Thursday, July 21, 2016

ಯುವ ಭಗೀರಥರಿವರು

ಮಳೆ ಇಲ್ಲ, ಬೆಳೆ ಕಡಿಮೆ, ಆಹಾರ ವಸ್ತುಗಳ ಬೆಲೆ ಏರಿಕೆ- ಸಾರ್ವಜನಿಕರಿಂದ ಸರ್ಕಾರಕ್ಕೆ ಬೈಗಳು, ಶಾಪ.
ಮಳೆ ಸರಿಯಾಗಿ ಆಗಿಲ್ಲ, ಬೇಸಿಗೆ, ಕುಡಿಯಲು ನೀರಿಲ್ಲ -ಜನರಾಶಿಯಿಂದ ಸರಕಾರಕ್ಕೆ ಮಂಗಳಾರತಿ.
ಹಳೆಯ ಕೆರೆಗಳ ಒತ್ತುವರಿ, ಅಕ್ರಮ- ಮಾಧ್ಯಮ ಮತ್ತು ಸಾರ್ವಜನಿಕರಿಂದ ಸರಕಾರಕ್ಕೆ ಛೀ ಮಾರಿ.
ಕುಡಿಯುವ ನೀರಿಗಾಗಿ ಮಹಿಳೆಯರಿಂದ ರಸ್ತೆ ತಡೆ, ಧರಣಿ, ಸತ್ಯಾಗ್ರಹ- ಬೇಕೇ ಬೇಕು ಕೂಗು.

ಇಂಥದ್ದು ತೀರಾ ಸಾಮಾನ್ಯ ಸುದ್ದಿಯಲ್ಲವೆ? ಬೈಯುವ, ತೆಗಳುವ, ಕಾಲೆಳೆಯುವ, ಆಡಿಕೊಂಡು ನಗುವ ಜನ ಬೇಕಾದಷ್ಟಿದ್ದಾರೆ. ಆದರೆ ಸಮಸ್ಯೆಯ ಪರಿಹಾರಕ್ಕೆ ತಾವೇ ಇಳಿದು ಕಾಯಕವೆಂಬ ತಪಸ್ಸಿನಲ್ಲಿ ತೊಡಗಿದವರು ತೀರಾ ಕಡಿಮೆ. ಸಮಸ್ಯೆಯೊಂದನ್ನು ಸಮಸ್ಯೆಯಾಗಿಯೇ ಇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಕಾಲದಲ್ಲಿ ನಾವಿದ್ದೇವೆ. ಅದರಲ್ಲಿ ಮುಖ್ಯವಾದ ಮತ್ತು ಚಿರಂತನವಾದ ಸಮಸ್ಯೆಯೆಂದರೆ ಅದು ನೀರಿನ ಕುರಿತಾದ್ದು. ಸಮಸ್ಯೆ ಎಷ್ಟು ಭೀಕರವಾಗಿದೆಯೆಂದರೆ ಇನ್ನೊಂದು ಮಹಾಯುದ್ಧ ಈ ಭೂಮಿಯಮೇಲೆ ನಡೆದರೆ ಅದು ನೀರಿಗಾಗಿ ಎಂಬಲ್ಲಿಯವರೆಗೆ ತಜ್ಞರು ತರ್ಕಿಸಿದ್ದಾರೆ. ಅಂಥದರಲ್ಲಿ ನಮ್ಮ ಜಲಮೂಲಗಳ ಬಗ್ಗೆ ಎಚ್ಚರ ತುಂಬುವ ಮತ್ತು ಅವುಗಳ ಉಳಿಕೆಗಾಗಿ ಶ್ರಮಿಸುತ್ತಿರುವ ಬೆರಳೆಣಿಕೆಯಷ್ಟು ಜನಗಳೂ ಮತ್ತು ಕೆಲವೇ ಕೆಲವು ಸಂಘಟನೆಗಳೂ ನಮ್ಮ ನಡುವೆ ಇವೆ ಎಂಬುದು ತುಂಬಾ ಧನಾತ್ಮಕವಾದ ಸಂಗತಿ.

೨೦೧೪ ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಭಾರತದ ಪ್ರಧಾನಿಯನ್ನಾಗಿ ನರೇಂದ್ರಮೋದಿಯವರನ್ನೇ ಚುನಾಯಿಸುತ್ತೇವೆಂಬ ಜಾಗ್ರತಿಯನ್ನು ಸಮಾಜದ ಮಧ್ಯೆ ಮೂಡಿಸಲು ಹುಟ್ಟಿಕೊಂಡ ಯುವ ಸೇನೆ ನಮೋ ಬ್ರಿಗೇಡ್. ಆ ಕಾಲದಲ್ಲಿ ಫೇಸ್ ಬುಕ್ ಎನ್ನುವುದು ಏನೆಲ್ಲ ಕ್ರಾಂತಿಯನ್ನು ಭಾರತದಾದ್ಯಂತ ತಂದಿತ್ತೆಂಬುದನ್ನು ನಾವೆಲ್ಲ ಕಂಡಿದ್ದೇವೆ. ನಮೋ ಬ್ರಿಗೇಡ್ ನನಗೆ ಪರಿಚಯವಾದ್ದೂ ಆ ಮೂಲಕವೇ. ನೋಡ ನೋಡುತ್ತ ನಮೋ ಬ್ರಿಗೇಡ್ ಅಕ್ಷರಶಃ ಹಳ್ಳಿ ಹಳ್ಳಿಯನ್ನೂ ತಲುಪಿತು. ಕರ್ನಾಟಕದಲ್ಲಿ ಆ ಹೊತ್ತಿನಲ್ಲಿ ನಮೋ ಬ್ರಿಗೇಡ್ ಹೆಸರು ಕೇಳದವರು ಇರಲಿಕ್ಕಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಬ್ರಿಗೇಡ್ ಕೂಡ ರಾಜಕೀಯ ಮಾಡುತ್ತ ಕುಳಿತುಕೊಳ್ಳುತ್ತದೆಂದೇ ಹಲವರ ಊಹೆಯಾಗಿತ್ತು. ಆದರೆ ನಡೆದಿದ್ದೇ ಬೇರೆ; ಮೋದಿ ಪ್ರಧಾನಿಯಾಗುತ್ತಿದ್ದಂತೆ ’ಮಿಷನ್ ಅಕಂಪ್ಲಿಷ್ಡ್’ ಅಂತ ಘೋಷಿಸಿ ನಮೋ ಬ್ರಿಗೇಡ್ ಅವತಾರ ಮುಗಿಸಿಕೊಂಡಿತು. ಆದರೆ ಅಷ್ಟಕ್ಕೇ ಸುಮ್ಮನಾಗದೆ ಭಾರತ ಕಟ್ಟುವ ಕನಸಿಗೆ ನೀರೆರೆಯಲೆಂದೇ ಯುವಾ ಬ್ರಿಗೇಡ್ ಅಂತ ಶುರುವಾಯ್ತು.

ಕರ್ನಾಟಕದ ಧನಾತ್ಮಕ ಯುವ ಪಡೆಗೆ ಯುವಾ ಬ್ರಿಗೇಡ್ ಅದ್ಭುತವಾದ ವೇದಿಕೆಯಾಯ್ತು. ವೇದಿಕೆಯೆಂದರೆ ಮತ್ತೆ ವೀಕೆಂಡ್ ಗಳಲ್ಲಿ ಚಾಯ್ ಉಪ್ಪಿಟ್ಟು ಸೇವಿಸಿ ಎದೆಯೊಡೆಯುವ ಕವಿತೆಗಳನ್ನೋದುವ ವೇದಿಕೆಯಲ್ಲ! ಅದಕ್ಕೆಂದೇ ಸಾವಿರಾರು ಬಳಗಗಳಿವೆ. ಕೆಂಪ್  ಕೆಂಪು ವಿಚಾರಗಳು ಮತ್ತು ಬಡವನ ಕಣ್ಣೀರಿನ ಕವಿತೆಯೋದುತ್ತ ಅವು ಮರಿ ಕ್ರಾಂತಿಕಾರರನ್ನು ತಯಾರಿಸುತ್ತವೆ. ಬ್ರಿಗೇಡ್ ಒದಗಿಸಿದ್ದು ಅಂಥ ವೇದಿಕೆಯನ್ನಲ್ಲವೇ ಅಲ್ಲ.  ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ದೊಡ್ಡ ಸಂಖ್ಯೆಯ ಕಲ್ಯಾಣಿಗಳಿವೆ, ಅವನ್ನೆಲ್ಲ ನಾವ್ ನಾವೇ ಪುನರುದ್ಧಾರ ಮಾಡೋಣ, ನೀರು ನಿಲ್ಲಿಸೋಣ ಬನ್ನಿ ಅಂತ ಕರೆಯಿತು. ಅದೊಂದು ಸಂಕಲ್ಪಕ್ಕೆ ಕೈಜೋಡಿಸಿ ಅಸ್ತು ಎಂದು ಹೊರಟ ಯುವಕರ ಪಡೆ ಇವತ್ತಿಗೆ ಬಹುತೇಕ ಎಲ್ಲ ಊರುಗಳಲ್ಲಿದೆ. ಎಲ್ಲೋ ದಾರಿ ಬಂದ್ ಮಾಡಿ ಹೋರಾಟ ಮಾಡುತ್ತ, ದೊಂಬಿ ಗಲಾಟೆಗೆ ತುಪ್ಪ ಸುರಿಯುತ್ತ, ಯಾರದ್ದೋ ಪ್ರತಿಕೃತಿ ಸುಟ್ಟು ತಿಥಿ ಮಾಡುತ್ತ, ಕೊನೆಗೆ ಬಂದು ಫೇಸ್ ಬುಕ್ ನಲ್ಲಿ ಕ್ರಾಂತಿಗೀತೆ ಬರೆಯುತ್ತ, ನಿನ್ನೆ ತಿಂದ ಕಬಾಬ್, ಮೊನ್ನೆ ಬರೆದ ಪೋಲಿ ಕವಿತೆ ಅಂತೆಲ್ಲ ಪುಂಗಿಯೂದುತ್ತ ಕೂರಲೇ ಇಲ್ಲ ಬ್ರಿಗೇಡ್. ತಣ್ಣಗೆ ತನ್ನ ಕೆಲಸ ಶುರುಮಾಡಿತು.

ಆ ಸಂಕಲ್ಪದ ಸಿದ್ಧಿಯೆಂಬಂತೆ ಇವತ್ತಿಗೆ ಕಣ್ಮರೆಯಾಗಿದ್ದ, ಕಾಯಕಲ್ಪವಿಲ್ಲದೆ ಬಡವಾಗಿದ್ದ, ಹೂಳು ತುಂಬಿ ಸತ್ತೋಗಿದ್ದ ಎಷ್ಟೋ ಕಲ್ಯಾಣಿಗಳು ಶುದ್ಧವಾಗಿವೆ, ತಣ್ಣೀರಿನ ಕೊಳಗಳಾಗಿವೆ. ಬಡವಾಗಿದ್ದ ಬಯಲಲ್ಲಿ ಹಸಿಗಿಡಗಳು ಜೀವ ಹಿಡಿದುಕೊಂಡಿವೆ. ಇದಲ್ಲವೆ ತಪಸ್ಸೆಂದರೆ?

ಕಲ್ಯಾಣ ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹಸ್ತ ಜೋಡಿಸಬಹುದು, ಅದಕ್ಕೆ ಮೀಸಲಾತಿಯ ಪರಿಧಿ ಇಲ್ಲ. ಹೆಸರಿಗಾಗಿ ಬರುವವರಿಗೆ ಈ ಕಾರ್ಯಗಳೆಲ್ಲ ಆಪ್ತವೆನ್ನಿಸದೇ ಇರಬಹುದು. ಬ್ರಿಗೇಡ್ ಹುಡುಗರಲ್ಲಿ ನಾನು ಹೆಸರು ಹೆಚ್ಚಿಸಿಕೊಳ್ಳುವ ಪ್ರವೃತ್ತಿಯನ್ನು ಕಂಡಿಲ್ಲ. ಅಥವಾ ಕಲ್ಯಾಣಿ ಶುದ್ಧಿಯ ಸಾಹಸಗಳನ್ನು ಬ್ರಿಗೇಡ್ ಹುಡುಗರು ಭಯಂಕರವಾಗಿ ಬರೆದುಕೊಂಡಿದ್ದಿಲ್ಲ. ನೆಲದ ಸೇವೆ ಮಾಡಬೇಕೆಂಬ ಮನಸಿದ್ದವನಿಗೆ ಕಾಯಕವು ಕೊಡುವ ಆತ್ಮ ತೃಪ್ತಿಯು ಎಲ್ಲದಕ್ಕಿಂತ ದೊಡ್ಡದಿರುತ್ತದೆ, ಹೆಸರಿನ ಗುಂಗು ಅದರೆದುರಿಗೆ ಏನೇನೂ ಅಲ್ಲ.  

ನಾವಿಂತಿಷ್ಟು ಕಲ್ಯಾಣಿಗಳನ್ನು ಸರಿಮಾಡಿದೆವು ಅಂತ ಬ್ರಿಗೇಡ್ ಇವತ್ತಿಗೂ ಬ್ಯಾನರ್ ಹಾಕಿದ್ದನ್ನು ನಾನು ಕಂಡಿಲ್ಲ ಎಲ್ಲೂ. ಚಕ್ರವರ್ತಿ ಅಣ್ಣ ಆಗೀಗ ತಮ್ಮ ಹುಡುಗರು ಹೀಗೊಂದು ಕಲ್ಯಾಣಿಯನ್ನು ತಿಳಿಗೊಳಿಸಿದರು ಅಂತ ತಮ್ಮ ಗೋಡೆಯ ಮೇಲೆ ಒಂದು ಸಾಲಿನ ಒಕ್ಕಣೆ ಬರೆದು ಕಲ್ಯಾಣಿಯ ಚಿತ್ರ ಪ್ರಕಟಿಸುತ್ತಾರೆ; ಮುಗಿಯಿತಷ್ಟೆ. ಅಥವಾ ಮುಂದಿನವಾರ ಹೀಗೊಂದು ಕಲ್ಯಾಣಿ ಇಂಥಲ್ಲಿ ತಿಳಿಗೊಳಿಸೋದಕ್ಕಿದೆ, ನಮ್ಮನ್ನು ಸೇರಿಕೊಳ್ಳುವವರು ಬರಬಹುದು ಅಂತ ಅಂಚೆ ಕಾರ್ಡಲ್ಲಿ ಹಸ್ತಾಕ್ಷರದಲ್ಲಿ ಬರೆದು  ತಮ್ಮ ವಾಲ್ ಗೆ ಅಂಟಿಸಿಕೊಳ್ಳುತ್ತಾರೆ. ನೀರಿಗಾಗಿ ಮಾಡುವ ಮಹತ್ತರ ತಪಸ್ಸೊಂದು ಹೆಚ್ಚಿಗೆ ಸದ್ದೇ ಮಾಡದೆ ಹಾಗೆ ಸಂಪನ್ನವಾಗುತ್ತದೆ. ನಿರಾಡಂಬರವಾಗಿದ್ದುಕೊಂಡು ದೇಶದ ನೆಲದ ಕುರಿತಾಗಿ ಶ್ರಮ, ಧನ, ಸಮಯ ಮೀಸಲಿಡುವ ಇಂಥ ಸಂಘಟನೆಗಳು, ಮತ್ತು ವ್ಯಕ್ತಿಗಳೆಡೆಗೆ ಎದೆತುಂಬಿದ ಗೌರವ ನನ್ನಲ್ಲಿದೆ.

ವೈಯಕ್ತಿಕವಾಗಿ  ನಾನು ಯುವಾ ಬ್ರಿಗೇಡ್ ಜೊತೆ ಕೆಲಸ ಮಾಡಿಲ್ಲ, ಆದರೆ ಅದರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದೊಂದನ್ನೂ ಗಮನಿಸಿದ್ದೇನೆ. ಆ ಹುಡುಗರು ರಕ್ತಬಸಿದು (ನಿಜಕ್ಕೂ ತಮ್ಮ  ಬೆವರು ಮತ್ತು ರಕ್ತ ಚೆಲ್ಲಿ) ಕೆರೆ ಶುದ್ಧಿ ಮಾಡಿ ಕೊನೆಯಲ್ಲಿ ಬರೆದುಕೊಳ್ಳುವ ಒಂದೇ ಸಾಲಿನ ತಿಳಿನೀರಿನಂಥಾ ಸಾಲು ಓದಿ ನಾನೇ ಹಸಿಗಣ್ಣಾಗಿದ್ದೇನೆ. ನನ್ನೂರಿನ ಸುತ್ತಮುತ್ತ ಅಂಥಾ ಪುನರುದ್ಧಾರ ಬೇಕಿರುವ ಕಲ್ಯಾಣಿ ಇದೆಯೇ ಎಂದು ಹುಡುಕಿದ್ದೇನೆ. ಸಧ್ಯಕ್ಕೆ ನಮ್ಮಲ್ಲಿನ ಕಲ್ಯಾಣಿಗಳು ಮಾಸಿಲ್ಲ. ಇನ್ನೆಲ್ಲೋ ಮಾಡುವ ಕಲ್ಯಾಣ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗವಹಿಸುವ ಸಂಕಲ್ಪವಿದೆ. ಇವತ್ತಿಲ್ಲಿ ಬ್ರಿಗೇಡ್ ಬಗ್ಗೆ ಬರೆದು ನನಗೆ ಆಗಬೇಕಾದ ಲಾಭವೇನೂ ಇಲ್ಲ, ಅವರೆಡೆಗಿನ ಗೌರವ ಇದನ್ನೆಲ್ಲ ಬರೆಸಿತಷ್ಟೆ.



No comments:

Post a Comment