Tuesday, September 22, 2015


ಇಂದು ಕಂಡ ಕನ್ನಡದ ಬೌದ್ಧಿಕ ಬಡತನದ ಬಗ್ಗೆ ಖಿನ್ನನಾಗಿ...

ನನಗೆ ಈ ಜನಗಳ ಬಗ್ಗೆ ಪೂರ್ವಗ್ರಹೀತಗಳಿರಲಲ್ಲ. ಆದರೆ, ಇದೀಗ ಪ್ರಜಾ ಟೀವಿಯಲ್ಲಿ ಬಂದ ಭಗವಾನ್ ಅವಾಂತರದ ಕುರಿತಾದ ಚರ್ಚೆಯನ್ನು ಗಮನಿಸುತ್ತ ಬಿ ಟಿ ಲಲಿತಾ ನಾಯಕ್, ಯೋಗೇಶ್ ಮಾಸ್ಟರ್, ಅರವಿಂದ ಮಾಲಗತ್ತಿ ಎಂಬ ಕನ್ನಡದ ಸಾಹಿತಿಗಳ ಚರ್ಚಾ ಸಾಮರ್ಥ್ಯ ಮತ್ತು ವಿಚಾರ ಸಾಮರ್ಥ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯವಂತೂ ಮೂಡಿಲ್ಲ.

ಚರ್ಚೆಯಲ್ಲಿ ಭಾಗವಹಿಸಿದ ಉಳಿದಿಬ್ಬರು ಯುವಕರ ಬಗ್ಗೆ ನಾನು ಮಾತಾಡಬೇಕಿಲ್ಲ, ಯಾಕೆಂದರೆ ಅವರ್ಯಾರೂ ಸಾಹಿತ್ಯದ ಕಾರಣಕ್ಕೆ ಗುರುತಿಸಿಕೊಂಡವರಲ್ಲ. ಸಾಹಿತ್ಯದ ದನಿಯಾಗಿ ನಿಂತವರೂ ಅಲ್ಲ. ಅವರು ಜನ ಸಾಮಾನ್ಯರ ಪ್ರತಿನಿಧಿಗಳು.

ಕನ್ನಡ ಸಾಹಿತ್ಯದ ಪಂಥಗಳ ನಡುವಿನ ಅಧ್ವಾನ ಏನೇ ಇರಲಿ, ತಮ್ಮ ತಮ್ಮ ವಿಚಾರಗಳನ್ನು ಆಯಾ ಪಂಥದ ಅನುಗಾಮಿಗಳು ಸಮರ್ಥವಾಗಿಯೂ, ತಾರ್ಕಿಕವಾಗಿಯೂ, ಪ್ರತಿಪಾದಿಸಬಲ್ಲರು ಎಂಬುದೇ ನನ್ನ ನಂಬುಗೆಯಾಗಿತ್ತು. ಆ ನನ್ನ ನಂಬುಗೆಯನ್ನು ಮೊದಲಬಾರಿಗೆ ಹುಸಿಯಾಗಿಸಿದ್ದು ಮುಖ್ಯಮಂತ್ರಿಗಳ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು. ಹೋಗಲಿ, ಅವರು ಅಂಕಣಕಾರ, ಪತ್ರಕಾರ, ಆದರೆ ಸಾಹಿತಿಯಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದೆ. ಇವತ್ತು ಪ್ರಜಾಟೀವಿಯ ಚರ್ಚೆಯಲ್ಲಿ ಬಂದು ಕುಳಿತವರು ಸಾಹಿತಿಗಳಾಗಿದ್ದರು, ಅಧ್ಯಯನ ಇದ್ದು ಜೀವನ ಪರ್ಯಂತ ಸಾಹಿತ್ಯದ ನಿರ್ಮಿತಿಯಲ್ಲೇ ತೊಡಗಿದವರು. ಹಾಗಾಗಿ ಕನ್ನಡದ ಚಿಂತನೆಯ ಮೇಲಿನ ನನ್ನ ಕಕ್ಕುಲಾತಿ ಈ ಜನಗಳಿಂದ ಸಮರ್ಥವಾದ, ತರ್ಕಸಮ್ಮತವಾದ, ಮಾತುಗಳನ್ನು ನಿರೀಕ್ಷಿಸುತ್ತಿತ್ತು. ಆದರೆ ಆಗಿದ್ದು ಮಾತ್ರ ಶುದ್ಧ ನಿರಾಸೆ.

ಕುವೆಂಪು ’ಎಲ್ಲ ದೇವರನು ನೂಕಾಚೆ ದೂರ’ ಎಂದು ಬರೆದದ್ದನ್ನೂ ಇವತ್ತಿನ ಭಗವಾನನ ಅಪಕ್ವ ಮಾತುಗಳನ್ನೂ ಸಮವೆಂಬಂತೆ ನೋಡುವುದಕ್ಕೆ ಹೇಳುವ ಬಿ ಟಿ ಲಲಿತಾ ನಾಯಕ್, ಇಸ್ಲಾಮೀ ಭಯೋತ್ಪಾದನೆಯ ವಿರುದ್ಧವಾಗಿ ಭಗವಾನ್ ಮತ್ತು ತಮ್ಮಂಥವರೆಲ್ಲ  ಮಾತಾಡಿದ್ದೇವೆ ಎಂದು ಸುಳ್ಳೇ ಹೇಳಿದ ಮಾಸ್ಟರ್, ಭಗವಾನ್ ವೈಜ್ಞಾನಿಕವಾಗಿ ಮಾತಾಡುತ್ತಾರೆ, ಬರೆಯುತ್ತಾರೆ ಎಂಬಂತೆ ಮಾತಾಡಿದ ಮಾಲಗತ್ತಿ- ಕನ್ನಡದಲ್ಲಿ ಚರ್ಚೆಯನ್ನು ಮಾಡುವ, ವಾದ ಮಂಡಿಸುವ, ಖಂಡಿಸುವ ಬೌದ್ಧಿಕ ಪರಂಪರೆ ಹೀನಾಯ ರೀತಿಯಲ್ಲಿ ಸೊರಗಿದೆ ಎಂಬುದನ್ನು ಜಾಹೀರು ಮಾಡಿದರು. ಇದೆಲ್ಲ ಕೆಲವು ಉದಾಹರಣೆಯಷ್ಟೇ, ಅಲ್ಲಿ ನಡೆದ ಹಲವಾರು ವಾದಗಳು ವಿತಂಡಾ ಮತ್ತು ಜಲ್ಪ (ಹಲುಬುವಿಕೆ) ಎಂಬ ಎಲುಬಿಲ್ಲದ ತರ್ಕದಲ್ಲಿ ಬರುತ್ತವೆ. ಬಲ ಎಡಗಳ ಹಂಗಿಲ್ಲದ ಒಬ್ಬ ಸಾಮಾನ್ಯನಾಗಿ ಹೇಳುತ್ತೇನೆ, ಕಾರ್ಯಕ್ರಮದ ನಿರೂಪಕರು ಅಲ್ಲಿ ಚಿಂತಕರ ಹೆಸರಲ್ಲಿ ಕುಳಿತ ಮತ್ತು ಫೋನಿಗೆ ಸಿಕ್ಕ ಸಾಹಿತಿಗಳಿಗಿಂತ ತರ್ಕಸಾಧುವಾಗಿದ್ದರು.

ಕನ್ನಡದಲ್ಲಿ ಚಿಂತನೆ, ಚಿಂತನೆಯ ಮಂಡನೆ- ಖಂಡನೆಗಳ ಪರಂಪರೆ ಇತ್ತೆಂದು ನಾನು ಬಲ್ಲೆ, ಇಂದಿಗೂ ನನ್ನ ಹಲವಾರು ಮಿತ್ರರಲ್ಲಿ, ಹಿರಿಯರಲ್ಲಿ ನಾನು ಅದನ್ನು ಕಾಣುತ್ತೇನೆ. ದುರದೃಷ್ಟವಶಾತ್ ಈ ಸಾಹಿತಿಗಳಲ್ಲಿ ನಾನದನ್ನು ನಿರೀಕ್ಷಿಸಿದ್ದೆ. ಇವತ್ತು ಅದೆಷ್ಟು ನಿರಾಸೆಯಾಯ್ತೆಂದು ವಿವರಿಸಲಾರೆ. ಒಬ್ಬ ಸಂಸ್ಕೃತದ ವಿದ್ಯಾರ್ಥಿಯಾಗಿ ನಾನು ಈ ಪರಂಪರೆಯನ್ನು- ಯಾವುದೇ ಭಾಷೆಯಲ್ಲಿರಲಿ- ಮನಸಾ ಗೌರವಿಸುತ್ತೇನೆ. ವ್ಯಾಕರಣ ಓದುವವನಿಗೆ ಮೀಮಾಂಸಾ ಶಾಸ್ತ್ರ, ನ್ಯಾಯ ಶಾಸ್ತ್ರಗಳು ಪೂರ್ವಪಕ್ಷಗಳಾಗಿ ಪ್ರಶ್ನೆ ಎತ್ತುತ್ತವೆ. ಪ್ರಶ್ನೆಯ ಒಂದಂಗುಲವನ್ನೂ ಬಿಡದೆ ಸಂಶಯಕ್ಕೆಡೆಯಿರದಂತೆ ಉತ್ತರಿಸುವ, ಅದೇ ಬಗೆಯಲ್ಲಿ ಪ್ರಶ್ನೆ ಕೇಳುವ ಪರಂಪರೆ ಇಂದಿಗೂ ನಮ್ಮಲ್ಲಿದೆ. ಇವತ್ತು ನಡೆದಿದ್ದು ಶಾಸ್ತ್ರಗಳ ಚರ್ಚೆಯಲ್ಲದಿರಬಹುದು, ಆದರೆ ಚರ್ಚೆಯೊಂದು ನಡೆಯಬೇಕಾದ ರೀತಿ ಅದೇ ತಾನೆ? ಏತಿ ಎಂದುದಕ್ಕೆ ಪ್ರೇತಿ ಎನ್ನುವುದೇ ಆದರೆ ಅದಕ್ಕೆ ಸಾಹಿತಿಗಳು ಯಾಕೆ? ಇನ್ನೊಬ್ಬನಿಗೆ ಉತ್ತರಿಸುವಾಗ, ಒಬ್ಬನನ್ನು ಸಮರ್ಥಿಸುವಾಗ ಅದರ ಕಾರಣವನ್ನು ಪ್ರತಿವಾದಿಯ ಸಂಶಯ ಕರಗುವಂತೆ ಮಂಡಿಸಬೇಕು. ಸಂಬಂಧವೇ ಇಲ್ಲದ ವಾಕ್ಯಗಳ ಸಂತೆಯು ಚರ್ಚೆಯಲ್ಲ ತಾನೆ?

ಇವತ್ತು ಸಿಟ್ಟಿಲ್ಲ, ನಾನು ಅಭಿಮಾನಿಸುವ ಚಿಂತನೆಯೊಂದನ್ನು ಪ್ರತಿಪಾದಿಸುವ ಹುಮ್ಮಸ್ಸಿಲ್ಲ. ಕನ್ನಡದ ದುಃಸ್ಥಿತಿಯ ಕುರಿತು ಖೇದವಿದೆ, ಇಷ್ಟು ಪೂರಾ ನಮ್ಮ ಸಾಹಿತಿಗಳು ತರ್ಕಸಿಂಧುವಲ್ಲದ ಮಾತಾಡುವ ಜನಗಳಾಗಿದ್ದಾರಲ್ಲ ಅಂತ ನೋವಿದೆ. ತನ್ನನ್ನು ತಾನು ಮಾರಿಕೊಂಡ ಮನುಷ್ಯ ತನ್ನ ಬದ್ಧತೆಯನ್ನು ಚಿಂತನೆಗೆ ಒಪ್ಪಿಸುವ ಬದಲು, ಇನ್ಯಾರದೋ ಎಂಜಲಿಗೆ, ಮುಲಾಜಿಗೆ ಒಪ್ಪಿಸಿಬಿಡುತ್ತಾನಲ್ಲ- ಒಬ್ಬ ಪಿಂಪ್ ನಂತೆ- ಎಂದೆನ್ನಿಸಿ ತೀರಾ ಸಪ್ಪೆಯೆನಿಸಿತು.
ಇವತ್ತು ಸಮಾಜದಲ್ಲಿ ಹರಿಕಥೆ ದಾಸರ ಕಥೆಗಳನ್ನು ಕೇಳಿಕೊಂಡವರು, ಯಕ್ಷಗಾನ ತಾಳಮದ್ದಲೆಯನ್ನು ಆಲಿಸುವ ಅತಿ ಸಾಮಾನ್ಯ ಜನರು, ಹಳೆ ಲೈಬ್ರೆರಿಯಲ್ಲಿ ಕಾಲ ಕಳೆಯುವವರು, ಒಂದು ಚರ್ಚೆಯ ರೀತಿ ಹೇಗಿರಬೇಕೆಂಬುದನ್ನು ಬಲ್ಲರು. ಅದೇ, ಅಧ್ಯಯನ ಇರುವ, ಸಾಹಿತಿಗಳೆನಿಸಿಕೊಂಡವರು ಅವರಿಗಿಂತ ಕಳಪೆಯಾಗಿದ್ದಾರೆ. ಇದು ಪಂಥದ ಪ್ರಶ್ನೆಯಲ್ಲ, ಯಾವುದೇ ಚಿಂತನೆಗೂ ಸಲ್ಲುವ ಸಾಮಾನ್ಯ ನಿಯಮದ ಪ್ರಶ್ನೆ. ಸಮಾಜದ ಅತಿ ಸಾಮಾನ್ಯ ವರ್ಗ ಇವತ್ತು ಕನ್ನಡದ ಸಾಹಿತಿಗಳ ಬಗ್ಗೆ ಮಾತಾಡುತ್ತದೆ ಯಾಕೆ ಎನ್ನುವುದಕ್ಕೆ ಬಹುಶಃ ಈ ಸಾಹಿತಿಗಳ ನೆಲೆ ತಪ್ಪಿದ ವರಸೆಯೇ ಕಾರಣವಿರಬಹುದು,

ಮಾತಾಡುವುದನ್ನು ಪರಿಗಣಿಸಿದೆ ಸಾಹಿತ್ಯಕ್ಕೆ ಕೊಟ್ಟ ಪುರಸ್ಕಾರ ಅಂದರು ಮಾಲಗತ್ತಿ, ಮಾತಿಗೆ ಮತ್ತು ಕೃತಿಗೆ ಸಂಬಂಧ ಇಲ್ಲವೇ ಎನ್ನುವ ಪ್ರಶ್ನೆಗೆ ಲಲಿತಾ ನಾಯಕ್ ಅಂದರು ’ಭಗವಾನ್ ಬರೆದಿದ್ದನ್ನೇ ಆಡುತ್ತಿದ್ದಾರೆ’ ಅಂತ. ಯೋಗೇಶ್ ಹೇಳ್ತಾರೆ ’ಕಲೆ ಮತ್ತು ಸಾಹಿತ್ಯವನ್ನೆಲ್ಲ ಧಾರ್ಮಿಕ ದೃಷ್ಟಿಯಲ್ಲಿ ನೋಡಬಾರದು’ ಅಂತ. ಸ್ವಾಮೀ ವಿಮರ್ಶೆಗೆ ಹೇಗೆ ತೆರೆದುಕೊಳ್ಳುವುದೆಂಬುದನ್ನು ನಮಗೆ ನೀವು ಪಾಠಮಾಡಬೇಕಿಲ್ಲ, ಬಂದಿರುವ ಪ್ರಶ್ನೆ ಆ ವಿಮರ್ಶೆಯನ್ನು ಭಗವಾನ್ ಎಂಥ ಭಾಷೆಯಲ್ಲಿ ಎದುರಿಗಿಟ್ಟ ಎಂಬುದು. ಅದಕ್ಕೆ ಉತ್ತರವನ್ನೇ ಕೊಡದೆ ಎಲ್ಲರೂ ನುಣುಚಿಕೊಂಡರು. ನಿಮ್ಮ ಹೀನಾಯ ಸೋಲು ಇದು, ಅಷ್ಟೆಲ್ಲ ಅಧ್ಯಯನ ಮಾಡಿಕೊಂಡವರಾಗಿದ್ದುಕೊಂಡು. ಮಾಸ್ತರ್ ಅಂತೂ ವರ್ತಮಾನದ ಪರಿವೆಯಿಲ್ಲದೇ ಮಾತಾಡಿದರು, ಭಗವಾನ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದೆಲ್ಲ ಆದೇಶಿಸಿದರು. ಕರೆದ ಚರ್ಚೆಗೆ ಬಾರದ, ಫೋನಿಗೆ ಉತ್ತರಿಸದ, ನೇರ ಚರ್ಚೆಯ ಆಹ್ವಾನವನ್ನು ಸ್ವೀಕರಿಸದ ವಿಚಾರಷಂಡ ಭಗವಾನನನ್ನು ಎಲ್ಲಿ ಸಂಧಿಸಿ ಉತ್ತರಕೊಡಬೇಕು, ಆದೇಶಿಸೋಣವಾಗಲಿ ಮಾಸ್ತರ್ರೆ.

ರೋಹಿತ್ ಚಕ್ರತೀರ್ಥ ಅದೆಷ್ಟು ನಿರ್ಲೇಪ ಮೂರ್ತಿಯಾಗಿ ಕುಳಿತಿದ್ದರೆಂದರೆ, ವಯೋವೃದ್ಧೆ ಲಲಿತಾ ನಾಯಕ್ ಸ್ವತಃ ತಮ್ಮ ಮಾತಿನ ಮಧ್ಯೆ ಉದ್ವೇಗಕ್ಕೆ ಒಳಗಾದರೂ, ಯುವ ರೋಹಿತ್ ಹಸನ್ಮುಖಿಯಾಗೇ ಇದ್ದರು. ಅರೆಬೆಂದವರೆಂದು ಇಂಥವರಿಗೆ ಹೇಳುವುದಾದರೆ ಅರೆಬೆಂದವರ ಅಗತ್ಯ ಕನ್ನಡಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಇದೆ.
ಭಗವಾನ್ ಗೆ ಸಂಸ್ಕೃತ ಗೊತ್ತು ಎಂದ ಲಲಿತಾ ನಾಯಕ್ ಆ ವಾಕ್ಯಗಳಲ್ಲಿಯೇ ತಮ್ಮ ಸಂಸ್ಕೃತ ಜ್ಞಾನವನ್ನು ತೆರೆದಿಟ್ಟರು! ಸಂಸ್ಕೃತವನ್ನು ಕೊಂಚ ಓದಿಕೊಂಡವರೂ ಅದನ್ನು ಗುರುತಿಸಬಹುದು. ಇರಲಿ ಅಜ್ಞಾನವು ತಪ್ಪಲ್ಲ, ಆದರೆ ಇನ್ನೊಬ್ಬನ ಅಜ್ಞಾನದ ಅಂಧ ಸಮರ್ಥನೆ ತಪ್ಪಾಗುತ್ತದೆ ನಾಯಕ್ ರೆ.         

ನಿಜವಾಗಿ ಬೌದ್ಧಿಕವಲಯ ಅಂತ ಯಾವುದನ್ನು ಭಾವಿಸಿದ್ದೆನೋ ಅದು ರಂಗು ಕಳೆದ ತಗಡಿನಂತಾಗಿದೆ. ಸಾಮಾನ್ಯ ಜನತೆಯ ಸಾಮಾನ್ಯ ಜ್ಞಾನದ ಬಗ್ಗೆ ಗೌರವ ಹೆಚ್ಚಾಗಿದೆ. ನಿಲುಮೆ ಎಂಬ ಅಪ್ಪಟ ಚಿಂತಕರ ಬಳಗದ ಬಗ್ಗೆ ಗೌರವ ನೂರ್ಮಡಿಯಾಗಿದೆ. ಇರಬಹುದು, ಉದ್ವೇಗಕ್ಕೆ ಒಳಗಾಗುವ ಯುವಕರಿರಬಹುದು ಇಲ್ಲಿಯೂ, ಆದರೆ ನಿಲುಮೆ ನಿಂತ ನೆಲೆಯಂತೂ ಶುದ್ಧ ಚಿಂತ್ರನೆಯದ್ದು. ಬಲಪಂಥದ್ದಲ್ಲ, ಕನ್ನಡದ ಪರಂಪರೆಯ ಆಶಾವಾದ ನಿಲುಮೆ ಇಂದಿಗೆ. ಉಗಿದೋಡುವ ಹೀನತೆ ಎಂದಿಗೂ ಈ ಜನಗಳಿಗೆ ಬಾರದಿರಲಿ.



1 comment:

  1. ಸೊಗಸಾಗಿ, ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ!.

    ReplyDelete