Tuesday, July 5, 2016

    ಅರಣ್ಯ ಇಲಾಖೆಯೆಂಬ ಅಣಕು

ಕೇಂದ್ರ ಸರಕಾರ ಇನ್ನುಮುಂದೆ ದಟ್ಟಾರಣ್ಯದಲ್ಲಿ ಖಾಸಗಿಯವರಿಗೆ ಅರಣ್ಯ ಬೆಳೆಯಲು  ಅವಕಾಶ ಕೊಡುವುದರ ಬಗ್ಗೆ ಸೊಲ್ಲೆತ್ತಿದ್ದು ಸುದ್ದಿಯಾಗಿದೆ. ’ಅರಣ್ಯ ಬೆಳೆಯುವುದು’ ಎಂಬ ಪರಿಕಲ್ಪವನ್ನು ನಾನಂತೂ ನನ್ನ ಬಾಲ್ಯದಾರಭ್ಯ ಒಂದು ವ್ಯಂಗ್ಯದಂತೆಯೇ ಕಾಣುತ್ತ ಬಂದಿದ್ದೇನೆ.  ಇದೇ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಂಥಾ ಮಲೆಯ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ಪ್ರದರ್ಶಿಸುವ ಕೆಲವಾರು ಮೂರ್ಖತನಗಳು ನೆನೆಪಾದವು.

ನನ್ನೂರು ಬೆಟ್ಟಗಳಿಂದ ಆವೃತವಾಗಿದೆ; ಉತ್ತರಕನ್ನಡದ ಹಲವಾರು ಹಳ್ಳಿಗಳಂತೆ. ಬೆಟ್ಟ ಇದ್ದಲ್ಲೆಲ್ಲ ಬೆಟ್ಟಕ್ಕೆ ಸಂಬಂಧಪಟ್ಟ ಇಲಾಖೆಯ ಚಟುವಟಿಕೆಯಿರುವುದು ಸಹಜವೇ. ಆದರೆ ಬೆಟ್ಟದ ವಿಷಯದಲ್ಲಿ ಸಾಮಾನ್ಯ ಹಳ್ಳಿಗರಿಗಿರುವಷ್ಟು ಜ್ಞಾನವೂ ಇಲ್ಲದವರಂತೆ ಈ ಬೆಟ್ಟದ ಇಲಾಖೆ ಮೂರ್ಖತನವನ್ನು ತೋರುತ್ತದೆ. ಮೂವತ್ತು ವರ್ಷಗಳ ಹಿಂದೆ ನಿತ್ಯಹರಿದ್ವರ್ಣ ಕಾಡಾಗಿದ್ದ ನನ್ನೂರಿನ ಒಂದು ಪಕ್ಕದ ಕಾಡಿನಲ್ಲಿ ಅರಣ್ಯ ಇಲಾಖೆಗೆ ಏಕಾ ಏಕಿ ಸಾಗುವಾನಿ (ಟೀಕ್ ವುಡ್) ಬೆಳೆಯುವ ಉಮೇದು ಹೊತ್ತಿತು. ಸರಿ, ನಿತ್ಯಹರಿದ್ವರ್ಣ ಕಾಡನ್ನು ತರಿದು ಹಾಕಿ ಗುಡ್ಡದ ಮೈಮೇಲೆಲ್ಲ ಸಾಗುವಾನಿಯನ್ನು ನೆಡಲಾಯ್ತು. ನಿತ್ಯಹರಿದ್ವರ್ಣ ಕಾಡು ಕ್ರಮೇಣ ಮಾಯುತ್ತ ಬಂದು ಇವತ್ತಿಗೆ ಆ ಗುಡ್ಡಕ್ಕೆ ಗುಡ್ಡವೇ ಸಾಗುವಾನಿ ಗುಡ್ಡವಾಗಿದೆ. ಸಾಗುವಾನಿ ಎಂಥಾ ಮರವೆಂದರೆ ಅದು ತನ್ನ ಸುತ್ತ ಬೆಟ್ಟದ ಸಹಜ ಸಸ್ಯರಾಶಿಯನ್ನು ಬೆಳೆಯಗೊಡುವುದಿಲ್ಲ, ಬೇಸಿಗೆ ಬಂತೆಂದರೆ ಎಲೆ ಉದುರಿಸಿ ಕಾಲ ಬುಡಕ್ಕೆ ರಾಶಿ ಹಾಕಿಕೊಳ್ಳುತ್ತದೆ, ಮತ್ತು ಬೆಟ್ಟದ ಬೆಂಕಿಗೆ ಆ ತರಗೆಲೆ ಪ್ರತಿವರ್ಷವೂ ಸುಟ್ಟು ಬೂದಿಯಾಗುತ್ತದೆ. ಪರಿಣಾಮ, ಅಕಸ್ಮಾತ್ ಬದುಕಿದ್ದ ಸಣ್ಣಪುಟ್ಟ ಸಸ್ಯಗಳ ಮಾರಣ ಹೋಮ ಮತ್ತು ಪ್ರಾಣಿಸಂಕುಲಕ್ಕೆ ಬರೆ. ಊರಿನ ಇನ್ನೊಂದು ಪಕ್ಕದ ಗುಡ್ಡಕ್ಕೆ ನಿತ್ಯಹರಿದ್ವರ್ಣ ಕಾಡು ಇವತ್ತಿಗೂ ಜೀವಂತ ಹಬ್ಬಿಕೊಂಡಿದೆ. ನಂಬಿ, ಬೇಸಗೆಯಲ್ಲೂ ಅದೆಷ್ಟು ತಂಪನೆಯ ಬೆಟ್ಟವೆಂದರೆ ಅದಕ್ಕೆ ಬೆಂಕಿ ಹೊತ್ತಲಾರದು. ನಾನೆಂದೂ ಆ ಬೆಟ್ಟಕ್ಕೆ ಬೆಂಕಿ ಬಿದ್ದುದನ್ನೇ ಕಂಡಿಲ್ಲ, ಸೂರ್ಯನ ನೇರ ಬೆಳಕು ನೆಲಕ್ಕೆ ಬೀಳದಷ್ಟು ಗಾಢ ಕಾನನ ಅದು. ಇನ್ನೊಂದು ಪಕ್ಕಕ್ಕೆ ವಕ್ಕರಿಸಿಕೊಂಡಿರುವ ಸಾಗುವಾನಿ ಕಾಡೆಂಬ ಬೆಂಗಾಡನ್ನು ಕಾಣುವಾಗೆಲ್ಲ ಅಮೂಲ್ಯವಾದ್ದನ್ನು ಕಳಕೊಂಡ ನೋವಾಗುತ್ತದೆ ಮನಸಿಗೆ. ಅರಣ್ಯ ಇಲಾಖೆಯ ಪ್ರಜ್ಞಾ ಶೂನ್ಯತೆಗೆ ಇದೊಂದು ಉದಾಹರಣೆ.
ಪ್ರತಿಬಾರಿಯೂ ಮಳೆಗಾಲದಲ್ಲಿ ಗಿಡ ನೆಡುವ ಒಳ್ಳೆಯ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯೂ ಹಮ್ಮಿಕೊಳ್ಳುತ್ತದೆ. ಹಾಗೆಯೇ ಪ್ರತಿಬಾರಿಯೂ ಹಿಂದಿನ ವರ್ಷ ಸಸಿ ನೆಟ್ಟ ಜಾಗದಲ್ಲೇ ಮತ್ತೆ ಸಸಿ ನೆಡುವ ಹೀನಾಯ ಅಪಮಾನವನ್ನು ದಶಕಗಳಿಂದ ಉಣ್ಣುತ್ತಿದೆ. ಮೊನ್ನೆ ಊರಿಗೆ ಹೋದಾಗ ಎಂದಿನಂತೆ ಬೆಟ್ಟ ಸುತ್ತಲು ಹೋಗಿದ್ದೆ. ಬೆಟ್ಟದ ಬದಿಯ ದಿಣ್ಣೆಯಮೇಲೆ ಪ್ರತಿವರ್ಷದಂತೆ ಈ ವರ್ಷವೂ ಕತ್ತರಿಯಾಕಾರದಲ್ಲಿ ಬೇಲಿ ಗಿಡ ನೆಟ್ಟಿದ್ದಾರೆ. ಅದನ್ನು ನೋಡಿ ವಿಷಾದ ಅನ್ನಿಸಿತು. ಈಗ್ಗೆ ಹದಿನೈದು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಾವು ಮಕ್ಕಳು ಶಾಲೆಯ ಬೇಲಿಗೆಂದು  ಮಳೆಗಾಲದಲ್ಲಿ ತಂದು ನೆಟ್ಟ ಬಕುಲ ಗಿಡಗಳು ಇಂದು ಮರವಾಗಿವೆ, ಆದರೆ ಅರಣ್ಯ ಇಲಾಖೆ ಮಾತ್ರ ಒಂದು ಸಸಿಯನ್ನೂ ಬದುಕಿಸಿಕೊಳ್ಳಲಾಗಿಲ್ಲ- ಇದು ವಿಷಾದ ಅಲ್ಲದೆ ಇನ್ನೇನು? ಆಯಾ ಪರಿಸರಕ್ಕೆ ಹೊಂದಿಕೊಳ್ಳದ ಗಿಡಗಳನ್ನು ನೆಡುವುದು, ನೆಟ್ಟಮೇಲೆ ಮತ್ತೆಂದೂ ಆ ಕಡೆ ಸುಳಿಯದಿರುವುದು, ಅದಕ್ಕೆ ರಕ್ಷಣೆ ಕೊಡದಿರುವುದು ಇವೆಲ್ಲ ಶ್ರದ್ಧೆಯುಳ್ಳವರ ಕಾರ್ಯಗಳಲ್ಲವಷ್ಟೆ. ನಿತ್ಯಹರಿದ್ವರ್ಣ ಕಾಡಿನಲ್ಲಿ ಅಕೇಶಿಯಾ ಗಿಡ ನೆಡುವಾಗ ಸುತ್ತಲಿನ ಐದಾರು ಗಿಡಗಳನ್ನು ಕಡಿದು ಅದಕ್ಕೆ ಆಧಾರ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲಿ ಮರ ನೆಡಬೇಕು, ನೆಡುತ್ತಾರಷ್ಟೆ.

ಬೆಟ್ಟದ ಕೊನೆಗಳಲ್ಲಿ ಮನುಷ್ಯರು ಸುಲಭವಾಗಿ ಒಳಹೋಗಲಾಗದಂತೆ, ಪ್ರಾಣಿಗಳು ಊರಿಗೆ ಬರಲಾಗದಂತೆ, ಮಳೆಗಾಲದಲ್ಲಿ ನೀರು ಇಂಗಲೆಂಬಂತೆ ಕಳೆದವರ್ಷ ನಮ್ಮಲ್ಲೆಲ್ಲ ಹಳ್ಳದಂಥದ್ದೇನೋ ತೋಡಿದೆ ಅರಣ್ಯ ಇಲಾಖೆ ಮತ್ತು ಅಲ್ಲಿಯೂ ಅವೈಜ್ಞಾನಿಕತೆ ಮೆರೆದಿದೆ. ಬೇಸಿಗೆಯಲ್ಲಿ ಮರದ ಬುಡದ ಮಣ್ಣನ್ನು ಎತ್ತಿ ಹಾಕಿದ್ದರಿಂದ ಈ ವರ್ಷದ ಮಳೆಗಾಲಕ್ಕೆ ಮರಗಳು ಬುಡಕಳಚಿ ಧರೆಗುರುಳುತ್ತಿವೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಂತಲ್ಲವೆ ಇದು?

ಅಕೇಶಿಯಾ ಗಿಡಗಳನ್ನಂತೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೆಡುತ್ತದೆ ಇಲಾಖೆ. ಉತ್ತರಕನ್ನಡದ ಸಜಹ ಅರಣ್ಯಗಳಲ್ಲಿ ಈ ಅಕೇಶಿಯಾ ಅನ್ನುವ ಮಾರಿಗೆ ಜಾಗ ಕೊಡಬೇಕಾದ್ದೇ ಇರಲಿಲ್ಲ. ಆದರೆ ದುರದೃಷ್ಟಕ್ಕೆ ಈಗಾಗಲೇ ಅದು ಅರಣ್ಯವನ್ನೂ ಕೃಷಿ ಭೂಮಿಯನ್ನೂ ಆವರಿಸಿಕೊಂಡಾಗಿದೆ. ಬೆಟ್ಟದ ಮಧ್ಯೆ ಬದುಕುವ ಸಾಮಾನ್ಯ ಜನಕ್ಕೂ ಗಿಡಮರಗಳ ಬಗ್ಗೆ ಕಾಳಜಿ, ತಿಳುವಳಿಕೆ ಮತ್ತು ಗೌರವಗಳಿರುತ್ತವೆ. ಅರಣ್ಯ ಇಲಾಖೆ ಮಾತ್ರ ಕಾಟಾಚಾರಕ್ಕೆಂಬಂತೆ ಕಾಡಿನ ಕೆಲಸ ಮಾಡುತ್ತದೆ. ಗಿಡ ನೆಡುವ ವಿಚಾರ ಮಾತ್ರವೇ ಅಲ್ಲ, ಒಡ್ಡು ನಿರ್ಮಾಣದ ವಿಷಯದಲ್ಲೂ ಇದೇ ಕಥೆ. ಅರಣ್ಯ ಇಲಾಖೆಯದ್ದೊಂದೇ ಹಣೆಬರಹ ಇದಲ್ಲ, ಸರಕಾರೀ ಯಂತ್ರದ ಬೇರೆ ಬೇರೆ ಪಾರ್ಟ್ ಗಳಲ್ಲೂ ಇದೇ ಖಾಯಿಲೆ ಇದೆ.  ಪ್ರಯೋಜನಕ್ಕೆ ಬಾರದ ಕೆಲಸ ಮಾಡುವ ಸರಕಾರೀ ಸ್ವಭಾವ ಯಾವಾಗ ಶಮನವಾಗುವುದೋ ದೇವರೇ ಬಲ್ಲ. ಬಹುಶಃ ಇದನ್ನೆಲ್ಲ ನೋಡಿಯೇ ಮೋದಿ ಸರಕಾರ ಖಾಸಗಿಯವರಿಗೆ ಅರಣ್ಯದಲ್ಲಿ ಅರಣ್ಯ ಬೆಳೆಸಲು (!) ಅವಕಾಶ ಕೊಡುವ ವಿಚಾರ ಶುರುಮಾಡಿಕೊಂಡಿದೆ. ಸರಕಾರದ ಚಿಂತನೆಯ ಹಿನ್ನೆಲೆ ಏನಿದೆಯೋ ಗೊತ್ತಿಲ್ಲ, ಆದರೆ ಹಾಗೊಂದು ನೀತಿ ಬಂದಲ್ಲಿ ಅರಣ್ಯ ನಾಶದ ಹೊಸದೊಂದು ದಿಕ್ಕು ತೆರೆದುಕೊಳ್ಳುವುದು ಖಚಿತ.


No comments:

Post a Comment