Tuesday, November 17, 2015


ಕನ್ನಡದ ಸಮರ್ಥ ನಗರಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲೊಂದು ’ಸ್ಮಾರ್ಟ್ ಸಿಟಿ’ ಅನ್ನುವ ಪರಿಕಲ್ಪ. ಕರ್ನಾಟಕದ ಐದು ನಗರಗಳೂ ಯೋಜಿತ ನೂರು ನಗರಗಳ ಪಟ್ಟಿಯಲ್ಲಿ ಸೇರಿದ್ದುವು ಅನ್ನುವುದು ಸರ್ವವಿದಿತ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಅನ್ನುವ ಇಂಗ್ಲೀಷಿನ ಹೆಸರಿಗೆ ಸಂವಾದಿಯಾದ ಕನ್ನಡದ ಹೆಸರನ್ನು ಹುಡುಕುವ ಕೆಲಸವನ್ನು ಒಂದು ಸ್ಪರ್ಧೆಯ ರೂಪದಲ್ಲಿ ಕನ್ನಡಿಗರಿಗೆ ಕೊಡಲಾಗಿತ್ತು.
ಸ್ಪರ್ಧೆ ಅಂತಲ್ಲದಿದ್ದರೂ ನಮ್ಮ ಕೆಲವು ಸಮಾನ ಮನಸ್ಕರ ಗುಂಪುಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ನಾವೊಂದಿಷ್ಟು ಜನ ಚರ್ಚೆ ಮಾಡಿದ್ದೆವು. ಕನ್ನಡವೆಂದರೆ ಅಚ್ಚಗನ್ನಡ ಅನ್ನುವ ನಂಬುಗೆಯಲ್ಲಿ ಹತ್ತಾರು ಕನ್ನಡದ ಹೆಸರುಗಳನ್ನು ಕಟ್ಟಿದ್ದೆವು. ಚೆನ್ನಗರ, ಚನ್ನ ಪಟ್ಣ, ಮುದ್ದೂರು, ಚುರುಕು ಪುರ, ಜಾಣೂರು, ಕಾಜಾಣ ಪುರಿ, ಇತ್ಯಾದಿ ಇತ್ಯಾದಿ. ನಗರ, ಪತ್ತನ ಎಂಬ ಪದಗಳು ಸಂಸ್ಕೃತದ ಮೂಲಕ ಕನ್ನಡಕ್ಕೆ ಬಂದವಾಗಿದ್ದರೂ ಚೆನ್ನು, ಮುದ್ದು ಎಂಬ, ಸೌಂದರ್ಯಕ್ಕೆ ಪರ್ಯಾಯವಾಗಿ ಬಳಸಿದ ಪದ ಕನ್ನಡವೇ ಆಗಿತ್ತು.

ಇದೀಗ ಸ್ಪರ್ಧೆಯಲ್ಲಿ ಆಯ್ಕೆಯಾದ ಹೆಸರು ಬಹಿರಂಗವಾಗಿದೆ, ’ಸಮರ್ಥ ನಗರ’ ಅನ್ನುವುದು ಸ್ಮಾರ್ಟ್ ಸಿಟಿ ಪದಕ್ಕೆ ಸಂವಾದಿಯಾದ ಕನ್ನಡದ ಹೆಸರು ಅಂತ ಆಯ್ಕೆ ಮಾಡಲಾಗಿದೆ. ವಿಭಕ್ತಿ ಹಚ್ಚಿಲ್ಲ ಅಂತೊಂದು ಬಿಟ್ಟರೆ ಪಕ್ಕಾ ಸಂಸ್ಕೃತದ ಪದ ಅದು. ಸಮರ್ಥ ನಗರ ಅನ್ನುವುದು ಚಂದದ ಹೆಸರೇ ಆದರೂ, ಅಚ್ಚಗನ್ನಡದಲ್ಲಿ ಇನ್ನಷ್ಟು ಲಲಿತವಾದ ಹೆಸರನ್ನಿಡಬಹುದಿತ್ತಲ್ಲವೇ ಅಂತ ಒಂದು ಕ್ಷಣ ಅನ್ನಿಸಿತು ( ನಾನೊಬ್ಬ ಸಂಸ್ಕೃತ ವಿದ್ಯಾರ್ಥಿ, ಪ್ರೇಮಿ, ಅನುಗಾಮಿ ಎಲ್ಲಾ ಹೌದಾದರೂ).  
ಯಾಕೆ ಇದನ್ನ ಹೇಳಬೇಕನ್ನಿಸಿತೆಂದರೆ, ಕನ್ನಡದಲ್ಲಿ ಇತರ ಭಾಷೆಯ ಪರಿಕಲ್ಪನೆಗೆ ಸಂವಾದಿಯಾದ ಯಾವುದೇ ಪರಿಭಾಷೆಯನ್ನು ಹುಟ್ಟುಹಾಕುವಾಗ, ಹೊಸದೊಂದು ಪದ ಕಟ್ಟುವಾಗ, ಸಂಸ್ಕೃತದ ಕಡೆಗೆ ಮುಖಮಾಡುವ ಸಂದರ್ಭವೇ ಇಂದಿಗೂ ಇದೆ. ’ಚೆನ್ನಗರ’ ಅಂತಂದಿದ್ದರೆ ತುಂಬಾ ಜನಕ್ಕೆ ಅದರ ಸಾರಾಪೂರ ಅರ್ಥ ಮನಸಿಗೆ ಬರುತ್ತಿರಲಿಲ್ಲ. ಸಮರ್ಥ ನಗರ ಅನ್ನುವ ಪದವೇ ಆ ಮಟ್ಟಿಗೆ ಜನರನ್ನು ತಲುಪಲು ಸಮರ್ಥವಾಗಿದೆ.

ಇದೇ ಮಾತನ್ನ ಮೂರ್ನಾಲ್ಕು ವರ್ಷಗಳ ಹಿಂದೊಮ್ಮೆ ನನ್ನ ಸರಣಿ ಲೇಖನದಲ್ಲಿ ಹೇಳಿದ್ದೆ. ಹೊಸ ವಿದ್ಯಮಾನಗಳು, ಹೊಸ ಸಂಭವಗಳು ಮತ್ತು ಹೊಸದಾದ ಪರಿಕಲ್ಪನೆಗಳನ್ನು ಕನ್ನಡಕ್ಕೆ ತರುವಾಗ ನಾವು ಆಶ್ರಯಿಸುವುದೂ,ಅರ್ಥಮಾಡಿಕೊಳ್ಳುವುದೂ ಸಂಸ್ಕೃತವನ್ನಲ್ಲದೆ ಕನ್ನಡವನ್ನಲ್ಲ, ಕನ್ನಡದಲ್ಲೊಮ್ಮೆ ಹೇಳಿದ್ದೇ ಆದರೆ ಹಲವಾರು ಪದಗಳು ನಮಗೆ ಅರ್ಥವೇ ಆಗದೇ ಹೋದಾವು ಎಂದಿದ್ದೆ. ಆ ಹೊತ್ತಿಗೆ ಸೌರಜ್ವಾಲೆ ಮತ್ತು ಮೇಘಸ್ಫೋಟದಂಥಾ ವಿದ್ಯಮಾನಗಳು ನಡೆಯುತ್ತಿದ್ದ ಕಾರಣ ಅದೇ ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದೆ. ಇದೇ ಸೌರಜ್ವಾಲೆಯನ್ನು ’ಬೆಂಗದಿರನುರಿ’ ಅಂತ ಬರೆದರೆ ಅರ್ಥಮಾಡಿಕೊಳ್ಳುವ ಮಂದಿಯೆಷ್ಟು ? ಹೀಗೆ ನಾನು ಬರೆದಿದ್ದ ಲೇಖನಕ್ಕೆ ಹಿಗ್ಗಾ ಮುಗ್ಗಾ ಪ್ರತಿಕ್ರಿಯೆಗಳು ಬಂದಿದ್ದವು. ಭಾಷೆಯ ಸ್ಥಿತಿಗತಿಗಳನ್ನು ತಾವು ಬೆಂಬಲಿಸುವ ಪಂಥ ಮತ್ತು ನಂಬುವ ಇತಿಹಾಸದೊಂದಿಗೆ ಬೆಸೆದು ಗಲಾಟೆ ಮಾಡುವ ಜನಗಳಿಗೆ ಉತ್ತರ ಕೊಡುವುದು ಮೂರ್ಖತನ ಎಂದು ಸುಮ್ಮನಾಗಿದ್ದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಮೊನ್ನೆ ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಕಟ್ಟುವ ಸ್ಪರ್ಧೆ ನನ್ನಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಅದರ ಫಲಿತ ಬಂದಿದೆಯಲ್ಲದೆ again  ಆ ಪದ ಪೂರ್ತಿಯಾಗಿ ಸಂಸ್ಕೃತದ್ದೇ ಆಗಿದೆ. ಸಂಸ್ಕೃತದ ಹೆಚ್ಚುಗಾರಿಕೆ ಅದು ಮತ್ತು ಕನ್ನಡದ ಕೀಳ್ತನ ಇದು ಅಂತಲ್ಲ ಇಲ್ಲಿನ ವಿಷಯ, ಬದಲಾಗಿ ಸಮಾಜದಲ್ಲಿ ಯಾವುದನ್ನು ಯಾವುದನ್ನು ಹೇಗೆ ಕಾಣಲಾಗುತ್ತದೆ ಎಂಬುದು. ಕನ್ನಡದಲ್ಲೂ ಪದ ಕಟ್ಟಬಹುದು. (ನನಗೆ ಅರಿವಿದೆ- ಈಗ ಕಟ್ಟಿದ್ದೇ ಕನ್ನಡದ್ದು, ಅವೆರಡೂ ಕನ್ನಡದ್ದೇ ಪದಗಳು ಅನ್ನುವ ವಾದವೂ ಎದ್ದುನಿಲ್ಲುತ್ತದೆ. ಆದರೆ ಅದರ ಮೂಲ ಕನ್ನಡವಲ್ಲ, ಬದಲಿಗೆ ಸಂಸ್ಕೃತ ಅನ್ನುವುದು ತಾರ್ಕಿಕ ಸತ್ಯ). ಕನ್ನಡದ ಪದಕಟ್ಟು ಲಲಿತವಾಗಿರುತ್ತದೆ, ಇಂಪಾಗಿರುತ್ತದೆ; ಸಂಸ್ಕೃತದ್ದು ಬೇರೆಯದ್ದೇ ರೀತಿ.

ಕನ್ನಡದಲ್ಲಿ ಕನ್ನಡದ್ದೇ ಪದಗಳನ್ನು ಬಳಸಿ ಪದಕಟ್ಟುವ ಸಾಧ್ಯತೆಯನ್ನೇ ನಾವು ಚಿಂತಿಸುತ್ತಿಲ್ಲ. ಮತ್ತೇನಿಲ್ಲ, ನಾವು ನಮ್ಮ ಮನಸನ್ನು ಸಿದ್ಧಗೊಳಿಸಿದ ಪರಿ ಅದು. ಹೊಸ ಪದ ಬೇಕೆಂದಕೂಡಲೇ ನಮ್ಮ ಮನಸು ಸಂಸ್ಕೃತ ಪದಗಳಕಡೆಗೇ ವಾಲುತ್ತದೆ. ಇದೊಂದು ವಿರೋಧಿಸಬೇಕಾದ ಸಂಗತಿಯಲ್ಲ, ಹಾಗಿದ್ದೂ ಚಿಂತಿಸಬೇಕಾದ ಸಂಗತಿಯೆಂದೆನಿಸಿ ಬರೆದೆ.


No comments:

Post a Comment