Wednesday, September 23, 2015

ಚಿಂತನ ಪರಂಪರೆಯ ಅಪರೂಪದ ಉದಾಹರಣೆ



ಹಾಗೆ ನೋಡಿದರೆ ಇವತ್ತಿಗೂ ಬೆಟ್ಟದ ಮಧ್ಯೆ ಇರುವ, ಆಧುನಿಕತೆಯ ದುಪ್ಪಾಂಧೂಳು ದಾಳಿಗೆ ಒಳಗಾಗಿರದ, ರಾತ್ರಿ ಒಂಭತ್ತಕ್ಕೆಲ್ಲ ತನ್ನ ಮನೆಗಿರುವ ಎಲ್ಲ ಬಾಗಿಲುಗಳನ್ನೂ ಮುಚ್ಚಿಕೊಂಡು ತಂಣಗೆ ನಿದ್ರೆ ಮಾಡಿಬಿಡುವ, ದೇಗುಲ ಪಟ್ಟಣ ಶೃಂಗೇರಿ. ಯಾವುದೇ ದಿಕ್ಕಿನಿಂದ ಅಲ್ಲಿಗೆ ತಲುಪುವುದೂ, ಅಲ್ಲಿಂದ ಇನ್ನೆಲ್ಲಿಗಾದರೂ ಹೊರಡುವುದು ೨೧ನೇ ಶತಮಾನದ ಇವತ್ತಿನ ಸ್ಥಿತಿಯಲ್ಲೂ ಶ್ರಮದಾಯಕ. ಶಾರದೆಯ ಪೀಠವೊಂದನ್ನುಳಿದು ಇನ್ಯಾವ ಕಾರಣಕ್ಕೂ ದೂರ ದೂರದವರು ಬಂದು ಹೋಗಬೇಕಾದ ಜಾಗವೇ ಅದಲ್ಲ. ದೇವಾಲಯವಿದೆ, ಹಾಗಾಗಿ ಜನ ಬರುತ್ತಾರೆ, ಅದೊಂದು ಶಾಂಕರ ಪೀಠ, ಅದೇ ಕಾರಣಕ್ಕೆ ಅದು ಭಾರತದ ಜನತೆಗೆ ಪರಿಚಯವಿದೆ. ಇಷ್ಟೇ ಆದರೆ ಇಷ್ಟಕ್ಕೇ ಮುಗಿಯಬೇಕಿತ್ತು, ಆದರೆ ನಾನು ನಿನ್ನೆಯಿಂದ ಶೃಂಗೇರಿಯ ನೆನಪು ಮಾಡಿಕೊಳ್ಳುತ್ತಿರುವುದಕ್ಕೆ ಸಾಂದರ್ಭಿಕವಾದ ಮಹತ್ತರ ಕಾರಣ ಇನ್ನೊಂದಿದೆ.

ಚಿಂತನೆ ಮತ್ತು ವಿಮರ್ಶೆಯ ಪರಂಪರೆಗೆ ಸಂಬಂಧಿಸಿದ ಸಂಗತಿ ಅದು. ಭಾದ್ರಪದ ಮಾಸದ ಶುಕ್ಲಪಕ್ಷವಲ್ಲವೇ ನಡೆಯುತ್ತಿರುವುದು? ಇದೇ ಹೊತ್ತಿನಲ್ಲಿ ಶೃಂಗೇರಿಯ ಜಗದ್ಗುರು ಪೀಠದ ಎದುರಿನಲ್ಲಿ ಚಿಂತನೆಯ ಸತ್ರವೊಂದು ಪ್ರತಿವರ್ಷ ನಡೆಯುತ್ತದೆ. ದರ್ಶನಗಳು ಮತ್ತು ವ್ಯಾಕರಣ ವಿಷಯಗಳಲ್ಲಿ ದಿನವೂ ಮೂರ್ ನಾಲ್ಕು ಗಂಟೆ ನಡೆಯುವ ವಾಕ್ಯಾರ್ಥ ಸಭೆ ಅದು. ಗಣೇಶನ ಎದುರಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಯುವ ಈ ಸಭೆ, ಗಣಪತಿ ವಾಕ್ಯಾರ್ಥ ಸಭೆ ಎಂದೇ ವಿದಿತ. ಭಾರತದ ಯಾವುದೇ ಭಾಗದ ಸಂಸ್ಕೃತ ಪರಂಪರಾಗತ ವಿದ್ವಾಂಸನಿರಲಿ, ಈ ಸಭೆಯ ಹೆಸರು ಕೇಳಿದರೆ ಅದೊಂದು ಬಗೆಯ ವಿದ್ವತ್ ಕಂಪವನ್ನೂ, ವಿದ್ಯುತ್ಕಂಪವನ್ನೂ ಅನುಭವಿಸುತ್ತಾನೆ! ಇಲ್ಲಿ ಪಾಲ್ಗೊಳ್ಳಲೆಂದೇ ಭಾರತದ ಬೇರೆ ಬೇರೆ ಭಾಗದಿಂದ ವಿದ್ವಾಂಸರು ಬರುತ್ತಾರೆ.

ಬಂದವನ ಮಾತೃಭಾಷೆ ಯಾವುದೇ ಇರಲಿ, ಸಭೆಯ ಪರಿಮಿತಿಯಲ್ಲಿ ಚರ್ಚೆಯೂ ಸಂವಹನವೂ ನಡೆಯುವುದೆಲ್ಲ ಸಂಸ್ಕೃತದಲ್ಲಿಯೇ. ಸಂಸ್ಕೃತ ಪಂಡಿತರ ಸಭೆ ಎಂದರೆ ಅಲ್ಲಿರುವವರೆಲ್ಲ ವೃದ್ಧರೇ ಎಂದೇನಿಲ್ಲ, ತುಂಬಾ ಯುವ ವಯೋಮಾನದವರೂ ವಿದ್ವಜ್ಜನರ ಮಧ್ಯೆ ಕಾಣಸಿಗುತ್ತಾರೆ.

ಎಪ್ಪತ್ತೈದರಿಂದ ನೂರರಷ್ಟಿರುವ ವಿದ್ವಾಂಸರ ಸಭೆಯಲ್ಲಿ ಸಿಂಹದಂತೆ ಜಗದ್ಗುರುಗಳು ಅಧ್ಯಕ್ಷರಾಗಿ ಕುಳಿತಿದ್ದರೆ ಎಂಥಾ ವಿದ್ವಾಂಸನೂ ಬಾಯ್ಬಿಡುವುದಕ್ಕೆ ಮುಂಚೆ ಮೂರು ಸಲ ಯೋಚನೆ ಮಾಡುತ್ತಾನೆ. ಒಂದು ಪುಟ್ಟ ಪದಸ್ಖಲನ್ಮವೂ ಅಲ್ಲಿನ ಎಲ್ಲರಿಗೂ ತಿಳಿಯುತ್ತದೆ. ಅಪದ್ಧ ವಾಕ್ಯವನ್ನು ಪ್ರಯೋಗಿಸುವುದಂತಿರಲಿ, ಒಂದೇ ಒಂದು ಪದವನ್ನೂ ತಪ್ಪಾಡದ ಸಿದ್ಧಿಯೊಂದು ಇರುವವ ಮಾತ್ರ ಆ ಸಭೆಯಲ್ಲಿ ಮಾತಾಡಬಲ್ಲ. ಪರಂಪರಾಗತ ಸಂಸ್ಕೃತ ವಿದ್ಯಾರ್ಥಿಗೆ ಗಣಪತಿ ವಾಕ್ಯಾರ್ಥ ಸಭೆಯಲ್ಲಿ ಸಂಚಲಚ್ಛಾರದೆಯ ಎದುರು ಶಾಸ್ತ್ರ ಚರ್ಚೆ ಮಾಡುವುದು ಒಂದು ಬಲುದೊಡ್ಡ ಕನಸು. ಕೆಲವರಿಗೆ ಮಾತ್ರ ಒಲಿಯಬಹುದಾದ ಕನಸು. ಸುಮ್ಮನೆ ಶಾಸ್ತ್ರ ಓದಿದ ಮಾತ್ರಕ್ಕೆ ಅಲ್ಲಿ ಮಾತಾಡುವ ಅರ್ಹತೆ ಯಾರಿಗೂ ಬಾರದು. ಅದಕ್ಕೆಂದೇ ಇರುವ, ಜಗದ್ಗುರುಗಳೇ ನಿರ್ವಹಿಸುವ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡವನಿಗೆ ಆ ಭಾಗ್ಯ ಒಲಿಯುತ್ತದೆ. ಪರೀಕ್ಷೆ ಎಂದರೇನೆಂದು ಅಂಥಾ ಪರೀಕ್ಷೆಯಲ್ಲಿ ಉತ್ತರಿಸಿ ಬಂದವ ಹೇಳಬೇಕು- ಹಾಗಿರುತ್ತದೆ ಅದು. ಇಲ್ಲಿ ಮಂಡನೆಯಾಗುವ ಯಾವುದೇ ವಿಷಯದ ಮೇಲೆ ಅಲ್ಲಿರುವ ಯಾರೂ ಪ್ರಶ್ನೆ ಕೇಳಬಹುದು, ಜಗದ್ಗುರುಗಳೇ ಸ್ವತಃ ಪ್ರಶ್ನಿಸಬಹುದು. ಪ್ರಸ್ತುತಿ ಮಾಡುವವನಿಗೆ ಉತ್ತರಿಸುವ ಅಳವು ಇರಬೇಕಾಗುತ್ತದೆ. ಪ್ರಶ್ನೆ ಕೇಳುವುದೊಂದೆ ಅಲ್ಲ, ತಮಗೆ ಹೊಸ ವಿಷಯ ಎಂದು ಯಾವುದಾದರೂ ಕಂಡರೆ ಜಗದ್ಗುರುಗಳು ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಒಂದೇ ಶಾಸ್ತ್ರದಮೇಲೆ ಹಿಡಿತ ಸಾಧಿಸುವುದಕ್ಕೇ ಜೀವಮಾನ ಪರ್ಯಂತ ಸಾಧನೆ ಬೇಕಿರುವಾಗ, ಜಗದ್ಗುರುಗಳು ಅಲ್ಲಿ ನಡೆಯುವ ಅಷ್ಟೂ ಶಾಸ್ತ್ರಗಳಲ್ಲಿ ತಮ್ಮ ತಿಳಿವಿನ ಆಳವನ್ನು ತೆರೆದಿಡುವುದನ್ನು ನೋಡುವುದೇ ಒಂದು ವಿಸ್ಮಯ.

ಚರ್ಚೆ, ಚಿಂತನೆ ಅಂದರೇನೆಂದು ತಿಳಿಯಲು ಅದೊಂದು ಅತ್ಯುತ್ತಮ ಸಭೆ. ಸಂಸ್ಕೃತ ವಿದ್ವಾಂಸರ ಸಭೆಯೆಂದರೆ ಕರ್ಮಠರ, ಬ್ರಾಹ್ಮಣರ, ಕೆಲವೇ ಜನರಿಗೆ ಪ್ರವೇಶವಿರುವ ಸಭೆಯೆಂದು ಕೆಲವರು ಭಾವಿಸಿರಬಹುದು. ವಿದ್ವತ್ತೆಯಿರುವ, ಆಸ್ಥೆ ಮತ್ತು ಆಸಕ್ತಿಯಿರುವ ಸ್ತ್ರೀಯರೂ ಬ್ರಾಹ್ಮಣೇತರರೂ ಸಭೆಯಲ್ಲಿರುತ್ತಾರೆ.
ಅಷ್ಟು ದಿನಗಳ ಸತ್ರದ ಕೊನೆಯಲ್ಲಿ ಸ್ವತಃ ಜಗದ್ಗುರುಗಳು ಪ್ರತಿಯೊಂದು ಶಾಸ್ತ್ರದಿಂದ ಉತ್ತಮ ಪ್ರಸ್ತುತಿಯುಳ್ಳ ಒಬ್ಬೊಬ್ಬ ವಿದ್ವಾಂಸರಿಗೆ ಮುದ್ರೆಯ ಬಂಗಾರದುಂಗುರವನ್ನಿತ್ತು ಆಶೀರ್ವದಿಸುತ್ತಾರೆ. ಸಂಸ್ಕೃತ ವಿದ್ವದ್ವಲಯದಲ್ಲಿ ಆ ಉಂಗುರಕ್ಕಿರುವ ಬೆಲೆಯನ್ನು ಅಳೆಯಲೇ ಆಗದು. ಶಾರದೆಯ ಮನೆಯಲ್ಲಿ ಇವನೊಬ್ಬ ವಿದ್ವಾಂಸನೆಂದು ಪ್ರಮಾಣಿತವಾದಂತೆ ಅದು! ಒಬ್ಬ ವಿದ್ವಾಂಸನ ಜೀವಮಾನದ ಸಾಧನೆ ಅದಾಗಿರುತ್ತದೆ.

ಸುಮ್ಮನೆ ಒಂದು ಕಲ್ಪನೆ ತಂದು ಕೊಳ್ಳುವುದಾದರೆ ಯೂಟ್ಯೂಬ್ ಕೊಂಡಿ ಇಲ್ಲಿದೆ .

ಅಂದಹಾಗೆ, ನಿನ್ನೆ ಕನ್ನಡದ ಕೆಲವು ವಿದ್ವಾಂಸರು ಚರ್ಚೆಯಲ್ಲಿ ಭಾಗವಹಿಸಿದ್ದನ್ನು ಕಂಡು ಇವತ್ತಿದನ್ನು ಬರೆಯುವ ಒತ್ತಡ ನನ್ನಲ್ಲಿ ಮೂಡಿತು. ಚರ್ಚೆಯ ರೀತಿಯನ್ನುಅರಿಯುವ ಮನಸಿದ್ದರೆ, ಒಮ್ಮೆ ಈ ಸಭೆಯೆದುರು ನಿಂತು ಬರಲಿ ಈ ಜನ. ಹಾಂ, ತಮ್ಮನ್ನು ಒಳಗೆ ಬಿಡಲಾರರೆಂಬ ರಾಗ ಎಲ್ಲ ಬೇಡ. ಸಾಂಪ್ರದಾಯಿಕ ಉಡುಗೆಯಲ್ಲಿ ತಾವು ಕುಳಿತೆದ್ದು ಬರಬಹುದು. ಸುಮ್ಮನೆ ಅಲಾಳ್ ಟೋಪಿಯಂತೆ, ಬುದ್ಧಿ ಜೀವಿಯಂತೆ, ಜೋಳಿಗೆ ಪಾಯಿಜಾಮ ಹಾಕಿ ಹೋದರೆ ಅಲ್ಲಿದ್ದವರೆಲ್ಲರೂ ಮೇಲಿಂದ ಕೆಳಗೆ ನಿಮ್ಮನ್ನೇ ನೋಡುತ್ತಾರೆ, ತಪ್ಪು ನಿಮ್ಮದೇ ಹೊರತು ಅವರದಲ್ಲ. ತಮ್ಮ ವಿವಿಗಳಲ್ಲಿ ಶಾಲು ಪಂಚೆ ಹೊದ್ದು ಒಬ್ಬ ವಿದ್ಯಾರ್ಥಿ ಬಂದರೆ ನೀವು ನೋಡುವುದಿಲ್ಲವೇ? ಹಾಗೆ.    ಹೇಗೂ ತಮ್ಮಲ್ಲಿ ಕೆಲವರಿಗೆ ಸಂಸ್ಕೃತದಲ್ಲಿ ಪಾಂಡಿತ್ಯ ಇರುವುದರಿಂದ ಚರ್ಚೆ ಅರ್ಥವಾಗದೇ ಇರಲಾರದು. ಇನ್ನೊಂದು ಮೂರ್ನಾಕು ದಿನ ಇರಬಹುದು, ನೋಡಿ, ಪ್ರಯತ್ನ ಮಾಡಿ.   




No comments:

Post a Comment