Monday, January 12, 2015

ಷಷ್ಠಿಯ ಮುಂಬರಿದ ಕಥೆ... 

ಭಾಷೆಯ ವಿಷಯದಲ್ಲಿ ಸೂಕ್ಷ್ಮವಾಗುತ್ತ ಸಾಗಿದಂತೆಲ್ಲ ಅರ್ಥವೆಂಬುದು ಭಾಷೆಯ ಪರಿಕರದೊಳಗೆ ಎಂದಿಗೂ ನಿಲುಕದ್ದು ಎಂಬರಿವು ಹುಟ್ಟುತ್ತದೆ. ವ್ಯಾಕರಣ ಎಂದಿಗೂ ಭಾಷೆಯನ್ನು ಕಟ್ಟುವುದಿಲ್ಲ, ಹುಟ್ಟಿಸುವುದೂ ಇಲ್ಲ, ಅದು ನಿಯಮಗಳನ್ನು ವಿವರಿಸುತ್ತದೆಯಷ್ಟೆ. ಹಾಗಂತ ವ್ಯಾಕರಣವನ್ನು ಒದ್ದು ಮುರಿದು ಭಾಷೆಯನ್ನೆಲ್ಲ ಬೇಲಿಯಿರದ ಹೊಲವಾಗಿಸಿಕೊಂಡರೆ ಅದೇನೂ ಚಂದವಲ್ಲ. ಮಾನವಜಗತ್ತಿನಲ್ಲಿ ಸುಂದರವಾದ ಸಂಗತಿಗಳೆಲ್ಲ ಒಂದು ಚೌಕಟ್ಟಿನೊಳಗೇ ಇವೆ. ಇರಲಿ, ಇದೀಗ ಮೊನ್ನೆ ಮಾತಾಡಿದ್ದೆವಲ್ಲ ಷಷ್ಠಿಯ ಬಗ್ಗೆ, ಅದನ್ನೇ ಮುಂದುವರಿಸುವಾ.
ಇಂಗ್ಲೀಷು ಕಲಿಕೆಯಲ್ಲಿ ನಮ್ಮಲ್ಲಂತೂ ವಿಭಕ್ತಿಯನ್ನು ಕೈಬಿಟ್ಟಾಗಿದೆ, ಆದಾಗ್ಯೂ Cases ಇವೆ ಇಂಗ್ಲೀಷಿನಲ್ಲಿ. ಆ Case Study ಯ ಪ್ರಕಾರ ನಮ್ಮ ಷಷ್ಠಿ ವಿಭಕ್ತಿಗೆ Possessive case ಅಂತ ಹೆಸರು. ಅಂದರೆ ಸ್ವಾಮ್ಯವನ್ನು ತೋರಿಸುವಂಥ case. ರಾಮನ ಮನೆ, ನನ್ನ ಊರು ಎಂಬಲ್ಲೆಲ್ಲ ಅದು ಸುವ್ಯಕ್ತ. ಮೊನ್ನೆ ನಾವು ನೋಡಿದ ಉದಾಹರಣೆಗಳಲ್ಲಿ ಬಹುತೇಕ ವಾಕ್ಯಗಳು ಈ ಸ್ವಾಮ್ಯರ್ಥದ (ಅಥವಾ ಸ್ವಾಮ್ಯಾರ್ಥದ) ಇರುಕಿನಲ್ಲಿ ಅಳವಡಲಾರವು. ಆ ನಿಟ್ಟಿನಲ್ಲಿ ಸಂಬಂಧ (ಅಥವಾ ಜೋಶಿಯವರ ಅಭಿಮತದಂತೆ some-ಬಂಧ) ಅಂದರೇನೆ ಹೆಚ್ಚು ಸರಿಯಾಗಬಹುದು. ಇದೇ ವಿಭಕ್ತಿ Genitive case ಎಂದೂ ಕರೆಯಲ್ಪಟ್ಟಿದೆ, ಮತ್ತು ಅದು ಸ್ವಾಮ್ಯರ್ಥ ಮಾತ್ರವಲ್ಲದೆ ಎಲ್ಲ ಬಗೆಯ ಸಂಬಂಧವನ್ನೂ ಒಳಗೊಳ್ಳುತ್ತದೆ.
ಸ್ವಾಮ್ಯರ್ಥ ಅಥವಾ ಒಡೆತನದರ್ಥ ಇರುವಾಗೆಲ್ಲ ಯಾರು ಒಡೆಯನೋ ಆ ನಾಮಪದ ಷಷ್ಠಿಯನ್ನು ಹೊಂದುತ್ತದೆ. ಹುಡುಗನ ಕೊಡೆ, ಮನೆಯ ಹೆಸರು ಎನ್ನುವಕಡೆಯಲ್ಲಿ ಇದು ನಿಚ್ಚಳ. ಹಾಗಂತ ರಾಹುಲನ ಅಪ್ಪ ಎಂದಮಾತ್ರಕ್ಕೆ ರಾಹುಲ ಅವನ ತಂದೆಯ ಒಡೆಯ ಅಂತಲ್ಲ ಮತ್ತೆ! ಅಲ್ಲಿರುವುದು ಸ್ವಾಮ್ಯರ್ಥವಲ್ಲವೇ ಅಲ್ಲ. ಸ್ವಾಮ್ಯರ್ಥವಿದ್ದಲ್ಲಿ ಒಡೆಯನು ಷಷ್ಠಿಯನ್ನಪ್ಪುವ ನಿಯಮ ಎಲ್ಲಿಯೂ ವ್ಯತಿರಿಕ್ತವಾದಂತಿಲ್ಲ. ಹಾಗೆಯೇ ಆಧಾರ ಆಧೇಯ ಸಂಬಂಧದಲ್ಲೂ ಆಧಾರಕ್ಕೆ ಷಷ್ಠಿಯ ತಬ್ಬುಗೆಯ ಭಾಗ್ಯ. ನದಿಯ ನೀರು, ಕೃಷ್ಣನ ಪ್ರೀತಿ ಎನ್ನುವಲ್ಲಿ ಇದನ್ನು ಕಾಣಬಹುದು.
ಸರಿ, ಗುಣಕ್ಕೆ ಗುಣಿ ಆಧಾರ ಎಂಬುದು ಸಾಮಾನ್ಯ ಅರಿಕೆ. ನಮ್ಮ ಷಷ್ಠಿಯ ಪರಿಮಿತಿಯಲ್ಲಿ ಗುಣಿಯಾದವನನ್ನು ಈ ವಿಭಕ್ತಿ ಆಲಂಗಿಸಬೇಕು.  
ಇಲ್ಲೊಂದೆರಡು ಉದಾಹರಣೆ ನೋಡಿ-
. ತಿಳಿನಗೆಯ ಹುಡುಗಿ
. ಸಿಂಹನಡೆಯ ನಾಯಕ.
ಕನ್ನಡದಲ್ಲಿ ಬಲು ಸುಂದರವಾದ ವಾಕ್ಯನಿರ್ಮಿತಿ ಇದು. ಆದರೆ ನಮ್ಮ ಷಷ್ಠಿಗೆ ಇಲ್ಲಿ ಏನು ಮಾಡಬೇಕೆಂದೇ ತಿಳಿಯದೆ ಎಲ್ಲೋ ಬಂದು ಕೂತಿದೆ ಎನ್ನುವಂತಿದೆ. ತಿಳಿನಗೆ ಎನ್ನುವುದು ಒಂದು ಗುಣವೆಂದೂ, ಅದರ ಒಡತಿ ಆ ಹುಡುಗಿಯೆಂದೂ ಬಗೆದು ಷಷ್ಠಿಯನ್ನು ಹುಡುಗಿಯ ಜೊತೆ ಸೇರಿಸಿದಿರೋ, ವಾಕ್ಯದ ಚಂದಗಾಣಿಕೆ ಖಲಾಸ್. ಅದೊಂದು ಅತಿ ಸಾಮಾನ್ಯ ವಾಕ್ಯವಾಗುತ್ತದೆ. ಇದು ಸರಿಯಾಗಿ ಗೊತ್ತಾಗಬೇಕೆಂದರೆ ಕ್ರಿಯಾಪದದ ಸಹಾಯ ಬೇಕು, ತಗೊಂಡು ನೋಡುವಾ-
          ) ತಿಳಿನಗೆಯ ಹುಡುಗಿಯನ್ನು ಕಂಡೆ (ಮಾತನಾಡಿಸಿದೆ)
          ) ಹುಡುಗಿಯ ತಿಳಿನಗೆಯನ್ನು ಕಂಡೆ (ಮಾತನಾಡಿಸಲಾದೀತೆ?)
ಮೊದಲನೆಯ ವಾಕ್ಯದ ಭಾವ ಎರಡನೆಯದರಲ್ಲಿ ಇಲ್ಲ, ಅದು ಬೇರೆಯದೆ ಭಾವ. ಕಾಣುವುದರ ಬದಲಾಗಿ ಮಾತನಾಡಿಸುವ ಕ್ರಿಯೆ ಇದ್ದರಂತೂ ಎರಡನೆಯ ವಾಕ್ಯಕ್ಕೆ ಅರ್ಥವೇ ಬಾರದು. ಸಿಂಹನಡೆಯ ನಾಯಕನದೂ ಇದೇ ಸ್ಥಿತಿ. ವಾಕ್ಯಗಳಲ್ಲಿ ಮತ್ತವುಗಳ ರೂಪಿನಲ್ಲಿ ತಪ್ಪಿಲ್ಲ, ಆದರೆ ತಿಳಿನಗೆಯ ಹುಡುಗಿ ಎಂಬಲ್ಲಿ ತಿಳಿನಗೆಗೂ ಹುಡುಗಿಗೂ ಇರುವ ಸಂಬಂಧವನ್ನು ಹೇಳುವುದಕ್ಕೆ ಬಂದ ಷಷ್ಠಿಯನ್ನು ಯಾವ ಬಗೆಯ ಷಷ್ಠಿ ಎಂದು ಕರೆಯುವುದು? ನಾವು ಇದುವರೆಗೆ ಕಂಡ ಷಷ್ಠಿಯ ಪ್ರಕಾರಗಳಿಗಿಂತ ಇದು ಭಿನ್ನವಾದ್ದು. ಸಂಸ್ಕೃತದಲ್ಲಿ ಹೀಗೆ ವಿಶೇಷಣ ವಿಶೇಷ್ಯ ಭಾವದ ಮಧ್ಯೆ ಷಷ್ಠಿ ಬಂದು ಕೂರುವುದಿಲ್ಲ. ಇದೇ ವಾಕ್ಯವನ್ನು ಅಲ್ಲಿಗೆ ಯಥಾವತ್ತಾಗಿ ಭಾಷಾಂತರಿಸಲೂ ಸಾಧ್ಯವಿಲ್ಲ. ಕನ್ನಡದ ಈ ಭಾವವನ್ನು ಸಂಸ್ಕೃತಕ್ಕೆ ಒಯ್ಯಲೇ ಆಗುವುದಿಲ್ಲ. ಹಾಗಂತ ಇಂಗ್ಲೀಷಿಗೆ ಧಾರಾಳವಾಗಿ ಕೊಂಡೊಯ್ಯಬಹುದು. ಉದಾ- ಉಲಿದನಿಯ ತರುಣಿ- A damsel of lilting voice. ನನಗನ್ನಿಸುವಮಟ್ಟಿಗೆ ಕನ್ನಡದ ಈ ಪ್ರಕಾರ ಬಲು ಸುಂದರವಾದ್ದು, ಮತ್ತು ನನಗೆ ಅದರ ಬಳಕೆ ಬಲು ಇಷ್ಟವೂ ಹೌದು. ಕವಿ ಕುವೆಂಪುರವರ ರಾಮಾಯಣದರ್ಶನಂ ಈ ಬಗೆಯ ಹೇರಳ ಪ್ರಯೋಗದ ಖನಿ
ಪ್ರೀತಿಯ ಹುಡುಗ, ಒಲವಿನ ಹುಡುಗಿಯರೆಲ್ಲ ಇದೇ ಬಳಕೆಯ ಉದಾಹರಣೆಗಳು.
ಇನ್ನೊಂದು ವಿಚಾರ ಮೊನ್ನೆ ಅರ್ಧಕ್ಕೆ ಬಿಟ್ಟಿದ್ದು-
ಷಷ್ಠೀ ಸಮಾಸದ ಜೊತೆಯಲ್ಲಿ ಇನ್ನೊಂದು ಷಷ್ಠಿ ಬಂದರೆ ಗತಿಯೇನು? ವಸ್ತುತಃ ಈ ಸಮಸ್ಯೆ ಸಂಸ್ಕೃತದ ಪರಿವೇಷಕ್ಕೆ ಅನ್ವಯಿಸುವಂಥದು. ಕನ್ನಡದಲ್ಲಿ ಅಂಥ ಸಂಭವ ಕಡಿಮೆ. ಆದರೂ ಹುಡುಕಬಹುದು ಅಪರೂಪಕ್ಕೆ-
. ಸುಧಾಮನ ಅರಮನೆ
. ಸಿದ್ಧರಾಮನ ಶಾದಿಭಾಗ್ಯ.
ಅರಸನ ಮನೆ-ಅರಮನೆ ಎನ್ನುವಲ್ಲಿ ಷಷ್ಠೀ ಸಮಾಸ, ಮತ್ತು ಸುಧಾಮನ ಅರಮನೆ ಎನ್ನುವಲ್ಲಿ ಸುಧಾಮನಿಗೆ ಷಷ್ಠೀ ಇದೆ. ಅರ್ಥ ಹೇಗೆ ಮಾಡಿಕೊಳ್ಳುವುದು? ಸುಧಾಮನ ಅರಸನ ಮನೆ ಎಂದೇ? ಆಗ ಸುಧಾಮನಿಗೆ ಅರಮನೆಯ ಭಾಗ್ಯ ಇರದು, ಅದು ಅರಸನ ಸುಪರ್ದಿಗೆ ಒಳಗಾಗುತ್ತದೆ. ಇಲ್ಲಾ, ಸುಧಾಮನದ್ದೇ ಅರಮನೆ ಅಂದುಕೊಂಡರೆಅರಮನೆ ಭಾಗ್ಯ ಸುಧಾಮನಿಗೆ ದೊರೆಯುತ್ತದೆ. ಸಂಸ್ಕೃತದಲ್ಲಿ ಅದು ಸುಧಾಮನದ್ದೇ ಅರಮನೆ ಎಂದಾಗುವಂತೆ ವ್ಯಾಕರಣದ ಕಾಯ್ದೆ ಮಾಡಿಕೊಂಳ್ಳಲಾಗಿದೆ. ನಾವು ಏನ್ ಮಾಡುವಾ?
ಸಿದ್ಧರಾಮನ ಶಾದಿಭಾಗ್ಯದ ಅರ್ಥ ಅವರವರ ಅವಗಾಹನೆಗೆ ಬಿಟ್ಟಿದ್ದು.
ಇನ್ನು, ಕೋಗಿಲೆಕಂಠದ ಗಾಯಕಿ, ನವಿಲುಗಣ್ಣಿನ ಸುಂದರಿ ಎಂಬಲ್ಲೆಲ್ಲ ಷಷ್ಠಿಯ ವಿವರಣೆ ಬೇರೆ ಬೇರೆ ಆಯಾಮಗಳನ್ನು ಆಶ್ರಯಿಸಬೇಕಾಗುತ್ತದೆ. ಇಲ್ಲದಿದ್ದರೆ ಅರ್ಥ ಅಂದಗೆಡುತ್ತದೆ. ಅದಕ್ಕೇ ಅಂದಿದ್ದು, ಅರ್ಥದ ಮುಂದೆ ಭಾಷೆಯದು ತಿಪ್ಪರಲಾಗವೇ ಎಂದು.

ಇದಿಷ್ಟು ಷಷ್ಠಿಯ ಕಥೆ

No comments:

Post a Comment