Monday, February 29, 2016

ಬರುವಾಗ ಚಿಂತನ ಭಗೀರಥರಾಗಿ ಬನ್ನಿ


ನಾಳೆಯಿಂದ ಇಪ್ಪತ್ತು ದಿನಗಳ ಜ್ಞಾನಸತ್ರವೊಂದು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಅಗರ್ತಲಾ (ಗಣತಂತ್ರ ಭಾರತದ ತ್ರಿಪುರಾ ರಾಜ್ಯದ ರಾಜಧಾನಿ) ಶಾಖೆಯಲ್ಲಿ ನಡೆಯಲಿಕ್ಕಿದೆ. ಮಾಸವ್ಯಾಪೀ ಸತ್ರಗಳು ಈ ಹಿಂದೆಯೂ ಸಾಕಷ್ಟು ನಡೆದಿವೆಯಾದರೂ ಇದೀಗ ನಡೆಯುತ್ತಿರುವುದು ಅದೆಲ್ಲಕ್ಕಿಂತ ಭಿನ್ನವಾದ್ದು ಮತ್ತು ಭವಿಷ್ಯದ ದೃಷ್ಟಿಯಿಂದ ಅವೆಲ್ಲಕ್ಕಿಂತ ಬಲು ಮುಖ್ಯವಾದ್ದು.

ಪಾರಂಪರಿಕ ಶಾಸ್ತ್ರಾಧ್ಯಯನವನ್ನು ಪೋಷಿಸಿಕೊಂಡು ಬರುತ್ತಿರುವ ಮಹತ್ತರ ಸರ್ವಕಾರೀಯ ಮಾನಿತ ವಿಶ್ವವಿದ್ಯಾಲಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ. ತನ್ನ ಅಡಿಯಲ್ಲಿ ಭಾರತದಾದ್ಯಂತ ಹನ್ನೊಂದು ಶಾಖೆಗಳು, ಸುಮಾರು ಇಪ್ಪತ್ತೈದು ಸಂಸ್ಕೃತ ಮಹಾವಿದ್ಯಾಲಯಗಳನ್ನು ಒಳಗೊಂಡು ಸಾಗುತ್ತಿದೆ. ರಾಷ್ಟ್ರಿಯ ಮಟ್ಟದಲ್ಲಿ ಸಂಸ್ಕೃತದ ವಕ್ತಾರನಂತೆ ನಿಲ್ಲುವ ಬೃಹತ್ ವ್ಯವಸ್ಥೆ ಸಂಸ್ಥಾನವೆಂದರೆ. ಸಂಪನ್ಮೂಲಗಳ ಕೊರತೆಯ ಸರ್ವೇ ಸಾಮಾನ್ಯ ಗ್ರಹಚಾರದಾಚೆಗೂ ವಿದ್ವತ್ತೆಯಲ್ಲಿ ಘನವಾದ್ದನ್ನು ಕೊಡುವ ವಿಶ್ವಾಸಾರ್ಹ ವಿವಿ ಅದು.

ಭಾರತೀಯ ಚಿಂತನಪರಂಪರೆಯ ಮೂಲಭೂತವಾದ ಎರಡು ಸಂಗತಿಗಳು ಪೂರ್ವಪಕ್ಷ ಮತ್ತು ಸಿದ್ಧಾಂತ. ಮೊದಲನೆಯದು ಪ್ರಶ್ನೆಯನ್ನು ಕೇಳುವ ಪಕ್ಷ ಮತ್ತಿನ್ನೊಂದು ಅದಕ್ಕೆ ಸಮಾಧಾನ ಹೇಳುವ ಪಕ್ಷ. ನಿಂತನೀರಾಗದೆ ನಿರಂತರವಾಗಿ ಹೊಸ ಪ್ರಶ್ನೆಗಳನ್ನು ಮತ್ತು ಅದಕ್ಕೆ ಸಮಂಜಸವಾದ ಉತ್ತರಗಳನ್ನು ಹುಡುಕುತ್ತ ನಮ್ಮ ಶಾಸ್ತ್ರಪರಂಪರೆಯು ಹರಿದು ಬಂದಿದೆಯಷ್ಟೆ. ಆ ಪರಂಪರೆಯೇ ನಮ್ಮ ಸಿದ್ಧಾಂತಗಳನ್ನು ಉಳಿಸಿದೆ ಮತ್ತು ಇನ್ನೊಬ್ಬರದನ್ನೂ ಉಳಿಯಗೊಟ್ಟಿದೆ. (ಇವತ್ತು ಭಾರತವನ್ನು ಅಸಹಿಷ್ಣು ಎನ್ನುವವರು ಇತಿಹಾಸದುದ್ದಕ್ಕೂ ಒಮ್ಮೆ ಕಣ್ಣಾಡಿಸಿ ಬರಬೇಕು. ಚಿಂತನೆ ಮತ್ತು ಬದುಕು ಎರಡರಲ್ಲೂ ನಾವೆಷ್ಟು ಮುಕ್ತರಾಗಿದ್ದೆವು/ ಇದ್ದೇವೆ ಎಂಬುದು ಆಗ ತಿಳಿದೀತು). ಆದರೆ ವಸಾಹತೂತ್ತರ ಭಾರತಕ್ಕೆ ಬಡಿದ ಅಪ್ರಜ್ಞೆಯ ಗುಂಗು ಇನ್ನೂ ಪೂರ್ತಿಯಾಗಿ ಇಳಿದಿಲ್ಲ. ನಾವೆಂಥಾ ಹಂತದಲ್ಲಿದ್ದೇವೆ ಅಂದರೆ ನಮ್ಮನ್ನು ಪ್ರಶ್ನಿಸುವವರನ್ನು ಪ್ರತಿಪ್ರಶ್ನೆ ಮಾಡುವ ಛಾತಿಯೇ ನಮ್ಮಲ್ಲಿ ಮಾಯವಾಗಿ ಹೋಗಿದೆ. ವಾದ ಮಾಡುವುದನ್ನೂ ಅದೆಷ್ಟರಮಟ್ಟಿಗೆ ಮರೆತುಕೊಂಡಿದ್ದೇವೆ ಅಂದರೆ ನಮಗೆ ಉದಾರತೆ ಮತ್ತು ಹೇಡಿತನಗಳ ಮಧ್ಯೆ ಏನೊಂದೂ ವ್ಯತ್ಯಾಸ ಕಾಣದೆ ಹೇಡಿತನವನ್ನೇ ಮಾನವೀಯತೆಯ ಹೆಸರಲ್ಲಿ ಅಪ್ಪಲು ಮುಂದಾಗಿದ್ದೇವೆ. ನಮ್ಮ ಕೆಲವು ಉದ್ದಾಮ ಮಾಧ್ಯಮ ಬೃಹಸ್ಪತಿಗಳಂತೂ ಭಾರತೀಯವಾದ್ದೆಲ್ಲವನ್ನೂ ಮೂರನೆಯ ದರ್ಜೆಯ ಸಂಗತಿಯಂತೆ ಬಗೆದು ಫರ್ಮಾನು ಹೊರಡಿಸುವ ಕೆಲಸದಲ್ಲಿ ಮಗ್ನವಾಗಿದ್ದಾರೆ. ಉಳಿದ ವಿವಿಗಳು ಈ ರೋಗದ ಪರಿಹಾರಕ್ಕೆ ಎಷ್ಟು ಮಾತ್ರ ಸಹಕರಿಸಿಯಾವು ಎನ್ನುವುದು ಬಗೆಹರಿಯದ ಪ್ರಶ್ನೆ; ಯಾಕೆಂದರೆ ಭಾರತದೊಳಗೇ ಇದ್ದು ಇಲ್ಲಿನ ಸಮಗ್ರತೆಗೆ ಸವಾಲೆಸೆಯುವ ಉದ್ಧಟತನಕ್ಕೆ ಅವು ಮುಂದಾಗುತ್ತಿವೆ. ಆಶಾಕಿರಣವೆಂದರೆ ಆ ಬಗೆಯ ಅತಿರೇಕಗಳನ್ನು ತನ್ನೊಳಕ್ಕೆ ಬಿಟ್ಟುಕೊಳ್ಳದ ಪಾರಂಪರಿಕ ವಿದ್ಯಾತಾಣಗಳು. ಅಂಥಾದ್ದೊಂದು ಹೆಸರು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ.

ನಾಳೆಯಿಂದ ನಡೆಯಲಿಕ್ಕಿರುವ ಸತ್ರದ ಮುಖ್ಯ ವಿಷಯವೇ  ಪ್ರಶ್ನೆಮಾಡುವ ನಮ್ಮ ಪರಂಪರೆ ಮತ್ತು ಅದಕ್ಕೆ ಉತ್ತರಕೊಡುವ ಕಲೆಯ ಕುರಿತಾದ್ದು. ವಾದ ಮಂಡನೆ, ವಾದಕ್ಕೆ ಇರಬೇಕಾದ ಸಂಯಮನಗಳೇನು, ನಿಯಮನಗಳೇನು, ಪ್ರತಿಪಕ್ಷಿಯನ್ನು ನಿಗ್ರಹಿಸುವ ವಾದ ತಂತ್ರವೇನು ಎಂಬೆಲ್ಲ ಸಂಗೋಷ್ಠಿಗಳು ಅಲ್ಲಿ ನಡೆಯಲಿಕ್ಕಿವೆ. ಇದು ದೂರದೃಷ್ಟಿಯುಳ್ಳ ವಿದ್ವಾಂಸರ ಕಲ್ಪನೆಯ ಕೂಸು ಎನ್ನಲಡ್ಡಿಯಿಲ್ಲ. ಎಡಪಂಥದ ಅತಿರೇಕಗಳಿಗೆ ಜಾಗತಿಕ ಮಟ್ಟದಲ್ಲಿ ಸಮರ್ಥ ಉತ್ತರ ಕೊಡಬಲ್ಲ ವಿಚಾರ ಸನ್ನದ್ಧ ಪಾರಂಪರಿಕ ಯುವ ವಿದ್ವಾಂಸರ ಪಡೆಯೊಂದನ್ನು ಕಟ್ಟುವ ಕನಸೊಂದು ಇಲ್ಲಿದೆ. ಅಭ್ಯರ್ಥಿಗಳಾಗಿ ಅಲ್ಲಿ ಭಾಗವಹಿಸುತ್ತಿರುವರೆಲ್ಲ ಭಾರತದ ಎಲ್ಲ ರಾಜ್ಯಗಳಿಂದ ಆಯ್ಕೆಯಾದ ಯುವ ಶಾಸ್ತ್ರವೇತ್ತರು. ಅವರ ಹೆಗಲಮೇಲೆ ಪರಂಪರೆಯ ಜವಾಬ್ದಾರಿಯಿದೆ. ಅದರ ಅರಿವು ಮೂಡಿಸುವ ಸತ್ರವೇ ನಾಳೆಯಿಂದ ಆರಂಭವಾಗಲಿಕ್ಕಿರುವುದು.

ಇಷ್ಟೆಲ್ಲ ಯಾಕೆ ಮಾಡಬೇಕು? ನಾವೇಕೆ ಪ್ರಶ್ನೆ ಕೇಳಬೇಕು ಅಥವಾ ಯಾರಿಗಾದರೂ ಉತ್ತರಿಸಬೇಕು?- ಅನ್ನುವ ಪ್ರಶ್ನೆಯಿರುವವರು ರಾಜೀವ್ ಮಲ್ಹೋತ್ರಾ ರವರ ’ದಿ ಬ್ಯಾಟಲ್ ಫರ್ ಸಂಸ್ಕೃತ್’ ಪುಸ್ತಕವನ್ನೊಮ್ಮೆ ಓದುವುದು ಅಗತ್ಯ. ಪ್ರಶ್ನೆ ಕೇಳುವುದು ಮತ್ತು ಉತ್ತರ ಕೊಡುವುದು ಅವಶ್ಯವಾಗಿಯೂ ನಮ್ಮಿಂದ ಆಗಲೇ ಬೇಕಾದ ಸಧ್ಯದ ಜರೂರ್ ಕಾರ್ಯಗಳು. ನಾವಿನ್ನೂ ನಿದ್ರೆಯಲ್ಲಿದ್ದೇವೆ ಅನ್ನುವುದದನ್ನು ಅರ್ಥಮಾಡಿಸುವ ಪುಸ್ತಕ ಅದು. ಜಗತ್ತು ನಮ್ಮನ್ನು ನಮಗಿಂತ ಚೆನ್ನಾಗಿ ತಿಳಿದುಕೊಳ್ಳುತ್ತಿದೆ. ಭಾರತೀಯತೆಯನ್ನು ವ್ಯವಸ್ಥಿತವಾಗಿ ಕಡಿದು ಉದುರಿಸುವ (systematic dissemble) ಹುನ್ನಾರಗಳ ಬಗ್ಗೆ ನಾವು ಅಜಾಗರೂಕರಾಗಿದ್ದೇವೆ. ಆ ಎಚ್ಚರ ಸಾಮಾನ್ಯ ಜನಕ್ಕೆ ಬಂದರೆ ಸಾಲದು,  ತರುಣ ವಿದ್ವದ್ವಲಯದಲ್ಲಿ ವ್ಯಾಪಕವಾಗಿ ಬರಬೇಕು ಅನ್ನುವ ಉದ್ದೇಶದಿಂದ ನಾಳೆಯ ಕಾರ್ಯಶಾಲೆ ತೆರೆದುಕೊಳ್ಳುತ್ತದೆ. ಕೇಂದ್ರ ಸರಕಾರ ಇದರ ಮೇಲೆ ಹಣ ತೊಡಗಿಸುತ್ತಿದೆ. ಚಿಂತನ ಪರಂಪರೆಯ ಯೋಧರನ್ನು well equipped ಆಗಿಸುವುದು ಸಾಂಸ್ಕೃತಿಕ ಭದ್ರತೆಯ ಅತಿ ಮುಖ್ಯ ಅಂಶವೆಂಬುದು ಸರಕಾರಗಳಿಗೆ ಈಗಲಾದರೂ ಅರ್ಥವಾದ್ದು ಸ್ವಾಗತಾರ್ಹ. ಆಗ ಮಾತ್ರ ತರುಣ ವಿದ್ವಾಂಸರ ಪಡೆಯೊಂದು ನಮ್ಮೊಳಗಿನ ಚಿಂತಕಭಸ್ಮಾಸುರರನ್ನು ನಿಗ್ರಹಿಸುತ್ತ, ಹೊರಗಡೆಯ ಆಕ್ರಮಣಕ್ಕೂ ಮಿದುಳೊಡ್ಡುವ ಕಾರ್ಯಕ್ಕೆ ಸಿದ್ಧವಾಗುತ್ತದೆ.  


ಕರ್ನಾಟಕ ಸೇರಿದಂತೆ ಎಲ್ಲ ಭಾಗಗಳಿಂದ ದೂರದ ಅಗರ್ತಲಾಗೆ ಹೊರಟ ನನ್ನ ಮಿತ್ರಗಣವು ಅಂಥಾ ವೈಚಾರಿಕ ಭಗೀರಥರ ಪಡೆಯಾಗಿ ಹೊಮ್ಮಲೆಂದು ಹಾರೈಸುವೆ. ಹೋಗುವ ಮುನ್ನವಾಗಲೀ ಹೋಗಿ ಬಂದಮೇಲೊಮ್ಮೆಯಾಗಲೀ ದಯವಿಟ್ಟು ನಮ್ಮ ಪೂರ್ವಪಕ್ಷಿಗಳಾರೆಂಬುದನ್ನು ತಿಳಿಯಲೋಸುಗ ವಿದ್ವಾಂಸರ ವಿಚಾರಗಳನ್ನು ಕೇಳಿಸಿಕೊಳ್ಳಿ/ ಓದಿಕೊಳ್ಳಿ. ನಮ್ಮದನ್ನು ಚೆನ್ನಾಗಿ ಓದುವುದು ಮಾತ್ರವಲ್ಲ ನಮ್ಮ ವೈಚಾರಿಕ ವಿರೋಧಿಗಳ ನೆಲೆಯೇನೆಂಬುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾದ ಸಂಗತಿ. ಆ ನೆಲೆಯಲ್ಲಿ ಅಗರ್ತಲಾದ ಇಪ್ಪತ್ತು ದಿನಗಳು ನಿಮ್ಮೆಲ್ಲರ ಚಿಂತನಯಾತ್ರೆಯನ್ನು ಪ್ರಭಾವಿಸಲಿ. ಶುಭಯಾತ್ರಾ. 

No comments:

Post a Comment