Saturday, January 17, 2015

ಪ್ರೇತ ನಗರಿಯ ಸಂಕಥನ ಕೊನೆಯ ಭಾಗ:

Ghost City ಎಂದ ಮಾತ್ರಕ್ಕೆ ಪ್ರೇತಗಳ ನಗರಿ ಅದಾಗಬೇಕಿರಲಿಲ್ಲ. ಆದರೆ ಧನುಷ್ಕೋಡಿಯ ಚಿತ್ರಣ ಅದಕ್ಕೆ ಪೂರಕವಾಗಿ ಬದಲಾಯ್ತು.  ಎಲ್ಲವೂ ನಾಶವಾದ ಸ್ಥಿತಿಯಲ್ಲಿ ಬಿಕೋ ಎನ್ನುತ್ತಿರುವಾಗಲೇ ಅದು LTTE ಎಂಬ ತಮಿಳ್ ಉಗ್ರರ ತಾಣದಂತಾಯ್ತು. ಜಗತ್ತಿನಿಂದ ಬೇರಾಗಿ ನಿಂತ ಆ ನೆಲ ಶ್ರೀಲಂಕೆ ಮತ್ತು ಭಾರತದ ಮಧ್ಯೆ ಉಗ್ರರಿಗಿರುವ ಸುರಕ್ಷಿತ ಜಾಗವಾಯ್ತು. (ಒಂದು ಕಾಲಕ್ಕೆ ಲಂಕೆಯಿಂದ ಪ್ರತಿದಿನವೂ ಈ ಮಾರ್ಗವಾಗಿ ಹಾಲು ತರಲಾಗುತ್ತಿತ್ತಂತೆ, ರಾಮೇಶ್ವರನ ಅಭಿಷೇಕಕ್ಕಾಗಿ. ಈಗ ಅದೆಲ್ಲ ಕನಸಿನ ಮಾತು. ತುಂಬಾ ಹತ್ತಿರವಾಗಿ ಕಾಣಿಸುವ ಲಂಕೆಯೂ ಇಂದಿಗೆ ಭಾರತದಿಂದ ಒಂದು ತಾಸು ಹಾರಾಟದಷ್ಟು ದೂರ). ಹಾಗೆ ಜನ ಸಂಚಾರಕೆ ನಿರ್ಬಂಧ ಅಯಾಚಿತವಾಗಿ ಹೇರಿಕೆಯಾಯ್ತು. ಇದನ್ನೆಲ್ಲ ಮನಗಂಡ ನಮ್ಮ ಸರಕಾರಗಳು ಭಾರತೀಯ ಸೇನೆಯನ್ನು ಅಲ್ಲಿಗೆ ಕಳಿಸಿದುವು. ಕ್ರಮೇಣ ಭಾರತೀಯ ಸೇನೆಯ ವಿಚಿತ್ರ ಚಟುವಟಿಕೆಗಳ ತಾಣವಾಯ್ತು ಧನುಷ್ಕೋಡಿ ಎಂಬ Once flourished City. ಸೈನ್ಯವೆಂದ ಬಳಿಕ, ಸಾಮಾನ್ಯ ಜನತೆಗೆ ನಿಲುಕದ ಕೆಲವು ಚಟುವಟಿಕೆಗಳಿರುವುದು ಅಚ್ಚರಿಯೇನಲ್ಲ.  ಇದಿಷ್ಟೂ ಕಾಲವೂ ಅಲ್ಲಿಗೆ ಯಾವೊಬ್ಬ ನಾಗರಿಕನಿಗೂ ಪ್ರವೇಶವಿರಲಿಲ್ಲ. ಭಾರತದ ಭೂಭಾಗವೊಂದಕ್ಕೆ ಭಾರತೀಯರಿಗೂ ಪ್ರವೇಶವಿರಲಿಲ್ಲ! ನಿಧಾನಕ್ಕೆ LTTE ಬಲ ಕುಸಿಯಿತು. ತಮಿಳ್ ಲಿಬರೇಶನ್ನಿನ ಹುಲಿ ಪ್ರಭಾಕರ್ ಕೊನೆಯಾದ. ಆ ಬಳಿಕ ಭಾರತೀಯ ಸೇನೆ ಕೂಡ ಅಲ್ಲಿಂದ ನಿಧಾನಕ್ಕೆ ಕಾಲ್ತೆಗೆಯಿತು. 

ಮುಂದಿನ ಕೆಲವೇ ವರ್ಷಗಳಲ್ಲಿ ಜನತೆಗೆ ಮುಕ್ತವಾಯ್ತು ಧನುಷ್ಕೋಡಿ. 

ಆ ಹೊತ್ತಿಗೆ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಜನರಲ್ಲಿ ಸಾವಿರ ಬಗೆಯ ಗುಮಾನಿ ಹುಟ್ಟಿಕೊಂಡಿತ್ತು. ಕತ್ತಲೆಯ ಬಣ್ಣದ ಕಥೆಗಳು ಪುಕ್ಕ ಬಂದು ಸಮುದಾಯದೆಲ್ಲೆಡೆ ಹಾರಾಡಿದುವು. ಸತ್ತವರೆಲ್ಲ ಸಂಸ್ಕಾರವಿಲ್ಲದೆ ಪ್ರೇತವಾಗಿ ಅಲ್ಲಿಯೇ ಸುಳಿದಾಡುತ್ತಿದ್ದಾರೆ ಎನ್ನುವ ರಂಜನೆಯೂ ಅಂಟಿಕೊಂಡಿತು. ಒಟ್ಟಿನಲ್ಲಿ ಕೆಲವೇ ವರ್ಷಗಳಲ್ಲಿ ಧನುಷ್ಕೋಡಿ ಎಂಬ ಹಿಂದೂ ಯಾತ್ರಾ ಸ್ಥಳ, ರಾಮ ನಡೆದಾಡಿದ ತಾಣ, ಪ್ರೇತಗಳ ನಗರಿಯಾಗಿ ಬದಲಾಯ್ತು. ಇಂದಿಗೂ ಕೆಲವರ ಕಣ್ಣಲ್ಲಿ ಧನುಷ್ಕೋಡಿಯಲ್ಲಿ ಪ್ರೇತಗಳಿವೆ!
People awaiting for a train before ruined station!!!
ಈ ಕಥೆಯ ಹೊರತಾಗಿಯೂ ಇಂದಿಗೆ ಅ ನಗರವನ್ನು ಕಂಡರೆ ಮುರುಕು ಕಟ್ಟಡಗಳು, ಕಿತ್ತೆದ್ದ ರಸ್ತೆಗಳು ಮತ್ತು ಮರಳು- ನಮ್ಮನ್ನು ಮರುಳಾಗಿಸುತ್ತವೆ- ಪ್ರೇತಗಳಿರಬಹುದೇ ಎಂದು! ಇದೀಗ ಸರಕಾರ ಧನುಷ್ಕೋಡಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆಸುತ್ತಿದೆಯಂತೆ. ಅದಾಗುವುದಾದರೆ ಅಲ್ಲಿ ಮೂಲಸೌಕರ್ಯಗಳನ್ನಾದರೂ ನಿರೀಕ್ಷಿಸಬಹುದು. 

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದೆನಷ್ಟೆ. ಸುತ್ತಲೂ ಸಮುದ್ರವೇ ಇರುವ ಈ ಮರಳೂರಿನಲ್ಲಿ ಸಿಹಿನೀರಿಗೆ ಕೊರತೆಯಿಲ್ಲ! ಸಿಹಿನೀರಿನ ಸಹಜ ಕುಣಿಗಳಿವೆ, ಇದೊಂದು ವಿಚಿತ್ರ ಸತ್ಯ. ಅದೇ ಕುಣಿಗೆ ರಿಂಗ್  ಇಳಿಸಿ ಬಾವಿಯಂತೆ ಮಾಡಿಕೊಂಡಿದ್ದಾರೆ ಕೆಲವೆಡೆ. ಅದೇನೂ ಆಳವಿರುವುದಿಲ್ಲ. ಎಂಟೋ ಹತ್ತೋ ಅಡಿ ಆಳವಿರಬಹುದಷ್ಟೇ. ಜನ ಇವುಗಳಿಂದ ನೀರು ಪಡೆಯುತ್ತಾರೆ. ಮುರಿದ್ಉ ಬಿದ್ದ ಅವಶೇಷಗಳ ಮಧ್ಯೆ ಬದುಕಿ ಕೂಡ ಅವಶೇಷದಂತೆಯೇ ಸಾಗುತ್ತಿದೆ ಅಲ್ಲಿ.
ಸಿಹಿನೀರಿನ ಸಹಜ ಹೊಂಡ.
ಒಂದು ಕಾಲದಲ್ಲಿ ಚೆನ್ನಾಗೇ ಇದ್ದ ಚರ್ಚ್ ಆಗಿತ್ತಂತೆ ಇದು!
ಅಂದಿನ ಗೋಡೆಗಳಿಗೆ ಬಳಸಲಾದ ಕಲ್ಲಿನ ಸಂರಚನೆಯೂ ಮುಳುಗದೆ ತೇಲುವ ಕಲ್ಲಿನ ಸಂರಚನೆಯನ್ನು ಹೋಲುತ್ತದೆ. ಹಾಗಂತ ಇದೆಲ್ಲ ತೇಲುವ ಕಲ್ಲಲ್ಲ ಮತ್ತೆ! ಭೂಪದರಗಳ ನಿರ್ಮಾಣ ಹಂತದಲ್ಲಿ ಯಾವುದೋ ಬಗೆಯ ನಿರ್ದಿಷ್ಟ ಪ್ರಕ್ರಿಯೆಗೆ ಒಳಗಾಗಿದೆ ಇಲ್ಲಿನ ಶಿಲಾರಾಳ ಎಂದಂತಾಯ್ತು. ಇಲ್ಲಿ ಪಕ್ಕದಲ್ಲಿರುವುದು ಚರ್ಚ್ ಗೋಡೆಗೆ ಬಳಸಲಾದ ಕಲ್ಲಿನ ಚಿತ್ರ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿಯೂ ರಂಧ್ರಗಳು ಕಾಣ ಸಿಗುತ್ತವೆ.
ಇದೀಗ ಧನುಷ್ಕೋಡಿಯಲ್ಲಿ ದೂರದೂರದವರೆಗೆ ಉಳಿದಿರುವುದೆಲ್ಲ ಒಡಕು ಕಟ್ಟಡಗಳು, ಎಲ್ಲೋ ಮರಳಿನೊಡನೆ ಮರೆಯಾಗಿರಬಹುದಾದ ತಲೆಬುರುಡೆಗಳು ಮತ್ತು ಸಂಜೆ ೩- ೪ ರ ಹೊತ್ತಿಗೆ ಆರಂಭವಾಗಿ ಮರುಬೆಳಗು ೧೦ ಗಂಟೆಯವರೆಗೆ ಅವ್ಯಾಹತವಾದ ನಿರ್ಜನ ಮೌನ. ಇಲ್ಲಿರುವಷ್ಟೇ ಜನವಾದರೆ ಎಂಥ ಶಬ್ದ ಮಾಡಿಯಾರು! ಸಮುದ್ರವೂ ಮೌನಿಯಿಲ್ಲಿ. 
ತಂದಿದ್ದ ನೀರು ಖಾಲಿಯಾಗುವವರೆಗೆ ಅಲ್ಲೆಲ್ಲ ಸುತ್ತಾಡಿ, ಸಾಕೆನಿಸಿದ ನಂತರ ನಾವೆಲ್ಲ ಮತ್ತೆ ನಮ್ಮನ್ನು ಹೊತ್ತು ಬಂದಿದ್ದ ಮ್ಯಾಕ್ಸಿ ಕ್ಯಾಬ್ ಇದ್ದಲ್ಲಿ ಮರಳಿದೆವು. ಅದೋ, ನಮ್ಮನು ಅದೇ ದಾರಿಯಲ್ಲದ ದಾರಿಯಲ್ಲಿ ಹೊತ್ತು ಬಂದಿತು. ಅಷ್ಟು ಪ್ರಯಾಣಕ್ಕೆ ಎಲ್ಲ ಸೇರಿ ಗಾಡಿಯವನಿಗೆ ೨೦೦೦ ರೂ. ಕೊಟ್ಟಿದ್ದಾಯ್ತು. ವಾಪಸ್ ಬಸ್ಸು ಹತ್ತುವ ಜಾಗಕ್ಕೆ ಬಂದಾಗ ಧನುಷ್ಕೋಡಿಗೆ ಹೊರಟಿದ್ದ ಜೋಡಿ ಉದ್ದುದ್ದದ್ದೆರಡು ಐಸ್ ಕ್ಯಾಂಡಿ ಮೆಲ್ಲುತ್ತ ಸಮುದ್ರ ದಂಡೆಯ ಮರಳಲ್ಲಿ ಆತು ಕುಳಿತಿದ್ದರು. 

ನನ್ನ ಮುಂದಿನ ಪ್ರಯಾಣ ಅಗ್ನಿತೀರ್ಥವೆಂಬ ಸಮುದ್ರ ತೀರಕ್ಕೆ. ವಸ್ತುತಃ ಜನ ಅಲ್ಲಿ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರಂತೆ. ನನಗೆ ಬೋಟ್ ರೈಡಿಂಗ್ ಕಂಡಿದ್ದರಿಂದ ಆ ಕಡೆಗೆ ಹೋದೆ. ಮಧ್ಯಾಹ್ನದ ಬಳಿಕದ ಸಾಗರ ತನ್ನ ವಿಶಿಷ್ಟ ಬಣ್ಣದಲ್ಲಿ ಹೊಳೆಯುತ್ತಿತ್ತು.ಆ ಹೊತ್ತಿನ ಜಲಯಾನ ಮನಸಿಗೆ ಮುದ ಕೊಟ್ಟಿತು. ಬರೀ ಅರವತ್ತು ರೂಪಾಯಿಗೆ ಅವ ನಮ್ಮನ್ನು ಸಮುದ್ರದಲ್ಲಿ ತುಂಬ ದೂರ ಒಯ್ದು ಒಂದು ಸುತ್ತು ಸುತ್ತಿಸಿ ತರುತ್ತಾನೆ. ಆಗ ಬೋಟಲ್ಲಿ ನೀವೇನು ಮಾಡಬಹುದು ಎಂದರೆ ಫೋಟೊ ತೆಗೆಯಬಹುದು, ಅಥವಾ ಚಂದದ ಕೂಸ್ಗಳಿದ್ದರೆ ನೋಡಬಹುದು. 

ನನ್ನ ಮುಂದಿನ ಪ್ರಯಾಣ ಪಾಂಬನ್ ಸೇತುಎಯ ಆರಂಭದ ಜಾಗ. ಸಾಧ್ಯವಾಗುವುದಾದರೆ ಆ ಸೇತುವೆಯ ನಡುಭಾಗ. ಆದರೆ ಆ ಜಾಗ ಒಂದು ಬೇಟಿಯ ತಾಣವೇ ಅಲ್ಲ, ಎಲ್ಲೋ ಹೋಗುವವರು ಅಲ್ಲಿಳಿದು ಅದನ್ನ ನೋಡಬೇಕಷ್ಟೆ. ಈ ಸೇತುವೆಯದು ಅಚ್ಚರಿಗಳು ಹಲವಿವೆ. ತನ್ನ ಕೆಳಗಿನ ಸಮುದ್ರದಲ್ಲಿ ಹಡಗು ಹಾಯ್ದು ಹೋಗುವಾಗ ಈ ಸೇತುವೆಯ ಒಂದು ಭಾಗ ಗೋಪುರದಂತೆ ಮೇಲೆದ್ದು ಹಡಗಿನ ಎತ್ತರಕ್ಕೆ ಜಾಗಮಾಡಿ ಕೊಡುತ್ತದೆ. ಇದು ತುಂಬಾ ಅಪರೂಪದ ದೃಶ್ಯ ಎಂಬುದು ನನ್ನ ಅನಿಸಿಕೆ. 
ಅದ್ಯಾವುದೋ ರೈಲಿಗೆ ಜೋತು,ಪಾಂಬಂನ್ ಜಂಕ್ಷನ್ ಗೆ ಬಂದಿಳಿದು, ಅಲ್ಲಿಂದ ಕಿಲೋಮೀಟರುಗಳಷ್ಟು ನಡೆದು ನಾನು ಸೇತುವೆಯ ಬುಡ ತಲುಪಿದೆ. ಸೂರ್ಯ ಆ ಹೊತ್ತಿಗೆ ಮುಳುಗುವ ತಯಾರಿಯಲ್ಲಿದ್ದ. ಸೇತುವೆಯ ಮೇಲೆ ಸ್ಥಳೀಯರು ನಡೆಯಗೊಡಲಿಲ್ಲ. ಅಲ್ಲೊಂದಿಷ್ಟು ಸಮಯ ಕಳೆದು ಮತ್ತೆ ರಾಮೇಶ್ವರಂ ರೈಲು ನಿಲ್ದಾಣಕ್ಕೆ ಬರುವ ವೇಳೆಗೆ ನನ್ನ ರೈಲು ಸಿದ್ಧವಿತ್ತು.



ಇನ್ನೂ ನೋಡಬಹುದಾದ ಸ್ಥಳಗಳಿದ್ದುವು, ಆದರೆ ಅಲ್ಲೆಲ್ಲ ದೇವಾಲಯಗಳ ಹೊರತು ಇನ್ನೇನಿಲ್ಲ ಎಂದು ಕೇಳಿದೆ. ರಾಮಪಾದ ಎಂಬುದೊಂದು ದೇವಾಲಯ ಚೆಂದವಿದೆಯಂತೆ. ಉಳಿದಂತೆ ಅಗ್ನಿ ತೀರ್ಥದ ಮಂಡಪದ ಸಮೀಪ ಅಪ್ರಕ್ರಿಯೆಯಲ್ಲಿ ತೊಡಗಿದ್ದ ಜನರು, ವೈದಿಕರು ಸಾಲು ಸಾಲಾಗಿ ಕಂಡರು. ಮೂನ್ನೆ ಮೊನ್ನೆಯಷ್ಟೇ ನಾನು ಅನುವಾದಿಸಿ ಮುಗಿಸಿದ ’ಕರ್ಮ’ ಕಾದಂಬರಿಯ ಹಲವು ಪಾತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದುವು. 

 ಮತ್ತೆ ಮರಳುವಾಗ ಪಾಂಬನ್ ಸೇತುವಿನ ನೀರ ಕಲಕಲ ನನ್ನ ಕಿವಿದುಂಬಿತು, ಗಾಢ ನಿದ್ರೆ ನನ್ನನ್ನಾವರಿಸಿತು. 









2 comments:

  1. ಭೇಷ್! ಮತ್ತೊಮ್ಮೆ ಮೊದಲ ಕಂತನ್ನೂ ಸೇರಿಸಿ ಒಟ್ಟಿಗೆ ಓದಿದೆ. ಚೆನ್ನಾಗಿ ಬಂದಿದೆ. ನಮ್ಮದಿಷ್ಟೇ ಬೇಡಿಕೆ, ಆಗಾಗ ಅಲೆಯುತ್ತಿರಿ, ಬರೆಯುತ್ತಿರಿ, ಸಮಯ ಸಹಕರಿಸಿ ಕೊಂಡು. ಹಾಗೆಯೇ 'ಕರ್ಮ' ದ ಅನುವಾದದ ಬಗ್ಗೆ ತಿಳಿದು ಖುಷಿ, ಹೆಮ್ಮೆ ಎರಡೂ ಆಯಿತು! Good luck :-)

    ReplyDelete
  2. photos chennagive lekhana kuda chennagide

    ReplyDelete