Monday, July 25, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 1

ಮಳೆಗಾಲದ ಶುರುವಾತಿನಲ್ಲಿ ಕಳೆದೆರಡು ಮೂರು ವರ್ಷಗಳಿಂದ ಕೆಲವು ವಿಶಿಷ್ಟ ಎನ್ನಿಸುವ ದೇವಾಲಯಗಳಿಗೆ ಭೇಟಿಕೊಡುವ ಸುಯೋಗ ಒದಗಿ ಬರುತ್ತಿದೆ. ಮಳೆಗಾಲದ ಶುರುವಾತು ಅನ್ನುವುದು ವಿಶೇಷ ಹಸಿರುತನವನ್ನು ತುಂಬಿಕೊಟ್ಟಿರುವಂಥ ದೇವಾಲಯಗಳವು. ಹಸಿರುತನವಿಲ್ಲದ್ದು ಮತ್ತು ನೀರಿನ ನೆಲೆಯಿಲ್ಲದ್ದು ಒಂದು ದೇವಾಲಯವಾಗಿ ಇದುವರೆಗೆ ನನ್ನನು ಸೆಳೆದಿಲ್ಲ.
ಹಾಗೆ ನೋಡಿದರೆ ನಮ್ಮ ಪ್ರಾಚೀನ ದೇವಾಲಯಗಳೆಲ್ಲ ನೆಲೆಯಾಗಿದ್ದು ನೀರ ತೀರದಲ್ಲಿ (ನದಿ ಅಥವಾ ಕಡಲಿನ ಅಂಚಲ್ಲಿ) ಗಾಢ ಕಾಡಿನ ಗುಡ್ಡದ ಮೇಲೆ ಅಥವಾ ಒಂದಲ್ಲೊಂದು ಬಗೆಯಲ್ಲಿ serene ಅನ್ನಿಸುವ ತಾಣದಲ್ಲಿಯೇ ಹೊರತು ಬೇರೆಡೆಗಲ್ಲ. ಹನ್ನೆರಡು ನೂರು ವರ್ಷಗಳ ಹಿಂದೆ ಸ್ಥಾಪಿತವಾದ ಶೃಂಗೇರಿ ಪೀಠದ ಪರಿಸರ ಆ ಕಾಲದಲ್ಲಿ ಹೇಗಿದ್ದಿರಬಹುದು, ತಿರುಪತಿ ಗಿರಿವಾಸನ ನೆಲೆ ಅದು ಕಟ್ಟಲ್ಪಟ್ಟ ಕಾಲಕ್ಕೆ (ಅಜಮಾಸು ಕ್ರಿ.ಶ.೩೦೦) ಹೇಗಿದ್ದೀತು, ಶೃಂಗೇರಿಯ ಸಮೀಪದ ಕಿಗ್ಗ ಋಷ್ಯ ಶೃಂಗೇಶ್ವರನ (ರಾಮಾಯಣದ ಕಾಲದ ಲಿಂಗವಂತೆ ಅಲ್ಲಿಯದು) ಆಸುಪಾಸಿನ ಕಾಡು ಅದೆಂಥದಿದ್ದೀತು ಅಂದಿನ ಕಾಲಕ್ಕೆ! ಯಾಕೀ ಪ್ರಶ್ನೆ ಅಂದರೆ ಇವತ್ತಿನ ದಿಕ್ಕೆಟ್ಟ ಆಧುನಿಕತೆಯ ನಡುವೆಯೂ ಅಲ್ಲಿನ ಪರಿಸರಗಳು ಕಾಡು ಕಾಡಾಗಿವೆ. ಅದೇ ಸಾವಿರ ವರ್ಷಗಳ ಹಿಂದೆ ಊಹೆಗೆ ನಿಲುಕದಷ್ಟು ಘನಾರಣ್ಯ ಅದಾಗಿದ್ದಿರಬಹುದಲ್ಲವೇ? ಅಯ್ಯಪ್ಪನ ನೆಲೆ, ಉತ್ತರದ ತುದಿಯ ವೈಷ್ಣೋದೇವಿ ಕೂಡ ಕಾಡಿನ ನಡುವೆಯೇ ಮೈದಳೆದ ದೇವಾಲಯಗಳು. ಹೆಸರಿಸ ಹೋದರೆ ಸಾವಿರ ಇವೆ. ಮೈಸೂರಿನ ಚಾಮುಂಡಿಯೂ ಬೆಟ್ಟದ ದೇವತೆಯೇ.
ಈ ದೇವಾಲಯಗಳನ್ನೆಲ್ಲ ಅಲ್ಲಿಯೇ ನಿರ್ಮಿಸುವುದಕ್ಕೆ ನಿರ್ಮಾತೃಗಳಿಗೂ, ಅಥವಾ ತಾವಾಗಿಯೇ (ಸ್ಥಳ ಪುರಾಣದ ಪ್ರಕಾರ) ಅಂಥಲ್ಲಿ ನೆಲೆಯಾಗುವುದಕ್ಕೆ ಆಯಾ ದೇವತೆಗಳಿಗೂ ಪರಿಸರದ ಸೆಳೆತವೆಂಬ ಬಲವಾದ ಕಾರಣ ಇದ್ದಿರಲೇ ಬೇಕು. ಕಲ್ಯಾಣಿಯಾಗಲೀ, ಪರಿಸರವಾಗಲೀ ಆಧುನಿಕ ದೇವಾಲಯಗಳಿಗೆ ಮುಖ್ಯವಾಗಿಲ್ಲ ಎನ್ನುವುದು ಖೇದಕರ ಬೆಳವಣಿಗೆ. ಆ ಮಟ್ಟಿಗೆ ದೇವಾಲಯವೆಂಬ ಬಲು ವಿಸ್ತಾರವಾದ ಪರಿಕಲ್ಪನೆಯನ್ನು (concept) ನಾವು ಕಳೆಗುಂದಿಸಿಕೊಂಡಿದ್ದೇವೆ. ಬರೀ ಪೂಜೆಗೆ ಸೀಮಿತವಾಗಿ ನಮ್ಮ ದೇವಾಲಯಗಳು ಇವತ್ತಿಗೆ ಪ್ರಚುರವಾಗುತ್ತಿವೆ. ದೇವಾಲಯಗಳಲ್ಲಿ ಪೂಜೆಯೆಂಬುದು ಕಲೆಯದ್ದೂ, ಸಂಗೀತದ್ದೂ, ಬದುಕಿನದ್ದೂ ಆಗಿರುತ್ತಿದ್ದ ಶ್ರೀಮಂತ ಕಾಲವನ್ನು ನಾವು ಕಳೆದುಕೊಂಡಿದ್ದೇವೆ.
ಅಪವಾದಕ್ಕೆಂಬಂತೆ ಪ್ರಕೃತಿಯನ್ನೇ ಪೂರ್ತಿಯಾಗಿ ದೇವಾಲಯ ಎಂದು ಪರಿಗಣಿಸಿರುವ ಉದಾಹರಣೆ ಇಂದಿಗೂ ನಮ್ಮಲ್ಲಿ ಇದೆಯೆಂಬುದು ಅಷ್ಟರಮಟ್ಟಿಗೆ ಸಮಾಧಾನ. ಮತ್ತು ತೀರಾ ಮೂರ್ತಿಪೂಜೆಯನ್ನಷ್ಟೇ ಅವಲಂಬಿಸಿರುವ ಭಕ್ತರು ಇಂಥಲ್ಲಿಗೆ ಕಡಿಮೆ ಸಂಖ್ಯೆಯಲ್ಲಿ ಭೇಟಿಕೊಡುತ್ತಾರೆನ್ನುವುದು ಇನ್ನೂ ಸಮಾಧಾನದ ವಿಷಯ. ಗರ್ಭಗುಡಿಯ ಮೂರ್ತಿಯನ್ನು ಮಾತ್ರವೇ ದೇವರೆಂದು ಪರಿಗಣಿಸುವ ಜನರಿಂದ ದೇವಾಲಯಗಳಿಗೆ ತೊಂದರೆ ಇದೆಯಷ್ಟೆ. ಈ ಬಗೆಯ ಭಕ್ತರು ಹೋಗಿ ತಲುಪದ ಎರಡು ದೇವಾಲಯಗಳಲ್ಲಿನ ನನ್ನ ಅನುಭವನನ್ನು ಹಂಚಿಕೊಳ್ಳುತ್ತೇನೆ.
ಮೊದಲನೆಯದು ಕಳೆದ ವರ್ಷ ಮಳೆಗಾಲದ ಆದಿಯಲ್ಲಿ ನಾನು ಭೇಟಿ ಕೊಟ್ಟಿದ್ದ ಭೀಮೇಶ್ವರ ದೇವಾಲಯ. ಶಿರಸಿಯಿಂದ ಜೋಗದ ಗುಂಡಿಯ ಮಾರ್ಗವಾಗಿ ಭಟ್ಕಳಕ್ಕೆ ಹೋಗುವ ಹಾದಿಯಲ್ಲೆಲ್ಲೋ ಒಳಗೆ (ಶಿವಮೊಗ್ಗ ಜಿಲ್ಲೆ) ಹೀಗೊಂದು ದೇವಾಲಯ ಇದೆಯೆಂದು ಯಾರಿಗೂ ಕಲ್ಪನೆಗೆಟುಕದು. ಡಾಂಬರು ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರು ಮಣ್ ರಸ್ತೆಯಲ್ಲಿ ಕಾಡಿನೊಳಗೆ ನಡೆದ ಬಳಿಕವಷ್ಟೇ ಈ ದೇವಾಲಯ ಗೋಚರವಾಗುತ್ತದೆ. ಮಳೆಗಾಲವಾದರೆ ಹಾದಿಯಲ್ಲಿ ರಕ್ತ ಹೀರುವ ಇಂಬಳಗಳ ಸಾಥ್ ಕೂಡ ದೊರೆಯುತ್ತದೆ. ನಾಲ್ಕು ಮಳೆಯಾಯಿತೆಂದರೆ ನಡೆದಲ್ಲದೆ ಬೇರೆ ಬಗೆಯಲ್ಲಿ ಹೋಗಲಾಗದು. ಬೇಸಿಗೆಯಲ್ಲಿ ಎಸ್ ಯು ವಿ ವಾಹನಗಳು ಹೋಗಬಹುದೇನೋ. ದೇವಾಲಯದ ಬುಡ ತಲುಪಿದಂತೆಲ್ಲ ಕಲ್ಲಿನ ಮೆಟ್ಟಿಲ ಸಾಲು ಇದಿರಾಗುತ್ತದೆ; ಅದರ ಮೂಲಕ ಹತ್ತಿ ಹೋಗುವಾಗ ಬಲಗಡೆಯಲ್ಲಿ ಸದ್ದು ಮಾಡುತ್ತ ಇಳಿದು ಸಾಗುವ ಜಲಪಾತದ ನೀರು. ಇವತ್ತಿಗೂ ಊರು ಬೆಳೆದಿರದ ಕಾಡಲ್ಲಿ ನೆಲೆ ನಿಂತ ಭೀಮೇಶ್ವರನಿಗೆ ದಿನಾ ಪೂಜೆಯಿದೆಯೆನ್ನುವುದೇ ಅಚ್ಚರಿ. ಆ ಕೈಂಕರ್ಯಕ್ಕೆಂದೇ ಪುರೋಹಿತರೊಬ್ಬರು ತಮ್ಮ ಕೊನೆಗಾಲದ ಹಿಡಿ ಜೀವವನ್ನು ಹಿಡಿದುಕೊಂಡು ತಪಸ್ಸಿನಂಥಾ ಮೌನದ ಬದುಕನ್ನು ಬದುಕುತ್ತಿದ್ದಾರೆ. ಅಪರೂಪಕ್ಕೆ ಪ್ರವಾಸಿಗರು ಹೋದರೆ ಮಾತು, ಅದಿಲ್ಲದಿದ್ದರೆ ಅವರುಂಟು ಅವರ ಭೀಮೇಶ್ವರನುಂಟು. ಉಳಿದಂತೆ ಕಾನನದ ಜೀರುಂಡೆಗಳ ಜೀರ್ ಸದ್ದು ಮತ್ತು ದೇವಾಲಯದ ಪ್ರಾಂಗಣದಲ್ಲೇ ಎಂಬಂತೆ ಸುರಿದುಬಿದ್ದು ಶಬ್ದಮಾಡುವ ಜಲಪಾತವೊಂದು ಅವರ ಸಹವಾಸಕ್ಕೆಂಬಂತೆ ಅಲ್ಲಿವೆ. 

ನಡೆಯ ಆಯಾಸವನ್ನೆಲ್ಲ ಪರಿಹರಿಸುವಂಥಾ ರಮ್ಯ ದೇವಾಲಯ ಭೀಮೇಶ್ವರನದು. ರಮ್ಯವೆಂದರೆ ಭವ್ಯವಾಗಿಯೂ, ಬೃಹದಾಕಾರವಾಗಿಯೂ ಇದೆಯೆಂದಲ್ಲ. ಹಾಗೆ ನೋಡಿದರೆ ಅದು ಸುವ್ಯವಸ್ಥಿತವಾಗಿಯೂ ಇಲ್ಲ; ಈಗಲೋ ಆಗಲೋ ನೆಲಕ್ಕೊರಗಿಬಿಡಬಹುದೆಂಬಂತಿದೆ. ಆದರೆ ಅದು ನೀರು ಮತ್ತು ಹಸಿರಿನ ಕಾರಣಕ್ಕೆ ತನ್ನೊಳಗೆ ನಿರ್ಮಿಸಿಟ್ಟುಕೊಂಡ ಚೈತನ್ಯಯುತ ಪರಿಸರವಿದೆಯಲ್ಲ ಅದು ಅತುಲ್ಯವಾದ್ದು. ಪಿರಮಿಡ್ ಆಕೃತಿಯ ಛಾವಣಿಯೂ ಸೇರಿದಂತೆ ಪೂರ್ಣ ದೇವಾಲಯ ನಿರ್ಮಾಣವಾಗಿದ್ದೇ ಕಲ್ಲಿನಲ್ಲಿ. ಕಂಬಗಳು, ಬೋಧಿಗೆಳು, ತೊಲೆಗಳು, ಛಾವಣಿಯ ಹಾಸು, ಪೀಠಗಳು- ಎಲ್ಲವೂ ಕಲ್ ಕಲ್ಲು. ನಾ ಅಲ್ಲಿಗೆ ಭೇಟಿ ಕೊಟ್ಟಿದ್ದ ಮಳೆಗಾಲದಲ್ಲಿ ಎಲ್ಲ ಸ್ತಂಭಗಳಿಗೂ, ನಲ ಹಾಸಿಗೂ, ಗೋಡೆಗಳಿಗೂ ಮಳೆಯೆಂಬುದು ಅಮ್ಮನಂತೆ ಸ್ನಾನ ಮಾಡಿಸುತ್ತಿತ್ತು. ಅದ್ಯಾವುದೋ ತಿಳಿಯದಷ್ಟು ಹಳೆಯ ಕಾಲದ ಕಲ್ಲಿನ ಛಾವಣಿಯು ಹೆಚ್ಚಿಗೆ ಹಟ ಮಾಡದೆ ನೀರನ್ನೆಲ್ಲ ಒಳಗೆ ಬಿಟ್ಟುಕೊಡುತ್ತಿತ್ತು. ಪಕ್ಕದಲ್ಲೇ ಧುಮುಕುವ ಜಲಪಾತದ ಎರಚು ಹನಿ, ಅದರ ತುಂಟ ಕವಲು ಧಾರೆಗಳು ದೇವಾಲಯದ ಮುಖ್ಯಭಾಗದಮೇಲೂ ಎರಗುತ್ತಿದ್ದವು. ಇಡೀ ದೇವಾಲಯದಲ್ಲಿ ಬಟ್ಟೆ ಬದಲಾಯಿಸುವುದಕ್ಕೂ ಒಣ ಜಾಗವನ್ನು ಹುಡುಕಲಾಗದ ಸ್ಥಿತಿ, ದೇವಾಲಯದ ಆವಾರದಲ್ಲಿ ಕಾಲಿಟ್ಟಲ್ಲೆಲ್ಲ ಜಾರುವಷ್ಟು ಹಾವಸೆ. ಇವೆಲ್ಲ ಸೇರಿಯೇ ಒಂದು ಬಗೆಯ ಖುಶಿಯನ್ನು ತುಂಬುತ್ತವೆ. 

ನಿರಂತರ ನೀರಿನ ದಾಳಿಗೆ ಸಿಕ್ಕು ಕೆಲವು ಕಲ್ಲಿನ ಕಂಬಗಳೂ ಮರದ ಕಂಬದಂತೆ ಗೆದ್ದಿಲು ಹಿಡಿದು ಹಾಳಾದವರಂತೆ ಕೊರೆದು ಹೋಗಿವೆ. ಆ ಜಲಪಾತದ ನೀರು ಎಂದೆಂದಿಗೂ ಬತ್ತಿದ ದಾಖಲೆಯಿಲ್ಲ ಎಂಬುದು ಅರ್ಚಕರ ಮಾತು. ಹಾಗಾಗಿ ಕಂಬಗಳಿಗೆ ನೀರಿಲ್ಲದ ದಿನವೇ ಇಲ್ಲ. ಹಾಗಾಗಿಯೇ ಕಲ್ಲಿನ ಕಂಭದ ಮೇಲೆಲ್ಲ ಹಸಿರು ಪಾಚಿಯ ಥರದ ಜೀವ ಅಂಕುರಿಸಿದೆ; ಕಲ್ಲಿಗೂ ಜೀವ ಬಂದಿದೆಯೆಂಬಂತೆ. ದೇವಾಲಕ್ಕೆ ಬಳಸಿಕೊಂಡ ಕಲ್ಲುಗಳಲ್ಲದೆ ಆ ಪರಿಸರದಲ್ಲಿರುವ ಇತರ ಬಂಡೆಗಳೂ ಮಳೆಯ ಜೊತೆ ಸುಖಿಸಿ ತಮ್ಮ ಮೈ ತುಂಬ ಹಸಿರಿನ ತುರಾಯಿಗಳನ್ನು ಹುಟ್ಟಿಸಿಕೊಂಡಿದ್ದವು. ಆ ತುರಾಯಿಗಳ ತುದಿಯಲ್ಲಿ ನಿಂತ ಬಿಂದು ನೀರು. ಒಟ್ಟಿನಲ್ಲಿ ಜೀವ ಮತ್ತು ಅಜೀವ ಎಂಬುದನ್ನು ವಿಂಗಡಿಸಿ ನೋಡಲಾಗದ, ಅವೆರಡಕ್ಕೂ ವಿಭಿನ್ನ ವಿವರಣೆ ಕೊಡಲಾಗದ ಅದ್ವೈತದ ಪರಮಾವಸ್ಥೆಯೊಂದು ಇಲ್ಲಿ ಸಾಕ್ಷಾತ್ತಾಗಿದೆಯೋ ಅನ್ನುವಂತಿತ್ತು.  

ನೀರಿಗೂ ಶಿವನಿಗೂ ಅವಿನಾಭಾವ ನಂಟು. ಅವನಿರುವುದೇ ಕೈಲಾಸಪರ್ಪತವೆಂಬ ನೀರ ನೆಲೆಯಲ್ಲಿ, ಗಂಗೆಯೆಂಬ ನೀರಿವಳಿರುವುದೂ ಅವನ ತಲೆಯಲ್ಲಿ. ಅವನಿದ್ದಲ್ಲೆಲ್ಲ ಅಭಿಷೇಕಕ್ಕೆ ಎಲ್ಲಿಲ್ಲದ  ಪ್ರಾಧಾನ್ಯ. ಶಿವಾಲಯಗಳಲ್ಲಿ ಶಿವಲಿಂಗದ ಮೇಲೆ ನಿರಂತರ ಬಿಂದು ನೀರು ಬೀಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಪ್ರಾಕೃತಿಕವಾಗಿಯೇ ಅಂಥ ವ್ಯವಸ್ಥೆ ಇರುವ ಶಿವಾಲಯಗಳೂ ನಮ್ಮಲ್ಲಿವೆ. ಯಾಣದ ಶಿವಾಲಯ ಇದಕ್ಕೆ ಉದಾಹರಣೆ. ಕಲ್ಲಿನಿಂದ ನೀರೊಸರುವ ತಾಣ ಅದು. ಭೀಮೇಶ್ವರ ಕೂಡ ಅದೇ ಬಗೆಯ ತಾಣವೆಂದರೆ ತಪ್ಪಾಗಲಾರದು. ಬಾಹುಬಲಿ ಚಿತ್ರದ ನಾಯಕ ತನ್ನ ಅಮ್ಮನ ಶಿವಾರ್ಚನೆಯ ಹೊತ್ತಿನಲ್ಲಿ ನೀರು ಹೊತ್ತು ತರುವ ಆಯಾಸ ಆಕೆಗೆ ಇರದಿರಲೆಂದು ಶಿವಲಿಂಗವನ್ನೇ ಜಲಪಾತದ ಅಡಿಯಲ್ಲಿ ಇರಿಸುತ್ತಾನಲ್ಲ, ಅದು ಇಲ್ಲಿ ವಾಸ್ತವವಾದಂತಿದೆ.
ಪುಣ್ಯವಶಾತ್ ಭೀಮೇಶ್ವರದಲ್ಲಿ ಗರ್ಭಗುಡಿಯ ಒಳಗೂ ಹೋಗುವ ಅವಕಾಶ ನನಗಾಗಿತ್ತು. ಗರ್ಭಗುಡಿಯೊಳಗೆ ಅರ್ಚಕರು ಹೊತ್ತಿಸಿಟ್ಟ ತೈಲದೀಪವನ್ನು ಹೊರತುಪಡಿಸಿದರೆ ಬೇರೆ ಬೆಳಕಿನ ಮೂಲ ಇರಲಿಲ್ಲ. ಲಿಂಗವೆಲ್ಲಿದೆ, ದ್ವಾರವೆಲ್ಲಿದೆ, ಗೋಡೆಯೆಲ್ಲಿದೆಯೆಂದೂ ಕಾಣದಷ್ಟು ಕತ್ತಲು. ತಮ್ಮ ಮಿದುಳಲ್ಲಿ ಅಚ್ಚಾದ ನಕ್ಷೆಯ ಆಧಾರದಲ್ಲೇ ಅರ್ಚಕರು ಗರ್ಭಗುಡಿಯೊಳಗೆ ಸಂಚರಿಸುತ್ತಾರೆ ಅನ್ನಿಸಿತು ನನಗೆ. ನಾನಂತೂ ಕೈಲಿದ್ದ ಮೊಬೈಲಿನ ಟಾರ್ಚ್ ಬೆಳಕಲ್ಲೇ ಗರ್ಭಗುಡಿಯ ಒಳಾಂಗಣವನ್ನೆಲ್ಲ ನೋಡಿದ್ದು. ಬಲಗಡೆ ಗಣಪತಿಯ ಮತ್ತು ಎಡಗಡೆ ದುರ್ಗಾಪರಮೇಶ್ವರಿಯ ಸುಂದರ ಕೆತ್ತನೆಯ ಮೂರ್ತಿಗಳು, ನಡುವೆ ಗರ್ಭ ಗುಡಿಯಲ್ಲಿ ಕತ್ತಲೆಯ ತಂಪಿನಲ್ಲಿ ಭೀಮೇಶ್ವರ.  ಅಲ್ಲಿಯೂ ನೆಲಕ್ಕೆ, ಗೋಡೆಗೆ ಬಾಗಿಲ ಪಟ್ಟಿಗೆಲ್ಲ  ನೀರಿನ ಪಸೆ, ಎಲ್ಲ ಹಸಿ ಹಸಿ.  ’ಭಟ್ಟರೇ ಈ ಕತ್ತಲಲ್ಲಿ ಕರ್ಪೂರಕ್ಕೆಂದು ಕೈಯಿಟ್ಟಲ್ಲಿ ಹಾವು ಕೈಗೆ ಸಿಕ್ಕರೇನು ಮಾಡ್ತೀರಿ?’ ಅನ್ನುವ ನನ್ನ ಪ್ರಶ್ನಗೆ ’ಭೀಮೇಶ್ವರ ನನ್ನ ಕಾಯ್ತಾನೆ, ಇದುವರೆಗೆ ಅಂಥದೆಲ್ಲ ಆಗಿಲ್ಲ, ನನ್ನ ಕೊನೆಯ ಉಸಿರಿನವರೆಗೂ ಭೀಮೇಶ್ವರನಿಗೆ ಅರ್ಚನೆ ತಪ್ಪಿಸದಿರುವುದೇ ನನ್ನ ಬದುಕಿನ ಧ್ಯೇಯ’ ಅನ್ನುವ ಧಾಟಿಯಲ್ಲಿ ಉತ್ತರ ಕೊಟ್ಟರು. ಆ ಹಿರಿಯರ ಶ್ರದ್ಧೆಗೆ ನಮೋ ಅಂದೆ. ’ಶ್ರದ್ಧಾ ವಿಶ್ವಮಿದಂ ಜಗತ್’ ಅಂತ ವೇದವೂ ಶ್ರದ್ಧೆಯನ್ನು ಸ್ಮರಿಸುತ್ತದಷ್ಟೆ.


ಇಂಥದೊಂದು ದೇವಾಲಯವನ್ನು ಇಷ್ಟು ಸುಂದರವಾಗಿ ಇಂಥಾ ಕಾಡಲ್ಲಿ ಯಾರು ಯಾಕಾಗಿ ಯಾವ ಕಾಲದಲ್ಲಿ ಕಟ್ಟಿದರು? ಅದರ ಐತಿಹ್ಯವೇನು- ಯಾವುದೂ ಸ್ಪಷ್ಟವಿಲ್ಲ. ಅರ್ಚಕರ ಪ್ರಕಾರ ಪಾಂಡವರು ವನವಾಸದ ಕಾಲದಲ್ಲಿ ಇಲ್ಲಿಗೆ ಬಂದಿದ್ದಾಗ ಭೀಮ ಈ ಲಿಂಗವನ್ನು ಸ್ಥಾಪಿಸಿ ಪೂಜಿಸಿದ್ದನಂತೆ. ಆ ಜಲಪಾತ ಅರ್ಜುನನ ಬಾಣದ ಹೊಡೆತಕ್ಕೆ ಕಣ್ಣೊಡೆದ ನೀರ ಸೆಲೆಯಂತೆ. ಈ ಬಗೆಯ ಕಥೆಗಳು ಭಾರತದ ಯಾವುದೇ ಹಳ್ಳಿಯಲ್ಲೂ ಧಾರಾಳ ಸಿಗುತ್ತವೆ. ಆದರೆ ಕಲ್ಲಿನ ದೇವಾಲಯವನ್ನು ಬೆಟ್ಟದ ಮಧ್ಯೆ ಕಟ್ಟಿದವರಾರು ಎಂಬ ವಿಷಯದಲ್ಲಿ ಇತಿಹಾಸ ಸುಮ್ಮನಾಗಿದೆ. ಇವತ್ತಿಗೂ ಉಳಿದುಕೊಂಡರು ಸೌಂದರ್ಯವನ್ನು, ಜೀವಂತ ದೇವಾಲಯವನ್ನು ಕಾಣುವ ಭಾಗ್ಯ ಒದಗಿದ್ದಕ್ಕೆ ಸುಮ್ಮನಾಗಬೇಕೇನೋ. ನಿಧಾನಕ್ಕೆ ಪ್ರಚಾರ ಪಡೆಯುತ್ತಿರುವ ಭೀಮೇಶ್ವರಕ್ಕೆ ಈಗೀಗ ಜನ ಬರುತ್ತಿದ್ದಾರೆ. ಅಲ್ಲಿಯ ಪರಿಸರದ ಶಾಂತಿಯನ್ನು ಕಲಕುವ ಕೆಲಸ ಇನ್ನೇನು ಶುರುವಾಗಬಹುದೆಂಬ ಭಯ ಇದ್ದೇ ಇದೆ. ಆದರೂ ಕಲ್ಲಿನ ಪದರಗಳಲ್ಲಿ ನಿರ್ಭಯವಾಗಿ ತೂಗಿಕೊಂಡಿರುವ ಹೆಜ್ಜೇನುಗಳು, ಬೆಟ್ಟದ ಹಾವುಗಳು, ಮಣ್ಣರಸ್ತೆ ಮತ್ತು ಜಾರುವ ನೆಲ- ಎಲ್ಲಾ ಸೇರಿ ಭೀಮೇಶ್ವರನ ಶಾಂತಿಯನ್ನು ಕಾಪಾಡಿಯಾವೆಂಬ ಭರವಸೆಯಿದೆ.  

1 comment:

  1. ನಮಸ್ತೆ, ಈ ತಾಣ ತಲುಪುವ ಬಗೆ ಹೇಗೆ? ರೂಟ್ ಮ್ಯಾಪ್ ಅಥವಾ ಭಟ್ಕಳದಿಂದ ಮಾರ್ಗ ನಕ್ಷೆ ಯಾವುದಾದರೂ ಆದೀತು!

    ReplyDelete