Friday, February 27, 2015

ಸಂಸ್ಕೃತ ವ್ಯಾಕರಣ;  ಒಂದು ಸಣ್ಣ ಪರಿಚಯ. 
ಭಾಗ ಒಂದು.




 ವ್ಯಾಕರಣದಲ್ಲಿ ಪ್ರವೇಶ ಸಾಧ್ಯವಾಗುವುದು ಮಿದುಳಿನ ಮಟ್ಟಿಗೆ ಒಂದು ಅಸಾಧಾರಣ ಸಂಭವ. ’ಪದಗಳ ಸಾಧುತ್ವವನ್ನಲ್ಲವೆ ಹೇಳಲು ಹೂರಟಿರುವುದು, ಅದಕ್ಯಾಕೆ ಅಷ್ಟು ಕಷ್ಟಪಡಬೇಕು?’- ಎನ್ನುವ ಭಾವನೆ ಜನರಲ್ಲಿ ಬಂದರೆ ತಪ್ಪಲ್ಲ. ಯಾಕೆಂದರೆ ನಮಗೆ ಪರಿಚಯವಿರುವ ಯಾವುದೇ ಭಾಷೆಯ ವ್ಯಾಕರಣದಲ್ಲಿ, ಸಂಸ್ಕೃತದಲ್ಲಿ ನಡೆದಂಥ ಚಿಂತನೆಯಾಗಲೀ ಅಲ್ಲಿನ ವ್ಯವಸ್ಥೆಯಾಗಲೀ ನಮಗೆ ಕಂಡಿಲ್ಲ.  ಹಾಗಾಗಿ ಭಾಷೆಯ ಬಗ್ಗೆ ನಮ್ಮ ಊಹೆಗೆ ನಿಲುಕದ ಪ್ರಪಂಚವೊಂದು ಸಂಸ್ಕೃತದಲ್ಲಿ ಇದೆಯೆಂದರೆ ನಂಬುವುದು ಕಷ್ಟ. ನಂಬುವುದು ಕಷ್ಟ ಎಂಬುದಕ್ಕಿಂತ ಅದು ನಮಗೆ ಸಾಧ್ಯವಿರುವ ಎಲ್ಲ ಆಯಾಮದಿಂದ ಹೊರಗಿನ ಸಂಗತಿಯಾಗಿ ನಿಲುತ್ತದೆ.  

ಭಾಷೆಯೆಂಬ ಮಹಾ ವೈಚಿತ್ರ್ಯಕ್ಕೆ ಸೀಮೆಯನ್ನೂ ಚೌಕಟ್ಟನ್ನೂ ಬರೆಯುವ ಪ್ರಯತ್ನವೇ ಕಲ್ಪನೆಗೆ ಮೀರಿದ್ದು. ಇದೋ ನನ್ನ ಹಿಡಿತಕ್ಕೆ ಸಿಲುಕಿದೆ ಎನಿಸುವಷ್ಟರಲ್ಲೇ ನುಸುಳಿಕೊಂಡುಬಿಡುವ ಸ್ವಭಾವ ಅದರದ್ದು. ವ್ಯಾಕರಣ ಮಾಡಲು ಹೊರಟಿರುವುದು ಇಂಥಾ ಕೆಲಸವನ್ನೇ. ಅದರಲ್ಲೂ ಸಂಸ್ಕೃತದಂಥ ವಿಶಾಲ ಹರಹಿನ, ಕಾಲಾನುಭವದ ಮಹಾನ್ ಇತಿಹಾಸವಿರುವ ಭಾಷೆಯನ್ನು ವಿವರಿಸುವುದಕ್ಕೆ ನಿಯಮಗಳ ವ್ಯವಸ್ಥೆ ಅಳವಡಿಸಿದರೆ ಅದು ತುಂಬಾ ಸಂಕೀರ್ಣವಾಗಿಯೇ ಆಗುತ್ತದೆ. ಪಾಣಿನಿಮಹರ್ಷಿಗಳ ಅಷ್ಟಾಧ್ಯಾಯೀ ಗ್ರಂಥ ಮತ್ತದರ ವಿವರಣೆ ಇವತ್ತಿಗೂ ಮಾನವ ಮಿದುಳಿಗೆ ನಿರಾಯಾಸವಾಗಿ ಹೊಗುವ ಸಂಗತಿಗಳಲ್ಲ. ಪಾಶ್ಚಾತ್ಯ ವಿದ್ವಾಂಸ ಎಲ್. ಬ್ಲೂಮ್ ಫೀಲ್ಡ್ ಹೇಳುವಂತೆ ’ಪಾಣಿನಿಯ ವ್ಯಾಕರಣವೆಂಬುದು ಮಾನವ ಬುದ್ಧಿಮತ್ತೆಗೆ ಇದುವರೆಗೆ ಸಾಧ್ಯವಾಗಿರುವ ಅದ್ಭುತಗಳಲ್ಲಿ ಒಂದು’.  ಭಾಷೆಯಂಥ ಸಂಕೀರ್ಣ ವ್ಯವಸ್ಥೆಯನ್ನು ವಿವರಿಸಲು ಹೊರಟ ಅದು ಸಂಕೀರ್ಣವಾಗಿಯೇ ಇರಬೇಕಾದ್ದು ಸಹಜ.

ಪದವೊಂದು ಸಾಧುವೋ ಅಲ್ಲವೋ ಎಂಬ ನಿಶ್ಚಯಕ್ಕೆ ವ್ಯಾಕರಣವೇ ಶರಣು. ಮೇಲ್ನೋಟಕ್ಕೆ ವ್ಯಾಕರಣದ ಮೇಲೆ ದೊಡ್ಡ ಹೊರೆಯೇನೂ ಇದ್ದಂತೆ ಕಾಣದು. ಡಿಕ್ಷನರಿಯಂತೆ ಪದಗಳನ್ನು ಪಟ್ಟಿಮಾಡುತ್ತಾ ಸಾಗಿದರಾಗದೆ? ಸರಿಯಾಗಿರುವ ಪದಗಳನ್ನು ಪಟ್ಟಿ ಮಾಡಿದರಾಯ್ತಲ್ಲ, ಮತ್ತೆ ಸಾಧುತ್ವ ಹೇಳುವುದಕ್ಕೆ ವ್ಯಾಕರಣ ಯಾಕೆ  ಬೇಕು? ನಿಘಂಟು ಸಾಕು. ಹಾಗೆ ನೋಡಿದರೆ ಡಿಕ್ಷನರಿ ಎಂಬುದು ಮಾನವ ಮಿದುಳಿನ ಬುದ್ಧಿಮತ್ತೆಯ ಉತ್ಪನ್ನವಲ್ಲ. ಅದು smart ಕೆಲಸ ಎನ್ನುವುದಕ್ಕಿಂತ massive ಕೆಲಸ. ತುಂಬಾ ದೊಡ್ಡ ಶ್ರಮವನ್ನು ಬೇಡುವ ಕೆಲಸ.  ಆದರೆ ಪಾಣಿನಿಯ ವ್ಯಾಕರಣ massive ಅಲ್ಲ, ಅದು ಅತ್ಯಂತ smart ರೀತಿಯದು. ಹಾಗಾಗಿಯೇ ಅದು ಸಂಕೀರ್ಣ, ಮತ್ತು ತರ್ಕಾಶ್ರಿತ. ಭಾಷೆಯೊಂದರ ಎಲ್ಲ ಬಗೆಯ ಸಾಧ್ಯತೆಗಳನ್ನು ಬರೀ ೩೯೫೯  ಸೂತ್ರಗಳಲ್ಲಿ ಹಿಡಿದಿಟ್ಟ ಹೆಮ್ಮೆ ಅಷ್ಟಾಧ್ಯಾಯಿಯದು. ಭಾಷೆಯ ಅಗಾಧತೆಗೆ ಹೋಲಿಸಿದರೆ ಈ ಸೂತ್ರಗಳ ಪ್ರಮಾಣ ಬಲು ಸಣ್ಣದು. ಇಷ್ಟು ಸಣ್ಣ ಸಂಖ್ಯೆಯ  ಸೂತ್ರಗಳಲ್ಲಿ ಅಷ್ಟಾಧ್ಯಾಯಿ ಪೂರ್ತಿ ಭಾಷೆಯ ಎಲ್ಲಾ ಆಯಾಮಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಎಲ್ಲಾ ಆಯಾಮಗಳನ್ನು ಎಂದರೆ ಕನ್ನಡದ ಮೂಲಕ ನಮಗೆ ತಿಳಿದಿರುವ ಸಂಧಿ ಸಮಾಸ ಕ್ರಿಯಾಪದ, ನಾಮಪದ, ಸರ್ವನಾಮ ಇದಿಷ್ಟೇ ಅಲ್ಲ. ಅವುಗಳ ವ್ಯುತ್ಪತ್ತಿ, ಸಿದ್ಧಿಪ್ರಕಾರ, ಸ್ವರಪ್ರಕ್ರಿಯೆ ಎಲ್ಲ ಎಲ್ಲವನ್ನೂ ವಿವರಿಸುವ ಕೆಲಸ.


ಅಷ್ಟಾಧ್ಯಾಯಿಯೆಂಬ ಎಂಟು ಅಧ್ಯಾಯಗಳ ಪೂರ್ತಿ ರಚನೆಯಲ್ಲಿ ಮುಖ್ಯವಾಗಿ ಎರಡು ಭಾಗ. ಎಂಟು ಅಧ್ಯಾಯಗಳಲ್ಲಿ ಪ್ರತಿಯೊಂದು ಅಧ್ಯಾಯವೂ ನಾಲ್ಕು ಪಾದಗಳಲ್ಲಿ ವಿಭಾಗವಾಗಿದೆ. ಇದರಲ್ಲಿ ಏಳು ಅಧ್ಯಾಯಗಳು ಮತ್ತು ಎಂಟನೆಯದರ ಮೊದಲನೆಯ ಪಾದ- ಒಂದು ಭಾಗ. ಉಳಿದ ಮೂರೇ ಪಾದಗಳದ್ದು ಇನ್ನೊಂದು ಭಾಗ. ಸೋಜಿಗವೆಂದರೆ, ಮೊದಲನೆಯ ಭಾಗದ ದೃಷ್ಟಿಯಲ್ಲಿ ಎರಡನೆಯ ಭಾಗವೆಂಬುದೇ ಇಲ್ಲ! ಅಂದರೆ, ಶಬ್ದಸಿದ್ಧಿಯ ಪ್ರಕ್ರಿಯೆಯಲ್ಲಿ ಎರಡನೆಯ ಭಾಗದಲ್ಲಿರುವ ಸೂತ್ರಗಳ ಮೂಲಕ ಯಾವೆಲ್ಲ ಕಾರ್ಯ ಆಗಿವೆಯೋ, ಅವು- ಮೊದಲನೆಯ ಭಾಗದ ದೃಷ್ಟಿಯಲ್ಲಿ ಅಸಿದ್ಧ ( ಆಗದೇ ಇರುವಂತೆ). ಹಾಗಂತ ಮೂರೇ ಪಾದಗಳ ಎರಡನೆಯ ಭಾಗ ಇದೆಯಲ್ಲ, ಅದರ ದೃಷ್ಟಿಯಲ್ಲಿ ಮೊದಲನೆಯ ಭಾಗ ಇದ್ದೇ ಇದೆ, ಅಸಿದ್ಧವಲ್ಲ. ಅಂದರೆ ಇದು ದ್ವಿಮುಖ (ಟೂವೇ) ಅಂಧತ್ವ ಅಲ್ಲ. ಹೀಗೆ ಹೇಳಿದರೂ ಸ್ಪಷ್ಟವಾಗಲಿಕ್ಕಿಲ್ಲ, ಇನ್ನೂ ಸರಳವಾಗಿ ಹೇಳಬೇಕೆಂದರೆ...

ಎರಡು ಮನೆಗಳಿದ್ದಾವೆ, ಮತ್ತದರಲ್ಲಿ ಮನೆಯ ಸದಸ್ಯರಿದ್ದಾರೆ ಎಂದುಕೊಳ್ಳುವಾ. ಮೊದಲನೆಯದಕ್ಕೆ ಹಿರಿಮನೆ ಎಂದೂ ಎರಡನೆಯದಕ್ಕೆ ಕಿರಿಮನೆ ಎಂದೂ ಕರೆಯುವಾ. ಈ ಹಿರಿಮನೆಯ ಜನಗಳಿಗೆ ಕಿರಿಮನೆಯ ಜನ ಲೆಕ್ಕಕ್ಕೇ ಇಲ್ಲ, ಅವರ ಇರುವಿಕೆ ಮತ್ತು ಅವರ ಕಾರ್ಯಗಳು ಲೆಕ್ಕಕ್ಕಿಲ್ಲ. ಅಥವಾ ಆ ಕಿರಿಮನೆಯೆಂಬುದೇ ಇಲ್ಲ. ಹಾಗಂತ ಕಿರಿಮನೆಯವರಿಗೆ ಹಿರಿಮನೆಯ ಜನ, ಅವರ ಕಲಸಗಳೆಲ್ಲವೂ ಸ್ಪಷ್ಟ ಸ್ಪಷ್ಟ.  ಕಿರಿಮನೆಯ ಜನ ಅಡುಗೆ ಮಾಡಿಕೊಂಡರೂ, ಹೊಸ ಬಟ್ಟೆ ತಗೊಂಡರೂ, ಇನ್ನೇನೇ ಮಾಡಿದರೂ ಅದಕ್ಕೆ ಸಂಬಂಧಪಟ್ಟಂತೆ ಹಿರಿಮನೆಯ ಜನಗಳ ಪಾಲಿಗೆ ಅದು ಮಾಡಿಲ್ಲದಂತೆ. ಈ ಮೊದಲಮನೆಯ (ಹಿರಿಮನೆ) ಜನ ಅವರಿನ್ನೂ ಅಡುಗೆ ಮಾಡಿಲ್ಲ, ಬಟ್ಟೆ ತಗೊಂಡಿಲ್ಲ ಎಂದೇ ಅಂದುಕೊಳ್ಳುತ್ತಾರೆ. ಹಾಗಂದುಕೊಂಡು ಸುಮ್ಮನಿರುವುದಿಲ್ಲ, ಅದಕ್ಕನುಗುಣವಾಗಿಯೇ ತಮ್ಮ ಕೆಲಸ ಮಾಡುತ್ತಾರೆ.  

ಉದಾ-

ಹಿರಿಮನೆಯಲ್ಲಿ ಒಬ್ಬರಿದ್ದಾರೆ, ಗುಣಸಂಧಿಯನ್ನು ವಿಧಿಸುವವರು. ಅವರ ಪ್ರಕಾರ ಅ, ಆ, ಕಾರಗಳ ಮುಂದೆ ಯಾವುದೇಸ್ವರವರ್ಣ ಬಂದರೆ, ಅವುಗಳ ಬದಲಿಗೆ ಏ ಮತ್ತು ಓ ಎಂಬ ವರ್ಣಗಳು ಯೋಗ್ಯತೆಯನುಸಾರ ಒಂದೇ ಆದೇಶವಾಗಿ ಬರುತ್ತವೆ. ಉದಾ- ರಮಾ+ ಈಶಃ= ರಮೇಶಃ (+= ). ಸರಿ, ಇದೊಂದು ವಿಧಿ ಸೂತ್ರ, ಮತ್ತದು ಪೂರ್ತಿ ಭಾಷೆಯಲ್ಲಿ ತನ್ನ ಅಗತ್ಯವೆಲ್ಲಿದೆಯೆಂದು ಹುಡುಕುತ್ತಲೇ ಇರುತ್ತದೆ.

ಈಗ ಇನ್ನೊಂದು ಉದಾಹರಣೆ ನೋಡೋಣ. ’ಬಾಲಕಾ ಇಹ’ (ಇಲ್ಲಿ ಬಾಲಕರಿರುವರು ಎಂದರ್ಥ) ಅಂತ ಒಂದು ಶಬ್ದ ಪ್ರಸಂಗ. ವಸ್ತುತಃ ’ಬಾಲಕಾಸ್’ ’ಇಹ’ ಎಂದು ಎರಡು ಪದಗಳು ಅವು, ಆದರೆ ಸಂಹಿತೆಯ (ಸಂಧಿಸಂಭವ) ಕ್ರಮದಲ್ಲಿ ಸಂಧಿಯಾದಾಗ ಬಾಲಕಾ ಶಬ್ದದ ಮುಂದಿರುವ ಸಕಾರಕ್ಕೆ ರ ಎಂಬುದು ಆದೇಶವಾಗಿ,  ಆ ’ರ’ ವರ್ಣಕ್ಕೆ ಯಕಾರಾದೇಶವಾಗಿ ಮುಂದೆ ಆ ಯಕಾರಕ್ಕೂ ಲೋಪ ಬಂದು ಬರೀ ’ಬಾಲಕಾ’ ಅಂತ ಉಳಿದುಕೊಳ್ಳುತ್ತದೆ. ಇದಿಷ್ಟೂ ಕೆಲಸ ಮಾಡುವವರು ಕಿರಿಮನೆಯ ಜನ.

ಪರಿಸ್ಥಿತಿ ಹೀಗಿರಲಾಗಿ, ಗುಣ ಸಂಧಿಯನ್ನು ಹೇಳುವ ಸೂತ್ರ ಹಿರಿಮನೆಯಲ್ಲಿರುವುದು ನಮಗೆ ನೆನಪಾಗಿಬಿಡುತ್ತದೆ. ಅಕಾರ ಆಕಾರಗಳ ಮುಂದೆ ಬಾಕಿ ಯಾವುದೇ ಸ್ವರ ಬಂದರೂ ಏ ಮತ್ತು ಓ ವರ್ಣಗಳು ಯೋಗ್ಯತೆಯನುಸಾರ ಬರುತ್ತವೆ ಎಂಬುದು ತಾನೆ ಆ ಸೂತ್ರ! ಹಾ, ಇಲ್ಲಿದೆಯಲ್ಲ, ಬಾಲಕಾ ಇಹ ಅನ್ನುವಲ್ಲಿ ಆ ಕಾರದ ಮುಂದೆ ಇಕಾರ ಇದೆ, ಹಂಗಾಗಿ ಏಕಾರ ಬರಲಿ ಎಂಬುದು ಸಂಶಯ. ಹಾಗಾಗೋದಿಲ್ಲ, (ಹಾಗಾಗಿದ್ದಿದ್ದರೆ ಅದು ಲೋಕದ ವ್ಯವಸ್ಥೆಗೆ ವಿರುದ್ಧವಾಗುತ್ತಿತ್ತು. ವ್ಯಾಕರಣದಿಂದ ಭಾಷೆಯಲ್ಲ, ಭಾಷೆಗಾಗಿ ವ್ಯಾಕರಣ ತಾನೆ!)  ಮೊದಲೇ ಹೇಳಿದೆನಲ್ಲ, ಹಿರಿಮನೆಯವರಿಗೆ ಕಿರಿಮನೆಯವರು ಮಾಡಿದ್ಯಾವುದೂ ಕಾಣುವುದಿಲ್ಲ, ಜನ ಇರುವುದೂ ಗೊತ್ತಾಗುವುದಿಲ್ಲ ಎಂದು, ಹಾಗೆಯೇ ಇಲ್ಲಿ ಕಿರಿಮನೆಯವರು ಮಾಡಿದ ಕೆಲಸಗಳಾದ ಯಕಾರಾದೇಶ, ಲೋಪ- ಇದ್ಯಾವುದೂ ಹಿರಿಮನೆಯ ಗುಣಸಂಧಿಗೆ ಕಾಣುವುದಿಲ್ಲ. ಕಾಣುವುದಿಲ್ಲ ಅಂದರೆ ಅದರ ಪಾಲಿಗೆ ಅಲ್ಲಿನ ಶಬ್ದರೂಪ ’ಬಾಲಕಾಸ್’ ಎಂದೇ ಇದೆ. ಹಾಗಿದ್ದಾಗ ಗುಣಸಂಧಿಯಾಗುತ್ತದಲ್ಲ ಎಂಬ ಪ್ರಸಂಗವೇ ಏಳದು.

ಹೀಗೆ ಈ ಉದಾಹರಣೆಯಲ್ಲಿ ಗುಣಸಂಧಿಯಾಗದಿರುವುದೇ ಬೇಕಾದ್ದು. ಅದನ್ನೇ ಹಿರಿಮನೆ ಕಿರಿಮನೆ ವ್ಯವಸ್ಥೆಯಲ್ಲಿ ನಿರ್ವಹಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ, ಇದರೊಂದಿಗೆ ಇನ್ನೂ ಹಲವು ಆಯಾಮಗಳನ್ನೊಳಗೊಂಡ ಸಮಸ್ಯೆಗಳು ಬಂದಾಗೆಲ್ಲ ಪೂರ್ತಿ ಅಷ್ಟಾಧ್ಯಾಯಿಯೆಂಬುದು ಸ್ವಯಂ ಒಂದು ತಂತ್ರಾಂಶದಂತೆ ಕಾರ್ಯ ನಿರ್ವಹಿಸುತ್ತದೆ!
ಇದಲ್ಲದೆ ಎರಡೂ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ನಿರ್ದಿಷ್ಟ ಕಾರ್ಯಭಾರ ಇದ್ದಂತೆಯೇ ನಿರ್ದಿಷ್ಟ ವಿಳಾಸವೂ ಇದೆ. ಯಾವ ಅಧ್ಯಾಯದ ಯಾವ ಪಾದದ ಎಷ್ಟನೆಯ ಸೂತ್ರ ಎಂಬುದು unique ಆದ ವಿಳಾಸ.


ಎರಡು ಮನೆಗಳ ಚಿತ್ರ ಇಷ್ಟಾದಬಳಿಕ, ಇನ್ನುಮೇಲೆ ಕಾರ್ಯಕಾಲ ಮತ್ತು ಯಥೋದ್ದೇಶ ಪಕ್ಷಗಳ ವಿಚಾರಕ್ಕೆ ದಾರಿಯಾಯ್ತು. ಅದೇನಪ್ಪ ಅಂದ್ರೆ-

(ಮುಂದುವರಿಯುವುದು.....)

1 comment:

  1. ಕ್ಲಿಷ್ಟ ವಿಷಯಗಳನ್ನು ನನ್ನಂಥಾ ಸಾಮಾನ್ಯರಿಗೆ ಅರಿಯುವಂತೆ ವಿವರಿಸುವ ತಮ್ಮ ಶೈಲಿ ಅನನ್ಯ. ಆದರೆ ತೀರ ಕುತೂಹಲದ ಘಟ್ಟದಲ್ಲಿ ನಿಲ್ಲಿಸಿ "ಸಶೇಷ" ಎನ್ನುವುದು ಅದೊಂದು ರೀತಿಯ ಅಸಮಾಧಾನವನ್ನುಂಟುಮಾಡುತ್ತದೆ. ಬರಹ ಸಾಕಷ್ಟು ಹರಿಯಲಿ, ತೀರ ಪ್ರಮುಖ ಘಟ್ಟಗಳಲ್ಲಿ ಮಾತ್ರ ವಿಶ್ರಮಿಸಲಿ ಎಂದು ಮನವಿ :)

    ReplyDelete