Tuesday, May 31, 2016

ಮೋದಿ ಜೀ...



’ಕಾಲಾ ಧನ್ ಇಸ್ ಚುನಾವ್ ಕಿ ಮುದ್ದಾ ಹೆ ಯಾ ನಹಿ?’ ಅಂತ ಜೋರು ಜೋರಾಗಿ ಭಾಷಣ ಮಾಡುತ್ತಲೇ ವಿಜಯದ ನಗೆ ಬೀರಿದ್ದು ನಿಮ್ಮ ಸಾರಥ್ಯದ ಎನ್ಡಿಏ. ಅಚ್ಛೇ ದಿನ್ ಬಗ್ಗೆ ನೀವು ಅದೆಷ್ಟೇ ಭಾಷಣ ಕೊಟ್ಟಿದ್ದರೂ ಅದೆಲ್ಲವನ್ನೂ ನಂಬಿ ವೋಟ್ ಮಾಡುವಷ್ಟು ನಮ್ಮ ತಲೆಮಾರು ಮುಗ್ಧವಾಗಿರಲಿಲ್ಲ. ಹಾಗಂತ ತೀರಾ ನಿಮ್ಮ ಸರಕಾರ ತೆರಿಗೆ ಹೆಸರಲ್ಲಿ ಲೂಟಿ ಮಾಡಬಹುದು ಅಂತಲೂ ಅಂದುಕೊಂಡಿರಲಿಲ್ಲ.
ಈ ದೇಶದ ಮಧ್ಯಮವರ್ಗದವರು ಕಾಲಾ ಧನ್ ವಾಪಸ್ ತರುವುದರಬಗ್ಗೆ ನೀವು ಮಾತಾಡಿದಾಗೆಲ್ಲ ನಮ್ಮ ಖಾತೆಗೆ ಲಕ್ಷ ಲಕ್ಷ ಹಣ ಬಂದುಬೀಳುವ ಕನಸು ಕಂಡ ಜನ ಆಗಿರಲಿಲ್ಲ. ಆದರೆ ಕಾಲಾ ಧನ್ ಬಗ್ಗೆ ಭಾರೀ ಮಾತಾಡುವ ಮೋದಿ ಕಾಲಾ ಧನ್ ಪ್ರಮಾಣವೇ ಕಡಿಮೆಯಾಗುವಂತೆ ಮಾಡಿಯಾರೆಂಬ ನಂಬುಗೆಯಿತ್ತು. ಇನ್ನು ನಾವ್ಯಾವತ್ತೂ ಲಕ್ಷುರಿಯ ಕನಸು ಕಂಡವರಲ್ಲವಾದ್ದರಿಂದ ಅಚ್ಛೇ ದಿನ್ ಅಂದರೆ ಲಕ್ಷುರಿ ಬಾರತ ಅಂತಲೂ ಅಂದುಕೊಂಡಿರಲಿಲ್ಲ. ನಿಮ್ಮ ವರಸೆ ನಮ್ಮಲ್ಲೇನೋ ಭರವಸೆ ತುಂಬಿದ್ದು ನಿಜ.

ಮನುಷ್ಯನ ಕೈಲಿ ನಗದು ರೂಪದಲ್ಲಿ ಹಣ ಓಡಾಡದ ಹೊರತು ಕಪ್ಪು ಹಣ ಉತ್ಪತ್ತಿಯಾಗುವುದೇ ಸಾಧ್ಯವಿಲ್ಲದ್ದರಿಂದ, ಕಪ್ಪು ಹಣದ ಬಗ್ಗೆ ಭಾರೀ ಮಾತಾಡಿದ್ದ ನಿಮ್ಮ ಸರಕಾರ ಆನ್ ಲೈನ್ ಟ್ರಾನ್ಸಾಕ್ಷನ್ ಗಳ ಮೇಲೆ ಸೇವಾ ತೆರಿಗೆಯನ್ನು ಮತ್ತು ಪ್ರೊಸೆಸಿಂಗ್ ಫೀಯನ್ನು ಕಡಿಮೆ ಮಾಡಬಹುದು ಅಂದುಕೊಂಡಿದ್ದೆವು. ಅಂದರೆ ಆನ್ಲೈನ್ ವ್ಯವಹಾರಗಳಿಗೆ ಉತ್ತೇಜನ ಕೊಡುವ ಪ್ರಯತ್ನ ಮಾಡುತ್ತೀರಿ ಅಂತ ನಮ್ಮ ನಿರೀಕ್ಷೆಯಾಗಿತ್ತು. ಹಾಗಂತ ನಮ್ಮ ಫ್ಲಿಪ್ ಕಾರ್ಟು, ಅಮೇಝಾನ್ ಎಲ್ಲಾ ನಿಮ್ಮ ಮಾತು ಕೇಳಿ ಸೇವಾ ತೆರಿಗೆ ಇಲ್ಲದೇ ಕೆಲಸ ಮಾಡುತ್ತವೆ ಅಂತ ಅಂತೇನೂ ಬಯಸಿರಲಿಲ್ಲ. ಅವೆಲ್ಲ ಖಾಸಗಿ ಸಂಸ್ಥೆಗಳು ನಿಮ್ಮ ಮಾತು ಕೇಳಲಿಕ್ಕೆ ಕಾನೂನು ಮೂಲಕ ಬಿಗಿ ಮಾಡಬೇಕಾಗುತ್ತದೆ, ಮತ್ತದಕ್ಕೆ ಸಮಯ ಬೇಕಾಗುತ್ತದೆ ಅನ್ನುವುದೂ ಗೊತ್ತಿದೆ. ಅದರೆ ಭಾರತೀಯ ರೈಲ್ವೇ ಅಂತೊಂದು ಮಹಾನ್ ವ್ಯವಸ್ಥೆ ಉಂಟಲ್ಲ, ಅದು ನಿಮ್ಮಡಿಯಲ್ಲೇ ಇದೆ ಅನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಟಿಕೇಟ್ ಮೇಲೆ, ಮೋದಿ ಜೀ, ಪ್ರತಿ ಟಿಕೆಟ್ ಮೇಲೆ ಆನ್ ಲೈನ್ ಬುಕಿಂಗ್ ಮಾಡುವಾಗ ೨೨.೯ (ಇಪ್ಪತ್ಮೂರು ಅಂತಿಟ್ಟುಕೊಳ್ಳಿ) ಸೇವಾ ತೆರಿಗೆ ತೆಗೆದುಕೊಳ್ಳುತ್ತದೆ ರೈಲ್ವೆ ಇಲಾಖೆ! ಅಷ್ಟಕ್ಕೇ ಮುಗಿಯಲಿಲ್ಲ, ಬ್ಯಾಂಕಿನ ಮೂಲಕ ಹಣ ತುಂಬಬೇಕು ತಾನೆ, ಮತ್ತೆ ಅದಕ್ಕೂ ಸೇವಾತೆರಿಗೆ ತೆರಬೇಕು. ಪ್ರತಿ ಟ್ರಾನ್ಸಾಕ್ಷನ್ನಿಗೆ ೧೦ ರೂಪಾಯಿ. ಅಲ್ಲಿಗೆ ಸೇವೆಯ ಹೆಸರಲ್ಲಿ ಮೂವತ್ಮೂರ್ರುಪಾಯ್ ತಣ್ಣಗೆ ಕರಗೋಗಿರುತ್ತದೆ. ಮೋದಿ ಜೀ, ಆನ್ಲೈನ್ ಬುಕಿಂಗ್ ಅನ್ನುವುದು ಗ್ರಾಹಕನಿಗೆ ವರದಾನದಂತಿದ್ದರೂ ಇಷ್ಟೆಲ್ಲ ತೆರಿಗೆ ತೆರುವಷ್ಟು ಜನ ಗಟ್ಟಿಯಿದ್ದಾರೆ ಅಂದುಕೊಳ್ಳಬೇಡಿ. ಅದಲ್ಲದೆ ಆನ್ ಲೈನ್ ವ್ಯವಹಾರವನ್ನು ಹೆಚ್ಚಿಸಬೇಕೆಂದು ಬಯಸುವುದಾದರಂತೂ ಇದು ಸಹಿಸಲಸಾಧ್ಯ ತೆರಿಗೆ ಪದ್ಧತಿ. ಕರ್ನಾಟಕ ಸರಕಾರದ ಸಾರಿಗೆ ಕೂಡ ನಿಮ್ಮನ್ನೇ ಅನುಸರಿಸಿ ಮೂವತ್ ರೂಪಾಯಿ ತೆರಿಗೆ ಪಾವತಿಸಿಕೊಳ್ಳುತ್ತಾನೆ, ಬ್ಯಾಂಕಿನ ಸೇವೆಗೆ ೧೦ ರೂಪಾಯಿ, ಅಲ್ಲಿಗೆ ಹೆಚ್ಚಿಗೆ ೪೦ ರೂಪಾಯಿ ಕೊಟ್ಟಂತಾಗುತ್ತದೆ. ಅಚ್ಛೇ ದಿನ್ ಮೆನೂ ಇಷ್ಟೆಲ್ಲ ತುಟ್ಟಿ ಇದೆಯಾ ಮೋದಿ ಜೀ!?

ದೇಶದ್ದೇ ಕಾರ್ಡ್ ವ್ಯವಸ್ಥೆ ’ರೂಪೇ’ ಬಂದಾಗ ತುಂಬಾ ಖುಷಿ ಪಟ್ಟಿದ್ದೆವು; ಅದರಲ್ಲಿ ಸೇವಾ ತೆರಿಗೆ ಪ್ರಮಾಣ ಕಡಿಮೆ ಇರಬಹುದೇನೋ ಅಂತ. ನಿಮ್ಮಂಥ ನೀವೇ ಪ್ರಧಾನಿ ಆದಾಗ್ಯೂ ರೂಪೇ ಯನ್ನು ಜನಪ್ರಿಯ ಮಾಡುವಲ್ಲಿ ನೀವು ಯಶಸ್ವಿಯಾಗಿಲ್ಲ.

ನೀವು ಸ್ವಚ್ಛಭಾರತ್ ಸೆಸ್ ಹೆಸರಲ್ಲಿ ಸೇವಾ ತೆರಿಗೆಯನ್ನು ಶೇ.೧೪ಕ್ಕೆ ಏರಿಸಿದಾಗ ಜಿ ಎಸ್ ಟಿ ಸಧ್ಯದಲ್ಲೇ ಬರುತ್ತದೆ ಅಂದಿರಿ. ಆಗಲೂ ನಾವು ಮಧ್ಯಮ ವರ್ಗದವರು ಸರಿ, ಜಿ ಎಸ್ ಟಿ ಬಂದರೆ ಸರಿಯಾದೀತೆಂದು ಸುಮ್ಮನಾದೆವು. ಎರಡು ಅಧಿವೇಶನ ನಡೆದರೂ ಜಿ ಎಸ್ ಟಿ ತರಲು ತಮ್ಮಿಂದಾಗಲಿಲ್ಲ. ಪ್ರತಿಪಕ್ಷದವರು ಗಲಾಟೆ ಮಾಡಿದರು ಅನ್ನುವ ಕಥೆ ಬೇಡ, ಸರಕಾರ ನಿಮ್ಮ ಕೈಲಿದ್ದುದರಿಂದ ಜಿ ಎಸ್ ಟಿ ತರದೇ ಇರುವ ಅಪಖ್ಯಾತಿ ತಮ್ಮದಾಗುತ್ತದೆಯೇ ವಿನಾ ಪ್ರತಿಪಕ್ಷದ್ದಲ್ಲ. ಇದೀಗ ಸೇವಾ ತೆರಿಗೆ ೧೫ ಪರ್ಸೆಂಟ್ ಅನ್ನುತ್ತಿದ್ದೀರಿ. ಯಾರ ಹಿತಕ್ಕೆ ಇದೆಲ್ಲ? ನಿಮ್ಮ ಭಕ್ತರು ಇದನ್ನೆಲ್ಲವನ್ನೂ ಪಾಸಿಟಿವ್ ಆಗಿ ವ್ಯಾಖ್ಯಾನ ಮಾಡುತ್ತಾರೆ. ಆದರೆ ಜನ ಸಾಮಾನ್ಯನಿಗೆ ವ್ಯಾಖ್ಯಾನ ಬೇಕಿಲ್ಲ.

ಮೋದಿ ಜೀ, ನೀವು ಭಯೋತ್ಪಾದಕರ ವಿರುದ್ಧ ತೊಡೆ ತಟ್ಟಿದ್ದು, ನಾಲ್ಕಾರು ದೇಶ ಸುತ್ತಿ ಅಲ್ಲಿ ಜನಗಳನ್ನು ಸೇರಿಸಿ ಭಾಷಣ ಮಾಡಿದ್ದು, ನೀವು ಹೋದಲ್ಲೆಲ್ಲ ನಿಮಗೆ ಭೋಪರಾಕ್ ದೊರೆತಿದ್ದು, ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದು, ತಿಂಗಳಿಗೊಮ್ಮೆ ಮನಸು ತೆರೆದು ಮಾತಾಡೋದು ಇದೆಲ್ಲ ಇದೆಯಲ್ಲ- ಜನ ಸಾಮಾನ್ಯನ ಬದುಕನ್ನು ತೆರಿಗೆ ಹೆಸರಲ್ಲಿ ದುರ್ಭರ ಮಾಡುತ್ತ ಸಾಗಿದಲ್ಲಿ ಇದೆಲ್ಲ ನಮಗೆ ಮನರಂಜನೆಯ ಸರಕಷ್ಟೇ. ನೀವು ಯಾರ ಕೈ ಕುಲುಕಿದರೂ ಜನ ಸಾಮಾನ್ಯನ ಬದುಕು ಬದಲಾಗದಿದ್ದಲ್ಲಿ ನಿಮ್ಮ ಸರಕಾರವನ್ನು ಮೆಚ್ಚುವ ಮನಸು ನಮಗುಳಿಯದು/ ಉಳಿಯಬೇಕಿಲ್ಲ ಕೂಡ.