Tuesday, July 26, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 2

ಮೊನ್ನೆ ಈ ವರ್ಷದ ಮಳೆಗಾಲ ಶುರುವಾದಬಳಿಕ ಇನ್ನೊಂದು ಹಸಿರಿನ ತಾಣಕ್ಕೆ ಹೋಗಿದ್ದೆ. ಭೀಮೇಶ್ವರದಷ್ಟು ಅಜ್ಞಾತವಾಗುಳಿದ ದೇವಾಲಯವೇನೂ ಇದಲ್ಲ, ಹಾಗಂತ ತೀರ ಪರಿಚಿತವೂ ಅಲ್ಲ. ಕಣ್ಣು ಹಾಯಿಸಿದಷ್ಟೂ ಕಾಡೇ ಕಾಣುವ ಎತ್ತರದಲ್ಲಿ ಪುಟ್ಟದೊಂದು ಗುಡಿ ಇಲ್ಲಿದೆ. ಉತ್ತರಕನ್ನಡದ ಹೊನ್ನಾರವರ ತಾಲೂಕಿನ ಕರಿಕಾನ ಪರಮೇಶ್ವರಿ ದೇವಾಲಯದ ಬಗ್ಗೆ ನಾನು ಹೇಳುತ್ತಿದ್ದೇನೆ. 




ಕರಿಕಾನು ಹೆಸರಿಗೆ ತಕ್ಕಂತೆ ಈಗೊಂದೈವತ್ತು ವರ್ಷಗಳ ಹಿಂದೆ ಕಪ್ಪಾದ ಕಾನನವೇ ಆಗಿದ್ದಿರಬೇಕು. ಇವತ್ತು ಆ ಗಾಢತೆ ಕ್ಷೀಣಿಸುತ್ತಿದ್ದರೂ ಬೆಟ್ಟ ಗಹನವಾಗಿಯೇ ಇದೆ. ಇಲ್ಲಿ ಮನುಷ್ಯನ ವಾಹನ ಸಾಗಿ ಹೋಗುವಷ್ಟು ಸರಿಯಾದ ದಾರಿಯ ನಿರ್ಮಾಣವಾಗಿದ್ದೇ ಇತ್ತೀಚಿನ ದಶಕಗಳಲ್ಲಿ. ಈಗಲೂ ಖಾಸಗಿ ವಾಹನ ಮಾಡಿಸಿಕೊಂಡೇ ಇಲ್ಲಿಗೆ ತಲುಪಬೇರುವುದು ಒಂದರ್ಥದಲ್ಲಿ ಒಳ್ಳೆಯದಾಗಿದೆ. ಸಾರಿಗೆ ವಾಹನಗಳ ಸಂಚಾರ ಈ ಕಾಡಿನಲ್ಲಿ ಇಲ್ಲ. ಹಿಂದೆಲ್ಲ ಇಲ್ಲಿಗೆ ನಡೆದೇ ಬರಬೇಕಿತ್ತಂತೆ. ಹಸಿರು ಹಬ್ಬಿದ ಬೆಟ್ಟವನ್ನು ಹತ್ತಿ ಹೋದರೆ ಕಬ್ಬಂಡೆಗಳ ಎಡೆಯಲ್ಲಿ ಸಣ್ಣದೊಂದು ದೇವಾಲಯವಿದೆ. ದುರ್ಗೆಯೆಂಬ ಶಕ್ತಿದೇವತೆಯ ದೇಗುಲವದು.
ಇಂಥ ಎತ್ತರದಲ್ಲಿ, ಕಪ್ಪು ಕಾನನದಲ್ಲಿ ಪ್ರತಿಷ್ಠಾಪನೆಗೊಂಡ ದೇವಾಲಯಗಳ ಪ್ರಭಾವಳಿಯೇ ಬೇರೆ. ಅಲ್ಲಿ ದೇವತೆಯೊಂದೇ ಅಲ್ಲದೆ ಪೂರ್ತಿ ಕಾನನವೂ, ಪರಿಸರವೂ ಆರಾಧಿಸಲ್ಪಡುತ್ತದೆ, ರಕ್ಷಿಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿದ್ದ ದೇವರ ಕಾಡುಗಳು, ನಾಗಬನಗಳು ಎಷ್ಟೆಲ್ಲ ಮಹತ್ವದವಾಗಿವೆಯೋ ನೋಡಿ. ಆ ವನಕ್ಕೆಲ್ಲ ಆಯಾ ದೇವತೆಯೇ ಅಧಿದೇವತೆಯಾಗಿರುತ್ತಾಳೆ, ಕಾಡು ನಾಶಕ್ಕೆ ತೊಡಗುವವ ದೈವಿಕ ಕಾರಣಗಳಿಂದಾಗಿ ಹಿಂದೇಟು ಹಾಕುತ್ತಾನೆ. ಇಂಥ ದೇವಾಲಯಗಳು ಅತಿಯಾಗಿ ಬೆಳೆಯುವುದೂ ಕಡಿಮೆ, ಯಾಕೆಂದರೆ ಎಲ್ಲರೂ ಹೋಗಿ ಎಡತಾಕಬಹುದಾದ ತಾಣದಲ್ಲಿ ಅವು ಇರುವುದಿಲ್ಲ. ಆ ಮಟ್ಟಿಗೆ ನೋಡಿದಾಗ ತಿರುಪತಿಯ ತಿಮ್ಮಪ್ಪ ಮತ್ತು ವೈಷ್ಣೋದೇವಿಯ ದೇವಾಲಯಗಳು ಆ ಪರಿ ಶ್ರೀಮಂತವಾದ್ದು ಅಚ್ಚರಿ ಹುಟ್ಟಿಸುವಂಥದು. ಹಾಗಿದ್ದೂ ಒಮ್ಮೆ ಸಾರ್ವಜನಿಕ ಸಂಪರ್ಕ ವಾಹನಗಳ ಸೌಲಭ್ಯ ಒದಗಿದ ಮೇಲೆ ದೇವಾಲಯಗಳ ಪ್ರಶಾಂತಿ ಕದಡುವುದು ನಿಜವೇ.
ಕರಿಕಾನ ಪರಮೇಶ್ವರಿಯಿರುವುದು ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಆದ್ದರಿಂದ ಪಶ್ಚಿಮ ಸಮುದ್ರವೇನೂ ಅದರಿಂದ ತುಂಬ ದೂರಕ್ಕಿಲ್ಲ. ದೇವಾಲಯದ ಆವಾರದಿಂದ ನೋಡುವಾಗ (ಅದರಲ್ಲೂ ಮಳೆಗಾಲದಲ್ಲಿ) ದಿಗಂತದಂಚನ್ನು ತಲುಪುವ ಹಸಿರು ಮತ್ತು ಅದಕ್ಕೊಂದು ನೀಲಿಯ ಕೊನೆಗೆರೆಯೆಳೆದಂತೆ ಪಶ್ಚಿಮ ಸಮುದ್ರ. ಹಿರಿಯ, ಕಿರಿಯ, ಹಾಸಾದ, ಚೂಪಾದ, ಕಣಿವೆಗೆಡೆಕೊಟ್ಟ ಹಸಿರು ಗುಡ್ಡಗಳು. ಅವುಗಳ ಮೇಲೆ ಸಾಗುವ ಮೇಘಗಳಿಂದಾಗಿ ರಂಗದ ಮೇಲೆ ಬೆಳಕು ಬಿಟ್ಟಂತೆ ಕೆಲವೇ ಕಡೆ ಬೀಳುವ ಸೂರ್ಯರಶ್ಮಿ, ಚಲಿಸುವ ಮೋಡಗಳಿಂದಾಗಿ ಬೆಳಕೂ ಚಲಿಸಿದಂತೆ ಭಾಸವಾಗಿ ಪೂರ್ತಿ ಬೆಟ್ಟವನ್ನು ಅದ್ಯಾರೋ ಶೋ ಕೇಸ್ ಮಾಡಿದಂಥಾ ಅನುಭವ. ಕೆಲವೇ ಕ್ಷಣದಲ್ಲಿ ಮಳೆ ಬಂದು, ಗಾಳಿ ಬೀಸಿ, ಎಲ್ಲ ಬಿಳುಪಾಗಿ ಬೆಟ್ಟವೆಲ್ಲ ಮಾಯ- ಬರೀ ನೀರು. ಒಟ್ಟಾರೆಯಾಗಿ ಅದೊಂದು ರಮ್ಯಾನುಭವ.
ದೇವಾಲಯದ ಗರ್ಭಗುಡಿಯಲ್ಲಿ ದೇವರೆಂದರೆ ಅಲ್ಲೇನೂ ದುರ್ಗೆಯ ಮೂರ್ತಿಯನ್ನು ಕಡೆದು ಕೂರಿಸಲಾಗಿಲ್ಲ. ಅಲ್ಲೊಂದು ಕಲ್ಲಿಗೆ ಸೀರೆಯುಡಿಸಿ, ಮಾಂಗಲ್ಯಾಲಂಕಾರ ಮಾಡಲಾಗುತ್ತದೆ. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ಕರ್ನಾಟಕದಲ್ಲಿ ಅಧ್ಯಾತ್ಮದ ಪ್ರಕಾಶವಾಗಿದ್ದ ಶ್ರೀಧರ ಸ್ವಾಮಿಗಳವರು ಈ ಪ್ರದೇಶವನ್ನು ಗುರುತಿಸಿ ಅದಕ್ಕೊಂದು ಗುಡಿಯ ವ್ಯವಸ್ಥೆ ಮಾಡಿದರು ಅನ್ನುವ ಐತಿಹ್ಯ ದೇವಸ್ಥಾನದಲ್ಲಿ ಉಲ್ಲಿಖಿತವಾಗಿದೆ. ಆದರೆ ಈ ದೇವಿಯನ್ನೇ ಕುಲದೇವಿಯನ್ನಾಗಿ ಹೊಂದಿರುವ ಹೊನ್ನಾವರದ ಕೆಲವು ಬ್ರಾಹ್ಮಣ ಕುಟುಂಬಗಳ ಸ್ಮರಣೆಯ ಪ್ರಕಾರ ಇತಿಹಾಸವು ತುಂಬಾ ತುಂಬಾ ಹಿಂದಕ್ಕೆ ಹೋಗುತ್ತದೆ. ದೆವಾಲಯಕ್ಕಾಗಿ ದೊಡ್ಡ ಜಾಗವನ್ನೇನೂ ಖುಲ್ಲಾಪಡಿಸದೆ ಇರುವುದರಲ್ಲಿಯೇ ಅಲ್ಲಲ್ಲಿ ಸಂಚಾರಯೋಗ್ಯಗೊಳಿಸಿ ಅಗತ್ಯವಿದ್ದಲ್ಲಿ ಸಿಮೆಂಟು ಬಳಿದು ದೇವಾಲಯ ಪ್ರಾಂಗಣವನ್ನು ನಿರ್ಮಿಸಿದ್ದಾರೆ. ಹೆಚ್ಚಿನ ಮಾರ್ಪಾಡು ಮಾಡದೇ ಇರುವುದಕ್ಕೆ ಕಾರಣವೂ ಇದೆ. ಸುತ್ತಲಿನ ಕಲ್ಲುಗಳೆಲ್ಲ ದೇವಿಯೇ ಆಗಿದ್ದು ಅವಕ್ಕೆ ಧಕ್ಕೆಯಾದರೆ ಅದು ದೇವಿಯನ್ನೇ ನೋಯಿಸಿದಂತೆ ಅನ್ನುವ ನಂಬಿಕೆಯಿದೆ. ಎಷ್ಟೆಂದರೆ ಅಲ್ಲಿನ ಕಲ್ಲುಗಳಿಗೇನಾದರೂ ಮುಕ್ಕಾದರೆ, ಗಾಯವಾದರೆ ಅವುಗಳಿಂದ ರಕ್ತ ಒಸರುವುದೆಂಬ ನಂಬಿಕೆ ಇಂದಿಗೂ ನೆಲೆಯಾಗಿದೆ. ಹಾಗಾಗಿ ಕೆತ್ತುವ, ಕಡೆಯುವ, ಮಾರ್ಪಾಡು ಮಾಡುವ ಕೆಲಸ ಅಲ್ಲಿ ನಡೆದಿಲ್ಲ. ಶುದ್ಧ ತಣ್ಣೀರು, ಅರಣ್ಯದ ಮೂಲಕ ಹಾದುಬರುವ ತಂಗಾಳಿ, ಆ ಎತ್ತರ ಮತ್ತು ಅಲ್ಲಿನ ವಾತಾವರಣವೆಲ್ಲ ಸೇರಿ ಅನನ್ಯವಾದೊಂದು ದೈವಿಕ ವಾತಾವರಣವನ್ನು ನಿರ್ಮಿಸುತ್ತವೆ.

ಪ್ರಕೃತಿಗೆ ಹತ್ತಿರವಾಗುವ ಮನಸಿರುವವರಿಗೆ ಹೇಳಿ ಮಾಡಿಸಿದ ತಾಣ ಕರಿಕಾನಮ್ಮನ ಮನೆ. 

No comments:

Post a Comment