Monday, August 10, 2015

ಒಲುಮೆಯಿಲ್ಲದ ಕೂಟ : Porn



ಕೇಂದ್ರ ಸರಕಾರದ ಪೋರ್ನ್ ban ನಿರ್ಣಯದ ಕುರಿತಾಗಿ ಬೌದ್ಧಿಕದಾಸ್ಯದ ವಲಯದಿಂದ ಬಂದ ಪ್ರತಿಕ್ರಿಯೆಗಳು ಮತ್ತು ಹಾಹಾಕಾರಗಳು ನನ್ನನು ಬಹುವಾಗಿಯೇ ಕಾಡಿದ್ದುವು, ಆದರೆ ಮತ್ತೇನನ್ನೂ ಬರೆಯಲಾಗದಂತೆ ಕೆಲಸವೊಂದರಲ್ಲಿ ಮಗ್ನವಾಗಿದ್ದೆ. ಇದೀಗ ಸಮಯ ಒದಗಿದೆ. ಬರೆಯದಿರಲಾಗದೆ ಬರೆಯುತ್ತಿದ್ದೇನೆ. 



ಮೊದಲಸಲ ನಾನು ಪೋರ್ನ್ ನೋಡಿದಾಗ ಖರೆಯೂ ಗಾಢವಾಗಿ  ಅನ್ನಿಸಿದ್ದು -“ಪ್ರೇಮವಿಲ್ಲದ ಕಾಮಕ್ಕೆ ಅರ್ಥವೂ, ಅಂದವೂ, ಮಾನವತೆಯೂ ಇಲ್ಲ” ಎಂದು.  ವಿಶ್ವಕ್ಕೆ ಸಂಸ್ಕೃತವು ಕೊಡಮಾಡಿದ ಸಾರ್ವಕಾಲಿಕ ಶ್ರೇಷ್ಠ ಕಾವ್ಯಗಳನ್ನು ಓದಿಕೊಂಡು ಮಾನವ ಪ್ರೇಮದ ಉತ್ಸವವನ್ನು ಮನಸಿನಲ್ಲಿ ಮೂಡಿಸಿಕೊಂಡಿದ್ದ ನನಗೆ, ಕಾವ್ಯಗಳ ಶಬ್ದ ಶರೀರದಲ್ಲಿ ಸ್ತ್ರೀ ಸೌಂದರ್ಯವನ್ನು ಕಲ್ಪಿಸಿಕೊಂಡಿದ್ದ ನನಗೆ, ವಿಪ್ರಲಂಭ ಶೃಂಗಾರದ ವರ್ಣನೆ ಓದಿದ್ದ ನನಗೆ, ಪೋರ್ನ್  ಕೊಡಮಾಡಿದ್ದು ಹಿಂಸೆಯನ್ನು ಮತ್ತು ಹೇವರಿಕೆಯನ್ನಷ್ಟೆ. ಮನುಷ್ಯನ ಮಧ್ಯೆ ಪ್ರೇಮವಿರದ ಬರೀ ಕಾಮದ ಇರವನ್ನೇ ತಿಳಿದಿರದಿದ್ದ ನನಗೆ ಪೋರ್ನ್ ಎಂಬುದು ನಾನು ಕಲ್ಪಿಸಿಯೂ ಇರದಿದ್ದ ಲೋಕವೊಂದನ್ನು ತೆರೆದಿಟ್ಟಿತು. ಪ್ರೇಮದ ಸುಳಿವೇ ಇರದ ಬರಿಯ ಮಾನವ ಕೂಟ ನನಗೆ ಕಾವ್ಯಾತ್ಮಕವೆನ್ನಿಸಲಿಲ್ಲ.

ಬದುಕನ್ನು ಹೆಚ್ಚು ಹೆಚ್ಚು ಜೀವಂತವಾಗಿಸಿಕೊಳ್ಳುತ್ತ, ಹೊರ ಹೊರಗಿನ ತೋರಿಕೆಯಲ್ಲದೆ ಒಳಗಿನ ಸಂವೇದನೆಗೆ ಸ್ಪಂದಿಸುವುದನ್ನು ಕಲಿಸಿಕೊಟ್ಟ ನನ್ನ ಪರಿಸರ, ಪ್ರಕೃತಿ, ಓದಿಕೊಂಡ ಸಾಹಿತ್ಯ ಮತ್ತು ಒದಗಿದ ಪರಿಸ್ಥಿತಿಗಳ ಉನ್ನತಿಯ ಎದುರು ಪೋರ್ನ್ ಎನ್ನುವುದು ಎಲ್ಲೆಂದರೆ ಎಲ್ಲಿಯೂ ಹೊಂದಿಕೆಯಾಗದ ಪ್ರೇತದ ಚಿತ್ರದಂತಿತ್ತು. ಅದೆಂದಿಗೂ ನನಗೆ ಮಾನವೀಯ ಎಂದೆನಿಸಲಿಲ್ಲ. ಆದರೆ, ಅದೇ ಅಮಾನುಷ ತೊಗಲಿನ ಲೋಕದ ನಿರ್ಮಾಣಕ್ಕಾಗಿ ಜಗತ್ತಿನಲ್ಲಿ ಎಷ್ಟು ದೊಡ್ಡ ಹಿಂಸೆಯ, ನರಕ ಸದೃಶ ಲೋಕವನ್ನು ಸೃಷ್ಟಿಸಿಕೊಳ್ಳಲಾಗಿದೆ ಎನ್ನುವುದು ತಿಳಿಯುತ್ತ ಬಂತು. ನಮ್ಮ ದಕ್ಷಿಣಕನ್ನಡ ಜಿಲ್ಲೆಯಿಂದ ವರ್ಷಕ್ಕೆ ಹತ್ತಿಪ್ಪತ್ತರ ಲೆಕ್ಕದಲ್ಲಿ ಮಾಯವಾಗುವ, ಅಡ್ರೆಸ್ಸೇ ಸಿಗದೆ ಹೋಗುವ, ಹೆಣ್ಣುಮಕ್ಕಳು ಅಂಥದೇ ನರಕಕ್ಕೆ ನೂಕಲ್ಪಟ್ಟಿರಬಹುದಲ್ಲವೇ ಅನ್ನಿಸಿದಾಗೆಲ್ಲ ಹಿತ್ತಿಲಲ್ಲೇ ಕೊಳಚೆ ನಿರ್ಮಾಣವಾದ ಅನುಭವ.  ಪ್ರತಿ ವರ್ಷವೊಂದಕ್ಕೆ ಹೆಸರೇ ಇಲ್ಲದ ಕಾಣೆಯಾಗುವ ಹೆಣ್ಣುಮಕ್ಕಳ ವಿಷಯವಾಗಿ ಪೋಲೀಸ್ ಒದಗಿಸಿದ ಅಂಕಿ ಸಂಖ್ಯೆ ನೋಡಿದರೆ ತಲೆ ತಿರುಗುತ್ತದೆ. ಅದರಲ್ಲೂ ಕರ್ನಾಟಕವಂತೂ ದಕ್ಷಿಣಭಾರತಕ್ಕೆ ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ೨೦೧೪ ರಲ್ಲಿ ಕಾಣೆಯಾದ ೭೮೩ ಹೆಣ್ ಮಕ್ಕಳ ಪತ್ತೆ ಇಂದಿಗೂ ಆಗಿಲ್ಲ. ಇದೆಲ್ಲ ಅಧಿಕೃತ ದಾಖಲಾದ ಸಂಗತಿ. ಇದರ ಹೊರತಾಗಿ ನೇತ್ರಾವತಿಯಲ್ಲಿ ಸಿಗುವ ಅನಾಥ ಶವಗಳು ಯಾವ ಕಾರಣಕ್ಕೆ ಶವಗಳಾದವು ಎನ್ನುವುದು ಎಂದೆಂದಿಗೂ ನಿಗೂಢ. ಮಾನವ ಕಳ್ಳ ಸಾಗಣೆ ಎನ್ನುವುದು ಯಾಕಿಷ್ಟು ಬೆಳೆದಿದೆ? ಮತ್ತದೇ ಪೋರ್ನ್ ಪ್ರಪಂಚಕ್ಕೆ ಬಂದು ನಿಲ್ಲುತ್ತದೆ ಚರ್ಚೆ.

ಖಜುರಾಹೋ ಶಿಲ್ಪಗಳನ್ನು, ಬೇಲೂರಿನ ಶಿಲಾ ಬಾಲಿಕೆಯರನ್ನು, ಹೋಗಲಿ- ಉತ್ತರ ಕನ್ನಡ ಜಿಲ್ಲೆಯ ಸೋದೆ ಅರಸರ ಕ್ಷೇತ್ರಗಳಲ್ಲಿ ಕಾಡಿನೊಂದಿಗೆ ಕಾಡಿನಂತೆ ನಿಂತ ದೇವಾಲಯಗಳ ಭಿತ್ತಿಗಳಲ್ಲಿನ ಚಿತ್ರಗಳನ್ನು ಪೋರ್ನ್ ಗೆ ಹೋಲಿಸುವುದಾದರೆ, ಕಲೆಯನ್ನು ವ್ಯಭಿಚಾರದೊಂದಿಗೆ ತುಲನೆ ಮಾಡಿದಂತೆ. ಕೋಕ ಶಾಸ್ತ್ರವನ್ನು, ವಾತ್ಯ್ಸ್ಯಾಯನನ ಕಾಮಸೂತ್ರವನ್ನು ಇವತ್ತಿನ ಪೋರ್ನ್ ಜೊತೆ ಸಮವಾಗಿ ಕಾಣುವುದೆಂದರೆ ಶಾಸ್ತ್ರೀಯ ಅಧ್ಯಯವನ್ನು ಫಟಿಂಗರ ಪೋಲಿ ಪುಸ್ತಕದೊಡನೆ ತುಲನೆ ಮಾಡಿದಂತೆ. ಅಧ್ಯಯನ ಇರುವ ಯಾರೂ ಈ ಬಗೆಯ ವಾದವನ್ನು ಮಾಡಲಾರರು.  ಇವರೇನಾದರೂ ಮೇಘದೂತವನ್ನೋ, ಮಾಘಕವಿಯನ್ನೋ, ಕುಮಾರಸಂಭವವನ್ನೋ ಓದಿದ್ದಿದ್ದರೆ ಅವೆಲ್ಲ ರತಿ ಚಕೋರಿಗಿಂತ ಭಿನ್ನವಾದ ಸಾಹಿತ್ಯವಲ್ಲ ಎಂದೇ ಬರೆಯುತ್ತಿದ್ದರೇನೋ!

ನಮ್ಮ ಶೃಂಗಾರ ಸಾಹಿತ್ಯದ ಮೊದಲ ಅಂಶವೇ ಒಲುಮೆ. ಒಲಿಸಿಕೊಳ್ಳುವ ಅಂದ, ಒಲಿಯೆನೆನ್ನುವ ಹುಸಿ ಹಠ, ಕೊನೆಗೂ ಒಲಿಯುವ ನಮ್ಯತೆ, ಒಲಿಸಿಕೊಳ್ಳುವ ಪ್ರಕ್ರಿಯೆಯೇ ಸಲ್ಲಾಪವೆನ್ನುವ ಗ್ರಹಿಕೆ- ಈ ಅಂಶಗಳಿಲ್ಲದ ಶೃಂಗಾರ ಕಲ್ಪನೆ ನಮ್ಮಲ್ಲಿಲ್ಲ. ಕಾವವನ್ನು ಮಹಾಪಾಪವೆಂದು ಬಗೆದ, ಸ್ತ್ರೀ ಪುರುಷ ಸಂಯೋಗವನ್ನೇ ಪಾಪದ ಆರಂಭವೆಂದು ತಿಳಿದ ನಾಗರಿಕತೆ ನಮ್ಮದಲ್ಲ. ಒಲುಮೆಯಿಲ್ಲದ ಕಾಮದ ಕುರುಹು ನಮ್ಮಲ್ಲಿ  ಪ್ರಾಯಃ  ಸಿಗಲಾರದು. ಕಾವ್ಯಕ್ಕೆ ಕಾವ್ಯವಾಗುವ ತಾಕತ್ತು ಬರುವುದೇ ಒಲುಮೆಯ ಹಿನ್ನೆಲೆಯಲ್ಲಿ. ಪಾಶುಪತ ಪಡೆಯಲು ಹಿಮಾಲಯ ಬೆಟ್ಟ ಹತ್ತಿದ ಅರ್ಜುನನದೂ ಒಲುಮೆಯೇ. ಒಲಿಸಿಕೊಳ್ಳುವ ತಾಳ್ಮೆಯಿಲ್ಲದ, ಬರಿಯ ಉನ್ಮಾದದ ಯಾವುದೂ ಬದುಕಾಗಲೀ ಕಾವ್ಯವಾಗಲೀ ಆಗದು. ಅಲ್ಲಿಗೆ ಅದಕ್ಕೆ ಬೆಲೆಯೂ ಇರದು. ಒಲುಮೆ ಎನ್ನುವುದು ಸಣ್ಣ ಸಂಗತಿಯಲ್ಲ, ಅದಿಲ್ಲದೆ ಯಾವ ಸಾಧನೆಯೂ ಇಲ್ಲ. ಅದೊಂದು ತಪಸ್ಸು.  ಅಂಥದರಲ್ಲಿ ಒಲುಮೆಯ ಸೆಲೆಯೇ ಇಲ್ಲದ ಬೆತ್ತಲೆ ಮಿಥುನಗಳ ಉದ್ವೇಗ ಮುಖಿಯಾದ ಚಿತ್ರಣ- ಪೋರ್ನ್- ಮಾನವಪರವಾದ ಸಂಗತಿ ಹೇಗಾದೀತು? ಕೆಡುಕಿನ ಕಲ್ಪನೆ ಒಬ್ಬನಿಗೆ ಬೇಕಿದ್ದಲ್ಲಿ ಪೋರ್ನ್ ನೋಡಬಹುದೇನೋ.
ಸಾಮಾನ್ಯರ ಕಲ್ಪನೆಗೆ ನಿಲುಕದೇ ಇರುವಷ್ಟು ಹಿಂಸೆ, ಪಾಶವೀಯತೆ, ಈ ಭೂಮಿಯ ಮೇಲೆ ನಮ್ಮ ಬೃಹತ್ ಮಾನವ ಕುಲದ ಮಧ್ಯೆ ಇದೆ. (ISIS ನೆನಪಾಗುತ್ತದೆ ಇಲ್ಲಿ) ಮತ್ತದೇ ಒಲುಮೆಯಿರದ ಲೈಂಗಿಕತೆಯ ವಿಜೃಂಭಣೆಯೇ ಮಾನವ ಸೃಷ್ಟಿಸಬಹುದಾದ ಹಿಂಸೆಯ ಪರಮ ಪಾತಾಳ ಎಂದು ನನ್ನ ಊಹೆ. ಹಿಂಸೆ ಮತ್ತು ಒಲವಿಲ್ಲದ ಲೈಂಗಿಕತೆ ಇವೆರಡೇ ಭೂಮಿಯ ಮೇಲೆ ನರಕ ಸೃಷ್ಟಿಸಿರುವ ಸಂಗತಿಗಳು, ಮತ್ತಿವು ಪರಸ್ಪರ ಅಂತಃಸಂಬಂಧ ಉಳ್ಳವೂ ಆಗಿವೆ.
ಒಲುಮೆಯ ತಪಸ್ಸಿಗೆ ಕುಳಿತು ಚೈತನ್ಯಯುತವಾದ ಬದುಕು ಬದುಕುವುದಕ್ಕೆ ಭಾರತೀಯ ಪ್ರಜ್ಞೆಯಲ್ಲಿ ದೂಡ್ಡ ಅವಕಾಶ ಇದೆ. ನಮಗಲ್ಲದಿದ್ದರೂ ನಮ್ಮ ಹಿಂದಿನ ಸಾಹಿತ್ಯಕ್ಕೆ ಆ ಉನ್ನತಿಯ ನೆನಪಿದೆ. ಇಂಥ ಶುದ್ಧ ಗಂಗೆಯಂಥಾ ಬದುಕನ್ನು ಬಿಟ್ಟು ಅಚೈತನ್ಯದ, ಸಂವೇದನಾರಹಿತ, ಜೀವ ಕಳೆಯಿಲ್ಲದ ಉದ್ವೇಗದ ಮೇಲಾಟದ ಮಾನವ ಮಿಲನವನ್ನು ಆನಂದಿಸುವ ತುಚ್ಛತೆ ನಮಗೆ ಬೇಕೆ?

ಪೋರ್ನ್ ಉಳಿಯಬೇಕು ಎನ್ನುವವರು ಅದೆಷ್ಟು ಕುರುಡಾಗಿ ವಾದಗಳನ್ನು ಮಂಡಿಸುತ್ತಿದ್ದಾರೆಂದರೆ, ಬಳಕೆ ಸಂಸ್ಕೃತಿಯ Commodity  ಪ್ರಪಂಚದ ದಾಸರೇ ಆಗಿಹೋಗಿದ್ದಾರೋ ಅನ್ನಿಸುವಷ್ಟು. ಅಗತ್ಯವಿದೆ, ಹಾಗಾಗಿ ಪೂರೈಕೆಯೂ ಆಗಲೇ ಬೇಕು ಎನ್ನುವ ವಾದ ಅದು. ಈಗಾಗಲೇ ನಮ್ಮ ಶೋಕಿಗಾಗಿ ನಾವು ಮಾನವತೆಯ ಎಲ್ಲೆಯನ್ನು ದಾಟಿಯಾಗಿದೆ. ಸುಗಂಧಕ್ಕಾಗಿ ಒಂದು ಪ್ರಾಣಿ, ರೆಕ್ಕೆ ಪುಕ್ಕಕ್ಕಾಗಿ ಹಕ್ಕಿ, ಚರ್ಮಕ್ಕಾಗಿ ಹಾವು ಹುಲಿಗಳು, ದಂತಕ್ಕಾಗಿ ಆನೆ... ನಮ್ಮ ಕೊಲೆಗಡುಕತನ ಇನ್ನೂ ವಿಸ್ತಾರವಾಗುತ್ತಲೇ ಇದೆ. ಬಹುಶಃ, ಪೋರ್ನ್ ಇರಲೇ ಬೇಕು ಎನ್ನುವುದು ಇದೇ ಕೊಲೆಗಡುಕತನದ ಇನ್ನಷ್ಟು ವಿಸ್ತಾರವಾದ ಪರಿಧಿ. ಕೊಲೆಗಿಂತಲೂ ಹಿಂಸಾತ್ಮಕವಾದ್ದು ಪೋರ್ನ್. 


ನ್ಯಾಯಾಂಗವಾಗಲೀ ಸರಕಾರವಾಗಲೀ ಪೋರ್ನ್ ಎಂಬ ಹೀನಾಯವನ್ನು ನಿಲ್ಲಿಸುವುದರಲ್ಲಿ ಸಮರ್ಥವಾದರೆ ಅದು ಸ್ವಸ್ಥವಾದ ಹೊಸಯುಗದ ಆರಂಭಕ್ಕೆ ನಾಂದಿಯಾದೀತು.      

1 comment: