Friday, February 24, 2017

ನನ್ನೂರಿನ ಶಿವಾಲಯ


ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಶಿರಸಿ ಮತ್ತು ಯಲ್ಲಾಪುರ ತಾಲೂಕುಗಳ ಸಂಗಮಸ್ಥಾನದಲ್ಲಿರುವ ನನ್ನೂರು ’ಶೇವ್ಕಾರ’ ದಲ್ಲಿ ಅನಾದಿಕಾಲದಿಂದಲೂ ಒಂದು ಶಿವದೇವಾಲಯವಿತ್ತು, ಮತ್ತು ಅದರಿಂದಾಗಿಯೇ ನನ್ನೂರಿಗೆ ’ಶಿವಾಗಾರ’ (ಶಿವನ ಮನೆ. ಅದೀಗ ಶೇವ್ಕಾರ ಎಂದಾಗಿದೆ) ಎಂಬ ಹೆಸರೂ ನಿಂತಿತೆಂಬ ಮಾತಿದೆ. ಬಾಲ್ಯಾದಾರಭ್ಯ ಇಂದಿನವರೆಗೆ ನಮ್ಮೂರಿನ ಶಿವಾಲಯದ ಕಥೆ ಕೇಳಿದ್ದೆವಾಗಲೀ ವ್ಯವಸ್ಥಿತವಾದ ಶಿವಾಲಯ ಎಂದೇನೂ ಇದ್ದಿರಲಿಲ್ಲ. ಹಾದಿ ಬದಿಯಲ್ಲಿ ಪಾಣಿಪೀಠರಹಿತವಾದ ಭಗ್ನಲಿಂಗವೊಂದು ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತುದನ್ನು ದಿನಾ ನಾವೆಲ್ಲ ಶಾಲೆಗೆ ಹೋಗಿ ಬರುವಾಗೊಮ್ಮೆ ನೋಡುತ್ತಿದ್ದೆವು. ಆ ಲಿಂಗಕ್ಕೊಂದು ಇತಿಹಾಸವಿದೆ ಎಂಬುದಕ್ಕೆ ಸಾಕ್ಷಿಯಾಗಿ ಕಟ್ಟೆಯ ಕಲ್ಲಾಗಿ ನಿಂತಿದ್ದ ಅಸ್ಪಷ್ಟ ಶಾಸನ ಕಲ್ಲು ಮತ್ತು ಸಮೀಪದಲ್ಲೊಂದು ಹೂಳು ತುಂಬಿದ ಕಲ್ಯಾಣಿ- ಇದ್ದವು. ಕಟ್ಟೆಯ ಕಲ್ಲಾಗಿದ್ದ ಶಾಸನ ಬಹುಕಾಲ ಹಾಗೇ ನಿಂತು ಯಾವುದೋ ಕಥೆ ಹೇಳುತ್ತಿದ್ದು ಈಗೀಗ ಅದರ ದನಿಯೂ ಕ್ಷೀಣವಾಗಿದ್ದಿರಬೇಕು. ಕೊನೆಗೊಮ್ಮೆ ಅದಕ್ಕೆ ಸೋಗೆಯ ಚಪ್ಪರವನ್ನು ಕಟ್ಟಿಕೊಟ್ಟು ಶಿವರಾತ್ರಿಗೊಂದು ಪೂಜೆ ಮಾಡುವ ಕ್ರಮ ಬಂತು. ಹಾಗಿದ್ದೂ ಗೋಡೆಯಿಲ್ಲದ ಜೋಪಡಿಯಲ್ಲೇ ಭಗ್ನಲಿಂಗ ನಿಂತುಕೊಂಡಿತ್ತು.
ಇಂತಿಪ್ಪ ದೇವಾಲಯದ ಪುನರ್ನಿರ್ಮಾಣಕ್ಕೆ ಒಂದೂವರೆ ದಶಕದ ಹಿಂದೆ ಊರಿನ ಕೆಲವು ಮನಸುಗಳು ಸಂಕಲ್ಪಗೈದವು. ನಾವೊಂದಿಷ್ಟು ಜನ ಎಳೆ ಮೀಸೆಯ ಹುಡುಗರು ಮತ್ತು ಕೆಲವು ಹಿರಿಯರು ಆ ಶಿವಲಿಂಗವಿದ್ದ ಪ್ರದೇಶದಲ್ಲೆಲ್ಲ ಉತ್ಖನನ ಶುರು ಮಾಡಿದೆವು. ಹೆಚ್ಚೂಕಡಿಮೆ ಒಂದು ವಾರದ ಕಾಲ ಉತ್ಖನನ ಮಾಡಿದ ನಮಗೆ ಹಳೆಯ ದೇವಾಲಯದ ಕಟ್ಟಡದ ಕುರುಹಾಗಿ ದಕ್ಕಿದ್ದು ವ್ಯವಸ್ಥಿತ ನೆಲಗಟ್ಟು. ಆ ಬಳಿಕ ಸುಮಾರಷ್ಟು ಕಾಲ ಅದ್ಯಾಕೋ ಸಂಕಲ್ಪಗೈದ ಮನಸುಗಳು ಸುಮ್ಮನಾದವು. ಆಗೀಗೊಮ್ಮೆ ಶಿವಾಲಯದ ವಿಚಾರ ಬರುತ್ತಿತ್ತಾಗಲೀ ಹೆಚ್ಚಿನ ಉದ್ಯಮಕ್ಕೆ ಯಾರೂ ಉದ್ಯುಕ್ತರಾಗಲಿಲ್ಲ. 
’ನಿರ್ಮಾಣ’ ಎಂಬುದೊಂದು ಮಹಾ ಸಂಕಲ್ಪ. ಒಂದರೆಗಳಿಗೆಯಲ್ಲಿ ಸಾಧ್ಯವಾಗುವ ಸರಕಲ್ಲ ಅದು. ಭಂಜನೆಯದು ಕ್ಷಣದ ಉನ್ಮಾದ, ಅದಕ್ಕೆ ಸಂಕಲ್ಪವಿಲ್ಲ, ಅದೊಂದು ಧುತ್ತನೆ ಹೊಮ್ಮುವ ಆಘಾತ. ನಿರ್ಮಿತಿಗೆ ಕ್ರಮವಿದೆ, ಮಾನವಕೃತ ಭಂಜನೆಗೆ ಕ್ರಮವಿಲ್ಲ. ನಮ್ಮದಿಲ್ಲಿ ನಿರ್ಮಾಣದ ಸಂಕಲ್ಪವಾಗಿತ್ತು. ಅದು ಕೆಲವು ಕಾಲದ ಬಳಿಕ ಊರಿನ ಬಹುಪಾಲು ಜನರ ಮನಸಿನಲ್ಲಿ ಪುನಃ ಜಾಗೃತವಾಯ್ತು. ಈ ಸಲ ದೇವಾಲಯದ ಇತಿಹಾಸದ ಅವಗತಿಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆಹೋಗಲಾಗಿ, ಬಹು ಕಾಲದ ಹಿಂದೆ ಕೆಲವು ಯತಿವರ್ಯರಿಂದ ಪ್ರತಿಷ್ಠಾಪಿತವಾದ ದೇವಾಲಯವಾಗಿತ್ತು ಎಂಬ ಮಾಹಿತಿಯೊಂದು ಲಭ್ಯವಾಯ್ತಲ್ಲದೆ ಅದು ಉಮಾಮಹೇಶ್ವರ ದೇವಾಲಯವೆಂಬುದೂ ತಿಳಿದು ಬಂತು. ಆದರೆ ಕಾಲಾಂತರದಲ್ಲಿ ಊರಿಗೂರೇ ನಾಶವಾಗಿ ಹೋಗಲಾಗಿ ದೇವಾಲಯವೂ ಅವನತಿಯನ್ನು ಹೊಂದಿರಬಹುದೆಂದು ಇಂದಿಗೆ ಊಹಿಸಬಹುದಷ್ಟೆ. (ಈ ಮಾತನ್ನು ಪುಷ್ಟೀಕರಿಸುವಂತ ಕೆಲವು ದಂತ ಕಥೆಗಳು ಮತ್ತು ಕೆಲವು ಭೌಗೋಳಿಕ ಸಾಕ್ಷ್ಯಗಳು ಊರಲ್ಲಿ ಇವತ್ತಿಗೂ ಲಭ್ಯವಿವೆ. ಹಿಂದೊಮ್ಮೆ ಅರವತ್ತು ಮನೆಗಳಿದ್ದ ಊರು ನಾಶವಾಗಿ ಹೋಗಿತ್ತಂತೆ. ಆ ಮನೆಗಳಿದ್ದ ಜಾಗದಲ್ಲಿ ಇಂದು ಕಾಡು ಕಾಡು. ನೆಲಗಟ್ಟುಗಳ ಅವಶೇಷ ಇವತ್ತಿಗೂ ಇದೆ) ಒಟ್ಟಿನಲ್ಲಿ ಅಜ್ಞಾತ ಇತಿಹಾಸವಿರುವ ಶಿವದೇವಾಲದ ಪುನರುತ್ಥಾನಕ್ಕೆ ನನ್ನೂರಿನ ಭಾಗಶಃ ಜನತೆ ಕಳೆದೆರಡು ವರ್ಷಗಳ ಹಿಂದೆ ಸಂಪೂರ್ಣ ಸಿದ್ಧವಾಗಿ ಎದ್ದುನಿಂತರು.
ಅದರ ಪರಿಣಾಮವಾಗಿಯೇ ಸುಭದ್ರವಾದ ದೇವಾಲಯವೊಂದು ಸಿದ್ಧವಾಗಿ ನಿಂತಿದೆ. ಹಳೆಯ ಲಿಂಗವಿದೆಯಾದರೂ ಅದು ಪಾಣಿಪೀಠರಹತವಾಗಿ, ಭಗ್ನಗೊಂಡು ನಿಂತಿದ್ದರಿಂದ ಪೂಜೆಗೆ ಯೋಗ್ಯವಲ್ಲ. ಹೊಸ ಬೃಹದಾಕಾರದ ಈಶ್ವರಲಿಂಗ, ಪಾಣಿಪೀಠ, ನಂದಿ ಹಾಗೂ ಗಣಪತಿ ವಿಗ್ರಹಗಳ ಕೆತ್ತನೆಯ ಕಾರ್ಯ ಬಹುತೇಕ ಮುಗಿದಿದೆ. ದೇವಾಲಯದ ಛಾವಣಿಯನ್ನು ಪೂರ್ತಿಯಾಗಿ ತಾಮ್ರದ ಹಾಳೆಗಳಿಂದ ಹೊದೆಸಿ ಸಿದ್ಧಮಾಡಲಾಗಿದೆ. ಈ ಬಗೆಯ ಲೋಹದ ಛಾವಣಿಯನ್ನು ಸುತ್ತಲ ಊರುಗಳಲ್ಲಿ ಕಾಣಲಾಗದು. ಉಮಾಮಹೇಶ್ವರ ದೇವಾಲಯವೂ ಈ ಭಾಗಕ್ಕೆ ಇದೊಂದೇ ಇರುವುದು. ಉಳಿದಂತೆ ದೇವಾಲಯಕ್ಕೆ ಸಂಬಂಧಿಸಿದ್ದ ಕಲ್ಯಾಣಿಯೂ ಅಂದ ಆಕಾರ ಪಡೆದುಕೊಂಡು ತಿಳಿನೀರನ್ನು ತುಂಬಿಕೊಂಡಿದೆ. ಶಿವನ ಶಿರಸ್ಸಿಗೆ ಅರ್ಪಣೆಯಾಗಲಿಕ್ಕಿರುವ ಶುದ್ಧಗಂಗೆಯಂತೆ ನಿರುದ್ವಿಗ್ನವಾಗಿ ನಿಂತಿದೆ. ಊರ ಜನರ ಶ್ರಮ, ಶ್ರದ್ಧಾಳುಗಳ ಸಹಾಯ ಮತ್ತು ಸತ್ಸಂಕಲ್ಪದ ಉತ್ಪನ್ನವಾಗಿ ಶೇವ್ಕಾರಿನ ಉಮಾಮಹೇಶ್ವರ ದೇವಾಲಯ ಎದ್ದುನಿಂತಿದೆ; ಭಾಗಶಃ ಊರಿನ ಅಭಿಮಾನದ ಪ್ರತೀಕದಂತೆ.

 
ಮುಂಬರುವ ವೈಶಾಖ ಮಾಸದ ಮೊದಲಿನಲ್ಲಿ ಯತಿಶ್ರೇಷ್ಠ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಶೇವ್ಕಾರಿನಲ್ಲಿ ಉಮಾಮಹೇಶ್ವರ ಪುನಃ ಪ್ರತಿಷ್ಠಾಪಿತವಾಗಲಿದ್ದಾನೆ. ನಾಲ್ಕುದಿನಗಳ ಕಾರ್ಯಕ್ರಮವು ಸಂಪೂರ್ಣವಾದ ವೈದಿಕ ತೇಜಸ್ಸನ್ನು ಊರಿನಲ್ಲಿ ಕಟ್ಟಿಕೊಡುವುದಕ್ಕಿದೆ.  ಸಂತರಿಂದ ಸ್ಥಾಪಿತವಾಗಿತ್ತೆನ್ನಲಾದ ಆಲಯವೊಂದು ಮತ್ತೆ ಸ್ವರ್ಣವಲ್ಲೀ ಶ್ರೀಗಳಂಥಾ ಶ್ರೇಷ್ಠ ಸಂತರ ಕೈಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವುದು ಕಾಲದ ಕರುಣೆ. ಶ್ರೀಗಳ ಮತ್ತು ಉಮಾಮಹೇಶ್ವರನ ಅಕಂಪಾನುಕಂಪದಿಂದ ಮುಂದಿನ ವರ್ಷದ ಶಿವರಾತ್ರಿಯು ಶೇವ್ಕಾರದ ಉಮಾಮಹೇಶ್ವರನಿಗೆ ವೈದಿಕೋಕ್ತ ರೀತಿಯಲ್ಲಿ ಸಲ್ಲಿಕೆಯಾಗಲಿಕ್ಕಿದೆ. ಊರೂ ಸಹ ಅದನ್ನೇ ಕಾಯುತ್ತಿದೆ.

ಶಿವರಾತ್ರಿಯ ದಿನ ಇಷ್ಟನ್ನು ಹೇಳಬೇಕನ್ನಿಸಿತು. 

1 comment:

  1. ಪೂರ್ವಪುಣ್ಯಶೇಷದಿಂದ ಮಾತ್ರ ಇಂತಹ ಮಹತ್ಕಾರ್ಯದಲ್ಲಿ ಭಾಗಿಯಾಗುವ ಸದವಕಾಶ ದೊರೆಯುತ್ತದೆ. ಶುಭವಾಗಲಿ

    ReplyDelete