Friday, January 16, 2015

....ಮುಂದುವರೆದಿದೆ.

ಹಾಗೆ ಆ ಮ್ಯಾಕ್ಸಿ ಕ್ಯಾಬ್ ನ ಚಾಲಕನ ಮೇಲೆ ವಿಶ್ವಾಸವಿಟ್ಟು ರಾಮ ಸೇತುವಿನ ನಿರ್ಮಾಣಕ್ಕೆ ಹೊರಟ ಕಪಿ ಸೈನ್ಯದಂತೆ ನಾವಿದ್ದೆವು. ಈ ಮಧ್ಯೆ ನಮ್ಮ ವಾಹನದಲ್ಲಿ ಕೂರಲೆಂದು ಮುಂದೆ ಬಂದ ನವ ವಿವಾಹಿತ ಜೋಡಿಯೊಂದನ್ನು ತಡೆದು ನಿಲ್ಲಿಸಿದ ಚಾಲಕ ತನ್ನ ಭಯಂಕರ ಶೈಲಿಯಲ್ಲಿ ’ಎನ್ನ’? ಎಂದ. ಗುಬ್ಬಚ್ಚಿಯಂತಿದ್ದ ಆ ಜೋಡಿ ಹೆದರುತ್ತಲೇ ಉತ್ತರಿಸಿತು ’ಧನುಷ್ಕೋಡಿ ಜಾನಾ ಹೆ’. ನಮ್ಮ ಚಾಲಕ ತನ್ನ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ (!) ವಿವರಿಸಿದ. ’ಧನುಷ್ಕೋಡಿ ಅಂದ್ರೆ, ಪ್ರೇತಗಳ ನಾಡು, The Ghost city. ಹೊಸದಾಗಿ ಮದ್ವೆಯಾದೋರು, ಸಂತಾನದ ನಿರೀಕ್ಷೆಯಲ್ಲಿರೋರು ಅಲ್ಲಿಗೆಲ್ಲ ಬರಬಾರ್ದು, ಬರ್ಬ್ಯಾಡ್ರಪ್ಪ’ ಅದ. ಆ ಜೋಡಿ ಭಯಗೊಂಡವೋ ಇಲ್ಲವೋ ತಿಳಿಯಲಿಲ್ಲ, ಆದರೆ ನಮ್ಮ ನಡುವೆ ಕೆಲವರು ಬೆವರಿದರು!!
ಅಂತೂ ಅವರನ್ನಲ್ಲೇ ಬಿಟ್ಟು ನಾವು ಮುಂಚಲಿಸಿದೆವು.
ತಾನು ಸಾಗಿದ್ದೇ ದಾರಿ ಎನ್ನುವ ಹಮ್ಮಿನಲ್ಲಿ ಅವ ಮರಳು ಹಾದಿಯಲ್ಲಿ ಮ್ಯಾಕ್ಸಿ ಕ್ಯಾಬ್ ನುಗ್ಗಿಸಿದ. ಆ ಕುಲುಕಾಟಕ್ಕೆ ನಲುಗಿದ ನಾವೆಲ್ಲ ಕೈಲಿದ್ದ ಮೊಬೈಲು ಕ್ಯಾಮೆರಾಗಳನ್ನು ಜೋಳಿಗೆಗೆ ಸೇರಿಸಿ, ಸಿಕ್ಕ ಯಾವುದೋ ಆಧಾರವನ್ನು ಹಿಡಿದು ಕೂತೆವು. ಆ ವಾಹನ ಚಲಿಸುತ್ತಿದ್ದ ದಾರಿಯನ್ನು ನೋಡಿದರೆ ಗಾಬರಿಯಾಗುವಂತಿತ್ತು. (Of course, ಉತ್ತರಕನ್ನಡದ ಹಳ್ಳಿಗಳಲ್ಲಿ ಸಂಚರಿಸಿದವರಿಗೆ ಅಂಥಾ ಭಯವೇನೂ ಆಗಲಿಕ್ಕಿಲ್ಲ) ರಸ್ತೆಯೆಂಬುದೇ ಇರಲಿಲ್ಲ. ಇರುವುದೆಲ್ಲ ನೀರು ಮರಳು ಮತ್ತು ಕುರುಚಲು ಕಾಡು! ಯು. ಪಿ ಯಿಂದ ಬಂದಿದ್ದ ಇನ್ನೊವಾ ಕಾರಿನ ಮಾಲಿಕ ತನ್ನ ಕಾರು ಯಾಕಿಲ್ಲಿ ಬರಲಾಗದು ಎಂಬ ಸತ್ಯವನ್ನು ಈಗ ಅರ್ಥಮಾಡಿಕೊಳ್ಳುತ್ತಿದ್ದ. ಮ್ಯಾಕ್ಸಿ ಕ್ಯಾಬ್ ಉಸುಕಿನಲ್ಲಿ ಮಾತ್ರವಲ್ಲ ನೀರಲ್ಲಿಯೂ ಸಂಚರಿಸುವ ಪರಿಗೆ ಒಳಗೇ ಕುಳಿತು ಬೆವರುತ್ತಿದ್ದ.
ಹೌದು, ನಮ್ಮ ವಾಹನ ನೀರಲ್ಲಿಯೂ ಸಂಚರಿಸುತ್ತಿತ್ತು. ಯಾಕಷ್ಟು ತುಕ್ಕು ಹಿಡಿದಿದೆಯೆಂದೂ, ಎರಡೇ ವರ್ಷಕ್ಕೆ ಯಾಕದು ಮುದಿಯಾಗುವುದೆಂದೂ ಈ ಹಾದಿಯಲ್ಲಿ ಬಂದ ಮೇಲೆ ಅರ್ಥವಾಯ್ತು. ಆ ಕಡೆಯೂ ಸಮುದ್ರ ಈ ಕಡೆಯೂ ಸಮುದ್ರ, ನಡುವಿನ ಅರೆಬರೆ ಭೂಖಂಡದಲ್ಲಿ ಚೆದುರಿಬಿದ್ದ ಹಿನ್ನೀರಿನ ಹರಿವನ್ನು ಹಾಯುತ್ತ ಅವ ದಾರಿ ಮಾಡಿಕೊಳ್ಳುತ್ತ ಸಾಗಿದ.
ದಾರಿ ಯಾವುದಯ್ಯಾ..
ಅಲ್ಲಿನವರೇ ಆದ ಚಾಲಕರಿಗೆ ನೀರಲ್ಲಿಯೂ ಮಾರ್ಗ ಗೊತ್ತಿದೆ, ಅವರಮೇಲೆ ನಂಬುಗೆಯಿಟ್ಟು ಕೂರುವುದಾದರೆ ಭಯವೇನಿಲ್ಲ. ನಡೆದು ಸಾಗಿ ಬರುವುದಾದರೆ ಕಾಲುಭಾಗದ ಹಾದಿಯನ್ನೂ ಹಾಯಲಾಗದು. ಮುಂದಿರುವುದೆಲ್ಲ ಸಮುದ್ರ ಎನ್ನಿಸಿಬಿಡುತ್ತದೆ, ಆದರೆ ಭೂಖಂಡ ಇನ್ನೂ ಉಳಿದಿರುತ್ತದೆ. ಅದರ ಮರ್ಮ ತಿಳಿದವರೇ ಗಣನಾಯಕರಾದರೆ ಆದೀತು.

ಸುಮಾರು ಮುಕ್ಕಾಲು ಗಂಟೆಯ ಈ ಹಾದಿಯಲ್ಲದ ಹಾದಿಯಲ್ಲಿ ಹಾದು ಬಂದು ಒಂದೆಡೆ ವಾಹನ ನಿಂತಿತು. ಇತಿಹಾಸದ ಅವಶೇಷಗಳ ನಡುವೆ ಬಂದು ನಿಂತಂತೆ ಅನ್ನಿಸಿತು. ಮತ್ತೆ ಅದೇ ಭಾವ, ಎಲ್ಲೆಡೆಯೂ ನೀರು, ನಾನು ನಿಂತಿರುವ ಜಾಗ ಮಾತ್ರವೇ ಭೂಮಿ ಎಂಬ ಭ್ರಮೆ. ಶುರುವಿನಲ್ಲಿ ಒಂದು ಶಿವಾಲಯವಿದೆ. ಶಿವಾಲಯದ ಎದುರಿನ ನೀರ ತೊಟ್ಟಿಯಲ್ಲಿ ಕಲ್ಲೊಂದಿದೆ. ಕಲ್ಲಿರುವುದು ಅಚ್ಚರಿಯಲ್ಲ, ಆದರೆ ಆ ಕಲ್ಲು ಉಳಿದ ಕಲ್ಲುಗಳಂತೆ ಮುಳುಗಿಲ್ಲ. ನಂಬಿ, ಅದು ತೇಲುತ್ತಿದೆ!!
ಕಲ್ಲೇ ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡಿದ್ದೂ ಆಯ್ತು, ಅದು ಕಲ್ಲೇ. ನಮ್ಮಲ್ಲಿ ಸಿಗುವ ಲಾಟರೈಟ್ ಕಲ್ಲಿನಂತೆಯೇ ಇದೆ, ಬಿಳಿ ವರ್ಣ, ಆದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನೋ ಇದೆ ಇದರಲ್ಲಿ- ಬಹುಶಃ ಗಾಳಿ! ಎತ್ತಿ ನೋಡಿದ್ದೂ ಆಯ್ತು, ಸಾಕಷ್ಟು ಭಾರವಾಗಿಯೂ ಇದೆ.
ಕಪಿಸೇನೆ ಕಟ್ಟಿದ ರಾಮಸೇತುವಿಗೆ ಬಳಕೆಯಾದ ಕಲ್ಲು ಈ ಬಗೆಯದ್ದು ಎಂಬುದು ಸ್ಥಳೀಯರ ವಿವರಣೆ. ಅಲ್ಲೆಲ್ಲ ಆ ಬಗೆಯ ಕಲ್ಲು ಸಿಗುವುದಂತೆ. ನಮ್ಮ ಕಾವ್ಯಗಳು ಎಷ್ಟು ವ್ಯವಸ್ಥಿತವಾಗಿ ನಮ್ಮ ಭೂಸಂರಚನೆಯೊಡನೆ ತಳುಕು .
ತೇಲುವ ಶಿಲೆ.
ಹಾಕಿಕೊಂಡಿವೆ ಎಂಬುದು ಇಂಥ ಉದಾಹಾಣೆಗಳಿಂದ ಸ್ಪಷ್ಟವಾಗುತ್ತದೆ. ಧನುಷ್ಕೋಡಿ ೨೧ನೇ ಶತಮಾನದ ಸಾಮಾನ್ಯ ವಾಹನಗಳಿಗೆ ದುರ್ಭೇದ್ಯ, ಅಂಥದರಲ್ಲಿ ಕಾಡುಗಳೇ ಭೂಮಿಯ ಒಡೆಯರಾಗಿದ್ದ ಕಾಲದಲ್ಲಿ ಕವಿ ವಾಲ್ಮೀಕಿ ಈ ಭೂಭಾಗದ ಅಂಚನ್ನು ಗುರುತಿಸುತ್ತಾನೆ, ಅದು ಲಂಕೆಗೆ ಭಾರತದಿಂದ ಇರಬಹುದಾದ ಅತಿ ಹತ್ತಿರದ ಮಾರ್ಗ ಎಂಬುದನ್ನೂ ಅರ್ಥಮಾಡಿಕೊಳ್ಳುತ್ತಾನೆ. ಇಲ್ಲಿಂದ ಲಂಕೆ ಬರೀ ಹದಿನೆಂಟು ಕಿ. ಮೀ!! ಭಾರತದ ಭೂಭಾಗದೊಡನೆ, ಇಲ್ಲಿನ ಮಣ್ಣು ಗಾಳಿಯೊಡನೆ ಒಂದಾದ ಕಾವ್ಯಗಳಿವೆ ಎನ್ನುವುದೇ ನೆಲದ ಹೆಮ್ಮೆ. ಇರಲಿ. ಅಂಥಾ ಕಲ್ಲು ಇದ್ದರೆ ನನಗೂ ತರಬೇಕಿತ್ತು. ಅಂಥದೇ ಸಂರಚನೆಯಿರುವ ಕಲ್ಲನ್ನೇನೋ ತಂದೆ, ಆದರೆ ಇಲ್ಲಿ ಬಂದು ನೋಡಿದರೆ ಅದು ಎಲ್ಲ ಕಲ್ಲುಗಳಂತೆ ಅಮಾಯಕವಾಗಿ ನೀರಲ್ಲಿ ಮುಳುಗುತ್ತಿದೆ.

ಮುಂದುವರಿದಂತೆ ನಮ್ಮನ್ನು ಬರಮಾಡಿಕೊಂಡಿದ್ದು ಕಾಲದ ಎದುರಿಗೆ ಬಟಾಬಯಲು ಬೆತ್ತಲೆ ನಿಂತ ಹಲವು ಕಟ್ಟಡಗಳು. ಆಕಾರದಲ್ಲಿ ಭಾರೀ ಆಗಿಯೇ ಕಾಣಿಸುವ ಆ ಅವಶೇಷಗಳ ಮಧ್ಯೆ ಈಗಲೋ ಆಗಲೋ ಹಾರುವಂತಿರುವ ಜೋಪಡಿಗಳು, ಮತ್ತು ಜೀವಧಾರಣೆಗೆ ಹಂಬಲಿಸುತ್ತಿರುವ ಸಾಧಾರಣ ಕಣ್ಣುಗಳು. ಹೆಜ್ಜೆ ಕಸಿಯುವ ಉಸುಕಿನಲ್ಲಿ ಪಾದಗಳಿಗೆ ಗಟ್ಟಿಯಾದ ಆವಾರವೇನೋ ತಾಕುತ್ತಿದೆ! ಗಮನಿಸಿ ನೋಡಿದರೆ ರಸ್ತೆ! ಈ ನೆಲದಲ್ಲಿ ನಾನದನ್ನು ಊಹಿಸಲು ಸಾಧ್ಯವಿರಲಿಲ್ಲ. ಆದರಿಲ್ಲಿ ಅದು ಸತ್ಯವಾಗಿತ್ತು. ಸುತ್ತಮುತ್ತಲಿನ ಅವಶೇಷಗಳು ಮತ್ತು ನೆಲದಡಿಯ ರಸ್ತೆ ಏನನ್ನೋ ಹೇಳಲು ಪ್ರಯತ್ನ ಮಾಡ್ತಿವೆ. ಅದ್ಯಾವ ಕಥೆಯಿರಬಹುದು ಎಂಬ ಕುತೂಹಲ ತಡೆಯಲಾಗಲಿಲ್ಲ. ಹಾಗಂತ ಅಲ್ಲಿದ್ದ ಎನ್ನಡ ಎಕ್ಕಡಗಳಿಂದ ಅದರ ವಾಸ್ತವ ಕಥೆಯನ್ನು ನಿರೀಕ್ಷಿಸುವುದು ಸಾಧ್ಯವೂ ಇರಲಿಲ್ಲ.

ರಸ್ತೆಯಿಲ್ಲ, ಶಾಲೆಯಿಲ್ಲ, ವಾಹನವ್ಯವಸ್ಥೆ ಇಲ್ಲ, ಆಸ್ಪತ್ರೆಯಿಲ್ಲ, ವಿದ್ಯುತ್ತಿಲ್ಲ. ಆದರೆ ನನ್ನ ದೇಶದ ಜನರಿದ್ದಾರೆ ಅಲ್ಲಿ!! ಅಂದಾಜು ೫೦೦ ಜನಸಂಖ್ಯೆ ಇದೆ ಎಂಬುದು ಕೇಳಿಬಂದ ಮಾತು. ಧನುಷ್ಕೋಡಿಯಲ್ಲಿ ಎಂದಲ್ಲ, ಪೂರ್ತಿಯಾಗಿ ರಾಮೇಶ್ವರಮ್ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಭಿಕ್ಷುಕರು, ಅಸಹಾಯಕರು, ಹುಚ್ಚರು ಇದ್ದಾರೆ. ಇದಕ್ಕೆ ಕಾರಣ ಗೊತ್ತಿಲ್ಲ. ಧನುಷ್ಕೋಡಿಯಲ್ಲಂತೂ ಅದೊಂದು ಜೀವನಾಧಾರ ಕಸುಬಿನಂತಾಗಿದೆ. ರಣ ಬಿಸಿಲಲ್ಲಿ ಮರಳಲ್ಲಿ ಕುಳಿತು ಭಿಕ್ಷೆ ಕೇಳುತ್ತಾರೆ. ಅವರ ಅವಸ್ಥೆಯನ್ನು ಕಂಡರೆ ನನ್ನ ಭಾರತದ ಬಗ್ಗೆ ಮನಸು ಮರುಕಪಡುತ್ತದೆ.

ಭಾರತ ಭೂಶಿರ ಕನ್ಯಾಕುಮಾರಿಯಲ್ಲಿ ನಿಂತಾಗಿನ ರೋಮಾಂಚನಕ್ಕೂ ಇಲ್ಲಿನದಕ್ಕೂ ವ್ಯತ್ಯಾಸವಿತ್ತು. ಅದು ಮೂರು ಸಮುದ್ರಗಳು ಸೇರುವಾಗಿನ ಅಪೂರ್ವ ಮೇಳ. ವಿವೇಕಾನಂದರು ತಪಗೈದ ನೆಲೆಯ ಅನುಭೂತಿ.  ಇಲ್ಲಿನದು ಶಾಂತ ಶರಧಿಯಲ್ಲಿ ಕೊನೆಯಾಗುವ ಭೂಭಾಗ. ಸೀತೆಯಿರದ ರಾಮನ ಕೋಪಕ್ಕೆ ಹೆದರಿ ಶಾಂತವಾದ ಸಾಗರ ಇಂದಿಗೂ ಶಾಂತವಾಗಿಯೇ ಇರುವನೇ ಎಂಬ ಭಾವ.
At the tip of My India. 

ರಾಮ ಸೇತು ನೋಡುವ ಉಮೇದಿಯಿದ್ದರೆ ಅದಿಲ್ಲಿ ಸುಳ್ಳಾಗುತ್ತದೆ. ಸೇತುವೆಯ ಆರಂಭ ಅಂತೆಲ್ಲ ಗುರುತಿಸಲಾಗದು. ಅದರಲ್ಲೂ ನಮ್ಮ ವಾಹನ ಸಾರಥಿ ಹೇಳಿದಂತೆ ಈಗಿರುವ ನೀರಿನ ಪ್ರಮಾಣದಲ್ಲಿ ಅಲ್ಲಿಯವರೆಗೆ ಹೋಗಲಾಗದಂತೆ. ಆದರೆ ಅದೊಂದು ಅನುಭೂತಿಯನ್ನು ಪಡೆಯಬಹುದಷ್ಟೆ, ನನ್ನ ನೆಲದ ಮಹಾಮಹಿಮನೊಬ್ಬ ಇಲ್ಲಿ ಐತಿಹಾಸಿಕ ನಿರ್ಮಿತಿಯೊಂದನ್ನು ನಡೆಸಿದ್ದ ಎಂಬ ರೋಮಾಂಚನ ನಮ್ಮದಾಗಿಸಿಕೊಳ್ಳಬಹುದು. ಇಷ್ಟೇ ರೋಮಾಂಚನಕಾಗಿ ಪ್ರವಾಸ ಹೊರಡುವ ನನ್ನಂಥವರಿಗೆ ಅಡ್ಡಿಯಿಲ್ಲ. ಮಧ್ಯಾಹ್ನ ಹನ್ನೆರಡಾದರೂ ಸುಡದ ಬಿಸಿಲಿನಲ್ಲಿ ಆ ಪ್ರೇತ ನಗರಿಯ ಉದ್ದಗಲಕ್ಕೆ ತಿರುಗಿದೆ. ಒಬ್ಬನೇ ಇದ್ದೆನಲ್ಲ, ಹಾಗಾಗಿ ನನ್ನ ಚಿತ್ರಗಳು ಕಡಿಮೆಯೇ ಇವೆ, ಸೆಲ್ಫಿ ನನಗೆ ಸರಿಯಾಗದು, ಹಾಗಾಗಿ ಜೊತೆಗಾರರು ಸಿಕ್ಕಾಗ ಮಾತ್ರ ’One click please' ಅಂತ ಅರಿಕೆ ಮಾಡಿಕೊಂಡು ನನ್ನ ಚಿತ್ರ ತೆಗೆಸಿಕೊಂಡಿದ್ದೇನೆ. ಆಹ್, ಪ್ರೇತಗಳ ಕಥೆ ಹೇಳಬೇಕಲ್ಲವೆ, ಹೇಳುವೆ. ಅದಕ್ಕೆಂದೇ ಹೊರಟಿದ್ದೇನೆ.

ಅದು 1964 ನೇ ಇಸವಿ. ಡಿಸೆಂಬರ್ 22 ರಾತ್ರಿ. ಅದುವರೆಗೆ ಕಂಡು ಕೇಳರಿಯದ ಮಹಾ ಚಂಡಮಾರುತವೊಂದು ಧನುಷ್ಕೋಡಿಯನ್ನೂ ರಾಮೇಶ್ವರಂ ಅನ್ನೂ ಅಪ್ಪಳಿಸುತ್ತದೆ. ಅದೆಂಥಾ ಚಂಡ ಮಾರುತವೆಂದರೆ, ಅದರ ರಭಸಕ್ಕೆ ಎದ್ದ ಅಲೆಗಳು 7 ಮೀಟರ್ ನಷ್ಟು ಎತ್ತರಕ್ಕೆ ನೆಗೆದಿದ್ದುವು ಎಂಬುದು ಇತಿಹಾಸದ ನೆನಕೆ. ಆ ಭೀಕರ ಚಂಡ ಮಾರುತ ಪೂರ್ತಿ ನಗರವನ್ನು ಹೊಸಕಿ ಹಾಕಿತು. ಅದುವರೆಗೆ ರಾಮೇಶ್ವರಂ ನಂತೆಯೇ ಪ್ರಸಿದ್ಧವಾಗಿದ್ದ ನಗರ ಪೂರ್ತಿಯಾಗಿ ಸತ್ತು ಮಲಗಿತು. ೧೮೦೦ ಜನ ಕ್ಷಣದಲ್ಲಿ ಹೆಣವಾದರು. ಭಾರತ ಮತ್ತು ಲಂಕೆಯ ಮಧ್ಯೆ ಇದ್ದ ಬೋಟ್ ಸಂಪರ್ಕವ್ಯವಸ್ಥೆಯನ್ನು ಶಾಶ್ವತವಾಗಿ ಮುಚ್ಚಲಾಯ್ತು. ನಗರದಲ್ಲಿ ದೇವಾಲಯಗಳಿದ್ದವು, ರೇಲ್ವೆ ವ್ಯವಸ್ಥೆಯಿತ್ತು, ರಸ್ತೆ ವ್ಯವಸ್ಥಿತವಾಗಿತ್ತು, ಪೋಸ್ಟಾಫೀಸೂ ಇತ್ತು, ದೊಡ್ಡ ದೊಡ್ಡ ಕಟ್ಟಡಗಳಿದ್ದುವು. ಭಾರತವನ್ನಾಳಿದ ಬ್ರಿಟಿಷರು ಇದೆಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಿದ್ದರು. ಈಗಿರುವುದಕ್ಕಿಂತ ಮೂರ್ನಾಲ್ಕು ಕಿಲೋಮೀಟರು ಮುಂದಿನವರೆಗೂ ಭೂಭಾಗ ಇತ್ತು. ಈಗದು ಶಾಶ್ವತವಾಗಿ ನೀರಲ್ಲಿ ಮುಳುಗಿದೆ. ಆ ರಾತ್ರಿ ತಲುಪಬೇಕಿದ್ದ ರಾಮೇಶ್ವರಂ- ಧನುಷ್ಕೋಡಿ ಪ್ಯಾಸೆಂಜರ್ ಟ್ರೈನ್ ಅಂದಿನ ಜಲವಿಕೋಪಕ್ಕೆ ಆಹುತಿಯಾಯ್ತು. ಒಟ್ಟಿಗೆ ೧೧೦ ಪ್ರಯಾಣಿಕರನ್ನು ಬಲಿ ಪಡೆಯಿತು. ಒಟ್ಟಿನಲ್ಲಿ ಭೂಭಾಗ  ನೀರಲ್ಲಿ ಶಾಶ್ವತವಾಗಿ ಮುಳುಗುವ ಪ್ರಕೃತಿ ಪ್ರಕ್ರಿಯೆಗೆ ಸಾವಿರಾರು ಜನ ಪ್ರಾಣ ತೆತ್ತರು. ನಗರವೊಂದು ನಿರ್ನಾಮವಾಯ್ತು. ಮತ್ತದು ಇಂಗ್ಲೀಷಿನಲ್ಲಿ Ghost Town ಅನ್ನಿಸಿಕೊಂಡಿತು. (ಪರಿತ್ಯಕ್ತ ನಗರಕ್ಕೆ ಆ ಭಾಷೆಯಲ್ಲಿ ಬಳಕೆಯಲ್ಲಿರುವ ಪದ ಅದು).
ಪುರಾತನ ರೇಲ್ವೆ ನಿಲ್ದಾಣ. 

ಅಳಿದುಳಿದ ಜನ ಅಲ್ಲಿಂದ ಕಾಲ್ಕಿತ್ತರು, ಹಲವಷ್ಟು ಹೆಣಗಳು ಕೊನೆಗೂ ಸಿಗದೆ ಉಳಿದುವು. ಇವತ್ತಿಗೆ ಬೆರಳೆಣಿಕೆಯ ಕುಟುಂಬಗಳಷ್ಟೇ ಅಲ್ಲಿರುವುದು. ಅದೂ ಅತ್ಯಂತ ದಯನೀಯ ಸ್ಥಿತಿಯಲ್ಲಿ. ಆದರೂ ಅದನ್ನು ಪ್ರೇತ ನಗರಿ ಎಂದು ಜನ ಕರೆಯಲು ತೊಡಗಿದ್ದಕ್ಕೆ ಮತ್ತಷ್ಟು ಕಾರಣಗಳಿವೆ. ಅದನ್ನು ಮತ್ತೆ ಚರ್ಚಿಸುವೆ. ಇನ್ನಷ್ಟು ಚಿತ್ರಗಳೊಂದಿಗೆ, ಮುಂದಿನ ಸಂಚಿಕೆಯಲ್ಲಿ....

No comments:

Post a Comment