Thursday, January 15, 2015

ಪ್ರಥಮೆ.

ತುಂಬಾ ಸರಳವಾಗಿ ಕಾಣುವ ವಿಭಕ್ತಿ ಇದು. ಪ್ರಥಮೆಯಲ್ಲಿ ಕನ್ನಡದ ನಾಮಪದಕ್ಕೆ ಇರುವುದು ಉ ಎಂಬ ಪ್ರತ್ಯಯ. ಪ್ರತ್ಯಯ ಅಂದರೆ ಮತ್ತೇನಲ್ಲ, ಶಬ್ದಗಳ ಮೂಲರೂಪದ ಎದುರಿಗೆ ಬಂದು ಸೇರಿಕೊಂಡು ಅರ್ಥ ಹೊಮ್ಮಿಸುವ ಸಣ್ಣ ಸಣ್ಣ ಕೈ-ಕಾಲು-ಕೊಂಬು-ಕೊಳಚುಗಳು. ಇವು ಬಾರದೆ ಇದ್ದರೆ ಶಬ್ದರೂಪದ ಅಭಿಪ್ರಾಯ ಏನೆಂದೇ ಅರ್ಥವಾಗದು. ಕಾಲ, ಉದ್ದೇಶ, ಸ್ಥಳ, ಸಂಬಂಧ, ಸಲಕರಣೆ- ಹೀಗೆ ಪದಗಳ ಮೂಲಕ ಅರ್ಥ ಹೊಮ್ಮುವುದಿದ್ದರೆ ಅದಕ್ಕೆಲ್ಲ ಈ ಪ್ರತ್ಯಯಗಳೇ ಕಾರಣ. ಸರಿ, ಪ್ರಥಮೆಗೆ ಉ ಎಂಬ ಪ್ರತ್ಯಯ ಕನ್ನಡದಲ್ಲಿ, ಉದಾಹರಣೆಯೂ ಸರಳವೇ- ಚಂದ್ರ, ನಾನು, ಹೊಳೆ, ಮನೆ, ಬಾವಿ ಇತ್ಯಾದಿ.
ಸರಿ, ಇಲ್ಲೆಲ್ಲಿದೆ ಸ್ವಾಮಿ ಉ ಪ್ರತ್ಯಯ!? ಉ ಎಂಬ ಧ್ವನಿಯೂ ಇಲ್ಲಿಲ್ಲವಲ್ಲ! ನಿಜ, ಅಲ್ಲಿಲ್ಲ ಎಂದಲ್ಲ, ನಾವು ಬಳಸುತ್ತಿಲ್ಲ. ಅದಿಲ್ಲದೆಯೂ ಅದರ ಅರಿವು ಮಾಡಿಕೊಂಬಷ್ಟು ನಮ್ಮ ಮಿದುಳಿನ ಭಾಷಾ ಭಾಗ ಸಿದ್ಧವಾಗಿದೆ. ಹಿಂದೆಲ್ಲ ಇದೇ ಉದಾಹರಣೆಗಳನ್ನು ಚಂದ್ರನು, ಹೊಳೆಯು, ಮನೆಯು, ಬಾವಿಯು ಎಂದೇ ಬಳಸುತ್ತಿದ್ದರು. (ಚಂದ್ರನ್, ನಾನ್, ಅವನ್ ಎಂದೆಲ್ಲ ಕನ್ನಡದಲ್ಲಿ ನಕಾರಾಂತ ಶಬ್ದಗಳು) ಹಳೆಯ ಕನ್ನಡ ಪುಸ್ತಕವಿದ್ದರೆ ಅದರ ಒಕ್ಕಣೆಯನ್ನು ಗಮನಿಸಿ, ಅಲ್ಲೆಲ್ಲ ಪ್ರಥಮೆಯು ಕಣ್ಣಿಗೆ ಕಾಣುವಂತೆ ಚಂದವಾಗಿ ಕೂತಿರುತ್ತಾಳೆ. ಉದಾ- ಮೈಸೂರು ಮುದ್ರಣಾಲಯದವರು ಅಚ್ಚು ಮಾಡಿದ ಪುಸ್ತಕವು, ಮೂರನೆಯ ಪ್ರಕಟಣೆಯು- ಇತ್ಯಾದಿ. ಇಲ್ಲೆಲ್ಲ ಪ್ರಥಮಾ ವಿಭಕ್ತಿ ಕಣ್ಣಿಗೆ ಕಾಣುವಂತಿದೆ. ಆದರೆ ಇವತ್ತು ನಾವು ಹೆಚ್ಚಿನ ನಾಮಪದಗಳಲ್ಲಿ ಪ್ರಥಮೆಯನ್ನು ಊಹಿಸಿಯೇ ತಿಳಿದುಕೊಳ್ಳುವ ಪರಿಸ್ಥಿತಿ ಇದೆ. ಅದೇ ಬಹುಜನಪ್ರಿಯವಾದ ಶೈಲಿಯೂ ಹೌದು. ಸಂಸ್ಕೃತದಲ್ಲಿ ಹೀಗೆಲ್ಲ ಬಿಟ್ಟುಬಿಡುವ ಅವಕಾಶ ಇಲ್ಲ.
ಪ್ರತ್ಯಯ ಬರುವುದು ಅರ್ಥ ಹೇಳುವುದಕ್ಕೆ ಎಂದಾದರೆ ಪ್ರಥಮೆಗೂ ಒಂದರ್ಥವಿರಲೇಬೇಕು; ಇದೆ. ಆದರೆ ಇದರ ಅರ್ಥ ವಿಶೇಷಾರ್ಥ ಅಲ್ಲ, ಬಹಳ ಪ್ರಾಥಮಿಕ ಸ್ತರದ ಅರ್ಥ. ಬರೀ ಇರುವಿಕೆಯನ್ನು (Absolute existence) ತಿಳಿಸುವುದಕ್ಕೆ ಬರುವಾಕೆ ಪ್ರಥಮೆ. ವಿಭಕ್ತಿಯನ್ನು ಬಳಸಿದಾಕ್ಷಣ ಒಂದು ಬಯಕೆ ಹುಟ್ಟುತ್ತದೆ ಮನಸಲ್ಲಿ; ’ಮುಂದೇನು?’ ಎಂಬ ಕುತೂಹಲ ಇಣುಕುತ್ತದೆ. ಉದಾ-   ೧.ಹುಡುಗನು ಅವಳನ್ನು...      
          ೨. ಹುಡುಗಿಯು ಅವನಲ್ಲಿ..
ಅಬ್ಬಾ! ಹುಡುಗ ಅವಳನ್ನು ಏನು ಮಾಡಿದ? ನೋಡಿದನೆ? ಮಾತಾಡಿದನೆ? ಮದುವೆಯಾದನೆ? ಮುದ್ದಿಸಿದನೆ? ಈ ಕುತೂಹಲಗಳೆಲ್ಲ ದ್ವಿತೀಯಾ ವಿಭಕ್ತಿಯ ಪರಿಣಾಮ. ಹಾಗೆಯೇ ’ಹುಡುಗಿಯು ಅವನಲ್ಲಿ’ ಎಂದು ಅರ್ಧಕ್ಕೇ ನಿಲ್ಲಿಸಿದರೆ ಮತ್ತೆ ಕುತೂಹಲ; ಹುಡುಗಿಯು ಅವನಲ್ಲಿ ಏನಾದಳು? ಅನುರಕ್ತೆಯಾದಳೆ? ಸಿಟ್ಟುಗೊಂಡಳೆ?- ಹೀಗೆ ಎಷ್ಟೆಲ್ಲ ಪ್ರಶ್ನೆಗಳು. ಇಲ್ಲಿ ನಮ್ಮ ತಪ್ಪಿಲ್ಲ, ಅದೆಲ್ಲ ವಿಭಕ್ತಿಯ ಮಹಿಮೆ. ಅದರೆ ಪ್ರಥಮಾ ಇದಾಳಲ್ಲ ಅವಳು ಅನಾಸಕ್ತೆ, ಈ ಬಗೆಯ ಕುತೂಹಲ ಎಂದಿಗೂ ಇಲ್ಲ ಅವಳಲ್ಲಿ. ಸತ್ತಾ (ಇರುವಿಕೆ) ಮಾತ್ರವೇ ಈ ವಿಭಕ್ತಿಯ ಅರ್ಥ. ಹಾಗಾಗಿ ಪ್ರಥಮಾ ಬಳಕೆಯ ಬಳಿಕ ಮತ್ತೆ ಬಯಕೆಗಳಿಲ್ಲ.
ಸುಳ್ಳು ಎನಿಸುತ್ತದೆಯಲ್ಲವೆ? ಯಾಕೆಂದರೆ ಬಯಕೆಯೇ ಇಲ್ಲದಿದ್ದರೆ ಪ್ರಥಮಾ ವಿಭಕ್ತಿಯ ಬಳಿಕ ವಾಕ್ಯ ಎಂಬುದೇ ಇರಬಾರದು. ಅಥವಾ ಕ್ರಿಯೆಯ ಬಯಕೆ ಇಲ್ಲದಿದ್ದರೆ ವಾಕ್ಯವು ಮುಂದುವರಿಯುವುದು ಹೇಗೆ? ಹಾಗಾಗಿ ಕ್ರಿಯೆ ಇದೆ, ಇರುವಿಕೆಯೂ ಒಂದು ಕ್ರಿಯೆ! ಅದೊಂದು ಅತಿ ಸಾಮಾನ್ಯವಾದ, ಪ್ರಾಥಮಿಕವಾದ ಕ್ರಿಯೆ. ಹಾಗಾಗಿ ಅದಷ್ಟನ್ನು ಹೇಳಿ ಪ್ರಥಮಾ ಸುಮ್ಮನಾಗುತ್ತಾಳೆ. ವಿಶೇಷವಾದ ಯಾವ ಕ್ರಿಯೆಯ ಬಯಕೆಯೂ ಅವಳಿಗಿಲ್ಲ. ಇದಕ್ಕಾಗಿಯೇ ನಾವೆಲ್ಲ ಹೆಸರು ಬರೆದುಕೊಳ್ಳುವುದು ಪ್ರಥಮಾ ವಿಭಕ್ತಿಯಲ್ಲಿ. ನಮ್ಮ ನಮ್ಮ ಹೆಸರು ಬರೆದುಕೊಳ್ಳುವಾಗ ಹೇಳಿಕೊಳ್ಳುವಾಗ ಮತ್ಯಾವ ಕ್ರಿಯೆಯನ್ನೂ ನಮ್ಮ ಜೊತೆ ಜೋಡಿಸಿಕೊಳ್ಳುವ ಉದ್ದೇಶ ನಮಗಿರುವುದಿಲ್ಲ, ನಮ್ಮ ’ಇರುವಿಕೆ’ಯನ್ನು ಹೇಳಬೇಕಿರುತ್ತದೆ ಅಷ್ಟೆ. ಇಲ್ಲದಿದ್ದರೆ ದ್ವಿತೀಯಾ ಮೊದಲಾದ ಉಳಿದ ವಿಭಕ್ತಿಗಳನ್ನು ಬಳಸಿರುತ್ತಿದ್ದೆವು. ಸುಮ್ಮನೇ ಪ್ರಯೋಗಕ್ಕೆಂದು ಫೇಸ್ ಬುಕ್ ಪ್ರೊಫೈಲಿನ ತಮ್ ತಮ್ಮ ಹೆಸರಿನಲ್ಲಿ ಪ್ರಥಮಾ ಬಿಟ್ಟು ದ್ವಿತೀಯೆಯನ್ನೋ ಚತುರ್ಥಿಯನ್ನೋ ಬಳಸಿ ನೋಡಿ ಗೊತ್ತಾಗುತ್ತದೆ ಜನರ ಕುತೂಹಲ( ವಿಭಕ್ತಿಗಳು ಹುಟ್ಟಿಸುವ ಕುತೂಹಲ) ಹೇಗಿರುತ್ತದೆ ಎಂದು!
ಹೀಗಂದ ಮಾತ್ರಕ್ಕೆ ಪ್ರಥಮಾ ಯಾವುದೇ ಕೆಲಸವಿಲ್ಲದವಳು (ಕ್ರಿಯಾಕಾಂಕ್ಷೆಯಿಲ್ಲದವಳು) ಎಂದೆಣಿಸಬೇಕಿಲ್ಲ. ಅರ್ಥಕ್ಕೊಂದು ವಿಶ್ರಾಂತಿ ಕೊಡುವುದಿದ್ದರೆ ಅವಳು ಪ್ರಥಮೆಯೇ. ಕಾಂಕ್ಷೆಯೆಲ್ಲ ತಣಿದವಳು ಅವಳು. ಉಳಿದ ವಿಭಕ್ತಿಗಳ ಜೊತೆಯಲ್ಲಿ ರಮಿಸುವ, ನರ್ತಿಸುವ ಆಡುವ ಓಡುವ ಅರ್ಥ, ಕೊನೆಯಲ್ಲಿ ಬಂದು ಸೇರುವುದು, ಶಾಂತವಾಗುವುದು, ವಿರಮಿಸುವುದೆಲ್ಲ ಪ್ರಥಮೆಯ ಮಡಿಲಲ್ಲಿ. ನದಿಗಳಿಗೆ ಕಡಲಿದ್ದಂತೆ ಅವಳು. ಇವಳು ಸ್ವತಃ ಯಾವ ಕಾಂಕ್ಷೆಯಿಲ್ಲದವಳಾದರೂ ಅರ್ಥಕ್ಕೆ ಕೊನೆಯಲ್ಲಿ ಇವಳದ್ದಷ್ಟೇ ಕಾಂಕ್ಷೆ. ಪ್ರಥಮೆಯನ್ನು ಬಳಸದೆ ಒಂದು ಪೂರ್ಣಾರ್ಥಕೊಡುವ ಪಾರಾಗ್ರಾಪ್ ಬರೆಯಿರಿ ನೋಡುವಾ! ಅಷ್ಟೇಕೆ, ಪ್ರಥಮೆಯ ಹಂಗಿರದೆ ಒಂದು ವಾಕ್ಯವನ್ನೂ ಮಾಡಲಾಗದು. ಇವಳಿಲ್ಲದೆ ಅರ್ಥಕ್ಕೆ ಶಾಂತಿಯಿಲ್ಲ. ಕನ್ನಡದಲ್ಲಂತೂ ಹೀಗೆಯೇ, ನಾವೆಲ್ಲ ನಮ್ಮ ನಮ್ಮ ಮಿದುಳಿನಲ್ಲಿ ಭಾಷಾ ವಿಭಾಗವನ್ನು ಹೀಗೆಯೇ ತರಬೇತಿಗೊಳಿಸಿದ್ದೇವೆ. ಆದರೆ ಸಂಸ್ಕೃತ ವ್ಯಾಕರಣದವರ ಮಿದುಳು ಹೀಗಿಲ್ಲ!      

 ಮುಂದಿನ ಕಂತಿನಲ್ಲಿ ಪ್ರಥಮೆಯನ್ನು ಇನ್ನಷ್ಟು ಕಣ್ ತುಂಬಿಕೊಳ್ಳೋಣ, ವೈಯಾಕರಣರ ಅರ್ಥವನ್ನೂ ಕಾಣೋಣ. 

1 comment:

  1. ಬಹಳ ಚೆನ್ನಾಗಿದೆ :) ಹೀಗೆ ದ್ವಿತೀಯಾ, ತೃತೀಯಾ ಇವರ ಕಥೆಯನ್ನೂ ಹೇಳಿ :)
    ಷಷ್ಠಿಯ ಕಥೆ ಕೂಡಾ ಬಹಳ ಸೊಗಸಾಗಿದೆ :)

    ReplyDelete