Tuesday, July 14, 2015

ಮರೆಯಲಾಗದ ಸ್ವಪ್ನ.

ಇತ್ತೀಚೆಗೆ ಇನ್ನೊಂದು ಇಂಥಾ ಗ್ರಂಥವನ್ನು ಓದಿರಲಿಲ್ಲ. ಮಾನವ ಜೀವನದ ಗತಿವಿಧಿಯನ್ನು ಸಹಜ ಸರಳವಾಗಿ ಆಡಂಬರವಿಲ್ಲದೆ ಸಾಕ್ಷೀ ಭಾವದಿಂದೆಂಬಂತೆ ದಾಖಲಿಸುತ್ತ, ಯಾವ ತತ್ತ್ವ ಸಿದ್ಧಾಂತದ ಹೇರಿಕೆಯಿಲ್ಲದೆ ಪ್ರಕೃತಿಯ ಇನ್ನೊಂದು ರೂಪೋ ಎಂಬಂತೆ ನಿರೂಪಿತಗೊಳ್ಳುತ್ತ, ೪೭೦ ಪುಟಗಳಷ್ಟು ವಿಸ್ತಾರಕ್ಕೆ ಹಬ್ಬಿಕೊಂಡೂ ಓದುಗನನ್ನು ಹಿಡಿದಿಡುವಲ್ಲಿ ಸೋಲದ ಇನ್ಯಾವುದೇ ಕಾದಂಬರಿಯನ್ನು ನಾನು ಈ ದಿನಗಳಲ್ಲಿ ಓದಿದ್ದಿರಲಿಲ್ಲ.
ಗೋಪಾಲಕೃಷ್ಣ ಪೈ- ಬರೆದ ಸ್ವಪ್ನ ಸಾರಸ್ವತ.



ನಮ್ಮನ್ನು ಅತಿಯಾಗಿ ತಾಕುವ ಕೃತಿಗಳು ಅವುಗಳ ಕಥೆಯ ಹಂದರದಿಂದಾಗಿಯಲ್ಲದೆ, ಕಥೆಯ ನೆವದಲ್ಲಿ ನಡೆಯುವ ಬದುಕಿನ ಶೋಧದ ಕಾರಣಕ್ಕೆ ಶಕ್ತವಾಗಿರುತ್ತವೆ. ಸ್ವಪ್ನ ಸಾರಸ್ವತ ಕೃತಿ ಅಂಥಾ ಕೃತಿಗಳ ಸಾಲಿನಲ್ಲಿ ಮೊದಲಿಗೆ ನಿಲ್ಲಬಹುದಾದದ್ದು. ಕಥೆಯನ್ನು ಗಮನಿಸುವುದಾದರೆ ಸ್ವಪ್ನಸಾರಸ್ವತದ ಕಥೆ ಗೋಜಲು ಗೋಜಲು, ಸಂಬಂಧಗಳ ಕಾಡಿನಲ್ಲಿ ದಿಕ್ಕು ತಪ್ಪಿಸುವಂಥದು. ಆದರೆ, ಸಾರಸ್ವತ ಕುಲದ ವಲಸೆಯಿಂದಾರಂಭಿಸಿ ಕುಲವೇ ಇನ್ನೊಂದೆಡೆಗೆ ನೆಲೆಯಾದಬಳಿಕವೂ ಮತ್ತೆ ನೆಲೆ ಹುಡುಕುತ್ತಲೇ ಇರುವ ಕುಲದ ಒಳ ಅಂಗವಾದ ವ್ಯಕ್ತಿಗಳ, ಅಥವಾ ಕುಲದ ಅವಿನಾಶಿ ಪ್ರಜ್ಞೆಯ ಹರಿವನ್ನು ಅದು ಕಟ್ಟಿಕೊಡುವ ಬಗೆ ಅನನ್ಯವೇ ಸರಿ. ಬರೀ ಒಂದು ಕುಲದ ಕಥೆಯಷ್ಟೇ ಆಗಿರದೆ, ಆ ಹಿನ್ನೆಲೆಯಲ್ಲಿಯೇ ಕಾಲದ ಕಥೆಯೂ ಆಗುವ ಸ್ವಪ್ನ ಸಾರಸ್ವತವೆಂಬುದು ಅತ್ಯಂತ ಶಕ್ತಿಶಾಲಿಯಾದ ಕೃತಿಕಾರನ ಉತ್ಪನ್ನ.

ಗೋವೆಯ ಬ್ರಾಹ್ಮಣರನ್ನು ಹೊರಗಿನಿಂದ ಬಂದ ಕಿರಿಸ್ತಾನರು ಧರ್ಮದ ಅಮಲಿನಲ್ಲಿ ಒಕ್ಕಲೆಬ್ಬಿಸಿದರು, ಹಿಂಸಿಸಿದರು, ಅತ್ಯಾಚಾರ ಗೈದರು, ಕೊಂದರು, ತಿಂದರು..... ರಕ್ತ ಕುದಿಯುವಷ್ಟು ಬರೆದು ಮುಗಿಸಬಹುದಿತ್ತು. ಸಾರಸ್ವತರ ನಂಬುಗೆಗಳು, ಆಚಾರಗಳು, ಜೀವನ ಪದ್ಧತಿ, ಅದರ ಹೆಮ್ಮೆ... ಹೀಗೂ ಬರೆದು ಒಂದು ಕೃತಿ ಮುಗಿಯಬಹುದಿತ್ತು. ಸಮುದಾಯವೊಂದರ ನೋವು, ಸಂಭ್ರಮ, ಹತಾಸೆ, ಆಸೆ, ಸಾವು ಹುಟ್ಟುಗಳ ಕಥೆಯಾಗಿಯೂ ಸಾರಸ್ವತ ಮುಗಿಯಬಹುದಿತ್ತು. ಆದರೆ ಅದೆಲ್ಲವನ್ನೂ ಅಂಶತಃ ಒಳಗೊಳ್ಳುತ್ತ ಮಾನವ ಬದುಕಿನ ಸತ್ಯಗಳನ್ನು ಅರಿಯುವ ಪ್ರಯತ್ನವಿರುವ ಮಹತ್ತರ ಕೃತಿಯಾಗಿ ಸಾರಸ್ವತ ಹರಿಯುತ್ತಿದೆ. ಬದುಕನ್ನು ಸಮಗ್ರವಾಗಿ ನೋಡುವ ಸಾಮರ್ಥ್ಯವಿರುವವರಲ್ಲದೆ, ಬರಿಯ ಬರಹಗಾರನೊಬ್ಬ ಇಂಥಾ ಕೃತಿಯನ್ನು ಬರೆಯಲಾರ.

ನಾನು ಭಾವಿಸುವಂತೆ ಕಾದಂಬರಿಯ ಬೆನ್ನೆಲುಬಾದ ಅಂಶವೆಂದರೆ, ಯಾವೊಂದು ಸಂಗತಿಗೂ ಪೂರ್ತಿ ಅರ್ಪಿತವಾಗಿ ಅದರಲ್ಲಿಯೇ ಲೀನವಾಗದೆ ಅತ್ಯಂತ ದಕ್ಷವಾದ ’ಸ್ಥಿತಿ’ಯೊಂದನ್ನು ಕಂಡುಕೊಂಡುದು. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ಬರಿಯ ಅದೃಷ್ಟಕ್ಕಾಗಲೀ, ಯಾವುದೋ ಆದರ್ಶವನ್ನು ಕಾಣಿಸುವ ಒತ್ತಡಕ್ಕಾಗಲೀ, ಇತಿಹಾಸವೆಂಬುದು ಅನ್ಯಾಯ ಎಸಗಿದ ಪಾಪಿ ಎಂಬ ಭಾವಕ್ಕಾಗಲೀ, ಮಾನವಾತೀತವಾದ ಶಕ್ತಿಗಾಗಲೀ, ಅಥವಾ ಪ್ರಕೃತಿಯೆಂಬ ಚಿರಂತನ ಸತ್ಯಕ್ಕೇ ಆಗಲೀ ಕಾದಂಬರಿಯು ತನ್ನೆಲ್ಲ ಮೈ ಅರ್ಪಿಸಿ ಮೈಲಿಗೆಯಾಗಿಲ್ಲ. ಹಾಗಂತ ಅದೆಲ್ಲವನ್ನೂ ಬಿಟ್ಟ ಸೆಕ್ಯುಲರ್ ಕೃತಿಯೂ ಆಗದೆ, ಎಲ್ಲವನ್ನೂ ಹದವರಿತು ಬಳಸಿಕೊಂಡು ’ಬೆನ್ನು ಹುರಿ ಇರುವ” ಅಪರೂಪದ ಕೃತಿಯಾಗಿ ಹೊಮ್ಮಿದೆ. ಯಾವುದೋ ಒಂದು ಸಂಗತಿಗೆ ಅರ್ಪಿತವಾಗುವ ಕೃತಿ- ಅದು ದೇಶಭಕ್ತಿ, ಮಾನವ ಪ್ರೇಮ, ದೈವಿಕತೆ, ನಂಬುಗೆ, ಆಚಾರ, ಇತಿಹಾಸ, ಕರ್ಮ ಸಿದ್ಧಾಂತ ಹೀಗೆ ಯಾವುದೇ ಇರಬಹುದು- ಅಷ್ಟರಮಟ್ಟಿಗೆ ಬದುಕಿನ ಸಮಗ್ರತೆಯನ್ನು ಚಿತ್ರಿಸುವಲ್ಲಿ ಹಿಂದೆ ಉಳಿಯುತ್ತದೆ. ರಸೋನ್ನತಿಯನ್ನು ಸಾಧಿಸುವುದಕ್ಕೆ ಹಾಗೂಂದು ಆನಿಕೆಯನ್ನು ಅರಸುವುದು ಅನಿವಾರ್ಯವೂ ಇರಬಹುದೇನೋ. ಹಾಗಿದ್ದೂ, ತತ್ತ್ವದ ಹುಡುಕಿಗೆ ಹೊರಟ ಕೃತಿಯೊಂದು ರಸದ ಗುಲಾಮಿತನಕ್ಕೆ ಬೀಳದೆ ಇರುವುದೇ ಹೆಚ್ಚು ಪ್ರಶಸ್ತವಾದ್ದು. ಸ್ವಪ್ನ ಸಾರಸ್ವತ ಆ ದಿಶೆಯಲ್ಲಿ ವಿಜೃಂಭಿಸುವ ಕೃತಿ. ಯಾವುದರ ಹೆಗಲ ಮೇಲೆಯೂ ಅತಿಯಾದ ಭಾರ ಹಾಕದೆ ತಾನೇ ತಾನಾಗಿ ಉಳಿಯುವ ಶಕ್ತಿ ಇದರಲ್ಲಿದೆ.

ಇತಿಹಾಸವನ್ನು, ಪ್ರಜ್ಞೆಯ ಒಂದು ತುದಿಯಿಂದ ಇನ್ನೊಂದನ್ನು, ನೆನಪನ್ನು, ಕಥೆಯುದ್ದಕ್ಕೂ ನೇಯ್ದುಕೊಂಡು ಹೋಗುವ ಅದ್ಭುತವಾದ ಪಾತ್ರವೊಂದಿದೆ; ನಾಗ್ಡೋ ಬೇತಾಳ ಎಂಬ ವಿಲಕ್ಷಣ ಪಾತ್ರ ಅದು. ಕಾದಂಬರಿಯ ಯಾವುದೇ ಭಾಗದಲ್ಲಿ ಚಿತ್ರಿತವಾದ ಯಾವೆಲ್ಲ ಬಗೆಯ ದೇವರ ಪರಿಕಲ್ಪನೆಗಿಂತಲೂ ಈ ನಾಗ್ಡೋ ಬೇತಾಳನೆಂಬೋ ಪಾತ್ರ, ಐಹಿಕ ಪಾರಲೌಕಿಕ ಎರಡೂ ಅರ್ಥದಲ್ಲಿ ಶಕ್ತನೆಂದು ನನಗೆ ಅನ್ನಿಸಿತು. ಒಂದರ್ಥದಲ್ಲಿ ಈ ಪಾತ್ರ ಲೌಕಿಕ ಮತ್ತು ಅಲೌಕಿಕಗಳನ್ನು ಬೆಸೆಯುವ ಅಪೂರ್ವ ಕೊಂಡಿಯೂ ಹೌದು. ಅವನಲ್ಲಿ ಬಹುವಾಗಿ ನನ್ನನ್ನು ಸೆಳೆದ ಗುಣವೆಂದರೆ ಆ ಪಾತ್ರದ ಅಪ್ಡೇಟಾಗುವಿಕೆ. ಸಾವೇ ಇರದಂತೆ ಬದುಕಿ ತಲೆ ತಲಾಂತರದ ಪರಂಪರೆಯನ್ನು ತಲೆಮಾರುಗಳಿಗೆ ಸಾಗಿಸುತ್ತ ಪರಂಪರೆಯ ರಕ್ಷಣೆಗೆಂಬಂತೆ ಇರುವ ಆ ಮೂರ್ತಿ, ಇದುವರೆಗೆ ಚಿತ್ರಿತವಾದ ಅತ್ಯಂತ ಪ್ರಸ್ತುತ, ಅಂಗೀಕಾರಾರ್ಹ, ವಾಸ್ತವ ಚಿಂತನೆಯ ದೇವರು! ಶತಮಾನಗಳ ಹಿಂದಿನ ನಿಯಮಗಳ ಕಟ್ಟನ್ನು, ಚಿಂತನೆಯ ಕಟ್ಟನ್ನು ಯಥಾವತ್ತಾಗಿ ಇಂದಿಗೆ ಅನ್ವಯಿಸುವಂತೆ ಹೇರುವ ಕಾಲ್ಪನಿಕ ದೇವರುಗಳಿಗಿಂತ, ಅತ್ಯಂತ ವಾಸ್ತವ ಚಿಂತನೆಯ ನಾಗ್ಡೋ ಬೇತಾಳನು ಹೊಳೆ ಹೊಳೆಯುವ ಮೂರ್ತಿಯಾಗಿ ನನಗೆ ಕಾಣಿಸುತ್ತಾನೆ. ನಿಜವೆಂದರೆ ಕಾದಂಬರಿಯುದ್ದಕ್ಕೂ ಈ ಪಾತ್ರವು ತುಂಬಿದಷ್ಟು ಬೆರಗನ್ನು ಇನ್ಯಾವುದೂ ನನಗೆ ತುಂಬಿಲ್ಲ. ಬೆರಗನ್ನಷ್ಟೇ ಅಲ್ಲ, ಜಿಜ್ಞಾಸೆಯನ್ನೂ, ಚಿಂತನೆಯ ಕಿಡಿಯನ್ನೂ ಬಹುವಾಗಿ ಹೊತ್ತಿಸಿದ ಪಾತ್ರ ನಾಗ್ಡೋ ಬೇತಾಳನದು. ಇಂಥಾ ಪಾತ್ರದ ಪರಿಕಲ್ಪನೆಯೂ, ಹದವರಿತ ಅದರ ದುಡಿಮೆಯೂ, ಕೃತಿಕಾರನಿಗೆ ಒಲಿದುದರ ಬಗ್ಗೆ ನನ್ನಲ್ಲಿ ತೀರದ ಅಚ್ಚರಿಯಿದೆ.

ಚಿರಂತನವಾದ ಚಿಂತನೆಯನ್ನು ತನ್ನೊಳಗೆ ತೆಗೆದುಕೊಳ್ಳುವುದು ಸ್ವಲ್ಪ ಶ್ರಮಪಟ್ಟರೆ ಯಾರಿಗಾದರೂ ಸಾಧ್ಯವಾಗಬಹುದಾದ ಕೆಲಸ. ಅದರೆ ಕಾಲದ ಜೊತೆಯಲ್ಲಿ ಅದನ್ನು ನಿಭಾಯಿಸುವುದಿದೆಯಲ್ಲ, ಅದು ತುಂಬಾ ಮಹತ್ತರವಾದ ಪಕ್ವತೆಯನ್ನು ಬೇಡುವ ತಪಸ್ಸು. ’ಜೀವನ ನೀರ ಮೇಲಣ ಗುಳ್ಳೆ, ದೇಹ ನಶ್ವರ..’ ಎಂಬೆಲ್ಲಬಗೆಯ ವೇದಾಂತ ಸಾರಾಂಶವನ್ನು ಮಿದುಳಿಗೆ ಉಣ್ಣಿಸುವುದು ತುಂಬ ಸರಳವಾದ ಕ್ರಿಯೆ. ಅದೆಲ್ಲವನ್ನು ತಿಳಿದೂ ಬದುಕನ್ನು ಪ್ರೀತಿಸುವುದು, ನಿಭಾಯಿಸುವುದು, ಇವತ್ತಿಗಾಗಿ ಬದುಕುವುದು, ಎಲ್ಲಕ್ಕಿಂತ ಹೆಚ್ಚಾಗಿ ಸಹಜವಾಗಿ ಬದುಕುವುದು ಬಹಳ ದೊಡ್ಡದಾದ ಸಂಗತಿ. ಶತಂಜೀವನಾದ ಒಬ್ಬನಿಗೆ ಜೀವ ಹಿಡಿದಿಕೊಳ್ಳುವುದಕ್ಕೆ ಬೇಕಾದ ಶಕ್ತಿಗಿಂತಲೂ ದೊಡ್ಡ ಮಟ್ಟದ ಶಕ್ತಿ, ಕಾಲವನ್ನು ಅರ್ಥೈಸಿಕೊಂಡು ಅದಕ್ಕನುಗುಣವಾಗಿ ಸ್ಪಂದಿಸುವಾಗ ಇರಬೇಕಾದೀತು ಎಂಬುದು ನನ್ನ ಗ್ರಹಿಕೆ. ಬಹುಶಃ ಮನುಷ್ಯ ಚಿರಂಜೀವಿಯಾದರೆ ಆತ ಹುಚ್ಚು ಹಿಡಿದು ಸಾಯುತ್ತಾನೆ, ಯಾಕೆಂದರೆ ಕಾಲದ ಜೊತೆಗೆ ಅಪ್ಡೇಟಾಗುವ ನಮ್ಮ ಮನಸಿನ ಶಕ್ತಿ ಬಹಳೇ ನಿಯಮಿತವಾದದ್ದು. ನಾಗ್ಡೋ ಬೇತಾಳ ಎಂಬ ನಗ್ನ ಚಿರಂಜೀವಿ ಸನ್ಯಾಸಿ ಈ ಎಲ್ಲ ಕಾರಣಕ್ಕೆ ನನ್ನನ್ನು ಬಹಳವಾಗಿ ಕಾಡಿದ ಪಾತ್ರ. ಕೃತಿಯನ್ನೋದಿ ಮುಗಿದ ಈ ಹೊತ್ತಿಗೂ ನನ್ನಲ್ಲಿ ಆತ ಸಂಚರಿಸುತ್ತಲೇ ಇದ್ದಾನೆ.

ಉಳಿದ ವ್ಯಕ್ತಿ ಪಾತ್ರಗಳು ಕಥೆಯ ಒಳ ಹಂದರವನ್ನು ತುಂಬಿವೆ. ಗೋವೆಯ ಪರಿಸರ, ಕರ್ನಾಟಕದ ಕರಾವಳಿಯ ವಿವರಣೆ, ಜನಸಾಮಾನ್ಯರ ಬದುಕು, ರಾಜಕೀಯ ಪರಿಸ್ಥಿತಿಗಳು, ಭೂಗೋಳದ ಅರಿವು, ಬದುಕಿನ ಶೈಲಿ- ಎಲ್ಲವೂ ಭರಪೂರ ಮಾಹಿತಿಯ ಕಣಜ. ವ್ಯಕ್ತಿಪಾತ್ರಗಳು ಕೆಲವೊಮ್ಮೆ ಏಕತಾನತೆಯನ್ನೂ ತರುತ್ತವೆ. ಕಥೆಯನ್ನು ಬೆಳೆಸದೆ ತಾವೇ ಬೆಳೆಯುವ ಅವುಗಳ ರೀತಿಗೆ ಸಿಟ್ಟೂ ಬರುತ್ತದೆ! ಹಾಗಿದ್ದೂ ಆ ಮಾಹಿತಿಗಾ ಕೃತಿಕಾರ ಪಟ್ಟಿರಬಹುದಾದ ಶ್ರಮ ಸಣ್ಣದಲ್ಲ.   

ಗಾಢವಾಗಿ ಓದುವ ಹುಮ್ಮಸ್ಸಿರುವ ಯಾರೇ ಆದರೂ ಓದಬೇಕಾದ ಗ್ರಂಥ. ಚೂರುಪಾರು ಲೇಖನಗಳು, ವಿಕಿ ಪುಟದ ಮಾಹಿತಿಗಳು, ವಾಟ್ಸಾಪಿನಲ್ಲಿ ಫಾರ್ವರ್ಡ್ ಮಾಡಿದ ತತ್ತ್ವೋಪದೇಶ, ಫೇಸ್ಬುಕ್ಕಿನ ಗೋಡೆ ಗೀಚು, ಬ್ಲಾಗಿನ ಇಣುಕುಗಳು- ಎಲ್ಲವೂ ಆ ಕ್ಷಣಕ್ಕೆ ಚಂದ. ಆದರೆ ಮನಸಲ್ಲಿ ಉಳಿಯುವಂಥ, ಬದುಕಿನೊಡನೆ ಹೆಜ್ಜೆಹಾಕುವ ಓದು ಬೇಕೆಂದರೆ ಸಾರಸ್ವತದಂಥಾ ಕೃತಿಯನ್ನೋದಬೇಕು.

ನನ್ನನು ಈ ಕೃತಿಯನ್ನೋದಿಸಿದ ಎಲ್ಲ ಸಹೃದಯರಿಗೆ ಮನದುಂಬಿದ ಧನ್ಯವಾದ J