Friday, January 9, 2015

ನದಿ ಮರಳಿ....


ಮೊಡ್ಡು ಕತ್ತಿಯ  ಅಲಗಿನ ತುಕ್ಕು ಸವೆದು ಅದರ ಕಂದು ಬಣ್ಣ ಕಳೆದು ಮೀನಿನ ಒಳ ಮೈಯಂಥ ಹೊಳಪು ಕಾಣಿಸುತ್ತಿತ್ತು. ಮಾವಿನ ಮರದ ನೆರಳಿನಲ್ಲಿ ಚಳಿ ಕಳೆದು ಆಗತಾನೆ ಮೂಡಿದ್ದ ಹೀಚು ಕಾಯಿಗಳು ಉದುರಿ ನೀರು ಹರಿಯುವ ಆ ಕಡಮಾರಿನಲಿ ನಿಧಾನಕ್ಕೆ ತೇಲುತ್ತಿದ್ದುವು. ಎದುರು ಒಂದು ಕಾಲಕ್ಕೆ ಬೆಳೆ ತೆಗೆಯುತ್ತಿದ್ದ ಭತ್ತದ ಗದ್ದೆ. ಕತ್ತಿ ಮಸೆಯಲೆಂದೇ ಇದ್ದ ಮಸೆ ಕಲ್ಲಿನ ಅಂಚಿಗೆ ಇಪ್ಪತ್ನಾಲಕರ  ಅವನು- ಶ್ರವಣ- ತನ್ನ ಬಲವನ್ನೆಲ್ಲ ಹಾಕಿ ಒತ್ತಿ, ಕತ್ತಿ ಮಸೆಯುತ್ತಿದ್ದ. ಮನೆಯಲಿದ್ದ ಹರಿತವಾದ ಕತ್ತಿಯನ್ನು ತನ್ನ ಕೈಗೆ ಕೊಡುವುದಿಲ್ಲ ಅಪ್ಪ ಅನ್ನುವ ಸಣ್ಣ ಸಿಟ್ಟು, ಕತ್ತಿಯೊಂದಿಗೆ ಆಟ ಬೇಡ ಎಂದು ನಿರಾಕರಿಸುತ್ತಲೇ ಗದರಿಸುವ ಆಯಿಯ ಬಗೆಗಿನ ಅಸಹನೆ ಎರಡೂ ತನ್ನನ್ನು ಕತ್ತಿಯಿಂದ ದೂರವಿಟ್ಟು ಸಾಕಿದುವಲ್ಲ ಬಾಲ್ಯದಲ್ಲಿ, ಆ ನೆನಪು ಮತ್ತು ಇಂದಿನ ಅನಿವಾರ್ಯತೆ ಎಲ್ಲ ಮೇಳೈಸಿ ಅವ ಇನ್ನಷ್ಟು ಮತ್ತಷ್ಟು ಈ ಹಳೆಯ ಕತ್ತಿಯನ್ನೇ ಅಪ್ಪನ ಕತ್ತಿಯಂತೆ ಹರಿತಗೊಳಿಸುವ ಛಲಕ್ಕೆ ಬಿದ್ದಂತೆ ಕುಕ್ಕರುಗಾಲಿನಲ್ಲಿ ಕೂತು ಮಸೆಯುತ್ತಿದ್ದ. ಪೂರ್ವಜನ್ಮದ ತನ್ನ ನೆನಪುಗಳನ್ನು ಕಳೆದುಕೊಂಡಹಾಗೆ ಎಲ್ಲೋ ಮೂಲೆಯಲಿ ಬಿದ್ದಿದ್ದ ಆ ಕತ್ತಿ ಹಳೆಯ ಕೊಳೆಯನ್ನು ಕಳೆದುಕೊಂಡು ಹೊಳೆಯತೊಡಗಿತ್ತು. ತನ್ನ ಆಲೋಚನೆಗಳನ್ನು ಈ ಕತ್ತಿಯಾದರೂ ಒಪ್ಪಿದಂತೆ ಶ್ರವಣ ಅಂದುಕೊಳ್ಳುತ್ತಿರುವಾಗಲೇ ಆ ಕಡೆಯಂಚಿನ ಗದ್ದೆ ತುದಿಯಲ್ಲಿ ನಿಂತ ಯಾರೋ ತನ್ನನ್ನೇ ಕರೆದ ಸದ್ದು. ಹೌದು, ಕರೆಯುತ್ತಿರುವುದೇ ಖರೆಅವ ಸದಾಶಿವ, ಸದು ಅಂತ ಎಲ್ಲರೂ ಅವನನ್ನು ಕರೆಯುವುದು. ಹೆಗಲಮೇಲೆ ಒಂದು ಕಂಬಳಿ, ಬಾಯಲ್ಲಿ ಕೆಂಪು ಕವಳ, ಅಷ್ಟೇನೂ ಒಪ್ಪವಲ್ಲದ ಮುಖ ಮತ್ತು ತಲೆಗೂದಲು... ಅವನನ್ನು ಸದಣ್ಣ ಎಂದು ಕರೆಯುವ ತನ್ನ ವಯಸ್ಸಿನ ಹುಡುಗರ ಒಂದು ಪಡೆಯೇ ಇತ್ತು ಈ ಊರಲ್ಲಿ ಒಂದು ಕಾಲದಲ್ಲಿ. ಇಂದಿಗೆ ಆ ಹುಡುಗರೆಲ್ಲ- ಗೆಳೆಯರು- ಓದು ಮುಗಿಸಿ ಪೇಟೆ ಪಟ್ಟಣ ಸೇರಿರಬೇಕು. ಈ ಸದಣ್ಣ ಹೊಸ ತಲೆಮಾರಿನ ಏಕೈಕ ಮಹಾ ದುಡಿಮೆಗಾರ ಅಂತ ಇಂದಿಗೆ ಬದುಕಿಲ್ಲದ ಅಂದಿನ ಹಳೆಯ ತಲೆಮಾರುಗಳು ತಲೆದೂಗುತ್ತಿದ್ದುದು ತನ್ನ ಬಾಲ್ಯದ ನೆನಪುಗಳಲ್ಲಿದೆ. ಅದು ಅವನಿಗೆ ಅಂದಿನ ದೊಡ್ದ ಐಡೆಂಟಿಟಿ ಆಗಿದ್ದಲ್ಲದೆ ಪುರುಷತ್ವದ ಏಕಮೇವ ಕುರುಹೆಂದರೆ  ಹಾಗೆ ಗದ್ದೆಯಲ್ಲಿ ಗೇಯುವುದು ಎನ್ನುವ ಅವನ ಸಿದ್ಧಾಂತವೂ ಜೊತೆಯಾಗಿತ್ತು. ಅದಕ್ಕೆ ತಕ್ಕಂತೆ ಸದಣ್ಣನನ್ನು ಬಿಟ್ಟು ಊರಿನ ಉಳಿದ ಗಂಡು ಮಕ್ಕಳು ಜಮೀನಿನ ದುಡಿತ ಕಲಿಯುವವರಲ್ಲ ಎನ್ನುವ ಸಾಮಾನ್ಯ ಅನಿಸಿಕೆಯೊಂದು ಹಳ್ಳಿಯ ಎಲ್ಲರಿಗೂ ಶುರುವಾಗಿತ್ತು. ಹೈಸ್ಕೂಲಿಗಿಂತ ಹೆಚ್ಚಿಗೆ ಓದದೆ, ಮನೆಯ ಗದ್ದೆ, ತೋಟ, ಕಬ್ಬಿನ ಕೃಷಿ, ಉದ್ದು ಬೆಳೆಯುವುದು.. ಹೀಗೆ ಮಣ್ಣು ಮಳೆ ಬಿಸಿಲಿಗೆ ಬಿದ್ದು ಸದ್ದಿರದೆ 32 ವರ್ಷವಾದ ಅವನಿಗೆ ಹೆಣ್ಣು ಸಿಗದೆ.... ಹೀಗೆ ಸದಣ್ಣನ ಚರಿತ್ರೆಯೇ ಶ್ರವಣನ ಕಣ್ಣೆದುರು ಹಾದು ಬಂತು. ಅಷ್ಟರಲ್ಲಿ ಅವ ಇಷ್ಟು ಹತ್ತಿರಕ್ಕೆ ಅವನಾಗಿಯೇ ಬಂದಿದ್ದ. ಬಾಯಲಿದ್ದ ಎಲೆ ಅಡಿಕೆ ಉಗುಳಿ, ದೊಡ್ಡಕ್ಕೆ ಮಂಗನನ್ನು ಬೆದರಿಸುವವನಂತೆ ಅರೆ ನಗೆಯ ಮುಖ ಮಾಡಿ ವಿಚಾರಿಸಿಕೊಂಡ-
'ಅಪರೂಪದ ಜನ ಯಾವಾಗ ಬಂದದ್ದು? ಮತ್ತದೇನು ಇಲ್ಲಿ ಗದ್ದೆ ಹತ್ತಿರ?!!
ತನಗೆ ಮಾತ್ರವೆ ಈ ದನಿಯಲ್ಲಿ ಕುಹಕ ಕಾಣುತ್ತಿದೆಯೋ ಅಥವಾ ನಿಜಕ್ಕೂ ಇದರಲ್ಲಿ ಕುಹಕದ ಛಾಯೆ ಇದೆಯೋ ಅರಿಯಲಾಗಲಿಲ್ಲ ಶ್ರವಣನಿಂದ. ಥತ್, ಮಾತಾಡುವುದನ್ನೇ ಕಲಿತಾಗಿಲ್ಲ ಇಂದಿಗೂ ತನಗೆ...
'ಹಾ, ಮೊನ್ನೆ ಸಂಜೆಯೇ ಬಂದಿದ್ದು... ಗದ್ದೆಯ ಕಡೆಯೇ ಇನ್ನು ಬರುವುದು ನಾನು..'
ಮೊನ್ನೆ ಮನೆಗೆ ಬಂದಾಗಿನಿಂದ ಯಾರೂ ಒಪ್ಪಿರದ ತನ್ನ ನಿಧರ್ಾರವನ್ನು ಮತ್ತಷ್ಟು ತನಗೆ  ತಾನೇ ಗಟ್ಟಿ ಮಾಡಿಕೊಳ್ಳುವವನಂತೆ ಹೇಳಿದ ಶ್ರವಣ. ಇಲ್ಲಿ ಸದಣ್ಣನ ಎದುರು ಈ ಗಡಸುತನ ಬೇಕಿರಲಿಲ್ಲ.
ಇದೇನೋ ಹೊಸ ರೀತಿ ಎಂದು ಸದಾಶಿವನಿಗೂ ಅರ್ಥವಾಯ್ತು. ಕಂಬಳಿಯನ್ನು ಎಡ ಹೆಗಲಿನಿಂದ ಬಲ ಹೆಗಲಿಗೆ ವಗರ್ಾಯಿಸಿ, ಒಮ್ಮೆ ಗಂಟಲು ಕೊಸರಿ ಹೊಸದೇ ವಿಷಯಕ್ಕೆ ಬಂದ..
'ಮೂರು ವಾರ ಆಗೋಯ್ತು ಅಡಿಕೆ ಕೊಯ್ಯಲು ಆಳಿಗೆ ಬರಹೇಳಿ, ಇಂದಿಗೂ ಅವನಿಗೆ ಪುರುಸೊತ್ತಾಗಿಲ್ಲ.. ಛೆ, ಹೀಗೆ ಆದ್ರೆ ಅಡಿಕೆ ಎಲ್ಲ ಉದುರಿ ಖಾಲಿ..'
ಮೊದಲಿನ ವಿಷಯ ಬಿಡಲು ಶ್ರವಣ ತಯಾರಿರಲಿಲ್ಲ. ಅವ ಮತ್ತೆ ಬುಡಕ್ಕೆ ಬಂದ.
'ಸದಣ್ಣ, ಓದಿದ್ದು ಸಾಕು ಅನ್ನಿಸ್ತುಅದಕ್ಕೆ ಮನೆಗೆ ಬಂದೆ, ಮತ್ತೆ ಆ ದೂರದ ಧಾರವಾಡ ನಗರಕ್ಕೆ ಹೋಗುವ ಮಾತಿಲ್ಲ. ಮನೆ, ತೋಟ, ಆರು ವರ್ಷದಿಂದ ಹಾಳು ಬಿಟ್ಟ ಈ ಭತ್ತದ ಗದ್ದೆ, ಇವನ್ನೆಲ್ಲ ಸರಿ ಮಾಡಿಕೊಂಡು ಇಲ್ಲಿ ಇದ್ದುಬಿಡುವಾ ಅಂತ.'
ಹಾಗೆ ಹೇಳುವಾಗೇನೋ ತನ್ನ ಕೈಯಲ್ಲಿ ಹರಿತಗೊಂಡ ಕತ್ತಿಯ ಬಗ್ಗೆ ಗಮನ ಹರಿದು, ತನ್ನ ಬಗ್ಗೆ ಹೆಮ್ಮ ಅನ್ನಿಸಿ, ಅದರ ಅಲಗಿನ ಧಾರೆಯ ಮೇಲೆ ಹರಿತ ನೋಡುವವನಂತೆ ನಿಧಾನಕ್ಕೆ ಬೆರಳು ಸವರಿದ ಶ್ರವಣ.
ಸದಾಶಿವನಿಗೆ ಇದೆಲ್ಲ ಏನೆನ್ನಿಸಿತೋ, ಹುಮ್.... ಅಂದವನು ತೋಳಿನ ವರೆಗೆ ಮುಚ್ಚಿದ್ದ ಶ್ರವಣನ ಅಂಗಿಯನ್ನು ಎರಡು ಬೆರಳಿನಿಂದ ಹಿಡಿದು ಮೆಚ್ಚಿಕೊಂಡವನಂತೆ ' ಒಳ್ಳೆ ಬಟ್ಟೆ ಮಾರಾಯ, ನನಗೂ ಒಂದು ಬೇಕು ಇಂಥದು, ನೀ ಮತ್ತೆ ಬರುವಾಗ ತಂದುಕೊಡು..' ಅಂದ.
ಅಷ್ಟಕೆ ನಿಲ್ಲದೆ, ' ಭೂಮಿಯ ಬದುಕಿಗೆ ತೋಳು ತುಂಬಿದ ತಾಕತ್ತು ಬೇಕು ತಮ್ಮಾ, ಕಲ್ಲು ಕರಗಿಸುವ ಬಲ ಬೇಕು. ಬಿಡು, ಪೇಟೆಯ ಜೀವ ಹಳ್ಳಿಗೆ ಊಹುಂ..' ಅಂದ. ಅಷ್ಟರಲ್ಲಿ ಅವನ ಕಬ್ಬಿನ ಗದ್ದೆಯ ಬೇಲಿ ಗಂಡಿಯಿಂದ ಕರಿಬಣ್ಣದ ಎತ್ತು ನುಗ್ಗಿದ್ದು ಕಾಣಿಸಿ, ಒಂದೇ ಉಸಿರಿಗೆ 'ಮತ್ತೆ ಮಾತಾಡುವಾ..' ಎಂದವನೇ ಓಡಿ ಮಾಯವಾದ. ಅವ ಹೋದ ದಿಕ್ಕನ್ನು ನೋಡುತ್ತ, ಅವ ಕಲಕಿದ ಗಾಳಿಯಲ್ಲಿ ಏನೋ ಗುಂಗು ಹತ್ತಿದವನಂತೆ ಇವನು ಕೆಲಕಾಲ ಸ್ತಬ್ಧನಾದ.
ಓಹೋ, ತನ್ನ ಅಂಗಿಯ ಬಟ್ಟೆಯನ್ನು ನೋಡಿದ್ದಲ್ಲ ಅವನು, ತೋಳು ನೋಡಿದ್ದಾ ಅನ್ನಿಸಿತು. ಅದಲ್ಲದೆ ಮತ್ತೆ ಬರುವಾಗ ತನಗೂ ಒಂದು ತಾ ಅಂದನಲ್ಲ, ಅಂದರೆ ನಾನೆಷ್ಟೇ ಅಂದರೂ ಮತ್ತೆ ಈ ಊರಿನ ಜೀವವಾಗಿ ನಾನಿರಲಾರೆ ಅಂತ ಅವನಿಗೆ ಖಾತ್ರಿಯಾ? ಬಲ ಬೇಕಂತೆ ಇಲ್ಲಿ ಬದುಕಲಿಕ್ಕೆ, ಅದ್ಯಾಕಂದ ಹಾಗೆ? ಅವನಿಗೆ ಹಮ್ಮಿರಬಹುದು ತನಗೆ ಬಲವಿದೆ ಅಂತ, ಇದ್ದಿದ್ದೂ ಖರೆಯೇ, ಹೇಗೆ ಭೂಮಿ ನಲುಗುವಂತೆ ಓಡಿದ ಇಲ್ಲಿಂದ! ಬಿಸಿಲು ಏರತೊಡಗಿತ್ತು. ಕೈಲಿದ್ದ ಮಸೆದ ಕತ್ತಿಯ ಮೇಲಿದ್ದ ನೀರು ಆರಿ, ಅದರ ಪಕ್ಕಾ ಬಿಳಿಯ ಲೋಹದ ಹೊಳಪು ನಿಧಾನಕ್ಕೆ ಕೆಂಪು ಕಂದು ಬಣ್ಣಕ್ಕೆ ತಿರುಗತೊಡಗಿತ್ತು. ಮತ್ತೆ ಅದನ್ನು ಸವೆಯಿಸಿ ಹೊಳಪು ತರುವ ಮನಸಾದರೂ, ಅದರಿಂದ ಮಾಡುವುದೇನು ಎಂದು ಹೊಳೆಯದೆ ಸುಮ್ಮನಾದ.  ಕತ್ತಿಯ ಹರಿತಕಿಂತ ಹೆಚ್ಚಿನದು, ತನ್ನಲಿಲ್ಲದ್ದು, ಸದಣ್ಣ ಹೇಳಿದ್ದು ತನಗೇನೋ ಬೇಕಿದೆ ಇಲ್ಲಿ ಬದುಕುವುದಕ್ಕೆ ಅನ್ನಿಸತೊಡಗಿತು ನಿಧಾನಕ್ಕೆ.
ಅಜ್ಜಿಯ ಮನೆಯಲ್ಲಿ ಉಳಿದುಕೊಂಡು ಹೈಸ್ಕೂಲು ವರೆಗೆ ಓದಿ ಮತ್ತೆ ದೊಡ್ಡ ಓದಿಗೆ ಅಂತ ಧಾರವಾಡದ ಪೇಟೆಗೆ ಸರಿದು.. ಎಷ್ಟು ವರ್ಷ ಕಳೆದು ಹೋಯಿತಲ್ಲ ಮನೆಯಲ್ಲಿ ನಿರಂತರವಾಗಿ ಬದುಕಲು ಅವಕಾಶ ಸಿಕ್ಕಿ! ಅದು ಬೇರೆ ಮನೆಯವರು ಊರವರು ಎಲ್ಲ ಸೇರಿ ಹೊರಗಡೆ ಓದುವ ಹುಡುಗರೆಲ್ಲ ಹೊರ ಹೊರಗೇನೆಯೆ ಬದುಕು ಕಂಡುಕೊಳ್ಳುವರೆಂಬ ಹುಂಬ ನಂಬಿಕೆಯನ್ನು ತಾವೂ ಉಂಡರು, ಉಳಿದವರಿಗೂ ಉಣಿಸಿದರಲ್ಲ. ಹಳ್ಳಿಯ ಬದುಕು ಇವರಿಗೆಲ್ಲ ಬೇಸರ ಬಂದು ಹೋಗಿರಬಹುದು, ಆದರೆ ತನಗೆ ಅದು ಬೇಕಾಗಿದೆ... ಇಲ್ಲಿ ಉಳಿಗಾಲವೇ ಇಲ್ಲವೆಂಬಂತೆ ಮಾತನಾಡುವ ಇವರನೆಲ್ಲ ಕಂಡರೆ ನನ್ನೊಳಗೂ ಶಂಕೆಯಾಗುತ್ತಿದೆ, ಇದು ಕಷ್ಟದ ಬದುಕು.
ಕೌಲು ಮರದ ಕಾಯಿಯನ್ನು ಕಾಲಿನಲ್ಲಿ ಉರುಳಿಸಿಕೊಂಡು ಗುಂಪು ಗುಂಪಾಗಿ ಶಾಲೆಗೆ ಹೋಗುತ್ತಿದ್ದ ಕಿರಿಯ ಪ್ರಾಥಮಿಕ ಹಂತದ ಆ ದಿನಗಳಲ್ಲಿ ಬಿಳಿ ಗಡ್ಡದ ರಾಮಜ್ಜನೆಂದರೆ, ಹಾದಿ ಬದಿಯ ದೆವ್ವದ ಮರವೆಂದರೆ, ಹೊಳೆಯಂಚಿನ ಜಟಕ ದೇವರೆಂದರೆ ನಮಗೆಲ್ಲ ಎಂಥ ಭಯವಿತ್ತು! ಆಡಲು ದೊರೆಯದ ಗದ್ದೆ ಬಯಲುಗಳ ಬಗ್ಗೆ ಅಸೂಯೆ ಇತ್ತು. ಇಂದು ಇಲ್ಲಿ ಅಜ್ಜಂದಿರು ಮರಗಳು ಮತ್ತು ಗುಡಿಯಿರದ ದೇವರುಗಳು ಒಂದೂ ಇಲ್ಲ. ಅಚ್ಚರಿಯೆಂದರೆ ಅಂದಿನಂತೆ ಭಯ ಪಡುವ ಮಕ್ಕಳೂ ಇಲ್ಲ. ಗದ್ದೆ ಬಯಲುಗಳು ಖಾಲಿ ಖಾಲಿಯಾಗಿ ಗೋಗರೆಯುತ್ತಿದ್ದರೂ ಆಡುವ ಮಕ್ಕಳಿಲ್ಲ. ಬಸ್ಸು ಎಂದರೆ ಭಯ ಪಡುತ್ತಿದ್ದ ತಾನು ನಗರಕ್ಕೆ ಹೋದ ದಿನಗಳಲ್ಲಿ ಅದಕ್ಕೆ ಹೊಂದಿಕೊಳ್ಳಲು ಪಟ್ಟ ಪಾಡು ದೊಡ್ಡದೇ. ಇವತ್ತಿಗೆ ಇಲ್ಲಿನ ಯಾವ ಮಗುವಿಗೂ ನಗರದ ಯಾವ ಸಂಗತಿಯ ಬಗೆಗೂ ಭಯ ಇರಲಾರದು, ತಿಳಿಯದೆಂಬ ಹಿಂಜರಿಕೆಯೂ ಇರಲಾರದು. ಛಿ, ಇದೆಲ್ಲ ಯಾಕೆ ಸುಮ್ಮನೆ ತಲೆಯೊಳಗೆ ಬರುತ್ತಿದೆಯೋ..
ವಾರದ ಹಿಂದೆ ಮನೆಗೆ ಹೊರಡುವ ನಿಧರ್ಾರ ಗಟ್ಟಿಯಾಗುತ್ತಿದ್ದ ಹಂತಕ್ಕೆ ನಿದ್ರೆಯಲ್ಲಿ ಕಂಡ ಕನಸು ನೆನಪಾಗುತ್ತಿದೆ. ಮನೆಗೆ ಬಂದವನಿಗೆ ಅಪ್ಪ ಹೇಳಿದ ಮಾತೇನದು, ' ವರ್ಷಕೊಂದಾವತರ್ಿ ನಿನ್ನಜ್ಜಯ್ಯನ ತಿಥಿಗೆ ವೈದಿಕರು ಸಿಗದಂತಾಗಿದೆ ಅದು ಗೊತ್ತ ನಿನಗೆ, ಎಲ್ಲ ಪೇಟೆಯಲ್ಲೇ ನಿಂತಿದಾರೆ, ಇಲ್ಲಿ ಉಳಿಗಾಲ ಇಲ್ಲ. ಹಳ್ಳಿ ಬದುಕಲ್ಲಿ ಹಣ ಹುಟ್ಟೂದಿಲ್ಲ...' ಆಗ ಉತ್ತರ ತಿಳಿಯದವನಂತೆ ಸುಮ್ಮನಾದೆ ತಾನು. ಈ ಕನಸು ಆಗ ನೆನಪಾಗದೆ ಹೋಯ್ತು. ಕನಸಿನಲ್ಲಿ, ಎಲ್ಲೋ ತಿಳಿಯದೊಂದು ಊರಿನಲ್ಲಿ ಕಥೆ, ಕವಿತೆ, ಪ್ರಬಂಧ, ಕಿರುಹನಿ, ಲೇಖನ ಹೀಗೆ ಎಲ್ಲವನ್ನೂ ಬರೆಯುವ ಹತ್ತು ಮಂದಿ ಬರವಣಿಗೆಯ ಜನಗಳು-ಮತ್ತೇನೂ ಬಾರದವರು-ಬಂದು ಸೇರಿಕೊಳ್ಳುತ್ತಾರೆ. ಕೆಲವೇ ವರ್ಷಗಳಲ್ಲಿ ಆ ಊರಿನ ಎಲ್ಲರೂ ಅವನ್ನೆಲ್ಲ ಬರೆಯಲು ಕಲಿಯುತ್ತಾರೆ, ಗೋಷ್ಠಿಗಳು ನಿರಂತರ ನಡೆಯುತ್ತವೆ. ಕ್ರಮೇಣ ಕೆಲವು ಅಜ್ಜಂದಿರನ್ನು ಬಿಟ್ಟು ಎಲ್ಲರೂ ಬರವಣಿಗೆಯನ್ನೇ ನೆಚ್ಚಿಕೊಂಡು ಬದುಕಲು ಶುರು ಮಾಡುತ್ತಾರೆ, ಕೆಲಸಗಳು ಎಲ್ಲರಿಗೂ ಮರೆಯುತ್ತವೆ, ಅಜ್ಜಂದಿರು ಸತ್ತ ಬಳಿಕ ಜನಗಳಿಗೆ ಬದುಕುವುದೇ ಮರೆತಂತಿರುತ್ತದೆ, ಬರೀ ಬರೆಯುವುದೇ ಬರೆಯುವುದು.. ಕನಸು ಪೂತರ್ಿಯಾಗದೆ ನಿದ್ದೆ ಮುಗಿಯಿತು ಅಂದು. ಆದರೆ ಅದು ಮನಸನ್ನು ಎಷ್ಟು ಕಲಕಿತಲ್ಲ ಹಗಲಿಡೀ. ಅಪ್ಪನಿಗೆ ಈ ಕನಸನ್ನು ಆ ಕ್ಷಣವೇ ಹೇಳಬೇಕಿತ್ತು ಅನ್ನಿಸಿತು ಶ್ರವಣನಿಗೆ. ಅವನಿಗೆಷ್ಟು ಏನಂತ ಅರ್ಥವಾಗ್ತಿತ್ತೋ ಏನೋ.
ಮಾವಿನ ಮರದ ನೆರಳಿಗೆ ಬಂದು ಕುಳಿತುಕೊಂಡ. ದೂರದಲ್ಲಿ ಸದಣ್ಣ, ಬೇಲಿ ಹೊಕ್ಕಿದ್ದ ಗೂಳಿಯನ್ನು ಬೆದರಿಸಿ ಹೊರ ಹಾಕುತ್ತಿದ್ದುದು ಕಾಣಿಸುವಂತಿತ್ತು. ಹಿಂಬದಿಗೆ ಹಾಳು ಬಿದ್ದ ಬಿದಿರಿನ ತಟ್ಟಿಯ ಗುಡಿಸಲು, ಸಿದ್ದಿಯ ಯಂಕಟ ಆಚೆ ವರ್ಷ ಬಿಟ್ಟು ಹೋದದ್ದು. ಇಲ್ಲಿ ಸರಿಯಾಗಲಿಲ್ಲ, ಇನ್ನೆಲ್ಲಿಗೋ ಹೋದನಂತೆ, ಮತ್ತಲ್ಲಿ ಬೇಸರ ಬಂದರೆ ಇನ್ನೆಲ್ಲಿಗೋ. ಅದು ಸ್ವಾತಂತ್ರ್ಯ ಅಂದರೆ! ಕಾಡು, ಪೇಟೆ, ನದಿ, ಕೊಳ್ಳ ಯಾವುದಕ್ಕೂ ಹಿಂಜರಿಯದವನು ಅವನೊಬ್ಬ. ದೂರದಲ್ಲಿ ಎತ್ತು ಗುಟುರು ಹಾಕುತ್ತ ಸದಣ್ಣನನ್ನು ಹೆದರಿಸುವಂತೆ ಅವನಿಗೆದುರಾಗಿ ನಿಂತಿತ್ತು. ಅರೆ ಕ್ಷಣ ಅಲ್ಲಿಗೆ ಓಡಿ ಹೋಗಿ ಸಹಾಯವೆಂಬಂತೆ ಅವನಿಗೆ ಜೊತೆಯಾಗುವಾ ಅನ್ನಿಸಿದರೂ-ಸದಣ್ಣನಿಗೆ ಇವೆಲ್ಲ ಹೊಸದಲ್ಲ, ಬಲವಿರುವವನಲ್ಲವೆ ಎದುರಿಸಲಿ-ಅಂದುಕೊಂಡ. ಗೂಳಿಯ ಹುಂಬತನವೆ ಸದಣ್ಣನ ಬಲಕ್ಕಿಂತ ಹೆಚ್ಚು ಆಕರ್ಷಕ ಅನ್ನಿಸಿ, ಆ ಗೂಳಿಯ ಜಾಗದಲ್ಲಿ ಮನಸು ತನ್ನನ್ನು ಕಲ್ಪಿಸಿಕೊಂಡು ಸುಖಿಸತೊಡಗಿತು. ಕ್ಷಣ ಕ್ಷಣಕ್ಕೆ ಆ ಸುಖವೇ ಮತ್ತೊಂದು ಛಲವಾಗಿ, ಮೈ ತುಂಬ ಹುಂಬತನ ತುಂಬಿದವನಂತೆ ಕುಳಿತಲ್ಲಿಂದ ಎದ್ದು ನಿಂತ. ತನ್ನೊಳಗೇನೆಯೆ ಗೂಳಿ ಆವಿರ್ಭವಿಸಿದಂತೆ ಗಟ್ಟಿಯಾದ. ಆಡುವವರೆಲ್ಲಾ ಆಡಿಕೊಳ್ಳಲಿ, ಊರು ತೊರೆದು ಪಟ್ಟಣ ಸೇರುವ ಮಾತೇ ಇಲ್ಲ ಅನ್ನುವವನಂತೆ ಕತ್ತಿಯನ್ನು ಇನ್ನಷ್ಟು ಭದ್ರವಾಗಿ ಹಿಡಿದುಕೊಂಡ. ಅವನೊಳಗೊಂದು ತಳಿರಿನ ಮಾವಿನ ಮರ, ಹಸಿರು ತುಂಬಿ ಬಸಿರಾದ ಗದ್ದೆ, ಮತ್ತು ಎದೆ ತುಂಬ ಎಳೆದುಕೊಂಬಂತಹ ಶುದ್ಧ ಉಸಿರು ನೆಲೆಯಾಗಿದ್ದುವು.

ಅಷ್ಟೊತ್ತಿಗೆ ಸದಣ್ಣನ ಕಬ್ಬಿನ ಗದ್ದೆಗೆ ನುಗ್ಗಿದ್ದ ಗೂಳಿ ದೂರ ಓಡಿಯಾಗಿತ್ತು, ದಿನಾ ಗೆಲ್ಲುವ ಯುದ್ಧದಲ್ಲಿ ಹೊಸತನ ಇರುವುದಿಲ್ಲ ಎನ್ನುವಂತಹ ನಡಿಗೆಯ ಸದಣ್ಣ ಮತ್ತೆ ಶ್ರವಣನಿರುವ ಮಾವಿನ ಮರದ ಹತ್ತಿರ ಬರುತ್ತಿದ್ದ. ಗಟ್ಟಿ ಹೆಜ್ಜೆ, ಕಪ್ಪು ಕಂಬಳಿಯ ಹೆಗಲು..ಗೂಳಿಯಂತಹವನು.

No comments:

Post a Comment