Thursday, January 15, 2015

ಧನುಷ್ಕೋಡಿಯೆಂಬ ಪ್ರೇತ ನಗರಿಗೆ.....

ಏಳು ತಾಸಿನ ಸುಲಲಿತ ನಿದ್ರೆಯನ್ನು ಯಾರೋ ಕಲಕಲ ಧ್ವನಿಗೈದು ತಿಳಿಯಾಗಿ ಕಲಕುತ್ತಿದ್ದರು. ಭಾರತೀಯ ರೇಲ್ವೆಯ ಯಾವುದೇ ಬಗೆಯ ಸದ್ದು ನನಗೆ ಕಳೆದ ಏಳು ವರ್ಷಗಳಿಂದ ಪರಿಚಿತ. ಆದರೆ ಈ ಶಬ್ದ ರೇಲ್ವೆಯದಲ್ಲ! ಕಣ್ ಬಿಟ್ಟು ಎದ್ದು ಕುಳಿತೆ. ಆ ಶಬ್ದ ಇನ್ನಷ್ಟು ಸ್ಪಷ್ಟವಾಯ್ತು. ಕಿಟಕಿಯ ಪಕ್ಕ ಬಂದು ಕುಳಿತು ಹೊರಗಿಣುಕಿದೆ. ಇನ್ನೂ ಸೂರ್ಯ ಮೂಡುವುದರಲ್ಲಿದ್ದ, ಬೆಳಕು ನಿಚ್ಚಳವಾಗಿರಲಿಲ್ಲ, ಚಳಿಯು ಹದವಾಗಿತ್ತು. ಕಣ್ಣರಳಿಸಿ ನೋಡುತ್ತೇನೆ- ಮಬ್ಬು ಬೆಳಕಲ್ಲಿ ಅಂತವಿರದ ಜಲರಾಶಿ, ಆ ಕಡೆಗೂ ಈ ಕಡೆಗೂ. ನಾನಿದ್ದ ರೇಲ್ವೆ ನಿಧಾನಕ್ಕೆ ಸದ್ದಿರದೆ ಸಾಗುತ್ತಿದೆ, ಹಾಗಾಗಿ ನೀರಿನ ಆ ಕಲಕು ಶಬ್ದವೇ ತುಂಬಿಕೊಂಡಿದೆ ಎಲ್ಲೆಲ್ಲಕಡೆಗೂ. ಸಮುದ್ರಕ್ಕೆ ಕಟ್ಟಿದ ಸೇತುವೆಯ ಮೇಲಿನ ಮೊದಲ ರೈಲು ಅನುಭವ ನನ್ನದು. ಅಲೆಗಳ ಮೊರೆತ, ಇತಿಹಾಸದ ತುಂಡಿನಂತೆ ಇರುವ ಆ ಅಪೂರ್ವ ಸೇತುವೆ... ನಾನು ರಾಮೇಶ್ವರಂ ಎಂಬ ದ್ವೀಪನಾಡನ್ನು ತಲುಪುತ್ತಿದ್ದೆ. ಮತ್ತೆ ಆ ಸೇತುವೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಅನನ್ಯ ಮಾರ್ಗ, ಅದಿಲ್ಲದಿದ್ದರೆ ಭಾರತದ ಪಾಲಿಗೆ ರಾಮೇಶ್ವರಮ್ ಎಂದೆಂದಿಗೂ ದ್ವೀಪವೆ. ಎರಡೂಕಾಲು ಕಿಲೋಮೀಟರು ಉದ್ದದ, ನೂರು ವರ್ಷದ ಇತಿಹಾಸವಿರುವ  ಪಾಂಬನ್ ಸೇತುವೆ!
Pamban Bridge.
ಆ ಸೇತುವೆಯ ವಯಸ್ಸನ್ನೂ, ಒಂದೇ ವರ್ಷದಲ್ಲಿ ಕಟ್ಟಿ ಮುಗಿಸಿದ ಆ ಜನಗಳ ಎಂಜಿನಿಯರಿಂಗ್ ಕೌಶಲವನ್ನೂ ಚಿಂತಿಸುತ್ತ ಕುಳಿತೆ. ನಾನಿದ್ದ ರಾಮೇಶ್ವರಂ ಎಕ್ಸ್ಪ್ರೆಸ್ ಸುಮಾರು ಹದಿನೈದು ನಿಮಿಷ ಹೆಚ್ಚಿನ ಸದ್ದಿರದೆ ಸೇತುವೆ ಕ್ರಮಿಸಿತು. ನನ್ನನು ಭಾರತದ ದ್ವೀಪ ಪ್ರದೇಶವೊಂದಕ್ಕೆ ಕೊಂಡೊಯ್ದಿತು.

ಬೆಳಗಿನ ಆರುವರೆಗೆಲ್ಲ ರಾಮೇಶ್ವರಮ್ ನ ಸಮುದ್ರದ ಎದುರಿಗೆ ನಿಂತಿದ್ದೆ. ಸೂರ್ಯ ಇನ್ನೂ ಉದಯಿಸುತ್ತಿದ್ದ, ಮೋಡಗಳು ಮಳೆ ಹನಿಸುತ್ತಿದ್ದುವು. ಸಮುದ್ರ ಸ್ನಾನದ ಜನರು ಪಾವನವಾಗುತ್ತಿದ್ದರು. ಅದೋ ಅಲ್ಲಿ ದೇವಸ್ಥಾನ ಆಗಲೇ ಜನಗಳ ಗಡಿಬಿಡಿಗೆ ಸಾಕ್ಷಿಯಾಗುತ್ತಿತ್ತು. ನನಗೆ ದೇವಾಲಯದ ದರ್ಶನಕ್ಕಿಂತ ಹೆಚ್ಚಿಗೆ ಸಮುದ್ರ ಮತ್ತು ರಾಮಸೇತು ಕರೆಯುತಿದ್ದುವು, ಅದಕ್ಕಲ್ಲವೆ ಇಷ್ಟು ದೂರ ಒಂಟಿ ಪ್ರಯಾಣಿಸಿ ಬಂದಿದ್ದು!
              

ರಾಮೇಶ್ವರದ ಬೆಳಗು. 
ದೇವಾಲಯ ತುಂಬಾ ವಿಸ್ತಾರವಾದ್ದು. ತುಂಬ ಹಳೆಯ ಶೈಲಿಯದಲ್ಲ, ಆದರೆ ಇಲ್ಲಿಯ ಆಚರಣೆಗಳು ವಿಶಿಷ್ಟವಾದವುಗಳು. ದೇವಾಲಯದ ಆವರಣದಲ್ಲಿ ೨೨ ಬಾವಿಗಳಿವೆ, ಅವೆಲ್ಲವನ್ನೂ ತೀರ್ಥವೆಂದು ಬಗೆಯುವ ಭಕ್ತರು ಅವಷ್ಟರಲ್ಲೂ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಪೂರ್ಣ ಶಿಲಾಮಯವಾದ ದೇವಾಲಯದಲ್ಲಿ ಬೃಹತ್ ನಂದಿ ಮತ್ತು ಶಿವಲಿಂಗ ಇವೆ. ರಾಮ ಅರ್ಚನೆ ಮಾಡಿದ್ದು ಮರಳಿನ ಲಿಂಗವಾದ್ದರಿಂದ ಈ ದೇವಾಲಯದಲ್ಲಿ ಲಿಂಗವಿರಲಿಲ್ಲ, ಆದಿ ಶಂಕರರು ಸ್ಫಟಿಕ ಲಿಂಗವನ್ನು ಪೂಜೆಗಾಗಿ ಕೊಟ್ಟರೆಂಬ ಪ್ರತೀತಿ ಕೇಳಿಬಂತು. ಬೃಹತ್ತಾದ ಈ ದೇವಾಲಯದಲ್ಲಿ ಅರ್ಚನೆಯ ಲಿಂಗವಿರಲಿಲ್ಲ ಎಂಬುದು ವಿಚಿತ್ರಗಳಲಿ ಒಂದೆನ್ನಿಸಿತು. ದೇವಾಲಯದ ಒಳ ಮೇಲ್ಛಾವಣಿಯನ್ನು ಅಲಂಕರಿಸಿದ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಖುಷಿಯಾದ ಸಂಗತಿಯೆಂದರೆ ಸಾಮಾನ್ಯ ದೇವಾಲಯಗಳಲ್ಲಿ ಇರುವಂತೆ ಹಣಕ್ಕಾಗಿ ಪೀಡನೆ ಇಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. ನಾನೊಂದು ತಾಸು ದೇವಾಲಯದ ಪ್ರಾಂಗಣದಲ್ಲಿ ಕಳೆದೆ. ಅಲ್ಲಂತೂ ಫೋಟೊಗ್ರಫಿಗೆ ಅವಕಾಶವಿರಲಿಲ್ಲ. ನನ್ನ ಗಮನವೆಲ್ಲ ಧನುಷ್ಕೋಡಿಯೆಂಬ ಭಾರತ ಭೂಶಿರದ ತುದಿಯಲ್ಲಿತ್ತು. ದೇವಾಲಯದಿಂದ ಹೊರಗೆ ಹೊರಟೆ. 

ಮುಂದಿನ ಪ್ರಯಾಣ ಧನುಷ್ಕೋಡಿಯೆಡೆಗೆ. ಆ ಹೊತ್ತಿಗೆ ಆಗಸ ಶುದ್ಧವಾಗಿತ್ತು, ಸೂರ್ಯ ಸ್ಪಷ್ಟವಾಗಿದ್ದ. ಬಸ್ಸೊಂದು ನನ್ನನ್ನು ಧನುಷ್ಕೋಡಿಯ ದಿಕ್ಕಿಗೆ ಒಯ್ದಿತು. ಎರಡೂ ಕಡೆಗೆ ನೀರಿರುವ, ಮಿಕ್ಕ ಜಾಗದಲ್ಲೆಲ್ಲ ಹಸುರು ಹೊದ್ದಿರುವ, ಮಣ್ಣೆಂದರೆ ಮರಳೋ ಎಂಬಂತಿರುವ ಹಾದಿಯಲ್ಲಿ ಮುಕ್ಕಾಲು ಗಂಟೆ ಪ್ರಯಾಣ. ಸ್ಪಷ್ಟವಾಗಿ ತಿಳಿಯುವಂತೆ ಅದು ಸಮುದ್ರದ ಮಧ್ಯದಲ್ಲಿ ಭೂಮಿಯ ಒಳಚಾಚು. ಅದರ ಅಂತೂ ಅಗಲ ಒಂದು ಕಿ. ಮೀ ಇದ್ದೀತಷ್ಟೆ. ಟಾರ್ ರಸ್ತೆ ಮುಗಿಯುವಲ್ಲಿ ಬಂದು ಬಸ್ಸಿನವ ನಿಂತ, ಎದುರಿಗೆ ಸಮುದ್ರವಿತ್ತು. ಮನಸು ಸಂಭ್ರಮಿಸಿತು.
ಅಲೆಯೆದ್ದು- ಅಲೆಬಿದ್ದು...
ಅರಬ್ಬಿ ಸಮುದ್ರದ ಪರಿಚಯವಿದ್ದ ನನಗೆ ಈ ಸಮುದ್ರ ಬಣ್ಣದಲ್ಲಿ, ಸ್ವಭಾವದಲ್ಲಿ, ಧ್ವನಿಯಲ್ಲಿ ಭಿನ್ನವಾಗಿ ಕಂಡಿತು. ತಿಳಿ ನೀಲಿ ಬಣ್ಣದ (ಅಥವಾ ಹಸಿರೋ!) ಅಗಾಧ ಜಲರಾಶಿ, ಸಮುದ್ರವೆಂದರೆ ಶಬ್ದ ಎಂಬಂತಿರುವ ನಮ್ಮ ಪಶ್ಚಿಮ ಕರಾವಳಿಯಿಂದ ಪೂರ್ತಿ ಭಿನ್ನವಾದ ಅದರ ಸದ್ದಿರದ ಸ್ವಭಾವ, ಒಮ್ಮೆಗೇ ಆಳವಾಗುವ ಹರವಲ್ಲದ ತೀರ, ಆಗೊಮ್ಮೆ ಈಗೊಮ್ಮೆ ಬರುವ ಅಲೆ... ಬಂಗಾಳಕೊಲ್ಲಿಯ ವ್ಯವಹಾರ ಅರಬ್ಬಿ ಸಮುದ್ರಕ್ಕಿಂತ ಭಿನ್ನ. ಎಲ್ಲಕ್ಕಿಂತ ನನಗೆ ಆಕರ್ಷಕವೆನ್ನಿಸಿದ್ದು ಅದರ ಬಣ್ಣ. ತುಂಬಾ ಸೊಗಸಾದ, ಕಣ್ ಸೆಳೆಯುವ ವರ್ಣ ಅದರದ್ದು. ಅರಬ್ಬೀ ಸಮುದ್ರಕ್ಕಿಂತ ಸ್ಪಷ್ಟವಾಗಿ ನೆಲಕಾಣಿಸುವ ಶುದ್ಧತೆ. ಅರಬ್ಬೀ ಸಮುದ್ರ ಮನುಷ್ಯನನ್ನು ಆರಾಮಕ್ಕೆ ಒಳಗೆ ಬಿಟ್ಟುಕೊಂಡರೆ ಇದರದ್ದು ಸ್ವಲ್ಪ ಬಿಗುಮಾನ. ಅಲೆಗಳನ್ನು ಊಹಿಸಲಾಗದು, ತೀರದ ಆಳವನ್ನೂ. ಹಾಗಾಗಿ ಸಮುದ್ರದ ಒಳಕ್ಕಿಳಿಯುವುದು ಕಷ್ಟ. ದೂರದಿಂದ ಚಂದವೆನ್ನಿಸುವ ನೀರ್ರಾಶಿ. ಸೂರ್ಯ ಹೊಳೆಯುತ್ತಿದ್ದರೂ ಆ ಪುಲಿನರಾಶಿ ಅಹಿತವೆನಿಸಲಿಲ್ಲ, ಹಿತವಾದ ಚಳಿಯಿತ್ತು. ಕನ್ಯಾಕುಮಾರಿಯಲ್ಲಿ ಮೂರು ಸಮುದ್ರ ಸೇರುವ ಜಾಗದಲ್ಲಿ ( ಅವು ಬೇರೆ ಬೇರೆ ಎಂಬುದೇ ಕಲ್ಪನೆ ಎಂಬುದು ಬೇರೆ ಮಾತು) ಈ ತಿಳಿಸುಂದರಿಯ ಗುರುತು ಇಷ್ಟು ಸ್ಪಷ್ಟವಾಗಿಲ್ಲ. ಇಲ್ಲಿ ಅವಳದ್ದೇ ಸಾಮ್ರಾಜ್ಯ. ಪೂರ್ವ ಜಲಧಿಯದ್ದು. 
ನನ್ನ ಕನಸಿನ ಧನುಷ್ಕೋಡಿ ಇದಲ್ಲವೆಂದು ಕೈಲಿದ್ದ ಗೂಗಲ್ ಮ್ಯಾಪ್ ತೋರಿಸುತ್ತಿತ್ತು. ಇದು ಸಾಮಾನ್ಯವಾಗಿ ಪ್ರವಾಸಿಗರು ಬಂದು ಹೋಗುವ ಕೊನೆಬಿಂದು. ಇಲ್ಲಿಗೆ ರಸ್ತೆ ಮುಗಿಯುತ್ತದೆ,  ಆದರೆ ಸಮುದ್ರದ ಒಳಚಾಚು ಇದಿಷ್ಟಕ್ಕೆ ಮುಗಿಯುವುದಿಲ್ಲ. ಅದಿನ್ನೂ ಕಿರಿದಾಗುತ್ತ ಸಾಗುತ್ತದೆ. ನಡು ನಡುವೆ ಭೂಖಂಡಗಳೇ ಮರೆಯಾಗಿ ಬರಿಯ ನೀರು ಸಿಗುತ್ತದೆ. ಒಂದೊಂದು ಭಾಗವೂ ಒಂದೊಂದು ದ್ವೀಪದಂತೆ. ಗೂಗಲ್ ಅರ್ಥ್ ನಲ್ಲಿಯೂ ಈ ಭಾಗ ಕಿರಿದಾಗುತ್ತ ಸಾಗುವ ಬಾಲದಂತೆಯೇ ಕಾಣಿಸುತ್ತದೆ. 

ನನಗಲ್ಲಿ ನಿಲ್ಲಲು ಮನಸು ಒಗ್ಗಲಿಲ್ಲ. ಭೂಮಿ ಖಾಲಿಯಾಗುವವರೆಗೆ ನಡೆಯುವ ಹುಚ್ಚಿತ್ತು, ಹೆಗಲ ಭಾರ ಹೆಚ್ಚಿರಲಿಲ್ಲ, ಮನಸೂ ಹಗುರವಿತ್ತು. ಯಾವುದೇ ಖಾಸಗಿ ವಾಹನದವರಿಗೂ ಮುಂದಕ್ಕೆ ವಾಹನ ಚಲಾಯಿಸುವ ಅನುಮತಿಯಿಲ್ಲ, ’ರಸ್ತೆ ಅಪಾಯಕಾರಿ, ಹಾಗಾಗಿ ಹೋಗಗೊಡುವುದಿಲ್ಲ’ ಎಂದು ಸ್ಥಳೀಯರು, ಭಾಡಿಗೆ ವಾಹನದದವರು ತಮಗೆ ಬರುವ ಅಷ್ಟೂ ಭಾಷೆಯಲ್ಲಿ ಪ್ರವಾಸಿಗರ ಮನ ಒಲಿಸುತ್ತಿದ್ದರು. ಇದೆಲ್ಲ ಹಣ ಮಾಡುವ ಹುನ್ನಾರು ಎಂದು ನಾವೆಲ್ಲ ಪ್ರವಾಸಿಗರು ಮೂಗು ಮುರಿಯುತ್ತ ಸುಮಾರು ಹೊತ್ತು ಕಳೆದೆವು. ಅಂತೂ ಕೊನೆಗೊಂದಿಪ್ಪತ್ತು ಜನ ಸೇರಿ ಮಾಕ್ಸಿ ಕ್ಯಾಬ್ ಒಂದನ್ನು ಒಪ್ಪಿಸಿದೆವು. ಆ ವಾಹನದ ಸರ್ವಾಂಗವೂ ಕಂಪಿಸುತ್ತಿತ್ತು, ತುಕ್ಕು ಅಕಾಲಿಕವಾಗಿ ಬಂದ ಮುಪ್ಪಿನಂತೆ ಆ ವಾಹನವನ್ನು ತಿಂದು ಹಾಕುತಿತ್ತು. ಆ ಚಾಲಕನಿಗೆ ವಾಹನದ ಮೇಲೆ ಕರುಣೆಯೇ ಇದ್ದಂತಿರಲಿಲ್ಲ!! ’ಇವನ ಲಡ್ಕಾರು ಮ್ಯಾಕ್ಸಿ ಕ್ಯಾ ಬ್ ಹೋಗುವುದಾದರೆ ನಮ್ಮ ಇನ್ನೋವಾ ಹೋಗದೆ?’ ಯು.ಪಿ. ಇಂದ ಬಂದಿದ್ದ ಪ್ರವಾಸಿಗರು ಪರಿಪ್ರಶ್ನೆಗೈಯುತಿದ್ದರು. ಕೊನೆಗೂ ನಾವೆಲ್ಲ ಆ ಮ್ಯಾಕ್ಸಿ ಕ್ಯಾಬಿನಲ್ಲಿ ಸೀಟುಗಳನ್ನು ಹುಡುಕಿ ತೂರಿಕೊಂಡೆವು.

ಆ ವಾಹನ ರಸ್ತೆಯಲ್ಲದ ರಸ್ತೆಯಲ್ಲಿ ಹೊರಟಿತು. ನೀರು,ಕಾಡುಗಳ ಮಧ್ಯೆ...

ಮತ್ತೆ ಬರೆಯುತ್ತೇನೆ...
     
   

2 comments:

  1. ಅಷ್ಟು ಚೆಂದ ಮಾಡಿ ಅನುಭವ ಹೇಳಿಕೊಂಡು ಬಂದು, 'ಮತ್ತೆ ಬರೆಯುತ್ತೇನೆ... 'ಅಂದ್ಬಿಟ್ರೆ ಹೇಗೆ ಭಟ್ರೇ? ಇದು ರಸ ಭಗ್ನ... ದಯವಿಟ್ಟು ಎಲ್ಲವನ್ನೂ ಒಮ್ಮೆಲೇ ಬರಿಯಿರಿ. ನಿಮ್ಮ ಅನುಭವ ಕಥನ ಶೈಲಿ ತುಂಬಾ ಹಿಡಿಸಿತು. ಸಾಧ್ಯ ಆದ್ರೆ ನಿಮ್ಮ ಡೈರಿಯಲ್ಲಿ ದಾಖಲಾಗಿರ ಬಹುದಾದ ವೈಷ್ಣೋದೇವಿಯ ಅನುಭವವನ್ನೂ ಹಂಚಿಕೊಳ್ಳಿ.

    ReplyDelete
  2. ರಜನಿಯವರೆ, ಅಡ್ವರ್ಟೈಮೆಂತ್ ಅಂತೂ ಇಲ್ಲ, ಹೇಗಾದ್ರು ಸಂಚಿಕೆ ಮುಂದುವರೆಸಿಕೊಂಡು ಹೋಗ್ಬೇಕಲ್ಲವಾ!! ಹೌದು, ನನ್ನೆಲ್ಲ ಪ್ರವಾಸಗಳ ಅನುಭವ ದಾಖಲಿಸುವ ಬಯಕೆಯಿದೆ. ಸಮಯ ಸಹಕರಿಸಲಿ.

    ReplyDelete