Saturday, May 20, 2017

ಸ ನಃ ಪಾಯಾನ್ನಿತ್ಯಮ್ - ತಿಳಿನಗೆಯ ಯತಿದೇವ ಕಾಯಲೆಮ್ಮ




ಉಮಾ ಯಸ್ಯಾಂಕಸ್ಥಾ ಶಿರಸಿನಿಹಿತಾ ಸ್ವರ್ಗತಟಿನೀ
ಪ್ರಸನ್ನೇ ದ್ವೇ ನೇತ್ರೇ ತದಿತರದಹೋ ಕಾಮದಹನಮ್
ಗಲೇ ಯಸ್ಯಾಹಿರ್ಯೋ ಹಿಮನಗನಿಕೇತಃ ಶಶಿಧರಃ
ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ || ೧

ಉಡಿಯನೇರಿಹ ಮಡದಿ, ಜಟೆಗೆ ಹೊನ್ನೂರ ನದಿ
ಜೋಡಿ ಕಂಗಳು ಶಾಂತವಿನ್ನೊಂದು ರೌದ್ರ.
ಕೊರಳ ಹಾರವು ಹಾವು, ನೀರ್ಗಲ್ಲ ಬೆಟ್ಟ ಮನೆ
ಗಂಗೆ ತೊಟ್ಟವನೀತ ಕಾಯಲೆಮ್ಮ |

ದೇವೋ ಭೂತಾನಾಂ ಸಕಲಜಗದದ್ವೈತಪಯಸಾ
ಸಿಸಿಕ್ಷುಃ ಸಂಜಜ್ಞೇ ಮಹಿತತಮಪೂರ್ಣಾತಟಭುವಿ 
ಮನೀಷೀ ಸರ್ವಜ್ಞಃ ಕವಿಹೃದಯಮುಗ್ಧಶ್ಚ ಮುನಿರಾಟ್ 
ಸ ನಃ ಶಂಕಾಹಾರೀ ಭವತು ಮತಿದಃ ಶಂಕರಗುರುಃ  ||೨

ಎರಡಿಲ್ಲದರಿವ ರಸ ಜಗಕೆಲ್ಲ ಉಣಿಸಿದವ
ಪೂರ್ಣೆ ನದಿ ಬಯಲಲ್ಲಿ ತಳೆದು ತನುವ.
ತಿಳಿವಿನವ, ಬಲು ಜಾಣ, ಕವಿಮನದ ಮುನಿರಾಜ
ಶಂಕೆ ಕಳೆ, ಮತಿಯ ಕೊಡು ಶಂಕರಾರ್ಯ |

ಯಥಾ ಧಾವದ್ಗಂಗಾ ಹಿಮಗಿರಿಸೃತಾ ಪೋಷತಿ ಧರಾಂ
ತಥೈವೇಯಂ ಲೋಕಾನ್ ದ್ವಿತಯವಿಹತಾನ್ ಶಂಕರಕೃತಾ
ಸರಿದ್ಭೂತ್ವಾ ಸೋಂದಾಪುರವರಯತೇರಾಶ್ರಮಭುವಃ  
ಸುಸಂವೃತ್ತಾ ಪುಷ್ಣಾತ್ಯವಿತಥಗತಿಃ ಸಾಧುಪದವೀ ||೩

ಬಿಳಿಗಿರಿಯ ಹಿಮವಿಳಿದು ಧರೆಯುಡಿಯ ಪೊರೆದಂತೆ
ಸೋದೆಯಂಗಳದಿಂದ ಅದ್ವೈತವಾಗಿ
ಒಳಿತಿಂಗೆ, ಬೆಳಕಿಂಗೆ, ಇಬ್ಬಗೆಯ ಅಳಿವಿಂಗೆ  
ಭವನ ಕೃಪೆ ಹರಿಯುತಿದೆ ಯತಿರೂಪದಿಮ್ || 


ಭವಾರಣ್ಯಕ್ರಾಂತೌ ನಿಹಿತಹೃದಯೋಽಪಿ ಶ್ರಮಸಹೋ      
ಮಹಾರಣ್ಯಾರಕ್ಷಃ ಸರಿದವನದಕ್ಷಃ ಸ್ವಯಮಭೂತ್
ಮುಮುಕ್ಷುಸ್ಸನ್ನನ್ಯಾನ್ ವ್ಯಸನದಹನಾತ್ತಾರಣಪರಃ
ಸ ನಃ ಪಾಯಾನ್ನಿತ್ಯಂ ಮೃದುಹಸಿತಗಂಗಾಧರಯತಿಃ ||೪

ಭವದ ಕೇಡಿನ ಕಾಡ ತಾ ಮೀರ ಹೊರಟರೂ
ಸಿರಿ ಕಾನು, ತಿಳಿ ನೀರ ರಕ್ಷೆ ಮರೆಯದವ 
ಬಿಡುಗಡೆಗೆ ಹಂಬಲಿಸುವೆಲ್ಲರನು ಬಿಡಿಸುವವ
ತಿಳಿನಗೆಯ ಯತಿದೇವ ಕಾಯಲೆಮ್ಮ |


ಶಿವಾಕಾರೇ ಗ್ರಾಮೇ ವಿಮಲರುಚಿರಃ ಸೋಮನಿಲಯಃ
ಸಿತೇ ವೈಶಾಖೇಸ್ಮಿನ್ ವಿಧಿವದಭಿಷಿಕ್ತೋ ವಿಲಸತಿ |
ಯತೇಃ ಪುಣ್ಯಾಸ್ಥಿತ್ಯಾ ದ್ವಿಜಪಠಿತವೇದೈಶ್ಚ ಮುದಿತಃ
ಸ ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ ||೫

ಶುಕ್ಲವೈಶಾಖದಲಿ ಶಿವಕಾರನೂರಿನಲಿ
ಶಿವಶಿವೆಯರೊಗ್ಗೂಡಿ ಗುಡಿಯಾಯಿತೋ!
ಯತಿಶಿವಂಕರನಿಂದ, ವೇದಮಂತ್ರಗಳಿಂದ
ತಂಪಾಗಿ ಗಿರಿಯೊಡೆಯ ಕಾಯಲೆಮ್ಮ |   





Tuesday, May 16, 2017

ಜಡದ ಗುಡಿಯಲ್ಲವದು ಜೀವ ನೆಲೆಯೋ

ಶಿವಾಲಯದ ಮೇಲಿನಿಂದ ಸಿಂಹಾವಲೋಕನ

ಅದು ಸುಮಾರು ಇಪ್ಪತ್ತನೇ ಶತಮಾನದ ನಾಲ್ಕು ಐದನೆಯ ದಶಕ ಇದ್ದಿರಬಹುದು, ಅಂದರೆ ಕ್ರಿ.ಶ. ೧೯೫೦ ದಶಕದ ಸಮಯ. ಆ ಹೊತ್ತಿಗೆ ಶೇವಕಾರ (ಗ್ರಾಮ್ಯದ ಸೊಗಡಿನಲ್ಲಿ ಶಮ್ಕಾರು, ಶಂವ್ಕಾರು) ಎಂಬ ಅರಣ್ಯಪ್ರಧಾನವಾದ ಊರಲ್ಲಿ, ಗಾಢವಾದ ಬೆಟ್ಟಗಳಲ್ಲಿ ಶಿವರಾಮ ಭಟ್ಟ ಎಂಬ ಸನಾತನಿ ಗೃಹಸ್ಥರಿಗೆ (ನನ್ನಜ್ಜ) ಭಗ್ನಸ್ಥಿತಿಯಲ್ಲಿದ್ದ ಶಿವಲಿಂಗವೊಂದು ಅಕಸ್ಮಾತ್ತಾಗಿ ಸಿಗುತ್ತದೆ. ಪಾಣಿಪೀಠವಿಲ್ಲದೆ ನೆಲದ ಮೇಲೆ ಮಲಗಿದ್ದ, ಪ್ರಾಕಾರವಿಲ್ಲದ, ಪೂಜೆಯಿಲ್ಲದೆ ಶತಮಾನವೇ ಗತಿಸಿರಬಹುದಾದ ಆ ಶಿವಲಿಂಗವನ್ನವರು ತಮಗೆ ತಿಳಿದ ರೀತಿಯಲ್ಲಿ ಎಬ್ಬಿಸಿ ನಿಲ್ಲಿಸುತ್ತಾರೆ. ಆ ಶಿವನಿಗೊಂದು ದೇವಾಲಯ ನಿರ್ಮಿಸಬೇಕು ಎಂಬ ಸಂಕಲ್ಪವೊಂದು ಅವರ ಚಿತ್ತದಲ್ಲಿ ಅದಾಗಲೇ ರೂಪುತಳೆಯುತ್ತದೆ. ಆದರೆ ಅಂದಿಗೆ ಇದ್ದ ಊರಿನ ಪರಿಸ್ಥಿತಿಯಲ್ಲಿ, ಆರ್ಥಿಕ ತುರ್ತಿನ ದಿನಗಳಲ್ಲಿ ಶಿವಾಲಯದ ಮಾತಿರಲಿ - ಬದುಕುವುದೂ ದುಸ್ತರವಾಗಿದ್ದುದು ವಾಸ್ತವ. ಹಾಗಾಗಿ ಪರ್ವದಿನಗಳಲ್ಲಿ ಮಾತ್ರ ಪೂಜೆಯನ್ನು ತಮ್ಮ ಕೈಲಾದ ಮಟ್ಟಿಗೆ ನಡೆಸಿಕೊಂಡು ಬಂದ ಶಿವರಾಮ ಭಟ್ಟರು ೧೯೬೫ ರಲ್ಲಿ ಕಾಲವಾಗುತ್ತಾರೆ. ಶಿವ ಸೂರಿಲ್ಲದೆ, ನೀರಿಲ್ಲದೆ, ಅಲ್ಲಿಯೇ ಬೆಟ್ಟದಲ್ಲಿ ಉಳಿಯುತ್ತಾನೆ. ಮುಂದೆ ಶಿವರಾಮಭಟ್ಟರ ಮಕ್ಕಳು ಮತ್ತು ಊರವರು ಆ ಶಿವನಿಗೆ ಆಗೀಗ ಪರ್ವಕಾಲದಲ್ಲೊಂದು, ಹಬ್ಬದಲ್ಲಿನ್ನೊಂದು ಎಂಬಂತೆ ಪೂಜೆ ನಡೆಸಿಕೊಂಡು ಬರುತ್ತಾರೆ. ಕಾಲ ಕಳೆದಂತೆ ಕಾಡು ಕ್ರಮೇಣ ಕರಗುತ್ತದೆ, ಬೆಟ್ಟದಲ್ಲಿದ್ದ ಶಿವ ಹಾದಿ ಬದಿಯ ದಿಬ್ಬದ ಮೇಲೆ ಒಂಟಿಯಾಗಿ ನಿಂತವನಂತೆ ಕಾಣತೊಡಗುತ್ತಾನೆ. ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದಲ್ಲಿ ಅವನಿಗೊಂದು ತಗಡಿನ ಚಪ್ಪರ ಸಿದ್ಧವಾಗುತ್ತದೆ. ಇಪ್ಪತ್ತೊಂದನೆಯ ಶತಮಾನಕ್ಕೆ ದೇಶ ಕಾಲಿಡುತ್ತಿದ್ದಂತೆ ಆರ್ಥಿಕವಾಗಿ, ವೈಚಾರಿಕವಾಗಿ ಊರಿನ ಬಹುಪಾಲು ಜನರು ಸಮರ್ಥರಾಗುತ್ತಾರೆ. ಶಿವನಿಗೊಂದು ಶಿವಾಲಯ ನಿರ್ಮಾಣವಾಗಬೇಕು ಅಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ. ಶಿವರಾಮ ಭಟ್ಟರ ಚಿತ್ತದಲ್ಲಿ ಹುಟ್ಟಿದ್ದಿರಬಹುದಾದ ಸಣ್ಣದೊಂದು ಸಂಕಲ್ಪವೇ ಊರಿನ ಎಲ್ಲರ ಎದೆಯಲ್ಲಿ ಹೊತ್ತಿಕೊಂಡು ಅದು ಸಾಕಾರವಾಗುವುದಕ್ಕೆ ಹೆಚ್ಚೂಕಡಿಮೆ ಅರವತ್ತೈದು ವರ್ಷ ಸಮಯ ತೆಗೆದುಕೊಳ್ಳುತ್ತದೆ! ಸಂಕಲ್ಪವೊಂದು ವಾಸ್ತವಕ್ಕೆ ಇಳಿಯಲು ಅರ್ಧ ಶತಮಾನ ತೆಗೆದುಕೊಂಡಿದ್ದರೂ ಶಿವಾಲಯ ಮಾತ್ರ ಶಾಸ್ತ್ರಶುದ್ಧವಾಗಿ ತಲೆ ಎತ್ತಿ ನಿಲ್ಲುತ್ತದೆ. ಇದೇ ಮೇ ತಿಂಗಳ (೨೦೧೭) ಆದಿಯಲ್ಲಿ, ಶಂಕರ ಪಂಚಮಿಯ ಮರುದಿನವೇ ಶಂಕರ ಪರಂಪರೆಯ ಅನುಪಮ ಉದಾಹರಣೆಯಂತಿರುವ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಶ್ರೀ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಧ್ಯದಲ್ಲಿ ದೇವಾಲಯದ, ಲಿಂಗದ, ಪುನಃಸ್ಥಾಪನೆಯಾಗುತ್ತದೆ. ಅಲ್ಲಿಗೆ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದುಬಂದ ವೃತ್ತವೊಂದರ ಬರವಣಿಗೆ ಪೂರ್ಣವಾದಂಥ ಭಾವ.

                                                          ******** ***** *******

ನಮ್ಮ ನಡುವಿನ ದೇವಾಲಯಗಳನ್ನು ನೋಡುವಾಗ ಸದಾ ನನಗನ್ನಿಸುವ ಒಂದು ಸಂಗತಿಯೆಂದರೆ, ಭಾರತದಲ್ಲಿ ಸನಾತನಧರ್ಮದ ಪರಿಧಿಯಲ್ಲಿನ ದೇವತಾ ಅನ್ನುವುದೇನಿದೆ, ಅದು ಮಾನವ ತಲೆಮಾರುಗಳೊಂದಿಗೆ ತಾನೂ ಒಂದು ಸಜೀವ ಸಂಗತಿಯಂತೆ ಹರಿದುಕೊಂಡು ಸಾಗಿದೆ ಅನ್ನುವುದು. ಗಾಡ್ ಅನ್ನುವ ಏಕದೇವೋಪಾಸಕರ ಕಲ್ಪನೆಗೂ ನಮ್ಮಲ್ಲಿಯ ದೇವತಾ ಅನ್ನುವ ಪರಿಕಲ್ಪನೆಗೂ ಮೂಲಭೂತ ವ್ಯತ್ಯಾಸವಿದೆ. ಗಾಡ್ ಎಂಬ ಪರಿಕಲ್ಪನೆಯನ್ನು ದೇವತಾ ಎಂಬ ಚಿಂತನೆಯೊಂದಿಗೆ ಇಡುತ್ತ ಹೋದಷ್ಟೂ ನಮ್ಮ ನೆಲದ ಅರಿವು ಗೊಂದಲಮಯವಾಗುತ್ತದೆ ಅನ್ನಿಸುತ್ತದೆ. ನಮ್ಮಲ್ಲಿ ಆ ಬಗೆಯ ಗಾಡ್ ಇಲ್ಲ. ಇಲ್ಲಿರುವುದೆಲ್ಲ ದೇವತಾ ಎಂಬ ವಿವಿಧ ಪ್ರಾಕೃತಿಕ ಶಕ್ತಿಗಳು. ಈ ದೇವತಾ ಅನ್ನುವುದು ಮಾನವನ ಮಿತಿಗೆ ಎಂದೆಂದಿಗೂ ನಿಲುಕದ ಪರಾಸಂಗತಿಯಲ್ಲ. ನಮ್ಮ ಪುರಾಣದ ಕಥೆಗಳು ಮತ್ತು ಕಾವ್ಯದ ಕಥೆಗಳಲ್ಲಿ ಮಾನವ ರಾಜರುಗಳು ದೇವತೆಗಳೊಂದಿಗೆ ಸೆಣಸಿದ್ದು, ಅವರ ಯುದ್ಧಗಳಲ್ಲಿ ಸಹಕರಿಸಿದ್ದು ಕಥೆಯ ರೂಪದಲ್ಲಿ ಧಾರಾಳವಾಗಿ ಸಿಗುತ್ತವೆ. ಈ ದೇವತೆಗಳ ಎತ್ತರಕ್ಕೆ ಏರಿದ ಮಾನವರ ಕಥೆಗಳೂ ನಮ್ಮಲ್ಲಿವೆ. ದೇವತೆಗಳು ನಿಗ್ರಹಾನುಗ್ರಹದ ಶಕ್ತಿಯನ್ನು ಹೊಂದಿದಂತೆಯೇ ನಮ್ಮಲ್ಲಿಯ ಹ್ಯೂಮನ್ ಬೀಯಿಂಗ್ಸ್ ಕೂಡ  ಕೆಲವೊಮ್ಮೆ ಆ ಶಕ್ತಿಯನ್ನು ಹೊಂದಿದ್ದಿದೆ. ಯಜ್ಞ ಯಾಗಾದಿಗಳೆಲ್ಲ ಮಾನವ ಮತ್ತು ದೇವತೆಗಳ ನಡುವಿನ ಒಡಂಬಡಿಕೆಗಳು. ವಿಕಾರವಿರದ ಲೋಕದಲ್ಲಿ ಬದುಕುವ ದೇವತೆಗಳಿಗೆ ಮೊಸರು, ಧಾನ್ಯಗಳು, ತುಪ್ಪ, ಇವೆಲ್ಲ ಅಲಭ್ಯ. ಅದಕ್ಕೇ ಅವುಗಳನ್ನು ಭೂಮಿಯ ಜೀವಗಳಾದ ನಾವು ಅಗ್ನಿಯ ಮೂಲಕ ಕಳಿಸಿಕೊಡುತ್ತೇವೆ. ಅದಕ್ಕೆ ಪ್ರತಿಯಾಗಿ ಮಳೆಯನ್ನೂ, ಪೋಷಕ ಶಕ್ತಿಯನ್ನೂ ದೇವತೆಗಳು ಮಾನವರಿಗೆ ಕೊಡಮಾಡುತ್ತಾರೆ ಎಂಬ ಪ್ರಕಲ್ಪನೆ ನಮ್ಮದು. ಹೆಚ್ಚೇಕೆ, ದೇವತೆಗಳನ್ನೇ ಶಪಿಸಿದ ಮಾನವರ ಉದಾಹರಣೆಗಳು ನಮ್ಮಲ್ಲಿವೆ. ವಿಷ್ಣುವಿನ ಹತ್ತು ಅವತಾರಗಳಿಗೂ ಭೂಮಿಯ ಜೀವವಾದ ಭೃಗು ಮಹರ್ಷಿಯ  ಶಾಪವೇ ಕಾರಣ ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಮಹಾಭಾರತದ ಶ್ರೀ ಕೃಷ್ಣ ಕೂಡ ಗಾಂಧಾರಿಯೆಂಬೋ ಹೆಣ್ಮಗಳು ಕೊಡಮಾಡಿದ ಶಾಪವನ್ನು ಶಿರಸಾ ಅಂಗೀಕರಿಸಿ ಅನುಭವಿಸುತ್ತಾನೆ. ಹಾಗಿದ್ದೂ ನಮಗ್ಯಾರಿಗೂ ನಮ್ಮ ದೇವತೆಗಳ ಶಕ್ತಿಯ ಮೇಲೆ ಅನುಮಾನಗಳಿಲ್ಲ, ಅವು ಅಂಡರ್ ಪವರ್ಡ್ ಅನ್ನಿಸಿಲ್ಲ. ಅಂದರೆ, ಸನಾತನ ಧರ್ಮದಲ್ಲಿ ಮಾನವ ಮತ್ತು ದೇವತೆಗಳ ಸಂಬಂಧಕ್ಕೆ ತೇಜಸ್ಸು ಆಧಾರವೇ ಹೊರತು ತಾನು ದೇವ ನೀನು ಮಾನವನೆಂಬ ತಾರತಮ್ಯವಲ್ಲ. ಹಾಗಾಗಿ ಬೇರೆ ಸಂಸ್ಕೃತಿಗಳ ಗಾಡ್ ಎಂಬ ಪರಿಕಲ್ಪನೆಯೊಂದಿಗೆ ನಮ್ಮ ದೇವತೆಯ ತುಲನೆ ಸರಿಯಾದುದೇ ಅಲ್ಲ. ನಮ್ಮಲ್ಲಿ ಗಾಡ್ ಇಲ್ಲ. ಹಾಗಿದ್ದೂ ನಮಗ್ಯಾರಿಗೂ ನಮ್ಮ ದೇವತೆಗಳ ಶಕ್ತಿಯ ಮೇಲೆ ಅನುಮಾನಗಳಿಲ್ಲ, ಅವು ಅಂಡರ್ ಪವರ್ಡ್ ಅನ್ನಿಸಿಲ್ಲ.


ಶಿವಾಲಯದ ಒಂದು ನೋಟ


ಇದೆಲ್ಲವನ್ನು ನಾನು ಕಥಿಸುತ್ತಿರುವುದಕ್ಕೆ ಕಾರಣವಿದೆ. ಈಗ ಶಿವಾಕಾರ ಗ್ರಾಮದಲ್ಲಿ ನೆಲೆಯಾದ ಶಿವನಿದ್ದಾನಲ್ಲ, ಆತ ಹೊಸದಾಗೇನೂ ಪ್ರತಿಷ್ಠೆಯಾದವನಲ್ಲ. ತುಂಬ ಹಿಂದಿನಿಂದಲೂ ಇಲ್ಲಿಯೇ ಇದ್ದವ ಅಂತ ಕಾಲಜ್ಞಾನದ ಶಾಸ್ತ್ರಗಳು ಅಭಿಪ್ರಾಯಪಟ್ಟಿವೆ. ಹಿಂದೊಮ್ಮೆ (ಎಷ್ಟು ಹಿಂದೆ ಎಂಬುದಕ್ಕೆ ಆಧಾರಗಳಿಲ್ಲ) ಈ ಶಿವ ಇಲ್ಲಿದ್ದು ನಿತ್ಯ ಪೂಜೆಗೊಂಡವನಾಗಿದ್ದ. ಕಾಲನಾಘಾತಕ್ಕೆ ಸಿಕ್ಕು ಆ ಶಿವಾಲಯ ನಾಶವಾಗಲಾಗಿ ಎಲ್ಲರ ನೆನಪಿನಿಂದ ಮರೆತು ಹೋಗಿದ್ದ. ಅದೊಂದು ಅರೆಬರೆ ಲಿಂಗ ಮತ್ತು ಅವನಿಗಾಗಿ ಇದ್ದ ಸಣ್ಣದೊಂದು ಕಲ್ಯಾಣಿಯನ್ನು ಬಿಟ್ಟರೆ ಉಳಿದೆಲ್ಲ ಕಾಲದ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು.

ಈ ಕಾಲಜ್ಞಾನಿಗಳ ಕಥನಕ್ಕೆ ಇಂಬುಕೊಡುವಂಥ ಇನ್ನೊಂದು ಜನಪದ ಕಥೆ ನನ್ನ ಊರಿನಲ್ಲಿ ಜಾರಿಯಲ್ಲಿದೆ. ಬಹಳ ಹಿಂದೆ ನನ್ನೂರು ಅರವತ್ತು ಮನೆಗಳ ಊರಾಗಿತ್ತಂತೆ. ನೂರಾರು ವರ್ಷಗಳ ಹಿಂದೆ ಅರವತ್ತು ಮನೆಗಳಿದ್ದುವೆಂದರೆ ದೊಡ್ಡ ಅಚ್ಚರಿ! ಯಾಕೆಂದರೆ ಇವತ್ತಿಗೂ ನನ್ನೂರಲ್ಲಿ ಅರವತ್ತು ಮನೆಗಳಿಲ್ಲ. ಇರಲಿ, ಅಂಥಾ ಊರಿಗೆ ಯತಿಯೊಬ್ಬ ಬರುತ್ತಾನೆ. ಆತನೋ ದೇಶಿಕ, ಪರ್ಯಟಕ, ಲೋಕ ಸಂಚಾರಿ, ಹೋದಲ್ಲೇ ಆಹಾರ, ನಿದ್ರೆ ಮತ್ತೆ ಯಾತ್ರೆ- ಈ ಬಗೆಯ ಬದುಕಿನವ. ’ಭವತಿ! ಭಿಕ್ಷಾಂ ದೇಹಿ’ ಅಂತ ಆತ ಗೃಹಸ್ಥರ ಮನೆಯೆದುರಿಗೆ ನಿಂತು ಯಾಚಿಸಿದಾಗ ಎಷ್ಟು ಅನ್ನ ಅವನ ಜೋಳಿಗೆಗೆ ಬಿತ್ತೋ ಅದುವೇ ಅವನ ಅಶನ. ಅಂಥಾ ಯತಿ ಒಮ್ಮೆ ಈ ಅರವತ್ತು ಮನೆಗಳ ಕೇರಿಯಲ್ಲಿ ಬುಡದಿಂದ ತುದಿಯವರೆಗೆ ಹೋಗಿ ಯಾಚಿಸಿದಾಗಲೂ ಒಂದೊಪ್ಪೊತ್ತಿಗಾಗುವಷ್ಟು ತುತ್ತು ಅವನ ಜೋಳಿಗೆ ಬೀಳದಿರಲಾಗಿ ಆತ ಹಸಿವೆಯಿಂದ ತೊಳಲುತ್ತಾನೆ. ಯತಿ, ಗುರು ಹಾಗೂ ತಂದೆ ತಾಯಿಯರು ಬಾಯ್ಬಿಟ್ಟು ಶಪಿಸದೆಯೂ ಅವರ ಮನಸಿಗೆ ನೋವುಂಟು ಮಾಡಿದಲ್ಲಿ ಅದುವೇ ಶಾಪವಾಗಿ ಪರಿಣಮಿಸುತ್ತದೆ ಅನ್ನುವ ನಂಬುಗೆಯಿದೆ. ಅದೇ ಪ್ರಕಾರ, ಈ ಯತಿಯ ಮನಸಿಗಾದ ನೋವು ಅಲ್ಲಿನ ಮನೆಗಳಿಗೆ ಶಾಪವಾಗಿ ಪರಿಣಮಿಸಿತಂತೆ. ಅದರ ಪರಿಣಾಮವೆಂಬಂತೆ ದಡಾರ ಎಂಬ ಮಹಾಮಾರಿ ರೋಗವೊಂದು ಅಡರಿ ಊರಿಗೂರೇ ಇನ್ನಿಲ್ಲದಂತೆ ನಾಶವಾಯಿತಂತೆ. ಆಗೆಲ್ಲ ಅಂಥ ರೋಗ ಬಂದರೆ ಸಾವು ಮಾತ್ರವೇ ಪರಿಹಾರವೆಂಬ ಪರಿಸ್ಥಿತಿಯಿತ್ತು, ಊರಿಗೂರು ನಾಶವಾಗುತ್ತಿತ್ತು. ಬಹುಶಃ ಆ ಊರಲ್ಲಿದ್ದ ಉಮಾಮಹೇಶ್ವರ ಅಂದಿನಿಂದ ಪೂಜೆಯಿಲ್ಲದವನಾದ. ಮನೆಗಳಿದ್ದ ಜಾಗದಲ್ಲಿ  ಕಾಡು ಬೆಳೆಯಿತು. ಶಿವಾಲಯ ಎಲ್ಲೋ ಮಣ್ಣಿನಡಿಗೆ ನಾಶವಾಯ್ತು, ಕಲ್ಯಾಣಿ ಅರೆ ಬರೆ ಮುಚ್ಚಿಕೊಂಡಿತು. ಊರಿನಲ್ಲಿದ್ದ ಶಿವ, ಕಾಡುಪಾಲಾದ. (ಈ ಕಥೆಯ ಮುಂದುವರಿದ ಭಾಗವಾಗಿ ಆ ಸನ್ಯಾಸಿಯು ದೇಹತ್ಯಾಗ ಮಾಡಿದನೆಂದು ನಂಬಲಾದ ಮಿಸ್ಟೀರಿಯಸ್ ಅನ್ನಬಹುದಾದ ತಾಣವೊಂದು ನಮ್ಮೂರಲ್ಲಿದೆ. ನದಿಯ ಅಂಚಿನಲ್ಲಿರುವ ಆ ಜಾಗಕ್ಕೆ ’ಸನ್ಯಾಸಿ ಪಾರು’ ಅಂತಲೇ ಹೆಸರು. ತೊಂಭತ್ತರ ದಶಕದಲ್ಲಿ ಆ ಜಾಗದಲ್ಲೇ ಸೇತುವೆ ಕಟ್ಟುವ ಸಂದರ್ಭದಲ್ಲಿ ಅರ್ಧ ಕಟ್ಟಿದ್ದ ಸೇತುವೆ ಮುರಿದು ಬಿದ್ದು, ಕೆಲವು ಸಾವುಗಳಾಗಿ.... ಕಥೆ ತುಂಬಾ ಇದೆ. )  


ಹಳೆಯ ಲಿಂಗಕ್ಕೆ ಅಂತಿಮ ಪೂಜೆ ಸಂದ ಕ್ಷಣ

ಆಮೇಲೆಷ್ಟು ಕಾಲ ಕಳೆಯಿತೋ, ಅಂತೂ ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ಈ ಊರಿಗೆ ಬಂದು ನೆಲೆಯಾದರು. ಮನೆಗಳನ್ನು, ಗದ್ದೆಗಳನ್ನು ನಿರ್ಮಿಸಿಕೊಂಡು, ಅನ್ನ ಬೆಳೆದು ಉಣ್ಣತೊಡಗಿದರು. ಬೇರೆಯದೇ ಮನೆಗಳು, ಹೊಸ ಊರು, ಹೊಸ ಬದುಕು... ಹಳೆಯ ಮನೆಗಳಿದ್ದ ಜಾಗದಲ್ಲೆಲ್ಲ ಬರಿಯ ಬೆಟ್ಟ. ಹಳೆಯ ಸಂಗತಿಗಳೆಲ್ಲ ಬರಿಯ ಕಥೆಗಳಲ್ಲಿ ಉಳಿದವು. ಆ ಹೊತ್ತಿಗೆ ಊರಿನಲ್ಲಿದ್ದ ಶಿವನೆಂಬಾತ ಮರೆತು ಹೋಗಿದ್ದ. ಊರಲ್ಲೊಂದು ಶಿವಾಲಯವಿತ್ತು ಎಂಬುದು ಅರಿವೇ ಇಲ್ಲದಂತೆ ಕಾಲ ಉರುಳಿತು. ಭಗ್ನಗೊಂಡಿದ್ದ ಆ ಪುರಾತನ ಶಿವಲಿಂಗ ಮತ್ತೆ ಮಾನವ ಸಂಪರ್ಕಕ್ಕೆ ಬರುವಾಗ ಇಪ್ಪತ್ತನೆಯ ಶತಮಾನದ ಅರ್ಧಕ್ಕರ್ಧ ಭಾಗ ಕಳೆದಿತ್ತು. ಈಗ್ಗೆ ಕೆಲವು ವರ್ಷಗಳ ಹಿಂದೆ ಶಿವಪ್ರಜ್ಞೆ ಊರ ಜನರಿಗೆಲ್ಲ ಜಾಗೃತವಾಗಿ ದೇವಾಲಯ ಕಟ್ಟಲೆಂದು ದೈವಜ್ಞರಲ್ಲಿ ಹೊರಟಾಗ ಎದುರಾದ ಮೊದಲ ಮಾತು – ಅಪೂರ್ಣ ಭಿಕ್ಷೆಯಿಂದಾದ ಗುರುಕ್ಷೋಭೆ ನಿಮ್ಮೂರಿಗೆ ಇದೆ ಎಂಬುದು. ಮೊನ್ನೆ ಮೊನ್ನೆ ದೈವಜ್ಞರಾಡಿದ ಗುರುಕ್ಷೋಭೆಯೆಂಬ ಮಾತೂ, ನನ್ನಜ್ಜಿಯ ತಲೆಮಾರಿನವರು ಹೇಳುತ್ತಿದ್ದ ಕಥೆಯಲ್ಲಿ ಬರುತ್ತಿದ್ದ ಯತಿಯ ಪಾತ್ರವೂ ಒಂದಕ್ಕೊಂದು ತಾಳೆಯಾಗಿ – ಎಲಾ ಕಾಲವೆ! ಅಂತ ನನ್ನ ತಲೆಮಾರಿನವರಿಗೆ ಅನ್ನಿಸಿದ್ದುಂಟು. ಆ ಯತಿಯ ಒಡಲಿನ ಅಗ್ನಿಯೇ ಊರನ್ನು ಸುಟ್ಟಿದ್ದು ನಿಜವಿರಬಹುದೆಂಬ ಭಾವ ಬಂದ ಕ್ಷಣ ಅದು. ಅದರ ಪರಿಹಾರಕ್ಕಾಗಿ ಶಾಂಕರ ಯತಿಯನ್ನೇ ಮತ್ತೆ ಕರೆಯಿಸಿ (ಸ್ವರ್ಣವಲ್ಲೀ ಪೀಠಾಧೀಶ್ವರರು) ಊರವರೆಲ್ಲ ಸೇರಿ ಪಾದಪೂಜೆಯನ್ನೂ ಗುರುಭಿಕ್ಷೆಯನ್ನೂ ಮಾಡಿ ದೇವಾಲಯದ ಕೈಂಕರ್ಯಕ್ಕೆ ತೊಡಗಲಾಯಿತು.
ಸ್ವರ್ಣವಲ್ಲೀ ಪೀಠಾಧೀಶರ ಅಮೃತ ಹಸ್ತಗಳಿಂದ ದೇವಾಲಯದ ಕಲಶಾರ್ಚನೆ.


ಒಂದಾನೊಂದು ಕಾಲದಲ್ಲಿ ಆ ದೇವಾಲಯ ಇದ್ದಿರಬಹುದಾದ ಸ್ಥಾನವನ್ನು ಗುರುತಿಸುವಿಕೆ, ಲಿಂಗದ ಅಳತೆಯ ನಿರ್ಧರಣ, ದೇವಾಲಯದ ಆಯ ಆಕಾರದ ಯೋಜನೆ, ಲಿಂಗ ನಿರ್ಮಾಣಕ್ಕೆ ಸ್ಥಪತಿಯ ನಿಯೋಜನೆ, ಸ್ಥಳ ಶುದ್ಧಿ, ಕಲ್ಯಾಣಿಯ ಪುನರುಜ್ಜೀವನ.... ಒಂದೇ ಎರಡೇ! ಎಲ್ಲವನ್ನೂ ಕ್ರಮವಾಗಿ ಪೂರೈಸಿ ಇವತ್ತು ಆಗಮೋಕ್ತ ಪ್ರಕಾರವಾಗಿ ಶಿವಾಲಯ ನಮ್ಮೆದುರಿಗಿದೆ. ಸುತ್ತ ಹತ್ತೂರಿನಲ್ಲಿ ಈ ಅಳತೆಯ ಬೃಹತ್ ಲಿಂಗ ಇರುವುದು ಇವತ್ತಿಗೆ ಶಿವಾಕಾರ ಗ್ರಾಮದಲ್ಲಿ ಮಾತ್ರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿಯನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿರುವ ಅತಿದೊಡ್ಡ ಶಿವಲಿಂಗ ಇದೇ ಎನ್ನುವ ಮಾತೂ ಕೇಳಿಬಂದಿದೆ. ಸರಿಸುಮಾರು ಐದು ಕ್ವಿಂಟಾಲ್ ತಾಮ್ರದ ತಗಡಿನ ಮೇಲ್ಛಾವಣಿ ಹೊದಿಕೆಯುಳ್ಳ ಅಪರೂಪದ ದೇವಾಲಯ ಇದು. ಬುಡದಿಂದ ತುದಿಯವರೆಗೆ ನಾಲ್ಕೂವರೆ ಅಡಿ ಎತ್ತರದ, ಸರಿ ಸುಮಾರು ೩೪ ಕ್ವಿಂಟಾಲ್ ತೂಕದ, ನಾಲ್ಕೂವರೆ ಅಡಿ ಚತುರ್ವರ್ಗದ ಪಾಣಿಪೀಠವುಳ್ಳ ಮಹಲ್ಲಿಂಗವನ್ನು ತನ್ನ ಗರ್ಭಗುಡಿಯಲ್ಲಿ ಆಗಮೋಕ್ತವಾಗಿ ಒಳಗೊಂಡಿದೆ ಈ ಶಿವಾಲಯ.

***** ****** *******

ಈಗ ಮತ್ತೆ ನಮ್ಮ ಸನಾತನ ಪರಂಪರೆಯ ದೇವತಾ ಪರಿಕಲ್ಪನೆಗೆ ಬರುವುದಾದರೆ ನನ್ನೂರಿನ ಶಿವ ಇನ್ನೊಂದು ಅಂಥ ದೇವತೆಯ ಉದಾಹರಣೆಯಾಗಿ ನಿಲ್ಲುತ್ತಾನೆ. ಆ ದೇವತೆಗೆ ತನ್ನದೇ ಆದ ಇರವಿದೆ, ಪ್ರಭಾವಲಯ ಇದೆ, ತನ್ನ ಇರವಿನ ಅರಿವಿದೆ, ಇಲ್ಲಿನ ಜನಗಳ ಜೊತೆಯಲ್ಲೇ ತಾನೊಂದಾಗಿ ಇದ್ದು ಪೂಜೆಗೊಳ್ಳುವ ಹಂಬಲವಿದೆ. ಭೂಮಿಯ ಹಿಡುವಳಿಯೊಂದಿಗೆ ನೆಲೆಯಾಗುವ ಮಾನವ ಕುಟುಂಬಗಳಲ್ಲಿ ತಲೆಮಾರುಗಳ ಕಲ್ಪನೆ ಮತ್ತು ತಲೆಮಾರುಗಳಿಂದ ಸಾಗಿಬರುವ ಆಚರಣೆಗಳೆಲ್ಲ ಇರುವಂತೆಯೇ ಊರಲ್ಲಿನ ದೇವತೆಗಳಿಗೂ ಒಂದು ಜೀವನ ಮತ್ತು ಪರಂಪರೆ ಇದೆ, ಕುಟುಂಬ ಇದೆ. ನೆಲೆನಿಂತ ಜನತೆಯೊಂದಿಗೆ ತಾನೂ ನೆಲೆನಿಂತು, ಅದೇ ಜನತೆ ಕಾಲದ ಘಾತಕ್ಕೆ ಸಿಕ್ಕು ಮಣ್ಣಾದಾಗ ತಾನೂ ನೆಲಕಚ್ಚಿ, ಆಮೇಲೆ ಕಾಲದ ಆಟದಲ್ಲಿ ಇನ್ನೊಂದು ಬೇರೆಯದೇ ಆದ ಜನಲೋಕ ಅದೇ ಮಣ್ಣಿನಲ್ಲಿ ನೆಲೆಯಾಗಿ ಸದೃಢವಾದಾಗ ಮತ್ತೆ ತನ್ನ ಉತ್ಥಾನಕ್ಕಾಗಿ ಎಲ್ಲರ ಮನಸಿನಲ್ಲಿ ಸಂಕಲ್ಪ ಹೊತ್ತಿಸಿ ತನಗೂ ಒಂದು ಮನೆ ಕಟ್ಟಿಸಿಕೊಳ್ಳುತ್ತದಲ್ಲ! ಸತಾತನ ಮನಸುಗಳಲ್ಲಿ ದೇವತೆ ಎಂಬ ಪರಿಕಲ್ಪನೆ ಎಷ್ಟೊಂದು ಅನೂಚಾನ ನೋಡಿ. ಅದೊಂದು ಬಗೆಯಲ್ಲಿ ಗಿಡವೊಂದರ ಬೀಜವಿದ್ದಂತೆ. ಗುಡುಗಿನ ಸದ್ದು ಕೇಳಿಸಿ, ಮಳೆ ಬಿದ್ದು, ಭೂಮಿಯೆಂಬೋ ಮಹಾಯೋನಿ ಪಕ್ವವಾಗುವುದನ್ನೇ ಕಾಯುತ್ತಿದ್ದು ತಾನು ಚಿಗುರೊಡೆಯುತ್ತದೆ. ಗಿಡವಾಗಿ, ಹೂ ಬಿಟ್ಟು ಕಾಯಾಗಿ, ಹಣ್ಣಾಗಿ ಮಾಗಿ, ಮತ್ತೆ ಬೀಜವಾಗಿ ಇನ್ನೊಂದು ಮಳೆ, ಇನ್ನೊಂದು ತೇವದ ನೆಲಕ್ಕಾಗಿ ಕಾಯಲು ಶುರು ಮಾಡಿಕೊಳ್ಳುತ್ತದೆ. ನಿರಂತರ ಹುಟ್ಟಿಗಾಗಿ ತವಿಸುವ ಆ ಬೀಜಕ್ಕೆ ಸಾವೆಲ್ಲಿ? ಹಾಗೆಯೇ ದೇವತೆ ಎಂಬ ಪರಿಕಲ್ಪನೆಯೂ ಸಹ. ಅದಕ್ಕೆ ಆಧಾರವೆಂಬಂತೆ  ಕಾಲಜ್ಞಾನಶಾಸ್ತ್ರ ಮತ್ತು ಆಗಮ ಶಾಸ್ತ್ರಗಳಿವೆ. ಇವನ್ನೆಲ್ಲ ಸಮಗ್ರವಾಗಿ ನೋಡುವಾಗ ಭಾರತದ ಮಣ್ಣಲ್ಲಿ ಅರಳಿದ ಸನಾತದ ಜೀವನ ಪದ್ಧತಿಯ ಹರಹಿನ ಬಗ್ಗೆ ಮನಸಲ್ಲಿ ಬೆರಗು ತಂತಾನೇ ಮೂಡುತ್ತದೆ. 
ಹಳೆಯ ಲಿಂಗವನ್ನು ಕಿತ್ತು ಅಂತಿಮ ಸ್ನಾನ ಮಾಡಿಸಿದ ಕ್ಷಣ.


ಹಳೆಯದಾದ ಭಗ್ನ ಲಿಂಗವನ್ನು ಬದಲಿಸಿ ಹೊಸ ಲಿಂಗದ ಪ್ರತಿಷ್ಠಾಪನೆಯ ಪೂರ್ವದಲ್ಲಿ ಆ ಹಳೆಯ ಲಿಂಗಕ್ಕೆ ಕೊನೆಯ ಸಂಸ್ಕಾರಗಳನ್ನು ಮಾಡಲಾಗುತ್ತದೆ. ನೂರಾರು ವರ್ಷಗಳ ಪೂಜೆಗೊಂಡಿದ್ದಿರಬಹುದಾದ ಆ ಲಿಂಗದಲ್ಲಿನ ಶಕ್ತಿಯನ್ನೆಲ್ಲ ಹೊಸ ಲಿಂಗಕ್ಕೆ ಆವಾಹನೆ ಮಾಡಲಾಗುತ್ತದೆ. ಅಷ್ಟಾದಮೇಲೆ ಅದು ಬರಿಯ ಕಲ್ಲು. ಬಿಳಿಯ ಬಟ್ಟೆ ಹೊದೆಸಿ ಮಲಗಿಸಿ, ಅಂತಿಮ ಸ್ನಾನ ಮಾಡಿಸಿ, ಸದಾ ನೀರು ಹರಿಯುವ ಜಾಗದಲ್ಲಿ ಜಲಸಮಾಧಿ ಮಾಡಲಾಗುತ್ತದೆ. ಹೀಗೆ ಜಲಸಮಾಧಿಯಾದ ಲಿಂಗ ನಾಳೆ ಯಾರಿಗಾದರೂ ನೀರಲ್ಲಿ ಸಿಕ್ಕರೂ ಅದಕ್ಕೆ ಮತ್ತೆ ಗುಡಿಕಟ್ಟಿಸುವ ಪ್ರಶ್ನೆಯೇ ಇಲ್ಲ. ಜಲ ಸಮಾಧಿಯೆಂದರೆ ಅದು ಕೊನೆ. ಹೀಗೆ ಮಾನವ ಸಮಾನವಾದ ಸಂಸ್ಕಾರಗಳನ್ನು ಒಂದು ಲಿಂಗಕ್ಕೂ ಮಾಡಲಾಗುತ್ತದೆ! ಇವನ್ನೆಲ್ಲ ನೋಡುವಾಗ ’ದೇವತಾ’ ಎಂಬುದನ್ನು ಸನಾತನ ಧರ್ಮವು ಅಳವಡಿಸಿಕೊಂಡ ಬಗೆಯ ಒಂದು ಝಲಕ್ ಸಿಕ್ಕೀತು. 


ಶೇವ್ಕಾರ ಊರಿನ ವಿಷಯದಲ್ಲಿ ಹೇಳುವುದಾದರೆ ದೇವಸ್ಥಾನ ಕಟ್ಟುವುದು ಎಂಬ ಪ್ರಕ್ರಿಯೆಯಲ್ಲಿ ಕಟ್ಟಲ್ಪಟ್ಟಿದ್ದು ದೇವಾಲಯ ಮಾತ್ರ ಅಲ್ಲ; ಬದಲಿಗೆ ದೂರವಾಗಿದ್ದ, ಮುರಿದಿದ್ದ ಊರಿನ ಮನಸುಗಳು, ಸಂಬಂಧಗಳು ಕಟ್ಟಲ್ಪಟ್ಟಿವೆ. ಊರಿನ ನೆಲದೊಂದಿಗೆ ಮಾಸುತ್ತಿದ್ದ ಬಂಧದ ಪುನರ್ನಿರ್ಮಾಣ ಸಹ ಹೌದು ಇದು. ಮಣ್ಣಿನಲ್ಲಿ ಒಟ್ಟೊಟ್ಟಿಗೆ ಆಟವಾಡಿ ಬಾಲ್ಯ ಕಳೆದಿದ್ದ ಊರಿನ ಎಷ್ಟೋ ಗಂಡ್ ಮಕ್ಕಳು, ಜೊತೆಯಾಗಿ ಐದು ಸೈದು ಕಲ್ಲಿನಾಟ ಆಡಿದ್ದ ಹೆಣ್ ಮಕ್ಕಳು ತಮ್ಮ ತಮ್ಮ ಬದುಕಿನ ಹರಿವಿಗೆ ಸಿಕ್ಕು ದೂರಾಗಿ ಒಬ್ಬರನ್ನೊಬ್ಬರು ಕಾಣದೆಯೂ ಬಹಳ ಕಾಲ ಸಂದಿತ್ತು. ಹಲವಾರು ಜನ ಮತ್ತೆ ದೇವಾಲಯದ ನೆಪದಲ್ಲಿ ಒಂದಾದರು. ಲಿಂಗದ ಪ್ರತಿಷ್ಠೆ ಮಾಡುವ ಸಂದರ್ಭದಲ್ಲಿ ಲಿಂಗದ ಅಡಿಯಲ್ಲಿ ಈ ಲೋಕದ ಅಮೂಲ್ಯ ವಸ್ತುಗಳನ್ನು ಹಾಕುವುದು ಪದ್ಧತಿ. ಊರಿನ ಪ್ರತಿಯೊಂದು ಮನೆಯಿಂದ ಅಷ್ಟೋ ಇಷ್ಟೋ ಬಂಗಾರ, ಬೆಳ್ಳಿ, ನವರತ್ನಗಳು ಅದಕ್ಕಾಗಿ ಒದಗಿ ಬಂದು ಶಿವನ ಕಾಲ ಬುಡಕ್ಕೆ ಸೇರಿಕೊಂಡಿವೆ. ಊರಿನ ಪ್ರತಿಯೊಂದು ಮನೆಯ ಜನಗಳಲ್ಲೂ ದೇವಾಲಯದ ಕುರಿತು ತಮ್ಮದೆಂಬ ಭಾವ ಮೂಡಿಸುವ ಕೈಂಕರ್ಯ ಇದು. ಒಟ್ಟಿನಲ್ಲಿ, ಸಕಾರಾತ್ಮಕ ಕಟ್ಟುವಿಕೆ ಎನ್ನುವುದು ಬರಿಯ ಹೊರಗಿನ, ಕಣ್ಣಿಗೆ ಕಾಣುವ ನಿರ್ಮಿತಿ ಮಾತ್ರವೇ ಅಲ್ಲ. ಅದು ಮನಸುಗಳ, ಆಶಾಭಾವದ, ಭರವಸೆಯ ಕಟ್ಟುವಿಕೆ ಕೂಡ.   
ಶ್ರೀ ಉಮಾಮಹೇಶ್ವರ ದೇವಾಲಯ, ಶಿವಾಕಾರಗ್ರಾಮ