Tuesday, August 11, 2015

ರಿಯಾಲಿಟಿ ಶೋ ಎಂಬ ವಿಕ್ಷಿಪ್ತ ಮನರಂಜನೆ! (ಭಾಗ ಒಂದು)


ರಿಯಾಲಿಟಿ ಶೋ ಎಂಬ ಇಪ್ಪತ್ತೊಂದನೇ ಶತಮಾನದ ಒಪ್ಪಿತ ವಿಕೃತಿಯ ಕುರಿತಾಗಿ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ದೂ ಅದನ್ನು ನಿಲ್ಲಿಸುವಲ್ಲಿಯಾಗಲೀ, ಅದರ ಸ್ವರೂಪವನ್ನು ಬದಲಿಸುವಲ್ಲಿಯಾಗಲೀ ಯಾರೂ ಸಮರ್ಥರಾಗಿಲ್ಲ. ಕಾರಣ ಒಂದೇ, ಅದರ ಹಿಂದೆ ಹಣದ ಅಮೋಘ ಪ್ರವಾಹವಿದೆಯೆನ್ನುವುದು. ರಿಯಾಲಿಟಿ ಶೋಗಳ ಒಳ ಮರ್ಮವನ್ನು ಅರಿತ ಬಳಿಕವೂ ಜನ ಅದನ್ನು ನಿಜವೆಂದೇ ತಿಳಿದು ಖುಶಿ(!!) ಪಡುವುದು ನಡೆದೇ ಇದೆ.


ಮೊನ್ನೆ ಕೆಲವು ದಿನಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ’ನಿಜಾಯಿತಿ ತೋರ್ಕೆ’ (ರಿಯಾಲಿಟಿ ಶೋ) ಕಾರ್ಯಕ್ರಮದ  ಎದುರು ಕೂರುವ ಕರ್ಮ ನನ್ನದಾಗಿತ್ತು. ಅಂದವಾದ ಭಾಷೆಯಿಲ್ಲದ, ದೇಹ ಬೆಳೆಸಿದ ಕಾರಣಕ್ಕೇ ಟಿವಿಯೊಳಗೆ ಸೇರಿಕೊಂಡ, ಹೋ ಹಾ ಎಂದೆಲ್ಲ ಒದರಿಕೊಳ್ಳುವ ಘೇಂಡಾಮೃಗದಂಥಾ ನಿರೂಪನೊಬ್ಬ ನಿಜಾಯಿತಿ ತೋರ್ಕೆಯನ್ನು ನಿರ್ವಹಿಸುತ್ತಿದ್ದ. ನಾ ನೋಡುತ್ತಿದ್ದ ತೋರ್ಕೆಯ ವಿಷ್ಯ ಏನಪ್ಪಾಂದ್ರೆ- ಹಳ್ಳಿ ಹೈದ ಪ್ಯಾಟೆಗೆ ಬಂದ್ರೆ ಆಗುವ ಹಳವಂಡಗಳ ಕುರಿತಾದ್ದು.
ಹಳ್ಳಿ ಹುಡುಗ್ರು ಅಂತ ಬಿಂಬಿಸಲಿಕ್ಕೆ ಇಲ್ಲಿ ಉತ್ತರಕನ್ನಡದಿಂದ ಸಿದ್ಧಿ ಜನಾಂಗದ ಎರಡ್ಮೂರು ಹುಡುಗರನ್ನೂ, ಉತ್ತರಕರ್ನಾಟಕದ ಹಳ್ಳಿಯಿಂದ ಯಾರೋ ಒಂದಿಬ್ಬರನ್ನೂ ಹಿಡಿದು ತಂದು ಕ್ಯಾಮೆರ ಎದುರು ನಿಲ್ಲಿಸಿಕೊಂಡಿದ್ದರು. ಅವರಿಗೆಲ್ಲ ಬಲು ಜಾಣೆಯರಂತೆ ತೋರುವ (ಈ ಹೆಣ್ ಮಕ್ಕಳಿಗೆ ಬರಕೊಟ್ಟ ಸಂಭಾಷಣೆ ಆ ಪರಿಯಲ್ಲಿತ್ತು) ತಲಾ ಒಬ್ಬೊಬ್ಬಳು ಗೆಳತಿ, ಅದೂ ಬಿಳೀ ಬಣ್ಣದವರು. (ಕೆಲವರನ್ನು ಬಹಳೆ ಮುತುವರ್ಜಿಯಿಂದ ಬಿಳಿ ಮಾಡಿದಂತಿತ್ತು). ಆ ಹೆಣ್ ಹೈಕಳೆಲ್ಲ ಭಾಳಾ ಶಾಣ್ಯಾ ಜನ, ಮತ್ತು ಈ ಗಂಡ್ ಪೋರರು ಪಕ್ಕಾ ಪೆದ್ದು ಎನ್ನುವುದೇ ಆ ಕಾರ್ಯಕ್ರಮದ ಒಳ ತಿರುಳು. ಘೇಂಡಾಮೃಗವಂತೂ ಈ ಪೋರರನ್ನು ಇದ್ದಿದ್ದೂ ಹೀನೈಸುವ ಪ್ರಯತ್ನವನ್ನು ತನ್ನ ಭಾಷಾ ಪರಿಣತಿಯ ಮಿತಿಯಲ್ಲಿ ಮಾಡುತ್ತಲೇ ಇರುವವ.

ಇಂತಿರಲು, ನಿರೂಪಕನ ಬಾಯಲ್ಲಿ ಬರುವ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಾನು ಕಾರ್ಯಕ್ರಮವನ್ನು ಭಲೇ ಆಸಕ್ತಿಯಿಂದ ನೋಡಲು ಶುರುವಿಟ್ಟೆ. ನಮ್ಮೂರಿನ ಮಕ್ಕಳು ಇದ್ದರಲ್ಲ ಎಂಬುದಷ್ಟೆ ನನ್ನ ಕುತೂಹಲವನ್ನು ಕಾಯ್ದಿರಿಸಿದ ಸಂಗತಿ. ಶುರುವಾಯ್ತು ನೋಡಿ, ಹಡೆ ಮಾಡುವ ವಿವಿಧ ಚೇಷ್ಟೆಗಳು. (ಹಡೆ ಮಾಡುವುದು ಅಂದರೇನು ಅಂತ ಪ್ರಶ್ನೆ ಇದ್ದರೆ ಆ ಕಾರ್ಯಕ್ರಮ ನೋಡಿ, ತಿಳಿದೀತು). ಬಿಳೀ ಹೆಣ್ ಮಕ್ಕಳು ತಮ್ಮ ಕರ್ಲ್ ಕರ್ಲಿ ಕೂದಲು ತಿರುವುತ್ತಾ, ನಿರ್ದೇಶಕ ಕೊಟ್ಟಷ್ಟೆ ಬಟ್ಟೆಯಲ್ಲಿ ಮೈ ತುಂಬಿಡುವ ಪ್ರಯತ್ನ ಮಾಡುತ್ತಾ ತಮ್ ತಮ್ಮ ಕರೀ ಹುಡುಗರನ್ನ (ಇನ್ನಷ್ಟು ಕಪ್ಪಾಗಿ ಬೇಕಂತಲೇ ಬಿಂಬಿಸಿದ್ದರಾ ಅಂತ ಡೌಟು)  ವೇದಿಕೆಯ ಮೇಲೆ ಕರೆತರುವ ಹೊತ್ತಿಗೆ ನಿರೂಪಕನ ಭೀಕರ ಹೂಂಕಾರ ದಯನೀಯ ಹಂತ ತಲುಪಿತ್ತು. ಆ ಹೆಣ್ ಹೈಕಳು ತಮಗೆ ವಹಿಸಿದ್ದ ಈ ಹುಡುಗರನ್ನು ಪಕ್ಕಾ ಶಾಲೆ ಮಕ್ಕಳಂತೆ ಗೇಣುದ್ದದ ನೀಲಿ ಚಡ್ಡಿ, ಟಿಪಿಕಲ್ ಯೂನಿಫಾರ್ಮಿನ ಗೆರೆ ಗೆರೆ ಅಂಗಿ, ಬೆನ್ನಿಗೊಂದು ಸುಲೇಖಾ ಪಾಟಿಚೀಲ ತೊಡಿಸಿ ಕರಕೊಂಡು ಬಂದಿದ್ದರು. ಶಾಲೆಗೆ ಮಕ್ಕಳನ್ನು ಕರೆತರುವ ಅಮ್ಮಂದಿರನ್ನೇನೂ ನೀವಿಲ್ಲ ಕಲ್ಪಿಸಬೇಕಾದ್ದಿಲ್ಲ, ಸಂಜೆ ಹೊತ್ತಿಗೆ ನಗರದ ಶಾಂತ ಓಣಿಗಳಲ್ಲಿ ತಮ್ ತಮ್ಮ ಸಾಕುನಾಯಿಯ ಜೊತೆಗೆ ಕಾಲಾಡಿಸಿ (ವಾಕಿಂಗು) ಬರಲು ಹೊರಡುವ ಟೀ ಶರ್ಟಿನ ಹೆಣ್ ಮಕ್ಕಳನ್ನೂ (ಅವರ ಪೆಟ್ ನಾಯಿಯನ್ನೂ) ಕಣ್ ಮುಂದೆ ತಂದ್ಕಳಿ ಸಾಕು.

ಅಷ್ಟಾಯ್ತಾ, ಇವಾಗ ಮುಂದಿಂದು ಏನಪಾಂದ್ರೆ ನಮ್ಮೂರ್ ಹುಡುಗ್ರು ಆ ಪ್ಯಾಟೆ ಕೂಸ್ಗಳು ಹೇಳಿಕೊಟ್ಟ ಇಂಗ್ಲೀಷ್ ಶ್ಲೋಕಗಳನ್ನು (ರೈಮ್ಸ್ ಅನ್ನಬೇಕಿತ್ತಾ? ಮರೆತೆ) ಆ ಘೇಂಡಾಮೃಗಕ್ಕೆ ಒಪ್ಪಿಸೋ ಟಾಸ್ಕು. ಒಬ್ಬ ಟ್ವಿಂಕಲ್ ಟ್ವಿಂಕಲ್ ಪೂರ್ತಿ ಹೇಳಕ್ಕಾಗದೆ ಪಿಂಕ್ ಪಿಂಕ್ ಅಂದ, ಇನ್ನೊಬ್ಬ ಅಂಥದ್ದೇ ಬಾಲ್ವಾಡಿ ಶ್ಲೋಕವೊಂದನ್ನ ಬಾಯ್ಪಾಠ ಹೇಳಲಾಗದೆ ಪೆದ್ದ್ ಪೆದ್ದಾಗಿ ಚಡ್ಡಿ ಹಿಂಜಿಕೊಳ್ಳುತ್ತ ನಿಂತ. ಅದಷ್ಟಾದ ಬಳಿಕ, ಬೇರ್ ಬೇರೆ ಪ್ರಾಣಿಗಳ ಚಿತ್ರವನ್ನು ಪಟದಲ್ಲಿ ತೋರಿಸಿ ಇಂಗ್ಲೀಷಲ್ಲಿ ಅವುಗಳ ಹೆಸರು ಹೇಳುವುದಕ್ಕೆ ನಿರೂಪಕ ಕೇಳುತ್ತಿದ್ದ. ಆ ಹಳ್ಳಿ ಯುವಕರು ಅದು ತಿಳಿಯದೆ ಮಂಗಾ ಆಗುವುದನ್ನು ನೋಡಿ ಅವರ ಬಿಳೀ ಗೆಳತಿಯರು ನಾಚಿ ನೀರಾಗುವುದೇ ಕ್ಯಾಮೆರಾಕ್ಕೆ ಆಹಾರ. ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಿ ಅವರನ್ನು ’ಹಳ್ಳೀ ಪೆದ್ದೂಸ್’ ಎಂದು ಬಿಂಬಿಸುವ ನಿರೂಪಕ ತನ್ನನು ತಾನು ಹೀರೋ ಅಂತ ಬಿಂಬಿಸಿಕೊಳ್ಳಲು ಹೆಣಗಾಡುತ್ತಿದ್ದ. ಒಟ್ಟಿನಲ್ಲಿ ಅದೊಂದ್ ಮೂರ್ ನಾಲ್ಕು ಜನ ಹಳ್ಳೀ  ಜನರನ್ನಿಟ್ಟುಕೊಂಡು, ಅವರನ್ನು ಧಡ್ಡಾ ದಡ್ಡವಾಗಿ ಬಿಂಬಿಸುವ ಮತ್ತು ಅದನ್ನು ಮನರಂಜನೆಯ ಹೆಸರಿನಲ್ಲಿ ಮಾರಾಟ ಮಾಡುವ ವ್ಯವಸ್ಥಿತ ಕಾರ್ಯಕ್ರಮಕ್ಕೆ ನಿಜಾಯ್ತಿ ತೋರ್ಕೆಯ ಹೆಸರು.

ಸರಿ, ಇದೆಲ್ಲ ಇವತ್ತಿನ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತಿರುವ ಧಂಧೆ ಅಂತ ಸುಮ್ಮನಿರೋಣ ಅಂದ್ರೆ, ಯಾಕೋ ಆ ಕಾರ್ಯಕ್ರಮ ನೋಡ್ತಾ ಇದ್ದಂತೆ ಇದೊಂದು ಸಕಾರಾತ್ಮಕ ಕಾರ್ಯಕ್ರಮ ಎಂದು ಅನ್ನಿಸಲೇ ಇಲ್ಲ. ಸಿದ್ಧಿ ಜನಾಂಗ ಎನ್ನುವುದು ಪೂರ್ಚುಗೀಸರ ಕಾಲದಲ್ಲಿ ಅವರ ಹಡಗುಗಳಲ್ಲಿ ಗುಲಾಮರಾಗಿ ಭಾರತಕ್ಕೆ ಬಂದಿಳಿದು ಕಾಡುಗಳಲ್ಲಿ ಸೇರಿ ಯಾರಿಗೂ ತೊಂದರೆ ಕೊಡದೆ ಬದುಕುತ್ತಿರುವ ಜನಾಂಗ. ಆಧುನಿಕತೆ ಆ ಜನಕ್ಕೆ ಹೊಸದಿರಬಹುದು, ಹಾಗಂತ ಅವರು ಧಡ್ಡರೇನಲ್ಲ. ಇವತ್ತು ಅವರನ್ನು ಬುಡಕಟ್ಟು ಜನಾಂಗದ ಕಲೆಯ ಹೆಸರಿನಲ್ಲಿ ನಾಯಿಕೊಡೆಯಂಥಾ ರೆಸಾರ್ಟುಗಳ elite ಪ್ರವಾಸಿಗರ ಮೋಜಿಗಾಗಿ ಅರೆಬೆತ್ತಲೆ ಕುಣಿಸಲಾಗುತ್ತದೆ. ರಿಯಾಲಿಟಿ ಶೋಗಳಲ್ಲಿ Specimen ಎನ್ನುವಂತೆ ಬಿಂಬಿಸಿ ಹಣ ಮಾಡಲಾಗುತ್ತದೆ. ಭಾಗವಹಿಸುವವರಿಗೆ ಮನಸಿದ್ದರೆ ನಿಮ್ಮದೇನ್ ತಕರಾರು ಎಂದು ನೀವು ಕೇಳಬಹುದು, ಕಾನೂನಿನ ಪ್ರಕಾರ ಇದು ಸರಿಯಾದ ಪ್ರಶ್ನೆಯೇ. ಆದರೆ, ಅವರ ಮುಗ್ಧತೆಯನ್ನು ಆಡಿಕೊಂಡು ನಗುವುದಕ್ಕೆ ಅವಕಾಶ ಕಲ್ಪಿಸುವ ನಮ್ಮ ವಾಹಿನಿಗಳನ್ನು ಪ್ರಶ್ನಿಸುವುದು ಕಾನೂನಿನ ಪ್ರಶ್ನೆಗಿಂತ ಮಾನವೀಯ ಪ್ರಶ್ನೆ ಎನ್ನುವುದು ನನ್ನ ನಿಲುವು. ಇನ್ನೊಂದು ವಿಷ್ಯ ಏನಂದ್ರೆ, ನಮ್ಮ ಓರಾಟಗಾರರ್ಯಾರಿಗೂ ಇದು ಕುಚೋದ್ಯ ಎಂದಾಗಲೀ, ಸಮಾಜದಲ್ಲಿ ಹಿಂದುಳಿದವರ ವಿರುದ್ಧ ಮೇಲ್ವರ್ಗದ ಜನ ಮಾಡುವ ದೌರ್ಜನ್ಯ ಎಂದಾಗಲೀ ಅನ್ನಿಸುವುದಿಲ್ಲ.

ಯಾಕೋ, ಮನರಂಜನೆ ಎನ್ನುವ ಪರಿಕಲ್ಪನೆಯನ್ನೆ ನಮ್ಮ ಮನರಂಜನೆಯ ಮನೆಗಳು ಅಪಾರ್ಥ ಮಾಡಿಕೊಂಡಿವೆ ಅನ್ನಿಸುತ್ತಿದೆ. ಯಾವುದು ಮನರಂಜನೆ? ಸೃಜನಶೀಲವಾದ ಮನರಂಜನೆಯನ್ನು ಸೃಷ್ಟಿಸಲು, ಒಂದೋ ಕಲೆಯಿರಬೇಕು, ಅಥವಾ ಅಸೀಮ ಬುದ್ಧಿವಂತಿಕೆಯಿರಬೇಕು (ಚಾತುರ್ಯ). ಎರಡನೆಯದರ ಕೊರತೆ ಇವತ್ತಿಗೆ ಕಾಡುತ್ತಿದೆ. ಹಾಗಾಗಿಯೇ, ಇನ್ನೊಬ್ಬನನ್ನು ಮಂಗ ಮಾಡಿ ಖುಷಿಪಡುವ ಪರಿಸ್ಥಿತಿ ನಮಗೆ ಬಂದಿದೆ.


ಇಷ್ಟರಮೇಲೂ ನಮ್ಮೂರ ಹುಡುಗರು ಮಂಗಾ ಆಗುವುದನ್ನು ನೋಡಲೇಬೇಕೆಂದಿದ್ದರೆ, ನಿಮ್ಮಿಷ್ಟ ನೋಡಿ J

ಮತ್ತೇನಲ್ಲ, ನಮ್ಮದೇ ವಿಕೃತಿಯನ್ನು ಝಗಾ ಝಗ್ ಬೆಳಕಿನಲ್ಲಿ ನೋಡಿಕೊಂಡಂತೆ ಇದು. 

2 comments:

  1. ನಾನೂ ಇದನ್ನು ಗಮನಿಸಿದ್ದೇನೆ. ನೀವು ಸರಿಯಾಗಿಯೇ ಹೇಳಿದ್ದೀರಿ... ಇದನ್ನು ಪತ್ರಿಕೆಗಳಲ್ಲಿ ಬರುವಂತೆ ಮಾಡುವುದು ಸೂಕ್ತ . ಇನ್ನು ಅವೂ ಇದನ್ನು ಸಮರ್ಥಿಸಿಕೊಂಡರೆ ದೇವರೇ ಗತಿ.

    ReplyDelete
  2. ನಾನೂ ಇದನ್ನು ಗಮನಿಸಿದ್ದೇನೆ. ನೀವು ಸರಿಯಾಗಿಯೇ ಹೇಳಿದ್ದೀರಿ... ಇದನ್ನು ಪತ್ರಿಕೆಗಳಲ್ಲಿ ಬರುವಂತೆ ಮಾಡುವುದು ಸೂಕ್ತ . ಇನ್ನು ಅವೂ ಇದನ್ನು ಸಮರ್ಥಿಸಿಕೊಂಡರೆ ದೇವರೇ ಗತಿ.

    ReplyDelete