Tuesday, January 27, 2015

ಸದ್ದಿರದ ಕಣಿವೆ.


ಮೊನ್ನೆ ರವಿವಾರ ಜನೇವರಿಯ ೧೮ಕ್ಕೆ, ಕೇರಳದ Silent Valley ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದೆ. ನಮ್ಮದೊಂದು ಬಳಗವಿದೆ, ’ಪ್ರಕೃತಿ ಬಳಗ’ ಎಂದು. ನಾವು ಕೆಲವರು ಸಮಾನಮನಸ್ಕ ಅಧ್ಯಾಪಕರು ಮತ್ತು ಆಸಕ್ತ ವಿದ್ಯಾರ್ಥಿಗಳಿರುವ ಬಳಗ ಅದು. ವಿರಾಮಕಾಲದಲ್ಲಿ ಪ್ರಕೃತಿಯ ಸೆರಗು ಹಿಡಿದು ಅಲೆದಾಡುವುದು ಇದರ ಹವ್ಯಾಸ. ಹಾಗೆ ಮೊನ್ನೆ ಆಯೋಜನೆಯಾದ್ದು ನಮ್ಮಿಂದ ೧೨೫ ಕಿ. ಮೀ ದೂರದಲ್ಲಿರುವ ಕೇರಳದ ಸದ್ದಿರದ ಕಣಿವೆ.

ನಮ್ಮ ವಾಹನ ಬೆಟ್ಟದ ಬಾಯಲ್ಲಿ ನಿಂತಾಗ ಬೆಳಗಿನ ೯ ಗಂಟೆ. ಅಲ್ಲೆಲ್ಲ ಇನ್ನೂ ಚಳಿಯಿತ್ತು, ಸೈಲೆಂಟ್ ವ್ಯಾಲಿಯ ಅರಣ್ಯ ಇಲಾಖೆಯ ಮಾಹಿತಿಕೇಂದ್ರಕ್ಕೆ ನಾವು ಬರುವ ಸೂಚನೆ ಮೊದಲೇ ಇತ್ತು. ಈ ಕಾಡಿಗೆ ಕಾಲಿಡುವುದಕ್ಕೆ ಇದೊಂದು ನಿಯಮವಿದೆ, ಮೊದಲೇ ಹೆಸರು ನೋಂದಾಯಿಸಬೇಕು. ಅದಿರದೆ ಪ್ರವೇಶವಿಲ್ಲ. 

ಕಾಡಿನ ಬಾಗಿಲಿಗೆ ಬಂದ ಬಳಿಕ ನಿಮ್ ನಿಮ್ಮ  ವಾಹನ ಬಡಿಗಿಡಬೇಕೆಂಬುದು ತಾಕೀತು. ಕಾಡಿನ ಅಂತರಂಗಕ್ಕೆ ಒಯ್ಯುವುದಕ್ಕೆ ಇಲಾಖೆಯದೇ ವಾಹನಗಳಿವೆ, ಖಾಸಗಿ ವಾಹನಗಳಿಗೆ ಒಳಬರುವಿಲ್ಲ. ಸರಿ, ಅವರಂದಿದ್ದಕ್ಕೆಲ್ಲ ಹೂಂ ಎಂದು ಗೋಣಾಡಿಸಿ, ಇಲಾಖೆಯ ಬಸ್ಸಲ್ಲಿ ಕೂತಾಯ್ತು. ನಮ್ಮೊಡನೆ ಒಬ್ಬ ದಾರಿತೋರುಗನೂ ಬಂದ. ಮುಂದಿನ ೨೫ ಕಿ. ಮೀ ಪೂರ್ತಿ ಗಾಢ ಬೆಟ್ಟ ಮತ್ತು ಕಡಿದಾದ ರಸ್ತೆ. ಅಲ್ಲಿನ ಓಡಾಟಕ್ಕೆ ಅದೇ ಚಾಲಕರೇ ಇದ್ದರೆ ಸರಿಯೆನ್ನಿಸುವಂತಿದೆ ರಸ್ತೆ. 

ಅದೊಂದು ನಿಸರ್ಗರಮಣೀಯವಾದ ಕಾಡಿನ ಮೌನ ತಪಸ್ಸಿನ ಕಣಿವೆ. ಕಾಡಿನ ನೀರವತೆಯನ್ನು ಕಲಕದಂತೆ ಮನವಿ, ಅಣತಿ ಎಲ್ಲವನ್ನೂ ದಾರಿತೋರುಗನೇ ಮಾಡಿದ. ಆ ನೀರವದಲ್ಲಿ ಅವ ಕಥೆ ಶುರುವಿಟ್ಟುಕೊಂಡ....

"ಅಪಾರ ಹಸಿರು ರಾಶಿ, ಎಂದಿಗೂ ಎಲೆಯುದುರಿಸಿ ಬೋಳಾಗದ ಕಾಡು, ಮನುಷ್ಯನನ್ನು ಒಳಗೆ ಬಿಟ್ಟುಕೊಂಡಿರದ ಕತ್ತಲೆ ಕಾನು, ಸೂರ್ಯಕಿರಣಗಳಿಗೂ ಹಸಿರುಗುಡಿಯೊಳಗೆ ಪ್ರವೇಶವಿಲ್ಲ... ಅಂಥಾ ಪರಮ ಗಂಭೀರ ಕಾಡಿನಲ್ಲಿ ಎರಡು ಪರ್ವತರಾಶಿಗಳು ಭೂಮಿಗಿಳಿಯುವ ಕಣಿವೆಯಲ್ಲೊಂದು ನದಿ. ಬಂಡೆಗಳನ್ನೇ ಕೊರೆದು ದಾರಿ ಮಾಡಿಕೊಂಡಿದೆಯೆನ್ನುವಂಥಾ ನದಿ ಅದು. ಆ ಕಾಡಿನ ನೆರಳಿನಲ್ಲಿ, ಆ ನದಿಯ ತಟಾಕದಲ್ಲಿ ಭಾರತದ ಅಪರೂಪದ ಕಾಡುಪ್ರಾಣಿಗಳಿವೆ.

ಹೀಗಿರುವಾಗ ಮನುಷ್ಯನೆಂಬ ದುರಂತ ಅವತಾರಕ್ಕೆ ಆ ಕಾಡು ದುರಾಸೆ ತಂಪಾಗಿಸುವ ಕಲ್ಪವೃಕ್ಷದಂತೆ ಕಂಡಿತು. ನದಿಯ ಹರಿವಿಗೆ ಹೆಚ್ಚಿನ ಖರ್ಚಿಲ್ಲದೆ ಅಣೆ ಕಟ್ಟೆ ಕಟ್ಟುವ, ಆ ಮೂಲಕ ಜಲವಿದ್ಯುತ್ ಉತ್ಪಾದಿಸುವ ಯೋಜನೆಯೊಂದು ಸಿದ್ಧವಾಯ್ತು. ಶಕ್ತಿಯ ದಾಹದ ಮುಂದೆ ಆ ಹಸಿರು ಹೊನ್ನು, ಅಲ್ಲಿನ ಜೀವರಾಶಿ, ಬುಡಕಟ್ಟು ಜನ, ಅಷ್ಟೆಲ್ಲ ಭೂಮಿ... ಹೀಗೆ ನಾಶವಾಗಲಿರುವ ಯಾವುದೂ ಮುಖ್ಯವಾಗಲಿಲ್ಲ. ಯೋಜನೆಯ ದಾಹಕ್ಕೆ ತೀವ್ರತೆಯೂ ಸಾಕಷ್ಟಿತ್ತು, ಇಂದಿರಾ ಸರಕಾರ ಎಪ್ಪತ್ತರ ದಶಕದಲ್ಲಿ ತರಾತುರಿಯಿಂದ ಯೋಜನೆಗೆ ಅಸ್ತು ಎಂದಿತ್ತು. ನೀಲನಕ್ಷೆ, ರಸ್ತೆ, ಉಳಿದ ಪರಿಕಲ್ಪನೆಗಳು.. ಎಲ್ಲವೂ ಸಿದ್ಧವಾದವು. ಪೂರ್ತಿ ಕಾಡು ಮನುಷ್ಯನ ಶಕ್ತಿದಾಹಕ್ಕೆ ಬಲಿಯಾಗಲು ಸಿದ್ಧವಾಯ್ತು. ಅಲ್ಲಿನ ಕೆಲವು ಮರಗಳ ಎದುರು ನಿಂತರೆ ನಾವೆಷ್ಟು ಚಿಕ್ಕವರೆಂಬುದು ಅರಿವಾಗುತ್ತದೆ. ೨೦೦-೩೦೦ ವರ್ಷದ ಮರಗಳಿರುವ ಕಾಡಿಗೆ ಮಾನವನೆಂಬ ಹುಲು(ಳು) ಜೀವಿ ಬಂದಳಿಕದಂತೆ ಅಮರಿದ್ದ ಸಂದರ್ಭ ಅದು.
ಭಾರತದ ಕೆಲವೇ ಬೆಟ್ಟಗಳಲ್ಲಿ ಬೆಳೆಯುವ ಅತಿ ಎತ್ತರದ ಮರಗಳು ಇಲ್ಲಿ ಬೆಳೆಯುತ್ತವೆ. ನೀಲಗಿರಿ ಲಂಗೂರ್ ಇಲ್ಲಿಯ ಪ್ರಮುಖ ಆಕರ್ಷಣೆಯ ಜೀವಿ. ಅದು ಬಿಟ್ಟರೆ ಎಲ್ಲೆಂದರಲ್ಲಿ ಸುಳಿದಾಡುವ ಆನೆ, ಅಲ್ಲೊಂದು ಇಲ್ಲೊಂದು ಚಿರತೆ... ಹೀಗೆ ಸಮೃದ್ಧ ಪ್ರಾಣಿ ಸಂಕುಲವಿದೆ. ಇಂದಿಗೂ ಕಾಡಿನೊಳಕ್ಕೆ ಒಯ್ಯುವ ಕಚ್ಚಾ ರಸ್ತೆಯ ತುಂಬ ಆನೆ ಲದ್ದಿ ಹೇರಳವಾಗಿ ಬಿದ್ದಿರುತ್ತದೆ.

ಸರಕಾರದ ಕೈಗಳು ಕಾಡಿಗೆ ನುಗ್ಗುತ್ತಿದ್ದಂತೆ ಬಹುಶಃ ಕಾಡಿನ ಪ್ರತಿಯೊಂದು ಜೀವವೂ ಮರುಗತೊಡಗಿತೇನೋ. ಜನಗಳು ಜಾಗೃತವಾದರು. ಆ ಜನಗಳೇನೂ ಅಲ್ಲಿ ವಾಸಿಸುವವರಲ್ಲ, ಆ ಬೆಟ್ಟ ಮುಳುಗಿದರೆ ಮನೆ ಹೋಗುವ ಸಂಕಟವೂ ಅವರಿಗಿಲ್ಲ.ಆದರೆ ಕಾಡು ಪ್ರೀತಿಸುವವರಿಗೆ ಗೊತ್ತು ಅದರ ನಾಶ ಎಂಥಾ ಬಗೆಯ ನೋವು ತರುತ್ತದೆ ಎಂಬುದು. ಅತಿ ಸಾಮಾನ್ಯ ಜನ ಹೋರಾಟಕ್ಕಿಳಿದರು, ಜಲಯೋಜನೆಯನ್ನೂ ಸರಕಾರದ ಉಪಕ್ರಮವನ್ನೂ ದಿಟ್ಟವಾಗಿ ವಿರೋಧಿಸಿದರು. ಒತ್ತಡಕ್ಕೆ ಸರಕಾರ ಮಣಿಯಲೇ ಬೇಕಾಯ್ತು, ಅಂತೂ ೧೯೮೫ ರಲ್ಲಿ ಸರಕಾರ ತನ್ನ ನಿಲುಮೆಯಿಂದ ಹಿಂಸರಿಯಿತು. ಅದೊಂದು ರಾಷ್ಟ್ರೀಯ ಉದ್ಯಾನವಾಗಿ ಉಳಿದಿದೆ ಇಂದು. ಅದರ ಉಳಿಕೆಗೆ ಜೀವ ತೇಯ್ದ ಎಲ್ಲ ಚೇತನಗಳಿಗೂ ನಮನ ಸಲ್ಲಿಸಿ ಆ ಹಸಿರಿನ ತಾಣದಲಿ ಮನಸು ಧ್ಯಾನಸ್ಥವಾಯ್ತು.
ಕಣಿವೆಯ ಹಾದಿ.

ಭಾರತದ ಗ್ರಾಮಗಳು, ಇಲ್ಲಿನ ಜನ, ಇಲ್ಲಿನ ಚರಿತ್ರೆ, ಕಡೆಗೆ ಇಲ್ಲಿನ ಕಾಡುಗಳು ಕೂಡ ಹೇಳುವುದಕ್ಕೆ ತಮ್ಮದೇ ಆದ ರಾಮಾಯಣದ್ದೋ ಮಹಭಾರತದ್ದೋ ಕಥೆಗಳನ್ನು ಉಳಿಸಿಕೊಂಡಿವೆ. ಅವು ಮೂಲಭಾರರತದಲ್ಲಿ ರಾಮಾಯಣದಲ್ಲಿ ಇರಲೇಬೇಕೆಂದಿಲ್ಲ, ತಮ್ಮ ತಮ್ಮ ಗ್ರಹಿಕೆಯೊಂದಿಗೆ ಪ್ರತಿಯೊಂದು ಸ್ಥಳವನ್ನೂ ಆ ಎರಡು ಮಹಾಕಾವ್ಯಗಳೊಡನೆ ಹೊಂದಿಸುವಲ್ಲಿ ನಮ್ಮವರಿಗೇನೋ ಖುಷಿಯಿದೆ. ಈ ವಿಷಯದಲ್ಲಿ ನಾವೆಷ್ಟು ಸಹಜವಾಗಿ ಮುಕ್ತವಾಗಿದ್ದೇವೆಂದರೆ, ಇಲ್ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ "ಮೂಲ ಕಥೆಯಲ್ಲಿ ಹೀಗೆಲ್ಲ ಉಲ್ಲೇಖ ಇದೆಯೆ?" ಎಂದು. ಈ ಖುಶಿಯಿದೆಯಲ್ಲ, ಇದು ಸಂಸ್ಕೃತಿಯೊಂದರ ಮುಕ್ತತೆಯ ಕಾರಣಕ್ಕೆ ಬರುವಂಥದು.
ಸರಿ, ಈ ಕಾಡು ತನ್ನೊಡಲಲ್ಲಿ ಮಹಾಭಾರತದ ಕಥೆಯೊಂದನ್ನು ಉಳಿಸಿಕೊಂಡಿದೆ. ಮೂಲದಲ್ಲಿ ಅದು ಸೈರಂಧ್ರಿ ವನವಂತೆ. ಸೈರಂಧ್ರಿ ಎನ್ನುವುದು ಅಜ್ಞಾತವಾಸದ ಕಾಲದಲ್ಲಿ ದ್ರೌಪದಿಯ ಹೆಸರು. ಆಕೆಗೂ ಇಲ್ಲಿನ ಕಣಿವೆಯಲ್ಲಿ  ಹರಿಯುವ ನದಿಗೂ ಸಂಬಂಧವಿದೆಯೆಂಬುದು ಸಾರಾಂಶ.
ಅಂಥಾ ಕಣಿವೆಗೆ ತಲುಪುವುದಕ್ಕೆ ಕಚ್ಚಾ ರಸ್ತೆಯಿದೆ, ಏಕಮುಖಸಂಚಾರಕ್ಕೆ ಅನುವಾಗಿರುವ ಹಾದಿಯದು. ಬಹುಶಃ ಅಣೆಕಟ್ಟೆಯ ಜನ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ರಸ್ತೆ ಇರಬಹುದು.
ಬರಬರುತ್ತ ಗಾಢವಾಗುವ ಕಾಡು ಸೈಲೆಂಟ್ ವ್ಯಾಲಿ ಎಂದು ಯಾಕೆ ಕರೆಸಿಕೊಳ್ಳುತ್ತದೆಯೆಂಬುದು ಮುಂದೆ ಸಾಗಿದಂತೆ ಅನುಭವಕ್ಕೆ ಬರುತ್ತದೆ. ಮಾತಿರಬಾರದು, ಕಾಡಿನ ಧ್ಯಾನಕ್ಕೆ ಒಳಗು ತೆರೆಯಬೇಕು ಎನ್ನುವ ಭಾವವೊಂದು ಅಪ್ರಯತ್ನವಾಗಿ ಮನಸನ್ನಾವರಿಸುತ್ತದೆ.

ಇಪ್ಪತ್ತೆರಡು ಕಿಲೋಮೀಟರು ಸಾಗಿದ ಬಳಿಕ ನದಿ, ಕಣಿವೆ ಪರ್ವತಾವಳಿಗಳು ಆಕಾಶವೆಂಬ ತೆರೆಯಲ್ಲಿ ಮೂಡಿದಂತೆ ಅನಾವರಣಗೊಳ್ಳುತ್ತವೆ. ಮನಸ್ಸು ಇನ್ನಷ್ಟು ಧ್ಯಾನಸ್ಥವಾಗಬಹುದಾದ ತಾಣ ಅದು. ಮುಮ್ದಿನದು ಚಾರಣದ ಭಾಗ; ಒಂದೈದು ಕಿಲೋಮೀಟರು. ನದಿಯ ತಣ್ಣೀರು, ಅಚಲ ಬಂಡೆಗಳ ಮಹಾರಾಶಿ, ಬೆಟ್ಟವೆಂಬ ದೇವತೆಯ ಸಜೀವ ದೇಗುಲ. ಚಿಂತನೆಗಳು ತಿಳಿಯಾಗುತ್ತ ಸಾಗಿ ಕೊನೆಗೊಮ್ಮೆ ಅವುಗಳಿಲ್ಲವಾಗುವ ಆನಂದಕ್ಕೆ ಇದೊಂದು ನೆಲೆಯಂತಿದೆ.
ಊಟಿ ಪರ್ವತದ ಇನ್ನೊಂದು ಮಗ್ಗುಲಂತೆ ಇದು.
ಶಿಖರದ ನೆತ್ತಿಯಲ್ಲಿ ವೀಕ್ಷಣಾ ಗೋಪುರವಿದೆ. ಅಲ್ಲಿಂದ ಸಿಗುವ ದೃಶ್ಯ ವೈಭವ ಅಮೋಘವಾದ್ದು. ಅಲ್ಲಿ ನಿಂತರೆ ಪರ್ವತಗಳೆಲ್ಲ ಅಂಗೈಲಿ ಬಂಧಿಯಾದಂತೆ, ಅಂಗಾಲಿಗೆ ನಿಲುಕಿದಂತೆ ಭಾಸ. ಕಾಲವೆಂಬುದು ಆ ಎತ್ತರದಲ್ಲಿ ಸಾವಧಾನಿಸಿ ಚಲಿಸುತ್ತಿರುವುದೋ ಎಂಬ ಭ್ರಮೆ.

ನೀಲಗಿರಿ ಲಂಗೂರ್ ಕಪಿಯನ್ನು ಹಿಡಿದು ತಿಂದ ಚಿರತೆ ವಿಸರ್ಜಿಸಿದ ಮಲವನ್ನು ಹೇರಳವಾಗಿ ಕಾಣಿಸಿದ ನಮ್ಮ ಗೈಡ್. ಅಲ್ಲಿನವರೆಲ್ಲ ಕಾಡಿನ ಪರಿಸರಕ್ಕೆ ಒಗ್ಗಿದ್ದಾರೆ, ಗಾಢ ಕಾಡಿನ ಜೀವಿಗಳ ಜೊತೆ ಸಹವಾಸ ಸಾಧಿಸಿದ್ದಾರೆ. ನಮ್ಮನ್ನಾತ ಎಷ್ಟು ಎಚ್ಚರಿಸಿದನೆಂದರೆ, ಗುಂಪು ಬಿಟ್ಟು ಕೊಂಚವೂ ಆಚೆ ಹೋಗಲು ಬಿಡುತ್ತಿರಲಿಲ್ಲ. ಆನೆಗಳು ಎಲ್ಲಿಂದಾದರೂ ಪ್ರತ್ಯಕ್ಷವಾಗಬಹುದು, ಒಂಟಿಯಾಗಿರುವುದು ಅಪಾಯ ಎಂಬುದು ಅವನ ಎಚ್ಚರಿಕೆ. ಎಲೆಯುದುರಿಸದ ಕಾಡಿನ ಪಕ್ಕಾ ಗುರುತು ಕೆಂಪು ಚಿಗುರಿನ ಮರಗಳು. ಜೀವದ ಬೆಂಕಿ ಬಿದ್ದಂತೆ ಚಿಗುರನ್ನೇ ಮುಡಿದು ನಿಲ್ಲುವ ಮರಗಳಿವೆ.  ಬಿಡಿ ಕಾಡಿನ ಸೌಂದರ್ಯವನ್ನು ಎಷ್ಟೆಂದರೂ ಪದಗಳಲ್ಲಿ ಹಿಡಿಯುವುದು ಆಗದ ಮಾತು.
ಕೆಂಚಿಗುರಿನ ನೋಟ. 
ಸೈಲೆಂಟ್ ವ್ಯಾಲಿಗೆ ಭೇಟಿ ಕೊಡುವ ಮನಸಿದ್ದರೆ ಮೊದಲು ತತ್ಸಂಬಂಧಿ ಜಾಲತಾಣಕ್ಕೆ ಭೇಟಿ ಕೊಡಿ. ಕೊಂಡಿ ಇಲ್ಲಿದೆ. ಒಮ್ಮೆ ಭೇಟಿಯಿತ್ತರೆ ಉಳಿದ ವಿವರಣೆಯನ್ನು- ಅಲ್ಲ- ಅನುಭವವನ್ನು ಕಾಡು ಕರುಣಿಸುತ್ತದೆ. ಕಾಡನ್ನು ತುಂಬ ಉನ್ನತವಾದ ದೃಷ್ಟಿಯಿಂದ ಕಾಣುವುದು ಮತ್ತು ಅದೇ ಬಗೆಯಲ್ಲಿ ನೋಡುವಂತೆ ಕೇಳಿಕೊಳ್ಳುವುದು ನನಗೆ ಇಲ್ಲಿ ಅತ್ಯಂತ ಮನನೀಯವೆನಿಸಿದ ಸಂಗತಿ. ಕಾಡೆಂಬುದು ಒಂತರಾತ್ಮನ ಕಾಣಬಹುದಾದ ನೆಲೆ, ಸದ್ದು ಮಾಡಬೇಡಿ, ಇದು ಸತ್ಯದ ಅರಿವಿನ ತಾಣ ಎಂಬ ಫಲಕಗಳು ಎದೆ ತುಂಬ ಖುಶಿ ತುಂಬಿದವು. ಒಮ್ಮೆ ಈ ನೆಲೆ ಬಂದು ಶಾಂತಿಯನ್ನನುಭವಿಸುವ ಮನಸು ಮಾಡಿ ನೀವೂ. ಮರಳಿ ಮನೆಗೆ ಬರುವಾಗ ಕಾಡೆಂಬ ದೇವರನ್ನು ಸಂದರ್ಶಿಸಿದ ಧನ್ಯತೆ ನಮ್ಮಲ್ಲಿತ್ತು.


1 comment: