Saturday, January 10, 2015

ವಿಭಕ್ತಿಯ ಕಥೆಗಳು...



ಅರ್ಥದ ಸಂವಹನಕ್ಕೆ ಭಾಷೆಯನ್ನು ಬಳಸುತ್ತೇವೆ ನಿಜ, ಆದರೆ ಅರ್ಥವೆಂಬುದು ಅದೆಷ್ಟು ಬಗೆಯಲ್ಲಿ ಭಾಷೆಯಿಂದ ಭಿನ್ನ ಅಲ್ಲವಾ? ಅದು ಭಾಷೆಯ ನಿಲುಕಿಗೆ ಪೂರ್ತಿಯಾಗಿ ಎಂದಿಗೂ ಸಿಕ್ಕೇ ಇಲ್ಲ. ಮಿಂಚಿನಷ್ಟು ಚಂಚಲ!
ಷಷ್ಠೀ ವಿಭಕ್ತಿಯನ್ನು ನೋಡುವಾ.
ಷಷ್ಠೀ ವಿಭಕ್ತಿ ಎಂಬುದು ಸಾಮಾನ್ಯವಾಗಿ ಸಂಬಂಧವನ್ನು ಹೇಳುವುದಕ್ಕೆ ಬಳಕೆಯಾಗುವಂಥದು. ಹಾಗಂತ ಅದರ ಅರ್ಥ ಸಂಬಂಧ ಮಾತ್ರವೇ ಅಲ್ಲ, ನೂರೆಂಟು ಷಷ್ಠ್ಯರ್ಥಗಳಿವೆ ಅಂದಿದೆ ಸಂಸ್ಕೃತ ವ್ಯಾಕರಣ. ಕನ್ನಡದಲ್ಲೇ ಅದರ ಇರು-ಬರವನ್ನು (ಸ್ಥಿತಿಗತಿ!) ಗಮನಿಸುವುದಾದರೆ-
೧. ಮರದ ಹಣ್ಣು.
೨. ಹಣ್ಣಿನ ಪಾಯಸ.
ಇಲ್ಲಿ ಎರಡೂ ಕಡೆ ಸಂಬಂಧವೇ ಮೇಲ್ನೋಟಕ್ಕೆ ಅರ್ಥ. ಮರಸಂಬಂಧಿಯಾದ ಹಣ್ಣು, ಹಣ್ಣಿನ ಸಂಬಂಧಿ ಪಾಯಸ ಅಂತ. ಆದರೆ ಅದರಲ್ಲೂ ಭೇದ ಇದೆ. ಮರದ ಹಣ್ಣು- ಮರದಿಂದ ಉತ್ಪತ್ತಿಯಾದ ಹಣ್ಣು. ಹಣ್ಣಿನ ಪಾಯಸ ಹಣ್ಣಿನಿಂದ ಉತ್ಪತ್ತಿಯಾದ್ದಲ್ಲ, ಬದಲಿಗೆ ಹಣ್ಣೇ ತಾನು ರೂಪಾಂತರವಾಗಿ ಪಾಯಸವಾಗಿದೆ, ಮತ್ತಿಲ್ಲಿ ಹಣ್ಣಿನ ಉಳಿಕೆ ಹಣ್ಣಿನ ರೂಪದಲ್ಲಿ ಇಲ್ಲ.

೩. ಮಣ್ಣಿನ ಕೊಡ
೪. ನೀರಿನ ಕೊಡ
ವ್ಯಾಕರಣದ ಗಂಧವೇ ಇಲ್ಲದವನಿಗೂ ಈ ಎರಡು ವಾಕ್ಯಗಳು ಗೊಂದಲ ತರುವುದಿಲ್ಲ, ಸರಳವಾಗಿ ಅರ್ಥವಾಗುತ್ತವೆ. ಆದರೆ ಇವೆರಡೂ ವಾಕ್ಯದಲ್ಲಿ ಷಷ್ಠಿಯನ್ನು ನಾವು ಅರ್ಥಮಾಡಿಕೊಳ್ಳುವ ಬಗೆಯೇ ಬೇರೆ. ಮಣ್ಣಿನ ಕೊಡ ಎಂಬಲ್ಲಿ ಷಷ್ಠಿಯನ್ನು ಅರ್ಥೈಸಿಕೊಂಡಂತೆ ನೀರಿನ ಕೊಡ ಎಂಬಲ್ಲಿಯೂ ಅರ್ಥೈಸಿಕೊಂಡರೆ? ಆಗದು, ಅದು ಅಸಂಭವ. ಮಣ್ಣಿನ ವಿಕಾರ (ಅದರಿಂದ ಉಂಟಾದ್ದು- ವಿಕಾರ) ಕೊಡವಿರುವಂತೆ, ನೀರಿನಿಂದ ಮಾಡಿದ ಕೊಡವಿರಲಾರದು. ನೀರನ್ನು ತರುವುದಕ್ಕಾಗಿ ಇರುವ ಕೊಡ ಅದು-ನೀರಿನ ಕೊಡ. ಆದರೂ ಗೊಂದಲವಿರದೆ ಇವೆರಡೂ ವಾಕ್ಯಗಳನ್ನು ಬಳಸುತ್ತೇವೆ ನಾವು. ನಮ್ಮ ಮಿದುಳಿನ ಅರ್ಥೈಸುವ ಸಾಮರ್ಥ್ಯ ಎಷ್ಟು ದೊಡ್ಡದು!
೫. ಜ್ವರದ ಗುಳಿಗೆ
. ನಿದ್ರೆಯ ಗುಳಿಗೆ
 ಷಷ್ಠಿ ಒಂದೇ ಎರಡೂ ಕಡೆಯಲ್ಲಿ, ಆದರೆ ಅರ್ಥ ಮಾತ್ರ ನಿತರಾಂ ವಿರುದ್ಧವಾದ್ದು. ಜ್ವರದ ಗುಳಿಗೆ-ಜ್ವರದ ನಿವಾರಣೆಗೆ, ನಿದ್ರೆಯ ಗುಳಿಗೆ ನಿದ್ರೆಯ ನಿವಾರಣೆಗೆ ಅಲ್ಲ!! ಔಷಧ ಅಂಗಡಿಯವನು ಮಾತ್ರವಲ್ಲ, ವೈದ್ಯರ ಪ್ರಿಸ್ಕ್ರಿಪ್ಶನ್ಗಿಂತ ಜಟಿಲವಾಗಿರುವ ಭಾಷೆಯ ಈ  ಗೊಂದಲಮಯ ಪ್ರಿಸ್ಕ್ರಿಪ್ಷನ್ನನ್ನು ಯಾರೂ ತಪ್ಪಾಗಿ ಅರ್ಥೈಸುವುದಿಲ್ಲ. ಹಾಗೇನಾದರೂ ತಪ್ಪು ಅರ್ಥೈಸಿದರೆ ಕಥೆ ಮುಗಿದಂತೆ.
೭. ರಾಮನ ಪೂಜೆ
೮. ಹುಡುಗಿಯ ಹಾಡು
ಇಲ್ಲಿನ ಷಷ್ಠಿಗಳಲ್ಲಿ ಗೊಂದಲ ಇದ್ದೇ ಇದೆ. ಇದು ಬಗೆಹರಿಯುವುದು ಕಷ್ಟ. ರಾಮನ ಪೂಜೆಯಲ್ಲಿ ರಾಮ ಎಂಬಾತ ಪೂಜೆಗೊಳ್ಳುವವನೋ, ಪೂಜೆ ಮಾಡುವವನೋ? (ವ್ಯಾಕರಣದ ಪರಿಭಾಷೆಯಲ್ಲಿ ಕೇಳುವುದಾದರೆ ರಾಮನು ಕರ್ತನೋ, ಕರ್ಮವೋ?). ಸಂದರ್ಭಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಅದಿಲ್ಲದಿದ್ದರೆ ಭಾಷೆಯ ಕೈಯಿಂದ ಅರ್ಥ ಆರಾಮಾಗಿ ನುಸುಳಿಕೊಳ್ಳುತ್ತದೆ. ಹುಡುಗಿಯ ಹಾಡು ಹುಡುಗಿಯೇ ಹಾಡಿದ್ದೋ ಅಥವಾ ಹುಡುಗಿಯ ಕುರಿತಾದ್ದೋ? ಗೋವಿನ ಹಾಡಿನಂತೆ.
ಇಷ್ಟಕ್ಕೆ ಮುಗಿಯಲಿಲ್ಲ ಈ ಕಥೆ. ಎರಡೆರಡು ಷಷ್ಠಿ ಬರುವುದಿದೆ ಒಮ್ಮೊಮ್ಮೆ. ಉದಾ- ಆಚೆಮನೆಯ ಮಾವಿನ ಹಣ್ಣಿನ ಪಾಯಸ. ಅಂದರೆ ’ಮಾವಿನ ಹಣ್ಣು ಆಚೆ ಮನೆಯದ್ದು ಮತ್ತು ಅದರ ಪಾಯಸ ನಮ್ಮನೆಯದು’ ಅಂತಲೋ, ಅಥವಾ ಮಾವಿನ ಹಣ್ಣು ಮತ್ತು ಪಾಯಸ ಎರಡೂ ಆಚೆ ಮನೆಯದ್ದು ಅಂತಲೋ!? ಗೊಂದಲವೇ ಗೊಂದಲ. ಭಾಷಾಂತರದ ಕಾಲದಲ್ಲಿ ಇವು ಕೊಡುವ ಕಷ್ಟ ಹೇಳತೀರದು. ಇಷ್ಟರ ಮೇಲೆ ಕೆಲವೊಮ್ಮೆ ಷಷ್ಠೀ ತತ್ಪುರುಷದ ಜೊತೆಗೆ ಇನ್ನೊಂದು ಷಷ್ಠಿ ಬಂದರೆ ಕಥೆ ಇನ್ನೂ ಬಿಗಡಾಯಿಸುತ್ತದೆ. ಉದಾ- ವಿಶ್ವಾಮಿತ್ರರ ಗುರುಕುಲ. ಇದರ ಕುರಿತು ಇನ್ನೊಂದಿನ ಮಾತಾಡೋಣ.

ಒಟ್ಟಿನಲ್ಲಿ ಅರ್ಥವೆಂಬುದು ಭಾಷೆಯ ಹಿಡಿತಕ್ಕೆ ಸಿಗುವುದಿಲ್ಲ ಅಂತ ಖಾತ್ರಿ. ಇದ್ದುದರಲ್ಲಿ ಸಂಸ್ಕೃತಭಾಷೆ ಅರ್ಥವನ್ನು ಹಿಡಿದಿಡಲು ಉಳಿದ ಭಾಷೆಗಳಿಗಿಂತ ಹೆಚ್ಚಿನ ಸಾಹಸ ಮಾಡಿದೆ. ಷಷ್ಠ್ಯರ್ಥ ನೂರು ಎನ್ನುವುದೂ, ಅರ್ಥಕ್ಕೆ ಪ್ರಕರಣವು ಮುಖ್ಯ ಎನ್ನುವುದೂ ಆ ಪ್ರಯತ್ನದ ಭಾಗವೇ. ಕನ್ನಡವನ್ನೇ ರಕ್ತವಾಗಿ ಪಡೆದ ನಮಗೆ ಕನ್ನಡದಲ್ಲಿ ಇದು ಸಮಸ್ಯೆಯೇ ಅಲ್ಲ, ಆದರೆ ಅನ್ಯಭಾಷಿಕರಿಗೆ, ಅಥವಾ ಭಾಷಾಂತರಕ್ಕೆ ಕುಳಿತವರಿಗೆ ಈ ಬಗೆಯ ತೊಂದರೆಗಳು ತಪ್ಪಿದ್ದಲ್ಲ.

No comments:

Post a Comment