Monday, August 3, 2015

ಅರಿಯದ ಶಾಕುಂತಲೆಯ ಅಂತ-ರಂಗ


ನಾಟಕವೆಂದರೆ ಅಭಿಜ್ಞಾನ ಶಾಕುಂತಲೆಯೇ ಎನ್ನುವ ಅರ್ಥದ ಮಾತೊಂದಿದೆ ಸಂಸ್ಕೃತದಲ್ಲಿ. ಅಷ್ಟು ಚೇತೋಹಾರಿಯಾದ ನಾಟಕ ಅದು. ಅದರ ಕರ್ತೃ ಕಾಲಿದಾಸನ ಬಗ್ಗೆಯೂ ’ಕವಿಯೆಂದರೆ ಕಾಲಿದಾಸನಯ್ಯಾ’ ಎನ್ನುವ ಅರ್ಥದ ಮಾತೂ  ಚಾಲ್ತಿಯಲ್ಲಿದೆ. ಅಗ್ರಮಾನ್ಯ ಕವಿಯೊಬ್ಬನ ಅಗ್ರಮಾನ್ಯ ಕೂಸು ಅಭಿಜ್ಞಾನ ಶಾಕುಂತಲ ನಾಟಕ. ಭಾರತೀಯ ಸಾಹಿತ್ಯದ ಗಣನೆಯಲ್ಲಿ ಯಾವಕಾಲಕ್ಕೂ ಬಿಡಲೇ ಆಗದ ಕೃತಿಯದು.


ಅದೇ ನೆರಳಲ್ಲಿ ಆರಂಭಗೊಳ್ಳುವ ಆಧುನಿಕ ಕನ್ನಡ ನಾಟಕ ’ಅನಭಿಜ್ಞ ಶಾಕುಂತಲ’ ಇವತ್ತಿನ ರಂಗಭೂಮಿಯ ಬೆರಗು. ನಿನ್ನೆ ರಂಗಶಂಕರದಲ್ಲಿ ಅನಭಿಜ್ಞಶಾಕುಂತಲದ ೪೯ ಮತ್ತು ೫೦ ನೇ ಪ್ರಯೋಗ ತುಂಬಿದ ಸಭಾಂಗಣದಲ್ಲಿ ಯಶಸ್ವಿಯಾಯ್ತು. ಬದುಕಿನ ಎರಡು ತಾಸು ಕಳೆದಿದ್ದೇ ತಿಳಿಯಲಿಲ್ಲ! ಅಷ್ಟು ಒಪ್ಪ ಓರಣವಾದ ಎಲ್ಲಿಯೂ ಜಾರಿಲ್ಲದ, ಕೊಸರಿಲ್ಲದ ಪ್ರಯೋಗ ಅನಭಿಜ್ಞ ಶಾಕುಂತಲ.

ಡಾ. ಕೆ ವೈ ನಾರಾಯಣ ಸ್ವಾಮಿಯವರ ಕಲ್ಪನೆಯ ಕೂಸು ಅನಭಿಜ್ಞ ಶಾಕುಂತಲ.

ಪಾರಂಪರಿಕವಾಗಿ ಬಂದ ಸಂಸ್ಕೃತ ರಂಗಭೂಮಿಯ ಮಂಗಳಗೀತೆ ’ ಆಂಗಿಕಂ ಭುವನಂ ಯಸ್ಯ...’ (ಭರತಮುನಿಯ ನಾಟ್ಯ ಶಾಸ್ತ್ರ) ಅಂತಲೇ ಶುರುವಾಗುವ ನಾಟಕ, ಸಂಸ್ಕೃತ ನಾಟಕಗಳ ರೀತಿಯನ್ನೇ ಅನುಸರಿಸುತ್ತ ಸೂತ್ರಧಾರನಿಂದ ಶುರುವಾಗುತ್ತದೆ. ಅಭಿಜ್ಞಾನ ಶಾಕುಂತಲವನ್ನು ಆಡಲು ಸಿದ್ಧಗೊಳ್ಳುತ್ತಿದ್ದಂತೆ ಬಂದೆರಗುವ ಅಭಿಜ್ಞಾನದ ಕರ್ತೃ ಕಾಲಿದಾಸನ ಹತ್ಯೆಯ ವಾರ್ತೆ, ನಾಟಕ ಆಡುಗರನ್ನು ತಡೆಯುತ್ತದೆ. ಅಭಿಜ್ಞಾನಕ್ಕಾಗಿ ಸಿದ್ಧವಾದ ವೇದಿಕೆ ನೋವಿನ, ಗಾಬರಿಯ ಬೀಡಾಗಿ ಬದಲಾಗುತ್ತದೆ, ಮತ್ತು ಉದ್ದೇಶಿತ ಪ್ರದರ್ಶನ ಅಲ್ಲಿಗೆ ನಿಲ್ಲುತ್ತದೆ. ಅಲ್ಲಿಂದಲೇ ಅನಭಿಜ್ಞ ಶಾಕುಂತಲ ಶುರುವಾಗುತ್ತದೆ. ಕೃತಿಕಾರ ಬದುಕಿರುವವರೆಗೆ ಸ್ವತಂತ್ರವಾಗಿಲ್ಲದೆ ಕೃತಿಕಾರನ ಮನದ ಭಾವಕ್ಕೆ ಮತ್ತು ವಿಚಾರಕ್ಕೆ ಮಾತ್ರವೇ ದನಿಯಾಗಿದ್ದ ಪಾತ್ರಗಳೆರಡು ಕವಿಯ ಮರಣದಿಂದಾಗಿ ಬಿಡುಗಡೆ ಹೊಂದಿದಂತಾಗಿ ಮಾಯಾಕನ್ನಡಿಯಿಂದೆಂಬಂತೆ ಹೊರಬಂದು ವಾಸ್ತವದೊಳಗೆ ಬೆರೆತು ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಲು ಶುರುವಿಡುತ್ತವೆ.

ಅಜ್ಞಾತ ಅಮ್ಮನ ಪುತ್ರನಾದ ಕಾಳಿ ಎಂಬಾತ ಕಾಶ್ಮೀರದ ಹಳ್ಳಿಯ ಹಾಡಿಯ ಜನರ ನಡುವೆ ಬೆಳೆದು ಆ ಬೆಳ್ಳಂಬೆಟ್ಟಗಳ, ತಿಳಿ ಮೋಡಗಳ, ನೀಲಿಯಾಗಸವ, ಹರಿವ ನದಿಯ, ಉಲಿವ ಹಕ್ಕಿಗಳ ಕಾಣ್ ಕಾಣುತ್ತ ಕವಿಯಾದ ಕಥೆ ಅದು.  ಉಸಿರೆಲ್ಲವೂ ಕವಿತನವೇ ಆದ ಅವನ ಅಕ್ಷರದ ಮೋಡಿಗೆ, ಸಿರಿಗಾಯನದ ಕೊರಳಿಗೆ ಮರುಳಾದ ಹೆಣ್ಣುಗಳ ಸುತ್ತ ಕಾಳಿಯ ಬದುಕು ಒಂದೊಂದು ಮಹಾಕಾವ್ಯವಾಗಿ ಮೈದಳೆಯುತ್ತದೆ. ಗಂಧರ್ವ ಕನ್ಯೆಯೆಂಬ ಭ್ರಮೆಯ ಮೋಹಕ್ಕೆ ಬಿದ್ದ ಕಾಳಿ ಅವಳನ್ನು ಭೋಗಿಸುತ್ತಾನೆ, ಆಕೆ ಗರ್ಭವತಿಯಾಗುತ್ತಾಳೆ. ಆದರೆ ಇತ್ತ  ಭೋಜನ ಧಾರಾನಗರಿಯೇ ಬಂದು ಕಾಳಿಯನ್ನು ಕೊಂಡೊಯ್ದು ಕಾಳಿದಾಸನೆಂಬ ಅಭಿಧಾನವನ್ನೀಯುತ್ತದೆ. ಬಹುಶಃ ಅಲ್ಲಿಂದ ಕಾಳಿಯ ಬದುಕಿನ ನೋವು ಶುರುವಾಗುತ್ತದೆ. ಅರಳುವುದಕ್ಕೆ ಒತ್ತಾಯಕ್ಕೆ ಒಳಗಾದ ಮೊಗ್ಗಿನ ರೀತಿಯಲ್ಲಿ ಕಾಳಿದಾಸ ರಾಜತ್ವದ ಬಂಧನದಲ್ಲಿ ಬಳಲುತ್ತಾನೆ. ಕಥೆ ಇಲ್ಲೆಲ್ಲ ಬಲು ನಾಟಕೀಯವಾಗಿ ನಡೆದುಕೊಳ್ಳುತ್ತದೆ. ಅದಲ್ಲದೇ ಕೊರಗಿನ ಕಾವ್ಯವಾದ ಮೇಘದೂತವೂ ಸಿದ್ಧವಾಗುತ್ತದೆ. ತನ್ನ ಪ್ರಿಯೆಯ ಪ್ರೇಮವನ್ನು ಹೊಂದಲಾಗದ ನೋವಿನಲ್ಲಿ ಕಾಳಿದಾಸ ತನ್ನ ಗುಡ್ಡ ಕಾಡುಗಳ ಬೆಳ್ಳಿ ಬೆಟ್ಟಗಳ ನಗರಿಗೆ ಪುನಃ ಬರುತ್ತಾನೆ. ಅಲ್ಲಿ ತನ್ನ ಅಭಿಜ್ಞಾನ ಶಾಕುಂತಲೆಯನ್ನು ವಾಚಿಸುತ್ತಿರುವಾಗಲೇ  ಕೈಬೀಸಿನ ಕತ್ತಿಯ ಇರಿತಕ್ಕೆ ಎದೆಯೊಡ್ಡಿ ಕೊನೆಯಾಗುತ್ತಾನೆ. ಕಾಳಿದಾಸನ ನಾಟಕದಿಂದ ಬಿಡುಗಡೆಗೊಂಡು ಕನ್ನಡಿಯಿಂದ ಹೊರಬಂದಂತೆ ಬಂದ ಬಿಂಬಗಳು ಮತ್ತದೇ ಕನ್ನಡಿಯನ್ನು ಸೇರಿಕೊಂಡು ಬರಿಯ ಬಿಂಬಗಳಾಗುತ್ತವೆ.

ಕಾಳಿದಾಸ ಸಾಯುವ ಕವಿಯಲ್ಲ, ಎಲ್ಲರೆದೆಗಳಲ್ಲಿ ಬೆಳಗುವ ಕವಿ.

ಕತ್ತಲೆಯಾಗುವ ಪೂರ್ಣ ರಂಗಮಂದಿರವನ್ನು ಹರ್ಷದ ಚಪ್ಪಾಳೆ ತುಂಬಿಕೊಳ್ಳುತ್ತದೆ.    

ಕೊಲೆ ಮಾಡಿದ್ದು ಯಾರು ಎನ್ನುವುದನ್ನು, ಮತ್ತು ಅಲ್ಲಿನ ಸಂಘರ್ಷವನ್ನು ನಾನಿಲ್ಲಿ ಬರೆದು ನಾಟಕದ ಕುತೂಹಲವನ್ನು ಕೊಲ್ಲಲಾರೆ.

ಪ್ರೇಮ, ಪ್ರೇಮದ ಒಡಲಿನ ಕೂಸಾಗುವ ದ್ವೇಷ, ಬಯಕೆಯ ಬೆನ್ನು ಬೀಳುವ ಹೆಣ್ಣುಗಳು, ಯಾರಿಗೂ ದೊರೆಯದೆ ಹೋಗುವ ಕಾಳಿ, ಕಾಶ್ಮೀರದ ಹಾಡಿಯ ಜೀವಗಳ ಅಭಿಮಾನ ಇವಿಷ್ಟು ಕಥೆಯ ಜೀವ ಬಿಂದುಗಳಾದರೆ ಸಂಗೀತ, ಬೆಳಕು, ರಂಗ ಸಜ್ಜಿಕೆ, ತಾಂತ್ರಿಕತೆ, ನಟನೆಯ ಔಚಿತ್ಯ, ಭಾಷೆಯ ತುಂಬು ಯೌವನ ಸೌಂದರ್ಯ, ಹಾಡುಗಾರನ ಕಂಠ ಮತ್ತು ಸಾಹಿತ್ಯ ಎಲ್ಲವೂ ಉತ್ತಮ ಕೃತಿಯೊಂದನ್ನು ರೂಪಿಸಿವೆ. ಡಾ. ಕೆ ವೈ ನಾರಾಯಣ ಸ್ವಾಮಿಯವರ ಪ್ರತಿಭೆಗೆ ಸರಿಯಾದ ಸಾಥ್ ಕೊಟ್ಟು ಇದನ್ನೊಂದು ಯಶಸ್ವಿ  ನಾಟಕವನ್ನಾಗಿಸಿದ್ದು  ನಿರ್ದೇಶಕ ಪ್ರಕಾಶ್ ಶೆಟ್ಟಿಯವರು. ಪ್ರತಿಭೆ ಈ ನಾಟಕದಲ್ಲಿ ಅದೆಷ್ಟು ದುಡಿದಿದೆ ಮತ್ತು ಅದೆಂತು ಸಫಲವಾಗಿದೆ ಎನ್ನುವುದು ಅರಿವಾಗುವುದಕ್ಕೆ ನಾಟಕವನ್ನೊಮ್ಮೆ ನೀವೇ ನೋಡಬೇಕು.
ಪ್ರಜ್ಞಾ ನವ ನವೋನ್ಮೇಷಶಾಲಿನೀ ಪ್ರತಿಭಾ ಎನ್ನುವುದು ಎಷ್ಟನೆಯದೋ ಬಾರಿಗೆ ನನಗೂ ಖರೆಯೆನ್ನಿಸಿತು. ಕಾಳಿದಾಸನೆಂಬ ಇತಿಹಾಸಿಕ ಸತ್ಯವನ್ನು ಕಲ್ಪನೆಯ ಮಾಯಾ ಬಲೆಯ ಮಧ್ಯೆ ಮರು-ಹೆಣೆಯುವ ಕೌಶಲಕ್ಕೆ ಮಣಿದೆ. ತುಂಬಾ ಪ್ರಭಾವಿಯಾದ ಬರವಣಿಗೆ. ಭಾಷೆಯಂತೂ ಕನ್ನಡದ ಅಂತಃಸತ್ವವೇ ನವಿರೇಳುವಂತೆ ಮನೋಜ್ಞವಾಗಿದೆ.
ಆನಂದದ ಸಂದಾಯವೇ ಕಲೆಯ ಉನ್ನತ ಕಾಣಿಕೆ. ಆ ಮಾತಿಗೆ ಎರಡಿಲ್ಲ.

ಆದರೆ....

ಯಾಕೆ ಇಷ್ಟು ಒಳ್ಳೆಯ ಪ್ರತಿಭೆ ತನ್ನ ಉನ್ನತಿಯನ್ನು ಯಾವುದೋ ಕೆಲಸಕ್ಕೆ ಬಾರದ ಅಜೆಂಡಾದ ಧ್ವನಿಯಾಗುತ್ತದೆ? ಕೀಳಿನ ಸ್ಪರ್ಷವಿಲ್ಲದ ಶುದ್ಧ ಸಾಹಿತ್ಯವನ್ನು ಬರೆಯುವುದಕ್ಕೆ ಶಕ್ತಿಯಷ್ಟೇ ಅಲ್ಲ, ಮನಸಿರಬೇಕು. ರಸದ ಅನುಭೂತಿ ನನ್ನ ಒಳಗಿನ ಖಾಲಿ ಜೇನುಗೂಡನ್ನೆಲ್ಲ ಆವರಿಸಿ ನಿಂತ ಬಳಿಕವೂ ಅಜೀರ್ಣವಾದ ಕೆಲವು ಅಂಶಗಳಿವೆ ನಾಟಕದಲ್ಲಿ ಅಂತ ನನ್ನ ವಿಮರ್ಶಕ ಮನಸಿನ ಅನಿಸಿಕೆ.

ಕಾಳಿದಾಸನೆಂಬ ಕಾವ್ಯಸಂತಾನದ ಬಗ್ಗೆ ಒಮ್ಮತ ಭಾರತೀಯ ವಿದ್ವಾಂಸರಲ್ಲೂ ಪಾಶ್ಚಾತ್ಯರಲ್ಲೂ ಇಲ್ಲ. ನಮ್ಮ ಸಾಹಿತ್ಯ ಸ್ರೋತದ ಮೂಲಭೂತ ಸಮಸ್ಯೆ ಅವುಗಳ ಕಾಲಘಟ್ಟದ್ದು ಮತ್ತು ಕರ್ತೃಗಳ ಜೀವನದ ಕುರಿತಾದ ಪಕ್ಕಾ ನಿರುತ್ತರಕ್ಕೆ ಸಂಬಂಧಿಸಿದ್ದು. ಕಾಳಿದಾಸನೂ ಇದಕ್ಕೆ ಹೊರತಲ್ಲ. ಕಾಳಿದಾಸನ ಕೆಲವು ಕೃತಿಗಳ ಪೂರ್ಣ ಕರ್ತೃ ಕಾಳಿದಾಸನೇ ಅಲ್ಲ ಎಂಬುದರಿಂದ ಹಿಡಿದು, ಒಂದಕ್ಕಿಂತ ಹೆಚ್ಚು ಕಾಳಿದಾಸರು ಇದ್ದರೆಂಬ ಕಥೆಯವರೆಗೂ ಈ ಪ್ರತಿಭಾನ್ವಿತ ಕವಿಯ ಜೀವನದ್ದು ಬರೀ ಊಹಾಪೋಹಗಳೇ ಹೊರತು ಘನವಾದ ಐತಿಹಾಸಿಕ ಆಧಾರವಿಲ್ಲ. ಭೋಜನ ಧಾರಾನಗರಿಯಲ್ಲಿ ಇದ್ದನೆಂದೂ, (ಇಂದಿನ ಮಧ್ಯಪ್ರದೇಶ), ವಿಕ್ರಮಾದಿತ್ಯನ ಆಸ್ಥಾನ ಕವಿಯೆಂದೂ,  ಕಾಶ್ಮೀರದ ಹಿಮಬೆಟ್ಟದ ಮರುಳಿನ ಕವಿಯಾಗಿದ್ದನೆಂದೂ ಕಾಳಿದಾಸನ ಬಗೆಗಿನ ಸಾಮಾನ್ಯ ಅರಿವು. ಕಾಲವಂತೂ ಕ್ರಿ.ಪೂ ಮತ್ತು ಕ್ರಿಶ ಆರನೇ ಶತಮಾನದವರೆಗೆ ಹೊಯ್ದಾಡುತ್ತದೆ. ಇಂತಿಪ್ಪ ಕಾಳಿದಾಸನ ಬದುಕಿನ ಅಜ್ಞಾತ ಕಥೆಯನ್ನು ’ಅನಭಿಜ್ಞ ಶಾಕುಂತಲ’ ಎಂಬ ಹೆಸರಲ್ಲಿ ಅವನ ಕೃತಿಗಳ ಹಿನ್ನೆಲೆ ಕಲ್ಪಿಸಿ ಹೆಣೆಯುವಾಗ ಪ್ರತಿಭೆ ಅದ್ಭುತವನ್ನೇ ಮೆರೆದಿದೆ.

“ಕಾಡಿನಲ್ಲಿ ಮುನಿಗಳು ರಾಜಕುಮಾರರಿಗೆ ಮತ್ತು ಕಾಡು ಜನರ ಮಕ್ಕಳಿಗೆ ಅಕ್ಷರ ಹೇಳಿಕೊಡುವಾಗ ಕದ್ದು ಅದನ್ನೆಲ್ಲ ಆಲಿಸಿ, ಮರಳಿನಲ್ಲಿ ಅವರು ತಿದ್ದಿ ಬಿಟ್ಟಿ ಹೋದ ಅಕ್ಷರಗಳಮೇಲೆಯೇ ತಿದ್ದಿ ಬರೆದು ಕಾಳಿ ಅಕ್ಷರ ಕಲಿತ” ಅಂತ ನಾಟಕದಲ್ಲಿ ಒಂದು ಕಡೆ ಬರುವ ಮಾತು. ಸರಿ. ಕಾಳಿದಾಸ ಅಕ್ಷರ ಕಲಿತದ್ದು ಹಾಗೇ ಎನ್ನುವುದು ಕವಿಯ ಸ್ವಾತಂತ್ರ್ಯ.

ಮುಂದೊಂದು ಕಡೆಗೆ ಕಾಳಿದಾಸ ತನ್ನ ಅನುರಕ್ತೆಯಲ್ಲಿ ಸಂದರ್ಭವೊಂದರಲ್ಲಿ ಉಲ್ಲೇಖಿಸುತ್ತಾನೆ “ಹಾರ್ವ ಪಿಳ್ಳೆಗಳಿಗೆ ತಿಳಿದರೆ ಕಷ್ಟ”- ಎಂದು. ಇಲ್ಲಿ ರಾಜಸಂತಾನಗಳಿಗೆ ಮತ್ತು ಕಾಡು ಜನರ ಮಕ್ಕಳಿಗೆ ಲಭ್ಯವಿದ್ದ ಅಕ್ಷರವಿದ್ಯೆಯನ್ನು ಕದ್ದು ಕೇಳಿಸಿಕೊಂಡು ಕಾಳಿದಾಸ ಬೆಳೆದ ಎನ್ನುವುದಕ್ಕೂ, ಮುಂದೆ ಅದೇ ಕಾಳಿದಾಸ ಹಾರ್ವಪಿಳ್ಳೆಗಳನ್ನು ತನ್ನ ಪ್ರತಿಗಾಮಿಗಳಂತೆ ಕಂಡುದಕ್ಕೂ ಸಾರಾಪೂರ ಹೊಂದಿಕೆಯಾಗುತ್ತಿಲ್ಲ.    ಎಲ್ಲರಿಗೂ ಲಭ್ಯವಿದ್ದ ವಿದ್ಯೆಯನ್ನು ಕದ್ದು ಕಲಿತನೆಂಬುದೂ, ಕೊನೆಯಲ್ಲಿ ಹಾರ್ವರನ್ನು ಅನಗತ್ಯವಾಗಿ ಎಳೆದು ತಂದುದೂ ಒಂದಕ್ಕೊಂದು ವಿರುದ್ಧವಾದ ಸಂಗತಿಗಳು. ಈ ಚರ್ಚೆ ಬೆಳೆದರೆ ಲೇಖಕ ಯಾವುದೋ ಸಮಜಾಯಿಷಿ ಕೊಟ್ಟು ಇದನ್ನು ಸಮರ್ಥಿಸೊಕೊಳ್ಳಬಹುದು. ಆದರೆ ನಾಟಕದ ರಸ ಚೌಕಟ್ಟಿಗೆ, ರೋಚಕತೆಗೆ, ಇದೊಂದು ಮಾತಿನ ಅಗತ್ಯವೇ ಇರಲಿಲ್ಲ. ಅಗತ್ಯ ಇರಲಿಲ್ಲ ಒಂದೇ ಅಲ್ಲ, ಅದು ರಸೋನ್ನತಿಯ ಎದುರು ಮಾನವ ಮನಸಿನ ಕುಬ್ಜತೆ  ಬಯಲಾದಂತೆ.

ಹೀಗೆ ಇತಿಹಾಸದ ಅನಿಶ್ಚಿತ ಸಂಗತಿಗಳನ್ನು ಕಲೆಯ ಕುಂದಣದಲ್ಲಿ ಕಟ್ಟುವ ಪ್ರತಿಭೆಗೆ ವಾದಗಳ ಹೊಗೆ ಅಂಟದೇ ಇದ್ದರೆ ಚೆನ್ನಿತ್ತು ಎಂಬುದೇ ನನ್ನ ನಿಲುವು. ಇದೇ ಬಗೆಯ ಕಾಲದ ಮತ್ತು ಸಂಗತಿಯ ಅನಿಶ್ಚಿತತೆಯನ್ನು ದುಡಿಸಿಕೊಂಡು ಶಂಕರ ಮೊಕಾಶಿ ಪುಣೇಕರರು ಬರೆದ ಕನ್ನಡದ ಮಹತ್ತರ ಕಾದಂಬರಿ “ಅವಧೇಶ್ವರಿ” ನನ್ನ ನೆನಪಿನಲ್ಲಿ ಮಗ್ಗುಲು ಬದಲಿಸಿತು.  ನಾಟಕದ ಆದಿಯಲ್ಲಿ ಗಣೇಶನ ಸ್ತುತಿಯಿಂದ ಆರಂಭಿಸುವ ವಾಡಿಕೆಯನ್ನು ಮುರಿದುದಕ್ಕೇ ಪ್ರತ್ಯಕ್ಷವಾಗುವ ಗಣಪನನ್ನು ಲಘುವಾಗಿ ಚಿತ್ರಿಸಿದರಲ್ಲ, ಅದೊಂದು ವಿಡಂಬನೆಯಂತಿತ್ತಲ್ಲ ಎಂದು ಸಾಂಪ್ರದಾಯಿಕ ಮನಸುಗಳಿಗೆ ಅನ್ನಿಸಲೂ ಬಹುದು, ಆದರೆ ಅಷ್ಟು ಮಾತ್ರದ ವಿಡಂಬನೆಯನ್ನು ಕಲೆಯ ಭಾಗವಾಗಿಯೇ ಸ್ವೀಕರಿಸುವ ಸಾಂಸ್ಕೃತಿಕ ಹಿರಿತನ ಈ ಪರಂಪರೆಗೆ ಇದೆ.
ಅನಭಿಜ್ಞ ಶಾಕುಂತಲ ಅಚ್ಚಾದ ಒಂದು ನೆನಪಿನಂತೆ ಉಳಿದುಕೊಳ್ಳುತ್ತದೆ ನನ್ನಲ್ಲಿ.  


No comments:

Post a Comment