆದರೆ ಕಾಲಾಂತರದಲ್ಲಿ ಊರಿಗೂರೇ ನಾಶವಾಗಿ ಹೋಗಲಾಗಿ ದೇವಾಲಯವೂ ಅವನತಿಯನ್ನು ಹೊಂದಿರಬಹುದೆಂದು ಇಂದಿಗೆ ಊಹಿಸಬಹುದಷ್ಟೆ. (ಈ ಮಾತನ್ನು ಪುಷ್ಟೀಕರಿಸುವಂತ ಕೆಲವು ದಂತ ಕಥೆಗಳು ಮತ್ತು ಕೆಲವು ಭೌಗೋಳಿಕ ಸಾಕ್ಷ್ಯಗಳು ಊರಲ್ಲಿ ಇವತ್ತಿಗೂ ಲಭ್ಯವಿವೆ. ಹಿಂದೊಮ್ಮೆ ಅರವತ್ತು ಮನೆಗಳಿದ್ದ ಊರು ನಾಶವಾಗಿ ಹೋಗಿತ್ತಂತೆ. ಆ ಮನೆಗಳಿದ್ದ ಜಾಗದಲ್ಲಿ ಇಂದು ಕಾಡು ಕಾಡು. ನೆಲಗಟ್ಟುಗಳ ಅವಶೇಷ ಇವತ್ತಿಗೂ ಇದೆ) ಒಟ್ಟಿನಲ್ಲಿ ಅಜ್ಞಾತ ಇತಿಹಾಸವಿರುವ ಶಿವದೇವಾಲದ ಪುನರುತ್ಥಾನಕ್ಕೆ ನನ್ನೂರಿನ ಭಾಗಶಃ ಜನತೆ ಕಳೆದೆರಡು ವರ್ಷಗಳ ಹಿಂದೆ ಸಂಪೂರ್ಣ ಸಿದ್ಧವಾಗಿ ಎದ್ದುನಿಂತರು.
ಅದರ ಪರಿಣಾಮವಾಗಿಯೇ ಸುಭದ್ರವಾದ ದೇವಾಲಯವೊಂದು ಸಿದ್ಧವಾಗಿ ನಿಂತಿದೆ. ಹಳೆಯ ಲಿಂಗವಿದೆಯಾದರೂ ಅದು ಪಾಣಿಪೀಠರಹತವಾಗಿ, ಭಗ್ನಗೊಂಡು ನಿಂತಿದ್ದರಿಂದ ಪೂಜೆಗೆ ಯೋಗ್ಯವಲ್ಲ. ಹೊಸ ಬೃಹದಾಕಾರದ ಈಶ್ವರಲಿಂಗ, ಪಾಣಿಪೀಠ, ನಂದಿ ಹಾಗೂ ಗಣಪತಿ ವಿಗ್ರಹಗಳ ಕೆತ್ತನೆಯ ಕಾರ್ಯ ಬಹುತೇಕ ಮುಗಿದಿದೆ. ದೇವಾಲಯದ ಛಾವಣಿಯನ್ನು ಪೂರ್ತಿಯಾಗಿ ತಾಮ್ರದ ಹಾಳೆಗಳಿಂದ ಹೊದೆಸಿ ಸಿದ್ಧಮಾಡಲಾಗಿದೆ. ಈ ಬಗೆಯ ಲೋಹದ ಛಾವಣಿಯನ್ನು ಸುತ್ತಲ ಊರುಗಳಲ್ಲಿ ಕಾಣಲಾಗದು. ಉಮಾಮಹೇಶ್ವರ ದೇವಾಲಯವೂ ಈ ಭಾಗಕ್ಕೆ ಇದೊಂದೇ ಇರುವುದು. ಉಳಿದಂತೆ ದೇವಾಲಯಕ್ಕೆ ಸಂಬಂಧಿಸಿದ್ದ ಕಲ್ಯಾಣಿಯೂ ಅಂದ ಆಕಾರ ಪಡೆದುಕೊಂಡು ತಿಳಿನೀರನ್ನು ತುಂಬಿಕೊಂಡಿದೆ. ಶಿವನ ಶಿರಸ್ಸಿಗೆ ಅರ್ಪಣೆಯಾಗಲಿಕ್ಕಿರುವ ಶುದ್ಧಗಂಗೆಯಂತೆ ನಿರುದ್ವಿಗ್ನವಾಗಿ ನಿಂತಿದೆ. ಊರ ಜನರ ಶ್ರಮ, ಶ್ರದ್ಧಾಳುಗಳ ಸಹಾಯ ಮತ್ತು ಸತ್ಸಂಕಲ್ಪದ ಉತ್ಪನ್ನವಾಗಿ ಶೇವ್ಕಾರಿನ ಉಮಾಮಹೇಶ್ವರ ದೇವಾಲಯ ಎದ್ದುನಿಂತಿದೆ; ಭಾಗಶಃ ಊರಿನ ಅಭಿಮಾನದ ಪ್ರತೀಕದಂತೆ.

 
ಮುಂಬರುವ ವೈಶಾಖ ಮಾಸದ ಮೊದಲಿನಲ್ಲಿ ಯತಿಶ್ರೇಷ್ಠ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಶೇವ್ಕಾರಿನಲ್ಲಿ ಉಮಾಮಹೇಶ್ವರ ಪುನಃ ಪ್ರತಿಷ್ಠಾಪಿತವಾಗಲಿದ್ದಾನೆ. ನಾಲ್ಕುದಿನಗಳ ಕಾರ್ಯಕ್ರಮವು ಸಂಪೂರ್ಣವಾದ ವೈದಿಕ ತೇಜಸ್ಸನ್ನು ಊರಿನಲ್ಲಿ ಕಟ್ಟಿಕೊಡುವುದಕ್ಕಿದೆ.  ಸಂತರಿಂದ ಸ್ಥಾಪಿತವಾಗಿತ್ತೆನ್ನಲಾದ ಆಲಯವೊಂದು ಮತ್ತೆ ಸ್ವರ್ಣವಲ್ಲೀ ಶ್ರೀಗಳಂಥಾ ಶ್ರೇಷ್ಠ ಸಂತರ ಕೈಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವುದು ಕಾಲದ ಕರುಣೆ. ಶ್ರೀಗಳ ಮತ್ತು ಉಮಾಮಹೇಶ್ವರನ ಅಕಂಪಾನುಕಂಪದಿಂದ ಮುಂದಿನ ವರ್ಷದ ಶಿವರಾತ್ರಿಯು ಶೇವ್ಕಾರದ ಉಮಾಮಹೇಶ್ವರನಿಗೆ ವೈದಿಕೋಕ್ತ ರೀತಿಯಲ್ಲಿ ಸಲ್ಲಿಕೆಯಾಗಲಿಕ್ಕಿದೆ. ಊರೂ ಸಹ ಅದನ್ನೇ ಕಾಯುತ್ತಿದೆ.

ಶಿವರಾತ್ರಿಯ ದಿನ ಇಷ್ಟನ್ನು ಹೇಳಬೇಕನ್ನಿಸಿತು. 

Friday, February 3, 2017

ಉತ್ತರಕಾಂಡದ ಓದು ಮತ್ತು ಜಿಜ್ಞಾಸೆ.



ರಾಮಾಯಣವನ್ನಾಗಲೀ ಮಹಾಭಾರತವನ್ನಾಗಲೀ ಅವಲೋಕಿಸುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಅದೆಷ್ಟು ಬಾರಿಗೆ ಅವಲೋಕಿಸಿದರೂ ರಾಮನೆಂಬಾತ ಮಾತ್ರ ಎಟುಕಿಗೆ ನಿಲುಕದ, ಯಾವುದಕ್ಕೂ ಕಲಕದ, ಅರ್ಥವಾಗದ ಮತ್ತು ಅರ್ಥಮಾಡಿಸಿಕೊಳ್ಳುವ ಬಯಕೆಯೂ ಇಲ್ಲದ ಪಾತ್ರವಾಗಿಯೇ ನನಗೆ ತೋರುತ್ತಾನೆ. ಅವನ ಕೃತ್ಯಗಳ ಪರವಾಗಿ ಜಿಜ್ಞಾಸೆಗೆ ನಿಂತಾಗೆಲ್ಲ ಕೊನೆಯಲ್ಲಿ ಆತನ ನಿರ್ಧಾರಗಳೆಡೆಗೆ ಪ್ರಶ್ನೆಗಳೇ ಉಳಿಯುತ್ತವೆ. ಹಾಗಂತ ಅವನ ಕೃತ್ಯಗಳ ಪರವಲ್ಲದ ಕೋನ ಹಿಡಿದುಕೊಂಡೆನೋ, ಆತನ ’ಧರ್ಮ’ವು ಎಲ್ಲೋ ಒಂದು ಸಣ್ಣ ಹೊಳಹಿನಲ್ಲಿ ಸುಳಿದು ವಿರೋಧವಾದದ ಬುಡವನ್ನೇ ಕಡಿಯುತ್ತದೆ. ರಾಮ ಇವತ್ತಿಗೂ ನನ್ನ ಅರಿವಿನ ಯಾವ ಅಂಚಿಗೂ ನಿಲುಕದವನು. 

ಉತ್ತರಕಾಂಡವನ್ನು ಎತ್ತಿಕೊಂಡಾಗ ಕಾದಂಬರಿಕಾರನು ಕಥೆಯ ಹರಿವಿನಲ್ಲಿ ಒದಗಿಸಬಹುದಾದ ರಸಸೃಷ್ಟಿಯಲ್ಲಿ ಮಿಂದೇಳುವ ಬಯಕೆಯು ಹಿರಿದಾಗಿತ್ತಾದರೂ ರಾಮನನ್ನು ನನಗೆ ಹತ್ತಿರವಾಗಿಸಬಹುದೇನೋ ಅನ್ನುವ ಸಣ್ಣದೊಂದಾಸೆಯೂ ಮನಸಲ್ಲಿತ್ತು.
ಭೈರಪ್ಪನವರ ಕೃತಿಗಳಲ್ಲೆಲ್ಲ ನನ್ನನ್ನು ಅತಿಯಾಗಿ ಆವರಿಸಿದ್ದು ಪರ್ವ. ಅದು ಬಿಟ್ಟರೆ ನಾನು ಮೊತ್ತ ಮೊದಲಿಗೆ ಓದಿಕೊಂಡಿದ್ದ ಸಾರ್ಥ. ಉಳಿದ ಕೃತಿಗಳದ್ದು ಪರ್ವದ ಎತ್ತರ ಅಲ್ಲವೇ ಅಲ್ಲ. ಅವರ ’ದಾಟು’ ಕೃತಿಯನ್ನು ಮಾತ್ರ ದಾಟಲಾಗದೇ ಅರ್ಧಕ್ಕೆ ಬಿಟ್ಟಿದ್ದೇನೆ. ಕಾದಂಬರಿಕಾರನಾಗಿ ಭೈರಪ್ಪನವರ ಸ್ವಾಮಿತ್ವವನ್ನು ಕಂಡದ್ದೇನಿದ್ದರೂ ಪರ್ವದಲ್ಲಿ. ಇದೀಗ ಉತ್ತರಕಾಂಡಕ್ಕೆ ಅಂಥದೇ ಲೋಕೋತ್ತರ ಕಾವ್ಯವೊಂದರ ಮರುನಿರ್ಮಾಣವೇ ವಸ್ತುವಾದ್ದರಿಂದ ಅವರ ಉಳಿದ ಕಾದಂಬರಿಗಳ ಓದಿಗಿಂತ ಭಿನ್ನವಾಗಿರಬಹುದೆಂಬ ನಿರೀಕ್ಷೆಯಂತೂ ಇತ್ತು. 

ಉತ್ತರಕಾಂಡದ ಸೀತೆ ಎಲ್ಲವನ್ನೂ ತನ್ನ ಕಣ್ಣಲ್ಲಿ ಕಾಣುತ್ತ, ಕಾಣಲಾಗದ್ದನ್ನು ಅವರಿವರಿಂದ ಕೇಳುತ್ತ, ಹಾಗೆ ಕೇಳಿದ್ದನ್ನು ತನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತ ಹೋಗುತ್ತಾಳೆ. ಸೀತೆಯೇ ಕೇಂದ್ರವಾಗಿದ್ದರಿಂದ ಉತ್ತಮಪುರುಷದ ನಿರೂಪಣೆಯೇ ಕಾದಂಬರಿಯುದ್ದಕ್ಕೂ. ನಿರೂಪಣೆಗಳಲ್ಲಿ ಅತ್ಯಂತ ಪ್ರಬಲವಾದ್ದು ಉತ್ತಮಪುರುಷದ ನಿರೂಪಣೆಯೆಂಬುದು ನನ್ನ ಅನಿಸಿಕೆ. ಸಹಜವಾಗಿಯೇ ಆಕೆ ಕಟ್ಟಿಕೊಡುವ ಕಥೆ ಶಕ್ತವಾಗಿದೆ. 

ರಾಮಾಯಣದ ಮರುನಿರೂಪಣೆಯನ್ನು ಅದೆಷ್ಟು ಭಾರತೀಯ ಕವಿಗಳು ಮಾಡಿಲ್ಲ ಹೇಳಿ. ಅದು ರಘುವಂಶದ ಕಾಲಿದಾಸನಿರಬಹುದು, ಉತ್ತರರಾಮಚರಿತದ ಭವಭೂತಿಯಿರಬಹುದು, ಶ್ರೀರಾಮಾಯಣದರ್ಶನದ ಕುವೆಂಪುವಿರಬಹುದು- ಎಲ್ಲರೂ ’ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ’ ಅನ್ನುವುದನ್ನು ಮತ್ತೆ ಮತ್ತೆ ಸತ್ಯ ಮಾಡಿದ್ದಾರೆ. ಅದೇ ಸಾಲಿಗೆ ಉತ್ತರಕಾಂಡದ ಭೈರಪ್ಪ ಕೂಡ ಸೇರುತ್ತಾರೆ. ರಾಮಾಯಣದ ವಸ್ತುವನ್ನು ಕಾವ್ಯದ ಹದಕ್ಕೆ ಮಾಗಿಸುವಾಗಿನ ಇವರೆಲ್ಲರ ಸ್ವಾತಂತ್ರ್ಯವು ಪ್ರಜಾಪತಿಯ ಸೃಷ್ಟಿಶೀಲತೆಯಷ್ಟೇ ಮಹತ್ತ್ವದ್ದು ನಿಜ. 

ಕಾಲಿದಾಸನ ರಾಮನೂ ’ಸೀತೆಗಾಗಿ ಮಾಡಿದ ಯುದ್ಧವಲ್ಲ ಅದು, ನನ್ನ ಅಹಂತೆಯನ್ನು ಕೆಣಕಿದವನಿಗೆ ಕೊಟ್ಟ ಉತ್ತರವಷ್ಟೇ’ ಅನ್ನುವ ಮಾತಾಡುತ್ತಾನೆ. (’ರಕ್ಷೋ ವಧಾಂತೋ ನ ಚ ಮೇ ಪ್ರಯಾಸಃ.....’). ಸೀತೆಗಾಗಿಯೇ ರಾಮ ಲಂಕೆಯನ್ನು ಪುಡಿಗೈದನೆಂಬ ಆದರ್ಶ ಪ್ರೇಮದ ವಾದಕ್ಕೆ ಮೊದಲ ಪೆಟ್ಟು ಬಹುಶಃ ಇದೇ ಇದ್ದೀತು. ಭವಭೂತಿಯ ಉತ್ತರಾಮಚರಿತವಂತೂ ಪೂರ್ಣ ರಾಮಾಯಣವನ್ನು ಕರುಣರಸದ ಮೇರು ಶೃಂಗಕ್ಕೊಯ್ದು ನಿಲ್ಲಿಸುತ್ತದೆ. ಅಲ್ಲಿ ದುಃಖದ ಅತಿರೇಕದಿಂದಾಗಿ ಬಹುತೇಕ ಪಾತ್ರಗಳು ಅಡಿಗಡಿಗೆ ಮೂರ್ಛೆ ಬಂದು ಬೀಳುತ್ತವೆ. ಮೊದಲ ಓದಿಗೆ ಈ ಪರಿಯ ದುಃಖದ ಅಭಿವ್ಯಕ್ತಿಯು ಅಲೋಕಸಾಧಾರಣವಾದ್ದು ಎಂದು ಯಾರಿಗಾದರೂ ಅನ್ನಿಸುವುದು ಸಹಜ. ಇನ್ನು ಕುವೆಂಪುರವರಂತೂ ’ಕೊಲೆಯ ಕಥೆಯಲ್ಲವಿದು, ಕಲೆಯ ಕಥೆಯು’ ಎಂದೇ ಆರಂಭಿಸಿ ತಮ್ಮ ಕಾವ್ಯದ ಉದ್ದಕ್ಕೂ ರೋಮಾಂಚದ ಉತ್ತುಂಗವನ್ನು ಸೃಷ್ಟಿಸಿಕೊಡುತ್ತಾರೆ. ಕಾವ್ಯಸತ್ಯಗಳನ್ನು ನಿರ್ಮಿಸಿಕೊಂಡು ರಮಿಸುವ ಮಾನವ ಮನಸಿನ ಸ್ವಭಾವಕ್ಕೆ ಕುವೆಂಪು ಅವರ ಕಾವ್ಯದುದ್ದಕ್ಕೂ ದಂಡಿಯಾಗಿ ಸಿಗುತ್ತದೆ ಸರಕು.   

ಈ ಮೇಲಿನ ಮೂವರಿಗೂ ’ದಿವ್ಯ’ ದ ಸ್ಪರ್ಷದಿಂದ ಪೂರ್ತಿಯಾಗಿ ಬಿಡಿಸಿಕೊಳ್ಳುವ ಅಗತ್ಯ ಕಂಡಿರಲಿಲ್ಲವೇನೋ. ದಿವ್ಯವಾದ್ದನ್ನು (ಅಥವಾ ಅಲೌಕಿಕವಾದ್ದನ್ನು) ಇಟ್ಟುಕೊಂಡೇ ಹೊರಟ ಈ ಮೂವರಿಗೆ ರಸಸೃಷ್ಟಿಯು ಪ್ರಾಯಃ ಕಷ್ಟತಮವಾದ್ದಾಗಿರಲಿಲ್ಲ. ಮಾನವ ಮನಸಿನ ಸ್ವಭಾವದಂತೆ ಲೋಕಾತೀತವಾದ್ದು ನಮ್ಮನ್ನು ಅತ್ಯಂತ ಬೇಗ ರಸೋನ್ನತಿಗೆ ಕೊಂಡೊಯ್ಯುತ್ತದೆ. ಉತ್ತರಕಾಂಡವು ಈ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವುದಿದ್ದರೆ ಅದು ತನ್ನ ನೆಲಕ್ಕಂಟಿಯೇ ನಡೆಯುವ ಸ್ವಭಾವದಿಂದಾಗಿ. ನೆಲವನ್ನೆಂದಿಗೂ ಬಿಡೆನೆಂಬ ಶಪಥ ಮಾಡಿಯೇ ಹೊರಟಂತಿದೆ ಕಥೆ. ನೆಲದ ಮಗಳ ಕಣ್ಣಲ್ಲಿ ಕಾಂಬ ಕಥೆಯಾದ್ದರಿಂದ ನೆಲವ ಬಿಡೆನೆಂಬ ಶಪಥ ಇಲ್ಲಿ ಸಹಜಜವೂ ಹೌದು. ಅದೇನೇ ಆದರೂ ರಾಮಾಯಣದ ಕಥೆಯನ್ನು ದಿವ್ಯದ ಹಂಗು ತೊರೆದು ಬರೆಯುವೆನೆಂಬುದು ಸಾಹಸಾತ್ಮಕ ನಿರ್ಣಯ. ಮಹಾಭಾರತವನ್ನೂ ನೆಲಕ್ಕೆ ಬಿಗಿದು ಬಂಧಿಸುವ ಪ್ರಯತ್ನ ಪರ್ವದಲ್ಲಿದೆಯಾದರೂ ಮಹಾಭಾರತದ ಕಥೆಗಿರುವ ಸ್ವಭಾವಕ್ಕೂ ರಸಸೃಷ್ಟಿಗೂ ಅವಿನಾಭಾವ ಸಂಬಂಧವಿರುವುದರಿಂದ ಅದು ಇಷ್ಟೊಂದು ದೊಡ್ಡ ಸವಾಲಾಗಿರಲಿಕ್ಕಿಲ್ಲ. ಆದರೆ ರಾಮಾಯಣದ ಕಥೆ ಹಾಗಲ್ಲ. ದಿವ್ಯವನ್ನು ತೊರೆದರೆ ಇಲ್ಲಿ ಉಳಿಯುವ ರಸವೆಂದರೆ ಕರುಣ ಮಾತ್ರ, ಅದ್ಭುತವಂತೂ ಮಣ್ಣುಗೂಡಿ ಹೋಗುತ್ತದೆ. ಶೃಂಗಾರ, ವೀರ, ಅದ್ಭುತ, ಭೀಭತ್ಸ, ರೌದ್ರಗಳನ್ನೆಲ್ಲ ದಿವ್ಯದ ಹೊರತಾಗಿಯೂ ಮಹಾಭಾರತಲ್ಲಿ ಹಿಡಿದುಕೊಟ್ಟಂತೆ ಇಲ್ಲಿ ಊಹೂಂ.  ’ಏಕೋ ರಸಃ ಕರುಣ ಏವ..’ ಎಂಬ ಮಾತು ರಾಮಾಯಣದ ಕಥೆಗೆ ಹೇಳಿ ಮಾಡಿಸಿದಂಥದು. ಅದು ಬಿಟ್ಟರೆ ಶಾಂತವನ್ನು ದುಡಿಸಿಕೊಳ್ಳಬಹುದಷ್ಟೆ. ಹಾಗೊಂದು ಮಿತಿಗೆ ತಾನು ಬದ್ಧವಾಗುತ್ತೇನೆಂಬ ಅರಿವಿದ್ದೂ ದಿವ್ಯವನ್ನು ಬದಿಗಿಟ್ಟು ಉತ್ತರಕಾಂಡದ ಕಥೆ ಬರೆದಿದ್ದು ಬರಹಗಾರನ ಸಾಹಸವಲ್ಲದೆ ಮತ್ತೇನಲ್ಲ.

ಉದಾಹರಣೆಗೆ ನೋಡಿ- ಕುವೆಂಪುರವರ ರಾಮನ ಕಾಲಿಗೆ ತಾಕಿದ ಕಲ್ಲೊಂದು ಅಹಲ್ಯೆಯಾಗಿ ಮೈತಳೆದ ಕ್ಷಣದಲ್ಲಿ, ಆ ವಿಸ್ಮಯಕ್ಕೆ ಬೆರಗಾಗಿ ಸ್ವತಃ ರಾಮನೇ ಆ ಹೆಣ್ಣು ಜೀವಕ್ಕೆ ಅರೆಕ್ಷಣ ಶಿರಬಾಗುತ್ತಾನೆ. ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಎಂಬ ಉಪಮೆಯನ್ನೂ ಕವಿ ಕೊಡುತ್ತಾರೆ. ಆ ಬಿಂದುವಿನಲ್ಲಿ ಸಹೃದಯನಿಗೆ ಹೊತ್ತಿಕೊಳ್ಳುವ ರೋಮಾಂಚವಿದೆಯಲ್ಲ ಅದು ಅಮೋಘವಾದ್ದು. ಇದು ಅತ್ಯಂತ ಶಕ್ತ ಅಭಿವ್ಯಕ್ತಿ ಎಂಬುದು ಅದಕ್ಕೆ ಕಾರಣವಾದರೂ ಅದಕ್ಕೂ ಆಧಾರಭೂತವಾದ್ದು ಅಹಲ್ಯೆಯು ಕಲ್ಲಾಗಿದ್ದಳೆಂಬ ಅಲೌಕಿಕ ಕಾವ್ಯಸತ್ಯ. ಆದರೆ ಉತ್ತರಕಾಂಡದಲ್ಲಿ ಕಲ್ಲೇ ಆಗದ ಅಹಲ್ಯೆಯನ್ನು ಯಾವ ರಾಮನ ಕಾಲಿಗೆ ಸೋಕಿಸಿಯೂ ಹೆಣ್ಣು ಮಾಡಲು ಸಾಧ್ಯವಿಲ್ಲ. ಮತ್ತಲ್ಲಿ ಅದ್ಭುತರಸದ ಉನ್ನತಿಯೂ ಅಸಂಭವ. ಲೋಕೋತ್ತರ ಕಾವ್ಯವೊಂದನ್ನು ನೆಲಕ್ಕೆ ಬಾಗಿಸುವಾಗ ಸೃಷ್ಟಿಕರ್ತನಿಗೆ ಎದುರಾಗಬಹುದಾದ ಬಲುದೊಡ್ಡ ಸವಾಲು ಇಂಥವು. ಉತ್ತರಕಾಂಡ ಅದಕ್ಕಲ್ಲ ಎದೆಗೊಡುತ್ತದೆ. ಸೀತೆಯನ್ನು ಕದ್ದೊಯ್ಯಲು ಪುಷ್ಪಕವಿಮಾನದಲ್ಲಿ ಬಾರದ ರಾವಣ, ರಾವಣನನ್ನು ತಡೆಯಲೆಂದು ಬಾರದ ಜಟಾಯು, ಸೀತೆಯನ್ನು ಹಡುಕಲೆಂದು ಸಮುದ್ರಲಂಘನ ಮಾಡದ ಕಪಿ, ಹತ್ತು ತಲೆಯಿರದ ರಾವಣ ಮತ್ತು ಎಲ್ಲಕ್ಕಿಂತ ದೊಡ್ಡದೆಂದರೆ ಸೇತುವೆಯನ್ನೇ ಕಟ್ಟದ ರಾಮ! ಇಷ್ಟೆಲ್ಲ ನೆಲಕ್ಕಂಟಿಕೊಂಡು ನಡೆಯುವ ಕಥೆ ಉತ್ತರಕಾಂಡ. ಇದೆಲ್ಲದರ ಮಧ್ಯೆ ವಿಲಕ್ಷಣನೆಂದರೆ ರಾಮ. ಅವ ಅತ್ತ ನೆಲದವನೂ ಅಲ್ಲದೆ ಇತ್ತ ದಿವ್ಯನೂ ಅಲ್ಲದೆ ಹೆಣಗಾಡಿದನಾ ಅನ್ನಿಸುವಂತಿದ್ದಾನೆ. ಉತ್ತರಕಾಂಡದ ಮಟ್ಟಿಗೆ ಮಾತ್ರವೇ ಈ ಪ್ರಶ್ನೆ ಯಾಕೆಂದರೆ ನೆಲದ ಜೀವಗಳು ಕೈಗೊಳ್ಳದ ನಿರ್ಣಯವನ್ನು ಕೈಗೊಳ್ಳುತ್ತಾನೆ ರಾಮ. ರಾಮನನ್ನು ಲೋಕೋತ್ತರವಾಗಿಸಲು ಹೊರಟಿದ್ದರೆ ಈ ಪ್ರಶ್ನೆ ಬರುತ್ತಿರಲಿಲ್ಲ, ಆದರೆ ಇಲ್ಲಿ ರಾಮನು ನೆಲದ ಜೀವವಾಗಿರಬೇಕಾದವನು.  

ಲೋಕದ ಯಾವ ಹರಿವಿಗೂ ಕರಗದೊಂದು ಕಲ್ಲ ಬಂಡೆ ರಾಮ. ಧರ್ಮವೆಂದರೆ, ಸತ್ಯವೆಂದರೆ, ಅವನೇ ಹೇಳುವಂತೆ ಅಚಲವಾದ, ಬದಲಾಗದ ತ್ರಿಕಾಲಿಕೈಕರೂಪವಾದ ಸಂಗತಿಯಿರಬಹುದು. ಆದರೆ ಅಂಥದೊಂದು ಸತ್ಯದ್ರವ್ಯವು ಲೌಕಿಕ ಬದುಕಿಗೆ ಒದಗುವಂಥದಲ್ಲ; ಲೋಕದ ಬದುಕಿಗೆ ಲೋಕದ ಸತ್ಯಗಳೇ ಆಧಾರ. ರಾಮನ ಧರ್ಮದ ವ್ಯಾಖ್ಯಾನ ಸೀತೆಗೆ ಹೇಗೆ ಅರ್ಥವಾಗಲಿಲ್ಲವೋ ಹಾಗೇ ಯಾರಿಗೂ ಅರ್ಥವಾದಂತೆ ಕಾಣುವುದಿಲ್ಲ. ಅರ್ಥವಾದಂತೆ ಕಂಡರೂ ಪ್ರಶ್ನೆಯನ್ನಂತೂ ಉಳಿಸಿಹೋಗುತ್ತಾನೆ ಆತ. ತ್ರಿಕಾಲಾಬಾಧಿತ ಸತ್ಯವೊಂದಕ್ಕಾಗಿ ನಿಂತುಕೊಳ್ಳುವ ಪುರುಷನ ಸುತ್ತಲಿನವರ ಲೌಕಿಕಸಾಧಾರಣ ಬದುಕು ಅದೆಂಥ ದಾರುಣವಾಗಿರುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದ ಕೃತಿ ಇದು. ’ಸ್ವಯಂ ಹಿಂಸೆ ಮತ್ತು ಅವಲಂಬಿತರ ಹಿಂಸೆಯೇ ನಿನ್ನ ಧರ್ಮದ ತಿರುಳೋ?’ ಎಂದೊಮ್ಮೆ ಲಕ್ಷ್ಮಣನಿಂದ ಕೇಳಿಸಿಯೂ ಇದ್ದಾರೆ ಕಾದಂಬರಿಕಾರ. ಧರ್ಮವು ಮೂರು ಕಾಲಿನಲ್ಲಿ ನಿಂತುಕೊಂಡಿತ್ತೆನ್ನಲಾದ ತ್ರೇತಾಯುಗದಲ್ಲೆ ಆದರ್ಶಕ್ಕೆ ಈ ಕಥೆಯಾದರೆ ಕಲಿಯುಗದ ಕಥೆಯೇನಿದ್ದೀತೋ! 

ಕಾದಂಬರಿಯಲ್ಲಿ ಪ್ರೇಮವೆಂಬ ದ್ರವ್ಯದ ಅಸತ್ಯತೆಯನ್ನು ಸೀತೆ ಮಥಿಸಿ ಅರಿತುಕೊಳ್ಳುತ್ತಾಳಲ್ಲ, ಆ ಭಾಗ ತಾತ್ತ್ವಿಕವಾಗಿ ಬಲು ದೃಢವಾದ್ದು ಮತ್ತು ಪ್ರಭಾವಿಯಾದ್ದು. ಪ್ರೇಮವೆಂಬುದು ಈ ಲೋಕದ ಅತ್ಯಂದ ಸುಂದರವಾದ ಅಸತ್ಯ. ಅದು ಸ್ವಾರ್ಥದ  ಉತ್ಪನ್ನ. ಉಪನಿಷತ್ತಿನ ವಾಕ್ಯಗಳು ಸೀತೆಯ ಈ ಚಿಂತನೆಗೆ ಒತ್ತಾಸೆಯಾಗಿ ನಿಲ್ಲುತ್ತವೆ. (ಹಾಗಿದ್ದೂ ಪ್ರೇಮವಿಲ್ಲದೆ ಜೀವನವಿಲ್ಲೆಂಬುದು ಮತ್ತದೇ ಲೋಕಸತ್ಯ.). ಕಾದಂಬರಿಯಲ್ಲಿ ಇದು ಅಸಹಾಯ ವೇದಾಂತವಲ್ಲ, ಬದಲಿಗೆ ಅನುಭವದಿಂದೆದ್ದ ತಿಳಿವು. ಧರ್ಮವೆಂದರೇನೆಂಬುದಕ್ಕೆ ಲೋಕೋನ್ನತ ಉದಾಹರಣೆಯಾಗಿ ನಿಲ್ಲಲೆಂಬಂತೆ ಹೊರಟ ರಾಮನ ಪ್ರೇಮವೂ ಸಹ ಸ್ವಾರ್ಥದ್ದೇ ಚಂದದ ರೂಪವಾಗಿ ತೋರುವ ಕಾದಂಬರಿಯ ಘಟ್ಟವಿದೆಯಲ್ಲ, ಅಲ್ಲಿ ಪ್ರಾಯಃ ರಾಮನು ಒಂದು ಕ್ಷಣಕ್ಕೆ ನೆಲದತ್ತ ಬಾಗಿದನೇನೋ. ಆದರೆ ಮುಂದುವರಿಯುವ ಮೌನ, ನಿಶ್ಚಲ ವ್ಯಕ್ತಿತ್ವಗಳು ಅನತಿಕಾಲದಲ್ಲಿ ಮತ್ತೆ ಅವನನ್ನು ನೆಲದವನಲ್ಲವೆಂಬಂತೆ ನಿಲ್ಲಿಸಿಬಿಡುತ್ತವೆ. ಧರ್ಮಸಭೆಯಲ್ಲಿ ಸೀತೆಯ ನಡೆಯಿಂದ ಇನ್ನಷ್ಟು ಮತ್ತಷ್ಟು ಅಂತರ್ಮುಖಿಯಾಗುತ್ತಾನೆ. ತನ್ನ ನಿರ್ಧಾರಗಳ ಕುರಿತಾದ ಹೆಚ್ಚಿನ ವಿವರಣೆಯಿಲ್ಲದೆ ರಾಮ ಮರೆಯಾಗುತ್ತಾನೆ. ಸೀತೆ ಮಾತ್ರ ’ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ’ ಎಂದು ಪ್ರೇಮದ ಅಸತ್ಯತೆಯನ್ನು ಅರಿವಾಗಿಸಿಕೊಂಡಬಳಿಕವೂ ತಾನು ಆ ಪ್ರೇಮವನ್ನು ತೊರೆದು ಬದುಕಲಾರೆ ಎಂಬಂತೆ, ನೆಲದವಳಾಗಿ ತನ್ನ ಬದುಕು ಅಸತ್ಯವೇ ಆದರೂ ಪ್ರೇಮಕ್ಕೇ ಜೋತುಬೀಳುವುದೆಂಬುದನ್ನು ತೋರಿಸುತ್ತಾಳೆ. ನೆಲಕ್ಕೇ ಸೇರುತ್ತಾಳೆ. 

ಕರುಣವೆಂಬ ರಸವನ್ನಲ್ಲದೆ ಬೇರೆ ರಸವನ್ನು ಹೊತ್ತಿಸಬೇಕೆಂದು ಧರ್ಮಸಭೆ ಕರೆದಿದ್ದ ಕವಿ, ತನ್ನ ಕೈಗೆ ಮೀರಿದ್ದು ಇವೆಲ್ಲ ಎಂಬಂತೆ ಕೈ ಚೆಲ್ಲುತ್ತಾನೆ. ಗಹನವಾದ ತಾತ್ತ್ವಿಕ ಜಿಜ್ಞಾಸೆಗಳಿಗೆ ರಾಮಾಯಣದಲ್ಲಿ ಯಾವೆಲ್ಲ ಜಾಗಗಳು ಉಳಿದುಕೊಂಡಿವೆಯೋ ಅದೇ ಜಾಗಗಳು ಇಲ್ಲೂ ಇವೆ, ಇನ್ನೂ ಇವೆ. ಲೌಕಿಕಾಲೌಕಿಕಗಳು ಒಂದಾಗಿ ಬದುಕಿಗೆ ಒದಗವು ಎಂಬುದೇ ರಾಮಾಯಣದ ಸಂದೇಶವೇ? ರಾಮನೆಂದರೆ ’ವಿಗ್ರಹವಾನ್ ಧರ್ಮಃ’ ಎಂದು ಪ್ರಸಿದ್ಧಿಯಿದೆಯಲ್ಲ, ಅದು ಮಾನವ ಮಾತ್ರನಿಗೆ ಎಂದೆಂದಿಗೂ ಆದರ್ಶದ ಮಟ್ಟದ್ದಾಗಿ ಮಾತ್ರ ಉಳಿಯಬಲ್ಲ, ಎಂದಿಗೂ ವಾಸ್ತವದಲ್ಲಿ ಹದಗಾಣದ ಸಂಗತಿಯೇ? ಈ ಪ್ರಶ್ನೆಗಳಿಗೆ ಎಸ್ ಎಲ್ ಭೈರಪ್ಪರವರ ಉತ್ತರಕಾಂಡವು ತನ್ನ ದನಿಯಲ್ಲಿ ’ಹೌದು’ ಎಂದುತ್ತರಿಸಿದಂತೆ ನನಗೆ ಭಾಸವಾಯ್ತು. ಅಂತೂ ನೆಲದ ಪಾತಳಿಗೆ ಸಮಾನಾಂತರವಾಗಿ ಹರಿದ ಉತ್ತರಕಾಂಡದಲ್ಲೂ ಶ್ರೀರಾಮ ನೆಲಕ್ಕೆ ಒದಗಲಿಲ್ಲ. ರಾಮಾಯಣವು ಎಂದೆಂದಿಗೂ ಮುಗಿಯದ ಕಥೆ ಎಂಬುದು ಸತ್ಯವೇನೋ.